ಮೊದಲ ವರ್ಷದ ಅಡಿಕೆ ಸಸಿಗೆ ಎಷ್ಟು ಗೊಬ್ಬರ ಕೊಡಬೇಕು

one year areca plant

ಅಡಿಕೆ ಮರಗಳು – ಸಸಿಗಳಿಗೆ  , ತೆಂಗಿನ ಮರದ  ಹಾಗೆಯೇ ಇನ್ನಿತರ ಎಲ್ಲಾ ಧೀರ್ಘಾವಧಿ ಬೆಳೆಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗುವ ಸಮಯದಲ್ಲಿ ಹೊಸ ಬೇರುಗಳ ಉತ್ಪತ್ತಿ ಜಾಸ್ತಿ. ಹೊಸ ಬೇರು ಮೂಡುತ್ತದೆ. ಹಳೆ  ಬೇರು ಹೆಚ್ಚು ಚುರುಕಾಗಿ ಆಹಾರ ಬಯಸುತ್ತವೆ. ಈ ಸಮಯದಲ್ಲಿ  ಕೊಡುವ ಪೋಷಕಾಂಶ ಅದರ ತುರ್ತು ಅಗತ್ಯಕ್ಕೆ ಲಭ್ಯವಾಗಿ ಬೆಳೆವಣಿಗೆಗೆ ಸಹಾಯಕವಾಗುತ್ತದೆ. ನೆಟ್ಟ ಮೊದಲ ವರ್ಷದ ಅಡಿಕೆ ಸಸಿಗೆ ಎಷ್ಟು ಗೊಬ್ಬರ ಕೊಡಬೇಕು ಎಂಬುದರ ಮಾಹಿತಿ ಇಲ್ಲಿದೆ.

  • ಎಲ್ಲಾ ನಮೂನೆಯ ಧೀರ್ಘಾವಧಿ ಬೆಳೆಗಳಿಗೆ ಅವುಗಳ ವಯಸ್ಸಿಗನುಗುಣವಾಗಿ ಪೊಷಕಗಳನ್ನು  ಕೊಡಬೇಕು.
  • ಎಳೆ ಗಿಡಕ್ಕೆ ಬೇರೆ, ಸ್ವಲ್ಪ ಬೆಳೆದ ಗಿಡಕ್ಕೆ ಬೇರೆ, ಫಸಲು  ಕೊಡುತ್ತಿರುವುದಕ್ಕೆ  ಬೇರೆ  ಪ್ರಮಾಣದಲ್ಲಿ ಪೋಷಕಗಳನ್ನು  ಕೊಡಬೇಕು.
  • ಅದೇ ರೀತಿಯಲ್ಲಿ ಕಚ್ಚಾ ಗೊಬ್ಬರ ಆದರೆ ಎಷ್ಟು  ಹಾಗೂ ಕಾಂಪ್ಲೆಕ್ಸ್ ಗೊಬ್ಬರ  ಆದರೆ ಯಾವುದು ಕೊಡಬೇಕು ಎಂಬುದನ್ನು ಲೆಕ್ಕಾಚಾರ ಹಾಕಿ ಕೊಡಬೇಕು.

 ಈಗ ಗೊಬ್ಬರ ಕೊಟ್ಟರೆ ಪ್ರಯೋಜನ:

first year growth -ಒಂದು ವರ್ಷಕ್ಕೆ ಇಷ್ಟು ಸಸಿ ಬೆಳೆಯಬೇಕು.

  • ಅಡಿಕೆ ಮರ/ ಸಸಿಗಳಿಗೆ ಗೊಬ್ಬರ ಕೊಡುವಾಗ ಕನಿಷ್ಟ ಮೂರು ಕಂತುಗಳಲ್ಲಿ ಗೊಬ್ಬರಗಳನ್ನು  ಕೊಡಬೇಕು.
  • ಅಲ್ಲದೆ ಪ್ರತೀ ವರ್ಷ ಮುಂಗಾರು ಮಳೆ ಪ್ರಾರಂಭದ ಸಮಯದಲ್ಲಿಯೇ ಕೊಟ್ಟಿಗೆ ಗೊಬ್ಬರವನ್ನು ಕೊಡಬೇಕು.
  • ಈ ಸಮಯ ಸಸ್ಯಬೆಳವಣಿಗೆಯ  ಪ್ರಮುಖ ಕಾಲಘಟ್ಟವಾಗಿರುತ್ತದೆ.
  • ಅದನ್ನು ಇನ್ನಷ್ಟು ಉತ್ತೇಜಿಸಲು ಈಗ ಗೊಬ್ಬರ ಕೊಡಲೇ ಬೇಕು.
  • ಈ ಸಮಯದಲ್ಲಿ ಸಸಿಯ ಬೆಳೆವಣಿಗೆ ಬೂಸ್ಟಿಂಗ್ ಆದರೆ ಮತ್ತೆ ಚೆನ್ನಾಗಿಯೇ ಇರುತ್ತದೆ.
  • ಮಣ್ಣು  ಸಡಿಲವಾಗಿರುತ್ತದೆ, ಸಾಕಷ್ಟು ತೇವಾಂಶ ಇರುತ್ತದೆ, ಈ  ಕಾರಣ ಬೇರು ಚೆನ್ನಾಗಿ ಬೆಳೆದು ಎಲ್ಲಾ ಪೋಷಕಗಳು ಸಸಿ/ಮರಕ್ಕೆ  ಲಭ್ಯವಾಗುತ್ತದೆ.

ಒಂದು ವರ್ಷದ ಅಡಿಕೆ ಸಸಿಗೆ:

  • ವರ್ಷಕ್ಕೆ ಒಮ್ಮೆ ಸುಮಾರು 5 ಕಿಲೋ ಒಣ  ತೂಕದ ಪ್ರಮಾಣದಲ್ಲಿ  ಕೊಟ್ಟಿಗೆ ಗೊಬ್ಬರ ಅಥವಾ, ಕೋಳಿ ಗೊಬ್ಬರ ಅಥವಾ ಕುರಿ ಗೊಬ್ಬರವನ್ನು ಕೊಡಬೇಕು.
  • ಇದು 10 ಕಿಲೋ ಆದರೂ ತೊಂದರೆ ಇಲ್ಲ. ಇದು ಒಣ ತೂಕದ್ದು ಎಂಬುದು ನೆನಪಿರಲಿ.
  • ಈ ಸಮಯದಲ್ಲಿ ಕೊಡುವ ಗೊಬ್ಬರ  ಸಾಕಷ್ಟು ತೇವಾಂಶ ಇರುವ ಕಾರಣ ಮಣ್ಣಿನಲ್ಲಿ ವಿಲೀನವಾಗಿ ಸಸ್ಯಗಳಿಗೆ  ದೊರೆತು ಅದರ ಫಲಿತಾಂಶ ಸಿಗುತ್ತದೆ.

ಪ್ರಮಾಣ:

  • ರಾಸಾಯನಿಕ ಗೊಬ್ಬರ ಕೊಡುವಾಗ  ಎಳೆಯ ಸಸಿಗಳಿಗೆ ಕಾಂಪ್ಲೆಕ್ಸ್ ಗೊಬ್ಬರವನ್ನು ಕೊಡುವುದು ಉತ್ತಮ.
  • ಅಧಿಕ ಮಳೆಯಾಗುವ ಹುಳಿ ಮಣ್ಣಿಗೆ  ನೈಟ್ರೋಫೋಸ್ಫೇಟ್ ಗೊಬ್ಬರವಾದ  15:15:15  (ಸುಫಲಾ) ಗೊಬ್ಬರ ಉತ್ತಮ.
  • ಉಳಿದ ಕಡೆಗೂ ಅದು ಅಗಬಹುದು ಇಲ್ಲವಾದರೆ  17:17:17 ಗೊಬ್ಬರ ಉತ್ತಮ.

ಒಂದು ವರ್ಷದ ಅಡಿಕೆ ಗಿಡಕ್ಕೆ ವರ್ಷಕ್ಕೆ 35 ಗ್ರಾಂ ಸಾರಜನಕ, 15  ಗ್ರಾಂ ರಂಜಕ ಮತ್ತು 45  ಗ್ರಾಂ ಪೊಟ್ಯಾಶ್ ಬೇಕು. ಇಷ್ಟನ್ನು ಮೂರು ಸಮ ಕಂತುಗಳ ಮೂಲಕ ಕೊಡಬೇಕು.17:17:17  ಗೊಬ್ಬರದಲ್ಲಿ 2% ಪೋಷಕಗಳು ಹೆಚ್ಚು ಇರುತ್ತದೆ. ಮೇಲಿನ ಪ್ರಮಾಣದಷ್ಟೇ ಕೊಟ್ಟರೆ ತೊಂದರೆ ಇಲ್ಲ.

  • ಬೇಸಿಗೆಯಲ್ಲಿ ಪ್ರತೀ ತಿಂಗಳೂ ಕೊಡುವವರು ಮಳೆಗಾಲ ಪ್ರಾರಂಭದಲ್ಲಿ 1/3   ಭಾಗವನ್ನು ಕೊಟ್ಟು ಉಳಿದ  ಪ್ರಮಾಣವನ್ನು ಸಪ್ಟೆಂಬರ್ ನಂತರ ಪ್ರತೀ ತಿಂಗಳಿಗೆ ಬೇಕಾದಂತೆ ಹಂಚಿಕೊಳ್ಳಬೇಕು.
  • ಕಾಂಪ್ಲೆಕ್ಸ್ ಗೊಬ್ಬರ ಕೊಡುವಾಗ ಪ್ರತೀ ಮರಕ್ಕೆ ಸುಫಲಾ 100  ಗ್ರಾಂ ಪ್ರಮಾಣದಲ್ಲಿ ಕೊಟ್ಟರೆ ಪ್ರತೀ ಸಸಿಗೆ 15  ಗ್ರಾಂ NPK  ಕೊಟ್ಟಂತೆ ಆಗುತ್ತದೆ.
  • ಆಗ ತಾನೇ ನೆಟ್ಟ ಗಿಡಕ್ಕೆ ಪ್ರತೀ ಗಿಡಕ್ಕೆ ಕಾಂಪೋಸ್ಟ್ ಗೊಬ್ಬರದ ಜೊತೆಗೆ 50 ಗ್ರಾಂ NPK  ಗೊಬ್ಬರ ಕೊಡಬೇಕು.
  • ಇಡೀ ವರ್ಷದ ರಂಜಕದ ಅಗತ್ಯ ಇದರಲ್ಲಿ ಮುಗಿಯುತ್ತದೆ.
  • ಮುಂದೆ ಕೊಡಬೇಕಾಗುವುದು ಸಾರಜನಕ ಮತ್ತು ಪೊಟ್ಯಾಶಿಯಂ ಮಾತ್ರ.
  • ಇದನ್ನು ಸಾಂಪ್ರದಾಯಿಕ ಗೊಬ್ಬರವಾದ ಯೂರಿಯಾ ಮತ್ತು ಮ್ಯುರೇಟ್ ಆಫ್ ಪೊಟ್ಯಾಶ್ ರೂಪದಲ್ಲಿ ಕೊಡಬಹುದು.
  • ಮುಂದೆ ಸಪ್ಟೆಂಬರ್ ತಿಂಗಳಲ್ಲಿ ಒಮ್ಮೆಲೇ ಕೊಡುವುದಾದರೆ 50  ಗ್ರಾಂ ಯೂರಿಯಾ, ಮತ್ತು 50  ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ ಸಾಕಾಗುತ್ತದೆ.
  • ಇದನ್ನು ಹನಿ ನೀರಾವರಿಯ ಮೂಲಕ ಕೊಡುವುದಾದರೆ ಮಾಸಿಕ ಒಂದು ಗಿಡಕ್ಕೆ 6-7  ಗ್ರಾಂ ಪ್ರಮಾಣದಲ್ಲಿ ಸಾಕಾಗುತ್ತದೆ.

ದ್ವಿತೀಯ ಪೋಷಕಾಂಶ:

  • ಬರೇ NPK ಅಲ್ಲದೆ ಸಸ್ಯಕ್ಕೆ ಮಳೆಗಾಲ ಪ್ರಾರಂಭವಾಗುವ ಸಮಯದಲ್ಲಿ ಒಂದು ಗಿಡಕ್ಕೆ  10  ಗ್ರಾಂ ಪ್ರಮಾಣದಲ್ಲಿ ಮೆಗ್ನೀಶಿಯಂ ಸಲ್ಫೇಟ್ ಮತ್ತು 5  ಗ್ರಾಂ ಸತುವಿನ ಸಲ್ಫೇಟು ಮತ್ತು 50  ಗ್ರಾಂ ಪ್ರಮಾಣದಲ್ಲಿ ಕ್ಯಾಲ್ಸಿಯಂ ಕೊಡಬೇಕು.
  • ಇದು ಎಳವೆಯಲ್ಲಿ ಗಿಡಕ್ಕೆ ಅಂತರ್ಗತ ಶಕ್ತಿಯನ್ನು ಹೆಚ್ಚಿಸಿ ಕೊಡುತ್ತದೆ.

ಈ ಪ್ರಮಾಣವನ್ನು ಕರಾರುವಕ್ಕಾಗಿ ಪಾಲಿಸಲು ಅನುಕೂಲವಾಗಬೇಕಾದರೆ 200 ಲೀ. ನೀರಿನ ಬ್ಯಾರಲ್ ಗೆ 3 ಕಿಲೋ ಸುಫಲಾ ಗೊಬ್ಬರವನ್ನು ಹಾಕಿ ಕಲಕಿ  ಒಂದು ಮರಕ್ಕೆ 1 ಲೀ. ಪ್ರಮಾಣದಲ್ಲಿ ಎರೆಯಬೇಕು. ಉಳಿದುದನ್ನೂ ಇದೇ ರೀತಿ ಪ್ರಮಾಣ ಲೆಕ್ಕಾಚಾರ (2 ಕಿಲೋ ಮೆಗ್ನೀಶಿಯಂ ಸಲ್ಫೇಟ್+ ಕಿಲೋ ಸತುವಿನ ಸಲ್ಫೇಟ್  ಮಿಶ್ರಣ ಮಾಡಿ)  ಪ್ರತೀ ಗಿಡಕ್ಕೆ  1 ಲೀ. ಪ್ರಮಾಣದಲ್ಲಿ ಹಾಕಬೇಕು.

ಸುಣ್ಣವನ್ನು ಮಳೆ ಬರುವ ಸಮಯದಲ್ಲಿ ಗೊಬ್ಬರ ಕೊಡುವ 7  ದಿನಕ್ಕೆ ಮುಂಚೆ  ಬೇರು ಹಬ್ಬಿರುವ ಜಾಗಕ್ಕೆಲ್ಲಾ ಬುಡ ಭಾಗಕ್ಕೆ ಹರಡಬೇಕು. ಅಡಿಕೆ ಸಸಿಯನ್ನು ಎಳೆವೆಯಲ್ಲಿ ಆರೋಗ್ಯವಾಗಿ ಬೆಳೆಸಿದರೆ ಮಾತ್ರ ಅದರ ಭವಿಷ್ಯದ ಬೆಳೆವಣಿಗೆ ಉತ್ತಮವಾಗುತ್ತದೆ. ಎಳೆ ಪ್ರಾಯದ 3-4  ವರ್ಷದ ಬೆಳೆವಣಿಗೆ ಇಡೀ ಜೀವಮಾನದ ಬೆಳೆವಣಿಗೆಯನ್ನು ನಿರ್ಧರಿಸುತ್ತದೆ.

Leave a Reply

Your email address will not be published. Required fields are marked *

error: Content is protected !!