ಪ್ರಪಂಚದಲ್ಲೇ ಇದು ಅಧ್ಬುತ– ಮಿಡಿ ಮಾವು.

ಅಪ್ಪೆ ಮಿಡಿ ಒಂದು ಸುಗಂಧಿತ ಮಾವು. ಇದು ಬೆಳೆಯುವುದು ಹೊಳೆ ದಂಡೆಯಲ್ಲಿ. ಅದಕ್ಕಾಗಿ ಈ ಮಾವಿಗೆ ಹೊಳೆಸಾಲು ಅಪ್ಪೆ ಎಂಬ ಹೆಸರು. ಇದು ನಮ್ಮ ರಾಜ್ಯದ ಮಲೆನಾಡಿನ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಕಂಡು ಬರುತ್ತದೆ. ಇದರ ಮಿಡಿಯ ಉಪ್ಪಿನ ಕಾಯಿ ಅಲ್ಲದೆ ಕೆಲವು ಖಾದ್ಯಗಳು ಸರ್ವಶ್ರೇಷ್ಟ.

ಹೊಳೆ ಸಾಲು ಅಪ್ಪೆಯ ಉತ್ತಮ ತಳಿಯನ್ನು ತಮ್ಮ ಹೊಲದ ತೋಡಿನ ಪಕ್ಕ ಬೆಳೆಸಿದವರು ಗೊರಮನೆ ಮಾಹಾಬಲಯ್ಯ. ಅವರ ಮಗ ಶ್ರೀಧರ ಮತ್ತು ಮಕ್ಕಳು
  • ಮಿಡಿ ಉಪ್ಪಿನ ಕಾಯಿ ಸವಿಯುವುದೇ ಅದರೆ, ಅಪ್ಪೆ ಮಿಡಿಯ ಸವಿಯನ್ನು ಒಮ್ಮೆ ನೋಡಿ.
  • ಅದೂ ಮಲೆನಾಡಿನ ಕೆಲವು ಪಾಕಶಾಸ್ತ್ರಜ್ಞರ ಕೈಯಲ್ಲಿ ಮಾಡಿದ್ದೇ ಆಗಬೇಕು.
  • ಮಾವಿನ ಮಿಡಿ ಒಯ್ದು ಉಪ್ಪಿನ ಕಾಯಿ ಹಾಕಬೇಕಿದ್ದರೂ ಅದರ ಪೂರ್ಣ ಅನುಭವ ಮಲೆನಾಡಿನ ಜನಕ್ಕೆ ಇರುವಷ್ಟು ಅನುಭವ ಮತ್ಯಾರಿಗೂ ಇಲ್ಲ.
  •   ನೈಜ ಅಪ್ಪೆ ಮಿಡಿಯ ಗುರುತು ಹಿಡಿಯಬಲ್ಲ ತಜ್ಞರಿದ್ದರೆ ಅದು ಮಲೆನಾಡಿನ ಸಾಗರ, ರಿಪ್ಪನ್ ಪೇಟೆ, ಶಿರಸಿ, ಸಿದ್ದಾಪುರ, ಯಲ್ಲಾಪುರ ಮುಂತಾದ ಭಾಗಗಳಲ್ಲಿ ಮಾತ್ರ.
  • ಮಲೆನಾಡಿನ ವಿಶಿಷ್ಟ ರುಚಿಯ ಈ ಮಾವು ಬೆಳೆಯುವುದೂ ಇಲ್ಲೇ. ಇದರ ಎಲ್ಲಾ ಗುಣ ಲಕ್ಷಣಗಳು ಗೊತ್ತಿರುವುದೂ ಇಲ್ಲಿಯವರಿಗೇ ಸೈ.

ಅಪ್ಪೆ ಮಿಡಿ ಒಂದು ಕೌತುಕ:

  • ಅಪ್ಪೆ ಮಿಡಿಗಳು ಮಲೆನಾಡಿನ ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಕಂಡು ಬರುವ ಮಾವು.
  • ಪ್ರಪಂಚದಲ್ಲೇ ಇಂತಹ ಸುವಾಸನಾ ಭರಿತ ಮಿಡೀ ಮಾವು ಬೇರೊಂದಿಲ್ಲ ಎನ್ನಬಹುದು.
  • ಇದು ಮಲೆನಾಡಿನ ನಿರ್ದಿಷ್ಟ ಭಾಗದ ಬೌಗೋಳಿಕ ಸಂಪತ್ತು ಎಂದರೂ ಹೆಚ್ಚಲ್ಲ.
  • ಇದರ ಉತ್ಕೃಷ್ಟತೆಯನ್ನು ಅಳೆದವರು ಸ್ಥಳೀಯ ಜನರೇ.
  • ಉತ್ಕೃಷ್ಟತೆ ಎಂದರೆ ಇದರ ಆಕಾರ, ಸೊನೆ( pep) ಸುವಾಸನೆ ಮತ್ತು ಕಾಪಿಡುವ ಶಕ್ತಿ.

  • ನೀವು ನಂಬುತ್ತೀರೋ ಇಲ್ಲವೋ ಅಪ್ಪೆ ಮಿಡಿಯ ಉಪ್ಪಿನ ಕಾಯಿ ಹೆಚ್ಚು ಹೆಚ್ಚು ಹಳತಾದಷ್ಟೂ ರುಚಿ.
  • ಮೂರು  ನಾಲ್ಕು ವರ್ಷ ಇಟ್ಟರೂ ಏನೂ ವೆತ್ಯಾಸವಾಗದ ಗುಣ ಇದರಲ್ಲಿದೆ.
  • ಇದರಲ್ಲಿ ಸುಮಾರು 300 ಕ್ಕೂ ಹೆಚ್ಚು ವಿಧಗಳಿದ್ದು, ಇದೆಲ್ಲವೂ ಸ್ಥಳೀಯ ಜನರೇ ನಾಮಕರಣ ಮಾಡಿದಂತದ್ದು.
ತೊಟ್ಟು ದಪ್ಪ ಇದ್ದರೆ ಅದು ಉತ್ತಮ ಅಪ್ಪೆಯಂತೆ
  • ಮಲೆನಾಡಿನ ಕೆಲವು ಜನ (ಆವರನ್ನು ತಜ್ಞರೆಂದೇ ಹೇಳಬಹುದು) ಮಿಡಿ ಯನ್ನು ಹಿಡಿದು ಮೂಸಿ, ಅದರ ತೊಟ್ಟು ಮುರಿದು ಸೊನೆ ಹಾರುವ ಫೋರ್ಸ್ ಗೆ ಅನುಗುಣವಾಗಿ ಅದಕ್ಕೆ ಸ್ಥಾನ ಮಾನ ನೀಡುತ್ತಾರೆ.
  • ಇದನ್ನು ಉಪ್ಪಿನಕಾಯಿ ಹಾಕುವ ಕ್ರಮವೇ ಭಿನ್ನ.
  • ಇದು ಎಲ್ಲರಿಗೂ ಗೊತ್ತಿರುವಂತದ್ದೂ ಅಲ್ಲ. ಅದರಲ್ಲೂ ತುಂಬಾ ತಜ್ಞರು ಶಿರಸಿ, ಸಾಗರ, ಸಿದ್ದಾಪುರ ಸುತ್ತಮುತ್ತ ಇದ್ದಾರೆ.

ಇದರ ಹಣ್ಣು ಕಂಡವರು ಅಪರೂಪ. ಅದು ಹಣ್ಣಾಗುವಾಗ ಮಳೆಗಾಲ ಬಂದಿರುತ್ತದೆ. ಹಣ್ಣು ಹುಳಿಯೆಂದರೆ ಹುಳಿ. ಯಾರೂ ತಿನ್ನಲೊಲ್ಲರು. ಇದು ಹರಿಯುವ ನೀರಿಗೆ ಬಿದ್ದು, ನೀರಿನೊಂದಿಗೆ ಪಯಣಿಸಿ ಎಲ್ಲಾದರೂ ಪೊದರಿನಲ್ಲಿ ಸಿಕ್ಕೊ ಹಾಕಿ ಅಲ್ಲೇ ಮೊಳೆತು ಸಸಿಯಾಗಿ ಮರವಾಗಿ ಮತ್ತೆ  ಮಿಡಿ ಕೊಡುತ್ತದೆ.

ಏನಿದು ಹೊಳೆ ಸಾಲು ಅಪ್ಪೆ:

ಹೊಳೆ ಬದಿಯ ಮವಿನ ಮರ
  • ಹೊಳೆ, ಹಳ್ಳದ  ಬದಿಯಲ್ಲಿ ಬೆಳೆದಿರುವ ಮಾವಿನ ಮರದ ಮಿಡಿಗಳಿಗೆ ಹೊಳೆ ಸಾಲು ಅಪ್ಪೆ ಎನ್ನುತ್ತಾರೆ.
  • ತೀರ್ಥಹಳ್ಳಿ ದಾಟಿ ಸಾಗರ ಹೋಗುವಾಗ ಸಿಗುವ ರಿಪ್ಪನ್ ಪೇಟೆ ಊರು ಮೂಲಕ ಕುಮುದ್ವತಿ ಹೊಳೆಯ ಕವಲು ನದಿ ಹರಿಯುತ್ತದೆ.
  • ಈ ಹೊಳೆ ಮುಂದೆ ಶಿವಮೊಗ್ಗ ಮೂಲಕ ಬಂಗಾಳಕೊಲ್ಲಿ ಸೇರುವಂತದ್ದು.
  • ಇದರ ಹುಟ್ಟು ಶರಾವತಿ ಉಗಮದ ಸ್ಥಳದಲ್ಲೇ. ಹಿಂದೆ ಶರಾವತಿಗೆ ಗೇರುಸೊಪ್ಪೆಯಲ್ಲಿ ಅಣೆಕಟ್ಟು ಹಾಕುವಾಗ ಮುಳುಗಡೆಯಾದ ಪ್ರದೇಶದುದ್ದಕ್ಕೂ ನೂರಾರು ಇಂತಹ ಅಪ್ಪೆ ಮಿಡಿಯ ಮಾವಿನ ಮರಗಳಿದ್ದವು ಎಂಬುದಾಗಿ ಹಿರಿಯರು ಹೇಳುತ್ತಾರೆ.
  • ಅಲ್ಲಿಂದಲೇ ಬೀಜ ಪ್ರಸಾರವಾಗಿ ರಿಪ್ಪನ್ ಪೇಟೆ ತನಕ ವೈವಿಧ್ಯಮಯ ಅಪ್ಪೆ ಮಾವಿನ ಮರಗಳು ಹುಟ್ಟಿಕೊಂಡಿವೆ.ಹಲವು ಮುಳುಗಡೆಯಲ್ಲಿ ನಾಶವಾಗಿವೆ.
ಹೊಳೆಯ ಮತ್ತೊಂದು ಮಗ್ಗಲಿಗೆ ಚಾಚಿದ ದೈತ್ಯ ಗಾತ್ರದ ಮಾಮರ

ಹೊಳೆ ಸಾಲು ಅಪ್ಪೆಯನ್ನು ಯಾರೂ ನೆಟ್ಟದ್ದಲ್ಲ. ಯಾರೂ ಇದಕ್ಕೆ ಮಾಲಕರೂ ಇಲ್ಲ. ಇದು ಹೊಳೆ ದಂಡೆಯಲ್ಲಿ ನೀರಿನೊಂದಿಗೆ ಬೀಜಗಳು ಬಂದು ಹುಟ್ಟಿದವುಗಳು. ಮಾವಿನ ಮರದಲ್ಲಿ ಹೂವಾದಾಗ ಸಮೀಪದ ಮನೆಯವರು ಇದಕ್ಕೆ ಮಾಲಕರಾಗುತ್ತಾರೆ ಅಷ್ಟೇ. ಮಾವಿನ ಮರಗಳಿಗೆ ನೂರಾರು ವರ್ಷ ಆಗಿರಬಹುದು. ಮರದ ಬುಡ ಹೊಳೆಯ ಒಂದು ಮಗ್ಗುಲಲ್ಲಿದ್ದರೆ ತುದಿ ಮತ್ತೊಂದು ಭಾಗದಲ್ಲಿರುತ್ತದೆ.

  • ಮರಕ್ಕೆ ಹತ್ತುವುದೇ ಒಂದು ಸಾಹಸ. ಕೆಲವೇ ಕೆಲವರು ಮಾತ್ರ ಇದನ್ನು ಹತ್ತುವವರು.
  • ಈಗ ಅಂತಹ ಸಾಹಸಿಗಳು ಕಡಿಮೆಯಾಗಿ ಮರದ ಗೆಲ್ಲು ಕಡಿದೇ ಮಾವಿನ ಕಾಯಿ ಕೊಯ್ಯುತ್ತಾರೆ.
  • ರಿಪ್ಪನ್ ಪೇಟೆಯ ಪಶ್ಚಿಮಕ್ಕೆ, ಮತ್ತು ಪೂರ್ವಕ್ಕೆ ಹೊಳೆ ಸಾಲಿನಲ್ಲಿ ನೂರಾರು ಮಾವಿನ ಮರಗಳಿವೆ.
  • ಇದನ್ನು ಅಡಸ್ಸಾಲು ಹೊಳೆ ಅಪ್ಪೆ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ.

ಇದಲ್ಲದೆ ಶಿರಸಿಯ ವಾನಳ್ಳಿ ಮತ್ತು ಜಟ್ಟಿಗದ್ದೆ ಸುತಮುತ್ತ ಒಂದು ನದಿ ಹರಿಯುತ್ತದೆ. ಇದರ ದಂಡೆಯಲ್ಲೂ ಒಂದಷ್ಟು ಅಪ್ಪೆ ಮಿಡಿ ಮಾವಿನ ಮರಗಳು ಇವೆ. ಯಲ್ಲಾಪುರದ ಜೋಯ್ಡಾ ಸುತ್ತಮುತ್ತ ಕಾಳಿ ನದಿ ಹರಿಯುವ ಸ್ಥಳದಲ್ಲೂ ಒಂದಷ್ಟು ಉತ್ತಮ ಗುಣಮಟ್ಟದ ಅಪ್ಪೆ ಮಿಡಿಗಳು ಇವೆ. ಕುಮಟಾ- ಯಲ್ಲಾಪುರ  ದಾರಿಯಲ್ಲಿ ದುರ್ಗಮ ಕಾಡಿನ ಮಧ್ಯೆ ಇರುವ ಝರಿಯೋಪಾದಿಯ ಹಳ್ಳಗಳ ದಂಡೆಯಲ್ಲೂ ಸ್ವಲ್ಪ ಮಾವಿನ ಮರಗಳು ಮಿಡಿಗೆ  ಸೂಕ್ತವಾಗಿವೆ.

ಅಪ್ಪೆಮಾವಿನ ವಿಶೇಷ:

  • ಅಪ್ಪೆ ಮಾವು ಸಾಮಾನ್ಯ ಇತರ ಮಾವಿನ ಮರಗಳಂತೆ ಹೂ ಬಿಡುವುದಿಲ್ಲ.
  • ಇವೆಲ್ಲಾ ಫೆಬ್ರವರಿ ಮಾರ್ಚ್ ತಿಂಗಳಿಗೇ ಹೂ ಬಿಡುವುದು. ತಡವಾಗಿ ಮಿಡಿಯಾಗುವುದು.
  • ಸಾಮಾನ್ಯವಾಗಿ ಎಪ್ರೀಲ್ ಕೊನೇ ತನಕವೂ ಮಿಡಿ ಲಭ್ಯವಿರುತ್ತದೆ.
  • ಈ ಮಾವು ವೈವಿಧ್ಯಮಯ ಆಕಾರವನ್ನೂ ಹೊಂದಿರುತ್ತದೆ..ಎಷ್ಟೇ ಸಣ್ಣ ಮಿಡಿಯಾದರೂ ಕಹಿ ಇರಲಾರದು.

  • ಇದನ್ನು ಹಲ್ಲಿನಲ್ಲಿ ಕಚ್ಚಿದಾಗ ಕರಕ್ಕೆಂದು ತುಂಡಾಗುತ್ತದೆ.
  • ಅರ್ಧಮಿಡಿಯಲ್ಲಿ ಒಂದು ಊಟ ಮುಗಿಸಬಹುದು. ಉಂಡ ನಂತರ ಅದರ ಸುವಾಸನೆ ಅರ್ಧ ದಿನದ ತನಕವೂ ಇರುತ್ತದೆ.
  • ಇದೆಲ್ಲಾ ಮಾವುಗಳ ಮಧ್ಯೆ ಮಿಶ್ರ ಪರಾಗಸ್ಪರ್ಶದ ಮೂಲಕ ಆಗಿರಬಹುದು.
  • ಈ ಮಾವನ್ನು ಬರೇ ಉಪ್ಪಿನ ಕಾಯಿ ಮಾತ್ರ ಮಾಡುವುದಲ್ಲ.

  • ಇದರಿಂದ ಕೆಲವು ಗೊಜ್ಜು ಇತ್ಯಾದಿ ಮಾಡುತ್ತಾರೆ.
  • ಈ ಮಾವಿನ ಸೊನೆಯನ್ನು ಸಂಗ್ರಹಿಸಿಟ್ಟುಕೊಂಡು ಅದನ್ನು ನೀರ್ ಗೊಜ್ಜು ಎಂಬ ಸಾರನ್ನು ತಯಾರಿಸುವ ಕ್ರಮ ಮಲೆನಾಡಿನ ಪ್ರತೀ ಮನೆಯಲ್ಲೂ ಇದೆ. ಅಪ್ಪೆ ಕಾಯಿಯ ರಸ ಸಂಗ್ರಹಿಸಿಟ್ಟೂ ಇದನ್ನು ಮಾಡುತ್ತಾರೆ.
ಮಾವಿನ ಮಿಡಿ ಮಾರಾಟ

ಅಪ್ಪೆಮಿಡಿಯಲ್ಲಿ ನಾವೆಲ್ಲಾ ಬೇರೆ ಬೇರೆ ಹೆಸರನ್ನು ಕೇಳಿದ್ದುಂಟು. ಅದು ಅವರವರ ಮನೆ ಹಿತ್ತಲಲ್ಲಿ ಬೆಳೆದ ಮರಗಳು. ಇವುಗಳೆಲ್ಲದರ ಮೂಲ ಇದೇ ಹೊಳೆ ಸಾಲು ಎಂದರೂ ತಪ್ಪಲ್ಲ. ಹೊಳೆ ಸಾಲಿನ ಅಪ್ಪೆ ಕೆಲವೇ ಸಮಯದಲ್ಲಿ ಕೊಯ್ಯುವವರಿಲ್ಲದೇ ಹೋದರೂ ಅಚ್ಚರಿ ಇಲ್ಲ. ಈಗ ಹಲವು ಜನ ಇದನ್ನು ಕಸಿ ತಂತ್ರಜ್ಞಾನದಲ್ಲಿ ಸಸ್ಯಾಭಿವೃದ್ದಿ ಮಾಡಿ ಬೆಳೆಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!