ಬೋರ್ಡೋ ದ್ರಾವಣ ಸಿಂಪಡಿಸುವಾಗ ಹಿಂದೆ ರಾಳ ಎಂಬ ವಸ್ತುವನ್ನು ಬಳಕೆ ಮಾಡುತ್ತಿದ್ದರು. ಅದು ಒಂದು ಮರದ ಮೇಣವಾಗಿತ್ತು. ಈಗ ಅದರ ಬದಲಿಗೆ ಆಧುನಿಕ ಹೆಸರಿನ ಉತ್ಪನ್ನಗಳು ಬಂದಿವೆ.
ಬಟ್ಟೆಯೊಂದನ್ನು ನೀರಿನಲ್ಲಿ ಹಾಕಿ. ಆಗ ಅದರ ಎಲ್ಲಾ ಭಾಗಗಳೂ ಏಕ ಪ್ರಕಾರ ಒದ್ದೆಯಾಗುವುದಿಲ್ಲ. ಅದನ್ನು ಸಾಬೂನಿನ ದ್ರಾವಣದಲ್ಲಿ ಹಾಕಿ, ಎಲ್ಲಾ ಭಾಗಗಳೂ ಒದ್ದೆಯಾಗುತ್ತದೆ. ಇದಕ್ಕೆ ಕಾರಣ ಸಾಬೂನಿನಲ್ಲಿರುವ ಪ್ರಸರಕ ಗುಣ.
- ಈ ತತ್ವದ ಮೇಲೆ ಕೃಷಿಯಲ್ಲಿ ಸ್ಪ್ರೆಡ್ಡರುಗಳ ಬಳಕೆ ಅಗತ್ಯವಾಯಿತು.
- ಸ್ಪ್ರೆಡ್ಡರ್ ಬಳಸಿದಾಗ ನೀವು ಸಿಂಪಡಿಸಿದ ದ್ರಾವಣ ಎಲ್ಲಾ ಭಾಗಕ್ಕೂ ತಗಲುತ್ತದೆ.
ಪ್ರಯೋಜನ ಏನು?
- ನಾವು ಬೆಳೆಗಳಿಗೆ ಕೀಟನಾಶಕ, ಶಿಲೀಂದ್ರನಾಶಕ, ಗೊಬ್ಬರ, ಪ್ರಚೋದಕಗಳನ್ನು ಸಿಂಪರಣೆ ಮಾಡುತ್ತೇವೆ.
- ಈ ಸಿಂಪರಕಗಳನ್ನು ಹಾಗೆಯೇ ಸಿಂಪರಣೆ ಮಾಡಿದಾಗ ಅದರ ಹನಿಗಳು ಎಷ್ಟು ಅಗಲದ ವಿಸ್ತೀರ್ಣಕ್ಕೆ ತಗಲಿರುತ್ತದೆಯೋ ಅಷ್ಟೇ ಅದರ ಪ್ರಸರಕ ಗುಣ.
- ಎಲ್ಲಾ ಭಾಗಕ್ಕೂ ಅದು ಹಬ್ಬಿ ಎಲ್ಲಾ ಭಾಗವೂ ಒದ್ದೆಯಾಗಲಾರದು.
ಹೆಚ್ಚಿನ ವಿವರಗಳಿಗಾಗಿ ಈ ವೀಡಿಯೋ ವೀಕ್ಷಿಸಿ
- ಈ ಒದ್ದೆಯಾಗುವ ಕ್ಷಮತೆಯನ್ನು ಹೆಚ್ಚಿಸಲು ಬಂದವುಗಳೇ ಸ್ಪ್ರೆಡ್ಡರುಗಳು.
- ಸಿಂಪರಕ ದ್ರಾವಣಕ್ಕೆ ಸ್ಪ್ರೆಡ್ಡರುಗಳನ್ನು ಸೇರಿಸಿದಾಗ ಆ ಹನಿಯು ಸುಮಾರಾಗಿ 5 – 10 ಪಟ್ಟು ಹೆಚ್ಚು ವಿಶಾಲ ಜಾಗಕ್ಕೆ ಪಸರಿಸುತ್ತದೆ.
- ಒಂದು ಹನಿ ನೀರು 1 ಸಾಸಿವೆಯಷ್ಟು ಅಗಲವನ್ನು ಒದ್ದೆ ಮಾಡಿದರೆ ಅ ನೀರಿಗೆ ಸ್ಪ್ರೆಡ್ಡರನ್ನು ಸೇರಿಸಿದರೆ, ಅಷ್ಟೇ ಪ್ರಮಾಣದ ನೀರಿನ ಹನಿ ಸುಮಾರು 1 ರೂ ನಾಣ್ಯದಷ್ಟು ಜಾಗಕ್ಕೆ ಪಸರಿಸುತ್ತದೆ.
- ಇದರಿಂದ ಹಬ್ಬುವಿಕೆ ಜಾಸ್ತಿಯಾಗುತ್ತದೆ. ಸಿಂಪರಕ ಕಡಿಮೆ ಸಾಕಾಗುತ್ತದೆ. ಎಲ್ಲಾ ಭಾಗಗಳಿಗೂ ದ್ರಾವಣ ತಗಲುತ್ತದೆ.
ಫಲಿತಾಂಶ:
- ಯಾವುದೇ ಕೀಟನಾಶಕ, ರೋಗ ನಾಶಕ. ಕಳೆನಾಶಕ, ಗೊಬ್ಬರ ಸಿಂಪರಣೆ ಮಾಡುವಾಗ ಸ್ಪ್ರೆಡ್ಡರನ್ನು ಬಳಸಿದರೆ ಅದರಿಂದ ಬಳಸುವ ಯಾವುದೇ ಸಿಂಪರಕದ ಕ್ಷಮತೆ ಹೆಚ್ಚುತ್ತದೆ. ಫಲಿತಾಂಶ ಉತ್ತಮವಾಗುತ್ತದೆ.
- ಮಾರುಕಟ್ಟೆಯಲ್ಲಿ ಬೇರೆ ಬೇರೆ ತಯಾರಿಕೆಯ ಸ್ಪ್ರೆಡ್ಡರ್ಗಳು ಲಭ್ಯ. ಕೆಲವು ತಯಾರಿಕೆಗಳಿಗೆ ಜೊತೆಗೇ ಸ್ಟಿಕ್ಕರ್ ಸೇರಿಸಿರುತ್ತಾರೆ.
- ಅಂಟಿಕೊಳ್ಳುವ ಗುಣ ಮತ್ತು ಪ್ರಸರಕ ಗುಣ ಎರಡೂ ಇದ್ದರೆ ಉತ್ತಮ.
- ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಉತ್ಪನ್ನಗಳೂ ಒಂದೇ ರೀತಿಯಲ್ಲಿ ಸ್ಪ್ರೆಡ್ಡಿಂಗ್ ಆಗುವುದಿಲ್ಲ.
- ಕೆಲವು ಸ್ವಲ್ಪ ವಿಸ್ತೀರ್ಣಕ್ಕೆ ಹಬ್ಬುತ್ತದೆ, ಮತ್ತೆ ಕೆಲವು ಅಧಿಕ ವಿಸ್ತೀರ್ಣಕ್ಕೆಹಬ್ಬುತ್ತದೆ.
ಕಳಪೆ ಗಮ್ ಅಥವಾ ಸ್ಪ್ರೆಡ್ಡರ ಬಳಸುವ ಬದಲು 1 ರೂ. ಗೆ ದೊರೆಯುವ ಶಾಂಪೂ 5 ಪ್ಯಾಕೆಟ್ (200 ಲೀ. ದ್ರಾವಣಕ್ಕೆ) ಹಾಕಿದರೆ ಸಾಕು. ಫಲಿತಾಂಶ ಅದಕ್ಕಿಂತ ಉತ್ತಮ.
- ಕೆಲವು ತಯಾರಿಕೆಗಳು ಹೆಚ್ಚು (200 ಮಿಲಿ ತನಕ) ಪ್ರಮಾಣದಲ್ಲಿ ಬೇಕಾಗುತ್ತದೆ, ಕೆಲವು ಕಡಿಮೆ ಪ್ರಮಾಣದಲ್ಲಿ ಹೆಚ್ಚು ಕ್ಷಮತೆಯನ್ನು ತೋರಿಸುತ್ತವೆ.
- ನ್ಯಾನೋ ತಂತ್ರಜ್ಞಾನದಲ್ಲಿ 1 ಲೀ ನೀರಿಗೆ ½ ಮಿಲಿಯಷ್ಟು ಮಾತ್ರ ಸೇರಿಸುವ ಸ್ಪ್ರೆಡ್ದರುಗಳೂ ಈಗ ಬಂದಿವೆ.
ಪರೀಕ್ಷೆ ಹೇಗೆ:
- 10 ಮಿಲಿ ನೀರಿಗೆ 1 ಬಿಂದು ಸ್ಪ್ರೆಡ್ಡರನ್ನು ಹಾಕಿ ಅದರಲ್ಲಿ ಒಂದು ಬಿಂದುವನ್ನು ಕೆಸುವಿನ ಎಲೆ ಮೇಲೆ ಹಾಕಿ.
- ಆಗ ಅದು ಎಷ್ಟು ಜಾಗಕ್ಕೆ ಪ್ರಸಾರವಾಗುತ್ತದೆ ಎಂದು ತಿಳಿಯಿರಿ.
- ಕೆಲವು ಹೆಚ್ಚು ಜಾಗಕ್ಕೆ ಪ್ರಸಾರವಾಗುತ್ತದೆ. ಅಂತದ್ದು ಉತ್ತಮ ಸ್ಪ್ರೆಡ್ಡರ್ ಆಗಿರುತ್ತದೆ.
ಕೆಸುವಿನ ಎಲೆಯ ಮೇಲೆ ನೀರು ಅಂಟಿಕೊಳ್ಳುವುದಿಲ್ಲ. ಸ್ಪ್ರೆಡ್ದರ್ ಬಳಸಿದರೆ ಅಂಟಿಕೊಳ್ಳುತ್ತದೆ. ಇದೇ ಉತ್ತಮ ಗುಣದ ಸ್ಪ್ರೆಡ್ಡರ್ ಎನ್ನಬಹುದು.
- ಸ್ಪ್ರೆಡ್ಡರ್ ಒಂದೇ ಅಲ್ಲ, ಅದರ ಜೊತೆಗೆ ಅಂಟನ್ನೂ ಸೇರಿಸಿದ ತಯಾರಿಕೆಗಳಿವೆ. ಇದು ತಕ್ಷಣ ಅಂಟಿ ಕೊಳ್ಳುತ್ತದೆ ಮತ್ತು ತೊಳೆದು ಹೋಗುವುದಿಲ್ಲ.
- ಕೆಲವರು ತಕ್ಷಣ ಒಣಗಿಕೊಳ್ಳುವಂತ ವಸ್ತುವನ್ನು ಸೇರಿಸಿರುತ್ತಾರೆ. ಈ ಮೂರೂ ಸೇರಿಸಲ್ಪಟ್ಟ ಸ್ಪ್ರೆಡ್ಡರು ಉತ್ತಮ ಎನ್ನಬಹುದು.
- ಯಾವುದೇ ಒಂದು ಸ್ಪ್ರೆಡ್ಡರನ್ನು ಅಂಗಡಿಯವನ ಶಿಫಾರಸಿನ ಮೇಲೆ ಕಣ್ಣು ಮುಚ್ಚಿ ಕೊಳ್ಳೂವ ಬದಲಿಗೆ ಈ ಚಿತ್ರದಲ್ಲಿ ತೋರಿಸಿರುವಂತೆ ಅದನ್ನು ಪರೀಕ್ಷೆ ಮಾಡಿ ಕೊಳ್ಳಿ.
- ಕೆಸುವಿನ ಎಲೆಗೆ ಬಹುತೇಕ ಯಾವುದೂ ಅಂಟಿಕೊಳ್ಳಲಾರದು. ಅದಕ್ಕೆ ಅಂಟಿಕೊಳ್ಳುವಂತಹ, ಅಧಿಕ ವಿಸ್ತೀರ್ಣಕ್ಕೆ ಹಬ್ಬುವಂತಹ ಪ್ರಸರಕವನ್ನು ಆಯ್ಕೆ ಮಾಡಿಕೊಳ್ಳಿ.
ಸ್ಪ್ರೆಡ್ಡರ್ ಹಾಗೂ ಅಂಟು: ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ.
- ಸಾಧಾರಣ ಮಟ್ಟಿಗೆ ಶಾಂಪೂ ಬಳಸಿದರೂ ಪ್ರಸರಣ ಗುಣ ಚೆನ್ನಾಗಿರುತ್ತದೆ.
- ಬಹಳ ದುಬಾರಿಯ ಪ್ರಸರಕ ಬೇಕಾಗಿಲ್ಲ.
- ಬರೇ ಅಂಟು ಪ್ರಸರಕಕ್ಕೆ ಲೀ. 100-200 ರೂ. ತನಕ ಹಾಗೂ ಸ್ಪ್ರೆಡ್ಡರ್ ಮತ್ತು ಅಂಟು ಗುಣ ಎರಡು ಇರುವ ಉತ್ಕೃಷ್ಟ ಗುಣಮಟ್ಟದ ಸ್ಪ್ರೆಡ್ಡರ್ ಗೆ ಲೀಟರಿಗೆ 350-500 (.5ಮಿಲಿ) ತನಕ ಇರುತ್ತದೆ.
- ಸಣ್ಣ ಮರಗಳಿಗೆ, ಸಸಿಗಳಿಗೆ ನೆಲದಿಂದಲೇ ಅಥವಾ ಗನ್ ಮೂಲಕ ಸಿಂಪರಣೆ ಮಾಡುವಾಗ ಸ್ಪ್ರೆಡ್ಡರ್ ಬಳಸುವುದು ಅಗತ್ಯ ಎನ್ನಿಸುವುದಿಲ್ಲ.
- ಕಾರಣ ಅಲ್ಲಿ ನಮ್ಮ ಕಣ್ಣಿಗೆ ಕಾಣುವಂತೆ ಔಷಧಿಯ ಲೇಪನ ಮಾಡಲು ಸಾಧ್ಯ.
- ಸರಿಯಾದ ರೀತಿಯಲ್ಲಿ ಗೊನೆಯ ಕಾಯಿಗಳ ಮೇಲೆ ಬೀಳುವಂತೆ ಸೂಕ್ಷ್ಮ ಹನಿಗಳ ಮೂಲಕ ಸಿಂಪಡಿಸುವಾಗ ಸ್ಪ್ರೆಡ್ಡರ್ ಇಲ್ಲದೆಯೂ ಅದು ಇಡೀ ಕಾಯಿಗೆ ಲೇಪನವಾಗುತ್ತದೆ.
- ದೊಡ್ಡ ಮರಗಳಿಗೆ ಸಿಂಪಡಿಸುವಾಗ ಎತ್ತರ ಇರುವ ಕಾರಣ ಸ್ವಲ್ಪ ಸಲೀಸಾಗಿ ಎಸೆಯಲ್ಪಟ್ಟು ಹನಿಗಳು ಸ್ವಲ್ಪ ಪ್ರಮಾಣದಲ್ಲಿ ಗೊನೆಗೆ ಬಿದ್ದರೂ ಅದು ಕಾಯಿಗಳ ಮೇಲೆ ಲೇಪನವಾಗಲು ಸ್ಪ್ರೆಡ್ಡರ್ ಬಳಸಬಹುದು.
- ಅಂಟು ಎಂಬುದು ಯಾವ ಕಾರಣಕ್ಕೆ ಮಾಡಿದ್ದಾರೆಯೋ ತಿಳಿಯದು.
- ಮಳೆ ಬಾರದ ಸಮಯದಲ್ಲಿ ಬೋರ್ಡೋ ದ್ರಾವಣವನ್ನು ಸಿಂಪಡಿಸಬೇಕು ಎಂಬುದು ಶಿಫಾರಸು.
- ಗೊನೆ ಒಣಗಿರುವಾಗ ಸಿಂಪಡಿಸಬಹುದು. ಧೂಳು ಹನಿ ಮಳೆ ಬರುವಾಗ ಸಿಂಪರಣೆ ಮಾಡಬಹುದು.
- ಹಾಗೆಂದು ಮಳೆ ಬರುತ್ತಿರುವಾಗ ಸಿಂಪರಣೆ ಶಿಫಾರಿತವಲ್ಲ.
- ಕಾಪರ್ ಸಲ್ಫೇಟ್ ಮತ್ತು ಸುಣ್ಣ ಮಿಶ್ರಣ ಮಾಡಿದಾಗ ಅದಕ್ಕೆ ಅಂಟುವ ಗುಣ ಬರುತ್ತದೆ.
- ಸುಣ್ಣ ಅಂಟಿಕೊಳ್ಳುವಂತದ್ದು ಎಂಬುದು ಸಾಧಾರಣ ಎಲ್ಲಾ ಹಿರಿಯ ತೆಲೆಗಳಿಗೆ ಗೊತ್ತಿದೆ.
- ಹಿಂದೆ ಗಾರೆಗೂ ಇದನ್ನು ಬಳಸುತ್ತಿದ್ದುದು ಇದೇ ಕಾರಣಕ್ಕೆ.
ನೀವು ಬೋರ್ಡೋ ಸಿಂಪಡಿಸುವಾಗ ತೋಟದಲ್ಲಿ ಓಡಾಡುತ್ತಾ ಇದ್ದರೆ ನಿಮ್ಮ ಮೈ ಕೈಗೆ ಸ್ವಲ್ಪ ಹನಿ ದ್ರಾವಣ ಬೀಳುತ್ತದೆ. ಮಳೆ ಬರುತ್ತಿದ್ದರೂ , ಮೈ ಒದ್ದೆಯಾಗಿದ್ದರೂ ಅದು ಮನೆಗೆ ಬಂದು ನೋಡಿದಾಗ ಅಥವಾ ಮೈ ಒಣಗಿದಾಗ ಅಂಟಿಕೊಂಡೇ ಇರುತ್ತದೆ. ಇದರಿಂದ ಸುಣ್ಣಕ್ಕೆ ಅಂಟಿಕೊಳ್ಳುವ ಗುಣ ಇದೆ ಎಂದರ್ಥ ತಾನೇ.
- ಇದನ್ನು ತಿಳಿಸುವ ಉದ್ದೇಶ ಮತ್ತೇನೂ ಅಲ್ಲ. ನಾನು ಕೆಲವು ಅಂಟು, ಸ್ರೆಡ್ಡರ್ ತಯಾರಿಕಾ ಘಟಕಗಳನ್ನು ನೋಡಿದ್ದೇನೆ.
- ಇದನ್ನು ಕೆಲವು ರಾಸಾಯನಿಕಗಳನ್ನು ಮಿಶ್ರಣ ಮಾಡಿ ತಯಾರಿಸಲಾಗುತ್ತದೆ.
- ಇದು ದ್ರಾವಣದ ಸಹನಾ ಸ್ಥಿತಿಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದು ಸಾಮಾನ್ಯ ರೈತರಿಗೆ ಗೊತ್ತಾಗದ ಕಾರಣ ಬೇಕಾದಲ್ಲಿ ಮಾತ್ರ ಬಳಕೆ ಮಾಡುವುದು ಉತ್ತಮ.
ಕೊಳೆ ಔಷಧಿ ಸಿಂಪಡಿಸುವಾಗ, ಪೊಷಕಾಂಶ , ಕೀಟನಾಶಕ ರೋಗ ನಾಶಕ ಸಿಂಪಡಿಸುವಾಗ ಗುಣಮಟ್ಟದ ಸ್ಪ್ರೆಡ್ಡರ್, ಸ್ಟಿಕ್ಕರ್ ಸೇರಿದರೆ ಅದರ ಪರಿಣಾಮ ಉತ್ತಮವಾಗಿರುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೆ ತಟಸ್ಥ ಸ್ಥಿತಿಯ (nutral) ಸ್ಪ್ರೆಡ್ಡರ್ ಬಳಕೆಗೆ ಉತ್ತಮ.