ರಾಜಸ್ಥಾನದ ಜೈಪುರ ದಿಂದ ಅರಬ್ ರಾಷ್ಟ್ರಕ್ಕೆ (ಕುವೆಟ್) ಸಗಣಿ ರಪ್ತು ಆದದ್ದನ್ನು ನಾವು ಹಾಡಿ ಹೊಗಳುತ್ತೇವೆ.ನಮ್ಮ ದನಗಳ ಸಗಣಿಗೆ ಇಷ್ಟು ಮಹತ್ವ ಇದೆ ಎಂದು ಬೀಗುತ್ತೇವೆ. ಕೆಲವರು ಸಗಣಿ ಮಾರಾಟದ ಕನಸಿನಲ್ಲೂ ಇರಬಹುದು. ಸಗಣಿ ಮಾರಾಟ ಮಾಡುವುದಿದ್ದರೆ ಅದಕ್ಕೆ ಅರಬ್ ರಾಷ್ಟ್ರಗಳೇ ಆಗಬೇಕಾಗಿಲ್ಲ. ಭಾರತದ ಒಳಗೆಯೂ ಸಾಕಷ್ಟು ಬೇಡಿಕೆ ಇದೆ. ಬೆಲೆಯೂ ಇದೆ. ಕೃಷಿ ಪ್ರಧಾನವಾದ ನಮ್ಮ ದೇಶಕ್ಕೆ ಕೃಷಿಯ ಅವಿಭಾಜ್ಯ ಅಂಗವಾದ ಸಗಣಿಯನ್ನು ಬೇರೆಯವರಿಗೆ ಮಾರಾಟ ಮಾಡುವುದು ಒಳ್ಳೆಯದಲ್ಲ. ಕೃಷಿ ಮಾಡುವ ಭೂಮಿಯನ್ನು ಹೇಗೆ ಮಾರಾಟ ಮಾಡುವುದು ಶುಭದಾಯಕವಲ್ಲವೋ ಹಾಗೆಯೇ ಕೃಷಿಗೆ ಅಗತ್ಯವಾದ ಗೊಬ್ಬರ ಮೂಲವನ್ನು ಮಾರಾಟ ಮಾಡುವುದು ಸಹ ಅಶುಭ.
ಕೆಲವು ಹಿರಿಯರಲ್ಲಿ ಕೇಳಿ. ನೀವು ಸಗಣಿ ಗೊಬ್ಬರ ಮಾರಾಟ ಮಾಡುತ್ತಿರಾ ಎಂದು. ಕೃಷಿ ಉಳ್ಳ ಯಾರೂ ತಮ್ಮ ಹಟ್ಟಿಯಲ್ಲಿ ಎಷ್ಟೇ ಹಸುಗಳಿರಲಿ, ಅದರ ತ್ಯಾಜ್ಯದಾದ ಸಗಣಿಯನ್ನು ಮಾರಾಟ ಮಾಡಲಾರ. ಕೃಷಿ ಮಾಡಲಾರದ ಸೋಮಾರಿ ಜನ ಮಾತ್ರ ಸಗಣಿಯನ್ನು ಮಾರಾಟ ಮಾಡುತ್ತಾರೆ. ಕೃಷಿ ಇಲ್ಲದವರು ಹಸು ಸಾಕುವುದು ತುಂಬಾ ಕಡಿಮೆ. ಹಾಗೆ ನೋಡಿದರೆ ನಮ್ಮ ದೇಶದಲ್ಲಿ ಸಗಣಿ ರಪ್ತು ಮಾಡುವ ಸ್ಥಿತಿಯೇ ಇಲ್ಲ. ವಿದೇಶಗಳಿಗೆ ರಪ್ತು ಮಾಡುವುದಕ್ಕಿಂತ ಹೆಚ್ಚು ಹಣ ದೇಶೀಯವಾಗಿ ಮಾರಾಟ ಮಾಡಿದರೂ ಸಿಗುವ ಸ್ಥಿತಿ ಇದೆ.
ಕೃಷಿ ಭೂಮಿ- ಸಗಣಿ ಮಾರಾಟದ ವಸ್ತು ಅಲ್ಲ:
- ಕೃಷಿ ಭೂಮಿಯನ್ನು ಕೃಷಿ ಮಾಡಲು ಆಗುವುದಿಲ್ಲ ಎಂದು ಹಣದಾಸೆಗೆ ಮಾರಾಟ ಮಾಡಬಾರದು ಎನ್ನುತ್ತಾರೆ ತಿಳಿದವರು.
- ಕೃಷಿ ಭೂಮಿ ಮಾರಾಟ ಮಾಡಿ ಅದರ ಹಣದಿಂದ ಯಾವ ರಗಳೆಗಳೂ ಇಲ್ಲದೆ ಬದುಕುತ್ತೇವೆ ಎಂದು ಹೊರಟವರು ಬಹುತೇಕ ಎಲ್ಲರೂ ಕಷ್ಟದ ಬದುಕನ್ನೇ ಕಂಡವರು.
- ಕೃಷಿ ಭೂಮಿ ಯಾರದ್ದು ಅಲ್ಲ. ಅದು ಅವನ ಜೀವನೋಪಾಯಕ್ಕೆ ಅನುಭೋಗಿಸಲಿಕ್ಕೆ ಇರುವಂತದ್ದು.ಹಾಗೆಯೇ ಹಸು ಸಾಕಾಣಿಕೆ.
- ಹಸು ಸಾಕಾಣಿಕೆ ಬಂದದ್ದು ನಮ್ಮ ಕೃಷಿಗೆ ಗೊಬ್ಬರದ ಅವಶ್ಯಕತೆಯನ್ನು ಪೂರೈಸಿಕೊಳ್ಳಲಿಕ್ಕೆ ಮತ್ತು ಅದಕ್ಕೆ ಪೂರಕವಾಗಿ ಅದು ಕೊಡುವಷ್ಟು ಹಾಲನ್ನು ಕರೆದು ಅದನ್ನು ಬಳಸುವುದಕ್ಕಾಗಿ.
- ಹಾಲಿಗಾಗಿಯೇ ಹಸು ಸಾಕಾಣಿಕೆ ಪ್ರಾರಂಭವಾದ ತರುವಾಯ ಹಸು ಸಾಕಾಣಿಕೆ ವಾಣಿಜ್ಯೀಕರಣಕ್ಕೊಳಗಾಯಿತು.
- ಆಗ ಏನೇನು ಬೆಳವಣಿಗೆಗಳಾಯಿತು ಎಂಬುದು ನಮಗೆಲ್ಲಾ ಗೊತ್ತಿದೆ.
- ಇದರ ತರುವಾಯ ಹಾಲಿಗಾಗಿ ಹಸು ಸಾಕಾಣಿಕೆ ಎಂದಾಯಿತು.
- ಇಲ್ಲಿ ಕೆಲವರು ಹಸುವಿನ ಸಗಣಿಯನ್ನು ಸ್ಥಳೀಯವಾಗಿ ಮಾರಾಟ ಮಾಡುವುದಕ್ಕೂ ಪ್ರಾರಂಭಿಸಿದರು.
- ಅದು ನೆರೆಹೊರೆಯ ಕೃಷಿಕರಿಗೆ. ಅದು ವ್ಯಾಪಾರ ಎನ್ನಲೂಬಹುದು ಅಥವಾ ಹೆಚ್ಚುವರಿಯಾದುದನ್ನು ವಿಲೇವಾರಿ (Disposal) ಎನ್ನಲೂಬಹುದು.
- ಆದರೆ ಈಗ ವಿದೇಶಗಳಿಗೆ ಮಾರಾಟ ಮಾಡುವಷ್ಟು ನಾವು ಮುಂದುವರಿದದ್ದು ಮಾತ್ರ ಒಂದು ಪಕ್ಕಾ ವ್ಯವಹಾರದಂತೆ ಕಾಣುತ್ತದೆ.
- ಬಹುಷಃ ನಮಗೆ ನಮ್ಮ ಕೃಷಿ, ಕೃಷಿ ಭೂಮಿಯ ಫಲವತ್ತತೆ ಬಗ್ಗೆ ಕಾಳಜಿ ಕಡಿಮೆಯಾಗಿದೆಯೋ ಅಥವಾ ಹಸುವಿನ ಸಗಣಿಯ ಬಳಕೆ ಬದಲಿಗೆ ನಾವು ರಾಸಾಯನಿಕವನ್ನೇ ಹೆಚ್ಚಾಗಿ ಬಳಸುತ್ತಿದ್ದೇವೆಯೋ ತಿಳಿಯದು.
- ಸಗಣಿ ಎಷ್ಟೇ ಇರಲಿ ಅದನ್ನು ಮಾರಾಟ ಮಾಡುವ ಬದಲಿಗೆ ನಮ್ಮ ಹೊಲಕ್ಕೆ ಅಥವಾ ನಮ್ಮ ಸುತ್ತಮುತ್ತಲಿನ ಹೊಲದವರಿಗೆ ಮಾರಾಟ ಮಾಡಿ.
- ನಮ್ಮ ಕೃಷಿ ಭೂಮಿ ಸಾವಯವ ಇಂಗಾಲದಿಂದ ಸಮೃದ್ಧವಾಗಲಿ.
ನಮ್ಮ ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತಿದೆ:
- ಮಣ್ಣಿನ ಫಲವತ್ತತೆ ಎಂಬುದು ಧೀರ್ಘಾವಧಿ ಕೃಷಿಗೆ ಅತ್ಯವಷ್ಯಕ.
- ಫಲವತ್ತತೆ ಇಲ್ಲದ ಭೂಮಿಯಲ್ಲಿ ಕೃತಕ ಪೋಷಕಾಂಶ ಸುರಿದು ಬೆಳೆ ಪಡೆಯಬಹುದು.
- ಆದರೆ ಅದಕ್ಕೆ ಅದರದ್ದೇ ಆದ ರುಚಿ, ಸತ್ವಾಂಶಗಳು,ಕಾಪಿಡುವ ಶಕ್ತಿ ಇರುವುದಿಲ್ಲ.
- ಧೀರ್ಘಾವಧಿಯಲ್ಲಿ ಈ ವಿಧಾನವೂ ನಮಗೆ ಕೈಕೊಡುತ್ತದೆ.ಹಾಗಾಗಿ ಮಣ್ಣಿನ ಫಲವತ್ತತೆ ಉಳಿಸಿಕೊಂಡು ಕೃಷಿಮಾಡಬೇಕು.
- ಕೃತಕ ಗೊಬ್ಬರಗಳು ಇರಲಿ, ಆದರೆ ಅದರ ಜೊತೆಗೆ ಇದು ಮಾತ್ರ ಬಿಟ್ಟು ಕೃಷಿ ಮಾಡಬೇಡಿ.
- ಮಣ್ಣಿನಲ್ಲಿ ನೈಸರ್ಗಿಕವಾಗಿ ಸಾವಯವ ಇಂಗಾಲವನ್ನು ಹೆಚ್ಚಿಸುವ ಏಕಮಾತ್ರ ವಸ್ತು ಇದ್ದರೆ ಅದು ಸಗಣಿ.
- ಹುಲ್ಲು, ಸೊಪ್ಪು ಸದೆ ಪಶು ಆಹಾರಗಳನ್ನು ತಿಂದು ಒಪ್ಪೊತ್ತಿನಲ್ಲಿ ಅದನ್ನು ಗೊಬ್ಬರ ಮಾಡಿಕೊಡುವ ಬಂಡವಾಳ ರಹಿತ ಕಾರ್ಖಾನೆ ಎಂದರೆ ಹಸುಗಳು.
- ಇದರಲ್ಲೂ ನಾಟಿ ಹಸುಗಳು ಎಲ್ಲಾ ನಮೂನೆಯ ಮೇವನ್ನೂ ತಿನ್ನುವವುಗಳು.
- ಇವುಗಳ ಸಗಣಿಯಲ್ಲಿ ಅದರ ಹೆಚ್ಚಿನ ಶೇಷ ಪದಾರ್ಥಗಳು ಹೊರ ಬರುತ್ತದೆ.
- ಹಾಗಾಗಿ ಅದರಲ್ಲಿ ಬಹುಬಗೆಯ ಸತ್ವಾಂಶಗಳು ಅಡಕವಾಗಿರುತ್ತವೆ.
- ಇದನ್ನು ಕೃಷಿಗೆ ಮರುಬಳಕೆ ಮಾಡಿದಾಗ ಕಠಾವು ಮಾಡಿ ಹೊರಗೆ ಕೊಂಡೊದ ಹುಲ್ಲು ಇತ್ಯಾದಿಗಳ ಸತ್ವ ಮರಳಿ ಸಿಗುತ್ತದೆ.
- ಹಾಗಾಗಿ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ.
ಸಗಣಿ ಮಾರಾಟದ ವಸ್ತುವಲ್ಲ ಯಾಕೆ:
- ಮಣ್ಣಿಗೆ ಸಗಣಿಯನ್ನು ಸೇರಿಸಿದಾಗ ಅದು ಮಣ್ಣಿನ ಬೇರೆ ಬೇರೆ ಜೀವಿಗಳಿಗೆ ಆಸರೆ ಕೊಡುತ್ತದೆ.
- ಇದು ಸಾವಿರ ಜೀವಿಗಳು ಆಕರ್ಷಿತವಾಗುತ್ತದೆ ಎನ್ನುತ್ತಾರೆ.
- ಒಂದು ಮುದ್ದೆ ಸಗಣಿಯನ್ನು ನೆಲಕ್ಕೆ ಹಾಕಿ ಮರುದಿನವೇ ಕೆಲವು ದುಂಬಿಗಳು, ಹುಳಗಳು, ನೊಣಗಳು ಬರುತ್ತದೆ.
- ನೆಲದ ಮಣ್ಣು ಅಗೆದು ದುಂಬಿಯೊಂದು ಬಂದು ಅದನ್ನು ಮಣ್ಣಿಗೆ ಆಪೋಷಣ ಮಾಡುತ್ತದೆ.
- ಇಷ್ಟೊಂದು ಶಕ್ತಿ ಉಳ್ಳ ಸಗಣಿಯನ್ನು ನಾವು ಬಳಕೆ ಮಾಡುವುದು ಬಿಟ್ಟು ಯಾರೋ ಹೊರ ದೇಶದವರು ಹಣ ಕೊಡುತ್ತಾರೆ ಎಂದು ಮಾರಾಟ ಮಾಡುವುದಲ್ಲ.
- ಸಗಣಿ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆಯನ್ನು ಹೆಚ್ಚಿಸುತ್ತದೆ.
- ಅದನ್ನು ನಮ್ಮ ಕೃಷಿಗೇ ಬಳಕೆ ಮಾಡುವುದು ಉತ್ತಮ.ಜನ ಸಗಣಿ ಮಾರಿ ಹಣ ಸಂಪಾದಿಸುವುದು ಅಷ್ಟು ಸುಲಭದ್ದಲ್ಲ.
- ಸಗಣಿಯನ್ನು ತಮ್ಮ ಹೊಲಕ್ಕೆ ಹಾಕಿ ಬೆಳೆಬೆಳೆಯುತ್ತಿದ್ದರೆ ನಿರಂತರ ಹಣ ಅಲ್ಲೇ ಬರುತ್ತದೆ.
- ಉತ್ತರ ಪ್ರದೇಶ, ಬಿಹಾರ, ಗುಜರಾತ್, ರಾಜಸ್ಥಾನ ಮುಂತಾದ ಕಡೆ ಹಸು, ಎಮ್ಮೆಗಳ ಸಂಖ್ಯೆ ಹೆಚ್ಚು.
- ಇಲ್ಲಿ ಕೃಷಿಯೂ ಸಾಕಷ್ಟು ಇದೆ.ಆದಾಗ್ಯೂ ಇಲ್ಲಿ ಮಿಗತೆಯಾಗಿ ಸಗಣಿ ಲಭ್ಯವಾಗಬಹುದು.
- ಅದೂ 192 ಟನ್ ನಷ್ಟು ಎಂದರೆ ಅಚ್ಚರಿಯ ಸಂಗತಿ.
- ಹಾಗೆಂದು ಇದೇ ಮೊದಲಲ್ಲ. ಈ ಹಿಂದೆಯೂ ಸಗಣಿ ಬೇರೆ ದೇಶಗಳಿಗೆ ರಪ್ತು ಅಗಿದೆ.
- ಕೆಲವು ಔದ್ಯಮಿಕ ಪ್ರಾಜೆಕ್ಟ್ ಗಳಲ್ಲಿ ಹಸುರು ಬೆಲ್ಟ್ ಸ್ಥಾಪಿಸಲು ಮುಂತಾದ ತುರ್ತು ಅವಶ್ಯಕತೆಗಳಿಗೆ ಸಗಣಿ ಮಾರಾಟವಾಗಿದೆ.
ಸಗಣಿ ಮಾರಿದರೂ ದುಡ್ಡು ಆಗುತ್ತದೆ ಎಂಬ ಭಾವನೆಯನ್ನು ಬಿಟ್ಟು ಬಿಡಿ. ಸಗಣಿಯನ್ನು ಮಾರಾಟದ ವಸ್ತುವೆಂದು ಯಾವಾಗಲೂ ಪರಿಗಣಿಸಬೇಡಿ. ನಿಮ್ಮ ಮಣ್ಣಿಗೆ ಎಷ್ಟು ಸಗಣಿ ಗೊಬ್ಬರ ಹಾಕಿದರೂ ಅದು ನನಗೆ ಹೆಚ್ಚಾಯಿತು ಎನ್ನುವುದಿಲ್ಲ. ಹಾಗಾಗಿ ನಮ್ಮ ಹೊಲ ಮೊದಲು. ಅದಾದ ನಂತರ ಬೇರೆಯವರದ್ದು.
ಸಗಣಿ ಮಿಗತೆಯಾದರೆ ಅದನ್ನು ಕೃಷಿ ಮಾಡುವವರಿಗೆ ನ್ಯಾಯಯುತ ಬೆಲೆಯಲ್ಲಿ ಮಾರಾಟ ಮಾಡಿ. ಪ್ರತೀಯೊಬ್ಬ ಮನುಷ್ಯನೂ ಕೃಷಿಕ ಋಣದಲ್ಲಿ ಇರುವ ಕಾರಣ ಅವನ ಕೃಷಿ ಮತ್ತು ಅವನ ಹೊಲದ ಫಲವತ್ತತೆ ಬಗ್ಗೆ ಎಲ್ಲರಿಗೂ ಕಳಕಳಿ ಬೇಕೇ ಬೇಕು. ಹೊಲ ಸಾವಯವ ಸಮೃದ್ಧವಾದಷ್ಟು ತಾವು ತಿನ್ನುವ ಆಹಾರ ಪೌಷ್ಟಿಕವಾಗಿರುತ್ತದೆ. ಮಣ್ಣು ಪಲವತ್ತಾಗಿದ್ದರೆ ಗಿಡ ಮರ ಹುಲುಸಾಗಿ ಬೆಳೆದು ವಾತಾವರಣದ ತಾಪಮಾನವನ್ನು ಕಡಿಮೆ ಮಾಡುತ್ತದೆ. ನಮ್ಮ ಹಿರಿಯರು ಗುಡ್ಡಗಾಡುಪ್ರದೇಶದಲ್ಲಿ ಹಸು, ಎಮ್ಮೆ, ಮೇಕೆಗಳನ್ನು ಮೇಯಲು ಬಿಡುತ್ತಿದ್ದರು. ಆಗ ಅಲ್ಲಿ ಸಸ್ಯ ಸಂಪತ್ತು ಹೆಚ್ಚಿನಪ್ರಮಾಣದಲ್ಲಿ ಇತ್ತು. ಸಗಣಿ ಒಂದು ರೀತಿಯಲ್ಲಿ ಬೀಜ ಪ್ರಸಾರಕವೂ ಸಹ. ಹಸು ತಿಂದ ಹಣ್ಣು ಹಂಪಲು, ತರಕಾರಿ, ಹುಲ್ಲು ಕಳೆ ಬೀಜಗಳು ಸಗಣಿಯೆಂಬ ತ್ಯಾಜ್ಯದಲ್ಲಿ ಬೀಜೋಪಚಾರಕ್ಕೊಳಗಾಗಿ ಸಸ್ಯಗಳ ಮರುಹುಟ್ಟಿಗೆ ಕಾರಣವಾಗುತ್ತದೆ.