ಪರಿಸರ ಎಂಬುದು ಮನುಷ್ಯನಿಗಿಂತ ಮುಂಚೆಯೇ ಸೃಷ್ಟಿಯಾಗಿದೆ. ಇದನ್ನು ಹಾಳು ಮಾಡಲು ಮನುಷ್ಯ ಮಾತ್ರರಿಂದ ಸಾಧ್ಯವಿಲ್ಲ. ಒಂದು ವೇಳೆ ಏನಾದರೂ ಕೆಣಕಲು ಹೋದರೆ ಅದು ತಿರುಗಿ ಬೀಳುತ್ತದೆ. ಪ್ರಕೃತಿ ತನ್ನದೇ ಆದ ವ್ಯವಸ್ಥೆಗಳ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ. ಅದರೊಂದಿಗೆ ಬದುಕಿದರೆ ಮಾತ್ರ ನಮಗೆ ಉಳಿಗಾಲ.
- ಇಂದು ಆಗುತ್ತಿರುವ ಕೆಲವು ಅನಾಹುತಗಳು, ಮನುಕುಲಕ್ಕೆ ಎದುರಾಗಿರುವ ಕೆಲವು ಸಂಧಿಗ್ಧ ಪರಿಸ್ಥಿತಿಗಳು ಇವೆಲ್ಲಾ ಪ್ರಕೃತಿಯ ಮುನಿಸೇ ಹೊರತು ಬೇರೇನೂ ಅಲ್ಲ.
- ಪ್ರಕೃತಿ ಮನಸ್ಸು ಮಾಡಿದರೆ ಸಾಂಕ್ರಾಮಿಕ ರೋಗ ಇರಲಿ, ಬರ ಇರಲಿ ,ನೆರೆ ಇರಲಿ ಎಲ್ಲವೂ ಗೌಣ.
- ಇದೆಲ್ಲಾ ನಾವು ಪೂಜೆ ಪುರಸ್ಕಾರಗಳಿಂದ ಮಾಡುವಂತದ್ದಲ್ಲ.
- ಸ್ವಲ್ಪ ಮನುಕುಲ ಹಿಂದಿನಿಂದಲೂ ನಡೆದು ಬಂದ ದಾರಿಯನ್ನು ಒಮ್ಮೆ ಹಿಂತಿರುಗಿ ನೋಡಿ ಅದಕ್ಕೆ ಚ್ಯುತಿ ಬಾರದಂತೆ ನಡೆಯುವುದೇ ಪರಿಹಾರ.
ಪರಿಸರದ ಮುನಿಸು ತಾಳಿಕೊಳ್ಳಲಾಗದು:
- ಹಿರಿಯರು ಹೇಳುತ್ತಾರೆ ದೇವರು ಮೆಚ್ಚದ ಅನ್ಯಾಯ ಮಾಡಬಾರದು ಎಂದು.
- ದೇವರು ಕ್ಷಮಾ ಮೂರ್ತಿ. ಭೂಮಿ ತಾಯಿಯ ಕ್ಷಮಾ ಗುಣದ ಕಟ್ಟೆ ಒಡೆಯುವಷ್ಟು ಮುಂದುವರಿದ ಕಾರಣ ಆಕೆ ಮುನಿದಿದ್ದಾಳೆ.
ಇದೊಂದು ಸಂಗತಿ ನಿಮ್ಮ ಗಮನದಲ್ಲಿರಲಿ. ನೀವು ಒಂದು ಚೆಂಡನ್ನು ಗೋಡೆಗೆ ಎಸೆಯಿರಿ. ಹೆಚ್ಚಿನ ಸಂದರ್ಭಗಳಲ್ಲಿ ಅದು ವಾಪಾಸು ಬಂದು ಬೇರೆಲ್ಲಿಗಾದರೂ ಹೊಡೆಯುತ್ತದೆ. ಕೆಲವೊಮ್ಮೆ ಅದು ನಮ್ಮ ಮುಖಕ್ಕೇ ಬೀಳಬಹುದು. ಈಗ ಅದು ಆಗಿದೆ. ಸಾಕಷ್ಟು ಸಲ ಅದು ನಮಗೆ ತಿರುಗಿ ಬೀಳಲಿಲ್ಲ. ಈಗ ಬೀಳಲಾರಂಭಿಸಿದೆ.
- ಆದ ಕಾರಣ ಇನ್ನು ಈ ಕೆಲಸ ಮಾಡುವುದು ಒಳ್ಳೆಯದಲ್ಲ.
- ಸಸ್ಯ ಪ್ರಾಣಿಸಂಕುಲಗಳನ್ನು ಉಳಿಸುವುದು, ಮತ್ತೆ ಹಿಂದಿನಂತೆ ಕಾಡು ಮಾನವರಾಗುವುದು ಮುಂತಾದ ಪರಿಸರವಾದಿಗಳು ಹೇಳುವ ಪರಿಹಾರವನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲು ಕಷ್ಟ ಸಾಧ್ಯ.
- ಪರಿಸರವಾದಿಗಳು ಅವರ ಸ್ಥಾನಮಾನಕ್ಕೆ ಸರಿಯಾಗಿ ಮಾತಾಡುತ್ತಾರೆ. ಮರ ಗಿಡ, ಪಕ್ಷಿ , ಪ್ರಾಣಿ ಎಲ್ಲವೂ ಒಮ್ಮೆ ಕಡಿಮೆಯಾದರೂ ಅದರ ಸಮತೋಲನವನ್ನು ಪ್ರಕೃತಿ ಮಾಡಿಯೇ ತೀರುತ್ತದೆ.
- ಯಾಕೆ ಇಂದು ಬಂದಿರುವ ಕೊರೋನಾದಂತಹ ಖಾಯಿಲೆ ಇನ್ನೂ ತೀವ್ರ ಸ್ವರೂಪ ತಳೆದರೆ ಮನುಷ್ಯ ಸಂತತಿಯ ಅವನತಿಯಾಗುತ್ತದೆ.
- ಆ ಸ್ಥಾನವನ್ನು ಪ್ರಾಣಿ, ಪಕ್ಷಿ, ಗಿಡ ಮರ ತುಂಬಿ ತನ್ನ ಸಮತೋಲನವನು ಮತ್ತೆ ಸ್ಥಾಪಿಸುತ್ತದೆ.
ನಮ್ಮ ಬದುಕು ಪರಿಸರ ಪೂರಕವಾಗಿರಲಿ:
- ಎಲ್ಲವೂ ನಡೆಯುವುದು ಧಾರಣಾ ಶಕ್ತಿಯ ಮೇಲೆ. ಮನುಷ್ಯನಿಗೆ ರೋಗ ರುಜಿನ ಬಂದರೆ ಅದನ್ನು ತಡೆದುಕೊಳ್ಳುವ ಶಕ್ತಿಯನ್ನೂ ಪರಿಸರ ಕೊಟ್ಟಿದೆ.
- ಅದಕ್ಕನುಗುಣವಾಗಿ ನಾವು ಜೀವನ ಕ್ರಮವನ್ನು ಪಾಲಿಸಿದರೆ ನಮ್ಮ ಶಕ್ತಿ ವರ್ಧನೆಯಾಗುತ್ತದೆ.
- ಮನುಷ್ಯನೂ ಸೇರಿದಂತೆ ಪ್ರತೀಯೊಂದು ಜೀವ ರಾಶಿಯ ರಕ್ಷಣೆಗೆ ಬೇಕಾದ ಎಲ್ಲಾ ಅನುಕೂಲಗಳನ್ನೂ ಪ್ರಕೃತಿ ಒದಗಿಸಿದೆ.
- ಸಾಧ್ಯವಾದಷ್ಟು ಮನೆ ಆಹಾರವನ್ನು ಸೇವಿಸಿರಿ. ಅದು ಗಂಜಿ ಇರಲಿ, ಮೃಷ್ಟಾನ್ನ ಭೋಜನ ಇರಲಿ ಅದಕ್ಕೆ ಬೇಕಾಗುವ ಪೂರಕ ವಸ್ತುಗಳು ನಮ್ಮ ಆಹಾರ ಕ್ರಮಕ್ಕೆ ಸರಿಯಾಗಿರಲಿ.
- ನಮ್ಮ ವಾತಾವರಣಕ್ಕೆ ಹೊಂದುವ ಹಣ್ಣೂ ಹಂಪಲು ತರಕಾರಿಗಳನ್ನು ತಿನ್ನಿ. ಸಾಧ್ಯವಿದ್ದಷ್ಟು ಬೆಳೆಸಿ.
- ಋತುಮಾನದ ಆಹಾರ ಕ್ರಮವನ್ನು ಚಾಚೂ ತಪ್ಪದೆ ಪಾಲಿಸಿರಿ.
- ಹಳ್ಳಿಯ ನಮ್ಮ ಪೂರ್ವಜರು ಯಥೇಚ್ಚವಾಗಿ ಬಳಸುತ್ತಿದ್ದ ಅಮಟೇ ಕಾಯಿ, ಕೆಸು, ಗಡ್ಡೆ ಗೆಣಸು, ನೀರುಳ್ಳಿ, ಬೆಳ್ಳುಳ್ಳಿ., ಮಾವು, ಹಲಸು ಇವುಗಳು ನಮ್ಮ ಆಹಾರಾಭ್ಯಾಸದಲ್ಲಿ ಸೇರಿರಲಿ.
- ನಮ್ಮ ಸುತ್ತಮುತ್ತ ದೊರಕುವ ಔಷಧಿ ಸತ್ವವುಳ್ಳ ಸೊಪ್ಪು ತರಕಾರಿಗಳು ಕೂಡ ಸೇರಿರಲಿ.
- ಕಾಶ್ಮೀರದ ಸೇಬಿಗಿಂತ ನಮ್ಮ ಊರಿನ ಹಣ್ಣು ಬಾಳೆ ಹಣ್ಣು, ಇತ್ಯಾದಿಯನ್ನು ತಿನ್ನಿ. ಇಲ್ಲಿ ದೊಡ್ಡಸ್ಥಿಗೆ ಬೇಡ.
- ಪ್ರಕೃತಿ ಎಲ್ಲವನ್ನೂ ಹೊಂದಿದೆ. ಆಯಾ ಪ್ರದೇಶಕ್ಕೆ ಯಾವುದು ಬೇಕೋ ಅದನ್ನೆಲ್ಲಾ ಅದು ಕಾಲ ಕಾಲಕ್ಕನುಗುಣವಾಗಿ ಕೊಡುತ್ತದೆ.
- ಅದನ್ನು ತಾಜಾ ರೀತಿಯಲ್ಲಿ ತಿನ್ನಬೇಕು. ಬೇಯಿಸಲೇ ಬೇಕಾದುದನ್ನು ಬೇಯಿಸಿ ತಿನ್ನಿ. ಬೇಯಿಸದೆ ತಿನ್ನುವಂತದ್ದನ್ನು ಹಾಗೆಯೇ ತಿನ್ನಿ.
- ಮಾಂಸಾಹಾರಿಗಳೂ ಸಹ ಆಯಾ ಸೀಸನ್ ನಲ್ಲಿ ದೊರೆಯುವ ಬಂಗುಡೆ, ಬೂತಾಯಿ ಮುಂತಾದ ಮೀನು ಇತ್ಯಾದಿಗಳನ್ನು ತಿಂದರೆ ಆವರ ಶಾರೀರಿಕ ಬಲ ಹೆಚ್ಚುತ್ತದೆ.
ಮನುಷ್ಯನ ದೇಹದಲ್ಲಿ ಎಲ್ಲಾ ಪ್ರತಿರೋಧ ಶಕ್ತಿ ತೋರುವ ವ್ಯವಸ್ಥೆ ಇದೆ. ಇದಕ್ಕಾಗಿಯೇ ನಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳು ಇವೆ. ಇವು ಸೈನಿಕರ ಹಾಗೆ. ವೈರಿಗಳ ಅಟ್ಟಹಾಸಕ್ಕೆ ನಮ್ಮಲ್ಲಿ ಗಟ್ಟಿತನವನ್ನು ಅವು ಕೊಡುತ್ತವೆ. ಅವುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಪ್ರಕೃತಿ ಸಹಜವಾದ ಆಹಾರ ನಮ್ಮ ಇಮ್ಮ್ಯೂನ್ ಸಿಸ್ಟಂ ಅನ್ನು ಬಲ ಪಡಿಸುತ್ತದೆ.
- ತಜಂಕು( ಚಗಚೆ), ಕೆಸು, ತಿಮರೆ, ವಿಟಮಿನ್ ಸೊಪ್ಪು, ಬಸಳೆ ಸೊಪ್ಪು, ಅತ್ತಿ ಕಾಯಿ, ಬಾಳೆ ಕಾಯಿ, ಇಂತಹ ಹಲವಾರು ಇವೆಲ್ಲಾ ನಮ್ಮ ಆಹಾರಾಭ್ಯಾಸದಲ್ಲಿ ಸೇರಿರಲಿ.
ಮನುಷ್ಯ ಪ್ರಕೃತಿಯ ಜೊತೆ ಹೋರಾಡಲು ಸಾಧ್ಯವಿಲ್ಲ. ಪ್ರಕೃತಿಯಲ್ಲಿ ಮಾನವ ತುಂಡರಸರು ಮಾತ್ರ. ಆವರು ಅರಸರ ಜೊತೆಗೆ ಹೊಂದಿಕೊಂಡು ಬದುಕಬೇಕು. ಅದರಲ್ಲೇ ಇಬ್ಬರ ಉಳಿವೂ ಇರುತ್ತದೆ.