‘ಅಡಿಕೆ ಕಣ’ ಬೆಳೆಗಾರರ ಪಾಲಿಗೆ ಈ ವ್ಯವಸ್ಥೆ ಇದ್ದರೆ ನಿಶ್ಚಿಂತೆ.

‘ಅಡಿಕೆ ಕಣ’

ಅಡಿಕೆಗೆ ಬೆಲೆ ಚೆನ್ನಾಗಿದೆ, ಬೆಳೆಗಾರರು ಖುಷಿಯಾಗಿದ್ದಾರೆ ಎಂದೆಣಿಸದಿರಿ. ಬೆಲೆ ಹೆಚ್ಚಾದಂತೆ ಅದರ ಉತ್ಪಾದನಾ ವೆಚ್ಚವೂ ಹೆಚ್ಚಳವಾಗುತ್ತದೆ. ಕೆಲಸದವರ ಸಂಬಳ ವರ್ಷಕ್ಕೆ 10% ದಂತೆ ಹೆಚ್ಚಳವಾಗುತ್ತದೆ. ಬೆಳೆ ಬಂದರೆ ಕೊಯ್ಯುವ ಸಮಸ್ಯೆ. ಕೊಯಿಲು ಮುಗಿದ ಮೇಲೆ ಸುಲಿಯುವ ಸಮಸ್ಯೆ. ಎಲ್ಲಾ ಕೆಲಸಕ್ಕೂ ಹಣ ಕೊಟ್ಟರೂ ಮಾಡುವವರಿಲ್ಲದಿದ್ದರೆ ಏನು ಮಾಡುವುದು? ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾನ್ಲೆ ಊರಿನಲ್ಲಿ ಇಂತಹ ಸಮಸ್ಯೆಗೆ ಪರಿಹಾರ ಇದೆ. ಈ ಊರಿನ ಒಂದು ಪಂಗಡದ ಜನರೆಲ್ಲಾ ಒಟ್ಟು ಸೇರಿ ‘ಅಡಿಕೆ ಕಣ’ ಎಂಬ ವ್ಯವಸ್ಥೆಯನ್ನು ಮಾಡಿಕೊಂಡು ಅಡಿಕೆ ಬೆಳೆಗಾರರನ್ನು ಸುಲಿಯುವ ವಿಷಯದಲ್ಲಿ ನಿಶ್ಚಿಂತೆಯಾಗಿರುವಂತೆ ಮಾಡಿದ್ದಾರೆ.

ಅಡಿಕೆಗೆ ಬೆಲೆ ಇರುವುದು ಅಡಿಕೆ ಸುಲಿದು ಸಂಸ್ಕರಿಸಿದ ನಂತರವೇ. ಸಂಸ್ಕರಿಸಬೇಕಾದರೆ  ಅದಕ್ಕೆ ಜನ ಬೇಕು ಇಲ್ಲವೇ ಯಂತ್ರ ಬೇಕು. ಯಂತ್ರಗಳು ಇದ್ದರೂ ಅದರಲ್ಲಿ ತೃಪ್ತಿ ಕಾಣದೆಯೋ ಅಥವಾ ಇನ್ಯಾವುದೋ ಕಾರಣಕ್ಕೋ ,ಇಂದಿಗೂ 90% ದಷ್ಟು ಬೆಳೆಗಾರರು ಮಾನವ ಶ್ರಮದಲ್ಲೇ ಅಡಿಕೆ ಸುಲಿಯುವುದನ್ನು ಬಯಸುತ್ತಾರೆ.ಅನಿವಾರ್ಯವಾದಲ್ಲಿ ಮಾತ್ರ ಯಂತ್ರವನ್ನು ಆಯ್ಕೆ ಮಾಡುತ್ತಾರೆ. ಹಾಗಾಗಿ ಅಡಿಕೆ ಸುಲಿಯುವವರಿಗೆ ಯಾವಾಗಲೂ ಬೇಡಿಕೆ ಇದೆ. ಈ ವೃತ್ತಿಯನ್ನು ಕರಗತ ಮಾಡಿಕೊಂಡವರಿಗೆ ವರ್ಷದಲ್ಲಿ 365 ದಿನವೂ ಕೆಲಸ ಮಾಡುವ ಇದೆ. ಉತ್ತಮ ಸಂಭಾವನೆಯನ್ನೂ ಪಡೆಯುವ ಅವಕಾಶವೂ ಇದೆ.ಇದಕ್ಕೆ ವಯಸ್ಸಿನ ಇತಿಮಿತಿ ಇಲ್ಲ. ಮಕ್ಕಳಿಂದ ಹಿಡಿದು ವೃದ್ದರ ವರೆಗೂ ಈ ಕೆಲಸವನ್ನು ಅಭ್ಯಾಸ ಮಾಡಬಹುದು. ಶ್ರಮ ಇಲ್ಲದ ನೆರಳಿನಲ್ಲಿ ಕುಳಿತು ಮಾಡಬಹುದಾದ ವೃತ್ತಿ.ಇಂತಹ ಒಂದು ವೃತ್ತಿಯನ್ನೇ ತಮ್ಮ ಜೀವನೋಪಾಯಕ್ಕೆ  ಆಯ್ಕೆಮಾಡಿಕೊಂಡು ಅದಕ್ಕೆ ಸಂಘಟನಾತ್ಮಕ ರೂಪ ಕೊಟ್ಟ ಕಾನ್ಲೆ  ಶ್ರೀ ಹುಲಿದೇವರ ವಿಘ್ನೇಶ್ವರ ಸಂಘ. ಈ ಊರಿನ ಒಕ್ಕಲಿಗ ಸಮುದಾಯದ ಜನರೆಲ್ಲಾ ಸೇರಿಕೊಂಡು ಈ ಸಂಘವನ್ನು ಸ್ಥಾಪಿಸಿದ್ದಾರೆ. ಇದನ್ನು ಅಡಿಕೆ ಸುಲಿಯುವ ಕಣ ಎಂಬುದಾಗಿ ಹೇಳುತ್ತಾರೆ.

ಹೇಗಿದೆ ಅಡಿಕೆ ಕಣ:

 • ಇದು ಸುಮಾರು 40 ವರ್ಷಗಳ ಹಿಂದಿನಿಂದಲೂ ಇದೆ. ಪ್ರಾರಂಭದಲ್ಲಿ ಇದು ಒಂದು ಶೆಡ್ ನಲ್ಲಿ ಚಪ್ಪರ ಹಾಕಿ ನಡೆಯುತ್ತಿತ್ತು.
 • ಕ್ರಮೇಣ ಇದಕ್ಕೆ ಕಟ್ಟಡದ ವ್ಯವಸ್ಥೆ ಆಯಿತು. ಅಡಿಕೆ ಸುಲಿದವರು ಕೊಡುವ ಹಣದಲ್ಲಿ ಸ್ವಲ್ಪ ಬಾಡಿಗೆ ಎಂದು ಪಡೆಯಲಾಗುತ್ತದೆ.
 • ಅದನ್ನೆಲ್ಲಾ ಉಳಿಸಿ, ಜೊತೆಗೆ ಸ್ಥಳೀಯ ಶಾಸಕರ ಅನುದಾನದಲ್ಲಿ ಒಂದು ಸಮುದಾಯ ಭವನವನ್ನು ಕಟ್ಟಿ ಅಲ್ಲಿ ಸುಲಿಯುವ ವ್ಯವಸ್ಥೆ ಬಂತು.
 • ಹಿಂದೆ ಶೆಡ್ ಇರುವಾಗ ಇದ್ದ ಬೆಳಕಿನ ಸಮಸ್ಯೆಯೇ ಮುಂತಾದ ಎಲ್ಲವೂ ಈಗ  ಪರಿಹಾರವಾಗಿ ವ್ಯವಸ್ಥಿತವಾಗಿ ಬೆಳೆದಿದೆ. ವಿದ್ಯುತ್ ಶಕ್ತಿ ಇದೆ.
 • ಅದು ಕೈಕೊಟ್ಟಾಗ ಸೋಲಾರ್ ವ್ಯವಸ್ಥೆ ಇದೆ. ಹಗಲು ರಾತ್ರೆ ಕೆಲಸ ಮಾಡುವ ಅವಕಾಶವೂ ಇದೆ.
 • ಹೆಂಗಸರೇ ಹೆಚ್ಚಿನ ಸಂಖ್ಯೆಯಲ್ಲಿ ಅಡಿಕೆ ಸುಲಿಯುವ ಕಾರಣ ಸುರಕ್ಷತೆಯೂ ಇದೆ. ನೀರು, ಶೌಚಾಲಯ ಎಲ್ಲವೂ ಇದೆ.
 • ಅಡಿಕೆ ಕಣದಲ್ಲಿ ಬೆಳಗ್ಗೆ ಗಂಟೆ 9 ರಿಂದ ಪ್ರಾರಂಭವಾಗಿ ರಾತ್ರೆ ಗಂಟೆ 10 ರ ತನಕವೂ ಅಡಿಕೆ ಸುಲಿಯಲಾಗುತ್ತದೆ.
 • ಸುಲಿಯುವವರು ಸಾಲಿಗೆ ಕುಳಿತುಕೊಂಡು ತಮ್ಮ ಮುಂದೆ ಅಡಿಕೆ ರಾಶಿ ಹಾಕಿ ಸುಲಿಯುತ್ತಾ ಲೊಕಾಭಿರಾಮ ಸುದ್ದಿ ಮಾತಾಡುತ್ತಾ ಕೆಲಸ ಮಾಡುತ್ತಾರೆ.
 • ಹೆಚ್ಚಾಗಿ ಹೆಂಗಸರೇ ಇರುವ ಕಾರಣ ಕೆಲವರು ಬೇಗ ತಮ್ಮ ಮನೆ ಕೆಲಸ ಮುಗಿಸಿ ಇಲ್ಲಿಗೆ ಬರುತ್ತಾರೆ.
 • ಕೆಲವರು ಎಡೆಯಲ್ಲಿ ಮನೆ ಕೆಲಸ ಮಾಡಿಕೊಂಡು ಬಂದು ಕೆಲಸಕ್ಕೆ ಕೂಡುತ್ತಾರೆ.
 • ಒಟ್ಟಿನಲ್ಲಿ ಅವರರವರ ಬಿಡುವಿನ ವೇಳೆಯಲ್ಲಿ ಇದು ಕೆಲಸ. 
 • ರಜಾ ಕಾಲದಲ್ಲಿ ಶಾಲೆ ಕಾಲೇಜಿಗೆ ಹೋಗುವ ಮಕ್ಕಳೂ ಸಹ ಅಲ್ಪ ಸ್ವಲ್ಪ ಅಡಿಕೆ ಸುಲಿಯುತ್ತಾರೆ.  
 • ಹೊರಗಡೆ ಕೆಲ್ಸಕ್ಕೆ ಹೋಗಲಿಕ್ಕೆ ಅಶಕ್ತರಾದ ವೃದ್ಧರೂ ಸಹ ಇಲ್ಲಿ ಕೆಲಸ ಮಾಡುತ್ತಾರೆ.
 • ಕೆಲವೊಂದು ದಿನ ಹೆಚ್ಚು ಜನ ಇದ್ದರೆ ಕೆಲವು ದಿನ ಸ್ವಲ್ಪ ಕಡಿಮೆ ಇರುತ್ತಾರೆ.
 • ಹಸಿ ಅಡಿಕೆ ಸುಲಿಯುವ ಸಮಯದಲ್ಲಿ ಅದನ್ನು ಸುಲಿಯುತ್ತಾರೆ.
 • ಅದು ಮುಗಿದ ನಂತರ ಗೋಟು ಅಡಿಕೆ ಸುಲಿಯುತ್ತಾರೆ.
 • ವರ್ಷದಲ್ಲಿ ಯಾವ ದಿನವೂ ಸುಲಿಯಲು ಅಡಿಕೆ ಇಲ್ಲ ಎಂದಾಗುವುದಿಲ್ಲ ಎನ್ನುತ್ತಾರೆ ಇಲ್ಲಿನ ಸೆಕ್ರೇಟರಿ ಗಣಪತಿಯವರು.
‘ಅಡಿಕೆ ಕಣದಲ್ಲಿ ಸುಲಿದ ಅಡಿಕೆ ರಾಶಿ
‘ಅಡಿಕೆ ಕಣದಲ್ಲಿ ಸುಲಿದ ಅಡಿಕೆ ರಾಶಿ

ಹೇಗೆ ಅಡಿಕೆ ಹಾಕುವುದು:

 • ಒಬ್ಬ ಬೆಳೆಗಾರರಲ್ಲಿ 500 ಚೀಲ ಅಡಿಕೆ ಇದೆ ಎಂದಿಟ್ಟುಕೊಳ್ಳುವ.
 • ಅದನ್ನು ಸುಲಿಸಲು ಹಾಕುವ ಮುಂಚೆ ಸಂಘದ ಕಾರ್ಯದರ್ಶಿ ಅಥವಾ ಅಧ್ಯಕ್ಷ್ತರಲ್ಲಿ ಯಾವಾಗ ತರಬೇಕು, ಎಷ್ಟು ತರಬೇಕು ಎಂದು ವಿಚಾರಿಸಿ ಆ ದಿನ ತರಬೇಕು.
 • ತರುವ ಸಮಯದಲ್ಲಿ ಗೋಟನ್ನು ಒಮ್ಮೆ ಒದ್ದೆ ಮಾಡಿ ತರಬೇಕು(ಸುಲಿಯಲು  ಸಿಪ್ಪ ಮೆದು ಆಗಲು). 500 ಚೀಲ ಇದ್ದರೆ ಒಮ್ಮೆ ಎಲ್ಲವನ್ನು ತರಲು ಅವಕಾಶ ಕಡಿಮೆ.
 • ಯಾಕೆಂದರೆ ಬೇರೆಯವರೂ ಸರದಿಯಲ್ಲಿ ಇರುತ್ತಾರೆ. ಯಾರಿಗೂ ಬೇಜಾರು ಆಗಬಾರದು.
 • ಎಲ್ಲರೂ ಹಣಕಾಸಿನ ಅಗತ್ಯಗಳಿಗಾಗಿಯೇ ಸುಲಿಯಲು ಬರುವವರಾದ ಕಾರಣ ಹೀಗೆ ಮಾಡಲಾಗುತ್ತದೆ ಎನ್ನುತ್ತಾರೆ ಈ ಸಂಘದ ಅಧ್ಯಕ್ಷ ಶ್ರೀ ಕೃಷ್ಣಪ್ಪರವರು.
 • ಒಂದು ದಿನ ಅಥವಾ ಬಿಡುವು ಇದ್ದರೆ ಮರುದಿನಕ್ಕೆ ಬೇಕಾದಷ್ಟೇ ಅಂದರೆ 100 ಚೀಲ ಹೀಗೆಲ್ಲಾ ತರಲು ಹೇಳುತ್ತಾರೆ. ( ಸಾಮಾನ್ಯವಾಗಿ ಟ್ರಾಕ್ಟರ್ ಲೋಡ್ ಲೆಕ್ಕ)
 • ಬೆಳೆಗ್ಗೆ ಬೇಗ ತಂದು ಹಾಕಿದರೆ ಅದನ್ನು ಮಾತ್ರ ಆ ದಿನ ಸುಲಿಯುವುದು.
 • ಉಳಿದರೆ ಮರುದಿನ ಅದನ್ನು ಮುಗಿಸಿಯೇ ಬೇರೆಯವರ ಅಡಿಕೆ ಸುಲಿಯುವುವು.
 • ಒಬ್ಬ ರೈತರನ್ನು ಬರೇ 10 ಚೀಲ  ಇದೆಯೆಂದಾದರೆ ಅವರು ಅದನ್ನು ತಂದು ಹಾಕಿದಾಗ ಎಲ್ಲರೂ ಒಟ್ಟು ಸೇರಿ ಸುಲಿದಾಗ ಅದು ಅರ್ಧ ಗಂಟೆಯಲ್ಲೂ ಮುಗಿಯಬಹುದು.
 • ನಂತರ ಬೇರೆ ಹಾಕುವುದು. ಕಡಿಮೆ ಪ್ರಮಾಣ ಎಂದು ಬೇರೆಯವರದ್ದನ್ನೂ ಹಾಕುವ ಕ್ರಮ ಇಲ್ಲ.
 • ಅಡಿಕೆ ಹಾಕಿ ಬಿಡುವು ಇದ್ದರೆ ಅಲ್ಲೇ ಕುಳಿತುಕೊಳ್ಳಬಹುದು.
 • ಒಂದು ವೇಳೆ ಬಿಡುವು ಇಲ್ಲದಿದ್ದರೆ ಸುಲಿದು ಮುಗಿಯುವ ಸಮಯಕ್ಕೆ ಲೆಕ್ಕಾಚಾರ ಆಗುವಾಗ ಇರಬೇಕು.
 • 500 ಚೀಲದಲ್ಲಿ ಉಳಿದ ಅಡಿಕೆಗೆ ಬೇರೆ ದಿನವನ್ನು ಗೊತ್ತುಪಡಿಸಲಾಗುತ್ತದೆ.  
 • ಇಲ್ಲಿ ಸುಲಿಯಲು ಸ್ಥಳೀಯರೇ ಬರುವುದು.
 • ಅಡಿಕೆ ಹಾಕುವವರು ಸಾಗರ, ಶಿಕಾರಿಪುರ, ಹೊಸನಗರ, ಸೊರಬ, ಸಿದ್ದಾಪುರ ಇಲ್ಲಿಂದೆಲ್ಲಾ ತರುವವರಿದ್ದಾರೆ.

ಲೆಕ್ಕಾಚಾರ ಹೇಗೆ:

ಆಡಿಕೆ ಅಳೆಯುವ ಗಿದ್ನ
ಆಡಿಕೆ ಅಳೆಯುವ ಗಿದ್ನ
 • ಇಲ್ಲಿ ಈಗಲೂ ಕಿಲೋ ಲೆಕ್ಕದಲ್ಲಿ ವ್ಯವಹಾರ ಇಲ್ಲ. ಗಿದ್ನ ಎಂಬ  ಸೇರಿನ ತರಹದ ಒಂದು ಅಳತೆ ಪಾತ್ರೆ ಇದೆ.
 • ಇದರಲ್ಲಿ ಸುಮಾರು 2.5-3 ಕಿಲೋ ತನಕ ಹಿಡಿಯುತ್ತದೆ.
 • ಅಡಿಕೆ ಸುಲಿಯುವವರು ಸುಲಿದಂತೆಲ್ಲಾ ಅದನ್ನು ಒಂದು ಗೋಣಿ ಚೀಲಕ್ಕೆ ತುಂಬಿಸಿಡುತ್ತಾರೆ.
 • ಲೆಕ್ಕಾಚಾರಕ್ಕಿಂತ ಮುಂಚೆ ಹೋಗುವುದಾದರೆ ಅವರು ಗಿದ್ನದಲ್ಲಿ ಅಳತೆ ಮಾಡಿ ಚೀಲ ಕಟ್ಟಿ ಹೋಗುತ್ತಾರೆ.
 • ಒಟ್ಟಿಗೆ ಇದ್ದವರು ನಂತರ ಮಾಲಕರ ಸಮಕ್ಷಮ ಅದನ್ನು ಅಳತೆ ಮಾಡುವಾಗ ಇಂತವರದ್ದು ಎಂದು ಅಳತೆಗೆ ಕೊಡುತ್ತಾರೆ.
 • ಸಾಮಾನ್ಯವಾಗಿ ಸಂಜೆ 7-8 ಗಂಟೆ ಸುಮಾರಿಗೆ ಲೆಕ್ಕಾಚಾರ ಆಗುತ್ತದೆ.
 • ಆಗ ಸೆಕ್ರೇಟರಿ ಮತ್ತು ಮಾಲಕರ ಸಮ್ಮುಖದಲ್ಲಿ ಗಿದ್ನಕ್ಕೆ ಹಾಕಿ ಅಳತೆ ಮಾಡಿ ಬರೆದುಕೊಂಡು ಲೆಕ್ಕಾಚಾರ ಮಾಡಲಾಗುತ್ತದೆ.
 • ಒಂದು ಗಿದ್ನ ಅಡಿಕೆ ಸುಲಿದದಕ್ಕೆ 25 ರೂ. ಮಜೂರಿ. ಒಬ್ಬೊಬ್ಬ 15-20 ತನಕವೂ ಸುಲಿಯುವವರು ಇದ್ದಾರೆ.
 • ಸುಲಿಯುವ ಮಜೂರಿ ಮತ್ತು ಆ ದಿನದ ಕರೆಂಟ್ ಬಿಲ್ ಸುಮಾರು  250-300 ರೂ. ಮಾಲಕರು ಕೊಡಬೇಕಾಗುತ್ತದೆ. ಸ್ಥಳ ಬಾಡಿಗೆ ಇತ್ಯಾದಿ ಇರುವುದಿಲ್ಲ.

ಗ್ರಾಮೀಣ ಉದ್ಯೋಗ ಖಾತ್ರಿಗೆ ಕೊಡುಗೆ:

 • ಇದು ಗ್ರಾಮೀಣ  ಜನರಿಗೆ ತಮ್ಮ ಮನೆ ಸಮೀಪದಲ್ಲೇ  ನಿರಂತರ ಉದ್ಯೋಗ ಕೊಡುವ ವ್ಯವಸ್ಥೆಯಾಗಿದೆ.
 • ಇಲ್ಲಿ ದುಡಿದು ಮನೆ ಹೆಂಗಸರು ತಮ್ಮ ಮಕ್ಕಳಿಗೆ ವಿಧ್ಯಾಭ್ಯಾಸಕ್ಕೆ ಬೇಕಾಗುವ ಅಲ್ಪ ಸ್ವಲ್ಪ ವರಮಾನ,
 • ಮನೆ ವಾರ್ತೆಗೆ ಬೇಕಾಗುವ ಹಣ, ಬಟ್ಟೆ ಬರೆ, ಮನೆ ಸಾಮಾನು ಇತ್ಯಾದಿಗಳನ್ನು ಮಾಡಿಕೊಂಡಿದ್ದಾರೆ.
 • ಮನೆ ಹೆಂಗಸರು ಮಕ್ಕಳು ಖುಷಿಯಾಗಿದ್ದರೆ ಅದು ಸುಖೀ ಕುಟುಂಬ.ಈ ಸನ್ನಿವೇಶವು  ಅಡಿಕೆ ಕಣದ ಮೂಲಕ ಇಲ್ಲಿ ಸೃಷ್ಟಿಯಾಗಿದೆ.  
 • ಜನ ಬಿಡುವಿನ ವೇಳೆಯನ್ನು ಮನೆ ಮನೆ ಸುತ್ತುತ್ತಾ ಕಳೆಯುವುದಿಲ್ಲ.
 • ಅದನ್ನು ಉತ್ಪಾದಕವಾಗಿ ಬಳಸಿಕೊಳ್ಳುತ್ತಾರೆ.
 • ಪ್ರತೀಯೊಬ್ಬರಿಗೂ ಈ ವ್ಯವಸ್ಥೆಯ ಮೇಲೆ ಗೌರವ ಇದೆ.
 • ಪ್ರತೀಯೊಬ್ಬರೂ ಇದನ್ನು ತಮ್ಮ ಜೀವನ ನಡೆಸುವ ವ್ಯವಸ್ಥೆ ಎಂದು ತಿಳಿದುಕೊಂಡಿದ್ದಾರೆ.
 • ಗ್ರಾಮೀಣ ಪ್ರದೇಶದಲ್ಲಿ ವರ್ಷ ಪೂರ್ತಿ ಆರಾಮದಾಯಕ ಉದ್ಯೋಗ ಒದಗಿಸಬಲ್ಲ ಇಂತಹ  ವ್ಯವಸ್ಥೆ  ಬೇರೆ ಒಂದೆರಡು ಇದೆಯಾದರೂ ಅದು ನಡೆದರೆ ನಡೆಯಿತು ಎಂಬಂತಿದೆ.
 • ಇಲ್ಲಿ ಇರುವಷ್ಟು ಜನ ಬೇರೆ ಕಡೆ ಇಲ್ಲ. ಇದು ಪೂರ್ತಿ ಖಾಸಗಿಯಾಗಿದ್ದು, ಸಮುದಾಯವಲ್ಲದೆ ಬೇರೆಯವರ ಹಸ್ತಕ್ಷೇಪ ಇಲ್ಲ.

ಪ್ರತೀ  ಊರಿನಲ್ಲೂ ಇಂತದ್ದು ಆದರೆ ಎಷ್ಟೊಂದು ಅನುಕೂಲ ಅಲ್ಲವೇ? ನಮ್ಮ ಸ್ಥಳೀಯ ಶಾಸಕರುಗಳು ಹಾಗೆಯೇ ಸಚಿವರುಗಳು ಅಟೋ ಸ್ಟಾಂಡ್ ನಿರ್ಮಾಣಕ್ಕೆ ಅನುದಾನ ಕೊಡುತ್ತಾರೆ. ಹಾಗೆಯೇ ಜಾತಿ ಓಲೈಕೆಗಾಗಿ ಸಮುದಾಯ ಭವನಕ್ಕೆ ಅನುದಾನ ಕೊಡುತ್ತಾರೆ. ಬಸ್ ಕಾಯುವ ಪ್ರಮೇಯವೇ ಇಲ್ಲದಿದ್ದರೂ ಬಸ್ ಸ್ಟಾಂಡ್ ಕಟ್ಟುತ್ತಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ  ಸುಸಜ್ಜಿತ ಗೋಡೌನ್, ಹಾಗೆಯೇ ಅಡಿಕೆ ಸುಲಿಯುವ ಕಣದಂತಹ ರೈತರಿಗೆ ಅನುಕೂಲವಾಗುವ  ವ್ಯವಸ್ಥೆಗಳ ಬಗ್ಗೆ ಗಮನಹರಿಸುವುದೇ ಇಲ್ಲ ಉತ್ತರ ಭಾರತದಿಂದ ದುಡಿಯಲು ಹೊಲದ ಕೆಲಸ, ಕಟ್ಟಡ ಕಾಮಗಾರಿಗಳಿಗೆ  ಜನ ತಂದು ಇಲ್ಲಿ ಕೆಲಸ ಮಾಡಿಸಿದಂತೆ ಇದಕ್ಕೂ ಮಾಡಿಸಿದರೆ ಅಡಿಕೆ ಬೆಳೆಗಾರರಿಗೆ ಅದೆಷ್ಟು ಅನುಕೂಲ ಅಲ್ಲವೇ?

Leave a Reply

Your email address will not be published. Required fields are marked *

error: Content is protected !!