ಯಾವುದೇ ಹಣ್ಣು ಹಂಪಲುಗಳಿದ್ದರೂ ಅದರ ಸಹಜವಾದ ರುಚಿ ಇದ್ದರೆ ಅದು ತಿನ್ನಲು ಇಷ್ಟವಾಗುತ್ತದೆ. ಬಹುತೇಕ ಹಣ್ಣು ಹಂಪಲುಗಳ ರುಚಿ ಸಿಹಿ. ಸಿಹಿ ಸಾಕಷ್ಟು ಇಲ್ಲದಿದ್ದರೆ ಇದನ್ನು ತಿನ್ನುವವರಿಗೆ ಅದು ರುಚಿ ಎನಿಸದು. ಸಿಹಿ ಅಂಶ ಹಣ್ಣು ಹಂಪಲಿಗೆ ಹೇಗೆ ಸೇರಿಕೊಳ್ಳುತ್ತದೆ. ಹೆಚ್ಚು ಸಿಹಿ ಬರಲು ಯಾವ ಪೋಷಕ ಹೆಚ್ಚು ಕೊಡಬೇಕು, ಯಾವುದನ್ನು ಕಡಿಮೆ ಮಾಡಬೇಕು ಈ ಬಗ್ಗೆ ಇಲ್ಲಿದೆ ಮಾಹಿತಿ.
ಸಮರ್ಪಕ ಬಿಸಿಲು, ವಾತಾವರಣ, ಹಾಗೂ ಸಾಂದರ್ಭಿಕ ಪೋಷಕಾಂಶ ನಿರ್ವಹಣೆಯಿಂದ ಹಣ್ಣು ಹಂಪಲುಗಳಲ್ಲಿ ಸಿಹಿ ಅಂಶ ಹೆಚ್ಚುತ್ತದೆ. ಇದನ್ನು ಅರಿತು ಬೇಸಾಯ ಕ್ರಮ ಅನುಸರಿಸಿದರೆ ಗುಣಮಟ್ಟದ ಫಸಲು ಪಡೆಯಬಹುದು.
- ಆಯಾಯಾ ಸಿಸನ್ನಲ್ಲಿ ಬೆಳೆದ ಹಣ್ಣುಗಳಿಗೆ ರುಚಿ ಹೆಚ್ಚು.
- ಸೀಸನ್ ಅಲ್ಲದ ಸಮಯದಲ್ಲಿ ಬೆಳೆಯುವ ಹಣ್ಣುಗಳಿಗೆ ರುಚಿ ಇರುವುದಿಲ್ಲ.
- ಹಣ್ಣು ಹಂಪಲಿನ ರುಚಿ ನಿರ್ಧರಣೆ ಆಗುವುದು ಅದರಲ್ಲಿ ತಿರುಳು ಕೂಡಿ ಬೆಳೆದು TSS ( Total Soluble Sugar) ಅಂಶ ಹೆಚ್ಚಾದಾಗ ಎಂಬುದು ಎಲ್ಲಾ ನಮೂನೆಯ ಹಣ್ಣಿನ ಬೆಳೆಗಾರರಿಗೆ ತಿಳಿದಿರಲೇ ಬೇಕು.
- ಬೇಸಿಗೆಯಲ್ಲಿ ಬೆಳೆದು ಹಣ್ಣಾಗುವಂತದ್ದು, ಮಳೆಗಾಲದಲ್ಲಿ ಅಥವಾ ಚಳಿಗಾಲದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.
- ಅನ್ ಸೀಸನಲ್ ಆದ ಕಾರಣ ಬೆಲೆಯೂ ಹೆಚ್ಚು ಇರುತ್ತದೆ.
- ನಾವು ಸಿಹಿ ಇದೆಯಲ್ಲಾ ಎಂದು ಕೇಳಿ ಖರೀದಿಸುತ್ತೇವೆ. ವ್ಯಾಪಾರಿಯು ಸಿಹಿ ಇಲ್ಲ ಎಂದು ಹೇಳುವುದೇ ಇಲ್ಲ. ಆದರೆ ರುಚಿ ಮಾತ್ರ ಬೇಸಿಗೆ ಕಾಲದ ಹಣ್ಣಿನಂತೆ ಇಲ್ಲದೆ, ಸಪ್ಪೆಯಾಗಿರಬಹುದು, ಹುಳಿಯಾಗಿರಬಹುದು.
- ಬಿಸಿಲು ಕಡಿಮೆ ಇರುವ ದಿನಗಳಲ್ಲಿ ಬೆಳವಣಿಗೆಯಾಗುವ ಹಣ್ಣು ಹಂಪಲುಗಳು ಹುಳಿ- ಸಪ್ಪೆ ಆಗಿರುವುದು ಸಾಮಾನ್ಯ.
ಸಿಹಿ ಆಗುವುದು ಹೇಗೆ?
- ಹಣ್ಣುಗಳಲ್ಲಿ ಒಟ್ಟಾರೆ ಕರಗುವ ಘನ ಪದಾರ್ಥ(TSS)ಅಥವಾ ತಿರುಳಿನ ಪ್ರಮಾಣ ಹೆಚ್ಚುವುದರಿಂದ ಹಣ್ಣುಗಳು ಸಿಹಿಯಾಗಿರುತ್ತವೆ.
- ನಮ್ಮಲ್ಲಿ ಹೆಚ್ಚಿನವರು ಆ ಹಣ್ಣು ಸಪ್ಪೆ. ಅದು ರಸಗೊಬ್ಬರ ಬಳಸಿ ಸಪ್ಪೆ ಆದದ್ದು ಎಂದೆಲ್ಲಾ ಮನಬಂದಂತೆ ತರ್ಕ ಮಾಡುತ್ತಾರೆ.
- ವಾಸ್ತವ ಅದಲ್ಲ. ಹಣ್ಣುಗಳಿಗೆ ಸರಿಯಾದ ಹಂತದಲ್ಲಿ ಸಮರ್ಪಕ ಪೋಷಕಗಳು ದೊರೆತು ಬೆಳಕು ದೊರೆತಾಗ ಅದರಲ್ಲಿ ಒಟ್ಟಾರೆ ಕರಗುವ ಸಕ್ಕರೆ ಮತ್ತು ತಿರುಳು ಬೆಳವಣಿಗೆಯಾಗಿ ಸಿಹಿ ಹೆಚ್ಚುತ್ತದೆ.
- ಇವು ಸರಿಯಾಗಿದ್ದರೆ ಹುಳಿ ರುಚಿಯ ಹಣ್ಣುಗಳು ಸಹ ತಿನ್ನಲು ರುಚಿಯಾಗಿರುತ್ತದೆ.
- ಹಣ್ಣು ಮಾಗುವ ಹಂತ ತಲುಪಿದ ನಂತರ TSS ಅಂಶ ಜಾಸ್ತಿಯಾಗುತ್ತಾ ಹೋದಂತೆ , ಹುಳಿ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ.
- ಚಳಿಗಾಲದಲ್ಲಿ, ಮಳೆಗಾಲದಲ್ಲಿ ಮಾಗುವ ಹಣ್ಣಿನಲ್ಲಿ ಸಕ್ಕರೆ ಅಂಶ ಸಹಜವಾಗಿ ಕಡಿಮೆಯಾಗಿ ಇರುತ್ತದೆ.
- ಬೇಸಿಗೆಯಲ್ಲಿ ಸಿಹಿ ಅಂಶ ಜಾಸ್ತಿಯಾಗಿರುತ್ತದೆ. ವಾತಾವರಣದ ತಾಪಮಾನದ ಮೇಲೆ ಸಕ್ಕರೆ ಅಂಶ ಜಾಸ್ತಿಯಾಗುತ್ತಾ ಹೋಗುತ್ತದೆ.
- TSS ಅಂಶ ತಳಿಯ ಗುಣವಾಗಿದ್ದರೂ ಕೂಡಾ ಇದನ್ನು ನಿರ್ಧರಿಸಲು ನಮ್ಮ ಪ್ರಯತ್ನವೂ ಬೇಕಾಗುತ್ತದೆ.
- ಸಸ್ಯದಲ್ಲಿ ನಾವು ಪಡೆಯುವ ಇಳುವರಿ, ಎಲೆ ಮತ್ತು ಹಣ್ಣುಗಳ ನಡುವಿನ ಅನುಪಾತ, ಮಾಗುವ ಸಮಯದಲ್ಲಿ ಪೊಟ್ಯಾಶ್ ಪೂರೈಕೆ, ಸಾಧ್ಯವಾದಷ್ಟು ಬೇಸಿಗೆಯ ಸಮಯದಲ್ಲಿ ಹಣ್ಣು ಕೊಯಿಲ್ಗೆ ಬರುವಂತೆ ಮಾಡಿದರೆ ಅದರಲ್ಲಿ ಅಂಶ ಉತ್ತಮವಾಗಿ ಹುಳಿ ಕಡಿಮೆಯಾಗುತ್ತದೆ.
ಸಿಹಿ ಹೆಚ್ಚಾಗಲು ಏನು ಮಾಡಬೇಕು?
- ಹಣ್ಣುಗಳು ಸಿಹಿಯಾಗಿರಬೇಕಾದರೆ ಹೂ ಬಿಟ್ಟು ಮಿಡಿಕಾಯಿಯಾಗುವ ಸಮಯದಿಂದ ಆರಂಭವಾಗಿ ಗೊಬ್ಬರ , ನೀರು ಪೂರೈಕೆ, ಬೆಳಕು ಬೀಳುವಿಕೆಯಲ್ಲಿ ಬದಲಾವಣೆ ಮಾಡಬೇಕು.
- ಮಿಡಿ ಹಂತದಿಂದ ಅಧಿಕ ಪೊಟ್ಯಾಶಿಯಂ ಮತ್ತು ಕನಿಷ್ಟ ಸಾರಜನಕ ಅಂಶವನ್ನು ಪೂರೈಕೆ ಮಾಡುತ್ತಿರಬೇಕು.
- ಪೊಟಾಶಿಯಂ ನೈಟ್ರೇಟ್ (13%, ಸಾರಜನಕ 45% , ಪೊಟಾಶಿಯಂ) ಗೊಬ್ಬರ ಮತ್ತು ಅವಶ್ಯ ಬಿದ್ದಲ್ಲಿ ಲಘು ಪೋಷಕಾಂಶದ ಬಳಕೆ ಮಾಡಬೇಕು.
- ಕೊಯಿಲಿಗೆ ಸಮೀಪ 20- 15 ದಿನಗಳ ಮುಂಚೆ ಪೊಟ್ಯಾಶಿಯಂ ಸಲ್ಫೇಟ್ (50 %, ಪೊಟ್ಯಾಶ್ ಮತ್ತು 15 % ಗಂಧಕ) ಒದಗಿಸುವಿಕೆಯಿಂದ ಕಾಯಿಯಲ್ಲಿ ತಿರುಳು ಕೂಡುತ್ತದೆ. ಅಂಶ ಹೆಚ್ಚಳವಾಗುತ್ತದೆ.
- ಪೊಟ್ಯಾಶಿಯಂ ಕೊರತೆಯಾದರೆ ಸಿಹಿ, ರುಚಿ ಮತ್ತು ಕಾಪಿಡುವ ಸಾಮರ್ಥ್ಯ ಕಡಿಮೆಯಾಗುತ್ತದೆ.
- ಇದಕ್ಕೆ ಸರಿಯಾಗಿ ಸಮರ್ಪಕವಾಗಿ ಬಿಸಿಲು ಬೀಳಬೇಕು.
- ದ್ರಾಕ್ಷಿ ಬೇಸಾಯದಲ್ಲಿ ಗೊಂಚಲಿಗೆ ಬಿಸಿಲು ಬಿದ್ದಾಗ ಅದರ ಬಣ್ಣಕ್ಕೆ ಒಂದು ಹೊಳಪು ದೊರೆತು ರುಚಿ ವಿಶಿಷ್ಟವಾಗಿರುತ್ತದೆ.
- ಸರಿಯಾಗಿ ಎಲ್ಲಾ ಗೊಂಚಲುಗಳಿಗೆ ಬಿಸಿಲು ಬೀಳಲು ಟ್ರೆಲ್ಲಿಸ್ ಚಪ್ಪರ ಮಾಡಲಾಗುತ್ತದೆ.
- ಕಲ್ಲಂಗಡಿಯಲ್ಲಿ ಕಾಯಿ ಮಾಗುವ ಸಮಯಕ್ಕೆ ಕಾಯಿಯ ಮೇಲೆ ಬಿಸಿಲು ಬೀಳುವಂತೆ ಮಾಡಲಾಗುತ್ತದೆ.
- ನೇರ ಬಿಸಿಲು ಬಿದ್ದರೆ ಸೂರ್ಯ ಕಿರಣದ ಘಾಸಿ ಉಂಟಾಗಬಹುದಾದರೂ ಬೆಳಕು ಹಣ್ಣಿನ ಮೇಲೆ ಬೀಳಲೇ ಬೇಕು. ಆಗ ಮಾತ್ರ ಅದಕ್ಕೆ ನೈಜ ರುಚಿ ಬರುತ್ತದೆ.
ಹಣ್ಣು ಹಂಪಲುಗಳಲ್ಲಿ ಬರೇ ಸಿಹಿ ಮಾತ್ರವಲ್ಲ. ಅದರ ಕಾಪಿಡುವ ಶಕ್ತಿ ಸಹ TSS ಅಂಶ ಸರಿಯಾಗಿದ್ದರೇ ಉತ್ತಮವಾಗಿರುತ್ತದೆ.