ಮಂಗಗಳ ಹಾವಳಿ ಹೆಚ್ಚಾಗಲು ಕಾರಣ ಇದು.

ಬೆಳೆಗಳಿಗೆ ಹಾನಿ ಮಾಡುವ ಮಂಗ

ಪರಿಸರದಲ್ಲಿ ಯಾವುದು ಇದ್ದರೆ ಎಲ್ಲದಕ್ಕೂ ಒಳ್ಳೆಯದು ಎಂಬುದು ಪ್ರಕೃತಿಗೆ ಗೊತ್ತಿದೆ. ನಾವು ಪ್ರಕೃತಿಗೆ ಪಾಠ ಕಲಿಸಲು ಹೋಗಿ ಅದು ನಮಗೆ ಪಾಠ ಹೇಳಿದೆ. ತಿನ್ನಲು ಅಹಾರವಿಲ್ಲದೆ ಮಂಗಗಳು ತೋಟಕ್ಕೆ ಬಂದಿವೆ. ಇನ್ನಾದರೂ ಅಕೇಶಿಯಾ, ಮಹಾಘನಿ, ಮಾಂಜಿಯಂ ಮುಂತಾದ ಮರಮಟ್ಟು ಬೆಳೆಸುವುದನ್ನು ಬಿಟ್ಟು ಬಿಡಿ. ಈ ಮರಗಳಿದ್ದಲ್ಲಿ ಮಂಗಗಳಿಗೆ ಆಹಾರ ಇಲ್ಲ. ಅವು ನಮ್ಮತೋಟಕ್ಕೆ ಧಾಳಿ ಮಾಡುತ್ತವೆ. 

ಏನು ನಡೆಯುತ್ತಿದೆ:

  • ಕೃಷಿಕರು ಬದುಕಿಗಾಗಿ ಕೃಷಿ ಮಾಡುವವರು. ಅವರ ತಾಳ್ಮೆಗೂ ಒಂದು ಮಿತಿ ಇದೆ.
  • ಇಗ ಮಾನವೀಯತೆಯನ್ನು ಬದಿಗಿಟ್ಟು ಕೃಷಿಕರು ಮಂಗಗಳ ಮಾರಣ ಹೋಮಕ್ಕೆ ಸಿದ್ದರಾಗಿದ್ದಾರೆ.
  • ಅಲ್ಲಲ್ಲಿ ಹೊಂಡಗಳನ್ನು ತೆಗೆದು ಸಿದ್ದವಾಗಿಟ್ಟಿದ್ದಾರೆ.
  • ಮಂಗಗಳಿಗೆ ಬಾಳೆ ಹಣ್ಣುಗಳ ಒಳಗೆ ಕಾರ್ಬೋಪ್ಯುರಾನ್ ಹಾಕಿ ತಿನ್ನಿಸಲಾಗುತ್ತದೆ.
  • ರಾಟೋಲ್ ಅನ್ನು ಇಂಜೆಕ್ಷನ್ ಸಿರಿಂಗ್ ಮೂಲಕ ಹಣ್ಣುಗಳ ಒಳಗೆ ಹಾಕಿ ಮಂಗಗಳನ್ನು ಕೊಲ್ಲಲಾಗುತ್ತಿದೆ.
  • ಕೆಲವರು ಕೋವಿಯಲ್ಲಿ ಹೊಡೆದು ಕೊಲ್ಲುತ್ತಿದ್ದಾರೆ. ಮಂಗಗಳನ್ನು ತಿನ್ನುವವರೂ ಹೆಚ್ಚಾಗಿದ್ದಾರೆ.
  • ವಾಸನೆ ರಹಿತ ಕೀಟ ನಾಶಕಗಳನ್ನು ಕೊಕ್ಕೋ ಕೋಡಿನ ಒಳಗೆ ಇಂಜೆಕ್ಷನ್ ಸಿರಿಂಜ್ ಮೂಲಕ ಹಾಕಿ ಕೊಲ್ಲಲಾಗುತ್ತಿದೆ.
  • ಇದೆಲ್ಲಾ ಗೌಪ್ಯವಾಗಿ ಕೇಳಿಬರುವ ಮಂಗಗಳ ನಿಯಂತ್ರಣೋಪಾಯ.
  • ಮನುಷ್ಯ ಸಾಕಷ್ಟು ತಾಳ್ಮೆ ವಹಿಸಿ ಮಂಗಗಳ ಅವಾಂತಾವನ್ನು ಸಹಿಸಿಕೊಂಡ.
  • ಹಿಂಸೆ ಬೇಡ ಎಂದು ಮಂಗಗಳ ತೆಲೆಗೆ 500 ರೂ. ಗಳಂತೆ ಕೊಟ್ಟು ಹಿಡಿಸಿದ.
  • ಅದನ್ನು ವ್ಯವಹಾರವಾಗಿ ಮಾಡಿಕೊಂಡವರನ್ನು ಸಾಕಿದ ಆದರೆ ಮಂಗಗಳು ಮಾತ್ರ ಕಡಿಮೆಯಾಗಲೇ ಇಲ್ಲ.
  • ಇದು ಈಗ ಸರಕಾರದ, ಆಡಳಿತ ವ್ಯವಸ್ಥೆಯ ಗಮನಕ್ಕೂ ಬಂದಿದೆ.
  • ಯಾರೂ ಮಾತಾಡದ ಸ್ಥಿತಿ ಉಂಟಾಗಿದೆ. ಇದಕ್ಕೆಲ್ಲಾ ಕಾರಣ ನಾವೇ.
  • ಏನೇ ಆದರೂ ಮಂಗಗಳ ಜೀವ ತೆಗೆಯುವ ಹಕ್ಕು ನಮಗಿಲ್ಲ. ಅವುಗಳಿಗೆ ವ್ಯವಸ್ಥೆ ಮಾಡಿಕೊಡಬೇಕಾದ್ದು ಮಾನವ ಧರ್ಮ.

ದುಡ್ಡಿಗಾಗಿ ಬದುಕುವವರು ಹೇಳುವುದುಂಟು. ಕೃಷಿ ಮಾಡುವುದಕ್ಕಿಂತ ಅಕೇಶಿಯಾ ಸಸಿ ನೆಟ್ಟು ಬೆಳೆಸಿದರೆ 20 ವರ್ಷದಲ್ಲಿ ಮರಕ್ಕೆ ಏನಿಲ್ಲವೆಂದರೂ 10,000 ರೂ. ಬರುತ್ತದೆ. ನೀರು ಬೇಡ, ಗೊಬ್ಬರ ಬೇಡ. ದುಡ್ಡು ಗ್ಯಾರಂಟಿ. ಮಂಗಗಳ ಕಾಟ ಇಲ್ಲ.
ಹಾಗೆಯೇ ಒಬ್ಬರು ಹೊಟ್ಟೆ ಹೊರೆಯಲು ಕೃಷಿಮಾಡುವ ಸಣ್ಣ ಕೃಷಿಕರು ಹೇಳುತ್ತಾರೆ, ಸಾಧ್ಯವಾದಷ್ಟು ಹಣ್ಣು ಹಂಪಲಿನ ಗಿಡ ನೆಡೋಣ, ಇಲ್ಲವಾದರೆ ಇನ್ನು ಮಂಗಗಳು ಮನೆಯೊಳಗೇ ಬರುತ್ತವೆ ಎಂದು. ಇದು ನಡೆಯುತ್ತಿರುವ ವಿದ್ಯಮಾನ.

ಅಕೇಶಿಯಾ ಎಂಬ ಮಾರಿ:

ಇದು ಉರುವಲಿಗೆ ಸೂಕ್ತ ಮರವಲ್ಲ. ಸಮರ್ಪಕವಾಗಿ ಉರಿಯುವುದೂ ಇಲ್ಲ. ಯಾವ ಕಾರಣಕ್ಕೆ ಸಾಮಾಜಿಕ ಅರಣ್ಯ ಯೋಜನೆಗೆ ಪರಿಚಯಿಸಲಾಯಿತೋ ಗೊತ್ತಿಲ್ಲ. ಇದರ ಒಂದು ಮರ ಇದ್ದರೆ ಲಕ್ಷಾಂತರ ಸಸಿಗಳು ಬೀಜ ಗಾಳಿಯ ಮೂಲಕ ಪ್ರಸಾರವಾಗಿ ಹುಟ್ಟಿಕೊಳ್ಳುತ್ತವೆ.

ಹೀಗೊಂದು ನಿರ್ಧಾರ:

  • ಕಾಸರಗೋಡಿನ ಜಿಲ್ಲಾಧಿಕಾರಿಗಳಾದ ಡಾ. ಸಜಿತ್ ಬಾಬು ಇವರು ಜಿಲ್ಲೆಯಲ್ಲಿ ಸಾಮಾಜಿಕ ಅರಣ್ಯ ಯೋಜನೆಯಂತೆ ಅಲ್ಲಲ್ಲಿ ನೆಟ್ಟು ಬೆಳೆಸಿರುವ ಅಕೇಶಿಯಾ ಮರಗಳನ್ನು ಕಡಿದು ಉರುಳಿಸುವಂತೆ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಆದೇಶಿಸಿದ್ದಾರೆ.
  • ಅವರು ಅಕೇಶಿಯಾ ಮರಗಳನ್ನು ಕಡಿಯಲು ಅದೇಶಿಸಿರುವುದು ನಾಡಿಗೆ ತೊಂದರೆ ಉಂಟಾಗುತ್ತದೆ, ಅಂತರ್ಜಲ ಬರಿದಾಗುತ್ತದೆ, ಪರಿಸರಕ್ಕೆ ತೊಂದರೆ ಎಂಬ ಕಾರಣಕ್ಕೆ.
  • ಆದರೆ ಈ ಮರಮಟ್ಟುಗಳಿಂದ ಇಷ್ಟು ಮಾತ್ರವಲ್ಲ ಪ್ರಕೃತಿಯ ಜೀವ ರಾಶಿಗಳಿಗೂ ಯಾವುದೇ ಪ್ರಯೋಜನ ಇಲ್ಲ. ಇದನ್ನು ಕಂಡಲ್ಲಿ ಕಡಿಯುವುದು, ಸಾಮಾಜಿಕ ದೃಷ್ಟಿಯಿಂದ ಅಗತ್ಯ.

ನಾವೂ ಯಾಕೆ ಒತ್ತಾಯಿಸಬಾರದು?

  • ಕೇರಳದಲ್ಲಿ ಜಿಲ್ಲಾಧಿಕಾರಿಗಳು ತೆಗೆದುಕೊಂಡ ನಿರ್ಧಾರದ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಕೃಷಿಕರೂ ಸಹ ಸರಕಾರವನ್ನು ಈ ಬಗ್ಗೆ ಒತ್ತಾಯ ಮಾಡುವುದು ಸೂಕ್ತ.
  • ನಮ್ಮಲ್ಲಿ ಇರುವ ಅಕೇಶಿಯಾ ಮರಗಳು, ಮಾಂಜಿಯಂ, ಮೇ- ಪ್ಲವರ್ ಮಹಾಘನಿ ಮುಂತಾದ ಮರಗಳನ್ನು ಕಡಿಯುವುದು ಮತ್ತು ಬದಲಿಗೆ ಬೇರೆ ಸಸಿ ನಾಟಿ ಮಾಡುವ ಬಗ್ಗೆ ಒತ್ತಾಯಿಸಬೇಕಾಗಿದೆ.
  • ಅಕೇಶಿಯಾ , ಮಹಾಘನಿ, ಮಾಂಜಿಯಂ, ಮೇ ಪ್ಲವರ್, ಸರ್ವೆ, ನೀಲಗಿರಿ ಮುಂತಾದ ಮರಗಳು ಪ್ರಕೃತಿಯ ಯಾವ ಜೀವ ರಾಶಿಗೂ ಪ್ರಯೋಜನ ಇಲ್ಲದ ಮರಗಳು.
  • ಈ ಮರಮಟ್ಟುಗಳು ವೇಗವಾಗಿ ಬೆಳೆಯುವ ಕಾರಣ ಅಧಿಕ ನೀರನ್ನು ನೆಲದಿಂದ ಹೀರಿಕೊಳ್ಳುತ್ತವೆ.ಸಾರಾಂಶವನ್ನೂ ಬರಿದಾಗಿಸುತ್ತವೆ. ಅಂತರ್ಜಲ ಬರಿದಾಗಲು ಇದು ಕಾರಣವಾಗುತ್ತದೆ.
  • ರಬ್ಬರ್ ಬೆಳೆಗಾರರು ಬೆಳೆಸಿದ ಮುಚ್ಚಲು ಬೆಳೆಯ ಕಾರಣದಿಂದಲೂ ಮಂಗ, ಹಾವು, ಮುಂತಾದ ಅರಣ್ಯ ಜೀವ ರಾಶಿಗಳಿಗೆ ಬದುಕಲು ತೊಂದರೆಯಾಗಿದ್ದು, ಅದನ್ನು ಸಾರ್ವಜನಿಕ ಸ್ಥಳದಲ್ಲಿ ಆವರಿಸಿದ್ದನ್ನು ತೆಗೆಯುವ ಕೆಲಸ ತುರ್ತಾಗಿ ಮಾಡಬೇಕಿದೆ.

ಮಂಗಗಳನ್ನು ನಿಯಂತ್ರಿಸುವುದು ಹೀಗೆ:

  • ಮಂಗಗಳು ಇಷ್ಟ ಪಡುವ ಮರಮಟ್ಟುಗಳಾದ ಅತ್ತಿ, ಆಲ, ಹುಣಸೆ, ಹೆಬ್ಬಲಸು, ಹಲಸು, ಮಾವು ನೇರಳೆ, ಕುಂಟು ನೇರಳೆ , ಪೇರಳೆ, ತೇರೆ, ಹೀಗೆ ವರ್ಷದ 12 ತಿಂಗಳೂ ಫಲ ಕೊಡಬಲ್ಲ ಮರಮಟ್ಟುಗಳನ್ನು ಬೆಳೆಸಬೇಕು.

ತಾತ್ಕಾಲಿಕ ಪರಿಹಾರವಾಗಿ ಮಂಗಗಳು ಹೆಚ್ಚು ಆಶೆ ಪಟ್ಟು ತಿನ್ನುವ ಅಲ್ಪಾವಧಿ ಬೆಳೆಗಳಾದ ಪಪ್ಪಾಯಿ, ಅನಾನಾಸು,ಕೊಕ್ಕೋ,ಅತ್ತಿ ಜಾತಿಯ ಹಣ್ಣುಗಳನ್ನು ಮೂರು ನಾಲ್ಕು ವರ್ಷದ ತನಕ ಖಾಲಿ ಭೂಮಿಯಲ್ಲಿ ಬೆಳೆಸಿದರೆ ಮಂಗಗಳು ಕೃಷಿ ಹೊಲಕ್ಕೆ ಧಾಳಿ ಮಾಡುವುದು ತಪ್ಪಬಹುದು.
ಅಕೇಶಿಯಾ ಅಳಿಸಿ – ಜೀವ ವೈವಿಧ್ಯ ಉಳಿಸಿ ಅಭಿಯಾನವನ್ನು ತಕ್ಷಣವೇ ಪ್ರಾರಂಭಿಸೋಣ.

0 thoughts on “ಮಂಗಗಳ ಹಾವಳಿ ಹೆಚ್ಚಾಗಲು ಕಾರಣ ಇದು.

Leave a Reply

Your email address will not be published. Required fields are marked *

error: Content is protected !!