ಮನುಷ್ಯನ ದೇಹಾರೋಗ್ಯವನ್ನು ಕೆಲವು ಪರೀಕ್ಷೆಗಳಿಗೆ ಒಳಪಡಿಸಿ ಅನಾರೋಗ್ಯ ಪತ್ತೆ ಮಾಡಿ ಅದರ ಪ್ರಕಾರ ಚಿಕಿತ್ಸೆ ಮಾಡಲಾಗುತ್ತದೆ. ಹೀಗೆ ಮಾಡಿದಾಗ ಅದರ ಫಲಿತಾಂಶ ಕರಾರುವಕ್ಕಾಗಿರುತ್ತದೆ. ಅದೇ ರೀತಿಯಲ್ಲಿ ಬೆಳೆಗಳಿಗೆ ಕೊಡುವ ಯಾವುದೇ ಪೋಷಕಗಳನ್ನು ಸಸ್ಯಕ್ಕೆ ಅಗತ್ಯವಿದ್ದರೆ ಮಾತ್ರ ಕೊಟ್ಟರೆ ಒಳ್ಳೆಯದು. ಯಾವುದು ಇದೆ, ಯಾವುದರ ಕೊರತೆ ಇದೆ, ಎಷ್ಟು ಕೊಡಬೇಕು ಎಂಬುದನ್ನು ಮಣ್ಣು ಪರೀಕ್ಷೆ ಮಾಡಿ ತಿಳಿಯಲಾಗುತ್ತದೆ.
- ಮಣ್ಣು ಎಂಬುದು ಪ್ರಕೃತಿದತ್ತ ಅಮೂಲ್ಯ ಸಂಪತ್ತು.
- ನಾವು ಬೆಳೆಸುವ ಬೆಳೆಗಳಿಗೆಲ್ಲಾ ಮಣ್ಣೇ ಮೂಲಾಧಾರ.
- ಮಣ್ಣಿನ ಆರೋಗ್ಯ ಹದಗೆಟ್ಟರೆ ಬೆಳೆಗಳ ಹಾಗೂ ಮನುಷ್ಯನ ಆರೋಗ್ಯವೂ ಹದಗೆಡುತ್ತದೆ
- ಆದ್ದರಿಂದ, ಮಣ್ಣಿಲ್ಲದಿದ್ದರೆ ನಾವಿಲ್ಲ.
- ಮಣ್ಣಿನ ಆರೋಗ್ಯವನ್ನು ಅಳೆಯಲು ಮಣ್ಣು ಪರೀಕ್ಷೆ ಅತ್ಯಂತ ಮಹತ್ವದ್ದಾಗಿರುತ್ತದೆ.
- ಸೂಕ್ತ ವಿಧಾನದಲ್ಲಿ ಮಣ್ಣಿನ ಮಾದರಿಯನ್ನು ತೆಗೆದು, ವೈಜ್ಞಾನಿಕ ವಿಶ್ಲೇಷಣೆ ಮಾಡುವ ಮೂಲಕ ಅದರ ಗುಣಧರ್ಮ ಮತ್ತು ಫಲವತ್ತತೆಯನ್ನು ತಿಳಿಯಬಹುದು.
- ವಿವಿಧ ಬೆಳೆಗಳಿಗೆ ಬೇಕಾಗುವ ಪೋಷಕಾಂಶಗಳನ್ನು ಸಮತೋಲನವಾಗಿ ಒದಗಿಸಲು ಇದು ಸಹಕಾರಿ.
- ಬೆಳೆಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಸಮತೋಲನ ಪ್ರಮಾಣದಲ್ಲಿ ಪೂರೈಕೆ ಮಾಡುವುದಕ್ಕೆ ಮಾಪಕ ಮಣ್ಣು ಪರೀಕ್ಷೆ.
ಮಣ್ಣು ಮಾದರಿ ಆಯ್ಕೆ ಹೀಗೆ:
- ವೈಜ್ಞಾನಿಕ ವೀಶ್ಲೇಷಣೆಗಾಗಿ ಮಣ್ಣು ಸಂಗ್ರಹಿಸುವಾಗ ಮಣ್ಣಿನ ಲಕ್ಷಣಗಳಿಗನುಸಾರವಾಗಿ ಕೆಲವು ಅಂಶಗಳನ್ನು ಅನುಸರಿಸಬೇಕಾಗುತ್ತದೆ.
- ಮಣ್ಣಿನ ವಿನ್ಯಾಸ, ರಚನೆ, ಬಣ್ಣ, ಇಳಿಜಾರು, ಸಾಗುವಳಿ ವಿಧ, ನೀರು ಬಸಿಯುವಿಕೆ ಮುಂತಾದವುಗಳಲ್ಲಿ ಭಿನ್ನತೆಯಿರುವ ಜಮೀನುಗಳಿಂದ ಪ್ರತ್ಯೇಕವಾಗಿ ಮಣ್ಣು ಮಾದರಿಗಳನ್ನು ತೆಗೆಯಬೇಕಾಗುತ್ತದೆ.
- ಒಂದೇ ತರಹದ ಮಣ್ಣು ಹತ್ತು ಎಕರೆಗಿಂತ ಹೆಚ್ಚು ಕ್ಷೇತ್ರವನ್ನು ಆವರಿಸಿದ್ದರೆ, ಎರಡು ಭಾಗಗಳನ್ನಾಗಿ ವಿಂಗಡಿಸಿ 10 – 15 ಮಾದರಿಗಳನ್ನು ತೆಗೆಯಬೇಕು.
- ಅದರಿಂದ ಒಂದು ಪ್ರಾತಿನಿಧಿಕ ಮಾದರಿಸಂಗ್ರಹಿಸಬೇಕು.
ಸಂಗ್ರಹಿಸುವ ಸೂಕ್ತ ವಿಧಾನ
- ಜಮೀನಿನ ಮೇಲ್ಮೈ ಲಕ್ಷಣಗಳು, ಬೆಳೆಗಳು ಹಾಗೂ ಇತರೆ ವ್ಯತ್ಯಾಸಗಳಿಗನುಗುಣವಾಗಿ ಜಮೀನನ್ನು ವಿಂಗಡಿಸಬೇಕು.
- ವಿಂಗಡಿಸಿದ ಪ್ರತೀ ಕ್ಷೇತ್ರದಿಂದ 10-15 ಉಪ ಮಾದರಿಗಳನ್ನು ತೆಗೆದು, ಎಲ್ಲವನ್ನೂ ಸೇರಿಸಿ, ಆ ಸಂಯುಕ್ತ ಮಾದರಿಯಿಂದ ಅರ್ಧ ಕಿ.ಗ್ರಾಂ. ನಷ್ಟು ಮಣ್ಣನ್ನು ವಿಶ್ಲೇಷಣೆಗಾಗಿ ಮಾದರಿಯನ್ನಾಗಿ ಪರಿಗಣಿಸಬೇಕು.
- ಮಣ್ಣಿನ ಮಾದರಿ ತೆಗೆಯಲು, ನಿರ್ಧರಿಸಿದ ಜಾಗದಲ್ಲಿನ ಕಲ್ಲು, ಕಸ–ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಬೇಕು
- ನಿರ್ದೇಶಿತ ಜಾಗದಲ್ಲಿ, ಸಲಿಕೆಯಿಂದ ಸುಮಾರು 15 – 30 ಸೆಂ. ಮೀ. ಆಳದವರೆಗೆ ‘V’ ಆಕಾರದ ಗುಂಡಿಯನ್ನು ತಗೆಯಬೇಕು.
ಗುಂಡಿಯ ಒಂದು ಬದಿಯಿಂದ, ಮೇಲಿಂದ ಕೆಳಗಿನವರೆಗೆ ಒಂದು ಇಂಚು ದಪ್ಪದ ಮಣ್ಣನ್ನು ಸಲಿಕೆಯಿಂದ ಕತ್ತರಿಸಿ ಪ್ಲಾಸ್ಟಿಕ್ ಬಕೆಟ್ ನಲ್ಲಿ ಸಂಗ್ರಹಿಸಬೇಕು.
- ಪ್ರತೀ ಎಕರೆಗೆ 10 – 20 ಮಾದರಿಗಳನ್ನು ಸಂಗ್ರಹಿಸಿದ ಮಣ್ಣನ್ನು ಸ್ವಚ್ಛವಾದ ಒಂದು ಪ್ಲಾಸ್ಟಿಕ್ ಹಾಳೆಯ ಮೇಲೆ ಸುರಿಯಬೇಕು.
- ಪುಡಿ ಮಾಡಿ, ಕಲ್ಲಿನಚೂರು, ಎಲೆ, ಬೇರು, ಗಾಜಿನ ಚೂರು ಮುಂತಾದ ವಸ್ತುಗಳನ್ನು ತೆಗೆದು ಮಣ್ಣನ್ನು ಸ್ವಚ್ಛಗೊಳಿಸಿ ವೃತ್ತಾಕಾರದಲ್ಲಿ ಹರಡಬೇಕು.
- ಸಂಗ್ರಹಿಸಿದ ಮಣ್ಣಿನ ಮಾದರಿ ತೂಕವು 8 ರಿಂದ 10 ಕಿ. ಗ್ರಾಂ. ಗಳಿರಬಹುದು.
- ಮಣ್ಣಿನ ಪರೀಕ್ಷೆಗಾಗಿ ಮಣ್ಣು ಮಾದರಿಯನ್ನು0.5ಕಿ.ಗ್ರಾಂ. ಗೆ ಇಳಿಸಲು,ಚತುರ್ವಿಂಗಡನೆ ಪದ್ಧತಿಯನ್ನನುಸರಿಸಬೇಕು.
- ಮಿಶ್ರಣ ಮಾಡಿ ವೃತ್ತಾಕಾರವಾಗಿ ಹರಡಿದ ಮಣ್ಣನ್ನು ನಾಲ್ಕು ಭಾಗಗಳಾಗುವಂತೆ ಗುರುತು ಹಾಕಬೇಕು.
- ಇದರಲ್ಲಿಎರಡು ವಿರುದ್ಧ ದಿಕ್ಕುಗಳಲ್ಲಿರುವ ಭಾಗವನ್ನು ತೆಗೆದು ಹಾಕಬೇಕು,
- ಉಳಿದೆರಡನ್ನು ಮಿಶ್ರಣಮಾಡಿ,ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ ಅರ್ಧ ಕಿ. ಗ್ರಾಂ. ನಷ್ಟು ಮಣ್ಣನ್ನು ಸಂಗ್ರಹಿಸಬೇಕು.
- ಮಣ್ಣಲ್ಲಿ ತೇವಾಂಶವಿದ್ದರೆ 2-3 ದಿನ ನೆರಳಿನಲ್ಲಿ ಒಣಗಿಸಬೇಕು.
ಈ ರೀತಿಯಾಗಿ ಸಂಗ್ರಹಿಸಿದ 0.5 ಕಿ. ಗ್ರಾಂ. ಪ್ರಾತಿನಿಧಿಕ ಮಾದರಿ ಮಣ್ಣನ್ನು ಸ್ವಚ್ಛವಾದ ಬಟ್ಟೆಯ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಸೇರಿಸಬೇಕು. ಈ ಚೀಲದೊಳಗೆ ಈ ಕೆಳಗಿನ ವಿವರಗಳನ್ನೊಳಗೊಂಡ ಗುರುತಿನ ಚೀಟಿಯನ್ನು ಹಾಕಿ ಮಣ್ಣು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಬೇಕು.
- ರೈತನ ಹೆಸರು, ವಿಳಾಸ, ಜಮೀನಿನ ಕ್ಷೇತ್ರ, ಸರ್ವೆ ನಂಬರ್, ಮಾದರಿ ತೆಗೆದ ದಿನಾಂಕ, ಮಣ್ಣಿನ ಆಳ, ಹಿಂದೆ ಇದ್ದ ಬೆಳೆ, ಗೊಬ್ಬರ ಹಾಕಿದ ದಿನಾಂಕ ಮತ್ತು ಪ್ರಮಾಣ ಮತ್ತು ನೀರಾವರಿ ವಿಧಾನ ನಮೂದಿಸಬೇಕು.
ಅನುಸರಿಸಬೇಕಾದ ಕ್ರಮಗಳು;
- ಬಹುವಾರ್ಷಿಕ ಬೆಳೆಯಲ್ಲಿ ಎರಡು ಸಾಲಿನ ಮಧ್ಯ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಬೇಕು.
- ಲಘು ಪೋಷಕಾಂಶಗಳ ವಿಶ್ಲೇಷಣೆಗಾಗಿ ಮಣ್ಣು ಮಾದರಿಗಳನ್ನು ಸಂಗ್ರಹಿಸುವಾಗ ಲೋಹಗಳ ಕಲಬೆರಕೆ ಆಗದಂತೆ ಸ್ಟೈನ್ ಲೆಸ್ ಸ್ಟೀಲ್/ ಪ್ಲಾಸ್ಟಿಕ್/ ಮರದ ಉಪಕರಣವನ್ನು ಉಪಯೋಗಿಸಬೇಕು.
- ತಿಪ್ಪೆಗುಂಡಿ, ರಸ್ತೆಯ ಪಕ್ಕ, ಕಾಲುವೆ, ಬದುಗಳ ಪಕ್ಕ, ನೀರು ನಿಂತ ಜಾಗ, ಕಟ್ಟಡದ ಸಮೀಪ, ಮರದ ಕೆಳಗೆ ಮಣ್ಣು ಮಾದರಿಗಳನ್ನು ತೆಗೆಯಬಾರದು.
- ಮಣ್ಣಿನ ಮಾದರಿ ಒಣಗಿಸಲು ಗೊಬ್ಬರಚೀಲ ಹಾಗೂ ರಸಗೊಬ್ಬರ ಹಾಕುವ ಪಾತ್ರೆಗಳನ್ನು ಉಪಯೋಗಿಸಬಾರದು.
- ಮಾದರಿಯನ್ನು ಬಿಸಿಲಿನಲ್ಲಿಒಣಗಿಸಬಾರದು.
- ಮಣ್ಣಿನ ಮಾದರಿ ಸಂಗ್ರಹಿಸಲು ಬೀಜ/ ಕೀಟನಾಶಕ, ಕಳೆನಾಶಕ ಉಪಯೋಗಿಸಿದ ಚೀಲ ಅಥವಾ ಡಬ್ಬಗಳನ್ನು ಉಪಯೋಗಿಸಬಾರದು.
- ಜಮೀನಿಗೆ ಗೊಬ್ಬರ ಹಾಕುವ ಪೂರ್ವದಲ್ಲಿ ಮಣ್ಣಿನ ಮಾದರಿ ತೆಗೆಯಬೇಕು.
- ಗೊಬ್ಬರ ಹಾಕಿದ್ದರೆ 3 ತಿಂಗಳ ನಂತರ ಮಾದರಿ ತೆಗೆಯಬೇಕು.
ಮಣ್ಣಿನ ಮಾದರಿತೆಗೆಯಲು ಎಪ್ರೀಲ್-ಮೇ ತಿಂಗಳು ಸೂಕ್ತ.ಗೊಬ್ಬರ ಹಾಕುವ ಮುಂಚೆ ತೆಗೆಯುವುದು ಉತ್ತಮ. ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಮಳೆ ಕಲೆದ ಮೇಲೆ ಪರೀಕ್ಷೆ ಮಾಡುವುದರಿಂದ ತೊಳೆದು ಹೋದ ಪೋಷಕಾಂಶ ಲೆಕ್ಕಕ್ಕೆ ಸಿಗುತ್ತದೆ.
- ಅಡಿಕೆ ಮತ್ತು ಕೋಕೊ ತೋಟಗಳಲ್ಲಿ, ಎರಡು ಸಾಲುಗಳ ಮಧ್ಯದಲ್ಲಿ, ಮರದ ಬುಡದಿಂದ 2 ಅಡಿ ದೂರದಲ್ಲಿ, 0-30 ಸೆಂ. ಮೀ. ಆಳದಲ್ಲಿ ಮಣ್ಣನ್ನು ತೆಗೆಯಬೇಕು.
- ತಾಳೆ ಬೆಳೆಯ ತೋಟದಲ್ಲಿ ಬುಡದಿಂದ 1 ಮೀ. ದೂರದಲ್ಲಿತೆಗೆಯಬೆಕು.
ವಿಶ್ಲೇಷಣೆ ಆಧಾರಿತ ಪೋಷಕಗಳ ವರ್ಗೀಕರಣ
- ರಸಸಾರ ಆಮ್ಲೀಯ <5.55.5, ತಟಸ್ತ – 7.5 ಕ್ಷಾರೀಯ >7.5 ಮೇಲೆ.
- ಲವಣಾಂಶ <1 ಕಡಿಮೆ 1-2 ಸೂಕ್ತ >2 ಹೆಚ್ಚು
- ಸಾವಯವ ಇಂಗಾಲ (%) <0.5 0.5 -0.75 >0.75
- ಸಾರಜನಕ (ಕಿ.ಗ್ರಾಂ./ಹೆ) <280 280-560 >560
- ರಂಜಕ (ಕಿ.ಗ್ರಾಂ./ಹೆ) <22.5 22.5-56 >56
- ಪೊಟ್ಯಾಷ್(ಕಿ.ಗ್ರಾಂ./ಹೆ) <144 144- 336 >336
- ಕ್ಯಾಲ್ಸಿಯಂ (ಪಿಪಿಎಮ್) <1.5 <1.5> >1.5
- ಮ್ಯಾಗ್ನೀಶಿಯಂ (ಪಿಪಿಎಮ್) <1.0 <1.0> >1.0
- ಗಂಧಕ (ಪಿಪಿಎಮ್) <10 10-20 >20
- ಝಿಂಕ್ (ಪಿಪಿಎಮ್) <0.6 0.6 -1.2 >1.2
- ಕಬ್ಬಿಣ (ಪಿಪಿಎಮ್) <2.5 2.5 -4.5 >4.5
- ತಾಮ್ರ (ಪಿಪಿಎಮ್) <0.2 0.2 – 0.5 > 0.5
- ಮ್ಯಾಂಗನೀಸ್ (ಪಿಪಿಎಮ್) <2.0 2-3 >3.0
- ಬೋರಾನ್ (ಪಿಪಿಎಮ್) <0.33 0.33-1.0 >1.0
ರೈತರು ಯಾವುದೇ ಕಾರಣಕ್ಕೆ ಅಂದಾಜಿಗೆ ಪೋಷಕಾಂಶಗಳನ್ನು ಹಾಕಬೇಡಿ. ಮಣ್ಣಿನ ಪರೀಕ್ಷೆ ಮಾಡಿಸಿ ಹಾಕಿದರೆ ಉಳಿತಾಯವೂ ಆಗುತ್ತದೆ. ಫಸಲೂ ಹೆಚ್ಚುತ್ತದೆ.
ಲೇಖಕರು; ಪೂಜಾ ಎಸ್.ಪಿ. ಮಧುಶ್ರೀ ಕೆರಕಲಮಟ್ಟಿ, ರುಹೀನ್ ತಾಜ್ ಪಿ.ಹೆಚ್.ಡಿ ಸಂಶೋಧನಾ ವಿದ್ಯಾರ್ಥಿಗಳು .ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ತೋಟಗಾರಿಕಾ ವಿಶ್ವವಿದ್ಯಾಲಯ ಬಾಗಲಕೋಟೆ.