ತೆಂಗಿನ ಮರಕ್ಕೆ ನೀರು ಹೆಚ್ಚು ಕೊಟ್ಟರೆ ಉತ್ತಮ !

healthy coconut palms

ಕೆಲವು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಬಿಡುವ ಹೂ ಗೊಂಚಲಿನಲ್ಲಿ ಕಾಯಿಯೇ ಇರುವುದಿಲ್ಲ. ಒಂದೆರಡು ಎಳನೀರು ತೆಗೆಯಲೂ ಸಿಗುವುದಿಲ್ಲ. ಸಿಕ್ಕ ಎಳನೀರಿನಲ್ಲಿ ಬೊಗಸೆಯಷ್ಟೂ ನೀರು ಇರುವುದಿಲ್ಲ. ಇದಕ್ಕೆ ಕಾರಣ ಆ ಸಮಯದಲ್ಲಿ ಮರಕ್ಕೆ ಸಾಕಷ್ಟು ತೇವಾಂಶ ಲಭ್ಯವಾಗದೇ ಇರುವುದು !

 • ಕೆಲವು ಪ್ರದೇಶಗಳಲ್ಲಿ ಬೇಸಿಗೆ, ಮಳೆಗಾಲ ಎರಡೂ ಕಾಲಾವಧಿಯಲ್ಲೂ ಏಕ ಪ್ರಕಾರ ಕಾಯಿ ಇರುತ್ತದೆ.
 • ಆದುದರಿಂದಲೇ ಅಂಗಡಿಗಳಲ್ಲಿ ಬೇಸಿಗೆಯಲ್ಲಿ ಎಳನೀರು ಕುಡಿಯಲು ಸಿಗುತ್ತಿದೆ.

healthy leaf indicates its yield character

 • ಒಂದು ತೆಂಗಿನ ಮರಕ್ಕೆ ದಿನಕ್ಕೆ 30-40  ಲೀ. ನೀರು ಸಾಕು ಎನ್ನುತ್ತಾರೆ.
 • ಆದರೆ ಅಷ್ಟು ನೀರು ಸಾಕಾಗುವುದಿಲ್ಲ. ದಿನಕ್ಕೆ ಕನಿಷ್ಟ ಪಕ್ಷ  100 ಲೀ. ನಷ್ಟು ನೀರು ಬೇಕಾಗುತ್ತದೆ.
 • ನೀರು ಕೊಡುವ ಉದ್ದೇಶ ತೆಂಗಿನ ಮರದ ಸುಮಾರು 3-4 ಮೀ ಸುತ್ತಳತೆಯವರೆಗಿನ ಮಣ್ಣು ತೇವವಾಗಿ ಸಡಿಲವಾಗಿರಲು.
 • ತೇವಾಂಶ ಇದ್ದರೆ ಮಾತ್ರ ಮಣ್ಣು ಸಡಿಲವಾಗಿರುತ್ತದೆ. ಮಣ್ಣು ಸಡಿಲ ಇದ್ದರೆ ಮಾತ್ರ ಬೇರುಗಳು ಸುಲಲಿತವಾಗಿ ಬೆಳೆದು ಮರಕ್ಕೆ ನೀರಿನ ಪೂರೈಕೆ ಮಾಡುತ್ತಿರುತ್ತವೆ.

ಹೆಚ್ಚು ನೀರು ಯಾಕೆ ಬೇಕು:

 • ತೆಂಗಿನ ಮರ ವರ್ಷದ 12 ತಿಂಗಳಲ್ಲೂ  ಹೂ ಗೊಂಚಲು ಬಿಡುವ ಸಸ್ಯ.
 • ಪ್ರತೀ ಹೂ ಗೊಂಚಲಿನಲ್ಲಿ ಸರಾಸರಿ 25 ಕ್ಕೂ ಹೆಚ್ಚು ಕಾಯಿಯಾಗುವ ಮಿಡಿಗಳು ಇರುತ್ತವೆ.
 • ನೀರಿನ ಲಭ್ಯತೆ ಧಾರಾಳ ಇದ್ದಾಗ ಅದರಲ್ಲಿ ಹೆಚ್ಚಿನವು ಕಾಯಿ ಕಚ್ಚಿ ಕೊಳ್ಳುತ್ತವೆ. ಕಡಿಮೆಯಾಗುವ ಸಮಯದಲ್ಲಿ ಹೆಚ್ಚಿನವು ಉದುರುತ್ತವೆ.

inter crops make garden cool temperature

 • ಮಳೆಗಾಲ ಪ್ರಾರಂಭದ ಸಮಯ ಮತ್ತು ಮಳೆಗಾಲ ಮುಗಿಯುವವರೆಗಿನ ಅವಧಿಯಲ್ಲಿ  ಹೊರ ಬರುವ ಹೂ ಗೊಂಚಲಿನ ಕಾಯಿಗಳು ಹೆಚ್ಚು ಕಾಯಿ ಕಚ್ಚುತ್ತವೆ.
 • ಚಳಿಗಾಲದ ನಂತರ ಮೇ ತಿಂಗಳವರೆಗೆ ಬಿಡುವ ಹೂ ಗೊಂಚಲಿನಲ್ಲಿ  ಕಾಯಿಗಳು ತುಂಬಾ ಕಡಿಮೆ ಇರುತ್ತವೆ.
 • ಎಲ್ಲಿ ಧಾರಾಳ ನೀರಿನ ಲಭ್ಯತೆ   ಇರುತ್ತದೆಯೋ ( ಕಾಲುವೆ ನೀರು, ಹರಿ ನೀರು) ಅಲ್ಲಿ  ವರ್ಷದ ಎಲ್ಲಾ ತಿಂಗಳುಗಳಲ್ಲಿ ಬರುವ ಹೂ ಗೊಂಚಲುಗಳಲ್ಲಿ ಹೆಚ್ಚು ಕಾಯಿ ಕಚ್ಚಿ ಅಧಿಕ ಫಸಲು  ಇರುತ್ತವೆ.

ಅಧಿಕ ಇಳುವರಿ- ನೀರು:

 • ತೆಂಗು ಬೆಳೆಯುವ ಕರಾವಳಿಯ  ತೀರ ಪ್ರದೇಶಗಳಲ್ಲಿ ಹೆಚ್ಚು ಇಳುವರಿ ದೊರೆಯುತ್ತದೆ.
 • ಕಾರಣ ಇಲ್ಲಿ ವಾತಾವರಣದಲ್ಲಿ ತೇವಾಂಶ ಜೊತೆಗೆ ನೀರಿನ ಮಟ್ಟ ತುಂಬಾ ಮೇಲೆ ಇರುತ್ತದೆ. ಮಣ್ಣು ತುಂಬಾ ಸಡಿಲವಾಗಿದ್ದು ಬೇರುಗಳು 5 ಮೀ. ತನಕವೂ ಹಬ್ಬಿರುತ್ತದೆ.
 • ತೆಂಗು ಬೆಳೆಯುವ ತಿಪಟೂರು, ಅರಸೀಕೆರೆ, ಚಿತ್ರದುರ್ಗದ ಕೆಲ ಭಾಗಗಳು, ಮಂಡ್ಯ, ಮೈಸೂರುಗಳಲ್ಲಿ  ತೆಂಗಿನಲ್ಲಿ ಅಧಿಕ ಇಳುವರಿ ಬರುತ್ತದೆ.
 • ಇಲ್ಲಿ ನೀರನ್ನು ಯಥೇಚ್ಚವಾಗಿ ಕೊಡುತ್ತಾರೆ ಮತ್ತು ಮಣ್ಣು ತುಂಬಾ ಸಡಿಲವಾಗಿರುವ ಕಾರಣ  ಬೇರಿನ ಬೆಳವಣಿಗೆ ಹೆಚ್ಚು ಇರುತ್ತದೆ.
 • ತಮಿಳುನಾಡಿನ ಪೊಲ್ಲಾಚಿ ಊರಿನಲ್ಲಿ ಶೇ.90  ತೆಂಗು ಬೆಳೆಗಾರರು ಹರಿ ನೀರಾವರಿಯಲ್ಲೇ ತೆಂಗು ಸಾಕುವುದು.
 • ಇಲ್ಲಿ ದಿನಕ್ಕೆ  10-15  ಲೋಡು ಎಳನೀರು ನೆರೆ ರಾಜ್ಯಗಳಿಗೆ ಹೋಗುತ್ತದೆ.

healthy coconut palm

 • ಕರಾವಳಿಯ ಒಳನಾಡು ಮತ್ತು ಇತರ ಪ್ರದೇಶಗಳಲ್ಲಿ  ಮಳೆ ಬಂದ ತಕ್ಷಣ ಮಣ್ಣು ಮೆದುವಾಗಿ ಸಡಿಲವಾಗುತ್ತದೆ.
 • ಆಗ ಬೇರುಗಳು ಹೆಚ್ಚು ವಿಸ್ತಾರಕ್ಕೆ  ಬೆಳೆಯುತ್ತದೆ. ಹೆಚ್ಚು ಪೋಷಕಗಳನ್ನು ಹೀರಿಕೊಳ್ಳುತ್ತವೆ.
 • ಆ ಸಮಯದಲ್ಲಿ  ಮಾತ್ರ  ಹೂ ಗೊಂಚಲಿನ ಮಿಡಿಗಳು ಹೆಚ್ಚಿನ ಪ್ರಮಾಣದಲ್ಲಿ ಕಚ್ಚಿಕೊಳ್ಳುತ್ತವೆ.
 • ಎಲ್ಲೆಲ್ಲಿ ನೆಲದ ಮಣ್ಣು ತುಂಬಾ ಸಡಿಲವಾಗಿ ಇರುತ್ತದೆಯೊ,  ಉದಾಹರಣೆಗೆ – ಭತ್ತದ ಬೇಸಾಯ ಮಾಡುವ ಹೊಲದ ಬದಿ ಮತ್ತು ಹೊಳೆ ಹಳ್ಳದ ಬದಿಯಲ್ಲಿ,  ಸಮುದ್ರ ತೀರದಲ್ಲಿ ತೆಂಗಿನಲ್ಲಿ ವರ್ಷಪೂರ್ತಿ ಹೂ ಗೊಂಚಲಿನಲ್ಲಿ ಕಾಯಿಗಳಿರುತ್ತವೆ.

ಹೇಗೆ ನೀರು ಕೊಡಬೇಕು:

 • ನೀರಾವರಿ ಮಾಡುವಾಗ ಬುಡ ಭಾಗ ಒಂದೇ ಕಡೆ ಒದ್ದೆಯಾಗುವಂತೆ  ಕೊಡುವುದು  ಹೆಚ್ಚಿನ ಕಡೆಯಲ್ಲಿ ಹೊಂದಿಕೆಯಾಗಲಾರದು.
 • ಎಷ್ಟು ವಿಸ್ತಾರದ ತನಕ ಬೇರು ಹಬ್ಬಿದೆಯೋ ಆ ತನಕದ ಮಣ್ಣು ತೇವವಾಗಿರುವಂತೆ  ನೀರುಣಿಸುವ ವ್ಯವಸ್ಥೆ  ಬೇಕು.
 • ಆಗ ಬೇರುಗಳು ಹೆಚ್ಚು ಹೆಚ್ಚು ಆಹಾರವನ್ನು ಹೀರಿಕೊಳ್ಳುತ್ತವೆ.
 • ಬಬ್ಲರ್ ಮೂಲಕ ನೀರುಣಿಸುವುದು ಉತ್ತಮ.
 • ಹನಿ ನೀರಾವರಿಯಲ್ಲಿ ಮರಕ್ಕೆ 4-6 ತನಕ ಡ್ರಿಪ್ಪರನ್ನು ಸುತ್ತಲೂ ಹಂಚಿ ಹಾಕಬೇಕು.
 • ಮೈಕ್ರೋ  ಟ್ಯೂಬ್ ಆಗಿದ್ದಲ್ಲಿ ಮರದ ನಾಲ್ಕೂ  ದಿಕ್ಕಿಗೆ ಬೀಳುವಂತೆ  ಅಳವಡಿಸಿಕೊಳ್ಳಬೇಕು.
 • ಹೀಗೆ ವ್ಯವಸ್ಥೆ ಇದ್ದರೆ, ಕಾಯಿ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಿಕೊಳುತ್ತದೆ.
 • ಮೇಲ್ಮಣ್ಣು ಹೆಚ್ಚು ತೇವವಾಗಿರಬೇಕು. ಮೇಲಿನ 1 ಅಡಿ ತನಕದ ಮಣ್ಣಿನಲ್ಲಿ ಆಹಾರ ಹೀರಿಕೊಳ್ಳುವ ಬೇರುಗಳು ಕ್ರಿಯಾತ್ಮಕವಾಗಿರುತ್ತದೆ.
 • ಅಲ್ಲಿ ಬೇರುಗಳು ನಿಬಿಡವಾಗಿರುತ್ತದೆ.
 • ತೆಂಗಿನ ಮರಕ್ಕೆ ನೆಲದ ಮೇಲುಭಾಗ  ಒದ್ದೆಯಾಗುವ ತರಹದ ನೀರಾವರಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು.
 • ಅದು ಗರಿಗಳು  ಹಬ್ಬಿರುವ ತನಕ ಇರಬೇಕು.
 • ತೆಂಗಿನ ಮರದ ಬುಡ ಭಾಗ ಬೇಸಿಗೆಯ ಸಮಯದಲ್ಲಿ ಯಾವುದೇ ಕಾರಣಕ್ಕೆ  ಬಿಸಿಲಿಗೆ ತೆರೆದುಕೊಳ್ಳದಂತೆ ಮಾಡಬೇಕು.
 • ಸಾವಯವ ತ್ಯಾಜ್ಯಗಳನ್ನು ಹಾಕಿ  ತೇವಾಂಶ ಉಳಿಯುವಂತೆ  ಮಾಡಬೇಕು.
 • ಈ ರೀತಿ ನಿರ್ವಹಣೆ ಮಾಡುವುದರಿಂದ ಮರದಲ್ಲಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಏಕ ಪ್ರಕಾರ ಕಾಯಿ ಕಚ್ಚಿಕೊಳ್ಳುತ್ತದೆ. ಇಳುವರಿ ಹೆಚ್ಚುತ್ತದೆ.

ಒಂದು ತೆಂಗಿನ ಮರ ವರ್ಷಕ್ಕೆ  ಕನಿಷ್ಟ 200 ಕಾಯಿಯ ಇಳುವರಿ ಕೊಡುವಷ್ಟು ಸಮರ್ಥ ಇರುತ್ತದೆ. ಇದು ನಮ್ಮ ಬೇಸಾಯ  ಕ್ರಮದಲ್ಲಿ  ಇದೆ.

Leave a Reply

Your email address will not be published. Required fields are marked *

error: Content is protected !!