ಮನೆಯ ಹಿತ್ತಲು, ಟೆರೇಸ್ ನಲ್ಲಿ ಹಣ್ಣು ಹಂಪಲು ಬೆಳೆಯುವ ವಿಧಾನ.

Poly bag fruit plant

ಅವರವರ ಬಳಕೆಗೆ ಬೇಕಾಗುವ ಹಣ್ಣು ಹಂಪಲುಗಳನ್ನು ಹೀಗೆ ಬೆಳೆದರೆ ಉತ್ತಮ ಗುಣಮಟ್ಟದ ಸುರಕ್ಷಿತ ಹಣ್ಣುಗಳನ್ನು ತಿನ್ನಬಹುದು.

ಒಂದು ಕುಟುಂಬಕ್ಕೆ ಮಾವಿನ ಹಣ್ಣು ಎಷ್ಟು ಬೇಕಾಗಬಹುದು? ವರ್ಷಕ್ಕೆ ಹೆಚ್ಚೆಂದರೆ 10 ಕಿಲೋ. ಇದನ್ನು ಉತ್ಪಾದಿಸಲು ಮಾವಿನ ತೋಟ ಮಾಡಬೇಕಾಗಿಲ್ಲ. ಮನೆಯ ಹಿತ್ತಲಲ್ಲಿ ಎಲ್ಲಿ ಗಾಳಿ ಬೆಳೆಕು ಚೆನ್ನಾಗಿ ಲಭ್ಯವಿರುತ್ತದೆಯೋ ಅಲ್ಲಿ ನೆಟ್ಟು ಫಲವನ್ನು ಪಡೆಯಬಹುದು. ಮಾವು ಮಾತ್ರವಲ್ಲ. ನಾವು ತಿನ್ನಬಯಸುವ ಎಲ್ಲಾ ನಮೂನೆಯ  ಹಣ್ಣು ಹಂಪಲುಗಳನ್ನೂ ಇದೇ ತರಹ ಬೆಳೆಸಿ ನಮ್ಮ ಕುಟುಂಬಕ್ಕೆ ಬೇಕಾದ ವಿಷಮುಕ್ತ ಹಣ್ಣು ಹಂಪಲು ಪಡೆಯಬಹುದು. ಇದು ಆರೋಗ್ಯಕ್ಕೆ ಸುರಕ್ಷಿತವಾದ ಹಣ್ಣುಗಳಾಗಿರುತ್ತದೆ.

 • ನಾವೆಲ್ಲಾ ನಾವು ನೆಟ್ಟು ಬೆಳೆಸಿದ ಮಾವು, ಸಪೋಟಾ ಹಾಗೆಯೇ ಇನ್ನಿತರ ಹಣ್ಣು ಹಂಪಲು ಮರಗಳಿಂದಲೇ  ಹಣ್ಣುಗಳನ್ನು  ತಿನ್ನಬೇಕೆಂದು ಬಯಸುತ್ತೇವೆ.
 • ಅದಕ್ಕಾಗಿ ವರ್ಷ ವರ್ಷವೂ ಸಸಿ ನೆಡುತ್ತೇವೆ. ಕೆಲವು ಫಲವೇ ಕೊಡುವುದಿಲ್ಲ.
 • ಕೆಲವು ಫಲ ಕೊಟ್ಟರೂ  ತಿನ್ನುವ ಭಾಗ್ಯವೇ ಇಲ್ಲದಂತೆ ಮಾವು ಹಾಳಾಗುತ್ತದೆ. 
 • ಎಲ್ಲಾ ನಮೂನೆಯ ಹಣ್ಣು ಹಂಪಲುಗಳೂ ಹುಳವಾಗುವುದು, ಕೊಳೆಯುವುದು ಸರ್ವೇ ಸಾಮಾನ್ಯ.
 • ಕೊನೆಗೆ ರೈತರು ಹಣ್ಣುಗಳು ತೋಟದಲ್ಲಿದ್ದರೂ ಅಂಗಡಿಯಿಂದ ತಂದೇ ಬಳಸುವುದು.
 • ಈ ಸಮಸ್ಯೆ ಹೋಗಲಾಡಿಸಲು ಇರುವ ಏಕೈಕ ಉಪಾಯ ಇದು.
Mango plant

ಮಾವಿನ ಮರ ಹಣ್ಣು ಕೊಡಬೇಕಾದರೆ ಅದು ದೈತ್ಯ ಗಾತ್ರದ ಮರವಾಗಲೇ ಬೇಕೆಂದಿಲ್ಲ. ಅದನ್ನು ಮಿನಿ ಬೋನ್ಸಾಯ್ ತರಹ ಬೆಳೆಸಿ ಒಂದು ಕುಟುಂಬಕ್ಕೆ ಬೇಕಾದ ಹಣ್ಣುಗಳನ್ನು ಪಡೆಯಬಹುದು. ಒಂದು ಮಾವಿನ ಮರವನ್ನು  6 ಅಡಿ ಸುತ್ತಳತೆಗೆ ಸೀಮಿತವಾಗಿ ಬೆಳೆಸಿ ಅದರಲ್ಲಿ  ವಾರ್ಷಿಕ 100 ಕ್ಕೂ ಹೆಚ್ಚು ಮಾವಿನ ಹಣ್ಣುಗಳನ್ನು ಪಡೆಯಬಹುದು. ಇಂತಹ ತಂತ್ರಜ್ಞಾನ ಚೀನಾ ಮುಂತಾದ ದೇಶಗಳಲ್ಲಿ ಚಾಲ್ತಿಯಲ್ಲಿರುವುವದನ್ನು ನಾವೆಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿದ್ದೇವೆ. ಇಲ್ಲಿಯೂ ಇದನ್ನು ಕೆಲವರು ಮಾಡಿ ತೋರಿಸಿದ್ದಾರೆ.

ಮರವನ್ನು ಹೇಗೆ ಗಿಡ ಮಾಡುವುದು?

mini bonsai plant
 • ಒಮ್ಮೆ ಬಿಡುವು ಮಾಡಿಕೊಂಡು ಬ್ರಹ್ಮಾವರದ  ಪೇತ್ರಿ ಸಮೀಪ ಇರುವ ಕ್ಲಾಸಿಕ್ ನರ್ಸರಿ ಇಲ್ಲಿಗೆ ಭೇಟಿ ಕೊಡಿ.
 • ಇಲ್ಲಿ ನೂರಾರು ಬಗೆಯ ಮಾವಿನ ತಳಿಗಳನ್ನು ಪಾಲಿಥೀನ್ ಚೀಲದಲ್ಲಿ ಹಾಕಿ ಬೆಳೆಸಿದ್ದಾರೆ.
 • ಇದು ವರ್ಷವೂ ಹೂ ಬಿಡುತ್ತದೆ. ಒಂದಷ್ಟು  ಕಾಯಿಗಳನ್ನು ಸಹ ಕೊಡುತ್ತದೆ.
 • ಇದು ಸಣ್ಣ ಕುಟುಂಬಕ್ಕೆ ಅವರವರ ಬಳಕೆಗೆ ಹಣ್ಣು ಹಂಪಲು ಉತ್ಪಾದಿಸುವ ಸರಳ ವಿಧಾನ.
 • ಹಾಗೆಯೇ ದೊಡ್ಡಬಳ್ಳಾಪುರ ಸುತಮುತ್ತ ಇರುವ ಕೆಲವು ನರ್ಸರಿಗಳಲ್ಲೂ ನೀವು ಇದನ್ನು ಕಾಣಬಹುದು.
Mango plant

ದೊಡ್ದ ಗಾತ್ರದ ಪಾಲಿಥೀನ್ ಚೀಲದಲ್ಲಿ ಕಸಿ ಮಾಡಿದ ಹಣ್ಣಿನ ಗಿಡಗಳನ್ನು ಬೆಳೆಸಿ ಅದನ್ನು ಗರಿಷ್ಟ ಬಿಸಿಲು ಇರುವ ಜಾಗದಲ್ಲಿ  ಇಟ್ಟು ಅದನ್ನು ಪೋಷಣೆ ಮಾಡುತ್ತಿದ್ದರೆ ಅದು ಸುಮಾರಾಗಿ ಮರದ ಗಾತ್ರಕ್ಕೇ ಬೆಳೆಯುತ್ತದೆ. ಅಥವಾ ನೆಲದಲ್ಲೇ ಇದನ್ನು ಬೆಳೆಸಬಹುದು. ವರ್ಷವೂ ಪ್ರೂನಿಂಗ್ ಮಾಡಿ ಮರದ ಗಾತ್ರ ದೊಡ್ಡದಾಗದಂತೆ ನೋಡಿಕೊಳ್ಳಬೇಕು.ಕೇರಳದಲ್ಲಿ ಕೆಲವು ರೈತರು ರಾಂಬುಟಾನ್ , ಪುಲಾಸಾನ್ ಮುಂತಾದ ಗಿಡಗಳನ್ನು ಹೀಗೆ ಬೆಳೆಯುತ್ತಾರೆ. ಜೈನ್ ಸಂಸ್ಥೆ ತಮಿಳುನಾಡಿನ ಉದುಮಲ್ ಪೇಟೆಯಲ್ಲಿ ಇದರ ಪ್ರಾತ್ಯಕ್ಷಿಕಾ ತೋಟ ಹೊಂದಿದೆ. ಭವಿಷ್ಯದಲ್ಲಿ ಇದು ನಾವೆಲ್ಲಾ ಪಾಲಿಸಲೇ ಬೇಕಾದ ಬೆಳೆ ವಿಧಾನ ಎಂಬುದರಲ್ಲಿ ಅನುಮಾನ ಇಲ್ಲ.

ಹಣ್ಣು ಹಂಪಲು ಗಳಲ್ಲಿ ಇಳುವರಿ ಬರುವುದು ಹೀಗೆ:

keep it in sun light
 • ನಾವೆಲ್ಲಾ ಹಣ್ಣು ಹಂಪಲುಗಳ ಸಸಿ ನೆಡುತ್ತೇವೆ. ಆದರೆ ಅದಕ್ಕೆ ಪೂರ್ಣ ಪ್ರಮಾಣದ ಬಿಸಿಲು ಬೀಳುವುದೇ ಇಲ್ಲ.
 • ಈ ಕಾರಣದಿಂದ ಅದರಲ್ಲಿ ಹೂವು ಆಗುವುದಿಲ್ಲ. ಕಾಯಿಯೂ ಆಗುವುದಿಲ್ಲ. ಅದು ಎತ್ತರವಾಗಿ ಬೆಳೆದು ಕಿರಿ ಕಿರಿ ಉಂಟಾಗುತ್ತದೆ.

ಗಿಡದಲ್ಲಿ ಹಣ್ಣಾಗುತ್ತದೆ ಆದರೆ ತಿನ್ನುವ ಭಾಗ್ಯ ಬೇಕಲ್ಲವೇ?

 • ಮಾವು ನೆಡಿ, ಸಪೋಟಾ ನೆಡಿ, ಮೂಸಂಬಿ ನೆಡಿ ಯಾವುದೇ ಹಣ್ಣೂ ಹಂಪಲು ನೆಟ್ಟರೂ ನಮಗೆ  ಅದು ತಿನ್ನಲು ಸಿಗುವುದಿಲ್ಲ.
 • ಕೀಟಗಳು, ಮತ್ತು ಹಕ್ಕಿಗಳು ಫಲಬಂದಾಗ ಪಾಲುದಾರರಾಗಿ ಬರುತ್ತವೆ.
 • ಇದಕ್ಕೆ ಪರಿಹಾರ, ತಗ್ಗಿನ ಗಿಡಗಳಲ್ಲಿ ಫಲ ಪಡೆಯುವುದು. ಇವುಗಳು ಬಾರದಂತೆ ನಾವೇ ಉಪಾಯು ಹೂಡುವುದು.
 • ನಾವೆಲ್ಲಾ ಕೆಲವು ಪ್ರದರ್ಶನಗಳಲ್ಲಿ  ತಗ್ಗಿನ ಗಿಡಗಳಲ್ಲಿ ಕಾಯಿ ಬಿಡುವ  ಮೂಸಂಬಿ, ಹಾಗೆಯೇ ಲಿಂಬೆ, ಸಪೋಟಾ, ರಾಂಬೂಟಾನ್, ಮುಂತಾದವುಗಳನ್ನು ಕಂಡಿದ್ದೇವೆ.
 • ಅದೇ ರೀತಿಯಲ್ಲಿ  ಬೆಳೆಸಿ ಅದರ ಹಣ್ಣುಗಳನ್ನು ಪಡೆಯುವುದೊಂದೇ ಪರಿಹಾರ. 

ಅನುಕೂಲಗಳು ಏನು:

Mangostine plant
 • ನಮ್ಮ ಮನೆಬಳಕೆಯ ಹಣ್ಣು ಹಂಪಲುಗಳನ್ನು ನಾವೇ ಉತ್ಪಾದಿಸಿ ತಿನ್ನುವುದಾದರೆ ಅದಕ್ಕೆ ವಿಷ ರಾಸಾಯನಿಕ ಕೀಟ ನಾಶಕಗಳನ್ನು ಸಿಂಪಡಿಸದೇ ತಿನ್ನುವುದು ಉತ್ತಮ.
 • ಹಲಸಿನ ಹಣ್ಣೊಂದನ್ನು ಬಿಟ್ಟರೆ ಎಲ್ಲಾ ಹಣ್ಣು ಹಂಪಲುಗಳಿಗೂ ಹಣ್ಣು ನೊಣ ಬಂದೇ ಬರುತ್ತದೆ.
 • ಈ ನೊಣ ಇಲ್ಲದ ಜಾಗ ಇಲ್ಲ. ಸುಮಾರು 95% ಕ್ಕೂ ಹೆಚ್ಚು ಫಲ ಹುಳವಾಗಿ ಹಾಳಾಗುತ್ತದೆ.
 • ಇದರಿಂದ ಮುಕ್ತಿ ಪಡೆಯಲು ಒಂದು ಕೀಟನಾಶಕ ಇನ್ನೊಂದು ಈ ಕೀಟ ಒಳ ನುಸುಳದಂತೆ ಬಲೆ ಹಾಕುವುದು ಎರಡೇ.
 • ಮರಕ್ಕೆ ಬಲೆ ಹಾಕಲು ಅಸಾಧ್ಯ.
 • ಅದೇ ಗಿಡವಾದರೆ ಅದು ಸುಲಭ ಸಾಧ್ಯ.
 • ಬಲೆಯಿಂದ ಕವರ್ ಮಾಡಿದರೆ 100% ಹಣ್ಣು ತಿನ್ನಲು ಯೋಗ್ಯವಾಗಿರುತ್ತದೆ. 
 • ಯಾವುದೇ ನಿರ್ವಹಣೆ ಮಾಡಬೇಕಿದ್ದರೂ ಸಹ ಸಸಿ ತಗ್ಗಿನಲ್ಲಿ ಇದ್ದರೆ ಅನುಕೂಲ.
 • ವರ್ಷ ವರ್ಷವೂ ಹಣ್ಣು ಕಠಾವು ಆದ ತಕ್ಷಣ ಹಿತ ಮಿತವಾಗಿ ಗೆಲ್ಲುಗಳನ್ನು ಸವರಿಪ್ರೂನಿಂಗ್ ಮಾಡಬೇಕು.
 • ಅದಕ್ಕೆ ತಗ್ಗಿನ ಗಿಡಗಳಾದರೆ ಮಾತ್ರ ಸಾಧ್ಯ.
 • ಕೊಯಿಲು ಮಾಡುವುದಕ್ಕೂ ತಗ್ಗಿನ ಗಿಡಗಳು ಅನುಕೂಲಕರ.

ಪೋಷಕಾಂಶ:

10 years mango plant
 • ಸಾಮಾನ್ಯವಾಗಿ ಪಾಲಿಥೀನ್ ಚೀಲಗಳಲಿ ಬೆಳೆಸಲಾದ ಸಸಿಗಳಿಗೆ ಬೆಳೆಯಲು ಲಭ್ಯವಾಗುವ ಮಣ್ಣು ಕಡಿಮೆ.
 • ಅದರ ಸ್ವಲ್ಪ ಬೇರುಗಳು ನೆಲಕ್ಕೆ ಇಳಿಯುತ್ತವೆ.
 • ಆದರೂ ಮರಗಳಿಗೆ ವಿಶಾಲ ಪ್ರದೇಶಕ್ಕೆ ಬೇರು ಹಬ್ಬಲು ಅನುಕೂಲ ಇರುವಂತೆ ಇದಕ್ಕೆ ಇರುವುದಿಲ್ಲ.
 • ಅದಕ್ಕಾಗಿ ವರ್ಷ ವರ್ಷವೂ ಹಳೆ ಯ ಗೊಬ್ಬರವನ್ನು ಸ್ವಲ್ಪ ಕೆರೆದು ತೆಗೆದು ತೆಗೆದು ಹೊಸ ಸಾವಯವ ಗೊಬ್ಬರವನ್ನು ಕೊಡುತ್ತಾ ಇರಬೇಕು.
 • ನೀರುಣಿಸುವಾಗ ದ್ರವರೂಪದ ಪೋಷಕಗಳನ್ನು ನಿರಂತರ ಕೊಡುವುದರಿಂದ ಸಸ್ಯ ಬೆಳವಣಿಗೆಗೆ ಯಾವ ಅಡ್ದಿಯೂ ಉಂಟಾಗುವುದಿಲ್ಲ.
 • ಇಂತಹ ಸಸಿಗಳು ವರ್ಷಾನುಗಟ್ಟಲೆ ಬದುಕದಿದ್ದರೂ ಸಹ 10-15 ವರ್ಷ ಬದುಕುತ್ತವೆ.
 • ಈ ಮಧ್ಯೆ ಬೇರೆ  ಸಸಿಯನ್ನು ಹೀಗೆಯೇ ಬೆಳೆಸಿ ಮತ್ತೆ ಫಲಪಡೆಯುತ್ತಿರಬಹುದು.

ನಾವು ಅಂಗಡಿಯಿಂದ ಕೊಳ್ಳುವ ಹಣ್ಣು ಹಂಪಲುಗಳು ವಾಣಿಜ್ಯಿಕ ಬೇಸಾಯಕ್ರಮದಲ್ಲಿ ಬೆಳೆದಂತಹ ಮಾವು. ವಾಣಿಜ್ಯಿಕವಾಗಿ ಬೆಳೆಯುವಾಗ ಹೂ ಮೊಗ್ಗು ಹುಟ್ಟುವ ಸಮಯದಿಂದ ಕೊಯಿಲಿನ ತನಕ ಹಲವಾರು ಬಾರಿ ಸಿಂಪರಣೆ ಮಾಡಬೇಕು. ಇಂತಹ ವಿಷ ಸೇರಲ್ಪಟ್ಟ ಹಣ್ಣನ್ನು ತಿನ್ನುವ ಬದಲು ನಾವೇ  ಬೆಳೆದು ತಿಂದರೆ ಎಷ್ಟೊಂದು ತೃಪ್ತಿ.  

2 thoughts on “ಮನೆಯ ಹಿತ್ತಲು, ಟೆರೇಸ್ ನಲ್ಲಿ ಹಣ್ಣು ಹಂಪಲು ಬೆಳೆಯುವ ವಿಧಾನ.

 1. Wow what an amazing effort for the Agri society Really great Eventhough I don’t know the Language the sub title itself speaks volumes Thanks to my Agroindica group and Special thanks to Shri. Radha Krishna sir. All the best

Leave a Reply

Your email address will not be published. Required fields are marked *

error: Content is protected !!