2 ವರ್ಷದ ಅಡಿಕೆ ಸಸಿಗಳಿಗೆ ಗೊಬ್ಬರದ ಪ್ರಮಾಣ.

ಎರಡನೇ ವರ್ಷದ ಅಡಿಕೆ ಸಸಿಗಳು

ಮೊದಲ ವರ್ಷ ಅಡಿಕೆ ಸಸಿ ನೆಡುವಾಗ ಅಲ್ಪ ಸ್ವಲ್ಪವಾದರೂ ಕೊಟ್ಟಿಗೆ ಗೊಬ್ಬರ ಕೊಡುತ್ತೇವೆ. ಮಣ್ಣಿನಲ್ಲೂ ಸ್ವಲ್ಪ ಸಾರಾಂಶ ಇರುತ್ತದೆ. ಬೇರುಗಳೂ ಹೆಚ್ಚು ಬೆಳೆದಿರುವುದಿಲ್ಲ.  ಹಾಗಿರುವಾಗ NPK ಸಮನಾಗಿ ಇರುವ ಕಾಂಪ್ಲೆಕ್ಸ್ ಗೊಬ್ಬರ ಕೊಡುವುದು ಸಾಕಾಗುತ್ತದೆ. ಸಸಿ ಬೆಳೆದಂತೆ ಬೇರು ಹೆಚ್ಚು ಬೆಳೆದು, ಮಣ್ಣಿನಲ್ಲಿ ಸಾರಾಂಶಗಳು  ಕಡಿಮೆ ಆದಂತೆ ಗೊಬ್ಬರವನ್ನು ಹೆಚ್ಚು ಕೊಡಬೇಕಾಗುತ್ತದೆ. ಎರಡನೇ ವರ್ಷದ ತರುವಾಯ ಶಿಫಾರಸಿನಂತೆ NPK ಪ್ರಮಾಣವನ್ನು ಕೊಡುವುದರಿಂದಾ ಆರೋಗ್ಯಕರ ಬೆಳವಣಿಗೆ ಉಂಟಾಗುತ್ತದೆ.

ಗೊಬ್ಬರವನ್ನು ಮಳೆಗಾಲ ಪೂರ್ವದಲ್ಲಿ ಕೊಡುವುದು ಅವಶ್ಯಕ. ಆ ನಂತರ ಮಳೆಗಾಲ ಕಳೆಯುವಾಗ ಮತ್ತು ಬೇಸಿಗೆ ಪ್ರಾರಂಭವಾಗುವಾಗ ಕನಿಷ್ಟ ಮೂರು ಕಂತುಗಳಲ್ಲಿ ಗೊಬ್ಬರವನ್ನು ಕೊಡುವುದು ಅಗತ್ಯ. ಮಳೆಗಾಲ ಪೂರ್ವದ ಗೊಬ್ಬರ  ಬೇರು ಹೆಚ್ಚಳಕ್ಕೆ ಅನುಕೂಲಮಾಡಿಕೊಡುತ್ತದೆ.

ಯಾಕೆ ಈ ಸಮಯ ಪ್ರಾಮುಖ್ಯ:

ಎರಡನೇ ವರ್ಷಕ್ಕೆ ಕಾಲಿಟ್ಟ ಅಡಿಕೆ ಸಸಿ
ಎರಡನೇ ವರ್ಷಕ್ಕೆ ಕಾಲಿಟ್ಟ ಅಡಿಕೆ ಸಸಿ
  • ಸಸಿ ಬೆಳೆದಂತೆ ಹೊಸ ಬೇರುಗಳು ಬರುತ್ತಿರುತ್ತವೆ. ಹಳೆ  ಬೇರುಗಳು ವಾತಾವರಣ ಸಹಜವಾಗಿ ಹೆಚ್ಚು ಚುರುಕಾಗಿ ಆಹಾರ ಬಯಸುತ್ತವೆ.
  • ಈ ಸಮಯದಲ್ಲಿ  ಕೊಡುವ ಪೋಷಕಾಂಶ ಬೆಳೆವಣಿಗೆ ತುಂಬಾ ಪ್ರಯೋಜನಕಾರಿ.
  • ಬೆಳೆಗಳಿಗೆ ಅವುಗಳ ವಯಸ್ಸಿಗನುಗುಣವಾಗಿ ಪೊಷಕಗಳು ಬೇಕು.
  • ಎಳೆ ಗಿಡಕ್ಕೆ ಮರಕ್ಕೆ ಕೊಡುವಷ್ಟು ಬೇಡ.
  • ಸಸ್ಯದಲ್ಲಿ ಎಲೆಗಳು ಎಷ್ಟು ಇರುತ್ತದೆಯೋ ಅದಕ್ಕನುಗುಣವಾಗಿ ಪೋಷಕಗಳನ್ನು ಬಯಸುತ್ತವೆ.
  • ಹಾಗೆಯೇ ಗೊಬ್ಬರಗಳನ್ನು ಕೊಡಬೇಕು.
  • ಕೆಲವು ರೈತರು ಕಚ್ಚಾ ಪೋಷಕಗಳಾದ ಯೂರಿಯಾ , ಸೂಪರ್ ಫೋಸ್ಫೇಟ್  ಮತ್ತು ಮ್ಯುರೇಟ್ ಆಫ್ ಪೊಟ್ಯಾಶ್ ಗೊಬ್ಬರವನ್ನು ಕೊಡುತ್ತಾರೆ. ಕೆಲವರು ಕಾಂಪ್ಲೆಕ್ಸ್ ಗೊಬ್ಬರವನ್ನು ಕೊಡುತ್ತಾರೆ. ಅದು ಎರಡೂ ಒಂದೇ.
  • ಕಚ್ಚಾ ಗೊಬ್ಬರಗಳು ಅಗ್ಗ. ಕಾಂಪ್ಲೆಕ್ಸ್ ಗೊಬ್ಬರ ದುಬಾರಿ. ಜೊತೆಗೆ ಕಾಂಪ್ಲೆಕ್ಸ್ ಗೊಬ್ಬರವನ್ನು ಸರಿಯಾದ ಲೆಕ್ಕಾಚಾರ ಹಾಕಿ ಕೊಡಬೇಕು.
  • ಎಲ್ಲಾ ಪೋಷಕಗಳಲ್ಲಿ ಇರುವ NPK  ಪ್ರಮಾಣವನ್ನು ಗಮನಿಸಿ ಪೂರೈಕೆ ಮಾಡಬೇಕು.
  • ರೈತರು ಯಾವುದೇ ಕಾರಣಕ್ಕೂ ಬರೇ ಎರಡು  ಪೋಷಕಾಂಶಗಳನ್ನು ಕೊಡಬಾರದು.
  • ಮೂರೂ ಪೋಷಕಗಳನ್ನೂ ಪ್ರಮಾಣಕ್ಕನುಗುಣವಾಗಿ ಕೊಡಬೇಕು.
  • ಬರೇ DAP  ಗೊಬ್ಬರ  ಕೊಟ್ಟರೆ ಎಳವೆಯಲ್ಲೇ ಸಸ್ಯದ ಬೆಳೆವಣಿಗೆಯಲ್ಲಿ ಅಸಮತೋಲನ ಉಂಟಾಗುತ್ತದೆ.

ಯಾವ ಗೊಬ್ಬರ ಕೊಡಬೇಕು:

  • ಅಡಿಕೆ ಮರ/ ಸಸಿಗಳಿಗೆ ಗೊಬ್ಬರ ಕೊಡುವಾಗ ಕನಿಷ್ಟ ಮೂರು ಕಂತುಗಳಲ್ಲಿ ಗೊಬ್ಬರಗಳನ್ನು  ಕೊಡಬೇಕು.
  • ಅಲ್ಲದೆ ಪ್ರತೀ ವರ್ಷ ಮುಂಗಾರು ಮಳೆ ಪ್ರಾರಂಭದ ಸಮಯದಲ್ಲಿ ಕೊಟ್ಟಿಗೆ ಗೊಬ್ಬರವನ್ನು ಕೊಡಬೇಕು.
  • ಮಳೆ ಬರುತ್ತಿರುವ ಕಾರಣ ಸಾವಯವ ಗೊಬ್ಬರವು ತೇವಾಂಶ ಲಭ್ಯತೆಯಿಂದ ಸೂಕ್ಷ್ಮಾಣು ಜೀವಿಗಳ ಕ್ರಿಯೆಯಿಂದ ಕರಗಿ ಸಸ್ಯಗಳಿಗೆ ಪೂರ್ತಿ ಲಭ್ಯವಾಗುತ್ತದೆ.
  • ಸಸ್ಯಗಳಿಗೆ ಮಣ್ಣಿನ ಸಡಿಲತೆಯ ಕಾರಣ, ಸಾಕಷ್ಟು ತೇವಾಂಶದ ಕಾರಣ ಬೇರು ಚೆನ್ನಾಗಿ ಬೆಳೆಯುವ ಕಾರಣ ಕೊಡುವ ಎಲ್ಲಾ ಪೋಷಕಗಳು ಸಸಿ/ಮರಕ್ಕೆ  ಲಭ್ಯವಾಗುತ್ತದೆ.

2  ವರ್ಷದ ಅಡಿಕೆ ಸಸಿಗೆ ಪ್ರಮಾಣ:

  • ವರ್ಷಕ್ಕೆ ಒಮ್ಮೆ ಸುಮಾರು 8 ಕಿಲೋ ಒಣ  ತೂಕದ ಪ್ರಮಾಣದಲ್ಲಿ  ಕೊಟ್ಟಿಗೆ ಗೊಬ್ಬರ ಅಥವಾ, ಕೋಳಿ ಗೊಬ್ಬರ ಅಥವಾ ಕುರಿ ಗೊಬ್ಬರವನ್ನು ಕೊಡಬೇಕು.
  • ಇದು 10 ಕಿಲೋ ಆದರೂ ತೊಂದರೆ ಇಲ್ಲ. ಇದು ಒಣ ತೂಕದ್ದು ಎಂಬುದು ನೆನಪಿರಲಿ.
  • ರಾಸಾಯನಿಕ ಗೊಬ್ಬರ ಕೊಡುವಾಗ 2 ವರ್ಷದ ಎಳೆಯ ಸಸಿಗಳಿಗೆ ಕಾಂಪ್ಲೆಕ್ಸ್ ಗೊಬ್ಬರವನ್ನು ಕೊಡಬಹುದು ಅಥವಾ ಕಚ್ಚಾ ಗೊಬ್ಬರವನ್ನೂ ಕೊಡಬಹುದು.
  • ಕಚ್ಚಾ ಗೊಬ್ಬರವಾದ ಯೂರಿಯಾ (150  ಗ್ರಾಂ ನಲ್ಲಿ 1/3 ಪಾಲು) 50 ಗ್ರಾಂ, ಸೂಪರ್ ಅಥವಾ ರಾಕ್ ಫೋಸ್ಫೇಟ್ (130 ಗ್ರಾಂ ನಲ್ಲಿ 1/3  ಪಾಲು) 45 -50  ಗ್ರಾಂ, ಮತ್ತು ಮ್ಯೂರೆಟ್ ಆಫ್ ಪೊಟ್ಯಾಶ್ (150 ಗ್ರಾಂ ನಲ್ಲಿ 1/3 ಪಾಲು) 50 ಗ್ರಾಂ ನಂತೆ ಕೊಡಬೇಕು.
  • ಗಿಡದಿಂದ 1.5 ದೂರದಲ್ಲಿ ಮಣ್ಣು ಕೆರೆದು ಅಥವಾ ಹಾಗೇ ಹಾಕಿ ಸಾವಯವ ಗೊಬ್ಬರ ಮುಚ್ಚಬೇಕು.
  • 15:15:15  (ಸುಫಲಾ) ಗೊಬ್ಬರ ಅಥವಾ  17:17:17 ಗೊಬ್ಬರ ಕೊಡುವುದಾದರೆ, ಪ್ರತೀ ಮರಕ್ಕೆ ಸುಫಲಾ 325  ಗ್ರಾಂ ಪ್ರಮಾಣದಲ್ಲಿ ಕೊಟ್ಟರೆ ಪ್ರತೀ ಸಸಿಗೆ 48 ಗ್ರಾಂ NPK  ಕೊಟ್ಟಂತೆ ಆಗುತ್ತದೆ.
  • ಇಡೀ ವರ್ಷದ ರಂಜಕದ ಅಗತ್ಯ ಇದರಲ್ಲಿ ಮುಗಿಯುತ್ತದೆ.
  • ಮುಂದೆ ಕೊಡಬೇಕಾಗುವುದು ಸಾರಜನಕ ಮತ್ತು ಪೊಟ್ಯಾಶಿಯಂ ಮಾತ್ರ. ಇದನ್ನು ಸಾಂಪ್ರದಾಯಿಕ ಗೊಬ್ಬರವಾದ ಯೂರಿಯಾ ಮತ್ತು ಮ್ಯುರೇಟ್ ಆಫ್ ಪೊಟ್ಯಾಶ್ ರೂಪದಲ್ಲಿ ಕೊಡಬಹುದು.
  • 17:17:17  ಗೊಬ್ಬರದಲ್ಲಿ 2% ಪೋಷಕಗಳು ಹೆಚ್ಚು ಇರುತ್ತದೆ.
  • ಮೇಲಿನ ಪ್ರಮಾಣಕ್ಕಿಂತ 2% ಕಡಿಮೆ ಕೊಡಬೇಕು.
ಎರಡನೇ ವರ್ಷದಲ್ಲಿ ಸಸಿ ಇಷ್ಟಾದರೂ ಬೆಳೆಯಬೇಕು.
ಎರಡನೇ ವರ್ಷದಲ್ಲಿ ಸಸಿ ಇಷ್ಟಾದರೂ ಬೆಳೆಯಬೇಕು.

ದ್ವಿತೀಯ ಪೋಷಕಾಂಶ:

  • ಬರೇ ಇಷ್ಟೇ ಅಲ್ಲದೆ ಸಸ್ಯಕ್ಕೆ ಮಳೆಗಾಲ ಪ್ರಾರಂಭವಾಗುವ ಸಮಯದಲ್ಲಿ ಒಂದು ಗಿಡಕ್ಕೆ  10-15  ಗ್ರಾಂ ಪ್ರಮಾಣದಲ್ಲಿ ಮೆಗ್ನೀಶಿಯಂ ಸಲ್ಫೇಟ್ ಮತ್ತು 5-7  ಗ್ರಾಂ ಸತುವಿನ ಸಲ್ಫೇಟು ಮತ್ತು 50-75  ಗ್ರಾಂ ಪ್ರಮಾಣದಲ್ಲಿ ಕ್ಯಾಲ್ಸಿಯಂ ಕೊಡಬೇಕು.
  • ಇದು ಎಳವೆಯಲ್ಲಿ ಗಿಡಕ್ಕೆ ಅಂತರ್ಗತ ಶಕ್ತಿಯನ್ನು ಹೆಚ್ಚಿಸಿ ಕೊಡುತ್ತದೆ.

ಸಿಂಪರಣೆಯ ಮೂಲಕ ಗೊಬ್ಬರ ಕೊಡುವುದು:

  • ಎಲೆಗಳಿಗೆ ಸಿಂಪರಣೆ ಮೂಲಕ ಗೊಬ್ಬರ ಕೊಡುವುದು ಕೆಲವು ಸಮಯದಲ್ಲಿ  ತುಂಬಾ ಪ್ರಯೋಜನ ಕೊಡುತ್ತದೆ.
  • ಕೆಲವೊಮ್ಮೆ ಬೇರಿನ ಮೂಲಕ ಆಹಾರ ಸಂಗ್ರಹಣೆ ಕಡಿಮೆಯಾಗುತ್ತದೆ.
  • ಆ ಸಮಯದಲ್ಲಿ ಪತ್ರ ಸಿಂಚನದ ಮೂಲಕ ಪೋಷಕಗಳನ್ನು ಕೊಡುವುದರಿಂದ  ಸಿದ್ದ ರೂಪದಲ್ಲಿ ಆಹಾರ ದೊರೆತು ಸಸಿ ಬೆಳವಣಿಗೆ ಉತ್ತಮವಾಗುತ್ತದೆ.  
  • ಎಲೆಗಳು ಹಸುರಾದಂತೆ ಬೇರಿನ ಮೂಲಕ ಆಹಾರ ಸ್ವೀಕರಿಸುವಿಕೆ  ಹೆಚ್ಚಾಗುತ್ತದೆ.
  • ನೆಟ್ಟ ಸಸಿಗಳಲ್ಲಿ ಎಲ್ಲವೂ ಏಕ ಪ್ರಕಾರವಾಗಿ ಬೆಳೆಯದೇ ಇದ್ದಾಗ  ಯಾವುದು ಸಣಕಲಾಗಿ ಬೆಳೆಯುತ್ತಿದೆಯೋ ಅಂತಹ ಗಿಡಗಳಿಗೆ  ಮಾತ್ರ  ಪತ್ರ ಸಿಂಚನದ ಮೂಲಕ ಗೊಬ್ಬರ ಕೊಡಬೇಕು. 
  • ಹೀಗೆ ಎರಡು ಮೂರು ಸಾರಿ ಮಾಡಿದಾಗ ಅವು ಉಳಿದ ಗಿಡಗಳಿಗೆ ಸಮನಾಗಿ ಬೆಳೆಯುತ್ತವೆ.
  • ಪತ್ರ ಸಿಂಚನಕ್ಕೆ 1 ಕಿಲೋ ,19:19:19 ಮತ್ತು 100 ಗ್ರಾಂ ಹುಡಿ ಸೂಕ್ಷ್ಮ ಪೋಷಕಾಂಶ ಅಥವಾ 200 ಮಿಲಿ ದ್ರವ ಪೋಷಕ ಗಳನ್ನು 100 ಲೀ. ನೀರಿಗೆ  ಮಿಶ್ರಣ ಮಾಡಿ  ಎಲೆ ಅಡಿ ಭಾಗಕ್ಕೆ ಮತ್ತು ಮೇಲೆ, ಬಿಸಿಲು ಇಲ್ಲದ ಹೊತ್ತಿನಲ್ಲಿ ಸಿಂಪಡಿಸಬೇಕು.
  • ಅದು ಸುಮಾರು 6 ಗಂಟೆ ಕಾಲ ಒಣಗಬೇಕು.

ಅಡಿಕೆ ಸಸಿಯನ್ನು ಎಳೆವೆಯಲ್ಲಿ ಆರೋಗ್ಯವಾಗಿ ಬೆಳೆಸಿದರೆ ಮಾತ್ರ ಅದರಲ್ಲಿ ಹೆಚ್ಚು ಗರಿಗಳು ಬಂದು  ಬೇರುಗಳು ಹೆಚ್ಚಿ, ಉತ್ತಮವಾಗಿ ಪೋಷಕಾಂಶಗಳನ್ನು ಬಳಸಿಕೊಳ್ಳುವ ಶಕ್ತಿ ಬರುತ್ತದೆ. ಅದರ ಕೋಶಗಳು ಚೆನ್ನಾಗಿ ಬೆಳೆಯುತ್ತವೆ.ಭವಿಷ್ಯದ ಬೆಳೆವಣಿಗೆಯನ್ನು ಉತ್ತಮವಾಗಿ ಇರುವಂತೆ ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!