ಸಿಂಪರಣೆಯ ಮೂಲಕ ಪೋಷಕಗಳು- ಅದ್ಬುತ ಫಲಿತಾಂಶ

ಎಲೆ ಮತ್ತು ಹೂಗೊಂಚಲಿಗೆ ಸಿಂಪರಣೆ ಮಾಡಿಡ ಅಡಿಕೆ

ಬೆಳೆಯಲ್ಲಿ ಕಂಡುಬರುವ ಪೋಷಕಾಂಶಗಳ ಕೊರತೆಯನ್ನು ಶೀಘ್ರವಾಗಿ ಸರಿಪಡಿಸಲು ಇರುವ ಉಪಾಯ ಎಲೆಗಳೆಂಬ ಆಹಾರ ಸಂಗ್ರಾಹಕಕ್ಕೆ ಅದನ್ನು ಪೂರೈಕೆ  ಮಾಡುವುದು. ಹೀಗೆ ಮಾಡುವುದರಿಂದ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳೆಗೆ ಬೇಕಾಗುವ ಆಹಾರಾಂಶಗಳನ್ನು ಸುಲಭವಾಗಿ ಒದಗಿಸಬಹುದು. ಖರ್ಚಿನಲ್ಲಿ ಉಳಿತಾಯವಾಗುತ್ತದೆ. ಪೋಷಕಗಳು ಸಮರ್ಪಕವಾಗಿ ಬೆಳೆಗಳಿಗೆ ದೊರೆಯುತ್ತದೆ. ಉತ್ತಮ ಫಲಿತಾಂಶವೂ ಲಭ್ಯ. ಎಲೆಗಳಿಗೆ ಮತ್ತು ಹೂಗೊಂಚಲುಗಳಿಗೆ ಸಿಮಂಪರಣೆ  ಮಾಡಿ ಸುಪ್ತ ಹಸಿವು ನೀಗಿಸಬಹುದು.

 • ಯಾವುದೇ ಬೆಳೆ ಬೆಳೆಸುವಾಗ ನಿಮಗೆ ತೃಪ್ತಿಕರವಾದ ಬೆಳವಣಿಗೆ  ಕಂಡು ಬರಲಿಲ್ಲವೇ , ಹಾಗಾದರೆ ಒಮ್ಮೆ ಅಥವಾ ಎರಡು ಬಾರಿ ಸಿಂಪರಣೆ ಮೂಲಕ ಸಾಲ್ಯುಬಲ್ ಗೊಬ್ಬರಗಳನ್ನು ಕೊಡಿ.
 • ಕೆಲವೇ ದಿನಗಳಲ್ಲಿ ಬೆಳೆಯ ಲಕ್ಷಣವೇ ಬದಲಾಗುತ್ತದೆ. ಇದು ಬಹುತೇಕ ಅಧಿಕ ಆದಾಯದ ಬೆಳೆ ಬೆಳೆಸುವ ರೈತರಿಗೆ  ತಿಳಿದಿದೆ.

ಅನುಕೂಲಗಳು:

 •  ಎಲೆ ಮತ್ತು ಕಾಂಡಗಳು ಸಸ್ಯ ಪೋಷಕಾಂಶಗಳನ್ನು ನೇರವಾಗಿ ಹೀರಿಕೊಳ್ಳುತ್ತವೆ.
 • ಈ ರೀತಿ ಸಸ್ಯದ ಭಾಗಗಳು ಆಹಾರಾಂಶವನ್ನು ಹೀರಿಕೊಳ್ಳುವುದರಿಂದ ಅಲ್ಪಾವಧಿಯಲ್ಲೇ ಅದರ ಉಪಯೊಗವನ್ನು ಕಾಣಬಹುದು.
 • ಎಲೆಗಳ ಬಣ್ಣದಲ್ಲಾಗುವ ಬದಲಾವಣೆಯು ಈ ಉಪಯೋಗವನ್ನು ಸೂಚಿಸುತ್ತದೆ.
 • ಮಣ್ಣಿನ ಮೂಲಕ ರಸಗೊಬ್ಬರಗಳನ್ನು ಒದಗಿಸಿದಾಗ ರಸಗೊಬ್ಬರಗಳು ಮಣ್ಣಿನಲ್ಲಾಗುವ ರಾಸಾಯನಿಕ ಕ್ರಿಯೆಗೊಳಪಟ್ಟು ನಂತರ ಬೇರಿಗೆ ದೊರೆಯುತ್ತದೆ.
 • ಒಣ ಬೇಸಾಯದಲ್ಲಿ ಶುಷ್ಕ ವಾತಾವರಣದಿಂದ ಮಣ್ಣಿನಲ್ಲಿ ಸೇರಿಸಿದ ಗೊಬ್ಬರಗಳು ಸಸ್ಯಗಳಿಗೆ ಸುಲಭವಾಗಿ ಒದಗುವುದಿಲ್ಲ.
 • ಇದೇ ರೀತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಆಹಾರಾಂಶಗಳೇ ನೀರಿನಲ್ಲಿ ಕರಗಿ ಪೋಲಾಗುವುದರಿಂದ ಅಂತಹ ಸಂದರ್ಭದಲ್ಲಿಯೂ ಬೆಳೆಗೆ ಒದಗುವುದಿಲ್ಲ.
 • ಇಂತಹ ಪರಿಸ್ಥಿತಿಯಲ್ಲಿ ಸಿಂಪರಣೆ ಮೂಲಕ ಬೆಳೆಗೆ ಬೇಕಾದ ಆಹಾರಾಂಶವನ್ನು ಒದಗಿಸಬಹುದು.
 • ಒಮ್ಮೊಮ್ಮೆ ಹವಮಾನ ವೈಪರೀತ್ಯದಿಂದ ಬಹಳ ದಿನಗಳವರೆಗೆ ಶೀತ ವಾತಾವರಣವಿದ್ದಾಗ ಬೆಳೆಗಳ ಅವಶ್ಯಕತೆಗೆ ತಕ್ಕಂತೆ ಬೇರಿನಿಂದ ಪೋಷಕಾಂಶಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ.
 • ಇದರಿಂದಾಗಿ ವಿವಿಧ ಬೆಳೆಗಳಲ್ಲಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ ಸಿಂಪರಣೆಗಾಗಿಯೇ ಕೆಲವು  ಇನ್ಸ್ಟಂಟ್ ಪೋಷಕಾಂಶಗಳು ಲಭ್ಯವಿದೆ.
 •  ಬೆಳೆಯ ಅವಶ್ಯಕತೆಗನುಗುಣವಾಗಿ ಇದನ್ನು ಬಳಸಿ ಅದ್ಭುತ ಫಲಿತಾಂಶ ನೊಡಬಹುದು.
 • ಸಿಂಪರಣೆಯ ಮೂಲಕ ಬೆಳೆಗಳಿಗೆ ಒದಗಿಸುವುದರಿಂದ ಇಳುವರಿ ಮಟ್ಟವನ್ನು ಕಾಯ್ದುಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ರಸಸಾರದಲ್ಲಾಗುವ ವ್ಯತ್ಯಾಸಗಳಿಂದಾಗಿ ಮಣ್ಣು ಮಾಧ್ಯಮ ನೀಡಿದ ಆಹಾರಾಂಶಗಳು ಬೆಳೆಗೆ ಒದಗುವುದಿಲ್ಲ.
 • ಇಂತಹ ಪರಿಸ್ಥಿಯಲ್ಲಿ ಸಿಂಪರಣೆ ಮೂಲಕ ಆಹಾರಾಂಶಗಳನ್ನು ಒದಗಿಸುವುದು ಬಹುಮುಖ್ಯ.
 • ರಸಗೊಬ್ಬರಗಳನ್ನು ಸಸ್ಯ ಸಂರಕ್ಷಣಾ ದ್ರಾವಣದೊಡನೆ ಬೆರೆಸಿ ಸಿಂಪಡಿಸುವುದರಿಂದ ಸಿಂಪರಣೆಯ ವೆಚ್ಚದಲ್ಲೂ ಉಳಿತಾಯವಾಗುತ್ತದೆ.

ಅನಾನುಕೂಲತೆಗಳು:

 •           ಈ ಕ್ರಮದಲ್ಲಿರುವ ಒಂದು ಅನಾನುಕೂಲತೆಯೆಂದರೆ ಬೆಳೆಗೆ ಬೇಕಾದ ಸಂಪೂರ್ಣ ಆಹಾರಾಂಶಗಳನ್ನು ಸಿಂಪರಣೆಯ ಮೂಲಕವೇ ಒದಗಿಸಲಾಗುವುದಿಲ್ಲ.
 • ಈ ರೀತಿ ಪೂರ್ತಿಯಾಗಿ ಒದಗಿಸಬೇಕಾದಲ್ಲಿ ಕೊಡಬೇಕಾದ ಸಿಂಪರಣೆಗಳ ಸಂಖ್ಯೆ ಮತ್ತು ದ್ರಾವಣದ ಪ್ರಮಾಣವನ್ನು ಹೆಚ್ಚು ಮಾಡಬೇಕಾಗುತ್ತದೆ.
 • ಆದ್ದರಿಂದ ಮಣ್ಣಿನ ಮೂಲಕವೂ ರಸಗೊಬ್ಬರಗಳನ್ನು ಒದಗಿಸಿ, ಸ್ವಲ್ಪ ಭಾಗವನ್ನು ಮಾತ್ರ ಸಿಂಪರಣೆ ಮೂಲಕ ಒದಗಿಸುವುದು ಸೂಕ್ತ.
 •  ಇದುವರೆಗೂ ನಡೆದಿರುವ ಸಂಶೋಧನೆಯ ಆಧಾರದ ಮೇಲೆ ಎಲ್ಲಾ, ಮುಖ್ಯ ಆಹಾರಾಂಶಗಳು ಮತ್ತು ಲಘು ಪೋಷಕಾಂಶಗಳನ್ನು ವಾರ್ಷಿಕ ಮತ್ತು ಹಣ್ಣಿನ ಬೆಳೆಗಳಿಗೆ ಒದಗಿಸಿ ಉತ್ತಮ ಫಲಿತಾಂಶ ಪಡೆಯಲಾಗುತ್ತದೆ.
 • ವೈಜ್ಞಾನಿಕ ಬೆಳವಣಿಗೆಯಿಂದಾಗಿ ಮುಖ್ಯ ಆಹಾರಾಂಶಗಳ, ಲಘು ಪೋಷಕಾಂಶಗಳ ಮತ್ತು ಬೆಳವಣಿಗೆಯನ್ನು ಉತ್ತೇಜಿಸುವ ವಸ್ತುಗಳೆಲ್ಲವೂ ಒಟ್ಟಾಗಿರುವ ಹಲವು ರಾಸಾಯನಿಕ ವಸ್ತುಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ.
 • ಆದ್ದರಿಂದ ಬೆಳೆಗೆ ಬೇಕಾದ ಎಲ್ಲಾ ಆಹಾರಾಂಶಗಳನ್ನು ಒಂದೇ ಸಿಂಪರಣೆಯ ಮೂಲಕ ಬೆಳೆಗೆ ಒದಗಿಸಬಹುದು.

ಯಾವ ಪೋಷಕಗಳನ್ನು ಕೊಡಬಹುದು:

 • ಮುಖ್ಯ ಪೋಷಕಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಶಿಯಂ, ಅಲ್ಲದೆ ದ್ವಿತೀಯ ಪೋಷಕಗಳಾದ ಕ್ಯಾಲ್ಸಿಯಂ, ಮೆಗ್ನೀಶಿಯಂ  ಮತ್ತು ಗಂಧಕ,  ಹಗೂ ಲಘು ಪೋಷಕಾಂಶಗಳನ್ನು  ಕೊಡಬಹುದು.
 • ಬೆಳೆವಣಿಗೆ ಪ್ರಚೋದಕಗಳಾದ  ಜಿಬ್ಬರಲಿಕ್ ಅಮ್ಲ, ಅಮೈನೋ ಆಮ್ಲ, ಅಲ್ಲದೆ ಕೆಲವು ಪ್ರಚೋದಕಗಳನ್ನು ಬಳಕೆ ಮಡಬಹುದು.
 • ಜೈವಿಕ ಗೊಬ್ಬರಗಳನೂ ಸಹ ಬಳಕೆ  ಮಾಡಬಹುದು.

ಪೋಷಕಾಂಶಗಳನ್ನು ಒದಗಿಸುವುದಕ್ಕೆ ಮೊದಲು ಅದರ ಕೊರತೆಯನ್ನು ಮಣ್ಣಿನ ಪರೀಕ್ಷೆಯ ಮೂಲಕ, ಎಲೆ ಪರೀಕ್ಷೆಯ ಮೂಲಕ ಅಥವಾ ಬೆಳೆ ಸೂಚಿಸುವ ಲಕ್ಷಣಗಳ ಮೂಲಕ ಖಚಿತಪಡಿಸಿ ನಂತರ ಒದಗಿಸುವುದು ಉತ್ತಮ ಮಾರ್ಗ.

Leave a Reply

Your email address will not be published. Required fields are marked *

error: Content is protected !!