ರಾಜ್ಯ ಹೊರ ರಾಜ್ಯಗಳ ವಿಶಿಷ್ಟ ಗುಣದ ಸುಮಾರು 180 ಕ್ಕೂ ಹೆಚ್ಚು ತಳಿಗಳನ್ನು ತಮ್ಮ ಹೊಲದಲ್ಲಿ ಬೆಳೆಸಿ, ಸಂರಕ್ಷಿಸಿದ ಬೆಂಗಳೂರು, ಹೇಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ IIHR ಸಾಧನೆ ಪ್ರಶಂಸಾರ್ಹ. ಇಲ್ಲಿ ತಳಿಗಳ ಸಂಗ್ರಹ ಇದ್ದರೆ ಸೇಫ್.
- ಹಲಸಿನ ಹಣ್ಣಿಗೆ ಈಗ ಹೆಚ್ಚಿನ ಮಹತ್ವ ಬಂದಿದೆ. ಆರೋಗ್ಯಕ್ಕೆ ಉತ್ತಮ ಎಂಬ ಕಾರಣಕ್ಕೆ ಹಲಸು ತಿನ್ನುವರು, ಬೆಳೆಸುವವರು ಹೆಚ್ಚಾಗಿದ್ದಾರೆ. ಹಲಸಿನ ಮೌಲ್ಯ ವರ್ಧಿತ ಉತ್ಪನ್ನಗಳು ಹೆಚ್ಚಿವೆ.
- ಹಲಸು ನಮ್ಮಲ್ಲಿ ಅನಾದಿ ಕಾಲದಿಂದಲೂ ಇದ್ದ ಹಣ್ಣು. ಅದರ ಮರಮಟ್ಟಿನ ಬೇಡಿಕೆಯು ಅದರ ಅವನತಿಗೆ ಕಾರಣವಾಯಿತು. ಅದೆಷ್ಟೋ ಉತ್ಕೃಷ್ಟ ಗುಣಮಟ್ಟದ ಹಲಸಿನ ಮರಗಳು ಇಲ್ಲದಾದವು.
- ಕೆಲವು ವಯೋ ಸಹಜವಾಗಿ ಸತ್ತು ಹೋದವು. ಕೆಲವು ಕಡಿಯಲ್ಪಟ್ಟಿತು. ಹಲಸಿನ ಹಲವು ತಳಿಗಳೇ ಇಲ್ಲದಾಯಿತು.
ಹಲಸಿನ ಸಸ್ಯಾಭಿವೃದ್ಧಿಗೆ ಕಸಿ ತಂತ್ರಜ್ಞಾನ ಅಳವಡಿಕೆ ಆದ ನಂತರ ಸ್ವಲ್ಪ ಮಟ್ಟಿಗೆ ಜೀವ ಉಳಿಯಿತು ಎನ್ನಬಹುದು. ಮರ ಕಡಿಯುವ ಮುನ್ನ ಅದರ ಪೀಳಿಗೆಯನ್ನು ಉಳಿಸುವ ದಿಶೆಯಲ್ಲಿ ಕಸಿ ತಾಂತ್ರಿಕತೆ ನೆರವಾಗಿದೆ.
- ಅಳಿಯುತ್ತಿರುವ ವಿಶಿಷ್ಟ ಗುಣದ ಹಲವು ಹಲಸಿನ ತಳಿಯನ್ನು ಒಂದೆಡೆ ಸಂಗ್ರಹಿಸುವುದು ಸುಲಭದ ಕೆಲಸವಲ್ಲ.
- ಅದನ್ನು ತೋಟಗಾರಿಕಾ ಸಂಶೋಧನಾ ಸಂಸ್ಥೆ ಮಾಡಿದೆ.
ಹಲಸಿನಲ್ಲಿ ಎಷ್ಟೊಂದು ತಳಿವೈವಿಧ್ಯಗಳಿವೆ. ದೇಶ ವಿದೇಶಗಳಲ್ಲಿ ಸಂಗ್ರಹಿಸಿದರೆ ಲಕ್ಷಾಂತರ ವಿಧಗಳು ಇರಬಹುದು. ನಮ್ಮ ಹೊಲದಲ್ಲಿ 4 ಮರಗಳಿದ್ದರೆ ನಾಲ್ಕರದ್ದೂ ಭಿನ್ನ ಭಿನ್ನ ರುಚಿಯ ಹಲಸು. ಒಂದಕ್ಕೊಂದು ಸಾಮ್ಯತೆಯೇ ಇಲ್ಲ. ಸೃಷ್ಟಿಯಲ್ಲಿ ಎಷ್ಟೊಂದು ವೈಚಿತ್ರ್ಯಗಳಲ್ಲವೇ?
ತಳಿ ಸಂಗ್ರಹ:
- ಇಷ್ಟೆಲ್ಲಾ ಹಲಸಿನ ತಳಿಗಳನ್ನು ಸಂಗ್ರಹಿಸುವುದು ಆಗುವ ಹೋಗುವ ಕೆಲಸ ಅಲ್ಲ.
- ಇವುಗಳಲ್ಲಿ ಉತ್ತಮ ಯಾವುದು ಎಂಬುದನ್ನು ಗುರುತಿಸಿ, ಅದನ್ನು ಸಂಗ್ರಹಿಸುವ ಕೆಲಸವನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ ಮಾಡಲಾಗಿದೆ.
- ಇಲ್ಲಿ ಹಲಸಿನ ತಳಿ ವೈವಿಧ್ಯಗಳ ತಾಕನ್ನು ನೋಡಬಹುದು.
- ಸುಮಾರು 180 ವಿಧದ ಹಲಸಿನ ತಳಿ ಬ್ಯಾಂಕ್ ಇದೆ. ಇದರಲ್ಲಿ ಫಸಲೂ ಸಹ ಬರುತ್ತಿದೆ.
ಹಲಸಿನಲ್ಲಿ ತಳಿ ವೈವಿಧ್ಯಗಳು:
- ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಹಲಸಿನ ಬೇರೆ ಬೇರೆ ವೈವಿಧ್ಯಗಳಿದ್ದು, ಎಲ್ಲದಕ್ಕೂ ಬೇರೆ ಬೇರೆ ಗುಣಗಳು.
- ಹಲಸಿನಲ್ಲಿ ಒಂದಕ್ಕೊಂದು ಸಾಮ್ಯತೆ ಇಲ್ಲ.
- ಹಲಸು ನಮ್ಮ ದೇಶದಲ್ಲಿ ಮಾತ್ರ ಬೆಳೆಯುವ ಬೆಳೆ ಅಲ್ಲ.
- ಉಷ್ಣ ವಲಯದ ಎಲ್ಲಾ ಕಡೆ ಬೆಳೆಯಲ್ಪಡುತ್ತದೆ.
- ಭಾರತದಲ್ಲೂ ಹಲಸು ಎಲ್ಲಾ ಕಡೆ ಬೆಳೆಯದು ಎಂಬ ಭಾವನೆ ಇತ್ತಾದರೂ ಈಗ ಅದು ದೂರವಾಗಿದೆ.
- ಅಸಾಂಪ್ರದಾಯಿಕ ಪ್ರದೇಶಗಳಲ್ಲೂ ಹಲಸು ಬೆಳೆಯುತ್ತದೆ.
- ಉತ್ತಮ ಗುಣಮಟ್ಟದ ಫಲವನ್ನೂ ನೀಡುತ್ತದೆ.
- ಎಲೆಲ್ಲಿ ಹಲಸು ಬೆಳೆಯುತ್ತದೆ, ಅಲ್ಲಿ ಅದರ ವಿಶೇಷತೆ ಎನು ಎಂಬುದನ್ನು ತಿಳಿದು ಅದರ ಸಸ್ಯ ಮೂಲವನ್ನು ತಂದು ಇಲ್ಲಿ ಬೆಳೆಸುವ ಪ್ರಯತ್ನ ಮಾಡಲಾಗಿದೆ.
ಇದು ಸಂಸ್ಥೆಯಲ್ಲಿ ಹಾಲೀ ನಿರ್ದೇಶಕರಾಗಿರುವ ಹಿರಿಯ ಹಣ್ಣಿನ ಬೆಳೆಗಳ ವಿಜ್ಞಾನಿ ಎಂ. ಆರ್ .ದಿನೇಶ್ ರವರ ಪ್ರಯತ್ನ.
- ಇಲ್ಲಿ ಸಿಂಗಾಪುರ, ಇಂಡೋನೇಶಿಯಾ, ಮಲೇಶಿಯಾ, ಆಸ್ಟ್ರೇಲಿಯಾ, ಥೈಲಾಂಡ್ ಬಾಂಗ್ಲಾದೇಶ, ಶ್ರೀಲಂಕಾ ಮೂಲದ, ಕರ್ನಾಟಕದ ಬೇರೆ ಬೇರೆ ಕಡೆಯ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ ಹೀಗೆ ಹಲವಾರು ರಾಜ್ಯಗಳಿಂದ ಸಂಗ್ರಹಿತ ತಳಿಗಳಿವೆ.
- ಬೇರೆ ಬೇರೆ ಗಾತ್ರದಲ್ಲಿರುವ ಹಲಸಿನ ತಳಿಗಳನ್ನುಒಟ್ಟು ಹಾಕಲಾಗಿದೆ.
- ಬೇರೆ ಬೇರೆ ಬಣ್ಣದ ಹಲಸೂ ಇದೆ.
- ಎಲ್ಲವೂ ಕಸಿ ತಾಂತ್ರಿಕತೆಯಲ್ಲಿ ಅಭಿವೃದ್ಧಿ ಪಡಿಸಿದ್ದಾಗಿದೆ.
ಹಲಸಿನಲ್ಲಿ ಉತ್ತಮ ತಳಿ ಆಯ್ಕೆ:
- ಹಲಸಿನ ಉತ್ತಮ ತಳಿ ಎಂಬುದು ಅದರ ಬಳಕೆಯ ಮೇಲೆ ನಿಂತಿದೆ.
- ಯಾವ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತದೆಯೋ ಅದಕ್ಕೆ ಸೂಕ್ತವಾದ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
- ತಿನ್ನುವ ಹಣ್ಣಿಗೆ ಸಾಮಾನ್ಯವಾಗಿ ಹೆಚ್ಚು ಸಿಹಿಯಾದ ಬೇಗ ಜಗಿಯಲು ಆಗುವ ತಳಿ ಸೂಕ್ತ. ಬಣ್ಣದ ಸೊಳೆ ಈಗಿನ ಫ್ಯಾಷನ್.
- ಸಂಸ್ಕರಣೆಗೆ ಬೇರೆ ಆಯ್ಕೆಯ ಮಾನದಂಡಗಳಿವೆ.
- ದೊಡ್ದ ಹಲಸಿಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ. ಏನಿದ್ದರೂ ಮಧ್ಯಮ ಗಾತ್ರದ ಹಣ್ಣುಗಳು. ಮೇಣ ಕಡಿಮೆ ಇರುವ ಹಲಸಿಗೆ ಹೆಚ್ಚಿನ ಬೇಡಿಕೆ.
ಮುಂದಿನ ದಿನಗಳಲ್ಲಿ ನೈಸರ್ಗಿಕ ಯಾವುದೇ ರಾಸಾಯನಿಕ ಬಳಸದ ಸುರಕ್ಷಿತ ಹಣ್ಣಾಗಿ ಹಲಸಿಗೆ ಹೆಚ್ಚಿನ ಮಹತ್ವ ಬರಲಿದೆ. ಆ ಸಮಯದಲ್ಲಿ ಹಲಸಿನ ತಳಿ ಮೂಲ ನಶಿಸಬಾರದು ಎಂಬ ದೂರ ದೃಷ್ಟಿಯಿಂದ ಈ ತಳಿ ಬ್ಯಾಂಕು ಸ್ಥಾಪಿಸಲಾಗಿದೆ.
ಮುಂದೆ ನಿರೀಕ್ಷಿಸಿರಿ: ಹಲಸಿನ ಬೇರೆ ಬೇರೆ ತಳಿಗಳು ಮತ್ತು ಅದರ ಗುಣಗಳು + ಹಲಸು ಬೆಳೆಸುವ ವಿಧಾನ+ ಕಸಿ ತಾಂತ್ರಿಕತೆ+ ಹಲಸಿನ ಗುಣಮಟ್ಟ ಪಾಲನೆ+ ಹಲಸಿನ ಮೌಲ್ಯ ವರ್ಧನೆ ಇತ್ಯಾದಿ.