ಮಿಡಿ ಅಡಿಕೆ ಉದುರುತ್ತಿದೆಯೇ ? ಈ ಸಿಂಪರಣೆ ಮಾಡಿ.

arecanut spray

ಮಿಡಿ ಅಡಿಕೆ ಉದುರುವ ಸಮಸ್ಯೆ ಇದ್ದಲ್ಲಿ ಅದಕ್ಕೆ ಕೀಟನಾಶಕ , ಶಿಲೀಂದ್ರ ನಾಶಕ ಸಿಂಪರಣೆ  ಮಾಡುವ ಮುಂಚೆ ಒಮ್ಮೆ ಅಥವಾ ಎರಡು ಬಾರಿ ಪೋಷಕಾಂಶ ಸಿಂಪರಣೆ ಮಾಡಿ. ಬಹುತೇಕ ಮಿಡಿ ಉದುವುದು ಆಹಾರದ ಕೊರತೆಯಿಂದ. ಸುಮ್ಮನೆ ಕೀಟನಾಶಕ, ಶಿಲೀಂದ್ರ ನಾಶಕ ಬಳಸಿ ಖರ್ಚು ಮಾಡುವ ಬದಲು ಮಿತ ಖರ್ಚಿನಲ್ಲಿ ಇದನ್ನು ಮಾಡಿ ನೊಡಿ. ಒಂದು ಇನ್ಟಂಟ್ ಆಹಾರವಾಗಿ ಇದು ಕೆಲಸ ಮಾಡಿ ಮಿಡಿ ಉದುರುವುದನ್ನು ಕಡಿಮೆ ಮಾಡುತ್ತದೆ.

.
ಯಾವುದೇ ಬೆಳೆಯಲ್ಲಿ ಎಳೆ ಕಾಯಿಗಳು ಉದುರುವುದು, ರೋಗ ಹೆಚ್ಚಾಗುವುದು, ಬೆಳೆವಣಿಗೆಯ ಅಸಮತೋಲನ ಮುಂತಾದವುಗಳಿಗೆ ಮೂಲ ಕಾರಣ ಪೋಶಕಾಂಶಗಳ ಕೊರತೆ, ಅಸಮತೋಲನ ಅಥವಾ ಅಲಭ್ಯತೆ. ಇದನ್ನು ಸರಿಮಾಡಲು ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಕ್ರಮ ಎಂದರೆ ಸಿಂಪರಣೆ ಮೂಲಕ ಪೋಷಕಾಂಶಗಳನ್ನು ಕೊಡುವುದು. ಪೋಷಕಗಳನ್ನು ಸಸ್ಯದ ಹಸುರು ಭಾಗಗಳಿಗೆ ಸಿಂಪರಣೆ ಮಾಡಿದಾಗ ಅದು ಸಸ್ಯಗಳಿಂದ ಸ್ವೀಕರಿಸಲ್ಪಡುತ್ತದೆ. ಮತ್ತು ತಕ್ಷಣ ಫಲಿತಾಂಶ ದೊರೆಯುತ್ತದೆ.

spray for inflorescence

  •  ಸಸ್ಯ ಪೋಷಕಾಂಶಗಳನ್ನು ಎಲೆಗಳು ಮತ್ತು ಹಸುರು ಬಾಗಗಳು  ಹೀರಿಕೊಂಡು ಉಪಯೋಗಿಸುತ್ತವೆ.
  • ಒಂದೇ ಪೋಷಕವನ್ನು  ಅಥವಾ ಬೇರೆ ಬೇರೆ ಪೋಷಕಗಳನ್ನು ಬೆರೆಸಿ ಸಿಂಪಡಿಸಬಹುದು.
  • ಸಿಂಪರಣೆಗೆ ಸೂಕ್ತವಾದ ಕರಗುವ ರೂಪದ ಮುಖ್ಯ ಪೋಷಕಗಳು ಮತ್ತು ಲಘು ಪೋಷಕಗಳು, ಹಾರ್ಮೋನುಗಳು, ಬೆಳವಣಿಗೆ ಪ್ರಚೋದಕಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
  • ಕಂಡುಬರುವ ಪೋಷಕಾಂಶಗಳ ಕೊರತೆಯನ್ನು ಈ ವಿಧಾನದಿಂದ  ಸರಿಪಡಿಸಬಹುದು.
  • ಕೆಲವು ಸಂದಿಗ್ಧ ಪರಿಸ್ಥಿತಿಯಲ್ಲಿ  ಇದು ಭಾರೀ ಫಲಿತಾಂಶವನ್ನು ಕೊಡುತ್ತದೆ.

ಅಡಿಕೆ, ತೆಂಗು ಹಾಗೆಯೇ ಇನ್ನಿತರ ಬೆಳೆಗಳಲ್ಲಿ ಸಸ್ಯ ಬೆಳವಣಿಗೆಗೆ, ಹೂ ಬಿಡುವ ಸಮಯಕ್ಕೆ, ಕಾಯಿ ಕಚ್ಚುವ ಸಮಯಕ್ಕೆ ಕಾಯಿ ಮಾಗುವ ಸಮಯಕ್ಕೆ ಅನುಗುಣವಾಗಿ ಅಗತ್ಯವಾಗಿ ಪೋಷಕಗಳನ್ನು ಕೊಟ್ಟರೆ ಸುಮಾರು 25-30% ಇಳುವರಿ ಹೆಚ್ಚುವುದು ಕಂಡು ಬಂದಿದೆ.

ಅನುಕೂಲಗಳು:-

  • ಸಸ್ಯ ಪೋಷಕಾಂಶಗಳನ್ನು ಸಿಂಪರಣೆ ಮಾಡಿದಾಗ ಅಲ್ಪಾವಧಿಯಲ್ಲೇ ಅದರ ಫಲಿತಾಂಶವನ್ನು  ತೋರಿಸುತ್ತದೆ.
  • ಎಲೆಗಳ ಬಣ್ಣದಲ್ಲಾಗುವ ಬದಲಾವಣೆಯಿಂದ ಇದನ್ನು ಕಾಣಬಹುದು.
  • ಮಣ್ಣಿನ ಮೂಲಕ ರಸಗೊಬ್ಬರಗಳನ್ನು ಒದಗಿಸಿದಾಗ ರಸಗೊಬ್ಬರಗಳು ಮಣ್ಣಿನಲ್ಲಾಗುವ ರಾಸಾಯನಿಕ ಕ್ರಿಯೆಗೊಳಪಟ್ಟು, ನಂತರ ಬೇರಿಗೆ ದೊರೆಯುತ್ತದೆ.
  • ಒಣ ಬೇಸಾಯದಲ್ಲಿ ಶುಷ್ಕ ವಾತಾವರಣದಿಂದ ಮಣ್ಣಿನಲ್ಲಿ ಸೇರಿಸಿದ ಗೊಬ್ಬರಗಳು ಸಸ್ಯಗಳಿಗೆ ಸುಲಭವಾಗಿ ಒದಗುವುದಿಲ್ಲ.
  • ಇದೇ ರೀತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಆಹಾರಾಂಶಗಳೇ ನೀರಿನಲ್ಲಿ ಕರಗಿ ಪೋಲಾಗುವುದರಿಂದ ಅಂತಹ ಸಂದರ್ಭದಲ್ಲಿಯೂ ಬೆಳೆಗೆ ಒದಗುವುದಿಲ್ಲ.
  • ಇಂತಹ ಪರಿಸ್ಥಿತಿಯಲ್ಲಿ ಸಿಂಪರಣೆ ಮೂಲಕ ಬೆಳೆಗೆ ಬೇಕಾದ ಆಹಾರಾಂಶವನ್ನು ಒದಗಿಸಬಹುದು.
  • ಹವಾಮಾನ ವೈಪರೀತ್ಯದಿಂದ ಬಹಳ ದಿನಗಳವರೆಗೆ ಚಳಿ ವಾತಾವರಣವಿದ್ದಾಗ ಬೆಳೆಗಳ ಅವಶ್ಯಕತೆಗೆ ತಕ್ಕಂತೆ ಬೇರಿನಿಂದ ಪೋಷಕಾಂಶಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ.
  • ಇದರಿಂದಾಗಿ ವಿವಿಧ ಬೆಳೆಗಳಲ್ಲಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ.
  • ಇಂತಹ ಸಂದರ್ಭದಲ್ಲಿ ಪೋಷಕಗಳನ್ನು  ಸಿಂಪರಣೆ ಮಾಡಿದರೆ ಎಲೆಗಳು ಹಸಿರಾಗುತ್ತದೆ.
  • ಸಸ್ಯಗಳ ಬೆಳವಣಿಗೆಗೆ ಹಲವು ಪೋಷಕಾಂಶಗಳು ಅವಶ್ಯಕವಿರುತ್ತದೆ.
  • ಯಾವುದಾದರೂ ಒಂದು ಅಥವಾ ಎರಡು ಆಹಾರಾಂಶಗಳ ಕೊರತೆಯಾದರೂ  ನಿರೀಕ್ಷಿತ ಇಳುವರಿ ಬರಲಾರದು.
  • ರಸಸಾರದಲ್ಲಾಗುವ ವ್ಯತ್ಯಾಸಗಳಿಂದಾಗಿ ಮಣ್ಣು ಮಾಧ್ಯಮ ನೀಡಿದ ಆಹಾರಾಂಶಗಳು ಬೆಳೆಗೆ ದೊರೆಯದೆ ಇರಬಹುದು.
  • ಇಂತಹ ಪರಿಸ್ಥಿಯಲ್ಲಿ ಸಿಂಪರಣೆ ಮೂಲಕ ಆಹಾರಾಂಶಗಳನ್ನು ಒದಗಿಸುವುದು ಬಹುಮುಖ್ಯ.
  • ರಸಗೊಬ್ಬರಗಳನ್ನು ಸಸ್ಯ ಸಂರಕ್ಷಣಾ ದ್ರಾವಣದೊಡನೆ ಬೆರೆಸಿ ಸಿಂಪಡಿಸುವುದರಿಂದ ಸಿಂಪರಣೆಯ ವೆಚ್ಚದಲ್ಲೂ ಉಳಿತಾಯವಾಗುತ್ತದೆ.

ಈ ಕ್ರಮದಲ್ಲಿರುವ ಒಂದು ಅನಾನುಕೂಲತೆಯೆಂದರೆ ಬೆಳೆಗೆ ಬೇಕಾದ ಸಂಪೂರ್ಣ ಆಹಾರಾಂಶಗಳನ್ನು ಸಿಂಪರಣೆಯ ಮೂಲಕವೇ ಒದಗಿಸಲಾಗುವುದಿಲ್ಲ. ಆದ್ದರಿಂದ ಮಣ್ಣಿನ ಮೂಲಕವೂ ರಸಗೊಬ್ಬರಗಳನ್ನು ಒದಗಿಸಿ, ಸ್ವಲ್ಪ ಭಾಗವನ್ನು ಮಾತ್ರ ಸಿಂಪರಣೆ ಮೂಲಕ ಒದಗಿಸುವುದು ಸೂಕ್ತ.

  • ಇದುವರೆಗೂ ನಡೆದಿರುವ ಸಂಶೋಧನೆಯ ಆಧಾರದ ಮೇಲೆ ಎಲ್ಲಾ, ಮುಖ್ಯ ಆಹಾರಾಂಶಗಳು ಮತ್ತು ಲಘು ಪೋಷಕಾಂಶಗಳನ್ನು ವಾರ್ಷಿಕ ಮತ್ತು ಹಣ್ಣಿನ ಬೆಳೆಗಳಿಗೆ ಒದಗಿಸಿ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ.
  • ಈಗ ಮುಖ್ಯ ಆಹಾರಾಂಶಗಳ, ಲಘು ಪೋಷಕಾಂಶಗಳ ಮತ್ತು ಬೆಳವಣಿಗೆಯನ್ನು ಉತ್ತೇಜಿಸುವ ವಸ್ತುಗಳೆಲ್ಲವೂ ಒಟ್ಟಾಗಿರುವ ಹಲವು ರಾಸಾಯನಿಕ ವಸ್ತುಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ.
  • ಆದ್ದರಿಂದ ಬೆಳೆಗೆ ಬೇಕಾದ ಎಲ್ಲಾ ಆಹಾರಾಂಶಗಳನ್ನು ಒಂದೇ ಸಿಂಪರಣೆಯ ಮೂಲಕ ಬೆಳೆಗೆ ಒದಗಿಸಬಹುದು.

ಯಾವುದನ್ನು ಸಿಂಪರಣೆ ಮಾಡಬೇಕು:

ಮಿಡಿ ಹಾಗೂ ಎಲೆಗಳಿಗೆ ಸಿಂಪರಣೆ

  • ಹೆಚ್ಚು ಇಳುವರಿ ಕೊಡುವ ತಳಿಗಳು ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಬಳಸಿಕೊಳ್ಳುವ ಶಕ್ತಿಯನ್ನು ಹೊಂದಿವೆ.
  • ಇವು ಮಣ್ಣಿನಿಂದ ಹೆಚ್ಚಿನ ಮಟ್ಟದಲ್ಲಿ ಮುಖ್ಯ ಆಹಾರಾಂಶಗಳನ್ನು ಮತ್ತು ಲಘು ಪೋಷಕಾಂಶಗಳನ್ನು ಬಳಸಿಕೊಂಡು ಅಧಿಕ ಇಳುವರಿ ಕೊಡುತ್ತವೆ.
  • ಮಾರುಕಟ್ಟೆಯಲ್ಲಿ ದೊರೆಯುವ ರಸಗೊಬ್ಬರಗಳಿಂದ ಬೆಳೆಗೆ ಬೇಕಾಗುವ ಮುಖ್ಯ ಆಹಾರಾಂಶಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಮಾತ್ರ ಒದಗುತ್ತದೆ.
  • ಆದರೆ ಈ ಗೊಬ್ಬರಗಳಲ್ಲಿ ಲಘು ಪೋಷಕಾಂಶಗಳು ಇಲ್ಲದ ಕಾರಣ  ಅದನ್ನೂ  ಬಳಕೆ ಮಾಡಬೇಕು.

ಸಸಿಗಳು ಸಣ್ಣದಾಗಿದ್ದು, ಸಮರ್ಪಕವಾಗಿ ಬೆಳವಣಿಗೆ ಹೊಂದುವುದಿಲ್ಲ ಎಂಬಂತಿದ್ದರೆ  ಅಂತಹ ಸಸಿಗಳ ಎಲೆಗಳಿಗೆ 19:19:19 ಗೊಬ್ಬರ  1 ಕಿಲೋ ಮತ್ತು 100 ಗ್ರಾಂ ಲಘು ಪೋಷಕಾಂಶ ಮಿಶ್ರಣವನ್ನು 100 ಲೀ. ನೀರಿಗೆ ಬೆರೆಸಿ ಸೇರಿಸಿ ಸಿಂಪಡಿಸಿದರೆ ಬೆಳೆವಣಿಗೆ ತಕ್ಷಣ ಗೊತ್ತಾಗುತ್ತದೆ.
ಹೂವು ಬಿಡುವ ಸಮಯದಲ್ಲಿ ಹೂ ಮೊಗ್ಗು ಬೆಳೆಯಲು, ಹಾಗೂ ಇನ್ನಿತರ ಬೆಳವಣಿಗೆ ಅನುಕೂಲವಾಗುವಂತೆ ಸಾರಜನಕ ರಂಜಕ ಮತ್ತು ಪೊಟ್ಯಾಶ್ ಉಳ್ಳ 13:40:13 ಗೊಬ್ಬರ 1 ಕಿಲೊ ,100 ಗ್ರಾಂ ಸೂಕ್ಷ್ಮ ಪೋಷಕಾಂಶ ಮಿಶ್ರಣ ಮತ್ತು 100 ಗ್ರಾಂ ಬೋರಾನ್ ಮಿಶ್ರಣ ಮಾಡಿ ಎಲೆಗಳಿಗೆ  ಸಿಂಪರಣೆ ಮಾಡಿದರೆ ಹೂವು ಗೊಂಚಲು ಬಲಿಷ್ಟವಾಗುತ್ತದೆ.ಹೂ ಗೊಂಚಲಿನ ಸುಪ್ತ ಹಸಿವು ನೀಗಲ್ಪಡುತ್ತದೆ.
ಹೂ ಗೊಂಚಲು ಅರಳಿ ಕಾಯಿ ಕಚ್ಚುವ ಸಮಯದಲ್ಲಿ ಸಸ್ಯಗಳಿಗೆ ಸಾರಜನಕ ಮತ್ತು ಪೊಟ್ಯಾಶ್ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಜೊತೆಗೆ ಸೂಕ್ಷ್ಮ ಪೋಷಕಾಂಶಗಳೂ  ಬೇಕಾಗುತ್ತದೆ. ಅದಕ್ಕಾಗಿ 13:0:45 ಗೊಬ್ಬರ 1  ಕಿಲೋ  ಮತ್ತು 100 ಗ್ರಾಂ ಸೂಕ್ಷ್ಮ ಪೋಷಕಾಂಶ ಮಿಶ್ರಣ ಮತ್ತು 100 ಗ್ರಾಂ ಬೋರಾನ್ 100 ಲೀ. ನೀರಿಗೆ  ಸೇರಿಸಿ ಎಲೆ ಮತ್ತು ಹೂ ಗೊಂಚಲಿಗೆ ಸಿಂಪರಣೆ ಮಾಡುವುದರಿಂದ  ಕಾಯಿ ಕಚ್ಚುವಿಕೆಗೆ ಅನುಕೂಲವಾಗುತ್ತದೆ.
ಬೇಸಿಗೆಯ ಸಮಯದಲ್ಲಿ ಚಳಿಗಾಲ ಪ್ರಾರಂಭವಾಗುವಾಗ ಮಾಡುವ ಸಿಂಪರಣಾ ದ್ರಾವಣದ ಜೊತೆಗೆ ಪ್ರತೀ 100 ಲೀ ದ್ರಾವಣಕ್ಕೆ 150-200 ಗ್ರಾಂ ವೆಟ್ಟೆಬಲ್ ಸಲ್ಫರ್ ಸೇರಿಸಿ ಸಿಂಪರಣೆ ಮಾಡಿದರೆ ಮೈಟ್ ಹಾವಳಿ ಕಡಿಮೆಯಾಗಿ ಕಾಯಿ ಕಚ್ಚುವಿಕೆಗೆ ತುಂಬಾ ಅನುಕೂಲವಾಗುತ್ತದೆ.

  • ರೈತರು ಅವರು ಬೆಳೆಯುವ ಬೆಳೆ ಯಾವುದೇ ಇರಲಿ, ಅದಕ್ಕೆ ಎಲೆ, ಕಾಂಡಕ್ಕೆ ಪೋಷಕ ಸಾರಗಳನ್ನು ಸಿಂಪಡಿಸುವುದು ಉತ್ತಮ.
  • ಎಲೆಗಳ ಎರಡೂ ಬದಿಗೂ ಬೀಳುವಂತೆ ಸಿಂಪಡಿಸಬೇಕು. ಔಷಧಿ ಸಿಂಪರಣೆಗಿಂತ ಇದು ಸುಲಭ.
  • ಬಾಳೆ, ಕಬ್ಬು, ಭತ್ತ, ತರಕಾರಿಗೆ ಎಲೆ, ಕಾಂಡ ಸೂಕ್ತ. ಅಡಿಕೆ, ತೆಂಗಿಗೆ ಎಲೆ, ಎಲೆ ದಂಟು ಮತ್ತು ಹಸಿರು ಭಾಗಗಳಿಗೆ ಸಿಂಪಡಿಸಬೇಕು.

               ಮಣ್ಣು ಮತ್ತು ಎಲೆ ಪರೀಕ್ಷೆ ನಡೆಸಿ ಅಗತ್ಯವಾದ ಪೋಷಕಗಳನ್ನು ಕರಾರುವಕ್ಕಾಗಿ ಬಳಸಬಹುದು. ಇದಲ್ಲದಿದ್ದರೆ ಆ ಪ್ರದೇಶದ ಮಣ್ಣಿನ ಗುಣಕ್ಕನುಗುಣವಾಗಿ  ಬಳಸಬೇಕು. ಪ್ರಮಾಣವನ್ನು ಅಗತ್ಯಕ್ಕಿಂತ ಹೆಚ್ಚು ಮಾಡಬಾರದು. ಚಳಿಗಾಲ – ಬೇಸಿಗೆ ಮುಗಿಯುವ ತನಕ ಪ್ರತೀ ತಿಂಗಳೂ ಸಿಂಪರಣೆ ಮಾಡಬಹುದು. ಯಾವುದೇ ಹಾನಿ ಕಂಡು ಬಂದರೆ ಸಿಂಪರಣೆ ಮಾಡಬೇಡಿ.

One thought on “ಮಿಡಿ ಅಡಿಕೆ ಉದುರುತ್ತಿದೆಯೇ ? ಈ ಸಿಂಪರಣೆ ಮಾಡಿ.

Leave a Reply

Your email address will not be published. Required fields are marked *

error: Content is protected !!