ಮಳೆಗಾಲದಲ್ಲಿ ಕೊಳೆ ನಿವಾರಣೆಗೆ ಸಿಂಪಡಿಸುವ ಬೋರ್ಡೋ ದ್ರಾವಣವನ್ನು ಈಗ ಸಿಂಪಡಿಸುವುದರಿಂದ ಅನುಕೂಲ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಕೊಳೆ ರೋಗಕ್ಕೆ ಸಿಂಪಡಿಸುವ ಮೈಲುತುತ್ತೆ ಮತ್ತು ಸುಣ್ಣ ಇವುಗಳ ಸಮತೋಲಿತ ಮಿಶ್ರಣಕ್ಕೆ ಬೋರ್ಡೋ ದ್ರಾವಣ Bordeaux mixture ಎನ್ನುತ್ತಾರೆ. ಈ ದ್ರಾವಣವು ಶೇ. 1 ರ ಪ್ರಮಾಣದಲ್ಲಿ ಸಿಂಪಡಿಸಬೇಕು ಎಂಬುದು ಶಿಫಾರಸು. ಇದು ತಟಸ್ಥ ಮಿಶ್ರಣವಾಗಿರಬೇಕು. ಇದರಿಂದ ಫಲ ಹೆಚ್ಚು. ಇದನ್ನು ಮಳೆ ಬಂದ ನಂತರವೇ ಸಿಂಪಡಿಸಬೇಕಾಗಿಲ್ಲ. ಮಳೆ ಬರುವ ಮುಂಚೆಯೂ ಇದನ್ನು ಸಿಂಪರಣೆ ಮಾಡಬಹುದು. ಈಗಾಗಲೇ ಅಡಿಕೆ ಬೆಳೆಯುವ ಪ್ರದೇಶಗಳಲ್ಲೆಲ್ಲಾ ಚೆನ್ನಾಗಿ ಮಳೆ ಆಗಿದ್ದು, ಇನ್ನು ಬೋರ್ಡೋ ದ್ರಾವಣ ಸಿಂಪಡಿಸಿದರೆ ಅನುಕೂಲ ತುಂಬಾ ಇದೆ.
ಏನು ಅನುಕೂಲ:
- ಕೊಳೆ ರೋಗಕ್ಕೆ ಕಾರಣವಾದ ಫೈಟೋಪ್ಥೆರಾ ಶಿಲೀಂದ್ರವು ಮಳೆ ಬಿಸಿಲಿನ ವಾತಾವರಣದಲ್ಲಿ (Humid climate) ಬೀಜಾಂಕುರಗೊಂಡು ಬೆಳೆಯುವಂತದ್ದು.
- ಅವುಗಳ ಸಂಖ್ಯಾಭಿವೃದ್ದಿಗೆ ಈಗ ಬರುತ್ತಿರುವ ಮಳೆ ಮತ್ತು ಬಿಸಿಲು ಹೆಚ್ಚು ಅನುಕೂಲಕರ.
- ಮೂಲದಲ್ಲೇ ಬೀಜಾಣುಗಳನ್ನು ಮೊಳಕೆಯೊಡೆಯದಂತೆ ಮಾಡಲು ಈಗ ಬೋರ್ಡೋ ದ್ರಾವಣ ಸಿಂಪರಣೆ ಪ್ರಯೋಜನಕಾರಿ.
- ಕೊಳೆ ರೋಗ ತರಬಲ್ಲ ಶಿಲೀಂದ್ರದ ಬೀಜಾಣುಗಳ ಮೊಳಕೆ ಒಡೆಯುವಿಕೆಯನ್ನು ತಡೆಯುವಲ್ಲಿ ತಾಮ್ರ ಸಹಕಾರಿ.
- ಬರೇ ತಾಮ್ರವನ್ನು ಸಿಂಪರಣೆ ಮಾಡಿದರೆ ಅದು ಆಮ್ಲೀಯವಾದ ಕಾರಣ ಫಲ ಇಲ್ಲ. ಅದಕ್ಕಾಗಿ ಕ್ಷಾರೀಯ ಸುಣ್ಣ ವನ್ನು ಸೇರಿಸಿ ಅದನ್ನು ತಟಸ್ಥೀಕರಣ ಮಾಡಿ ಸಿಂಪಡಿಸಲು ಹೇಳಲಾಗಿದೆ.
- ಈ ಸಮಯದಲ್ಲಿ ಶಿಲೀಂದ್ರ ಬೀಜಾಣುಗಳು ಮರದ ಗೊಂಚಲಿನ ಭಾಗದಲ್ಲಿ ನಿಂತ ತೇವಾಂಶದಲ್ಲಿ,
- ಒಣಗಿ ಮಳೆಗೆ ಒದ್ದೆಯಾದ ಹೂ ಗೊಂಚಲಿನಲ್ಲಿ, ಹೂ ಗೊಂಚಲು ಸ್ವಲ್ಪ ಸ್ವಲ್ಪ ಉಳಿದ ಶೇಷವಾಗಿ ದಲ್ಲಿ ಈ ಬೀಜಾಣುಗಳು ಇದ್ದು ಅಲ್ಲಿ ಮೊಳಕೆಯೊಡೆಯುತ್ತವೆ.
- ಈಗ ಬೊರ್ಡೋ ದ್ರಾವಣವನ್ನು ಸಿಂಪಡಿಸುವುದರಿಂದ ಅವು ಮೊಳಕೆ ಒಡೆಯುವ ಹಂತದಲ್ಲೇ ಅದನ್ನು ನಿಯಂತ್ರಿಸಿದಂತಾಗುತ್ತದೆ.
ಬರೇ ಅಡಿಕೆಗೆ ಮಾತ್ರವಲ್ಲ, ಮಿಶ್ರ ಬೆಳೆಗಳಾದ ಕೊಕ್ಕೋ, ಕರಿ ಮೆಣಸು, ಕಾಫಿ, ದಿವ್ವಿ ಹಲಸು ಹಾಗೆಯೇ ತೆಂಗಿನ ಸಸಿಗಳ ಸುಳಿಗೂ ಸಹ ಇದೇ ಬೋರ್ಡೋ ದ್ರಾವಣವನ್ನು ಸಿಂಪಡಿಸಿದರೆ ಅಲ್ಲಿಂದ ಪ್ರಾರಂಭವಾಗುವ ಶಿಲೀಂದ್ರ ಬೆಳವಣಿಗೆಯನ್ನು ಹತ್ತಿಕ್ಕಿದಂತಾಗುತ್ತದೆ. ಕೊಕ್ಕೋ, ದಿವ್ವಿ ಹಲಸು ಎಲ್ಲದಕ್ಕಿಂತ ಮೊದಲು ಶಿಲೀಂದ್ರ ರೋಗಕ್ಕೆ ತುತ್ತಾಗುತ್ತದೆ.
ಇತರ ಅನುಕೂಲಗಳು:
- ಬೋರ್ಡೋ ದ್ರಾವಣ ಬರೇ ಶಿಲೀಂದ್ರ ನಿಯಂತ್ರಕ ಅಲ್ಲ. ಅದಕ್ಕೆ ಬೇರೆ ಗುಣವೂ ಇದೆ. ಇದನ್ನು ಬ್ಯಾಕ್ಟೀರಿಯಾ ನಿಯಂತ್ರಕ ಎಂದೂ ಹೇಳಲಾಗುತ್ತದೆ.
- ತಾಮ್ರದ ಸಲ್ಫೇಟ್ ಮತ್ತು ಸುಣ್ಣ ಇವು ಸಸ್ಯ ಬೆಳವಣಿಗೆಗೆ ಬೇಕಾಗುವ ಅಗತ್ಯ ಪೋಷಕಾಂಶ. ದ್ವಿತೀಯ ಪೋಷಕಾಂಶಗಳಾದ ಗಂಧಕ ಮೈಲುತುತ್ತೆಯಲ್ಲಿ ಇದೆ.
- ಸುಣ್ಣ ಕ್ಯಾಲ್ಸಿಯಂ ಸತ್ವವನ್ನು ಕೊಡುತ್ತದೆ.
- ತಾಮ್ರ ಎಂಬುದು ಒಂದು ಅಗತ್ಯ ಲಘು ಪೋಷಕವಾಗಿದೆ.
- ಈ ಸಮಯದಲ್ಲಿ ಸಸ್ಯದಲ್ಲಿ ಎಲ್ಲಾ ರೀತಿಯ ಬೆಳವಣಿಗೆಗಳು ಇರುವಾಗ ಈ ಪೋಷಕಗಳು ಲಭ್ಯವಾದರೆ ಅನುಕೂಲವಾಗುತ್ತದೆ.
- ಸುಣ್ಣ ಮತ್ತು ಮೈಲುತುತ್ತೆಯ ಮಿಶ್ರಣ ಅಡಿಕೆ ಮರದ ಕಾಯಿಗಳ ಮೇಲೆ ಗೊನೆಯ ದಂಟಿನ ಮೇಲೆ ಲೇಪನ ತರಹ (Coating) ಅಂಟಿಕೊಂಡಿರುತ್ತದೆ.
- ಇದು ಕಾಯಿಗಳಿಗೆ ಒಂದು ರೀತಿಯಲ್ಲಿ ರಕ್ಷಕವಾಗಿ ಕೆಲಸ ಮಾಡುತ್ತದೆ. ಈ ರಕ್ಷಕ ಕಾಯಿಗಳ ಮೇಲೆ ಗೊಂಚಲಿನ ಮೇಲೆ
- ಇದ್ದಾಗ ಬೇರೆ ಕೀಟಗಳಿಗೆ ಅಲ್ಲಿ ಪ್ರವೇಶಕ್ಕೆ ಅಡ್ಡಿಯಾಗುತ್ತದೆ.
- ಆದ ಕಾರಣ ಈ ಸಮಯದಲ್ಲಿ ಅತಿಯಾಗಿ ಬಾಧಿಸುವ ರಸ ಹೀರುವ ಕೀಟಗಳೂ ಸಹ ಕಡಿಮೆಯಾಗುತ್ತದೆ.
- ಸೊಳ್ಳೆಗಳು ಹಾಗೂ ಇನ್ನಿತರ ರೋಗ ಪ್ರಸರಕಗಳೂ ಸಹ ಈ ಸಮಯದಲ್ಲಿ ಹೆಚ್ಚು. ಅವುಗಳ ನಿಯಂತ್ರಣಕ್ಕೆ ಬೋರ್ಡೋ ದ್ರಾವಣ ಅಲ್ಪ ಸ್ವಲ್ಪ ಸಹಾಯಕ.
ಬೊರ್ಡೋ ದ್ರಾವಣದಲ್ಲಿ ಸೇರಲ್ಪಟ್ಟ ಮೂರು ಬಗೆಯ ಸಸ್ಯ ಪೋಷಕಗಳು ಸಸ್ಯಕ್ಕೆ ರೋಗ ನಿರೋಧಕ ಶಕ್ತಿ ಕೊಡುವುದು ಒಂದು. ಮೈಲುತುತ್ತೆ ಎಂಬುದು ಒಂದು ಕೀಟ ನಿಯಂತ್ರಕವೂ ಹೌದು. ಇದನ್ನು ಮರಗಳಿಗೆ ಸುರಿ ಬಾರದಂತೆ ತಡೆಯಲು ಪ್ರಮುಖ ಕೀಟ ನಿಯಂತ್ರಕವಾಗಿ ಬಳಕೆ ಮಾಡಲಾಗುತ್ತದೆ. ಆದ ಕಾರಣ ಇದಕ್ಕೆ ಕೀಟ ನಿಯಂತ್ರಕ ಗುಣ ಇಲ್ಲದಿಲ್ಲ.
ಪರಿಸರಕ್ಕೆ ಪೂರಕ:
- ಹೆಚ್ಚಿನ ಅಡಿಕೆ ಬೆಳೆಗಾರರು ಈ ವರ್ಷ ಅಡಿಕೆಗೆ ಬಂದ ಬೆಲೆಯ ಕಾರಣದಿಂದ ಪ್ರತೀ ತಿಂಗಳೂ ಕೀಟನಾಶಕ, ಶಿಲೀಂದ್ರ ನಾಶಕ ಸಿಂಪಡಿಸುತ್ತಾರೆ.
- ಈ ಕೀಟ ನಾಶಕಗಳ ಬಳಕೆ ಸಿಂಪಡಿಸುವವರಿಗೆ ಆರೋಗ್ಯಕ್ಕೆ, ಪರಿಸರಕ್ಕೆ, ಹಾಗೆಯೇ ಕೀಟಗಳ ನಿಯಂತ್ರಣಕ್ಕೂ ಸುರಕ್ಷಿತವಲ್ಲ.
- ಆದರೆ ಬೊರ್ಡೋ ದ್ರಾವಣ ಅಂತಹ ತೊಂದರೆ ಇಲ್ಲದ ಬೆಳೆ ಸಂರಕ್ಷಕವಾಗಿದ್ದು,
- ಅನುಕೂಲ ಇದ್ದವರು ಈಗ ಬೋರ್ಡೋ ಮಿಶ್ರಣ ಸಿಂಪರಣೆ ಮಾಡಬಹುದು.
- ಇದು ಮುಂದೆ ಕೊಳೆ ರೋಗ ನಿಯಂತ್ರಣಕ್ಕೆ ತುಂಬಾ ಫಲ ಕೊಡುತ್ತದೆ.
- ಈಗ ಸಿಂಪರಣೆ ಮಾಡಿದರೆ ಅದು ತೊಳೆದು ಹೋಗಲಾರದು. ಚೆನ್ನಾಗಿ ಅಂಟಿಕೊಳ್ಳುತ್ತದೆ.
- ಮುಖ್ಯವಾಗಿ ತಟಸ್ಥೀಕೃತ ದ್ರಾವಣ ಸಿಂಪಡಿಸಿದರೆ ಮಾತ್ರ ಅನುಕೂಲಕರ. ಹೆಚ್ಚು ಸುಣ್ಣ ಹಾಕುವುದು ಮಾಡಬೇಡಿ. ಅದು ಕ್ಷಾರೀಯವಾಗುತ್ತದೆ.
- ಅನುಕೂಲ ಇದ್ದವರು pH stabileser ಬಳಸಿ ಸಿಂಪರಣೆ ಮಾಡಿ.
ಬರೇ ಅಡಿಕೆ ಫಸಲಿಗೆ ಮಾತ್ರವಲ್ಲ, ಎಳೆ ಸಸಿಗಳ ಸುಳಿ ಭಾಗಕ್ಕೂ ಸಿಂಪಡಿಸಿರಿ. ಸುಳಿ ಕೊಳೆ ರೋಗ ನಿಯಂತ್ರಣವಾಗುತ್ತದೆ. ಕರಿಮೆಣಸಿಗೂ ಈಗ ಬೋರ್ಡೋ ದ್ರಾವಣ ಸಿಂಪಡಿಸುವುದು ಉತ್ತಮ. ತೆಂಗಿನ ಸಸಿಗಳು (ಸಿಂಪರಣೆಗೆ ಎಟಕುವ ಎಲ್ಲಾ ಮರಗಳಿಗೂ ಸುಳಿ ಭಾಗಕ್ಕೆ ಬೊರ್ಡೋ ದ್ರಾವಣ ಸಿಂಪರಣೆ ಮಾಡಿದರೆ ಸುಳಿ ಕೊಳೆ ರೋಗ ನಿಯಂತ್ರಣಕ್ಕೆ ಬರುತ್ತದೆ.