ಬಾಳೆ ಬೇಸಾಯ ವಿಧಾನದಲ್ಲಿ ಅಧಿಕ ಇಳುವರಿ ಪಡೆಯಲು ಅನುಕೂಲವಾಗುವ ಹಲವಾರು ಬೆಳೆ ತಾಂತ್ರಿಕತೆಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ರೈತರೂ ಇದನ್ನು ಅಳವಡಿಸಿ ಯಶಸ್ವಿ ಯಾಗುತಿದ್ದಾರೆ.ಅದರಲ್ಲಿ ಒಂದು ಅಧಿಕ ಸಾಂದ್ರ ಬೇಸಾಯ. ಈ ವಿಧಾನದಲ್ಲಿ ಎಕ್ರೆಗೆ 1230 ರಿಂದ 2000 ಗಿಡಗಳ ತನಕ ಹಿಡಿಸುವ ತಾಂತ್ರಿಕತೆ ಚಾಲ್ತಿಯಲ್ಲಿದೆ. ಇದರಲ್ಲಿ ಎಕ್ರೆಗೆ 45 ಟನ್ ನಿಂದ 70 ಟನ್ ತನಕವೂ ಇಳುವರಿ ಪಡೆಯಲು ಸಾಧ್ಯ.
- ಬಾಳೆಯ ಸಾಂಪ್ರದಾಯಿಕ ನಾಟಿ ವಿಧಾನದಲ್ಲಿ ಗಿಡದಿಂದ ಗಿಡಕ್ಕೆ , ಸಾಲಿನಿಂದ ಸಾಲಿಗೆ 6 ಅಡಿ ಅಂತರವನ್ನು ಪಾಲಿಸಲಾಗುತ್ತದೆ.
- ಈ ಅಂತರದಲ್ಲಿ ಎಕ್ರೆಗೆ ಹಿಡಿಯುವ ಗಿಡಗಳ ಪ್ರಮಾಣ ಸುಮಾರು 900 ರಷ್ಟು ಮಾತ್ರ.
- ಒಂದು ಬಾಳೆ ಸರಾಸರಿ 30 ಕಿಲೋ ಇಳುವರಿ ಕೊಟ್ಟರೂ ಸಹ ಒಟ್ಟಾರೆ ಇಳುವರಿ 27-30 ಟನ್ ತನಕ ಮಾತ್ರ.
- ಇದರಿಂದ ಬೆಳೆಯುವವರಿಗೆ ಅಂತಹ ಲಾಭ ಏನೂ ಅಗುವುದಿಲ್ಲ.
- ಇದಕ್ಕಾಗಿ ಬಾಳೆ ಬೇಸಾಯದಲ್ಲಿ ಮಣ್ಣು, ನೀರು ಪೋಷಕಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅಧಿಕ ಇಳುವರಿ ಪಡೆಯಲು ಬೇರೆ ಬೇರೆ ಅಂತರಗಳಲ್ಲಿ ಪ್ರಯೋಗ ಮಾಡಿ ನೋಡಿ ಯಶಸ್ಸು ಕಾಣಲಾಗಿದೆ.
ಎಲ್ಲೆಲ್ಲಿಏನೇನು ನಡೆದಿದೆ?
- ಭುವನೇಶ್ವರದ ಒರಿಸ್ಸಾ ಯುನಿವರ್ಸಿಟಿ ಆಫ್ ಅಗ್ರಿಕಲ್ಚರ್ ಅಂಡ್ ಟೆಕ್ನಾಲಜಿ ಇವರು ಪರಸ್ಪರ 1.2 X 1.2 ಮೀ. ಅಂತರದಲ್ಲಿ ಮತ್ತು 1.8 X18 ಮೀ. ಅಂತರದಲ್ಲಿ ಬಾಳೆ ಬೆಳೆಸಿ ಸಾಂಪ್ರಾದಾಯಿಕ ವಿಧಾನದಲ್ಲಿ ಪಡೆಯುತ್ತಿದ್ದ ,ಇಳುವರಿಗಿಂತ ದುಪ್ಪಟ್ಟು ಇಳುವರಿ ಪಡೆಯಬಹುದು ಎಂದು ಕಂಡುಕೊಂಡಿದ್ದಾರೆ. ಇವರು ಹೆಕ್ಟೇರಿಗೆ 68.98 ಇಳುವರಿ ಪಡೆದಿದ್ದಾರೆ.
- ತಮಿಳುನಾಡಿನ ತಿರುಚಿನಾಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೊಧನಾ ಸಂಸ್ಥೆಯಲ್ಲಿ 1.8X1.8 ಅಂತರದಲ್ಲಿ ಒಂದು ಹೊಂಡದಲ್ಲಿ ಎರಡೆರಡು ಸಸಿಯನ್ನು ನಾಟಿ ಮಾಡಿ, ಹೆಕ್ಟೇರಿಗೆ 6172 ಸಸಿ ಹಿಡಿಸಿ. ಒಟ್ಟು 90 ಟನ್ ಇಳುವರಿ ಪಡೆದಿದ್ದಾರೆ.
- ದೇಶದಲ್ಲಿ ಮೊದಲ ಬಾರಿಗೆ ಅತ್ಯಧಿಕ ಸಾಂದ್ರ ಬಾಳೆ ಬೇಸಾಯವನ್ನು ಮಾಡಿ ಹೆಕ್ಟೇರಿಗೆ 3600 ತನಕ ಗಿಡಗಳನ್ನು ಹಿಡಿಸಿ 100 ಟನ್ ನಷ್ಟು ಇಳುವರಿ ಪಡೆದಿದ್ದಾರೆ.
- ಕೇರಳದ ತ್ರಿಶೂರಿನಲ್ಲಿರುವ ಕನ್ನಾರದಲ್ಲಿರುವ ಬಾಳೆ ಸಂಶೊಧನಾ ಕೇಂದ್ರದಲ್ಲಿ ಬೇರೆ ಬೇರೆ ಪ್ರಯೋಗಗಳನ್ನು ಕೈಗೊಂಡಿದ್ದಾರೆ.
- 1.8×1.8 (ಗಿಡದಿಂದ ಗಿಡಕ್ಕೆ +ಸಾಲಿನಿಂದ ಸಾಲಿಗೆ) ಅಡಿ ಅಂತರದಲ್ಲಿ 1234 ಗಿಡಗಳನ್ನು, 1.5×1.5 ಮೀ. ಅಂತರದಲ್ಲಿ ಎಕ್ರೆಗೆ 1777 ಗಿಡಗಳನ್ನು . 1.2×1.8 ಮೀ. ಅಂತರದಲ್ಲಿ ಎಕ್ರೆಗೆ 1850 ಗಿಡವನ್ನು , 1.2×1.5 ಮೀ. ಅಂತರದಲ್ಲಿ 2222 ಗಿಡಗಳನ್ನು ಹಿಡಿಸಿದ್ದಾರೆ ಸರಾಸರಿ 30 ಕಿಲೋ ಇಳುವರಿ ಪಡೆದಿದ್ದಾರೆ.
- ಇನ್ನೂ ಮುಂದುವರಿದು 1.2 x1.2 ಗಿಡದಿಂದ ಗಿಡಕ್ಕೆ, ಸಾಲಿನಿಂದ ಸಾಲಿಗೆ 2 ಮೀ. ಅಂತರದಲ್ಲಿ ಎಕ್ರೆಗೆ 2011 ಗಿಡಗಳನ್ನೂ ಹಿಡಿಸಿ (Ultra high density) ಪ್ರತೀ ಬಾಳೆಗೆ ಸರಾಸರಿ 25 ಕಿಲೋ ಇಳುವರಿ ಪೆಡೆದಿದ್ದಾರೆ.
ಅಂತರ ಹೆಚ್ಚಾದಂತೆ ಒಟ್ಟಾರೆ ಇಳುವರಿ ಹೆಚ್ಚಳ ಕಂಡುಬಂದಿದೆ. ಬೆಳೆಯಲ್ಲಿ ಲಾಭವೂ ಹೆಚ್ಚಾಗಿದೆ. ಉತ್ಪಾದನಾ ವೆಚ್ಚವೂ ಕಡಿಮೆಯಾಗಿದೆ. ಇದು ಬಾಳೆ ಬೆಳೆಸುವವರಿಗೆ ಕಡಿಮೆ ಸ್ಥಳದಲ್ಲಿ ಅಧಿಕ ಖರ್ಚು ಇಲ್ಲದೆ ಹೆಚ್ಚು ಇಳುವರಿ ಪಡೆಯಲು ಸಾಧ್ಯ.
- ಇದಲ್ಲದೆ ಕೆಲವು ಸೊರಬ, ಬನವಾಸಿಯ ಕೆಲವು ರೈತರು, ಮಹಾರಾಷ್ಟ್ರದ ಕೆಲವು ರೈತರು ರೈತರು ಗಿಡದಿಂದ ಗಿಡಕ್ಕೆ 4 ಅಡಿ ಅಂತರ ಮತ್ತು ಸಾಲಿನಿಂದ ಸಾಲಿಗೆ 9 ಅಡಿ ಅಂತರದಲ್ಲಿ ನಾಟಿ ಮಾಡಿ ಎಕ್ರೆಗೆ 1675 ಗಿಡ ಹಿಡಿಸಿ ಸರಾಸರಿ 35 ಕಿಲೋ ಇಳುವರಿಯ ಗೊನೆ ಪಡೆದವರಿದ್ದಾರೆ.
- ಬಾಳೆಯಿಂದ ಬಾಳೆಗೆ 3 ಅಡಿ ಅಂತರ ಮತ್ತು ಪ್ರತೀ ಸಾಲಿನ ಮಧ್ಯೆ 7 ಅಡಿ ಅಂತರವನ್ನು ಇಟ್ಟು ಬಾಳೆ ಬೆಳೆಸಿ ಎಕ್ರೆಗೆ 2200 ಗಿಡಗಳ ತನಕ ಇಳುವರಿ ಪಡೆದವರೂ ಇದ್ದಾರೆ.
ಅನುಕೂಲ ಏನು:
- ಈ ವಿಧಾನದಲ್ಲಿ ಬಾಳೆ ಬೆಳೆದಾಗ ಕಡಿಮೆ ಸ್ಥಳದಲ್ಲಿ ಹೆಚ್ಚು ಸಸ್ಯಗಳು ಇರುವ ಕಾರಣ ನೀರು, ಗೊಬ್ಬರದ ಉಪಯೋಗ ಸಮರ್ಪಕವಾಗಿರುತ್ತದೆ.
- ಎಲ್ಲಾ ಬಾಳೆಗಳೂ ಸ್ಪರ್ಧೆಯಲ್ಲಿ ಬೆಳೆಯುತ್ತವೆ. ಗಾಳಿ ಬೆಳೆಕಿನ ಕೊರತೆ ಉಂಟಾಗುವುದೇ ಇಲ್ಲ. ಬಾಳೆಗಳೇ ಬಾಳೆಗೆ ಗಾಳಿ ತಡೆ ಒದಗಿಸುತ್ತವೆ.
- ಬಾಳೆಯಿಂದ ಬಾಳೆಗೆ ಅಂತರ ಕಡಿಮೆ ಇದ್ದುದು ಬಾಳೆ ಬೆಳೆದು ಗೊನೆ ಹಾಕುವ ಹಂತದಲ್ಲಿ ಬದಲಾಗಿ ಬಾಳೆಗಳು ಸಾಲಿನ ಬದಿಗೆ ವಾಲಿ ಕೊಳ್ಳುತ್ತವೆ.
- ಆಗ ಗೊನೆಗೆ ಆಂಶಿಕ ನೆರಳು ದೊರೆತು ಗೊನೆ ಪುಷ್ಟಿಯಾಗುತ್ತದೆ..
- ಪುಟ್ಟು ಬಾಳೆಯನ್ನು ನೆಡುವಾಗ ಮಾತ್ರ ಬಾಳೆಯಿಂದ ಬಾಳೆಗೆ 3.5 ಅಡಿ ಅಂತರ ಮತ್ತು ಸಾಲಿನಿಂದ ಸಾಲಿಗೆ 8 ಅಡಿ ಅಂತರ ಉತ್ತಮ ಪದ್ದತಿಯಾಗಿದೆ.
- ಈ ಅಂತರದಲ್ಲಿ ಬಾಳೆ ನಾಟಿ ಮಾಡಿದಾಗ ಗಾಳಿಯ ಹೊಡೆತಕ್ಕೆ ಸಿಕ್ಕಿ ಬಾಳೆಗಳು ಬೀಳುವುದು ಕಡಿಮೆ.
- ಬಾಳೆಗಳನ್ನು ಆಧರಿಸಲು ಕಂಬಗಳು ಬೇಡ. ಪರಸ್ಪರ ಬಾಳೆಗೆ ಬಾಳೆಯಿಂದಲೇ ಕಟ್ಟಿ ಆಧರಿಸಬಹುದು. ಪ್ಯಾಕಿಂಗ್ ರೋಪ್ ಬಳಸಬಹುದು.
ಅಧಿಕ ಸಾಂದ್ರ ಬೇಸಾಯಕ್ಕೆ ಹೆಚ್ಚು ಸ್ಥಳಾವಕಾಶ ಬೇಕಾಗದ ಕಾರಣ ಅತ್ಯಲ್ಪ ಸ್ಥಳದಲ್ಲಿ ಬಾಳೆಯನ್ನು ಬೆಳೆಸಿದರೂ ಅದು ಲಾಭದಾಯಕವಾಗುತ್ತದೆ. 2 ಎಕ್ರೆ ಬೆಳೆಯುವವರು 1 ಎಕ್ರೆಯೂ , 1 ಎಕ್ರೆಯವರು ½ ಎಕ್ರೆ ಬೆಳೆದೂ ಲಾಭ ಮಾಡಿಕೊಳ್ಳಬಹುದು.