ಬೋರ್ಡೋ ದ್ರಾವಣ ಸಿಂಪರಣೆ ಮತ್ತು ಕೆಲವು ಸೂಕ್ಷ್ಮಗಳು.

by | Jun 1, 2022 | Arecanut (ಆಡಿಕೆ), Disease Management (ರೋಗ ನಿರ್ವಹಣೆ) | 0 comments

ಅಡಿಕೆಯ ಕೊಳೆ ರೋಗ ನಿಯಂತ್ರಿಸುವ ಉಪಚಾರವಾಗಿ ಬೋರ್ಡೋ ದ್ರಾವಣದ ಸಿಂಪರಣೆಯನ್ನು ಮಾಡಲಾಗುತ್ತದೆ. ವಿವಿಧ ನಮೂನೆಯ ತುತ್ತೆ, ಸುಣ್ಣ, ಗಮ್ ಗಳು ಇರುವಾಗ ರೈತರಿಗೆ ದ್ವಂದ್ವ ಉಂಟಾಗುವುದು ಸಹಜ. ಈ ನಿಟ್ಟಿನಲ್ಲಿ ಕೆಲವು ಸೂಕ್ಷ್ಮ ವಿಚಾರಗಳೊಳಗೊಂಡ ಮಾಹಿತಿ ಇಲ್ಲಿದೆ.

  • ಬೊರ್ಡೋ ದ್ರಾವಣವನ್ನು ಪ್ರಪ್ರಥಮವಾಗಿ,  ಪ್ರಾನ್ಸ್ ದೇಶದ ಬೋರ್ಡೋ ಎಂಬ ಪ್ರಾಂತದಲ್ಲಿ ದ್ರಾಕ್ಷಿ ಬೆಳೆಗೆ ಶಿಲೀಂದ್ರಗಳಿಂದ ಉಂಟಾಗುವ ರೋಗ ನಿಯಂತ್ರಣಕ್ಕೆ ಬಳಸುತ್ತಿದ್ದರಂತೆ.
  • ಅದನ್ನು ಬ್ರಿಟೀಷರ ಕಾಲದಲ್ಲಿ ಆಗಿನ ಮೈಸೂರು ಸರಕಾರದ ಕೃಷಿ ಅಧಿಕಾರಿಯಾಗಿದ್ದ ಲೆಸ್ಲಿ ಸಿ ಕೋಲ್ಮನ್ ಇವರು  ನಮ್ಮ ರಾಜ್ಯದ ಮಲೆನಾಡಿನ ತೀರ್ಥಹಳ್ಳಿ, ಕಡೂರು, ಸಾಗರ, ತಾಳಗುಪ್ಪ, ಶಿರಸಿ ಮುಂತಾದ ಪ್ರದೇಶಗಳಲ್ಲಿ  ಪರಿಚಯಿಸಿದರು.
  • ಇದು ಈಗಲೂ ಪ್ರಚಲಿತದಲ್ಲಿದೆ.
  • ಶಿಲೀಂದ್ರ ನಾಶಕಗಳಲ್ಲಿ ಕೆಲವು ನಾಲ್ಕಾರು ಬಾರಿ ಬಳಕೆ ಮಾಡಿದ ನಂತರ ಅದು ಶಿಲೀಂದ್ರಕ್ಕೆ ನಿರೋಧಕ ಶಕ್ತಿ ಉಂಟು ಮಾಡುತ್ತದೆ ಎನ್ನುತ್ತಾರೆ ತಜ್ಞರು.
  • ಆದರೆ ಬೋರ್ಡೋ ದ್ರಾವಣದ  (Bordeaux mixture) ವಿಷಯದಲ್ಲಿ ಅಂತಹ ವರದಿ ಈ ತನಕ ಆಗಿಲ್ಲ.
ಬೋರ್ಡೋ ದ್ರಾವಣ ಸಿಂಪಡಿಸಿದಾಗ ಕಾಯಿಗಳ ಮೇಲೆ ಲೇಪನ ಆಗಬೇಕು

ಬೋರ್ಡೋ ದ್ರಾವಣ ಸಿಂಪಡಿಸಿದಾಗ ಕಾಯಿಗಳ ಮೇಲೆ ಲೇಪನ ಆಗಬೇಕು

ಇದು ಒಂದೇ ಅಲ್ಲ ಬೇರೆಯೂ ಇದೆ:

  • ಬೋರ್ಡೋ ದ್ರಾವಣ ಒಂದೇ ಫೈಟೋಪ್ಥೆರಾ  ಜಾತಿಯ ಶಿಲೀಂದ್ರದ ಬೆಳವಣಿಗೆಗೆ ಪ್ರತಿರೋಧ ಉಂಟುಮಾಡುವ ಔಷಧಿ.
  • ಇದನ್ನು ಸಾರ್ವತ್ರಿಕವಾಗಿ ಬಳಕೆ ಮಾಡಲಾಗುತ್ತಿದೆ .
  • ಇದರ ಬದಲಿಗೆ ಕಾಪರ್ ಆಕ್ಸೀ ಕ್ಲೋರಡ್  ಮ್ಯಾಂಕೋಜೆಬ್  ಕಾರ್ಬನ್ ಡೈಜಿಮ್, ಮುಂತಾದ ಬೇರೆ ಬೇರೆ ತಯಾರಿಕೆಗಳೂ ಇವೆ.
  • ಇತ್ತೀಚೆಗೆ ಪರಿಚಯಿಸಲ್ಪಟ್ಟ ಪೊಟ್ಯಾಶಿಯಂ ಫೋಸ್ಫೋನೇಟ್ ಎಂಬ ಉತ್ಪನ್ನ ಸಹ ಶಿಲೀಂದ್ರ ರೋಗವನ್ನು  ನಿಯಂತ್ರಿಸುವಲ್ಲಿ ಕೆಲಸ ಮಾಡುತ್ತದೆ.
  • ಅಧಿಕ ಮಳೆಯಾಗುವ ಕಡೆ ನೀರಿಗೆ  ಬೇಗ ತೊಳೆದು ಹೋಗದ ಕಾರಣ ಬೋರ್ಡೋ ದ್ರಾವಣ ಅನುಕೂಲಕರ.
  • ಉಳಿದ ಯಾವುದೇ ಶಿಲೀಂದ್ರ ನಾಶಕವನ್ನು ಬಳಸಿ ಕನಿಶ್ಟ 6 ಗಂಟೆ ಅದು ಒಣಗಿ, ಸಸ್ಯ ಅಂಗಗಳು ಅದನ್ನು ಹೀರಿಕೊಳ್ಳಬೇಕು.
  • ಇದರಲ್ಲಿ ಹಾಗಿಲ್ಲ. ಸಣ್ಣ ಹನಿ ಮಳೆ ಬರುತ್ತಿದ್ದರೂ ಸಿಂಪರಣೆ ಮಾಡಿದರೆ ಅದು ಅಲ್ಲಿ ಉಳಿಯುತ್ತದೆ.
  • ನಿಧಾನವಾಗಿ ತಾಮ್ರ ಮತ್ತು ಕ್ಯಾಲ್ಸಿಯಂ ಅಂಶವನ್ನು  ಅಡಿಕೆಯ ಕಾಯಿಗಳು ಹೀರಿಕೊಂಡು ಕೊಳೆ ರೋಗದ ಶಿಲೀಂದ್ರದ ಬೀಜಾಣುವನ್ನು ಮೊಳಕೆ ಒಡೆಯಲು ಬಿಡುವುದಿಲ್ಲ.
ಸಿದ್ದಪಡಿಸಿದ ಬೋರ್ಡೋ ದ್ರಾವಣ ಆಕಾಶ ನೀಲಿ ಬಣ್ಣ ಹೊಂದಿರಬೇಕು.

ಸಿದ್ದಪಡಿಸಿದ ಬೋರ್ಡೋ ದ್ರಾವಣ ಆಕಾಶ ನೀಲಿ ಬಣ್ಣ ಹೊಂದಿರಬೇಕು.

ಮಳೆ ತುಂಬಾ ಕಡಿಮೆ ಇರುವ ಅರೆ ಮಲೆನಾಡು, ಮುಂತಾದ ಕಡೆ ಶಿಲೀಂದ್ರ ಬಾಧೆ ತಡೆಯಲು ಬೊರ್ಡೋ ದ್ರಾವಣವನ್ನೇ ಬಳಕೆ ಮಾಡಬೇಕಾಗಿಲ್ಲ. ಬೇರೆ ಔಷಧಿಯನ್ನು ಬಳಕೆ ಮಾಡಬಹುದು. ಬಳಕೆ ಮಾಡಿದರೆ ತಪ್ಪಿಲ್ಲ. ಇದು ಆಗ್ಗ ಮತ್ತು ಸುರಕ್ಷಿತ. 

  • ಬೋರ್ಡೋ ದ್ರಾವಣ ಸ್ಪರ್ಶ ರೋಗ ನಾಶಕವಾದ ಕಾರಣ ಶಿಲೀಂದ್ರಗಳು ನಿರೋಧಕ ಶಕ್ತಿ ಪಡೆಯುವುದಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.
  • ಖರ್ಚಿನ  ವಿಷಯದಲ್ಲಿ  ಬೊರ್ಡೋ 100 ಲೀ. ದ್ರಾವಣ ತಯಾರಿಕೆಗೆ ಸುಮಾರು 375-450 ರೂ ತಗಲುತ್ತದೆ.
ಮೊದಲು ಸುಣ್ಣದ ನೀರನ್ನು ಹಾಕಬೇಕು

ಮೊದಲು ಸುಣ್ಣದ ನೀರನ್ನು ಹಾಕಬೇಕು

ಅಂಟು ಸೇರಿಸುವ ವಿಚಾರ:

ಸುಣ್ಣದ ದ್ರಾವಣಕ್ಕೆ ತುತ್ತೆ ದ್ರಾವಣ ಹಾಕುತ್ತಾ ಕಲಕುತ್ತಾ ಇರಬೇಕು

ಸುಣ್ಣದ ದ್ರಾವಣಕ್ಕೆ ತುತ್ತೆ ದ್ರಾವಣ ಹಾಕುತ್ತಾ ಕಲಕುತ್ತಾ ಇರಬೇಕು

  • ಅಂಟು ಬರುವುದಕ್ಕೆ ಮುಂಚೆ ರಾಳವನ್ನು ಬಳಕೆ ಮಾಡಲಾಗುತ್ತಿತ್ತು.
  • ಈಗಲೂ ಇದನ್ನು ಬಳಸುವರಿದ್ದಾರೆ.
  • ಎಲ್ಲರಿಗೂ ಇದನ್ನು ಬಳಸಲು ಅಸಾಧ್ಯವಾದ ಕಾರಣ ಅದರ ಬದಲಿಗೆ ಬೇರೆ ವಸ್ತು ಇರುವ ಕಾರಣ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಂಟನ್ನು ಬಳಕೆ ಮಾಡಲಾಗುತ್ತದೆ.
  • ಅಂಟನ್ನು  ಬರೇ ಬೋರ್ಡೋ ದ್ರಾವಣ ಮಾತ್ರವಲ್ಲ , ಎಲ್ಲಾ ವಿಧದ ಸಿಂಪರಣೆಗೂ ಇದನ್ನು ಬಳಕೆ ಮಾಡಬಹುಫ಼ು.
  • ಇದು ಬೀಳುವ ಹನಿಯನ್ನು ಹೆಚ್ಚು ಜಾಗದ ತನಕ ಪಸರಿಸಿ ಒಣಗುವಂತೆ ಮಾಡುತ್ತದೆ.
  • ಅಂಟುವ ಗುಣ ಮಳೆಯ ಹನಿಗಳು ಬಿದ್ದು ತೇವವಾಗಿದ್ದರೂ ಅದನ್ನು ಬೇಗ ಆರುವಂತೆ ಮಾಡುತ್ತದೆ.

ಹಾಗೆಂದು ಬಾರೀ ದುಬಾರಿಯ ಅಂಟುಗಳನ್ನು ಬಳಸುವುದು ಲಾಭದಾಯಕವಲ್ಲ. ಇದು ಲೀ. ಗೆ  300 ರೂ. ದಿಂದ 2000 ರೂ. ತನಕವೂ ಮಾರುಕಟ್ಟೆಯಲ್ಲಿ ಇರುತ್ತದೆ.ಪ್ರಸರಕ, ಒಣಗುವ ಗುಣ  ಹಾಗೂ ತೊಳೆದು ಹೋಗದಂತೆ ಅಂಟುವ ಗುಣ ಇರುವ ಗಮ್ ಸೇರಿಸಿರಿ.

ಗಮ್ ಹಾಕಿ ಕಲಕಿ ಚೆನ್ನಾಗಿ ಮಿಶ್ರಣ ಮಾಡಬೇಕು

ಗಮ್ ಹಾಕಿ ಕಲಕಿ ಚೆನ್ನಾಗಿ ಮಿಶ್ರಣ ಮಾಡಬೇಕು

  • ದ್ರಾವಣದ ಮೇಲೆ ಅಂಟು ಹಾಕಿದಾಗ ಆದು ಚದುರಿದಂತಾದರೆ , ದ್ರಾವಣದಲ್ಲಿ ನೊರೆ ಬಂದರೆ ಆ ಅಂಟಿನಲ್ಲಿ ಪ್ರಸರಕ ಗುಣ ಇದೆ ಎಂದು ತಿಳಿಯಬಹುದು.
  • ಪರೀಕ್ಷಿಸಲು ಅದನ್ನು ಕೆಸುವಿನ ಎಲೆಗೆ ಹಾಕಿ ನೊಡಬಹುದು.
  • ಇಡೀ ಕಾಯಿಯ ಮೇಲ್ಮೈಗೆ ದ್ರಾವಕ ಹರಡಬೇಕಾದ  ಕಾರಣ ಅಂಟು, ಪ್ರಸರಕ ಮತ್ತು ಒಣಗುವ ಗುಣದ ತಟಸ್ಥ Ph ಮೌಲ್ಯದ ಗಮ್ ಅನ್ನು ಸೇರಿಸುವುದು ಉತ್ತಮ.

ಉತ್ತಮ ಕಾಪರ್ ಸಲ್ಫೇಟ್ ಯಾವುದು?

ಎರಡೂ ಮಿಶ್ರಣ ಸೇರಿಸಿ ಚೆನ್ನಾಗಿ ಕಲಕಿದರೆ ರಸ ಸಾರ ಸರಿಯಾಗಿರುತ್ತದೆ

ಎರಡೂ ಮಿಶ್ರಣ ಸೇರಿಸಿ ಚೆನ್ನಾಗಿ ಕಲಕಿದರೆ ರಸ ಸಾರ ಸರಿಯಾಗಿರುತ್ತದೆ

  • ಇದನ್ನು ಪರೀಕ್ಷಿಸಿಯೇ ತಿಳಿಯಬೇಕು.
  • ಹೇಗೂ ಬೋರ್ಡೋ ದ್ರಾವಣ ಸಿಂಪಡಿಸುವುದು ಇರುವ ಕಾರಣ , ಊರಿನ ಕೆಲವು ಸಮಾನ ಮನಸ್ಕರು ಯಾವುದಾದರೂ ಕೆಲವು ಬ್ರಾಂಡ್ ಕಾಪರ್ ಸಲ್ಫೇಟ್ ಅನ್ನು ಆರಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ,
  • ಅಲ್ಲಿ ಅದರಲ್ಲಿ ತಾಮ್ರದ ಅಂಶ, ಗಂಧಕದ ಅಂಶ ಹಾಗೂ ಅಗತ್ಯ ಇದ್ದರೆ  ಕಬ್ಬಿಣ, ಮತ್ತು ಅಲ್ಯೂಮೀನಿಯಂ ಅಂಶ ಎಷ್ಟು ಇದೆ ಎಂಬುದನ್ನು ಪರೀಕ್ಷಿಸುವುದು ಸೂಕ್ತ.
  • ಕೇಂದ್ರೀಯ ಕಾಫೀ ಸಂಶೋಧನಾ ಸಂಸ್ಥೆ ಬಾಳೆಹೊನ್ನೂರು ಇಲ್ಲಿ, ಹಾಗೂ ಬೆಂಗಳೂರಿನಲ್ಲಿ ಕೆಲವು ಕೆಮಿಕಲ್ ಅನಾಲಿಸಿಸ್ ಲಾಬ್ ನಲ್ಲಿ ಇದನ್ನು ಪರೀಕ್ಷಿಸುತ್ತಾರೆ.
  • ಸುಮಾರಾಗಿ ಒಂದು ಮಾದರಿ ಪರೀಕ್ಷೆಗೆ 600 ರೂ. ಬೆಲೆ ಇರುತ್ತದೆ.

ಮೈಲುತುತ್ತೆ ಕರಗುವ ವಿಚಾರ:

ಮೈಲುತುತ್ತೆಯನ್ನು ಈ ರೀತಿ ಕರಗಿಸಬೇಕು

ಮೈಲುತುತ್ತೆಯನ್ನು ಈ ರೀತಿ ಕರಗಿಸಬೇಕು

  • ಬಹುತೇಕ ರೈತರು ತಮ್ಮ ಅನುಭವದಲ್ಲಿ ಯಾವ ರೀತಿ ಕರಗಿಸಿದರೆ ಉತ್ತಮ ಎಂಬುದನ್ನು ಕಂಡುಕೊಂಡಿದ್ದಾರೆ.
  • ಇದೇ ಸೂಕ್ತ ವಿಧಾನ. ಹುಡಿ ರೂಪದ ಮೈಲುತುತ್ತೆಗೂ , ಹರಳು ರೂಪದ ತುತ್ತೆಗೂ ಯಾವುದೇ ವ್ಯತ್ಯಾಸ ಇಲ್ಲ.
  • ಹರಳನ್ನೇ ಹುಡಿ ಮಾಡಲಾಗುತ್ತದೆ.ಹುಡಿ ಆದರೆ ತಕ್ಷಣ ಕರಗುತ್ತದೆ
  • ಬಿಸಿ ನೀರಿನಲ್ಲಿ ಬೇಗ  ಕರಗುವುದಾದರೆ ಅದರಲ್ಲೇ ಕರಗಿಸಬಹುದು.
  • ಹರಳು ತುತ್ತೆಯನ್ನು ಕರಗಿಸುವಾಗ ಬಟ್ಟೆಯಲ್ಲಿ ಕಟ್ಟಿ  ಅದನ್ನು ನೀರಿನ ಪಾತ್ರೆಯಲ್ಲಿ ಸಲ್ಪ ಮಾತ್ರ ನೀರಿಗೆ ತಾಗುವಂತೆ ಇಟ್ಟರೆ 10 ನಿಮಿಷದಲ್ಲಿ ಪೂರ್ತಿ ಕರಗುತ್ತದೆ.
  • ಹಾಗಾಗಿ ಕರಗಿಸುವುದು ಕಷ್ಟವಲ್ಲ.

ಕೆಲವು ರೆಡಿ ಮಿಕ್ಸ್ ಕಾಪರ್ ಸಲ್ಫೇಟ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಲ್ಲಿಯೂ ಯಾವುದೇ ತೊಂದರೆ ಇಲ್ಲ. ಕಾಪರ್ ಸಲ್ಫೇಟ್ ಗೆ ಚಿಲ್ಲೆಟೆಡ್ (EDTA)ಕ್ಯಾಲ್ಸಿಯಂ ಹಾಕಿ ಇದನ್ನು ತಯಾರಿಸಿರುತ್ತಾರೆ. ಇದರ pH ಮೌಲ್ಯ ತಟಸ್ಥವಾಗಿರುತ್ತದೆ. ಇದು ಉತ್ತಮ ಮೂಲದಿಂದ ಲಭ್ಯವಾದರೆ ಇದರಲ್ಲೂ ರೋಗ ನಿಯಂತ್ರಣ ಆಗುತ್ತದೆ.

ಚಿಪ್ಪು ಸುಣ್ಣವೇ – ಹುಡಿ ಸುಣ್ಣವೇ:

ಚಿಪ್ಪು ಸುಣ್ಣವನ್ನು ಹದ ಬಿಸಿನೀರಿನಲ್ಲಿ  ಬೇಯಿಸಿದರೆ ಉತ್ತಮ

ಚಿಪ್ಪು ಸುಣ್ಣವನ್ನು ಹದ ಬಿಸಿನೀರಿನಲ್ಲಿ ಬೇಯಿಸಿದರೆ ಉತ್ತಮ

  • ಸುಣ್ಣ ಎಂದರೆ ಅದರಲ್ಲಿ ಬೇಕಾಗುವುದು ಕ್ಯಾಲ್ಸಿಯಂ ಅಂಶ.
  • ಅದು ಹುಡಿಯಲ್ಲೂ ಇರುತ್ತದೆ. ಚಿಪ್ಪಿನಲ್ಲೂ ಇರುತ್ತದೆ.
  • ಕೆಲಸದ ಅನುಕೂಲಕ್ಕಾಗಿ  ಹುಡಿ ಸುಣ್ಣವನ್ನು ಬಳಕೆ ಮಾಡುವುದರಲ್ಲಿ ತಪ್ಪಿಲ್ಲ.
  • ಇದರಲ್ಲೂ ಕ್ಯಾಲ್ಸಿಯಂ ಅಂಶ ಚಿಪ್ಪು ಸುಣ್ಣದಲ್ಲಿ ಇರುವಷ್ಟೇ ಇದೆ.
  • ಚಿಪ್ಪು ಸುಣ್ಣ ಬೇಯಿಸಿದಾಗ ಖಾರ ಬಿಡುತ್ತದೆ ಎಂಬುದೆಲ್ಲಾ ಅರ್ಥವಿಲ್ಲದ ಮಾತುಗಳು.
  • ಮೈಲುತುತ್ತೆ ಹೆಚ್ಚಾದರೆ ಕತ್ತಿಯಲ್ಲಿ ತಾಮ್ರ ಬಣ್ಣ ಬರುತ್ತದೆ. ಸುಣ್ಣ ಹೆಚ್ಚಾದರೆ ಯಾವ ಬಣ್ಣವೂ ಗೊತ್ತಾಗುವುದಿಲ್ಲ.
ಪುಡಿ ಸುಣ್ಣ ಕರಗಿಸಲು ಸುಲಭ

ಪುಡಿ ಸುಣ್ಣ ಕರಗಿಸಲು ಸುಲಭ

ಎಳೆಯ ಸಸಿಗಳಿಗೂ ಬೋರ್ಡೋ ಸಿಂಪಡಿಸಿ:

  • ಸಾಮಾನ್ಯವಾಗಿ ಎಳೆ ಸಸಿಗಳು ಹಾಗೆಯೇ ಬೆಳೆದ ಸಸಿಗಳಿಗೆ ಸುಳಿ ಕೊಳೆ ರೋಗ ಬರುವುದು ಇದೇ ಶಿಲೀಂದ್ರದಿಂದ.
  • ಅದ ಕಾರಣ 1  ವರ್ಷದ ಪ್ರಾಯದಿಂದ ಹಿಡಿದು ಸುಳಿ ಭಾಗಕ್ಕೆ ಸಿಂಪಡಿಸಲು ಆಗುವ ತನಕವೂ ಸಿಂಪರಣೆ ಮಾಡಬಹುದು.

ಬೋರ್ಡೋ ಮಿಶ್ರಣ ತಯಾರಿಕೆ ಸುಲಭ.ಇದರಲ್ಲಿ ರೋಗ ನಿಯಂತ್ರಣ ಆಗುತ್ತದೆ.ಬೋರ್ಡೋ ದ್ರಾವಣ ಬರೇ ಶಿಲೀಂದ್ರ ನಿಯಂತ್ರಕ ಮಾತ್ರವಲ್ಲ, ಬ್ಯಾಕ್ಟೀರಿಯಾ ನಿಯಂತ್ರಕವೂ ಆಗಿದೆ.ಅಲ್ಪ ಪ್ರಮಾಣದಲ್ಲಿ ಕೀಟ ನಿಯಂತ್ರಕವೂ ಸಹ. ಅಡಿಕೆಗೆ ಸಿಂಪಡಿಸುವಾಗ ಮೆಣಸಿನ ಬಳ್ಳಿಗೂ, ತೆಂಗಿನ ಸುಳಿ ಭಾಗಕ್ಕೂ , ಮಾವು ಹಲಸು , ದಿವ್ವಿ ಹಲಸು ಇದ್ದರೆ ಅದಕ್ಕೂ ಸಿಂಪಡಿಸಿದರೆ ಉತ್ತಮ.ಎಲ್ಲಾ ರೋಗಕಾರಕಗಳಿಗೂ ಮೂಲ ಕಾರಣ ವಾತಾವರಣ ಮತ್ತು ತೋಟದ ಅನುಕೂಲ ಪರಿಸ್ಥಿತಿ.ಇದನ್ನು ನಾವು ಸರಿಪಡಿಸಿಕೊಂಡು ಔಷಧಿಯ ಮೇಲೆ ನಂಬಿಕೆ ಇಡಬೇಕು.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!