ತೋಟಗಾರಿಕಾ ಬೆಳೆಗಾರರ ರಕ್ಷಕ ಈ ಶಿಲೀಂದ್ರ ನಾಶಕ.

ಬೊರ್ಡೋ ಪೇಸ್ಟ್- Bordeaux paint

ನಾವೆಲ್ಲಾ ಕೆಲವು ಸಂಶೋಧನಾ ಸಂಸ್ಥೆಗಳು, ಬೆಳೆ ಪ್ರಾತ್ಯಕ್ಷಿಕಾ ತಾಕುಗಳಿಗೆ ಭೇಟಿ ಕೊಟ್ಟಾಗ ಅಲ್ಲಿನ ತೋಟದ ಬೆಳೆಗಳ ಮರ, ಬಳ್ಳಿಯ ಕಾಂಡಕ್ಕೆ ನೀಲಿ ಮಿಶ್ರ ಬಿಳಿ ಬಣ್ಣದ ಲೇಪನ ಮಾಡಿರುವುದನ್ನು ಕಂಡಿರಬಹುದು.  ಅದು ಏನು ಗೊತ್ತೇ?

ಇದು ನೋಡಲು ಚೆಂದವಾಗಿ ಇರಲಿ ಎಂದು ಲೇಪನ ಮಾಡಿದ್ದು ಅಲ್ಲ. ಅದು ಒಂದು ಸಸ್ಯ ಸಂರಕ್ಷಣಾ ಔಷಧಿಯ ಲೇಪನ. ಬಹುತೇಕ ತೋಟಗಾರಿಕಾ ಬೆಳೆಗಳಿಗೆ ಕಾಂಡದ ಮೂಲಕ ಕೆಲವು ರೋಗ – ಕೀಟಗಳು ಪ್ರವೇಶವಾಗುತ್ತವೆ. ಅದನ್ನು ಪ್ರತಿಬಂಧಿಸುವಲ್ಲಿ ಈ ಬಣ್ಣದ ಪೇಸ್ಟ್ ಲೇಪನ ಸಹಕಾರಿ. ಇದು ಬಣ್ಣದ ಪೇಸ್ಟ್ ಅಲ್ಲ. ಇದು ಮೈಲು ತುತ್ತೆ ಮತ್ತು ಸುಣ್ಣದ ಮಿಶ್ರಣದ ಬೋರ್ಡೋ ಪೇಸ್ಟ್ ಅಥವಾ ಬೋರ್ಡೋ ಪೈಂಟ್.

 • ಬೋರ್ಡೋ ದ್ರಾವಣ ನಮಗೆಲ್ಲಾ ಗೊತ್ತಿದೆ. ಅದು ಶೇ.1 ರ ದ್ರಾವಣ.
 • ಇದನ್ನು ಕೊಳೆ ರೋಗ ನಿಯಂತ್ರಣಕ್ಕಾಗಿ ಅಡಿಕೆ, ತೆಂಗು, ದಾಳಿಂಬೆ, ದ್ರಾಕ್ಷಿ ಕರಿಮೆಣಸು ಮುಂತಾದ  ಬೆಳೆಗಳಿಗೆ ಬಳಕೆ ಮಾಡುತ್ತಾರೆ.
 • ಸಿಂಪರಣೆಗೆಅನುಕೂಲವಾಗುವ ದ್ರವ ರೂಪ ಇದು.
 • ಲೇಪನಕ್ಕೆ ಇದು ಸೂಕ್ತವಲ್ಲ. ಲೇಪನಕ್ಕೆ ಸೂಕ್ತವಾದ ಮಿಶ್ರಣ ದಪ್ಪ ಇರಬೇಕು.
 • ಹಾಗಾಗಬೇಕಾದರೆ ಅದು ಸಲ್ಪ ದಪ್ಪ ಪೈಂಟ್ ತರಹ ಇರಬೇಕು.
 • ಪೈಂಟ್ ತರಹ ಬಳಕೆ ಮಾಡುವ ಬೋರ್ಡೋ ದ್ರಾವಣ ಶೇ.10 ರ ದ್ರಾವಣವಾಗಿರುತ್ತದೆ.
 • ಇದು ಲೇಪನ ಮಾಡಿದಲ್ಲಿ  ಶಿಲೀಂದ್ರದ ಬೆಳವಣಿಗೆಯನ್ನು ಬಹು ಕಾಲದ ವರೆಗೆ ಹತ್ತಿಕ್ಕುತ್ತದೆ.
 • ಮೈಲು ತುತ್ತೆ ಮತ್ತು ಸುಣ್ಣ ಮಿಶ್ರಣ ಆದಾಗ ತಯಾರಾಗುವ ದ್ರಾವಣ ಬರೇ ಶಿಲೀಂದ್ರ ನಿಯಂತರಕ ಮಾತ್ರವಲ್ಲ.
 • ಅದು ಬ್ಯಾಕ್ಟೀರಿಯಾ ನಿಯಂತ್ರಕ. ಜೊತೆಗೆ ಸಣ್ಣ ಪ್ರಮಾಣದಲ್ಲಿ  ಕೀಟ ನಿಯಂತ್ರಕವಾಗಿಯೂ ಕೆಲಸ ಮಾಡುತ್ತದೆ.
 • ಇದು ಸುರಕ್ಷಿತ ಸಸ್ಯ ಸಂರಕ್ಷಣಾ ಔಷಧಿ ಸಹ.
ತೆಂಗಿನ ಮರದ ಸುಳಿ ಭಾಗಕ್ಕೆ ಬೋರ್ಡೋ ಪೇಸ್ಟ್ ಹಾಕುವುದು-putting Bordeaux paste to coconut tree crown
ತೆಂಗಿನ ಮರದ ಸುಳಿ ಭಾಗಕ್ಕೆ ಬೋರ್ಡೋ ಪೇಸ್ಟ್ ಹಾಕುವುದು

ಬೋರ್ಡೋ ಪೇಸ್ಟ್ ತಯಾರಿಕೆ:

 • ಬೋರ್ಡೋ ಪೇಸ್ಟ್ ತಯಾರಿಸಲು ಸಮಪ್ರಮಾಣದ ಮೈಲುತುತ್ತೆ ( ಕಾಪರ್ ಸಲ್ಫೇಟ್ CuSo4 ಮತ್ತು ಸುಣ್ಣ ಬೇಕಾಗುತ್ತದೆ.
 • ಮೈಲು ತುತ್ತೆ 1 ಕಿಲೋ ಆದರೆ 1 ಕಿಲೋ ಸುಣ್ಣ. ಇವೆರಡನ್ನೂ ತಲಾ 5 ಲೀ. ನೀರಿನಲ್ಲಿ ಪ್ರತ್ಯೇಕವಾಗಿ ಕರಗಿಸಿಕೊಳ್ಳಬೇಕು.
 • ಹರಳು ರೂಪದ ಮೈಲುತುತ್ತೆಯನ್ನು ಅರ್ಧ ಗಂಟೆಗೆ ಮುಂಚೆ ಕರಗಿಸಿಕೊಳ್ಳಬೇಕು.
 • ಚಿಪ್ಪು ಸುಣ್ಣ ಆಗಿದ್ದಲ್ಲಿ ಬಿಸಿ ನೀರಿನಲ್ಲಿ ಕರಗಿಸುವುದು ಸೂಕ್ತ.
 • ಇವೆರಡೂ ಸಾಮಾಗ್ರಿಗಳು ಪೂರ್ತಿಯಾಗಿ ಕರಗಿದ ತರುವಾಯ ಅವುಗಳನ್ನು ಬೋರ್ಡೋ ದ್ರಾವಣಕ್ಕೆ ಮಿಶ್ರಣ ಮಾಡಿದಂತೆ ಸುಣ್ಣದ ನೀರಿಗೆ ತುತ್ತದ ನೀರನ್ನು ಎರೆದು ಚೆನ್ನಾಗಿ ಕಲಕಬೇಕು. ಈಗ ಬೋರ್ಡೋ ಪೇಸ್ಟ್ ಸಿದ್ದವಾಗುತ್ತದೆ.
ಮಾವಿನ ಮರದ ಕಾಂಡಕ್ಕೆ ಬೋರ್ಡೋ ಪೇಸ್ಟ್ ಹಾಕುವುದು- painting Bordeaux paste to mango tree stem
 • ಬೋರ್ಡೋ ಪೇಸ್ಟ್ ಜೊತೆಗೆ ಬೇರೆ ಯಾವುದನ್ನೂ ಮಿಶ್ರಣ ಮಾಡಬಾರದು ಎಂದಿಲ್ಲ.
 • ಅದು ದ್ರಾವಣದಂತೆ ರಸ ಸಾರ ಸ್ವಲ್ಪ ವ್ಯೆತ್ಯಾಸ ಆದರೂ ಅದರ ಬಳಕೆ ಹೆಚ್ಚು ಸೂಕ್ಷ್ಮ ಅಲ್ಲದ ಕಾರಣ ಇದರ ಜೊತೆಗೆ ಹಿಂದೆ ಕಾರ್ಬರಿಲ್ ಸೇರಿಸುತ್ತಿದ್ದರು.
 • ಈಗ ಈ ಕೀಟನಾಶಕ ಲಭ್ಯವಿಲ್ಲದ ಕಾರಣ ಅದರ ಬದಲಿಗೆ ಡೆಲ್ಟ್ರಾಮೆಥ್ರಿನ್ ಕೀಟನಾಶಕವನ್ನು  ಸೇರಿಸುತ್ತಾರೆ.
 • 1+1+10 ಲೀ ಬೋರ್ಡೋ ಪೇಸ್ಟ್ ಗೆ ಸುಮಾರು 50 ಗ್ರಾಂ ನಷ್ಟು ಡೆಟ್ರಾಮೆಥ್ರಿನ್ ಪುಡಿಯನ್ನು ಅಥವಾ ದ್ರಾವಣವನ್ನು ಸೇರಿಸುವ ಕ್ರಮ ಇದೆ.
 • ಬೇಕಿದ್ದರೆ ಸೇರಿಸಬಹುದು. ಮೆಲಾಥಿಯಾನ್ ಪುಡಿಯನ್ನೂ ಸೇರಿಸಬಹುದು.
 • ಇದುವೇ ಬೋರ್ಡೋ ಪೇಸ್ಟ್  ಅಥವಾ ಪೈಂಟ್ ತಯಾರಿಕೆ.
 • ಇದನ್ನು ಮೈಲುತುತ್ತೆ ಅಲ್ಲದೆ ಕಾಪರ್ ಆಕ್ಸೀ ಕ್ಲೋರೈಡ್ ನಲ್ಲೂ ತಯಾರಿಸಲಾಗುತ್ತದೆ.
 • ಆದರೆ ಬೋರ್ಡೋ ಗಿಂತ ಖರ್ಚು ಹೆಚ್ಚಾಗುತ್ತದೆ.
ಕರಿಮೆಣಸಿನ ಬಳ್ಳಿಗೆ ಬೋರ್ಡೋ ಪೇಸ್ಟ್ ಲೇಪನ- painting Bordeaux paste to pepper stem
ಕರಿಮೆಣಸಿನ ಬಳ್ಳಿಗೆ ಬೋರ್ಡೋ ಪೇಸ್ಟ್ ಲೇಪನ

ಬಳಕೆಯ ಉದ್ದೇಶ:

 • ಬೋರ್ಡೋ ಪೇಸ್ಟ್ ಅನ್ನು  ಪೈಂಟ್ ಮಾಡುವ ಬ್ರಷ್ ಮೂಲಕ ಲೇಪನ ಮಾಡಲಾಗುತ್ತದೆ.
 • ಕಾಂಡ, ಬಳ್ಳಿಗೆ ನೆಲಮಟ್ಟದಿಂದ ಸುಮಾರು 1 ಮೀಟರ್ ಎತ್ತರದ ತನಕ ಇದನ್ನು ಲೇಪನ ಮಾಡಲಾಗುತ್ತದೆ.
 • ಮಣ್ಣಿನ ಮೂಲಕ ಬಹುತೇಕ ಶಿಲೀಂದ್ರಗಳು , ಬ್ಯಾಕ್ಟೀರಿಯಾಗಳು ಕಾಂಡಕ್ಕೆ ವರ್ಗಾವಣೆಯಾಗಿ ಅಲ್ಲಿ ಕೊಳೆಯುವುಕ್ಕೆ ಅಥವಾ ಭಾಗಶಃ ಶಿಲೀಂದ್ರ ಸೋಂಕು ಉಂಟಾಗುತ್ತದೆ.
 • ಅದನ್ನು ತಡೆಯುವಲ್ಲಿ ಈ ಬೋರ್ಡೋ ಪೇಸ್ಟ್ ಸಹಾಯಕವಾಗುತ್ತದೆ.
 • ಬೋರ್ಡೋ ಪೇಸ್ಟ್ ಜೊತೆಗೆ ಕೀಟನಾಶಕವನ್ನು ಸೇರಿಸುವುದರಿಂದ ಕೆಲವು ಮರದ ಬಿರುಕುಗಳಲ್ಲಿ ಅಡಗಿರುವ ಕೀಟಗಳು ಸಹ ನಾಶವಾಗುತ್ತವೆ.
 • ಇದು ಒಂದು ಶಿಲೀಂದ್ರ ಪ್ರತಿಬಂಧಕ. ಬಹುತೇಕ ತೋಟಗಾರಿಕಾ ಬೆಳೆಗಳಲ್ಲಿ (ಮಾವು, ಗೇರು, ನುಗ್ಗೆ, ಪೇರಳೆ, ಲಿಂಬೆ ಇತ್ಯಾದಿ)  ಗೆಲ್ಲುಗಳನ್ನು ಕಾಲ ಕಾಲಕ್ಕೆ ಪ್ರೂನಿಂಗ್ ಮಾಡುವ ಕ್ರಮ ಇದೆ.
 • ಗೆಲ್ಲು ಕಡಿದ ಗಾಯಕ್ಕೆ ಬೋರ್ಡೋ ಪೇಸ್ಟ್ ಲೇಪನ ಮಾಡುವುದರಿಂದ ಅಲ್ಲಿ ಕೊಳೆಯುವಿಕೆ ಉಂಟಾಗುವುದಿಲ್ಲ.
 • ಹೊಸ ಚಿಗುರು ಬರುತ್ತದೆ. ವ್ಯವಸ್ಥಿತವಾಗಿ ಕೃಷಿ ಮಾಡುವವರು ಇದನ್ನು ತಪ್ಪದೆ ಬಳಕೆ ಮಾಡುತ್ತಾರೆ.

ಎಲ್ಲೆಲ್ಲಿ ಬಳಕೆ ಮಾಡಬಹುದು:

 • ತೆಂಗಿನ ಮರದ ಕಾಂಡಕ್ಕೆ ಎಟಕುವಷ್ಟು ಎತ್ತರಕ್ಕೆ ಬೋರ್ಡೋ ಪೇಸ್ಟ್ ಲೇಪನ ಮಾಡುವುದರಿಂದ  ಕಾಂಡದಲ್ಲಿ ರಸ ಸೋರುವ ಸಮಸ್ಯೆಯನ್ನು ದೂರ ಮಾಡಬಹುದು.
ಹಲಸಿನ ಮರದ ಕಾಂಡಕ್ಕೆ ಲೇಪನ- painting to jack fruit tree
 • ಕರಿಮೆಣಸಿನ ಬಳ್ಳಿಗೆ ನೆಲಮಟ್ಟದಿಂದ 1 ಮೀಟರ್ ಎತ್ತರದ ತನಕ ಬೋರ್ಡೋ ಪೇಸ್ಟ್ ಲೇಪನ ಮಾಡುವುದರಿಂದ ಮಣ್ಣಿನ ಮೂಲಕ ಬರುವ ಶಿಲೀಂದ್ರ ರೋಗವಾದ ಶೀಘ್ರ ಸೊರಗು ರೋಗದಿಂದ ರಕ್ಷಣೆ ಪಡೆಯಬಹುದು.
 • ತೆಂಗಿನ  ಮರದ ಸುಳಿ ಕೊಳೆ ರೋಗಕ್ಕೆ ಇದು ಉತ್ತಮ ಔಷಧಿಯಾಗಿದೆ. ಸ್ವಚ್ಚ ಮಾಡಿದ ನಂತರ ಇದನ್ನು ಲೇಪನ ಮಾಡಿದರೆ ನಂತರ ಕೊಳೆಯುವಿಕೆ ನಿಯಂತ್ರಣವಾಗುತ್ತದೆ.
ಅಡಿಕೆ ಸಸಿ ಸುಳಿ ಕೊಳೆಯದಂತೆ ಬೋರ್ಡೋ ಪೈಂಟ್ ಲೇಪನ
ಅಡಿಕೆ ಸಸಿ ಸುಳಿ ಕೊಳೆಯದಂತೆ ಬೋರ್ಡೋ ಪೈಂಟ್ ಲೇಪನ
 • ಅಡಿಕೆ ಸಸಿಗಳ  ಸುಳಿ ಕೊಳೆ ರೋಗಕ್ಕೂ ಸಹ ಇದನ್ನು ಬಳಕೆ ಮಾಡಿ ಸಸಿಯನ್ನು ಬದುಕಿಸಬಹುದು.
 • ಮಾವಿನ ಮರದ ಕಾಂಡಕ್ಕೆ ಇದನ್ನು ಲೇಪನ ಮಾಡುವುದರಿಂದ ಮಾವಿನ ಮರದ ಬಿರುಕುಗಳಲ್ಲಿ ಅಡಗಿರುವ ಕಾಂಡ ಕೊರಕ, ಹಾಗೂ ಓಟೆ ಕೊರಕ ನಿಯಂತ್ರಣವಾಗುತ್ತದೆ. ಆಂತ್ರಾಕ್ನೋಸ್ ರೋಗವೂ ಸಹ ಕಡಿಮೆಯಾಗುತ್ತದೆ.
ಪಪ್ಪಾಯಿ ಮರದ ಕಾಂಡಕ್ಕೆ ಲೇಪನ- painting to papaya tree
 • ಚಿಕ್ಕು ಮರಗಳಿಗೂ ಇದೇ ರೀತಿ ರಕ್ಷಣೆ  ಸಿಗುತ್ತದೆ.ಸೀತಾಫಲ , ಅಂಜೂರ ಎಲ್ಲಾ ಬೆಳೆಗಳ ಕಾಂಡಕ್ಕೂ , ಪ್ರೂನಿಂಗ್ ಮಾಡಿದ ಭಾಗಕ್ಕೂ ಲೇಪಿಸಬೇಕು.
 • ಹಲಸಿನ ಮರಗಳಿಗೆ ಅತೀ ದೊಡ್ಡ ಸಮಸ್ಯೆಯಾದ ಗಿಡ ಸಾಯುವಿಕೆಗೆ ಕಾರಣವಾದ ಶಿಲೀಂದ್ರ ರೋಗವನ್ನು ಇದು ತಡೆಯುತ್ತದೆ.
 • ಕಾಯಿ ಕೊರೆಯುವ ದುಂಬಿ ಕಾಯಿಯ ಒಳ ಸೇರುವ ಮುನ್ನ ಅದು ಕಾಂಡದ ಬಿರುಕುಗಳಲ್ಲಿ ಅಡಗಿರುತ್ತದೆ.ಅದನ್ನು ನಿಯಂತ್ರಿಸಲು ಇದು ಸಹಾಯಕ.
 • ಪಪ್ಪಾಯಿ ಸಸ್ಯಗಳು ಮಳೆ ಬರುವ ಅವಧಿಯಲ್ಲಿ ಕಾಂಡ ಕೊಳೆಯುವ ರೋಗಕ್ಕೆ ತುತ್ತಾಗುವುದು ಹೆಚ್ಚು.
 • ಪಪ್ಪಾಯಿ ಮರದ ಕಾಂಡಕ್ಕೆ ಬುಡ ಭಾಗದಿಂದ 1 ಮೀ. ಎತ್ತರದ ತನಕ ಬೋರ್ಡೋ ಪೇಸ್ಟ್ ಅನ್ನು ಲೇಪನ ಮಾಡಿದರೆ  ಕಾಂಡ ಕೊಳೆಯುವ ಸಮಸ್ಯೆ ಹಾಗೆಯೇ ಕಾಂಡದ ಮೂಲಕ ಬಸವನ ಹುಳ , ಕೆಲವು ಕೀಟಗಳು ಮೇಲೆ ಏರುವುದನ್ನು ತಡೆಯಬಹುದು.
ಕಡಿದ ಭಾಗಕ್ಕೆ ಲೇಪನ –painting to pruned part
 • ಅಡಿಕೆ ಮರಗಳ ಕಾಂಡಕ್ಕೂ ಇದನ್ನು ಲೇಪನ ಮಾಡಬಹುದು. ಅದರೆ ಅದು ಬಹಳ ದುಬಾರಿಯಾಗಬಹುದು.
 • ದ್ರಾಕ್ಷಿ ಬಳ್ಳಿಗೆ ನೆಲಮಟ್ಟದಿಂದ 1 ಮೀ. ಎತ್ತರದ ತನಕ ಇದನ್ನು ಲೇಪಿಸುವುದರಿಂದ ಡೌನೀ ಮಿಲ್ಡಿವ್, ಪೌಡ್ರೀ ಮಿಲ್ಡಿವ್, ಆಂತ್ರೋಕ್ನೋಸ್ ಮುಂತಾದ ಶಿಲೀಂದ್ರ ಸೋಂಕಿನಿಂದ ರಕ್ಷಣೆ ಪಡೆಯಬಹುದು.
 • ತರಕಾರಿ ಬೆಳೆಗಳಲ್ಲೂ ಟೊಮಾಟೋ, ಬದನೆ ಮುಂತಾದ ತರಕಾರಿಗಳಿಗೆ ಕಾಂಡಕ್ಕೆ ಇದನ್ನು ಅನುಕೂಲ  ಇದ್ದವರು ಲೇಪನ ಮಾಡುವುದರಿಂದ ತುಂಬಾ ಪ್ರಯೋಜನ ಇದೆ.

ಬೋರ್ಡೋ ಪೇಸ್ಟ್ ಎಂಬುದು ಅತೀ ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಸಸ್ಯ ಸಂರಕ್ಷಣಾ ಔಷಧಿಯಾಗಿದೆ.ಇದು ಶಿಲೀಂದ್ರ  ರೋಗ ಬಂದ ನಂತರ ನಿಯಂತ್ರಣ ಮಾಡುವ ಔಷಧಿ ಅಲ್ಲ. ಶಿಲೀಂದ್ರ ರೋಗ ಬಾರದಂತೆ ತಡೆಯುವ ಔಷಧಿ.

3 thoughts on “ತೋಟಗಾರಿಕಾ ಬೆಳೆಗಾರರ ರಕ್ಷಕ ಈ ಶಿಲೀಂದ್ರ ನಾಶಕ.

  1. ಧನ್ಯವಾದಗಳು. ನಿಮಗೆ ಬೇಕಾಗುವ ಮಾಹಿತಿಗಳ ಕೇಳಿಕೆ ವ್ಯಕ್ತಪಡಿಸಿದರೆ ಅದಕ್ಕನುಗುಣವಾಗಿ ಬರಹಗಳನ್ನು ಬರೆಯಲು ಅನುಕೂಲವಾಗುತ್ತದೆ. ನಿಮ್ಮ ಮಿತ್ರರಿಗೂ ಈ ಸೈಟ್ ಬಗ್ಗೆ ತಿಳಿಸಿ.
   ನಮ್ಮ ಫೇಸ್ ಬುಕ್ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆ. ಈ ಬಗ್ಗೆ ಫ಼್ಹೇಸ್ ಬುಕ್ ಗೆ ಬರೆಯಲಾಗಿದೆ. 2-3 ದಿನಗಳಲ್ಲಿ ಸರಿ ಅಗಬಹುದು. ದಯವಿಟ್ಟು ನಿಮಗೆ ತೊಂದರೆ ಆದರೆ ಕ್ಷಮಿಸಿ.

 1. ಮೈಲು ತುತ್ತಕ್ಕೆ ಬಹಳಷ್ಟು ಬೆಲೆಯನ್ನು ಅಂದರೆ ಕೆ. ಜಿ. ಗೆ 200 ಪಡೆಯುತ್ತಾರೆ ನಿಜಕ್ಕೂ ಅಷ್ಟೊಂದು ಬೆಲೆ ಇದೀಯ ಅಥವಾ ಏಷ್ಟು ಕೆ. ಜಿ. ಯ ಚೀಲದಲ್ಲಿ ಸಿಗುವುದು ಬೆಲೆ ಕಡಿಮೆಯಾಗುವುದ ಮಾಹಿತಿ ನೀಡಿದರೆ ಉತ್ತಮವಾಗಿರುತ್ತದೆ

Leave a Reply

Your email address will not be published. Required fields are marked *

error: Content is protected !!