ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಬೆಲೆಯ ಮಾವಿನ ಹಣ್ಣಿನ ಬಗ್ಗೆ ಪ್ರಚಾರಗಳು ನಡೆಯುತ್ತಿದೆ. ವಾಸ್ತವವಾಗಿ ಮಾವಿನ ಹೊರತೊಗಟೆಯ ಬಣ್ಣ ಹೇಗಿದ್ದರೂ ಮಾವಿನ ರುಚಿ ಒಂದೇ ಆಗಿರುತ್ತದೆ. ರೈತರಿಗೆ ನೈಜ ವಿಷಯನ್ನು ತಿಳಿಸುವುದು ಅವಶ್ಯಕವಾಗಿದೆ.
ಜನ ಯಾವುದಕ್ಕೆ ಬೇಡಿಕೆ ವ್ಯಕ್ತಪಡಿಸುತ್ತಾರೆಯೋ ಅದಕ್ಕೆ ಬೆಲೆ ಬರುತ್ತದೆ. ಕಲ್ಲಿನ ಚೂರು ವಜ್ರವೆನಿಸುವುದು ಅದಕ್ಕೆ ಮೌಲ್ಯ ಕಟ್ಟುವವರು ಇದ್ದಾಗ. ಹಾಗೆಯೇ ಇದು. ಗ್ರಾಹಕರು ಕೆಲವು ಆಕರ್ಷಕ ಬಣ್ಣ, ನೋಟಗಳಿಗೆ ಮಾರು ಹೋಗುತ್ತಾರೆ. ಅದಕ್ಕನುಸಾರವಾಗಿ ಅದಕ್ಕೆ ಬೇಡಿಕೆ, ಬೆಲೆ ಬರುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವಾರು ಹಣ್ಣು ಹಂಪಲುಗಳ ಕಥೆ ಇದೆ ಆಗಿರುತ್ತದೆ.
- ಇತ್ತೀಚೆಗೆ ಸುದ್ದಿಯಲ್ಲಿರುವ ಮಾವಿನ ಬಣ್ಣ ತುಂಬಾ ಆಕರ್ಷಕವಾಗಿದೆ.
- ಕೆಲವು ಕಡೆ ಅದನ್ನು ನೇರಳೆ ಬಣ್ಣದಲ್ಲಿ ತೋರಿಸುತ್ತಿದ್ದರೆ, ಮತ್ತೆ ಕೆಲವು ಕಡೆ ಅದನ್ನು ಹಳದಿ ಮಿಶ್ರ ಕೇಸರಿ ಬಣ್ಣದಲ್ಲೂ ತೋರಿಸುತ್ತಿದ್ದಾರೆ.
- ಯಾವುದು ನಿಜವೋ ಗೊತ್ತಿಲ್ಲ. ಒಟ್ಟಾರೆಯಾಗಿ ಅದು ವಿದೇಶೀ ಮಾವಿನ ಹಣ್ಣು ಎಂಬ ಸುದ್ದಿ ಇದೆ.
- ಅಮೇರಿಕಾ ದೇಶದ ಪ್ಲೋರಿಡಾದಲ್ಲಿ (Florida) ಬಣ್ಣದ ಮಾವಿನ ತಳಿಗಳ ಅಭಿವೃದ್ದಿ ಹೆಚ್ಚಾಗಿ ನಡೆಯುತ್ತಿದೆ.
- ಇತ್ತೀಚೆಗೆ ಚೀನಾ ದೇಶದಲ್ಲೂ ಬಣ್ಣದ ಮಾವಿನ ತಳಿಗಳ ಅಭಿವೃದ್ದಿ ನಡೆಯುತ್ತಿರುವ ಬಗ್ಗೆ ವರದಿಗಳಿವೆ.
- ಅವುಗಳ ಕೆಲವು ಸಂಗ್ರಹ ನಮ್ಮಲ್ಲೂ ಇಲ್ಲದಿಲ್ಲ.
ಇಂತಹ ಮಾವು ಹೊಸತಲ್ಲ:
- ಮಾವಿನಲ್ಲಿ ಬೇರೆ ಬೇರೆ ಬಣ್ಣದ ತಳಿಗಳು ನಮ್ಮ ದೇಶದ ಬೇರೆ ಬೇರೆ ಕಡೆಗಳಲ್ಲಿ ಇದೆ.
- ಸಾಮಾನ್ಯವಾಗಿ ನಾವು ಕಾಣುವ ಹಸುರು ಸಿಪ್ಪೆಯ ಕಾಯಿ ಹಣ್ಣಾಗುವಾಗ ಹಳದಿಯಾಗುತ್ತದೆ.
- ಇನ್ನು ಕೆಲವು ಕೆಂಪು ಮಿಶ್ರ ಹಳದಿ ಬಣ್ಣವೂ ಬರುತ್ತದೆ. ದೇಶ ವಿದೇಶಗಳ ಹಲವಾರು ಬಣ್ಣದ ಮಾವುಗಳನ್ನು ಮಾವು ತಳಿಗಳನ್ನು ನಮ್ಮ ದೇಶದ ಬೇರೆ ಬೇರೆ ಸಂಶೋಧನಾ ಕೇಂದ್ರಗಳು ಸಂಗ್ರಹಿಸಿವೆ.
- ದೇಶದ ಬ್ಏರೆ ಬೇರೆ ರಾಜ್ಯಗಳ, ವಿದೇಶಗಳ ಹಣ್ಣುಗಳೂ ಸೇರಿದಂತೆ, ಸಾವಿರಾರು ಮಾವಿನ ತಳಿಗಳ ಸಂಗ್ರಹ ಹೇಸರಘಟ್ಟದ ಭಾರತೀಯ ತೋಟಗಾರಿಕಾ ಸಂಸ್ಥೆಯಲ್ಲಿ ಇದೆ.
- ಬೇರೆ ಬೇರೆ ಬಣ್ಣದ ಮಾವಿನ ತಳಿಗಳ ಸಂಗ್ರಹವೂ ಜೊತೆಗೆ ಇದೆ.
ದೇಶೀಯ ಬಣ್ಣದ ಮಾವು ತಳಿ:
- ನಮ್ಮ ದೇಶದಲ್ಲಿ ಆಂದ್ರ ಪ್ರದೇಶ, ಕೇರಳ,ತಮಿಳುನಾಡು, ಮಣಿಪುರ, ಅಸ್ಸಾಂ, ಮಹಾರಾಷ್ಟ್ರ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನ ಬಣ್ಣದ ಮಾವಿನ ತಳಿಗಳು ಇವೆ.
- ಕೆಲವು ಬೆಳೆಯುವಾಗ ಹಳದಿ ಬಣ್ಣವನ್ನೂ, ಮತ್ತೆ ಕೆಲವು ಕೆಂಪು ಬಣ್ಣವನ್ನೂ ಹೊಂದಿವೆ.
- ನಮ್ಮ ದೇಶದಲ್ಲಿರುವ ಬಣ್ಣದ ಮಾವುಗಳಲ್ಲಿ ಕೆಲವು ಗುರುತಿಸಲ್ಪಟ್ಟಿದ್ದರೆ, ಹೆಚ್ಚಿನವು ಗುರುತಿಸಲ್ಪಟ್ಟಿಲ್ಲ.
- ಕೆಲವು ಮಾವಿನ ಮರಗಳು ನಶಿಸಿಯೂ ಹೋಗಿವೆ. ಈಗ ಸುದ್ದಿಯಲ್ಲಿರುವ ಮಾವಿನ ಬಗ್ಗೆ ಹೇಳುವುದಾದರೆ, ಅದು ತೊಗಟೆಯ ಬಣ್ಣ ಸ್ವಲ್ಪ ಆಕರ್ಷಕವಾಗಿದೆಯಾದರೂ ಒಳ ತಿರುಳು ಮಾತ್ರ ಭಿನ್ನತೆಯಿಂದ ಕೂಡಿಲ್ಲ.
- ಎಲ್ಲವೂ ನಾವು ಕಂಡಿರುವ ಮಾವಿನ ತಳಿಗಳಂತೆ. ಎನ್ನುತ್ತಾರೆ ತಜ್ಞರು.
- ಸುವರ್ಣ ರೇಖಾ, ಕರಾಂಜೊಯೋ ಗುಲಾಬ್ ಖಾಸ್, ಲಾಲ್ ಸುಂದರ್ (ಓರಿಸ್ಸಾ) ಲಾಲ್ ಮುನಿ, ಖುದ್ದೂಸ್, ಜನಾರ್ಧನ್ ಪಸಂದ್ ಮುಂತಾದ ಬೇರೆ ಬೇರೆ ಬಣ್ಣದ ಮಾವಿನ ತಳಿಗಳು ನಮ್ಮ ದೇಶದಲ್ಲಿಯೂ ಇವೆ.
- ಹಣ್ಣಾಗುವಾಗ ಸಿಪ್ಪೆ ಆಕರ್ಷಕ ಹಳದಿ ಬಣ್ಣ ಬರುವ ಬಾಂಬೆ ದರ್ಸನ್, ದುಶೇರಿ, ಮುಂತಾದ ತಳಿಗಳ ಅತೀ ದೊಡ್ದ ಸಂಗ್ರಹವೇ ಇದೆ.
ವಿದೇಶದ ಬಣ್ಣದ ಮಾವು:
- ನಮ್ಮ ದೇಶದಲ್ಲಿ ವಿದೇಶದಿಂದ (Florida USA) ತಂದು ಬೆಳೆಸಲಾದ ಬಣ್ಣದ ಮಾವಿನ ತಳಿಯಾದ Tommy Atkins ಎಂಬ ತಳಿಯ ಸಂಗ್ರಹ ನಮ್ಮ ದೇಶದ ಹಣ್ಣು ಸಂಶೋಧನಾ ಕೇಂದ್ರಗಳಲ್ಲಿ ಇದೆ.
- ಈ ತಳಿಯಲ್ಲಿ ಎರಡು ಬಗೆಯವುಗಳಿದ್ದು, ಒಂದು ಕಿತ್ತಳೆ ಮತ್ತು ಹಳದಿ ಮಿಶ್ರ ಬಣ್ಣದಲ್ಲೂ, ಮತ್ತೊಂದು ದಟ್ಟ ನೇರಳೆ ಬಣದಲ್ಲೂ ಇದೆ.
- ವಿದೇಶದಲ್ಲಿ ಇದು ಅಧಿಕ ಇಳುವರಿ ಕೊಡುವ ತಳಿಯಾಗಿದ್ದರೂ ಇಲ್ಲಿನ ವಾತಾವರಣದಲ್ಲಿ ಅಂತಹ ಇಳುವರಿ ಇರುವುದಿಲ್ಲ.
- ಅದೇ ರೀತಿಯಲ್ಲಿ ಎಲ್ಡನ್ , ಸೆನ್ಸೇಶನ್ , ಕೆನ್ಸಿಂಗ್ ಟನ್, ಎಂಬ ತಳಿಯೂ ವಿದೇಶಿ ತಳಿಯಾಗಿದ್ದು, ಆಕರ್ಷಕ ಬಣ್ಣದ ತಳಿಗಳಾಗಿದೆ.
ಬಣ್ಣದ ತಳಿಗಳು ಎಂಬ ಪ್ರಚಾರವೇ ಒಂದು ಆಟ:
- ಬಣ್ಣ ಎಲ್ಲರಲ್ಲೂ ಒಂದು ಕುತೂಹಲವನ್ನು ಕೆರಳಿಸುತ್ತದೆ.
- ಮಂಗಳೂರು ಮಾರುಕಟ್ಟೆಯಲ್ಲಿ ಹಿಂದೆ ರಾಂಬುಟಾನ್ ಹಣ್ಣು ಮಾರಾಟ ಮಾಡುವಾಗ ವ್ಯಾಪಾರಿಗಳು ಇದು ಹೃದಯಕ್ಕೆ ಒಳ್ಳೆಯದು ಎಂದು ಉತ್ತಮ ಬೆಲೆಗೆ ಮಾರಾಟ ಮಾಡುತ್ತಿದ್ದರು.
- ಇದು ಸತ್ಯವೋ ಸುಳ್ಳೋ ಯಾರಿಗೂ ಗೊತ್ತಿಲ್ಲ.
- ಆದರೆ ಜನ ದುಂಬಾಲು ಬಿದ್ದು, ಕಿಲೋ 400 ಕೊಟ್ಟಾದರೂ ಖರೀದಿ ಮಾಡುತ್ತಿದ್ದರು.
- ಹಾಗೆಯೇ ಇದೂ ಸಹ. ಈಗ ಪ್ರಚಾರದಲ್ಲಿರುವ ಥಾಯ್ಲ್ಯಾಂಡ್ ಮಾವು ಎಂಬಿತ್ಯಾದಿ ಪ್ರಚಾರಗಳೂ ಇದೆ ಆಗುವ ಸಂದೇಹ ಇದೆ.
ಸಸ್ಯೋತ್ಪಾದಕರ ಕೈವಾಡ ಹೆಚ್ಚು:
- ಲಕ್ಷ ಬೆಲೆಯ ಮಾವು ಎಂದು ಪ್ರಚಾರ ಮಾಡುವುದರ ಹಿಂದೆ ಸಸ್ಯೋತ್ಪಾದಕರ ಕೈವಾಡವೂ ಇಲ್ಲ ಎನ್ನುವಂತಿಲ್ಲ.
- ಇತ್ತೀಚೆಗೆ ಹಲವಾರು ನರ್ಸರಿಗಳು ಅಪರೂಪದ ವಿದೇಶೀ ಮೂಲದ ಹಣ್ಣು ಹಂಪಲುಗಳ ಸಸಿಗಳನ್ನು ಉತ್ಪಾದಿಸಿ ಮಾರಾಟ ಮಾಡುವುದರಲ್ಲಿ ತೊಡಗಿದ್ದಾರೆ.
- ಸಾಮಾಜಿಕ ಮಾಧ್ಯಮಗಳು, ಆಕರ್ಷಕ ಚಿತ್ರಗಳು ಇವರ ವ್ಯವಹಾರವನ್ನು ಮತ್ತಷ್ಟು ಕುದುರಿಸಿವೆ.
- ಅದೇನೇ ಇರಲಿ ರೈತರಾದವರು ಇಂತಹ ಪ್ರಚಾರಗಳಿಗೆ ಸೊಪ್ಪು ಹಾಕಬಾರದು.
- ಈ ತಳಿಗಳ ತವರು ಯಾವುದು, ಅಲ್ಲಿನ ವಾತಾವರಣ ಏನು , ಆ ವಾತಾವರಣ ನಮ್ಮಲ್ಲಿ ಇದೆಯೇ ಎಂಬುದನ್ನೆಲ್ಲಾ ತಿಳಿದುಕೊಂಡು ಬೆಳೆಸಬೇಕು.
- ಕಿಲೋ ಮಾವಿಗೆ ಲಕ್ಷ ಬೆಲೆ ಇರುವಾಗ ಒಂದು ಮಾವಿನ ಸಸಿಗೂ ಅರ್ಧ ಲಕ್ಷ ಇದೆಯೋ ನೋಡಬೇಕಾಗಿದೆ.
ಮಾವು ಸೇರಿದಂತೆ ಹಣ್ಣಿನ ಬೆಳೆಗಳ ವಿಚಾರದಲ್ಲಿ ಸಾಕಶ್ಟು ಅಧ್ಯನ ನಡೆಸಿದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿವೃತ್ತ ನಿರ್ಧೇಶಕರಾದ ಡಾ. ಎಂ ಆರ್ ದಿನೇಶ್ ಅವರ ಜೊತೆ ಈ ಬಗ್ಗೆ ಚರ್ಚಿಸಿದಾಗ ಅವರೂ ಈ ಹೊಸ ತಳಿಗಳ ಪ್ರಚಾರ ವೈಖರಿಯನ್ನು ಗಮನಿಸಿದ್ದರೂ, ಇಂತಹ ತಳಿಗಳ ಬಗ್ಗೆ ನನಗೆ ಗೊತ್ತಿಲ್ಲ ಎನ್ನುತ್ತಾರೆ.
ರೈತರೇ ಇತ್ತಿಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ವಿದೇಶೀ ಹಣ್ಣು ಹಂಪಲುಗಳಾ ಪ್ರಚಾರ ನಡೆಯುತ್ತಿದ್ದು, ಲಕ್ಷ ಲಕ್ಷದ ಆಸೆಯನ್ನು ತೋರಿಸಲಾಗುತ್ತಿದೆ. ವಾಸ್ತವಗಾಗಿ ಎಲ್ಲವೂ ನಮ್ಮ ಹವಾಗುಣದಲ್ಲಿ ಹೊಂದಾಣಿಕೆ ಆಗುವುದಿಲ್ಲ. ಹಾಗೆಂದು ಒಂದೆರಡು ಸಸಿಗಳನ್ನು ಪ್ರಯೋಗಾರ್ಥವಾಗಿ ಬೆಳೆಸಬಹುದು.ಒಂದು ವಿಚಾರ ಇಲ್ಲಿ ಗಮನಿಸಿ. ಯಾವುದೇ ಒಂದು ಬೆಳೆ ಪ್ರಾರಂಭಿಕ ಹಂತದಲ್ಲಿ ಬೆಲೆ ಪಡೆದಿರುತ್ತದೆ. ಕ್ರಮೇಣ ಅದು ಸಾಮಾನ್ಯವಾಗುತ್ತದೆ. ಅಮೇಜಾನ್ ನಲ್ಲಿ ಹಲಸಿನ ಬೀಜಕ್ಕೆ ಬೆಲೆ ಇದೆಯಾದರೂ ಕೊಡುವವರು ಹೆಚ್ಚಾದರೆ ಅದರ ಬೆಲೆ ಏನಾಗಬಹುದು? ಹೀಗೆ ಎಲ್ಲವೂ.
Ok sir ಸತ್ಯಂಶ ತಿಳಿಯುವುದು
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಯಾವಾಗಲೂ ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.