ಅಡಿಕೆ ಬೆಳೆಯಲ್ಲಿ ಎಲ್ಲಾ ಕಡೆ ಒಂದೇ ಸಮಯದಲ್ಲಿ ಅಡಿಕೆ ಕೊಯಿಲು ಆದಾಗ ಸುಲಿಯುವ ಕೆಲಸ ದೊಡ್ಡ ಕಷ್ಟ. ಜನ ಸಿಗುವುದಿಲ್ಲ. ಆ ಸಮಯದಲ್ಲಿ ಒಮ್ಮೆಗೇ ಟನ್ ಗಟ್ಟಲೆ ಅಡಿಕೆ ಸಿಪ್ಪೆ ತೆಗೆಯುವ ವ್ಯವಸ್ಥೆ ಎಂದರೆ ಅಡಿಕೆ ಮಿಲ್ ಗಳು. ಇದು ಬಾಡಿಗೆಯ ಆಧಾರದಲ್ಲಿ ಕೆಲಸ ಮಾಡಿ ಬೆಳೆಗಾರರಿಗೆ ತುಂಬಾ ಸಹಕಾರಿಯಾಗುತ್ತದೆ.
ಭತ್ತವನ್ನು ಗದ್ದೆಯಿಂದ ಕೊಯಿಲು ಮಾಡಿ ಮಿಲ್ ಗೆ ಒಯ್ದರೆ ಅಲ್ಲಿ ಅದನ್ನು ಅಕ್ಕಿ ಮಾಡಿಕೊಡುವಂತೆ, ಅಡಿಕೆಗೂ ಇಂತಹ ಒಂದು ವ್ಯವಸ್ಥೆ ಬಂದಿದೆ. ಈ ಯಾಂತ್ರಿಕ ವ್ಯವಸ್ಥೆಯಲ್ಲಿ ಮರದಿಂದ ಅಡಿಕೆ ಕೊಯಿಲು ಮಾಡಿ ಮಿಲ್ ಗೆ ಒಯ್ದರೆ ಸಾಕು. ಅಲ್ಲಿ ಅದನ್ನು ಗೊನೆಯಿಂದ ಬೇರ್ಪಡಿಸಿ, ಯಂತ್ರದ ಮೂಲಕ ಸುಲಿದು, ಅದರಲ್ಲಿ ಇಡಿ, ಹುಡಿ ಪ್ರತ್ಯೇಕಿಸಿ, ಬೇಯಿಸಿ ಕೊಡುವಂತಹ ಒಂದು ವ್ಯವಸ್ಥೆ ಬಂದಿದೆ. ಇದೇ ಅಡಿಕೆ ಮಿಲ್.
- ಅಡಿಕೆ ಕರ್ನಾಟಕದ ಅತೀ ದೊಡ್ಡ ವಾಣಿಜ್ಯ ಬೆಳೆ.
- ಒಂದು ಕಾಲದಲ್ಲಿ ಮಲೆನಾಡಿನಲ್ಲಿ ಮಾತ್ರ ಬೆಳೆಯುತ್ತಿದ್ದ ಅಡಿಕೆ, ಈಗ ಮಲೆನಾಡನ್ನು ಮೀರಿ, ಅರೆ ಮಲೆನಾಡು, ಬಯಲು ಸೀಮೆಗಳಿಗೆ ವಿಸ್ತಾರವಾಗಿದೆ.
- ಅಡಿಕೆಯ ಅತೀ ದೊಡ್ಡ ಸಮಸ್ಯೆ ಎಂದರೆ ಕೊಯಿಲಿನ ಕೆಲಸ ಎಲ್ಲಾ ಕಡೆಯಲ್ಲೂ ಸರಿ ಸುಮಾರು ಒಟ್ಟೊಟ್ಟಿಗೇ ನಡೆಯುವುದು.
- ಆದ ಸಹಜವಾಗಿ ಸಿಪ್ಪೆ ತೆಗೆಯುವವರ ಸಮಸ್ಯೆ ಉಂಟಾಗುತ್ತದೆ.
- ಇದಕ್ಕಾಗಿ ಹಲವಾರು ಜನ ಅಡಿಕೆ ಸಿಪ್ಪೆ ಸುಲಿಯುವ ಯಂತ್ರವನ್ನು ತಯಾರಿಸುವ ಸಾಹಸಕ್ಕೆ ಇಳಿದಿದ್ದಾರೆ.
- ಎಲ್ಲರ ಪ್ರಯತ್ನದ ಫಲ ಕೊನೆಗೆ ಒಂದು ಯಶಸ್ವೀ ಯಂತ್ರದ ರೂಪ ತಳೆಯಿತು.
- ಶಿವಮೊಗ್ಗದ SGM ಇಂಡಸ್ಟ್ರೀಸ್ ಇವರು ಇಂತಹ ಒಂದು ಯಂತ್ರವನ್ನು ತಯಾರಿಸಿದ್ದಾರೆ.
- ಇದಕ್ಕೆ ಅಡಿಕೆ ಹಾಕಿದರೆ ಮತ್ತೊಂದೆಡೆ ಸುಲಿದ ಅಡಿಕೆ ಬರುತ್ತದೆ.
- ಇಂತಹ ಸುಮಾರು 10 ಯಂತ್ರಗಳು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕೆಲಸ ಮಾಡುತ್ತಿವೆ.
- ಒಂದು ಯಂತ್ರ ಶಿವಮೊಗ್ಗ ಜಿಲ್ಲೆ ತೀರ್ಥ ಹಳ್ಳಿ ತಾಲೂಕು, ಕುಪ್ಪಳ್ಳಿಯಲ್ಲಿ(ಕುಪ್ಪಳ್ಳಿ ಅಡಿಕೆ ಮಿಲ್) ಕಾರ್ಯ ಮಾಡುತ್ತಿದೆ.
ಕುಪ್ಪಳ್ಳಿಯ ಪ್ರಗತಿಪರ ಕೃಷಿಕ ಶಂಕರ ಮೂರ್ತಿ ಇವರು ಇದನ್ನು ತಮ್ಮಲ್ಲಿ ಅಳವಡಿಸಿಕೊಂಡು ತಮ್ಮ ಅಡಿಕೆ ಮತ್ತು ಸಮಾನ ಮನಸ್ಕರ ಅಡಿಕೆಯನ್ನು ಸುಲಿದು, ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ.
ಏನಿದು ಅಡಿಕೆ ಮಿಲ್:
- ಬೇಯಿಸಿದ ಕೆಂಪಡಿಕೆ ಮಾಡಲು ಅಡಿಕೆಯನ್ನು ಸ್ವಲ್ಪ ಎಳೆಯದಾಗಿರುವ ಸಮಯದಲ್ಲಿ ಕೊಯಿಲು ಮಾಡಬೇಕು.
- ಕೊಯಿಲು ಮಾಡಿ ಒಂದೆರಡೂ ದಿನಗಳ ಒಳಗೆ ಸಿಪ್ಪೆ ಬೇರ್ಪಡಿಸಿ, ಅದನ್ನು ಬೇಯಿಸಿ ಒಣಗಿಸಬೇಕು.
- ಒಬ್ಬ ಕೆಲಸದವನು ದಿನಕ್ಕೆ ಹೆಚ್ಚೆಂದರೆ 50-60 ಕಿಲೋ ಹಸಿ ಅಡಿಕೆ ಸುಲಿಯಬಹುದು.
- ಇದಕ್ಕೆ ನೈಪುಣ್ಯತೆ ಬೇಕು. ಕತ್ತಿಯಲ್ಲಿ ಸುಲಿಯುವಾಗ ಜಾಗರೂಕತೆಯೂ ಆಗತ್ಯ.
- ಈಗಾಗಲೇ ಕೆಲಸದವರ ಕೊರತೆ ಅತಿಯಾಗಿದ್ದು, ಅಡಿಕೆ ಬೆಳೆ ಪ್ರದೇಶ ದಿನೇ ದಿನೇ ಹೆಚ್ಚುತ್ತಿದೆ.
- ಎಲ್ಲಾ ಅಡಿಕೆ ಬೆಳೆಗಾರರಿಗೆ ಅಡಿಕೆ ಉತ್ಪಾದನೆ ಸಮಸ್ಯೆ ಅಲ್ಲ.
- ಬಂದ ಉತ್ಪತ್ತಿಯನ್ನು ವಿಲೇವಾರಿ ಮಾಡುವುದೇ ಒಂದು ಸಮಸ್ಯೆ. ಹತ್ತು ಜನ ಕೆಲಸದವರು ಇದ್ದರೆ ದಿನಕ್ಕೆ 5 ಕ್ವಿಂಟಾಲು ಅಡಿಕೆ ಸುಲಿಯಬಹುದು.
- ಕೊಯಿಲಿಗನುಗುಣವಾಗಿ ಜನ ಬೇಕು. ಎಲ್ಲೆಲ್ಲಿಂದಲೋ ಜನ ತರಬೇಕು.
- ಬೇಕಾದರೆ ಕೇಳಿದಷ್ಟು ಮಜೂರಿ ಕೊಡಬೇಕು.
- ಈ ಸಮಸ್ಯೆಗೆ ಇರುವ ಉತ್ತರ ಯಾಂತ್ರಿಕವಾಗಿ ಅಡಿಕೆ ಸುಲಿಯುವುದು.
- ಯಂತ್ರ ಎಂದರೆ ಅದರಲ್ಲಿ ಮತ್ತೆ ಮಾನವ ಶ್ರಮ ಇರಬಾರದು.
- ಇಂತಹ ಒಂದು ವ್ಯವಸ್ಥೆಯೇ ಅಡಿಕೆ ಮಿಲ್. ಇದರಲ್ಲಿ ಅಡಿಕೆ ಮೂರು ಜನರಿದ್ದರೆ ಸಾಕು ಗಂಟೆಗೆ 5 ಕ್ವಿಂಟಾಲಿನಷ್ಟು ಸುಲಿದ ಅಡಿಕೆ ಬರುತ್ತದೆ.
- ಅಡಿಕೆ ಸುಲಿಯುವಾಗ ದೊರೆಯುವ ಹುಡಿ ಏನಾದರೂ ಇದ್ದರೆ ಅದು ಸಹ ಹಾಳಾಗದೆ ಒಂದೆಡೆ ಸಂಗ್ರಹವಾಗುತ್ತದೆ.
- ದಿನಕ್ಕೆ ಸುಮಾರು 8ಗಂಟೆ ಕೆಲಸ ಮಾಡಿದರೆ 40 ಕ್ವಿಂಟಾಲು ಹಸಿ ಸುಲಿದ ಅಡಿಕೆ ಲಭ್ಯ.
- ಈ ಅಡಿಕೆಯನ್ನು ಅಲ್ಲಿಂದಲೇ ನೇರವಾಗಿ ಬೇಯಿಸುವ ಪಾತ್ರೆಗೆ ಸಾಗಿಸುವ ವ್ಯವಸ್ಥೆಯೂ ಇದೆ.
- ಬೇಯಿಸುವ ಪಾತ್ರೆಯಲ್ಲಿ ಬೆಂದ ನಂತರ ಪುಲ್ಲಿ ವ್ಯವಸ್ಥೆಯಲ್ಲಿ ಹೊರ ತೆಗೆಯುವ ವ್ಯವಸ್ಥೆಯೂ ಇದೆ.
- ಇಲ್ಲೆಲ್ಲಾ ಅತೀ ಕಡಿಮೆ ಮಾನವ ಶ್ರಮ ಸಾಕಾಗುತ್ತದೆ.
ಅನುಕೂಲಗಳು ಏನೆಲ್ಲಾ ಇದೆ:
- ಒಬ್ಬ ಅಡಿಕೆ ಬೆಳೆಗಾರ ತನ್ನ ಅಡಿಕೆಯನ್ನು ಕೊಯಿಲು ಮಾಡಿ ಗೊನೆ ಸಮೇತ ಇಲ್ಲಿಗೆ ತಂದರೆ ಅವರ ಎದುರೇ ಯಾಂತ್ರಿಕವಾಗಿ ಗೊನೆಯಿಂದ ಕಾಯಿ ಬೇರ್ಪಡಿಸಬಹುದು.
- ಬೇರ್ಪಡಿಸಿದ್ದು ನೇರವಾಗಿ ಕಂಟೈನರ್ ಒಳಗೆ ಬೀಳುತ್ತದೆ.
- ಅಲ್ಲಿಂದ ಅದು ಕನ್ವೇಯರ್ ಮೂಲಕ ಸುಲಿಯುವ ಭಾಗಕ್ಕೆ ಹೋಗುತ್ತದೆ.
- ಅಲ್ಲಿ ಸುಲಿದು ಹೊರ ಬರುವಲ್ಲಿ ಎರಡು ಭಾಗಗಳಿದ್ದು, ಪೂರ್ತಿಯಾಗಿ ಸುಲಿದದ್ದು ಒಂದು ಕಡೆ ಸ್ವಲ್ಪ ಸಿಪ್ಪೆ ಉಳಿದದ್ದು, ಸಣ್ಣ ಗಾತ್ರದ್ದು ಬೇರೆಯಾಗಿ ಬರುತ್ತದೆ.
- ಹುಡಿ ಆದದ್ದು ಮತ್ತೊಂದು ಕಡೆ ಬುಟ್ಟಿಗೆ ಬೀಳುತ್ತದೆ.
- ಅಡಿಕೆ ಗೊನೆಯಿಂದ ಬೇರ್ಪಡಿಸುವಾಗ ಸಿಗುವ ಕಸಗಳು ಕನ್ವೇಯರ್ ನಲ್ಲಿ ಸಾಗುವಾಗ ಅದರಲ್ಲಿರುವ ತೂತುಗಳ ಮೂಲಕ ಹೊರ ಬೀಳುತ್ತದೆ.
- ಬೇಕಾದರೆ ಬೇಯಿಸಿಯೂ ಕೊಂಡೋದಗಬಹುದು.
- ಹಾಗೆಯೇ ಕೊಂಡೋಗಬಹುದು. ಸಣ್ಣ ಬೆಳೆಗಾರರು (1-2 ಎಕ್ರೆ ಇರುವವರು) ಒಮ್ಮೆಲೆ ತಮ್ಮ ಅಡಿಕೆ ಕೊಯಿಲು ಮಾಡಿಸಿ, ತಕ್ಷಣ ಸುಲಿದು ಬೇಯಿಸಬಹುದು.
ಈ ಯಂತ್ರದಲ್ಲಿ ಹಿಂದಿನ ಎಲ್ಲಾ ನ್ಯೂನ್ಯತೆಗಳನ್ನು ಸರಿಪಡಿಸಲಾಗಿದೆ. ಆಗಾಗ ತಯಾರಕರು ಬಂದು ಏನಾದರೂ ಸಮಸ್ಯೆಗಳನ್ನು ಗುರುತಿಸಿದರೆ ಅದನ್ನು ಸರಿಪಡಿಸುತ್ತಾರೆ. ಕೆಲಸದವರಿಲ್ಲ ಎಂದು ಚಿಂತೆ ಮಾಡಬೇಕಾಗಿಲ್ಲ. ಕೆಲಸದವರ ಸಮಸ್ಯೆಗಾಗಿ ತೋಟ ಗುತ್ತಿಗೆ ಕೊಡಬೇಕಾಗಿಲ್ಲ. ಅವರವರ ಫಸಲನ್ನು ಅವರವರೇ ಮಿತವ್ಯಯದಲ್ಲಿ ಸುಲಿದು ಬೇಯಿಸಿ ಒಣಗಿಸಹುದು.
ಮಲೆನಾಡಿನಲ್ಲಿ ಇದು ಮೊದಲ ಯುನಿಟ್:
- ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಕುಪ್ಪಳ್ಳಿಯಲ್ಲಿ ಶ್ರೀ ಶಂಕರ ಮೂರ್ತಿಯವರು ಅಳವಡಿಸಿಕೊಂಡ ಈ ಯಂತ್ರ ಮಲೆನಾಡಿಗೆ ಮೊದಲನೆಯದ್ದು ಎನ್ನುತ್ತಾರೆ.
- ಇದು 10 ಆಶ್ವ ಶಕ್ತಿಯಲ್ಲಿ ಕೆಲಸ ಮಾಡುತ್ತದೆ.
- ಇವರು ತಮ್ಮ ಅಡಿಕೆ ಮತ್ತು ಬಾಡಿಗೆಗೆ ಬಂದರೆ ಅದಕ್ಕೂ ಆಗುತ್ತದೆ ಎಂದು ಇದನ್ನು ಮಾಡಿಕೊಂಡಿದ್ದಾರೆ.
- ಸುಮಾರು 10 ಲಕ್ಷ ಖರ್ಚು ಆಗಿದೆಯಂತೆ.
- ಅಡಿಕೆ ಸಂಸ್ಕರಣಾ ಘಟಕ ಎಂಬ ಯೋಜನೆಯಲ್ಲಿ ಇದಕ್ಕೆ ಸಹಾಯಧನವೂ ಸಿಗುತ್ತದೆಯಂತೆ.
ಬಯಲು ಸೀಮೆಯ ದಾವ್ಣಗೆರೆ, ಚಿತ್ರದುರ್ಗ ಮುಂತಾದ ಕಡೆ ಐದಾರು ಯಂತ್ರಗಳು ಕೆಲಸ ಮಾಡುತ್ತಿವೆ ಎನ್ನುತ್ತಾರೆ ತಯಾರಕರಾದ ಶ್ರೀ ಪ್ರಕಾಶ್ ರವರು. ಇವರು ಇದಲ್ಲದೆ ಬೇರೆ ಬೇರೆ ಶ್ರೇಣಿಯ (ಸಣ್ಣದದಿಂದ ದೊಡ್ಡದು ತನಕ) ಯಂತ್ರಗಳನ್ನು ತಯಾರಿಸುತ್ತಾರೆ. ಇದನ್ನು ಬಾಡಿಗೆ ಮಾಡಲೂ ಬಳಕೆ ಮಾಡಬಹುದು ಎನ್ನುತ್ತಾರೆ ಇವರು.