ಮಡಹಾಗಲ ಎಂಬುದು ನಮ್ಮ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹಾಗೆಯೇ ಅಂಡಮಾನ್ ನಿಕೋಬಾರ್ ಮುಂತಾದ ಕಡೆ ಇದು ವೈವಿಧ್ಯಮಯ ತಳಿಗಳಾಗಿ ಬೆಳೆಯಲ್ಪಡುತ್ತವೆ. ಪ್ರಾದೇಶಿಕವಾಗಿ ಇದರಲ್ಲಿ ತಳಿಗಳು ಭಿನ್ನವಾಗಿದ್ದು, ಈಶಾನ್ಯ ರಾಜ್ಯಗಳಾದ ಅಸ್ಸಾಂ , ತ್ರಿಪುರಾ, ಒಡಿಸ್ಸಾ, ಪಶ್ಚಿಮ ಬಂಗಾಳ ಮುಂತಾದ ಕಡೆ ಇದರ ವಾಣಿಜ್ಯ ಬೇಸಾಯ ನಡೆಯುತ್ತದೆ. ಇಲ್ಲಿ ಸ್ವಲ್ಪ ದೊಡ್ದ ಗಾತ್ರದ ಅಧಿಕ ಇಳುವರಿಯ ತಳಿಗಳೂ ಇವೆ.
- ಕಾಡುಹೀರೆ, ಅಥವಾ ಅಥವಾ ಕಾಡು ಹಾಗಲ ಎಂದು ಸ್ಥಳೀಯ ಜನ ಕರೆಯುವ ಇದರ ಹೆಸರು ಮಡ ಹಾಗಲ.
- ಇದಕ್ಕೆ ಕಹಿ ಗುಣ ಇಲ್ಲ. ಇದು ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಬೆಳೆಯುತ್ತಿದ್ದು, ಅಲ್ಲಲ್ಲಿ ಸ್ಥಳೀಯ ತಳಿಗಳು ಬೇರೆ ಬೇರೆ ಇರುತ್ತದೆ.
- ಅಧಿಕ ಇಳುವರಿ ಮತ್ತು ದೊಡ್ಡ ಕಾಯಿ ಬಿಡುವ ತಳಿಯೊಂದನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಭುವನೇಶ್ವರದಲ್ಲಿರುವ ಪ್ರಾದೇಶಿಕ ಸಂಶೋಧನಾ ಸಂಸ್ಥೆಯು ಆಯ್ಕೆ ಮಾಡಿದೆ.
- ಅದನ್ನು ಕರ್ನಾಟಕದ ಮಡಿಕೇರಿಯ ಚೆಟ್ಟಳ್ಳಿಯಲ್ಲಿರುವ ತೋಟಗಾರಿಕಾ ಬೆಳೆಗಳ ಪ್ರಾತ್ಯಕ್ಷಿಕಾ ಕೇಂದ್ರದ ಮೂಲಕ ಬೆಳೆಸುವ ರೈತರಿಗೆ ಸಸ್ಯಮೂಲ ಕೊಡಲಾಗಿದೆ.
- ಇಲ್ಲಿಂದ ಸಸ್ಯ ಮೂಲವನ್ನು ತಂದು ಹಲವಾರು ಜನ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಬೆಳೆ ಬೆಳೆಸಿದ್ದಾರೆ.
- ಆದರೆ ತೀರ್ಥಹಳ್ಳಿ ತಾಲೂಕು ಕುಪ್ಪಳ್ಳಿ ಎಂಬ ಊರಿನಲ್ಲಿ ಶ್ರೀಯುತ ಶಂಕರ ಮೂರ್ತಿ ಇವರು ದೊಡ್ದ ಪ್ರಮಾಣದಲ್ಲಿ (1/2 ಎಕ್ರೆ) ಇದನ್ನು ಬೆಳೆಸಿ ಅದರಲ್ಲಿ ಯಶಕಂಡಿದ್ದಾರೆ.
- ಇವರ ಬೆಳೆ ವಿಧಾನದ ಬಗ್ಗೆ ಈ ಲೇಖನ.
ಇದರ ವಿಶೇಷತೆ ಏನು:
- ನಮ್ಮ ಕಾಡುಗಳಲ್ಲಿ ಬೆಳೆಯುವ ತಳಿ ಮಳೆಗಾಲದಲ್ಲಿ ಬೆಳೆಯುವ ಬಳ್ಳಿ. ಮಳೆಗಾಲ ಪ್ರಾರಂಭವಾಗುವಾಗ ಗಡ್ಡೆ ಮೊಳೆತು ಬಳ್ಳಿ ಬೆಳೆದು ಮಳೆಗಾಲ ಮುಗಿಯುವ ತನಕ ಕಾಯಿ ಬಿಡುತ್ತದೆ.
- ಇದರಲ್ಲಿ ಗಂಡು ತಳಿ ಮತ್ತು ಹೆಣ್ಣು ತಳಿಗಳಿದ್ದು, ಇವುಗಳ ಒಳಗೆ ಪರಾಗದಾನಿಗಳು ಪರಾಗ ವರ್ಗಾವಣೆ ಮಾಡಿ ಕಾಯಿ ಕಚ್ಚುವಂತೆ ಮಾಡುತ್ತವೆ.
- ಒಂದು ವೇಳೆ ಗಂಡು ಅಥವಾ ಹೆಣ್ಣು ಒಂದೇ ಇದ್ದರೆ ಅದು ಕಾಯಿ ಕಚ್ಚಲಾರದು.
- ಕಾಡು ತಳಿಗಳ ಕಾಯಿಯ ಗಾತ್ರ ಸ್ವಲ್ಪ ಸಣ್ಣದಿರುತ್ತದೆ.
- ಹೂವಿನ ಬಣ್ಣ ಹಳದಿ ಇರುತ್ತದೆ.
- ಅಪರೂಪದಲ್ಲಿ ಪರಾಗ ಸ್ಪರ್ಶ ಕೀಟಗಳು ಬರುವುದುಂಟು
- ಶಂಕರ ಮೂರ್ತಿಯವರು ಬೆಳೆದಿರುವ ತಳಿಯ ಹೆಸರು ಅರ್ಕಾ ನೀಲಾಂಚಲ್ ಎಂದು.
- ಇದು ಸಹ ಗಂಡು ಹೆಣ್ಣು ಬೇರೆ ಬೇರೆಯಾಗಿರುತ್ತದೆ.
- ಗಂಡು ತಳಿಯನ್ನು ಪ್ರತ್ಯೇಕವಾಗಿ ಬೆಳೆಸಿ, ಹೆಣ್ಣು ತಳಿಯ ಹೂವು ಆಗುವಾಗ ಗಂಡು ತಳಿಯ ಹೂವಿನ ಪರಾಗವನ್ನು ತಗಲಿಸಬೇಕು.
- ಎರಡೂ ಏಕಕಾಲದಲ್ಲಿ ಹೂ ಬಿಡುತ್ತದೆ.
ಸಸ್ಯಾಭಿವೃದ್ದಿ:
- ಮಡಹಾಗಲದ ಸಸ್ಯಾಭಿವೃದ್ದಿಯನ್ನು ಬೀಜಗಳ ಮೂಲಕ ಮಾಡಬಹುದು.
- ಅಲ್ಲಿ ಗಂಡೇ ಆಗುವ, ಅಥವಾ ಹೆಣ್ಣೇ ಆಗುವ ಸಂಭವನೀಯತೆ ಇದೆ.
- ಕೆಲವೊಮ್ಮೆ ಎರಡೂ ಆಗಬಹುದು.
- ಆ ಸಮಸ್ಯೆಯನ್ನು ನಿವಾರಿಸಲು ಭಾರತೀಯಾ ತೋಟಗಾರಿಕಾ ಸಂಶೋಧನಾ ಸಂಸ್ಥೆ ಗಂಡು ಮತ್ತು ಹೆಣ್ಣು ಎರಡನ್ನೂ ಪ್ರತ್ಯೇಕವಾಗಿ ಬೆಳೆಸಿ ಅದರ ಗಡ್ಡೆಯ ಮೂಲಕ ಗಂಡು ಮತ್ತು ಹೆಣ್ಣು ಎರಡರ ಸಸಿಯನ್ನೂ ರೈತರಿಗೆ ಒದಗಿಸುತ್ತದೆ.
- ಗಡ್ಡೆ ಆದ ಕಾರಣ ಗಡ್ಡೆಯಲ್ಲಿ ಮೊಳಕೆ ಭಾಗಗಳು ಇರುವ ಕಾರಣ ಗಡ್ಡೆ ತುಂಡು ಮಾಡಿದಲ್ಲಿ ಮೊಳಕೆ ಬರುತ್ತದೆ.
- ದೊಡ್ಡ ಬುಡದಲ್ಲಿ 20-25 ಸಂಖ್ಯೆಯಲ್ಲಿ( ಕೆಸುವಿನ ಗಡ್ಡೆ ತರಹ) ಗಡ್ಡೆ ಇರುತ್ತದೆ.
- ಪ್ರತೀ ಗಡ್ಡೇ 60-80 ಗ್ರಾಂ ತನಕ ತೂಕ ಇರುತ್ತದೆ.
- ಗಡ್ಡೆ ದೊಡ್ಡದಿದ್ದರೆ ಅದನ್ನು ತುಂಡು ಮಾಡಿ ಹೆಚ್ಚು ಸಸಿ ಮಾಡಬಹುದು.
- ಇದನ್ನು ಬಳ್ಳಿ ತುಂಡುಗಳಿಗೆ ಬೇರು ಬರಿಸಿಯೂ ಸಸಿ ಮಾಡಲಿಕ್ಕಾಗುತ್ತದೆ.
- ಆದರೆ ಇಳುವರಿಗೆ ಇದು ಅಷ್ಟು ಸೂಕ್ತವಲ್ಲ.
ಲಾಭದಾಯಕತೆ;
- ನೀರಾವರಿ ಮತ್ತು ಬೆಳಕನ್ನು ಅವಲಂಭಿಸಿ ಬಳ್ಳಿ ತುಂಬಾ ವಿಶಾಲವಾಗಿ ಹಬ್ಬುತ್ತದೆ.
- ಬಳ್ಳಿ ಎಷ್ಟು ವಿಸ್ತಾರವಾಗಿ ಹಬ್ಬುತ್ತದೆಯೋ ಅಷ್ಟು ಅದರಲ್ಲಿ ಹೂವಾಗುತ್ತದೆ.
- ಹೆಣ್ಣು ಗಂಡು ಬೇರೆ ಬೇರೆಯಾದ ಕಾರಣ ಹೆಣ್ಣು ಗಿಡದಲ್ಲಿ ಬರುವ ಹೂವುಗಳೆಲ್ಲಾ ಫಲಿತಗೊಳ್ಳಲು ಶಕ್ಯವಾದ ಕಾಯಿಗಳೇ ಆಗಿರುತ್ತವೆ.
- ಸಾಕಷ್ಟು ಹೆಣ್ಣು ಹೂವುಗಳನ್ನು ಬಿಡುತ್ತದೆ.
- ಒಂದು ಕಾಯಿ ಸರಾಸರಿ 100 ಗ್ರಾಂ ತೂಗುತ್ತದೆ.
- ಕೃತಕ ಪರಾಗಸ್ಪರ್ಶ ಮಾಡಿ ಕಾಯಿ ಕಚ್ಚಿಸುವ ಕಾರಣ ಸಸ್ಯ ಬೆಳವಣಿಗೆ ಮತ್ತು ನಮ್ಮ ಅನುಕೂಲ ಹೊಂದಿ ಪರಾಗಸ್ಪರ್ಶ ಮಾಡಬಹುದು.
- ಪರಾಗ ಸ್ಪರ್ಶ ಕ್ರಿಯೆ ಸರಳವಾಗಿದ್ದು, ಬೆಳಗ್ಗೆ 6-10 ಗಂಟೆ ಒಳಗೆ ಗಂಡೂ ಹೂವಿನ ಪರಾಗ ಕಣಗಳನ್ನು ಸಣ್ಣ ಕಡಿ ಮೂಲಕ ಹೆಣ್ಣು ಹೂವಿನ ಶಲಾಕಾಗ್ರಕ್ಕೆ ತಾಗಿಸುವುದು ಮಾತ್ರ.
- ಒಂದು ಗಿಡದಲ್ಲಿ ದಿನಕ್ಕೆ ಕವಲು ಬಳ್ಳಿಗಳೂ ಸೇರಿದಂತೆ ಸರಾಸರಿ 3-4 ಹೂವು ಆಗುತ್ತದೆ.
- ಅದಕ್ಕನುಗುಣವಾಗಿ ಲೆಕ್ಕಾಚಾರ ಹಾಕಬಹುದು.
- ಈ ಕಾಯಿಗಳಿಗೆ ಸರಾಸರಿ ಕಿಲೋ 200 ರೂ ತನಕ ಬೆಲೆ ಇದೆ.
- ಕೆಲವು ವಿಶೇಷ ದಿನಗಳಲ್ಲಿ ಹೆಚ್ಚು ಇರುತ್ತದೆ. ಗಿಡಕ್ಕೆ ಸರಾಸರಿ 2-3 ಕಿಲೋ ಇಳುವರಿ ಪಡೆಯಬಹುದು.
ಹೇಗೆ ಬೆಳೆಯುವುದು?
- ಸಸಿಗಳನ್ನು ತಂದು ಏರು ಮಡಿಯಲ್ಲಿ ನಾಟಿ ಮಾಡಿ, ಅದಕ್ಕೆ ಕಳೆ ಬಾರದಂತೆ ತೇವಾಂಶ ಆರದಂತೆ ಮಲ್ಚಿಂಗ್ ಶೀಟನ್ನು ಹಾಕಬೇಕು.
- ನೀರಾವರಿಗೆ ಡ್ರಿಪ್ (ಇನ್ ಲೈನ್) ಅಳವಡಿಸುವುದು ಉತ್ತಮ.
- ಮಡಿಗೆ ಗರಿಷ್ಟ ಪ್ರಮಾಣದಲ್ಲಿ ಸಾವಯವ ಗೊಬ್ಬರ ಹಾಕಿಯೇ ಪೂರ್ವ ಸಿದ್ದತೆ ಮಾಡಿಕೊಳ್ಳಬೇಕು.
- ಇದಲ್ಲದೆ ಮತ್ತೆ ಬೇಕಿದ್ದರೆ ಮಾತ್ರ ರಸ ಗೊಬ್ಬರಗಳನ್ನು ಕೊಡಬೇಕು.
- ಸಾಲಿನಿಂದ ಸಾಲಿಗೆ 6 ಅಡಿ ಅಂತರವನ್ನು ಇಟ್ಟು ಬೆಳೆಸಬೇಕು. ಗಿಡದಿಂದ ಗಿಡಕ್ಕೆ 3 ಅಡಿ ಇರಬೇಕು. ಚಪ್ಪರ ಬೇಕಾಗಿಲ್ಲ.
- ಕಬ್ಬಿಣದ ಗೂಟ ಹಾಕಿ ದ್ರಾಕ್ಷಿ ಬಳ್ಳಿ ಹಬ್ಬಿಸಿದಂತೆ ಟ್ರೆಲ್ಲಿಸ್ ಮಾದರಿಯಲ್ಲಿ ಬೆಳೆಸುವುದು ಮಿತವ್ಯಯದ ವಿಧಾನ.
- ಬಳ್ಳಿ ಮೇಲೆ ಏರಲು ನೈಲಾನ್ ಬಲೆಯನ್ನು ಗೂಟಗಳಿಗೆ ಹೆಣೆದು ಬಳ್ಳಿ ಹಬ್ಬಲು ಅನುಕೂಲಮಾಡಿಕೊಡಬೇಕು.
- ಬಳ್ಳಿ ತುದಿ ತಲುಪಿದ ನಂತರ ವಿರುದ್ಧ ಭಾಗಕ್ಕೆ ಇಳಿ ಬಿಟ್ಟರೆ ಆಗುತ್ತದೆ.
- ಇದು ತುಂಬಾ ಅಗ್ಗದ ವಿಧಾನ. ಪರಾಗ ಸ್ಪರ್ಶ ಮಾಡಲು ಇರುವ ಕಾರಣ ಟ್ರೆಲ್ಲಿಸ್ ಎತ್ತರ 6-6.5 ಅಡಿಗೆ ಮಿತಿಗೊಳಿಸಬೇಕು.
ಕೀಟ ರೋಗ ಸಮಸ್ಯೆಗಳು;
- ಹಾಗಲ, ಹೀರೇ ಕಾಯಿಗೆ ಬರುವ ಎಲ್ಲಾ ನಮೂನೆಯ ಕೀಟಗಳೂ ಇದಕ್ಕೂ ಇದೆ.
- ಅದಕ್ಕೆ ಬೇಕಾದ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕು.
- ಬೇಸಿಗೆಯ ಬೆಳೆಯಾದ ಕಾರಣ ರೋಗದ ದೊಡ್ಡ ಸಮಸ್ಯೆ ಇರುವುದಿಲ್ಲ.
ಮಡಹಾಗಲ ಆರೋಗ್ಯಕ್ಕೆ ಅತೀ ಉತ್ತಮ ತರಕಾರಿಯಾಗಿದ್ದು, ಇದಕ್ಕೆ ಈಗ ಜಿ ಎಸ್ ಬಿ ಸಮುದಾಯದವರು ಮಾತ್ರ ದೊಡ್ಡ ಗ್ರಾಹಕರಾಗಿದ್ದಾರೆ. ಇವರ ಅವಶ್ಯಕತೆಯನ್ನು ಪೂರೈಸುವಷ್ಟು ಉತ್ಪಾದನೆ ಇಲ್ಲ. ಇತರ ಸಮುದಾಯಗಳೂ ಇದರ ಆರೋಗ್ಯ ಮಹತ್ವವನ್ನು ಅರಿತು ಬಳಕೆ ಮಾಡಲು ಪ್ರಾರಂಭಿಸಿದ್ದಾರೆ. ಆದ ಕಾರಣ ಇದಕ್ಕೆ ಇನ್ನೂ ಬೇಡಿಕೆ ಹೆಚ್ಚಲಿದೆ.
ರೈತರ ಸಂಪರ್ಕಕ್ಕಾಗಿ : 6362013671
end of the article:—————————————————————–
search words: Spine gourd # Teasle gourd# vegetable cultivation# Madahagala kaayi# Teasle cultivation# new variety of Teasele gourd# Shankaramurthi# Kuppalli# Thirthahalli special # Kuppalli special#