ಶ್ರೀ ಗಂಧ ಬೆಳೆಯಲು ಇಡೀ ಭಾರತ ದೇಶದ ರೈತರು ತುದಿಗಾಲಲ್ಲಿದ್ದಾರೆ. ಈಗಾಗಲೇ ದೇಶದಾದ್ಯಂತ 80,000 ಹೆಕ್ಟೇರುಗಳಲ್ಲಿ ಶ್ರೀಗಂಧ ಬೆಳೆಯುತ್ತಿದೆ. ನಮ್ಮ ರಾಜ್ಯದಲ್ಲಿ ಇದು 30,000 ಹೆಕ್ಟೇರಿಗೂ ಹೆಚ್ಚು ಇದೆ. ಶ್ರೀಗಂಧವನ್ನು ಇತರ ಕೃಷಿ ಉತ್ಪನ್ನ ಮಾರಾಟ ಮಾಡಿದಂತೆ ಮಾರಾಟ ಮಾಡಲಿಕ್ಕೆ ಆಗುವುದಿಲ್ಲ. ಸರಕಾರ ನಿರ್ಧರಿಸಿದ ಖರೀದಿ ದಾರರಿಗೆ ಮಾತ್ರ ಮಾರಾಟ ಮಾಡಬೇಕು..
- ನಮ್ಮ ರಾಜ್ಯದಲ್ಲಿ ಶ್ರೀಗಂಧವನ್ನು ಖರೀದಿ ಮಾಡುವವರು
- ಕರ್ನಾಟಕ ರಾಜ್ಯ ಅರಣ್ಯ ಇಲಾಖೆ,
- ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಮತ್ತು ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಲಿಮಿಟೆಡ್
- ಈ ಮೂರು ಸಂಸ್ಥೆಗಳು ಮಾತ್ರ.
- ಇವರನ್ನು ಬಿಟ್ಟು ನೀವು ಯಾರಿಗೇ ಮಾರಾಟ ಮಾಡಿದರೂ,
- ಯಾರೇ ಕೊಡರೂ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ.
ಶ್ರೀಗಂಧ ಬೆಳೆಸಬಹುದು.ಅದು ಬೆಳೆಯಲು ಮುಕ್ತ ಎಂದು ಸರಕಾರ ಅಥವಾ ಅರಣ್ಯ ಇಲಾಖೆ ಹೇಳಬಹುದು. ಇದು ಬೆಳೆಯಲು ಮಾತ್ರ ಮುಕ್ತವೇ ಹೊರತು ಮಾರಾಟಕ್ಕೆ ಮುಕ್ತವಲ್ಲ. ಕಡಿಯುವುದಕ್ಕೆ , ಮಾರಾಟ ಮಾಡುವುದಕ್ಕೆ ಪರವಾನಿಗೆ ಬೇಕು.
ಶ್ರೀಗಂಧಕ್ಕೆ ವರ್ಗೀಕರಣ:
- ಶ್ರೀಗಂಧದಕ್ಕೆ ಬೆಲೆ ನಿರ್ಧಾರ ಆಗುವುದು ಅದರ ಕೆಲವು ವರ್ಗೀಕರಣದ ಮೇಲೆ.
- ಇದು ಟಿಪ್ಪು ಸುಲ್ತಾನನ ಕಾಲದಲ್ಲಿ ಪರ್ಶಿಯಾ ದೇಶದವರು ಮಾಡಿದ ವರ್ಗೀಕರಣ.
- ಟಿಪ್ಪು ಸುಲ್ತಾನನು ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಸೋತಾಗ ಹಣಕಾಸಿನ ಅಡಚಣೆ ಉಂಟಾಯಿತು.
- ಆ ಸಮಯದಲ್ಲಿ ಖಜಾನೆಗೆ ಹಣದ ಮೂಲಕ್ಕಾಗಿ ಹುಲುಸಾಗಿ ಬೆಳೆದಿದ್ದ ಶ್ರೀಗಂಧವನ್ನು ಮಾರಾಟ ಮಾಡುವ ನಿರ್ಧಾರ ಕೈಗೊಂಡ.
- ಶ್ರೀಗಂಧವನ್ನು ಪರ್ಶೀಯಾ ದೇಶದವರಿಗೆ ಮಾರಾಟ ಮಾಡುವಾಗ ಅದರ ವರ್ಗೀಕರಣ ಚಾಲನೆಗೆ ಬಂದದ್ದು ಈಗಲೂ ಅದೇ ಮುಂದುವರಿದಿದೆ.
ವರ್ಗೀಕರಣ ಹೀಗೆ:
ಬೇರು ಮತ್ತು ಕಾಂಡ ಗಳೆಂಬ ಎರಡು ಭಾಗಗಳಲ್ಲಿ ಗುಣಮಟ್ಟಕ್ಕನುಗುಣವಾಗಿ ಬೇರೆ ಬೇರೆ ವರ್ಗೀಕರಣ ಇದೆ. ಅದಕೆಲ್ಲಾ ಬೇರೆ ಬೇರೆ ಬೆಲೆ ಇದೆ.
ವಿಲಾಯತ್ ಬುಧ್;
- ( Vilayet budh): (First class billets) ಇದು ಮೊದಲ ವರ್ಗದ ಶ್ರೀಗಂಧ ಆಗಿದ್ದು,
- ಒಂದು ತುಂಡು 9 ಕಿಲೋ ತೂಗಬೇಕು. ಒಂದು ಟನ್ ನಲ್ಲಿ 112 ತುಂಡುಗಳಿಗಿಂತ ಹೆಚ್ಚಾಗಬಾರದು.
- ಇಂತಹ ತುಂಡುಗಳಿಗೆ ಕಿಲೋ ಗೆ ಈಗ ಸುಮಾರು 20,000 ರೂ. ಬೆಲೆ ಇದೆ.
- ಇದೆಲ್ಲವೂ ರೈತರಿಗೆ ಸಿಗುವುದಿಲ್ಲ.
- ಶ್ರೀ ಗಂಧ ಕಡಿದಾಗ ಅದರ ತಿರುಳಿನಲ್ಲಿ60% ತೇವಾಂಶ ಇರುತ್ತದೆ.
- ಆ ತೇವಾಂಶ ಕಳೆದು ತೂಕ ನಡೆಯುತ್ತದೆ.
- ಇಷ್ಟೇ ಅಲ್ಲದೆ ಯಾರಿಗೆ ಮಾರಾಟ ಮಾಡಲಾಗುತ್ತದೆಯೋ ಅವರು ಸರಕಾರಕ್ಕೆ ಪಾವತಿಸುವುದು ಇರುತ್ತದೆ.
- ಅದನ್ನೂ ರೈತರ ಕೈಯಿಂದಲೇ ಕಳೆಯಲಾಗುತ್ತದೆ.
- ಕರ್ನಾಟಕ ರಾಜ್ಯ ಅರಣ್ಯ ಇಲಾಖೆಗೆ ಸ್ವಲ್ಪ ರಾಯಧನ ಕೊಡುವುದು ಇರುತ್ತದೆ.
- ಇದೂ ಸಹ ರೈತರ ಉತ್ಪನ್ನದಿಂದಲೇ ಅಳೆಯುವುದಾಗಿದೆ.
- ಇದೆಲ್ಲಾ ಕಳೆದು ರೈತರಿಗೆ ಕಿಲೋ ಮೇಲೆ ಸುಮಾರು ರೂ. 6,000 ದಷ್ಟು ದೊರೆಯಬಹುದು.
ಚಿನಾ ಬುದ್ :
- ( China budh or Second class billets) ಇದು ಮೊದಲ ವರ್ಗದ ನಂತರದ್ದು.
- ಇದಕ್ಕೆ ಅದರ ಅರ್ಧ ಬೆಲೆ ಇರುತ್ತದೆ.
- ಇದಕ್ಕೂ ಒಂದು ತುಂಡು 4.5 ಕಿಲೊ ತೂಗಬೇಕು.
- ಒಂದು ಟನ್ ನಲ್ಲಿ 224 ತುಂಡುಗಳಿಗಿಂತ ಹೆಚ್ಚು ಇರಬಾರದು.
ಪಂಜಾಮ್:
- ( Panjam or Third class billets) ಇದು ಮೂರನೇ ದರ್ಜೆ.
- ಇದಕ್ಕೆ ಎರಡನೇ ವರ್ಗದ ಅರ್ಧ ಬೆಲೆ.
- 2.5 ಕಿಲೋ ತೂಕದ ಟನ್ ನಲ್ಲಿ 448 ತುಂಡುಗಳಿಗಿಂತ ಹೆಚ್ಚು ಇರಬಾರದು.
ಘೋಟ್ಲಾ:
- ( Short lengh billets) ಇದಕ್ಕೆ ಗಾತ್ರ , ತೂಕದ ಮಿತಿ ಇಲ್ಲ.
- ಇದು ಮೂರನೇ ವರ್ಗದ ಅರ್ಧ ಬೆಲೆಹೊಂದಿದೆ.
ಘ್ಹಾಟ್ ಬದಲಾ:
- (Ghat badala) ಇದು ತೂತುಗಳು, ಬಿರುಕುಗಳು, ಗಂಟುಗಳು ಉಳ್ಳ ತುಂಡಾಗಿದ್ದು,
- ಒಂದು ತುಂಡು 4.5 ಕಿಲೋ ಮತ್ತು ಒಂದು ಟನ್ ನಲ್ಲಿ 240 ತುಂಡುಗಳಿಗಿಂತ ಹೆಚ್ಚು ಇರಕೂಡದು.
ಬಗರ್ದಾದ್:
( bagardad ) ಇದು ಗಟ್ಟಿ ತುಂಡುಗಳಾಗಿದ್ದು, ಗಾತ್ರ ಮತ್ತು ಉದ್ದಕ್ಕೆ ಮಿತಿ ಇಲ್ಲ.
ಇವೆಲ್ಲಾ ತೊಗಟೆ ತೆಗೆದು ಬರೇ ತಿರುಳು ಹೊಂದಿದ ತುಂಡಾಗಿರಬೇಕು. ಸ್ವಲ್ಪವೂ ತೊಗಟೆ ಇರಬಾರದು. ನೀರಿನ ಅಂಶ ಇರಬಾರದು. ಎಲ್ಲವನ್ನೂ ರೈತರೇ ತೆಗೆದು ಕೊಡಬೇಕು. ಬೆಲೆ ನಿರ್ಧಾರದಲ್ಲಿ ಕೊಳ್ಳುವರ ತೀರ್ಮಾನವೇ ಅಂತಿಮ.
ಬೇರು ( Root first class)
- ಬೇರಿನಲ್ಲಿ ಕಾಂಡಕ್ಕೆ ತಾಗಿದ ಭಾಗದಲ್ಲಿ ಇರುವ ತುಂಡು ಪ್ರಥಮ ಶ್ರೇಣಿ.
- ಇದು ಒಂದು ತುಂಡು 6.75 ಕಿಲೋ ಇರಬೇಕು.
- ಟನ್ ತೂಗಲು 150 ತುಂಡುಗಳಿಗಿಂತ ಹೆಚ್ಚಾಗಬಾರದು. ಇದಕ್ಕೆ ಒಳ್ಳೆ ತಿರುಳಿನ ಬೆಲೆ.
- ಎರಡನೇ ಕ್ಲಾಸಿನ ಬೇರು 2.25 ಕಿಲೋ ಮತ್ತು ಟನ್ ಗೆ 448 ತುಂಡು ಮೀರದಂತೆ ಇರಬೇಕು.
ಜೈಪೊಕಾಲ್ (Jaipokal)
- ಇದು ತೂತು ಉಳ್ಳ ಪ್ರಥಮ ದರ್ಜೆ ತುಂಡುಗಳು 3-10 ಕಿಲೋ ತನಕವೂ ಟನ್ ಗೆ 320 ತುಂಡುಗಳು ಮೀರದಂತೆ ಇರಬೇಕು.
ಜೈಪೊಕಾಲ್ II (Jaipokal)
- ಇದು ಎರಡನೇ ದರ್ಜೆ ತೂತು ಉಳ್ಳ ತುಂಡುಗಳು. ಒಂದು ತುಂಡು 1.3 ಕಿಲೊ ಇರಬೇಕು.
- ಎಇನ್ ಬಾಗರ್: ( Ain bagar Psuedoghat) ಇದು 450 ಗ್ರಾಂ ನ ಒಡೆದ ಗಟ್ಟಿ ತುಂಡುಗಳು.
- ಚೆರಿಯಾ: (Large chilts Sali) ಇದು 2.5 ಗ್ರಾಂಗಿಂತ ಕಡಿಮೆ ಇರದ ತೂಕದ ತುಂಡುಗಳು.
- ಆಇನ್ ಚಿಲ್ಟಾ: ( Ain chilta ) ಇದು ತಿರುಳಿನ ಅತೀ ಸಣ್ಣ ತುಂಡುಗಳು.
- ಗರಗಸದ ಹುಡಿ: ಕತ್ತರಿಸುವಾಗ ದೊರೆಯುವ ಹುಡಿ.
- ತೊಗಟೆ: ತಿರುಳು ರಹಿತ ಚೆಕ್ಕೆ ಗಳು ಮತ್ತು ಗೆಲ್ಲುಗಳು ಇದಕ್ಕೆ ಕಿಲೋ 5-6 ರೂ. ಬೆಲೆ ಇದೆ.
ಇದೆಲ್ಲವನ್ನೂ ರೈತರು ಬೆಳೆ ಬೆಳೆಯುವುದೇ ಅಲ್ಲದೆ ಒಣಗಿಸಿ ಮಾರಾಟ ಮಾಡಬೇಕು. ತಿರುಳು ಒಣಗಲು ಕನಿಷ್ಟ 3-5 ತಿಂಗಳ ಕಾಲಾವಧಿ ಬೇಕು. ಹಸಿಯಾಗಿಯೇ ಕೊಟ್ಟರೆ ಅದು ಒಣಗುವ ತನಕ ಇಟ್ಟು ನಂತರ ತೂಕ ಮಾಡಿ ದರ ನಿರ್ಧಾರ ಮಾಡಲಾಗುತ್ತದೆ. ಶ್ರೀಗಂಧ ಬೆಳೆಗಾರರ ಸಂಘಟನೆ ಸಾಂಡಲ್ ವುಡ್ ಸೊಸೈಟಿ ಆಫ್ ಇಂಡಿಯಾ ಎಂಬ ಸಂಸ್ಥೆ ಕರ್ನಾಟಕದಲ್ಲಿ ಇದೆ. ಇದರ ಸದಸ್ಯತ್ವ ಪಡೆದು ಒಗ್ಗಟ್ಟಾಗಿ ಬೆಳೆಸಿದರೆ ಸ್ವಲ್ಪ ಅನುಕೂಲ ಆಗಬಹುದು.
ರೈತರು ಶ್ರೀಗಂಧಕ್ಕೆ ಭಾರೀ ಬೆಲೆ ಇದೆ, ಕೋಟಿ ಆದಾಯ ಬರುತ್ತದೆ ಎಂದು ಭಾರೀ ನಿರೀಕ್ಷೆ ಮಾಡಬೇಡಿ. ಬೆಲೆ ಇದೆ. ಅದು ಕೊಳ್ಳುವ ಬೆಲೆ. ಕಾವೇರಿ ಎಂಪೋರಿಯಂ ನಲ್ಲಿ ಕಿಲೋ ಶ್ರೀಗಂಧಕ್ಕೆ 30,000 ಇದೆಯಾದರೂ ಬೆಳೆಯುವ ರೈತರಿಗೆ ಹೆಚ್ಚೆಂದರೆ ಕಿಲೋ ಗೆ 6000 ದೊರೆಯಬಹುದು. ಬರೇ ತಿರುಳಿದ್ದರೆ ಬೆಲೆ ಅಲ್ಲ. ಅದರಲ್ಲಿ ಎಣ್ಣೆ ಅಂಶ 7-8% ತನಕ ಬೇಕು.