ಕೆಲವರಿಗೆ ಕಲ್ಲು ಎಸೆಯುವುದರಲ್ಲಿ ಮಜಾ. ಕಲ್ಲನ್ನು ಎಸೆದು ನೋಡುತ್ತಾರೆ , ಬಿದ್ದರೆ ಹಣ್ಣು ಲಾಭ. ಹೋದರೆ ಒಂದು ಕಲ್ಲು ಮಾತ್ರ. ಇದು ಈ ಹಿಂದೆ ಪಶ್ಚಿಮ ಬಂಗಾಲ ಸರಕಾರ ಗುಟ್ಕಾ, ಪಾನ್ ಮಸಾಲ ಮುಂತಾದ ಉತ್ಪನ್ನಗಳ ಮಾರಾಟ ಮತ್ತು ಉತ್ಪಾದನೆ ಮೇಲೆ ಹೇರಿದ ನಿಷೇಧಕ್ಕೂ, ಹಾಗೆಯೇ ಉತ್ತರಾಖಾಂಡದ ಸಂಸದರು ಪ್ರಧಾನಿ ಮೋದಿಯವರಿಗೆ ಅಡಿಕೆ ನಿಷೇಧ ಮಾಡಬೇಕೆಂದು ಬರೆದ ಪತ್ರಕ್ಕೂ ಇರುವ ಒಳ ಮರ್ವ.
ಉತ್ತಾರಕಾಂಡದ ಸಂಸದ ನಿಶಿಕಾಂತ್ ದುಬೆ ಇವರು ಅಡಿಕೆ ತಿನ್ನುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಹೃದಯ ಸಂಬಂಧಿತ ಖಾಯಿಲೆ, ಕ್ಯಾನ್ಸರ್ , ಅಸ್ತಮಾ, ಹೃದಯದ ಬಡಿತದ ಏರಿಳಿತ ಉಂಟಾಗುತ್ತದೆ ಎಂಬುದಾಗಿ ಹೇಳುತ್ತಾ ಅಡಿಕೆಯನ್ನು ನಿಶೇಧ ಮಾಡಿ ಎಂಬುದಾಗಿ ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ಜೊತೆಗೆ ಮದುವೆ ಮುಂತಾದ ಸಮಾರಂಭಗಳಲ್ಲಿ ಅಡಿಕೆ ಬಳಸಬಹುದು ಎಂದೂ ಹೇಳಿದ್ದಾರೆ.
ಮಾಧ್ಯಮಗಳು ಅಡಿಕೆ ಬ್ಯಾನ್ ಆಗಬಹುದೇ? ಎಂಬೆಲ್ಲಾ ಹೇಳಿಕೆಗಳ ಮೂಲಕ ಬೆಳೆಗಾರರನ್ನು ಗೊಂದಲಕ್ಕೆ ಸಿಲುಕಿಸಲಾಗುತ್ತಿದೆ. ಇದೆಲ್ಲಾ ಹೊಸ ವಿಷಯಗಳಲ್ಲ. ಈ ಹಿಂದೆಯೂ ಇಂತದ್ದು ಹಲವಾರು ಸಲ ಆಗಿದೆ. ಮುಂದೆಯೂ ಆಗುತ್ತಿರುತ್ತದೆ. ಪ್ರಧಾನಿಗೆ ಪತ್ರ ಬರೆದ ತಕ್ಷಣ ಅಡಿಕೆ ನಿಷೇಧ ಆಗುವುದಿಲ್ಲ. ಇಂಥಹ ಹೇಳಿಕೆಗಳ ಹಿಂದೆ ಹಲವಾರು ಕಾಣದ ಕೈಗಳ ಕೆಲಸ ಇರುತ್ತದೆ ಎಂಬುದು ಎಲ್ಲಾ ಅಡಿಕೆ ಬೆಳೆಗಾರರಿಗೆ ಗೊತ್ತಿರಬೇಕು.
- ಅಡಿಕೆಯ ಬೆಲೆ ಏರುವಾಗ ಏನಾದರೂ ಒಂದು ಆಗಿಯೇ ತೀರುತ್ತದೆ.
- ಒಂದೋ ಇಲ್ಲಿ ಅಡಿಕೆ ಇಲ್ಲ, ಎಷ್ಟು ದರ ಏರಿಸಿದರೂ ಅಡಿಕೆ ಸಿಗುತ್ತಿಲ್ಲ.
- ಹಾಗಾಗಿ ಆಮದು ಮಾಡಲು ಅನುಮತಿ ಪಡೆಯುವುದು ನಡೆಯುತ್ತದೆ.
- ಇಲ್ಲವಾದರೆ ಇಂತಹ ಏನಾದರೂ ಒಂದು ಸುದ್ದಿಗಳ ಮೂಲಕ ಮಾರುಕಟ್ಟೆಯನ್ನು ಕಂಪಿಸುವ ಪ್ರಯತ್ನ ಮಾಡಲಾಗುತ್ತದೆ.
- ಈಗ ಆಗಿರುವುದೂ ಇದೆ ಎಂದರೂ ತಪ್ಪಾಗಲಾರದು.
- ಈ ಹಿಂದೆಯೂ ಇಂತಹ ಹಲವಾರು ನಿದರ್ಶನಗಳು ಆಗಿವೆ.
- ಇದರಿಂದಾಗಿ ಅಡಿಕೆ ಮಾರುಕಟ್ಟೆಯಲ್ಲಿ ತಾತ್ಕಾಲಿಕ ಸಂಚಲನವೂ ಆಗಿದೆ.
ಅಡಿಕೆ ಬಗ್ಗೆ ಇರುವ ಸಂಶೋಧನಾ ವರದಿಗಳನ್ನು ಸರಿಪಡಿಸಬೇಕಿದೆ:
- ಅಡಿಕೆಯು ಆರೋಗ್ಯಕ್ಕೆ ಹಾನಿ ಇಲ್ಲದ ವಸ್ತು, ಎಂಬುದಾಗಿ ನಾವು ಎಷ್ಟೇ ಹೇಳಿದರೂ ಇಂತಹ ಸಂದರ್ಭಗಳಲ್ಲಿ ಅದು ಪರಿಗಣನೆಗೆ ಬರುವುದಿಲ್ಲ.
- ಯಾವುದೇ ಕಾನೂನು ನಮ್ಮ ಅನುಭವ ಅಥವಾ ಅಧಿಕೃತವಲ್ಲದ ಸಂಶೋಧನೆಗಳನ್ನು ಅಥವಾ ನಮ್ಮ ಪಾರಂಪರಿಕ ಜ್ಞಾನವನ್ನು ಪರಿಗಣಿಸುವುದಿಲ್ಲ.
- ಸರಕಾರ ಅಥವಾ ನ್ಯಾಯಾಲಯ ಮಾನ್ಯ ಮಾಡುವುದು ಅಧಿಕೃತ ಸಂಶೋಧನಾ ಸಂಸ್ಥೆಗಳ ಸಂಶೋಧನಾ ವರದಿಗಳನ್ನು ಮಾತ್ರ.
- ನಮ್ಮ ದೇಶದ ಪ್ರತಿಷ್ಟಿತ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳು ನಡೆಸಿರುವ ಬಹುತೇಕ ಸಂಶೋಧನೆಗಳಲ್ಲಿ ಅಡಿಕೆಯಲ್ಲಿ ಆರೋಗ್ಯಕ್ಕೆ ಒಳೆಯದಾಗುವ ಅಂಶ ಇದೆ ಎಂದು ಎಲ್ಲೂ ಉಲ್ಲೇಖ ಇಲ್ಲ.
- ಅಡಿಕೆಯ ಕುರಿತಾದ ಎಲ್ಲಾ ಸಂಶೋಧನೆಗಳೂ ಅಂತಿಮ ಬಳಕೆಯ ಹಂತದಲ್ಲಿ ಅದು ಆರೋಗ್ಯಕ್ಕೆ ಒಳ್ಳೆಯದೇ, ಕೆಟ್ಟದೇ ಎಂಬುದಾಗಿ ಸಂಶೋಧನೆ ನಡೆಸಿವೆ.
- ಅಡಿಕೆ ಬೆಳೆಯುವ ನಮ್ಮಂತಹ ರೈತರಲ್ಲಿ ಅದನ್ನು ಪರೀಕ್ಷಿಸಿ ಅದರಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶಗಳಿವೆಯೇ ಎಂದು ಪರೀಕ್ಷಿಸಲಾಗಿಲ್ಲ.
- ನಾವು ಹೇಳುವುದು ನಮ್ಮ ಅಡಿಕೆ ಆರೋಗ್ಯಕ್ಕೆ ಹಾಳಲ್ಲ. ಒಳ್ಳೆಯದು ಇದು ನಿಜ.
- ನಮ್ಮ ಚಾಲಿ ಅಡಿಕೆಯಲ್ಲಿ ಅಥವಾ ಕೆಂಪಡಿಕೆಯನ್ನು ಸಂಸ್ಕರಿಸುವ ವಿಧಾನದಲ್ಲಿ ಅದರಲ್ಲಿ ಯಾವ ಹಾನಿಕಾರಕ ಅಂಶಗಳೂ ಇರುವ ಸಾಧ್ಯತೆ ಇಲ್ಲ.
- ನಾವು ಎಷ್ಟೇ ವ್ಯವಸ್ಥಿತವಾಗಿ ಅಡಿಕೆಯನ್ನು ಸಂಸ್ಕರಣೆ ಮಾಡಬಹುದು.ಮಾರಾಟ ಮಾಡಬಹುದು.
- ನಂತರದ ಹಂತದಲ್ಲಿ ಆಗುವ ಕಲಬೆರಕೆಗಳು ನಮ್ಮ ಹಿಡಿತದಿಂದ ಮೀರಿದ್ದು.
- ಚಾಲಿ ಅಡಿಕೆಗೆ ರೆಡ್ ಆಕ್ಸೈಡ್ ಮಿಶ್ರಣ ಮಾಡಿ ಕೆಂಪು ಮಾಡುವ ವಿಸ್ತ್ರುತ ಜಾಲಗಳಿವೆ.
- ಲೋಡ್ ಮಾಡಲ್ಪಟ್ಟ ಅಡಿಕೆಗೆ ನೀರು ಹಾಕಿ ತೂಕ ಹೆಚ್ಚಳ ಮಾಡುವ ದಂಧೆ ಇದೆ.
- ಉತ್ತಮ ಅಡಿಕೆಗೆ ಕಳಪೆ ಅಡಿಕೆ ಮಿಶ್ರಣ ಮಾಡುವ ದಂಧೆಯೂ ನಡೆಯುತ್ತಿದೆ.
- ಇದರಿಂದಾಗಿಯೇ ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂದು ವೈಜ್ಞಾನಿಕ ಸಂಶೋಧನೆಗಳು ಪತ್ತೆ ಮಾಡಿರುವುದು.
- ಇದನ್ನು ಸರಕಾರಕ್ಕೆ ಅಥವಾ ಸರಕಾರ ಪರಿಗಣಿಸುವ ಅಧಿಕೃತ ಸಂಶೋಧನಾ ಸಂಸ್ಥೆಗಳಿಗೆ ರೈತರ ಸಂಘಟನೆಗಳು ಮನವರಿಕೆ ಮಾಡಿಕೊಡಬೇಕಾಗಿದೆ.
ಅಡಿಕೆ ಸೇರಿಸಿದ ಉತ್ಪನ್ನದಲ್ಲಿ ಹಾನಿಕಾರಕ ಅಂಶಗಳು ಇದ್ದರೆ ಅದಕ್ಕೆ ಅಡಿಕೆ ಬೆಳೆಗಾರರನ್ನು ಅಥವಾ ಅದನ್ನೇ ನಂಬಿರುವ ಕೋಟ್ಯಾಂತರ ಜನರನ್ನು ಬಲಿಪಶು ಮಾಡಬೇಕಾಗಿಲ್ಲ. ಅಡಿಕೆ ಬೆಳೆಗಾರರನ್ನು ಮಾತ್ರವಲ್ಲ, ಬೆಳೆಯುವವರಿಗಿಂತ ಹೆಚ್ಚಾಗಿ ಬೇರೆಯವರನ್ನು ಪೋಷಿಸಿದ ಬೆಳೆ ಎಂಬುದರಲ್ಲಿ ಅನುಮಾನ ಇಲ್ಲ.
ಅಡಿಕೆ ಬ್ಯಾನ್ ಮಾಡದಂತೆ ತಡೆಯಲು ಸಾಧ್ಯವಿದೆ:
- ಸರಕಾರದ ನಿಯೋಜಿತ ಸಂಶೋಧನಾ ಸಂಸ್ಥೆಗಳು ಅಡಿಕೆಯ ಉತ್ಪಾದನಾ ಹಂತದಲ್ಲಿ ಅದರ ಗುಣಾವಗುಣಗಳ ಬಗ್ಗೆ ಅಧ್ಯಯನ ನಡೆಸುವಂತೆ ನಾವು ಅಡಿಕೆ ಬೆಳೆಗಾರರ ಸಂಘಗಳ ಮೂಲಕ ಒತ್ತಾಯ ಮಾಡಬೇಕಿದೆ.
- ಮೊನ್ನೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಅಭಯ ನೀಡಿದ್ದನ್ನು ಮತ್ತೊಮ್ಮೆ ನೆನಪಿಸಿ ನಾವು ಫಾಲೋ ಮಾಡಬೇಕಾಗಿದೆ.
- ಇಲ್ಲವಾದರೆ ಇದು ನಿತ್ಯ ರಗಳೆಯ ಸಂಗತಿಯಾಗಿಯೇ ಉಳಿಯಲಿದೆ.
- ಸಾಕಷ್ಟು NGO ಗಳು ಅಡಿಕೆಯನ್ನು ಬ್ಯಾನ್ ಮಾಡಬೇಕು ಎಂಬ ಇರಾದೆಯಲ್ಲಿವೆ.
- ಯಾವೊಬ್ಬನೂ ತಂಬಾಕು ಬ್ಯಾನ್ ಮಾಡಿ. ಅಡಿಕೆಯ ಸಿದ್ದ ಉತ್ಪನ್ನದಲ್ಲಿ ಬಳಕೆ ಮಾಡುವ ವಸ್ತುಗಳ ವಿಷಕಾರಿತ್ವವನ್ನು ಪ್ರಶ್ನಿಸುವುದಿಲ್ಲ.
- ಅಡಿಕೆ ಬೆಳೆಗಾರರು ಎಂದರೆ ಅದು ಅಸಂಘಟಿತ ವರ್ಗ. ಇಲ್ಲಿ ನಮ್ಮನ್ನು ಪ್ರತಿನಿಧಿಸುವವರು ಅಡಿಕೆ ವ್ಯಾಪಾರ ಮಾಡುವವರೇ ಹೊರತು ಅಡಿಕೆ ಬೆಳೆಯನ್ನೇ ನಂಬಿದವರು ಅಲ್ಲ.
ನಮ್ಮ ರಾಜ್ಯವೇ ದೇಶದಲ್ಲಿ ಅತ್ಯಧಿಕ ಅಡಿಕೆ ಬೆಳೆಯುವ ಪ್ರದೇಶವಾಗಿದ್ದು, ಇಲ್ಲಿನ ಒಂದಷ್ಟು ಶಾಸಕರು, ಸಂಸದರು ಸ್ವತಹ ಅಡಿಕೆ ಬೆಳೆಗಾರರಾಗಿದ್ದು, ರಾಜಕೀಯ ಮರೆತು ಅವರನ್ನು ಒಗ್ಗೂಡಿಸಿಕೊಂಡು ಕಳಂಕವನ್ನು ತೆಗೆಯುವ ಕೆಲಸವನ್ನು ತಕ್ಷಣ ಮಾಡಬೇಕು. ಇಲ್ಲವಾದರೆ ಅಡಿಕೆಯ ವಿಷಯದಲ್ಲಿ ರೈತ ಸೋಲು ಕಾಣಬೇಕಾಗುತ್ತದೆ.
ಅಡಿಕೆ ಬ್ಯಾನ್ ಆಗುವುದೇ ಇಲ್ಲ. ದರದ ಮೇಲೆ ಹೊಡೆತ ಬೀಳುತ್ತದೆ:
- ಪಶ್ಚಿಮ ಬಂಗಾಲ ಸರಕಾರವು 2013 ರಿಂದಲೂ ಸಾಮಾಜಿಕ ಆರೋಗ್ಯ ದೃಷ್ಟಿಯಿಂದ ಗುಟ್ಕಾ , ಪಾನ್ ಮಸಾಲ ತಯಾರಿಕೆ, ಮಾರಾಟವನ್ನು ನಿಷೇಧಿಸಿದೆ.
- ಮೊನ್ನೆ ಅದರ ಅವಧಿಯನ್ನು ಮುಂದುವರಿಸಿದ್ದೇ ಹೊರತು ಹೊಸತಾಗಿ ಹೇರಿದ್ದು ಅಲ್ಲ.
- ಇಲ್ಲಿ ಸುಮಾರು 20% ಯುವ ಜನತೆ ಗುಟ್ಕಾ ಹಾಗೂ ಪಾನ್ ಮಸಾಲದಂತಹ ನಿಕೋಟಿನ್ ಒಳಗೊಂಡ ಉತ್ಪನ್ನಗಳನ್ನು ತಿನ್ನುತ್ತಿದ್ದಾರೆ.
- ಸಿಗರೇಟು ಸೇವನೆ ಕೇವಲ 5% ಮಾತ್ರ. ಇದು ಯುವ ತಲೆಮಾರಿನ ಆರೋಗ್ಯವನ್ನು ಗಣನೀಯವಾಗಿ ಹಾಳು ಮಾಡುತ್ತದೆ.
- ಇದನ್ನು ಎತ್ತಿ ಹಿಡಿದವರು ಒಂದು ಸರಕಾರೇತರ ಸಂಸ್ಥೆಯವರು Anandashram Nityanand Trust (MANT).
- ಇವರು ಪಶ್ಚಿಮ ಬಂಗಾಲ ಮತ್ತು ಕೇರಳಗಳಲ್ಲಿ ಈ ಬಗ್ಗೆ ಅಧ್ಯಯನ ನಡೆಸಿದ್ದು, ಕೇರಳದಲ್ಲಿ ನಿಷೇಧ ಇದ್ದಾಗ ಮಾರಾಟಗಾರರು ತುಂಬಾ ಸಹಕಾರ ನೀಡಿದ್ದರು.
- ಆದರೆ ಪಶ್ಚಿಮ ಬಂಗಾಲದಲ್ಲಿ ಯಾವ ಮಾರಾಟಗಾರರೂ ಈ ನಿಷೇಧಕ್ಕೆ ಸ್ಪಂದಿಸದೆ ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದರು ಎಂಬ ವರದಿಯನ್ನು ನೀಡಿದೆ.
- ಈ ತನಕ ಜನ ಮತ್ತು ಮಾರಾಟಗಾರರು ನಿಷೇಧ ಇದ್ದಾಗ್ಯೂ ರಾಜಾರೋಷವಾಗಿ ಬಳಕೆ ಮಾಡುತ್ತಿದ್ದ ಕಾರಣ ಇನ್ನೂ ಇದು ಯಾವ ಫಲಿತಾಂಶವನ್ನೂ ಕೊಡಲಿಕ್ಕಿಲ್ಲ.
ಉತ್ತರಾಖಾಂಡದ ಸಂಸದರು ಯಾವ ಕಾರಣಕ್ಕೆ ಈ ವಿಷಯವನ್ನು ಪ್ರಸ್ತಾಪ ಮಾಡಿದರೋ ಗೊತ್ತಿಲ್ಲ. ಆದರೆ ಇಂತಹ ಪ್ರಸ್ತಾಪಗಳ ಹಿಂದೆ ಯಾವುದೋ ಕಾರಣ ಇದ್ಡೇ ಇರುತ್ತದೆ. ಅಡಿಕೆ ಬೆಳೆ ಹೆಚ್ಚಳ, ಅಡಿಕೆ ದರ ಹೆಚ್ಚಳ ಇವೂ ಸಹ ಒಂದು ಕಾರಣ ಆಗಿರಬಹುದು.
ಅಡಿಕೆಯ ಸುದ್ದಿಗೆ ಯಾರೂ ಬರುವುದಿಲ್ಲ:
ಅಡಿಕೆ ಬ್ಯಾನ್ ಮಾಡಿದರೆ ಸರಕಾರದ ಮೇಲೆ ಅತೀ ದೊಡ್ದ ಹೊಡೆತ ಬೀಳುತ್ತದೆ.ಪ್ರಧಾನಿಗಳೂ ಇದಕ್ಕೆ ಕಿವಿ ಕೊಡುವುದಿಲ್ಲ. ನ್ಯಾಯಾಲಯವೂ ಇದನ್ನು ಮುಂದೆ ಮುಂದೆ ಹಾಕುತ್ತಲೇ ಇರುತ್ತದೆ. ಈಗ ಕರ್ನಾಟಕ ಅತೀ ದೊಡ್ಡ ಅಡಿಕೆ ಬೆಳೆಯುವ ರಾಜ್ಯವಾಗಿದ್ದರೂ ಮುಂದೆ ದಕ್ಷಿಣ ಭಾರತವೇ ಅಡಿಕೆ ಬೆಳೆಯ ಖಣಜವಾಗಿ ಹೊರಹೊಮ್ಮಲಿದ್ದು, ಈಗ ಏನಾದರೂ ಅಡಿಕೆಯ ಸುದ್ದಿಗೆ ಬಂದರೆ ದಕ್ಷಿಣ ಭಾರತವನ್ನೇ ಎದುರು ಹಾಕಿಕೊಳ್ಳಬೇಕಾಗುತ್ತದೆ. ಆದ ಕಾರಣ ಇದೆಲ್ಲಾ ಸುದ್ದಿ ಅಷ್ಟೇ . ಇದನ್ನು ಯಾವ ಅಡಿಕೆ ಬೆಳೆಗಾರರೂ ಗಂಭೀರ ವಿಷಯವಾಗಿ ಪರಿಗಣಿಸಬೇಕಾಗಿಲ್ಲ. ಒಂದು ವೇಳೆ ಅಡಿಕೆ ಬೆಲೆ ಸ್ವಲ್ಪ ಕುಸಿತವಾದರೂ ಸಹ ಅದು ತಾತ್ಕಾಲಿಕವಾಗಿರುತ್ತದೆ.
ಅಡಿಕೆ ಕುರಿತಾಗಿ ಇಮೇಜ್ ಹಾಳು ಮಾಡುವ ಯಾವ ಸುದ್ದಿಗೂ ಕಿವಿಕೊಡಬಾರದು. ಇದು ನಮ್ಮ ಗಮನಕ್ಕೆ ಬಂದೇ ಇಲ್ಲ. ಎಂದು ಕೇಳಿಯೂ ಸುಮ್ಮನಿರಬೇಕು. ಇದನ್ನು ಜಗಜ್ಜಾಹೀರು ಮಾಡುವುದರಿಂದ ನಮಗೇ ಅನನುಕೂಲ. ಎರಡು ಹೋರಿಗಳ ಜಗಳದಲ್ಲಿ ನೆಲದಲ್ಲಿದ್ದ ಪೊದರು ಸಸ್ಯ ಸತ್ತು ಹೋದಂತೆ ಆಗುತ್ತದೆ.