ಕರಾವಳಿಯ ಬದನೆ ತಳಿಗಳಲ್ಲಿ ಹೆಸರುವಾಸಿಯಾದ ಮಟ್ಟು ಗುಳ್ಳಕ್ಕೆ ಸರಿಸಾಟಿಯಾದ ಮತ್ತೊಂದು ಗುಳ್ಳ ,ಇದೇ ಉಡುಪಿ ಜಿಲ್ಲೆಯ ಮತ್ತೊಂದೆಡೆಯೂ ಬೆಳೆಯುತ್ತಿದೆ. ಇದರ ಆಕಾರ ಬಣ್ಣ ಎಲ್ಲವೂ ಏಕಪ್ರಕಾರ. ಒಂದೇ ಒಂದು ವ್ಯತ್ಯಾಸ ಎಂದರೆ ಮಟ್ಟು ಗುಳ್ಳಕ್ಕೆ ತೊಟ್ಟಿನಲ್ಲಿ ಮುಳ್ಳು ಇದೆ. ಇದಕ್ಕೆ ಇಲ್ಲ. ಕರಾವಳಿಯ ಜನರ ಬಲು ಅಚ್ಚುಮೆಚ್ಚಿನ ಗುಳ್ಳ ಬದನೆಯ ಆಸೆಯನ್ನು ಪೂರೈಸಿದ ಬದನೆಯಲ್ಲಿ ಈ ಊರಿನ ಬದನೆ ಒಂದು.
- ಕರಾವಳಿಯ ಜನ ಎಲ್ಲೇ ಹೋಗಲಿ ಗುಳ್ಳ ಬದನೆ ಸಿಕ್ಕರೆ ಎಷ್ಟೇ ಬೆಲೆ ಕೊಟ್ಟಾದರೂ ಖರೀದಿ ಮಾಡುತ್ತಾರೆ.
- ಕರಾವಳಿಯವರು ಎಲ್ಲಿಗೇ ಹೋದರೂ ಗುಳ್ಳ ಬದನೆ ಸಿಕ್ಕರೆ ಬಿಡ ಲಾರರು.
- ಇದರ ಪಾಕದ ರುಚಿ ಬೇರೆ ಯಾವ ಬದನೆಗೂ ಬಾರದು.
- ಉಡುಪಿ ಗುಳ್ಳ ಎಂದರೆ ಹೆಸರುವಾಸಿ. ಆದರೆ ಅದರ ಬೆಳೆ ಪ್ರದೇಶ ಒಂದು ಕಾಲದಲ್ಲಿ 200-500 ಎಕ್ರೆ ತನಕ ಇದ್ದುದು ಈಗ 50-100 ಎಕರೆಗೆ ಇಳಿದಿದೆ.
- ವರ್ಷದಿಂದ ವರ್ಷಕ್ಕೆ ಉಡುಪಿ ಗುಳ್ಳ ಬೆಳೆ ಪ್ರದೇಶ ಕಡಿಮೆಯಾಗುತ್ತಿದೆ
- ಇಂತಲ್ಲಿ ಗುಳ್ಳ ಬದನೆ ಬಳಸುವವರಿಗೆ ಹೇರಳವಾಗಿ ಬದನೆ ಲಭ್ಯವಂತಾದುದು ಬೆನಗಲ್ ಗುಳ್ಳದಿಂದಾಗಿ.
ಏನಿದು ಬೆನಗಲ್ ಗುಳ್ಳ:
- ಇದು ಬ್ರಹ್ಮಾವರದ ಸಮೀಪದ ಬೆನಗಲ್ ಸುತ್ತಮುತ್ತಲಿನ ಊರಿನಲ್ಲಿ ಮಾತ್ರ ಬೆಳೆಯುತ್ತಿರುವ ಬದನೆ.
- ಸಾಧಾರಣ ಇದು ಎಲ್ಲಾ ಪ್ರದೇಶಕ್ಕೂ ಹೊಂದಿಕೆಯಾಗುತ್ತದೆ.
- ಮಟ್ಟು ಗುಳ್ಳ ಸಮುದ್ರದ ಕಿನಾರೆಯ ಭಾಗಗಳಲ್ಲಿ ಬೆಳೆಯುತ್ತಿದ್ದರೆ ಇದು ಸ್ವಲ್ಪ ಒಳನಾಡಿನಲ್ಲಿ ಬೆಳೆಯುತ್ತದೆ.
- ಅದು ಮಟ್ಟು, ಕಟಪಾಡಿ ಸುತ್ತಮುತ್ತಲಿನ ಊರುಗಳಲ್ಲಿ ಬೆಳೆಯುತ್ತದೆ.
- ಇದು ಬೆಳೆಸುವುದಾದರೆ ಒಳನಾಡಿನ ಎಲ್ಲಾ ಭಾಗಗಳಲ್ಲೂ ಬೆಳೆಸಬಹುದು.
- ಇದನ್ನು ಮಳೆಗಾಲದ ಹಂಗಾಮಿನಲ್ಲೂ ಬೆಳೆಯುತ್ತಾರೆ.
- ಬೇಸಿಗೆ ಹಂಗಾಮಿನಲ್ಲೂ ಬೆಳೆಯುತ್ತಾರೆ. ಕೊಕ್ಕರ್ಣೆ, ಬೆನಗಲ್ ಮೊಗವೀರ ಪೇಟೆ ಸುತ್ತಮುತ್ತ, ಸ್ವಲ್ಪ ಹೊಲ ಇದ್ದವರು ತಪ್ಪದೇ ಪ್ರತೀ ವರ್ಷ ಬದನೆ ಬೆಳೆ ಬೆಳೆಯುತ್ತಾರೆ.
- ಸುಮಾರು 50-60 ವರ್ಷಗಳಿಂದಲೂ ಈ ಪ್ರದೇಶದಲ್ಲಿ ಗುಳ್ಳ ಬೆಳೆಸುತ್ತಿದ್ದಾರೆ.
- ದೊಡ್ದ ದೊಡ್ಡ ಪ್ರಮಾಣದಲ್ಲಿ ಬೆಳೆ ಬೆಳೆಯುವುದಿಲ್ಲ,
- 20 ಸೆಂಟ್ಸ್ ನಿಂದ ½ ಎಕ್ರೆ ತನಕ ಮಾತ್ರ ಬೆಳೆಯುತ್ತಾರೆ.
- ಹೆಚ್ಚಾಗಿ ಕುಡುಬಿ ಜನಾಂಗದವರು ಇದನ್ನು ತಪ್ಪದೆ ಬೆಳೆಯುತ್ತಾರೆ.
ಕರಾವಳಿಯಲ್ಲಿ ಬಾರೀ ಬೇಡಿಕೆಯ ಬದನೆ ಇದು:
- ಕರಾವಳಿಯ ಎಲ್ಲಾ ಭಾಗಗಳಲ್ಲೂ ಜನ ಬಣ್ಣದ ಬದನೆಯನ್ನು ಹೆಚ್ಚಾಗಿ ಆಯ್ಕೆ ಮಾಡುವುದೇ ಇಲ್ಲ.
- ಇಲ್ಲಿ ಏನಿದ್ದರೂ ಗರಿಷ್ಟ ಬೆಲೆಗೆ ಮಾರಾಟವಾಗುವ ಬದನೆ ಇದ್ದರೆ ಅದು ಗುಳ್ಳ ಮಾತ್ರ.
- ಇದು ಕರಾವಳಿಯಲ್ಲಿ ಮಾತ್ರ ಬೆಳೆಯಲ್ಪಡುವ ಬೆಳೆ ಅಲ್ಲ.
- ಇದನ್ನು ಬೇರೆ ಕಡೆಯೂ ಬೆಳೆಸಬಹುದಾದ ಕಾರಣ ಕರಾವಳಿ ಹೊರತಾಗಿ ಮಲೆನಾಡು, ಭಾಗಗಳಲ್ಲೂ ಇದನ್ನು ಬೆಳೆಯಬಹುದು.
ಕರಾವಳಿಯಲ್ಲಿ ಮಳೆಗಾಲದ ಹಂಗಾಮಿನ ಬೆಳೆಗೆ ಉತ್ತಮ ಬೆಲೆ ಇರುತ್ತದೆ. ಕಿಲೋಗೆ 30-40 ತನಕವೂ ಬೆಲೆ ಇರುತ್ತದೆ. ಎಲ್ಲರೂ ಬೆಳೆದು ಮಾರುಕಟ್ಟೆಗೆ ತರುವಾಗ ಬೆಲೆ ಇಳಿಕೆಯಾಗುತ್ತದೆ. ಎನೇ ಆದರೂ ಇದು ಬೇಡಿಕೆ ಉಳ್ಳ ತರಕಾರಿ. ಯಾವುದೇ ಕಾರಣಕ್ಕೆ ಇಲ್ಲಿಯ ಊರಿನವರು ಬದನೆ ಬೆಳೆ ಬೆಳೆಯದೆ ಬಿಡರು ,ಯಾಕೆಂದರೆ ಅದರಲ್ಲಿ ನಷ್ಟವಾಗುವುದಿಲ್ಲ.
ಬೇಡಿಕೆ:
- ಮಳೆಗಾಲದಲ್ಲಿ ಚೌತಿ, ಅಷ್ಟಮಿ, ನವರಾತ್ರೆ ದೀಪಾವಳಿ ಸಮಯಕ್ಕೆ ಸರಿಯಾಗಿ ಬೆಳೆ ಬರುವಂತೆ ಬೆಳೆದರೆ ಉತ್ತಮ ಬೇಡಿಕೆ.
- ಮಳೆ ಹೆಚ್ಚು ಬಾರದಿದ್ದರೆ ಉತ್ತಮವಾಗಿ ಬೆಳೆ ಬರುತ್ತದೆ.
- ಎರಡನೇ ಸೀಸನ್ ದೀಪಾವಳಿ ಸಮಯಕ್ಕೆ ಕಾಯಿ ದೊರೆಯುವಂತೆ ಬೆಳೆ ಬೆಳೆಸುವುದು.
- ಇದು ಜನವರಿಯ ತನಕವೂ ಬೆಳೆಯುತ್ತಿರುತ್ತದೆ.
- ಮೂರನೇ ಸಿಸನ್ ನವೆಂಬರ್ ಭತ್ತದ ಬೆಳೆ ಬೆಳೆ ಆದ ತಕ್ಷಣ ಸಸಿ ನಾಟಿ. ಇದು ನೀರು ಇದ್ದರೆ ಫೆಬ್ರವರಿ ತನಕ ಉಳಿಯುತ್ತದೆ.
- ಸಾಮಾನ್ಯವಾಗಿ ಫೆಬ್ರವರಿ ನಂತರ ಬದನೆ ಬಹಳ ಕಡಿಮೆ.
- ಈ ಸೀಸನ್ ನಲ್ಲಿ ಬೆಳೆ ಬರುವಂತೆ ಬೆಳೆದರೆ ಮದುವೆ, ಜಾತ್ರೆ ಇತ್ಯಾದಿ ಸಮಾರಂಭಗಳಿರುವ ಕಾರಣ ಬೇಡಿಕೆ ಚೆನ್ನಾಗಿರುತ್ತದೆ.
- ಆದರೆ ಬಹುತೇಕ ಜನ ನೀರಿನ ಕೊರತೆ ಕಾರಣ ಈ ಸಮಯಕ್ಕೆ ಬೆಳೆ ಬೆಳೆಸುತ್ತಿಲ್ಲ.
- ಒಂದಷ್ಟು ಜನ ಭತ್ತದ ಬೇಸಾಯವನ್ನೇ ಬಿಟ್ಟು ಇದನ್ನು ಬೆಳೆಸುತ್ತಾರೆ. ಕಾರಣ ಭತ್ತಕ್ಕಿಂತ ಇದರಲ್ಲಿ ಲಾಭ ಹೆಚ್ಚು ಇದೆ ಎಂದು.
ಇದನ್ನು ಬದನೆ ಬೆಳೆಯುವ ಎಲ್ಲಾ ಭಾಗಗಳಲ್ಲೂ ಬೆಳೆಯಬಹುದು. ಆದರೆ ಮಾರುಕಟ್ಟೆ ಮಾತ್ರ ಕರಾವಳಿಯಲ್ಲೇ ಹೆಚ್ಚು. ಮಲೆನಾಡು, ಬಯಲು ಸೀಮೆಗಳ ಫಲವತ್ತಾದ ಮಣ್ಣು ಇದಕ್ಕೆ ಚೆನ್ನಾಗಿ ಹೊಂದಿಕೆಯಾಗಬಹುದು. ಈ ಬದನೆಯ ಕುರಿತಾಗಿ ಸ್ಥಳೀಯ ಕೃಷಿ – ತೋಟಗಾರಿಕಾ ಸಂಶೊಧನಾ ಸಂಸ್ಥೆ ಸಾಕಷ್ಟು ಸಂಶೊಧನೆ ನಡೆಸಿದೆ. ಇದನ್ನು ಬೌಗೋಳಿಕ ಸ್ಥಾನಮಾದ ದಲ್ಲಿ ಸೇರಿಸುವ ಬಗ್ಗೆ ಕೆಲಸಗಳು ನಡೆಯುತ್ತಿವೆ.