“ ಸೌಗಂದ್” ಅಡಿಕೆಯ ಬಳಕೆ ಹೆಚ್ಚಿಸಬಹುದಾದ ಮೌಲ್ಯವರ್ಧಿತ ಉತ್ಪನ್ನ.  

ಸೌಗಂದ್” ಅಡಿಕೆಯ ಬಳಕೆ ಹೆಚ್ಚಿಸಬಹುದಾದ ಮೌಲ್ಯವರ್ಧಿತ ಉತ್ಪನ್ನ

ಕ್ಯಾಂಪ್ಕೋ ಸಂಸ್ಥೆಯಿಂದ ಈಗ ಅಡಿಕೆಯ ಬಳಕೆ ಜನಸಾಮಾನ್ಯರೂ ಮಾಡಬಹುದಾದ ಉತ್ಪನ್ನ  “ಸೌಗಂಧ್” (Saugandh) ಅನ್ನು ಬಿಡುಗಡೆ ಆಗಿದೆ. ಬಹುಶಃ ಈ ಒಂದು ಉತ್ಪನ್ನವನ್ನು ಸಮರ್ಪಕವಾಗಿ ಮಾರುಕಟ್ಟೆ ಮಾಡಿದಲ್ಲಿ ಅಡಿಕೆಯ ಬಳಕೆ ಹೆಚ್ಚಳವಾಗಿ ಬೆಳೆಗಾರರಿಗೆ ಅನುಕೂಲವಾಗಬಹುದು. ಸಂಸ್ಥೆಯು ಸುಮಾರು 15 ವರ್ಷಕ್ಕೆ ಮೊತ್ತ ಮೊದಲಬಾರಿಗೆ ಅಡಿಕೆಯನ್ನು ಬಾಲಕರಿಂದ ಹಿಡಿದು ವೃದ್ಧರ ವರೆಗೂ, ಗಂಡಸರು ಹೆಂಗಸರೆಂಬ ಭೇಧವಿಲ್ಲದೆ ತಿನ್ನಬಹುದಾದ  “ಕಾಜೂ ಸುಪಾರಿ” ಎಂಬ ಎಂಬ ಉತ್ಪನ್ನವನ್ನು ಪರಿಚಯಿಸಿ ಜನಮನ್ನಣೆಗಳಿಸಿತ್ತು. 

ಬಹುಶಃ ನಮ್ಮ ಅಡಿಕೆ ಬೆಳೆಗಾರರಿಗೆ ಗೊತ್ತಿದೆಯೋ ಇಲ್ಲವೋ, ನಮ್ಮ ಮನೆಯ ಶುಭ ಸಮಾರಂಭಗಳಲ್ಲಿ  ಅತಿಥಿ ಸತ್ಕಾರ, ಸ್ವಾಗತ ಸೂಚಕವಾಗಿ,ಊಟದ ನಂತರ ತಾಂಬೂಲದ ಶಾಸ್ತ್ರಕ್ಕಾಗಿ ನಾವು ಬಳಕೆ ಮಾಡುವ  ಸಿಹಿ ಸುಪಾರಿ ಅಡಿಕೆ ಬೆಳೆಯಿಲ್ಲದ ಪ್ರದೇಶಗಳಲ್ಲಿ  ತಯಾರಾಗಿ ನಮಗೆ ಲಭ್ಯವಾಗುತ್ತಿದೆ. ಮಾರುಕಟ್ಟೆಯಿಂದ ನಾವು ಇದನ್ನು ಖರೀದಿಸಿ ತರುತ್ತಿದ್ದೇವೆ. ಇದರ ಬದಲಿಗೆ ಇನ್ನು ನಾವು ನಮ್ಮದೇ ಊರಿನಲ್ಲಿ ಉತ್ಪಾದಿಸಲಾಗುವ ಪರಿಶುದ್ಧವಾದ ಸಿಹಿ ಸುಪಾರಿಯನ್ನು ಬಳಸಬಹುದು.ಈ ತನಕ ಇಂತಹ ಸುಪಾರಿ ನಮ್ಮಲ್ಲಿ ತಯಾರಾಗುತ್ತಿರಲಿಲ್ಲ. ಈಗ ಹಾಗಿಲ್ಲ. ನಮ್ಮೆಲ್ಲರ ನೆಚ್ಚಿನ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಇದನ್ನು ಉತ್ಪಾದಿಸಲು ಪ್ರಾರಂಭಿಸಿದೆ. ರುಚಿ,ಸುವಾಸನೆ ಮತ್ತು ಆರೋಗ್ಯಗುಣ ಎಲ್ಲಾ ಅಂಶಗಳೂ ಉತ್ತಮವಾಗಿದೆ. ಆಕರ್ಷಕವಾಗಿ ಪ್ಯಾಕಿಂಗ್ ಮಾಡಿದ್ದಾರೆ.

ಸೌಗಂದ್ ಇದರಲ್ಲೇನಿದೆ:

 • ಕ್ಯಾಂಪ್ಕೋ ಪರಿಚಯಿಸಿದ ಸೌಗಂದ್ ಎಂಬ ಅಡಿಕೆಯ ಮೌಲ್ಯವರ್ಧಿತ ಉತ್ಪನ್ನದಲ್ಲಿ ತೆಳುವಾಗಿ ಕತ್ತರಿಸಿದ  ಅಡಿಕೆ,ಗೋಡಂಬಿ, ಪಾಮ್ ಎಣ್ಣೆ, ಏಲಕ್ಕಿ, ಲವಂಗ, ದಾಳ್ಚೀನಿ, ಮತ್ತು ಜಾಯೀ ಕಾಯಿ ಮತ್ತು ಪತ್ರೆಗಳನ್ನು ಸೇರಿಸಲಾಗಿದೆ.
 • ಸಿಹಿ ರುಚಿ ಇದೆ. ಬಾಯಿಗೆ ಹಾಕಿ  ಹೆಚ್ಚು ಜಗಿಯಬೇಕಾಗಿಲ್ಲ. ಸುವಾಸನೆ ಇರುತ್ತದೆ.
 • ಬಾಯಿ ವಾಸನೆ ಬರುವ ಸಮಸ್ಯೆ ಇದ್ದರೆ ಇದನ್ನು ತಿಂದರೆ ಬಾಯಿ ಸುವಾಸನೆ ಬರುತ್ತದೆ.
 • ರೀಟೆಲ್ ಮಾರುಕಟ್ಟೆಯಲ್ಲಿ 80 ಗ್ರಾಂ ತೂಕದ ಈ ಪ್ಯಾಕಿಂಗ್ ಗೆ 100 ರೂ. ಬೆಲೆ ಇದೆ.
 • 100 ಗ್ರಾಂ ತೂಕದಲ್ಲಿ  ಒಳಗೊಂಡ ಪೌಷ್ಟಿಕಾಂಶದ ವಿವರ ಹೀಗಿದೆ.
 • ಶಕ್ತಿ.450 ಕಿಲೋ ಕ್ಯಾಲೊರಿ, ಪ್ರೊಟೀನ್ -6 ಗ್ರಾಂ, ಕಾರ್ಬೋಹೈಡ್ರೇಟ್ 70 ಗ್ರಾಂ, ಮೂಲವಸ್ತುಗಳಲ್ಲಿರುವ ಸಕ್ಕರೆ ಅಂಶ 24 ಗ್ರಾಂ, ಸೇರಿಸಿದ ಸಕ್ಕರೆ ಅಂಶ 23 ಗ್ರಾಂ, ಕೊಬ್ಬಿನ ಅಂಶ 17 ಗ್ರಾಂ, ಸಂತೃಪ್ತ ಕೊಬ್ಬು 8 ಗ್ರಾಂ ಇರುತ್ತದೆ. ಸೋಡಿಯಂ 4 ಮಿಲಿ ಗ್ರಾಂ ನಷ್ಟು ಇರುತ್ತದೆ. ಪ್ಯಾಕಿಂಗ್ ಮಾಡಿದ ಸೌಗಂದ್ ಅನ್ನು 8 ತಿಂಗಳ ತನಕ ಬಳಕೆ ಮಾಡಬಹುದು.
ಸೌಗಂದ್” ಪ್ಯಾಕಿಂಗ್

ಅಡಿಕೆಯ ಬಳಕೆ ಹೆಚ್ಚಲು ಇಂತಹ ಉತ್ಪನ್ನ ಬೇಕು:

 • ಅಡಿಕೆಯಿಂದ ಬರೇ ಪಾನ್ ಮಾತ್ರ ಅತ್ಯಧಿಕ ಪ್ರಮಾಣದಲ್ಲಿ ತಯಾರಾಗುತ್ತದೆ.
 • ಅದರಲ್ಲಿ ತಂಬಾಕು ಸೇರಿಸಿರುವಂತದ್ದು, ಸೇರಿಸದೆ ಇರುವಂತದ್ದು ಹೀಗೆಲ್ಲಾ ವೈವಿಧ್ಯತೆ ಇದೆ.
 • ಕೆಲವರು ಇದರಲ್ಲಿ ಚಹಾ ಮಾಡಲು ಪ್ರಯತ್ನಿಸಿದರು ಕೆಲವರು , ಆಟಿಕೆ ತಯಾರಿ ಹೀಗೆಲ್ಲಾ ಪ್ರಯತ್ನಗಳನ್ನು ಮಾಡಿದವರಿದ್ದಾರೆ.
 • ಆದರೆ ಇವೆಲ್ಲವುಗಳಿಗೂ ಅದರದ್ದೇ ಆದ ಇತಿಮಿತಿಗಳಿವೆ.
 • ಅಡಿಕೆ ಬಳಕೆಯಾಗುವುದೇ ಒಂದು ಚಟದ ವಸ್ತುವಾಗಿ.
 • ಚಟದ ಹಾಗೆಯೇ ಇನ್ನೊಂದು ರೂಪದಲ್ಲಿ ಬಳಕೆಯಾಗಬೇಕಿದ್ದರೆ ಅದು ಘನತೆಯ (Prestigious) ವಿಷಯವಾಗಿರಬೇಕು.
 • ಜನರ ಖರ್ಚು ಮಾಡುವ ಮನೋಸ್ಥಿತಿ  ಚಟದ ವಸ್ತುವಿಗೂ ಘನತೆಯ ವಿಷಯದಲ್ಲೂ ಸ್ವಲ್ಪ ಸಡಿಲಿಕೆ (Liberal)ಇರುತ್ತದೆ.

ನಮ್ಮ ಮನೆಯ ಶುಭ ಸಮಾರಂಭಗಳಲ್ಲಿ ಅತಿಥಿ ಸತ್ಕಾರಕ್ಕೆ ಬಳಕೆ ಮಾಡುವ ಯಾವ ವಸ್ತುವಿಗೂ ನಾವು ಜಿಪುಣತನ ಮಾಡುವುದಿಲ್ಲ.  ಅದು ಎಲ್ಲರಿಂದಲೂ ಪ್ರಶಂಸಿಸಲ್ಪಡಬೇಕು ಎಂಬ ಭಾವನೆ ಇರುತ್ತದೆ. ಈಗ ನಾವು ಎಲ್ಲೆಲ್ಲೋ ಯಾರೋ ತಯಾರು ಮಾಡುವ  ತಾಂಬೂಲವನ್ನು ಖರೀದಿಸಿ ಬಳಕೆ ಮಾಡುವ ಬದಲು ನಮಗೆ ಗೊತ್ತಿರುವ ಮೂಲದ ಉತ್ಕೃಷ್ಟ ಉತ್ಪನ್ನವನ್ನು ಸೌಗಂದ್ ಬಳಸಿದರೆ ಅದಕ್ಕೆ ಗೌರವ ಹೆಚ್ಚು.

ಕಾಜು ಸುಪಾರಿ

ಕ್ಯಾಂಪ್ಕೋ ರೈತರೆಲ್ಲರ ಸಂಸ್ಥೆಯಾಗಬೇಕಿದೆ:

ಕ್ಯಾಂಪ್ಕೋ The Central Arecanut and Cocoa Markketing and Processing Co Oparative Ltd) ಹೆಸರಿಗೆ ಅದರದ್ಡೇ ಆದ ಘನತೆ ಇದೆ. ಇದರ ಮೇಲೆ ಜನತೆಗೆ ನಂಬಿಕೆ ಇದೆ. ಹಾಗಾಗಿ ಸಂಸ್ಥೆಯು ಅಡಿಕೆ, ಕೊಕ್ಕೋದ ಮೌಲ್ಯವರ್ಧನೆ ಮಾಡಿದಂತೆ ಇನ್ನೂ ಕೆಲವು ಉತ್ಪನ್ನಗಳನ್ನು ಕಾರ್ಯವ್ಯಾಪ್ತಿಗೆ ತರಬೇಕಾಗಿದೆ.

 • ಅಡಿಕೆ, ಕೊಕ್ಕೋ,  ಖರೀದಿಗೆಂದು ಪ್ರಾರಂಭವಾದ ಸಂಸ್ಥೆ ಇತ್ತೀಚೆಗೆ ರಬ್ಬರ್ ಹಾಗೂ, ಕರಿಮೆಣಸನ್ನು ತನ್ನ ಮಾರುಕಟ್ಟೆ ಪರಿಧಿಯಲ್ಲಿ ಸೇರಿಸಿಕೊಂಡು ರೈತರಿಗೆ ಹತ್ತಿರವಾಯಿತು.
 • ರಾಜ್ಯದ ಕರಾವಳಿಯೂ ಸೇರಿದಂತೆ ರಾಜ್ಯದಾದ್ಯಂತ ತೆಂಗು ಒಂದು ಪ್ರಮುಖ ತೋಟಗಾರಿಕಾ ಬೆಳೆ.
 • ಇದಕ್ಕೆ ಉತ್ತಮ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆ ಮುಂದೆ ಬರಬೇಕಿದೆ.
 • ತೆಂಗಿನ ಮೌಲ್ಯವರ್ಧಿತ ಉತ್ಪನ್ನ ತಯಾರಿಸುವ ಮೂಲಕ ಅಡಿಕೆಯಂತೆ ಉತ್ತಮ ಹೆಸರನ್ನು ಗಳಿಸುವ ಅವಕಾಶ ಇದೆ.  
 • ರೈತರು ತಾವು ಬೆಳೆದ ಉತ್ಪನ್ನವನ್ನು ಸಮರ್ಪಕವಾಗಿ ದಾಸ್ತಾನು ಮಾಡದೆ  ಹಾಳು ಮಾಡುತ್ತಾರೆ.
 • ಉದಾ. ಅಡಿಕೆಯನ್ನು ಚೋಳ್, ಡಬ್ಬಲ್ ಚೋಳ್ ಮಾಡುವಾಗ ಹಾಳಾಗುತ್ತದೆ.
 • ಇವೆಲ್ಲಾ ಅವೈಜ್ಞಾನಿಕ ದಾಸ್ತಾನು ವಿಧಾನದಿಂದ ಆಗುತ್ತದೆ.
 • ಅಡಿಕೆ ಹಾಗೂ ಇನ್ನಿತರ ಉತ್ಪನ್ನಗಳ ವೈಜ್ಞಾನಿಕ ದಾಸ್ತಾನು ಇತ್ಯಾದಿಗಳಿಗೆ  ಸುಸಜ್ಜಿತ ಸಂಗ್ರಹ ವ್ಯವಸ್ಥೆಯತ್ತ ಗಮನ ಹರಿಸಿದರೆ ತುಂಬಾ ಅನುಕೂಲ.
 • ಮೈಲುತುತ್ತೆ  ಇತ್ಯಾದಿ ಸರಬರಾಜು ಮಾಡಿದಂತೆ ಇತರ ಬೆಳೆ ಪೋಷಕಗಳನ್ನು ಒದಗಿಸುವ ನಿಟ್ಟಿನಲ್ಲಿ ಮುಂದೆ ಬರಲಿ ಎಂದು ಆಶಿಸೋಣ.

ಕ್ಯಾಂಪ್ಕೋ ಸಂಸ್ಥೆ ಕೇವಲ ಮಾರುಕಟ್ಟೆ ವ್ಯವಹಾರವಲ್ಲದೆ ಚಾಕಲೇಟು ತಯಾರಿಕಾ ಉದ್ದಿಮೆಯಲ್ಲೂ ತೊಡಗಿಸಿಕೊಂಡಿದೆ. ಇಲ್ಲಿ ಸುಸಜ್ಜಿತ ಪ್ರಯೋಗಾಲಯ,  ಹಾಗೆಯೇ ತಜ್ಞರು ಇರುತ್ತಾರೆ. ಆದ ಕಾರಣ ತಂಬಾಕು ಸೇರಿಸಿದ ಪಾನ್ ಗುಟ್ಕಾ ತಿನ್ನುವುದರಿಂದ ಆರೋಗ್ಯದ ಮೇಲೆ ದುಶ್ಪರಿಣಾಮ ಉಂಟಾಗುವುದನ್ನು ತಡೆಯಲು,ಈ ಚಟವನ್ನು ಕಡಿಮೆ ಮಾಡಿಸುವ ಉತ್ಪನ್ನವನ್ನು ತಯಾರಿಸಲು ಮುಂದಾಗಬೇಕಿದೆ.

Leave a Reply

Your email address will not be published. Required fields are marked *

error: Content is protected !!