ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಾತಂತ್ರದ ಅಮೃತ ಮಹೋತ್ಸವದ ಸಂದರ್ಭದ ಭಾಷಣದಲ್ಲಿ ಕೃಷಿಕರಿಗೆ ನೀಡಿದ ಸಂದೇಶ ಸಾವಯವ – ನೈಸರ್ಗಿಕ ಕೃಷಿಗೆ ಬದಲಾಗಿ ದೇಶಕ್ಕೆ ಲಕ್ಷಾಂತರ ಕೋಟಿ ಉಳಿಸಿ ಎಂದು. ಪ್ರಧಾನಿಗಳ ಆಶಯ ಸರಿ. ದೇಶ ಈಗಾಗಲೇ ಕೃಷಿಗಾಗಿ ಬಳಕೆಮಾಡುವ ರಸಗೊಬ್ಬರವನ್ನು ಆಮದು ಮಾಡಿಕೊಳ್ಳುವುದಕ್ಕಾಗಿ 2.10 ಲಕ್ಷ ಕೋಟಿ ಹಣವನ್ನು ವಿದೇಶಗಳಿಗೆ ಸಂದಾಯ ಮಾಡುತ್ತದೆ. ದೇಶದಲ್ಲಿ ಬಹುಷಃ ರಸಗೊಬ್ಬರ ತಯಾರಾಗುವುದಿಲ್ಲ. ವಿದೇಶಗಳಿಂದ ಕಚ್ಚಾ ಸಾಮಾಗ್ರಿಗಳನ್ನು ತಂದು ಇಲ್ಲಿ ಪ್ಯಾಕಿಂಗ್ ಮಾಡಿ ರೈತರಿಗೆ ಒದಗಿಸಲಾಗುತ್ತದೆ ಎನ್ನಿಸುತ್ತದೆ.
ಪ್ರಧಾನ ಮಂತ್ರಿಗಳಲ್ಲ, ದೇಶದ ಬಗ್ಗೆ ಕಿಂಚಿತ್ತು ಕಳಕಳಿ ಉಳ್ಳವರೂ ಈ ಕರೆ ಕೊಟ್ಟೇ ಕೊಡುತ್ತಾರೆ. ವರ್ಷದಿಂದ ವರ್ಷಕ್ಕೆ ನಮ್ಮ ದೇಶ ರಸಗೊಬ್ಬರ ಆಮದು ಮಾಡಿಕೊಳ್ಳಲು ಗಣನೀಯ ಪ್ರಮಾಣದ ಹಣವನ್ನು ವ್ಯಯಿಸುತ್ತದೆ. ರಸಗೊಬ್ಬರದ ಮೂಲವಸ್ತು ಹೊಂದಿರುವ ರಾಷ್ಟ್ರಗಳು ವರ್ಷದಿಂದ ವರ್ಷಕ್ಕೆ ತಮ್ಮ ದರ ಎರಿಕೆ ಮಾಡುತ್ತಿರುತ್ತವೆ. ಈ ಕಾರಣದಿಂದ ಕೃಷಿ ಬಳಕೆಗೆ ರಸಗೊಬ್ಬರ ತರದೆ ನಿರ್ವಾಹ ಇಲ್ಲ. ತರುವುದು ದುಬಾರಿಯ ವ್ಯವಹಾರ. ಇದಕ್ಕೆ ಪರಿಹಾರ ದೇಶದ ರೈತರು ಸ್ವಲ್ಪ ಸ್ವಲ್ಪವೇ ರಸಗೊಬ್ಬರಗಳನ್ನು ಕಡಿಮೆ ಮಾಡುತ್ತಾ, ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಕೃಷಿ ಮಾಡುವುದು.
ನೈಸರ್ಗಿಕ ಕೃಷಿ– ಸಾವಯವ ಕೃಷಿ ಉತ್ತಮ ಎಂಬ ಬಗ್ಗೆ ನಮ್ಮ ರೈತರಿಗೆ ಪ್ರಧಾನಮಂತ್ರಿಗಳು ಹೇಳಬೇಕಾಗಿಲ್ಲ. ಕೃಷಿ ಮಂತ್ರಿಗಳು ಹೇಳಬೇಕಾಗಿಲ್ಲ. ಅಥವಾ ರೈತರ ಹೆಂಡತಿ ಮಕ್ಕಳೂ ಹೇಳಬೇಕಾಗಿಲ್ಲ. ಪ್ರತೀಯೊಬ್ಬರಿಗೂ ರಸಗೊಬ್ಬರ ಏನು, ನಮ್ಮ ಸಾಂಪ್ರದಾಯಿಕ ಗೊಬ್ಬರ ಏನು ಎಂಬುದು ಗೊತ್ತಾಗಿದೆ. ಆದರೆ ಅನಿವಾರ್ಯತೆ ರಸಗೊಬ್ಬರದತ್ತ ಸೆಳೆಯುತ್ತಿದೆ. ರಸಗೊಬ್ಬರದ ರುಚಿ ಪಡೆದ ರೈತ ಅದಕ್ಕಿಂತ ಉತ್ತಮ ರುಚಿ ಉಳ್ಳ ಸಮಾನ ಬೆಲೆಯ ಯಾವ ವಸ್ತು ಕೊಟ್ಟರೂ ಅದನ್ನು ತಕ್ಷಣವೇ ಸ್ವೀಕರಿಸುತ್ತಾರೆ.
ಆತ್ಮ ನಿರ್ಭರ ಭಾರತ:
- ದೇಶದ ಜನ ಕೃಷಿಗೆ ಹಾಗೆಯೇ ಇತರ ಅನುಭೋಗಕ್ಕೆ ಬಳಸುವ ಹೆಚ್ಚಿನೆಲ್ಲಾ ವಸ್ತುಗಳೂ ದೇಶದಲ್ಲೇ ತಯಾರಾದರೆ ಈ ದೇಶಕ್ಕೆ ಉಳಿತಾಯ.
- ಈ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು ಆತ್ಮ ನಿರ್ಭರ ಭಾರತ ಕರೆ ಕೊಟ್ಟಿದಾರೆ.
- ಇದು ಸಾಕಷ್ಟು ಫಲವನ್ನೂ ಕೊಟ್ಟಿದೆ.
- ಕೃಷಿ ಒಳಸುರಿ (Inputs)ಗಳ ಸಾಲಿನಲ್ಲಿ ಗೊಬ್ಬರ, ಇತ್ಯಾದಿಗಳನ್ನು ನಾವೇ ನಮ್ಮಲ್ಲಿರುವ ಸಂಪನ್ಮೂಲಗಳ ಸಹಾಯದಿಂದ ಕ್ರೋಢೀಕರಿಸಿಕೊಂಡರೆ ಅದಕ್ಕೆ ಯಾರ ಹಂಗೂ ಇರಲಾರದು.
- ಬೇರೆ ದೇಶಗಳಲಿ ಮಾತ್ರ ರಸಗೊಬ್ಬರದ ಮೂಲವಸ್ತುಗಳು ಲಭ್ಯವಿದ್ದು, ಅದನ್ನೇ ನಾವು ಬಳಸುವುದೇ ಆದರೆ ಅವರ ಕೈಗೊಂಬೆಯಾಗಿಯೇ ಇರಬೇಕಾಗುತ್ತದೆ.
- ಇಂದು ಒಂದು ಚೀಲ ಯೂರಿಯಾಕ್ಕೆ ಭಾರತ ಸರಕಾರ 3434 ರೂ. ಹೊಂದಿಸಿಕೊಡುವ ಕಾರಣ ನಮಗೆ ಇದು 266 ರೂ. ಗಳಿಗೆ ಸಿಗುತ್ತದೆ.
- DAP ಗೊಬ್ಬರ 1350 ರೂ. ಗಳಿಗೆ ಸಿಗುತ್ತದೆ.
- ಆದರೆ ಅದರ ನಿಜ ಬೆಲೆ 2500 ರಷ್ಟು.
- ಸಾರಜನಕ, ರಂಜಕ ಮತ್ತು ಪೊಟ್ಯಾಶ್ ಎಲ್ಲದಕ್ಕೂ ಭಾರತ ಸರಕಾರ ಸಬ್ಸಿಡಿ ಕೊಡುವ ಕಾರಣ ನಾವು ಈಗ ದುಬಾರಿ ಬೆಲೆಯ ಗೊಬ್ಬರ ಎಂದು ದೂರುತ್ತಾ ಕೃಷಿ ಮಾಡುತ್ತಿದ್ದೇವೆ.
- ಈಗಾಗಲೇ 55% ದಷ್ಟು ರಸಗೊಬ್ಬರಕ್ಕೆ ಸಬ್ಸಿಡಿ ಕೊಡುತ್ತಿದ್ದು, ಪೂರೈಕೆದಾರರು ಬೆಲೆ ಹೆಚ್ಚಿಸಿದಂತೆ ಇಲ್ಲಿ ನಮಗೆ ಅದರ ಬಿಸಿ ತಾಗದಂತೆ ಸರಕಾರ ಸಬ್ಸಿಡಿ ಕೊಡಲೇ ಬೇಕು.
- ಇಂದು ಸಬ್ಸಿಡಿ ರಹಿತ ರಸಗೊಬ್ಬರಗಳು ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟು ಬೆಲೆಯಾಗಿದೆ.
- ಇನ್ನೂ ಹೆಚ್ಚಳವಾಗುತ್ತಲೇ ಇರುತ್ತದೆ.
ಕರೆ ಒಳ್ಳೆಯದು ಆದರೆ ಹೊಲದಲ್ಲಿ ದನ ಮೆಂದು ಹೋದಾಗಿದೆ:
- ಮಾನ್ಯ ಪ್ರಧಾನಮಂತ್ರಿಗಳಾದಿಯಾಗಿ, ಕೃಷಿ ಮಂತ್ರಿಗಳು, ರಕ್ಷಣೆ ಮತ್ತು ಸಹಕಾರಿ ಮಂತ್ರಿಗಳು ಹಲವಾರು ಬಾರೀ ನೈಸರ್ಗಿಕ ಕೃಷಿ- ಸಾವಯವ ಕೃಷಿಗೆ ಬನ್ನಿ ಎಂದು ಕರೆ ಕೊಟ್ಟಿದ್ದಾರೆ.
- ಕೆಲವು ರಿಯಾಯಿತಿಗಳು ಹಾಗೂ ಸೌಲಭ್ಯಗಳನ್ನು ಪ್ರಕಟಿಸಿರುತ್ತಾರೆ.
- ಹಸು ಸಾಕಾಣೆಯ ಮೂಲಕ ಗೊಬ್ಬರದ ಸ್ವಾವಲಂಭನೆ ಸಾಧ್ಯ ಎನ್ನುತ್ತಾರೆ.
- ಆದರೆ ಹಸು ಸಾಕಾಣಿಕೆಯನ್ನು ಜನ ಬಿಡುತ್ತಾ ಬರುತ್ತಿದ್ದಾರೆ.
- ಹಸುಗಳಿಗೆ ಮೇವಿನ ಕೊರತೆ ಇದೆ ದುಬಾರಿಯೂ ಆಗಿದೆ.
- ಪಶುಗಳ ಆಹಾರ (ಎಣ್ಣೆ ಕಾಳಿನ ಹಿಂಡಿ, ದ್ವಿದಳ ಧಾನ್ಯಗಳ ಹೊಟ್ಟು ಮುಂತಾದ ಆಹಾರ)ಗಳ ಬೆಲೆಯೂ ಗಗನಕ್ಕೇರಿದೆ.
- ಪಶುಗಳಿಗೆ ಮೇಯಲು ಸ್ಥಳದ ಅಭಾವ, ಕೆಲಸಗಾರರ ಅಭಾವ ಇವೆಲ್ಲಾ ಹಸು ಸಾಕಣೆಯನ್ನು ರೈತರು ಬಿಡುವ ಮಟ್ಟಕ್ಕೆ ಮುಟ್ಟಿಸಿದೆ.
- ಇದು ಹುಲ್ಲುಗಾವಲಿನಲ್ಲಿ ದನ ಮೆಂದು ಮುಗಿಸಿದಂತಾಗಿದೆ.
ಸಾವಯವ ಕೃಷಿ ಅಸಾಧ್ಯವಲ್ಲ:
- ಸಾಕಷ್ಟು ಮೂಲವಸ್ತುಗಳಿದ್ದಾಗ ಸಾವಯವ ಕೃಷಿ ಅಸಾಧ್ಯವಲ್ಲ.
- ಇಂದು ಸಾವಯವ ಮೂಲವಸ್ತುಗಳೇ ಕಡಿಮೆಯಾಗಿದೆ.
- ಪಶು ಸಂಪತ್ತು ಇದ್ದರೂ ಅವುಗಳಿಗೆ ಕೊಡುವ ಆಹಾರ ಸಿದ್ದ ಆಹಾರಗಳೇ ಹೊರತು ನೈಸರ್ಗಿಕ ಆಹಾರಗಳಲ್ಲ.
- ಸಾವಯವ ಮೂಲವಸ್ತುಗಳೇ ದುಬಾರಿಯಾದ ಕಾರಣ ಸಾವಯವ ಕೃಷಿಯೇ ದುಬಾರಿಯಾಗುವುವರಲ್ಲಿ ಸಂದೇಹವಿಲ್ಲ.
- ಈಗ ಆ ಪರಿಸ್ಥಿತಿ ಉಂಟಾಗಿ ಜನ ರಸಗೊಬ್ಬರಗಳ ಮೊರೆ ಹೋಗುತ್ತಿದ್ದಾರೆ.
ಕೃಷಿಕರಿಗೆ ಶಿಕ್ಷಣ ಕೊಡಲು ಆಗಲಿಲ್ಲ:
- ಮಾನನೀಯ ಪ್ರಧಾನ ಮಂತ್ರಿಗಳು ಲಾಲ್ ಬಹದ್ದೂರ್ ಶಾಸ್ತ್ರಿಯವರು ಹೇಳಿದ ಜೈ ಜವಾನ್ , ಜೈ ಕಿಸಾನ್, ಎಂಬ ಧೇಯವಾಖ್ಯ, ಅದಕ್ಕೆ ಅಟಲ್ ಬಿಹಾರೀ ವಾಜಪೇಯಿಯವರು ಸೇರಿಸಿದ ಜೈ ವಿಜ್ಞಾನ್ ಜೊತೆಗೆ ಜೈ ಅನುಸಂಧಾನ್ ( ಸಂಶೋಧನೆ) ಸೇರಿಸಿದ್ದಾರೆ.
- ಕೃಷಿ ಕ್ಷೇತ್ರಕ್ಕೆ ಅನುಸಂಧಾನ ಸಾಕಷ್ಟು ಆಗಬೇಕಾಗಿದೆ.
- ಈ ಹಿಂದಿನ ತಲೆಮಾರಿನವರ ತರಹ ಫಲಪ್ರದ ಅಧ್ಯಯನ, ಸಂಶೋಧನೆ ನಡೆಸಲು ಹೊಸ ತಲೆಮಾರಿನವರಿಗೆ ಸಾಧ್ಯವಾಗುತ್ತಿಲ್ಲ.
- ಖಾಸಗಿ ಸಂಶೋಧನೆ ಮತ್ತು ಅಭಿವೃದ್ದಿ ಗಿಂತ ಸರಕಾರೀ ವ್ಯವಸ್ಥೆ ಹಿಂದೆ ಇದೆ.
- ನಮ್ಮಲ್ಲಿ ಉದ್ಯೋಗಕ್ಕಾಗಿ ಶಿಕ್ಷಣ , ಉದ್ಯೋಗ ದೊರಕಿದ ನಂತರ ಜ್ಞಾನಾರ್ಜನೆಗೆ ನಿವೃತ್ತಿ ಈ ಪರಿಸ್ಥಿತಿ ಇದೆ.
- ಹೊಸ ತಲೆಮಾರಿನ ಕೃಷಿ ವಿಜ್ಞಾನ ಅಭ್ಯಾಸ ಮಾಡುವ ಮಾನವ ಸಂಪನ್ಮೂಲಕ್ಕೆ ಪುಸ್ತಕದ ಬದನೇಕಾಯಿ ಬಿಟ್ಟರೆ ಬೇರೆ ಗೊತ್ತಿಲ್ಲ.
- ಇಂತವರ ಸಹಾಯದಿಂದ ನಾವು ಸಾವಯವ ಕೃಷಿ ನೈಸರ್ಗಿಕ ಕೃಷಿಗೆ ಇಳಿದರೆ ನಮ್ಮ ಕೃಷಿ ವ್ಯವಸ್ಥೆ ಬುಡಮೇಲಾಗಬಹುದು.
- ನೈಸರ್ಗಿಕ ಕೃಷಿಯಾಗಲಿ, ಸಾವಯವ ಕೃಷಿಯಾಗಲಿ, ಅಥವ ಇನ್ಯಾವುದೇ ಮಾದರಿಯ ಕೃಷಿ ಆಗಲಿ ಸಂಶೋಧನಾ ಕ್ಷೇತ್ರ ಅದನ್ನು ಅಧ್ಯಯನ ಕೈಗೊಂಡು ಧನಾತ್ಮಕ ವರದಿಯನ್ನು ಕೊಡುತ್ತದೆ.
- ಇವೆಲ್ಲಾ ಅಧ್ಯಯನಗಳಿಗೆ ಅನುದಾನ ಇರುತ್ತದೆ. ಆದರೆ ಅದನ್ನು ಪ್ರಾಯೋಗಿಕವಾಗಿ ಹೊಲದಲ್ಲಿ ಅಳವಡಿಸಿಕೊಳ್ಳುವವರು ರೈತರು. ರೈತರಿಗೆ ಅದು ಹೊಂದುವಂತಿರಬೇಕು.
- ನಮ್ಮ ದೇಶದ ಕೃಷಿಕರಿಗೆ ವೈಜ್ಞಾನಿಕ ಶಿಕ್ಷಣವನ್ನು ಸಮರ್ಪಕವಾಗಿ ತಲುಪಿಸಲು ಈ ತನಕ ನಮ್ಮಿಂದ ಸಾಧ್ಯವಾಗಲಿಲ್ಲ.
- ನಾನು ಗಮನಿಸಿದಂತೆ 60% ಕ್ಕೂ ಹೆಚ್ಚಿನ ಕೃಷಿಕರಿಗೆ ಬೆಳೆ ಪೊಷಕಾಂಶಗಳಾದ NPK ಗೊಬ್ಬರ ಎಂದರೇನು?
- ಬೆಳೆ ಪೋಷಣೆಯಲ್ಲಿ ಇದರ ಪಾತ್ರವೇನು ಎಂಬುದು ಗೊತ್ತಿಲ್ಲ.
- NPK ಎಂದಾಕ್ಷಣ ರಾಸಾಯನಿಕ ಎಂದು ಅರ್ಥೈಸಿಕೊಳ್ಳುವ ಜನ ಬಹುಸಂಖ್ಯೆಯಲ್ಲಿದ್ದಾರೆ.
- ಇದನ್ನು ಅರ್ಥಮಾಡಿಕೊಡುವ ಪ್ರಯತ್ನ ಮೊದಲು ಮಾಡಬೇಕಿದೆ.
- ಕೃಷಿಕ ನನಗೇನು ಬೇಕು, ಹೇಗೆ ಬೇಕು ಎಂಬುದನ್ನು ಕೇಳುವವನಾಗಬೇಕು.
- ಕೊಟ್ಟದ್ದನ್ನು ಪಂಚಾಮೃತವಾಗಿ ಸ್ವೀಕರಿಸುವ ವ್ಯಕ್ತಿಯಾಗಬಾರದು.
- ಯಾರು ಏನೇ ಹೇಳಿದರೂ, ಏನೇ ಬೆಳೆ ಪೋಷಕ ಪರಿಚಯಿಸಿದರೂ ಅದಕ್ಕೆ ರೈತರು ಮೂಕ ಗ್ರಾಹಕರಾಗುವ ಸ್ಥಿತಿ ಇದೆ.
- ಈ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಲಿ ಎಂದು ಆಶಿಸುತ್ತೇವೆ.
ಭಾರತ ದೇಶದಲ್ಲಿ ಸಂಪನ್ಮೂಲಗಳಿಗೆ ಕೊರತೆ ಇಲ್ಲ. ಜನಸಂಖ್ಯೆಗೂ ಕೊರತೆ ಇಲ್ಲ. ನಮ್ಮ ಕರ್ನಾಟಕದ ಹೊಸಪೇಟೆಯ ವ್ಯಕ್ತಿಯೊಬ್ಬರು ಯೂರಿಯಾ ಬದಲಿಗೆ ದೇಶದ ರೈತರು ಏನನ್ನು ಉಪಯೋಗಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ( (Urine to Urea) ಅದೇ ರೀತಿಯಲ್ಲಿ ನಮ್ಮ ದೇಶದಲ್ಲಿನ ಸಕ್ಕರೆ ಕಾರ್ಖಾನೆಗಳ ತ್ಯಾಜ್ಯಗಳನ್ನು ಬಳಸಿಕೊಂಡರೆ ಪೊಟ್ಯಾಶ್ , ರಂಜಕ ಆಗತ್ಯಗಳನ್ನು ನೀಗಿಸಬಹುದು ಎಂಬುದನ್ನು ಖಾಸಗಿ ಸಂಶೋಧಕರು ಕಂಡುಕೊಂಡಿದ್ದಾರೆ. ಇಂದು ಜೈವಿಕ ಗೊಬ್ಬರ, ಜೈವಿಕ ಬೆಳೆ ಸಂರಕ್ಷಕಗಳನ್ನು ರೈತಾಪಿ ವರ್ಗಕ್ಕೆ ಪರಿಚಯಿಸಿದವರಲ್ಲಿ ಖಾಸಗಿಯವರೇ ಮುಂದೆ ಇದ್ದಾರೆ.
ದೇಶದ ಖಜಾನೆಗೆ ರೈತರು ಹೊರೆಯಾಗಬೇಕಿಲ್ಲ. ನಮಗೆ ಬದಲಿ ವ್ಯವಸ್ಥೆಗಳನ್ನು ಹುಡುಕಿ ಕೊಟ್ಟರೆ ನಾವು ಆತ್ಮ ನಿರ್ಭರವಾಗಿ ಕೃಷಿ ಮಾಡಬಲ್ಲೆವು. ಆದರೆ ಉತ್ಪತ್ತಿಗಿಂತ ಉತ್ಪಾದನಾ ವೆಚ್ಚ ಮಾತ್ರ ಹೆಚ್ಚಾಗಬಾರದು. ರೈತರು ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು. ಆದರೆ ಸ್ವೇಚ್ಚಾಚಾರ ಮಾಡಬಾರದು ಬಳಸುವ ಹಕ್ಕು ಇದೆ. ಜೊತೆಗೆ ಜವಾಬ್ಧಾರಿಯು ಇದೆ.