ಕೆಲವು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಬಿಡುವ ಹೂ ಗೊಂಚಲಿನಲ್ಲಿ ಕಾಯಿಯೇ ಇರುವುದಿಲ್ಲ. ಒಂದೆರಡು ಎಳನೀರು ತೆಗೆಯಲೂ ಸಿಗುವುದಿಲ್ಲ. ಸಿಕ್ಕ ಎಳನೀರಿನಲ್ಲಿ ಬೊಗಸೆಯಷ್ಟೂ ನೀರು ಇರುವುದಿಲ್ಲ. ಇದಕ್ಕೆ ಕಾರಣ ಆ ಸಮಯದಲ್ಲಿ ಮರಕ್ಕೆ ಸಾಕಷ್ಟು ತೇವಾಂಶ ಲಭ್ಯವಾಗದೇ ಇರುವುದು !
- ಕೆಲವು ಪ್ರದೇಶಗಳಲ್ಲಿ ಬೇಸಿಗೆ, ಮಳೆಗಾಲ ಎರಡೂ ಕಾಲಾವಧಿಯಲ್ಲೂ ಏಕ ಪ್ರಕಾರ ಕಾಯಿ ಇರುತ್ತದೆ.
- ಆದುದರಿಂದಲೇ ಅಂಗಡಿಗಳಲ್ಲಿ ಬೇಸಿಗೆಯಲ್ಲಿ ಎಳನೀರು ಕುಡಿಯಲು ಸಿಗುತ್ತಿದೆ.
- ಒಂದು ತೆಂಗಿನ ಮರಕ್ಕೆ ದಿನಕ್ಕೆ 30-40 ಲೀ. ನೀರು ಸಾಕು ಎನ್ನುತ್ತಾರೆ.
- ಆದರೆ ಅಷ್ಟು ನೀರು ಸಾಕಾಗುವುದಿಲ್ಲ. ದಿನಕ್ಕೆ ಕನಿಷ್ಟ ಪಕ್ಷ 100 ಲೀ. ನಷ್ಟು ನೀರು ಬೇಕಾಗುತ್ತದೆ.
- ನೀರು ಕೊಡುವ ಉದ್ದೇಶ ತೆಂಗಿನ ಮರದ ಸುಮಾರು 3-4 ಮೀ ಸುತ್ತಳತೆಯವರೆಗಿನ ಮಣ್ಣು ತೇವವಾಗಿ ಸಡಿಲವಾಗಿರಲು.
- ತೇವಾಂಶ ಇದ್ದರೆ ಮಾತ್ರ ಮಣ್ಣು ಸಡಿಲವಾಗಿರುತ್ತದೆ. ಮಣ್ಣು ಸಡಿಲ ಇದ್ದರೆ ಮಾತ್ರ ಬೇರುಗಳು ಸುಲಲಿತವಾಗಿ ಬೆಳೆದು ಮರಕ್ಕೆ ನೀರಿನ ಪೂರೈಕೆ ಮಾಡುತ್ತಿರುತ್ತವೆ.
ಹೆಚ್ಚು ನೀರು ಯಾಕೆ ಬೇಕು:
- ತೆಂಗಿನ ಮರ ವರ್ಷದ 12 ತಿಂಗಳಲ್ಲೂ ಹೂ ಗೊಂಚಲು ಬಿಡುವ ಸಸ್ಯ.
- ಪ್ರತೀ ಹೂ ಗೊಂಚಲಿನಲ್ಲಿ ಸರಾಸರಿ 25 ಕ್ಕೂ ಹೆಚ್ಚು ಕಾಯಿಯಾಗುವ ಮಿಡಿಗಳು ಇರುತ್ತವೆ.
- ನೀರಿನ ಲಭ್ಯತೆ ಧಾರಾಳ ಇದ್ದಾಗ ಅದರಲ್ಲಿ ಹೆಚ್ಚಿನವು ಕಾಯಿ ಕಚ್ಚಿ ಕೊಳ್ಳುತ್ತವೆ. ಕಡಿಮೆಯಾಗುವ ಸಮಯದಲ್ಲಿ ಹೆಚ್ಚಿನವು ಉದುರುತ್ತವೆ.
- ಮಳೆಗಾಲ ಪ್ರಾರಂಭದ ಸಮಯ ಮತ್ತು ಮಳೆಗಾಲ ಮುಗಿಯುವವರೆಗಿನ ಅವಧಿಯಲ್ಲಿ ಹೊರ ಬರುವ ಹೂ ಗೊಂಚಲಿನ ಕಾಯಿಗಳು ಹೆಚ್ಚು ಕಾಯಿ ಕಚ್ಚುತ್ತವೆ.
- ಚಳಿಗಾಲದ ನಂತರ ಮೇ ತಿಂಗಳವರೆಗೆ ಬಿಡುವ ಹೂ ಗೊಂಚಲಿನಲ್ಲಿ ಕಾಯಿಗಳು ತುಂಬಾ ಕಡಿಮೆ ಇರುತ್ತವೆ.
- ಎಲ್ಲಿ ಧಾರಾಳ ನೀರಿನ ಲಭ್ಯತೆ ಇರುತ್ತದೆಯೋ ( ಕಾಲುವೆ ನೀರು, ಹರಿ ನೀರು) ಅಲ್ಲಿ ವರ್ಷದ ಎಲ್ಲಾ ತಿಂಗಳುಗಳಲ್ಲಿ ಬರುವ ಹೂ ಗೊಂಚಲುಗಳಲ್ಲಿ ಹೆಚ್ಚು ಕಾಯಿ ಕಚ್ಚಿ ಅಧಿಕ ಫಸಲು ಇರುತ್ತವೆ.
ಅಧಿಕ ಇಳುವರಿ- ನೀರು:
- ತೆಂಗು ಬೆಳೆಯುವ ಕರಾವಳಿಯ ತೀರ ಪ್ರದೇಶಗಳಲ್ಲಿ ಹೆಚ್ಚು ಇಳುವರಿ ದೊರೆಯುತ್ತದೆ.
- ಕಾರಣ ಇಲ್ಲಿ ವಾತಾವರಣದಲ್ಲಿ ತೇವಾಂಶ ಜೊತೆಗೆ ನೀರಿನ ಮಟ್ಟ ತುಂಬಾ ಮೇಲೆ ಇರುತ್ತದೆ. ಮಣ್ಣು ತುಂಬಾ ಸಡಿಲವಾಗಿದ್ದು ಬೇರುಗಳು 5 ಮೀ. ತನಕವೂ ಹಬ್ಬಿರುತ್ತದೆ.
- ತೆಂಗು ಬೆಳೆಯುವ ತಿಪಟೂರು, ಅರಸೀಕೆರೆ, ಚಿತ್ರದುರ್ಗದ ಕೆಲ ಭಾಗಗಳು, ಮಂಡ್ಯ, ಮೈಸೂರುಗಳಲ್ಲಿ ತೆಂಗಿನಲ್ಲಿ ಅಧಿಕ ಇಳುವರಿ ಬರುತ್ತದೆ.
- ಇಲ್ಲಿ ನೀರನ್ನು ಯಥೇಚ್ಚವಾಗಿ ಕೊಡುತ್ತಾರೆ ಮತ್ತು ಮಣ್ಣು ತುಂಬಾ ಸಡಿಲವಾಗಿರುವ ಕಾರಣ ಬೇರಿನ ಬೆಳವಣಿಗೆ ಹೆಚ್ಚು ಇರುತ್ತದೆ.
- ತಮಿಳುನಾಡಿನ ಪೊಲ್ಲಾಚಿ ಊರಿನಲ್ಲಿ ಶೇ.90 ತೆಂಗು ಬೆಳೆಗಾರರು ಹರಿ ನೀರಾವರಿಯಲ್ಲೇ ತೆಂಗು ಸಾಕುವುದು.
- ಇಲ್ಲಿ ದಿನಕ್ಕೆ 10-15 ಲೋಡು ಎಳನೀರು ನೆರೆ ರಾಜ್ಯಗಳಿಗೆ ಹೋಗುತ್ತದೆ.
- ಕರಾವಳಿಯ ಒಳನಾಡು ಮತ್ತು ಇತರ ಪ್ರದೇಶಗಳಲ್ಲಿ ಮಳೆ ಬಂದ ತಕ್ಷಣ ಮಣ್ಣು ಮೆದುವಾಗಿ ಸಡಿಲವಾಗುತ್ತದೆ.
- ಆಗ ಬೇರುಗಳು ಹೆಚ್ಚು ವಿಸ್ತಾರಕ್ಕೆ ಬೆಳೆಯುತ್ತದೆ. ಹೆಚ್ಚು ಪೋಷಕಗಳನ್ನು ಹೀರಿಕೊಳ್ಳುತ್ತವೆ.
- ಆ ಸಮಯದಲ್ಲಿ ಮಾತ್ರ ಹೂ ಗೊಂಚಲಿನ ಮಿಡಿಗಳು ಹೆಚ್ಚಿನ ಪ್ರಮಾಣದಲ್ಲಿ ಕಚ್ಚಿಕೊಳ್ಳುತ್ತವೆ.
- ಎಲ್ಲೆಲ್ಲಿ ನೆಲದ ಮಣ್ಣು ತುಂಬಾ ಸಡಿಲವಾಗಿ ಇರುತ್ತದೆಯೊ, ಉದಾಹರಣೆಗೆ – ಭತ್ತದ ಬೇಸಾಯ ಮಾಡುವ ಹೊಲದ ಬದಿ ಮತ್ತು ಹೊಳೆ ಹಳ್ಳದ ಬದಿಯಲ್ಲಿ, ಸಮುದ್ರ ತೀರದಲ್ಲಿ ತೆಂಗಿನಲ್ಲಿ ವರ್ಷಪೂರ್ತಿ ಹೂ ಗೊಂಚಲಿನಲ್ಲಿ ಕಾಯಿಗಳಿರುತ್ತವೆ.
ಹೇಗೆ ನೀರು ಕೊಡಬೇಕು:
- ನೀರಾವರಿ ಮಾಡುವಾಗ ಬುಡ ಭಾಗ ಒಂದೇ ಕಡೆ ಒದ್ದೆಯಾಗುವಂತೆ ಕೊಡುವುದು ಹೆಚ್ಚಿನ ಕಡೆಯಲ್ಲಿ ಹೊಂದಿಕೆಯಾಗಲಾರದು.
- ಎಷ್ಟು ವಿಸ್ತಾರದ ತನಕ ಬೇರು ಹಬ್ಬಿದೆಯೋ ಆ ತನಕದ ಮಣ್ಣು ತೇವವಾಗಿರುವಂತೆ ನೀರುಣಿಸುವ ವ್ಯವಸ್ಥೆ ಬೇಕು.
- ಆಗ ಬೇರುಗಳು ಹೆಚ್ಚು ಹೆಚ್ಚು ಆಹಾರವನ್ನು ಹೀರಿಕೊಳ್ಳುತ್ತವೆ.
- ಬಬ್ಲರ್ ಮೂಲಕ ನೀರುಣಿಸುವುದು ಉತ್ತಮ.
- ಹನಿ ನೀರಾವರಿಯಲ್ಲಿ ಮರಕ್ಕೆ 4-6 ತನಕ ಡ್ರಿಪ್ಪರನ್ನು ಸುತ್ತಲೂ ಹಂಚಿ ಹಾಕಬೇಕು.
- ಮೈಕ್ರೋ ಟ್ಯೂಬ್ ಆಗಿದ್ದಲ್ಲಿ ಮರದ ನಾಲ್ಕೂ ದಿಕ್ಕಿಗೆ ಬೀಳುವಂತೆ ಅಳವಡಿಸಿಕೊಳ್ಳಬೇಕು.
- ಹೀಗೆ ವ್ಯವಸ್ಥೆ ಇದ್ದರೆ, ಕಾಯಿ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಿಕೊಳುತ್ತದೆ.
- ಮೇಲ್ಮಣ್ಣು ಹೆಚ್ಚು ತೇವವಾಗಿರಬೇಕು. ಮೇಲಿನ 1 ಅಡಿ ತನಕದ ಮಣ್ಣಿನಲ್ಲಿ ಆಹಾರ ಹೀರಿಕೊಳ್ಳುವ ಬೇರುಗಳು ಕ್ರಿಯಾತ್ಮಕವಾಗಿರುತ್ತದೆ.
- ಅಲ್ಲಿ ಬೇರುಗಳು ನಿಬಿಡವಾಗಿರುತ್ತದೆ.
- ತೆಂಗಿನ ಮರಕ್ಕೆ ನೆಲದ ಮೇಲುಭಾಗ ಒದ್ದೆಯಾಗುವ ತರಹದ ನೀರಾವರಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು.
- ಅದು ಗರಿಗಳು ಹಬ್ಬಿರುವ ತನಕ ಇರಬೇಕು.
- ತೆಂಗಿನ ಮರದ ಬುಡ ಭಾಗ ಬೇಸಿಗೆಯ ಸಮಯದಲ್ಲಿ ಯಾವುದೇ ಕಾರಣಕ್ಕೆ ಬಿಸಿಲಿಗೆ ತೆರೆದುಕೊಳ್ಳದಂತೆ ಮಾಡಬೇಕು.
- ಸಾವಯವ ತ್ಯಾಜ್ಯಗಳನ್ನು ಹಾಕಿ ತೇವಾಂಶ ಉಳಿಯುವಂತೆ ಮಾಡಬೇಕು.
- ಈ ರೀತಿ ನಿರ್ವಹಣೆ ಮಾಡುವುದರಿಂದ ಮರದಲ್ಲಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಏಕ ಪ್ರಕಾರ ಕಾಯಿ ಕಚ್ಚಿಕೊಳ್ಳುತ್ತದೆ. ಇಳುವರಿ ಹೆಚ್ಚುತ್ತದೆ.
ಒಂದು ತೆಂಗಿನ ಮರ ವರ್ಷಕ್ಕೆ ಕನಿಷ್ಟ 200 ಕಾಯಿಯ ಇಳುವರಿ ಕೊಡುವಷ್ಟು ಸಮರ್ಥ ಇರುತ್ತದೆ. ಇದು ನಮ್ಮ ಬೇಸಾಯ ಕ್ರಮದಲ್ಲಿ ಇದೆ.