ಅಡಿಕೆ ಮರಗಳು ಸಾಯುತ್ತಿವೆಯೇ? ಒಮ್ಮೆ ಸುಳಿ ಭಾಗವನ್ನು ಪರೀಕ್ಷಿಸಿರಿ.

by | Jul 29, 2021 | Arecanut (ಆಡಿಕೆ), Horticulture Crops (ತೋಟದ ಬೆಳೆಗಳು) | 0 comments

ಅಡಿಕೆ ಮರದ ಸುಳಿ  ಏನೋ  ವ್ಯತ್ಯಾಸವಾದಂತೆ ಕಂಡರೆ,  ಕೆಂಪು ಮೂತಿ ಹುಳವೂ ಉಪಟಳ  ಇರಬಹುದು. ಮರದ ಸುಳಿ ಭಾಗ ಬಾಡಿದಂತೆ ಕಂಡರೆ, ಅಥವಾ ಕಾಂಡದಲ್ಲಿ  ಸುಳಿಭಾಗದಿಂದ ಪ್ರಾರಂಭಗೊಂಡು ರಸ ಇಳಿದಂತೆ ಕಂಡರೆ , ಸುಳಿ ಭಾಗ ಸ್ವಲ್ಪ ಹರಿದಂತೆ ಕಂಡರೆ ಮರ ಏರಿ ಸುಳಿ ಭಾಗವನ್ನು ಒಮ್ಮೆ ಪರಿಶೀಲಿಸಿರಿ. ಸುಳಿಯಲ್ಲಿ ಏನೋ ಆಗಿದೆ ಎಂಬುದು ಈ ಮೇಲಿನ ಲಕ್ಷಣಗಳು ಹೇಳುತ್ತವೆ.

ಕಳೆದ ಎರಡು ವರ್ಷಗಳಿಂದ ಅಡಿಕೆ  ಮರಗಳು ಸುಳಿ ಕೊಳೆತು ಸಾಯುತ್ತಿವೆ. ರೈತರು ಅದನ್ನು ಕಡಿಯದೇ ಹಾಗೇ ಉಳಿಸುತ್ತಾರೆ. ಅದರ ಕೊಳೆತ ವಾಸನೆಗೆ ಎಲ್ಲೆಲ್ಲಿಂದಲೋ ಅರಸಿ ಈ ಕೆಂಪು ಮೂತಿ ಹುಳ ಬರುತ್ತದೆ.

ಹಾನಿ ಲಕ್ಷಣ:

ಕಾಂಡದಲ್ಲಿ ಈ ರೀತಿ ರಸ ಇಳಿದಿದ್ದರೆ ಸುಳಿ ಗಮನಿಸಿ

ಕಾಂಡದಲ್ಲಿ ಈ ರೀತಿ ರಸ ಇಳಿದಿದ್ದರೆ ಸುಳಿ ಗಮನಿಸಿ

  • ಸಾಮಾನ್ಯವಾಗಿ ಕೆಂಪು ಮೂತಿ ಹುಳ 30 ಅಡಿಗಿಂತ ಎತ್ತರದ ಅಡಿಕೆ ಮರಗಳಿಗೆ ತೊಂದರೆ ಮಾಡಲಾರದು.
  • ಕಾರಣ ಅಷ್ಟು ಎತ್ತರಕ್ಕೆ ಈ ದುಂಬಿಗೆ ಹಾರಲು ಕಷ್ಟ.
  • ಸುಮಾರು 2 ವರ್ಷದ ನಂತರದ ಶಿರ ಮೂಡಿದ ಸಸಿಗಳಿಗೆ ಬಾಧಿಸುತ್ತದೆ.
  • ಕೆಂಪು ಮೂತಿ ಹೆಣ್ಣು ದುಂಬಿ ಎಳೆ ಭಾಗವಾದ ಸುಳಿಯಲ್ಲಿ ಹೋಗಿ ಆ ಭಾಗವನ್ನು ಕೊರೆದು ತೂತು ಮಾಡಿ ಅಲ್ಲಿ ಮೊಟ್ಟೆ ಇಡುತ್ತದೆ.
  • ಸಾಮಾನ್ಯವಾಗಿ ಒಂದೇ ದುಂಬಿ ಮೊಟ್ಟೆ ಇಡುವುದು.
  • ಒಮ್ಮೆ ಮೊಟ್ಟೆ ಇಡುವಾಗ ಸುಮಾರು 300 ಮೊಟ್ಟೆಗಳನ್ನೂ ಇಡಬಹುದು.
  • ಮೊಟ್ಟೆ ಸುಮಾರು ಬಿಳಿ ಜೋಳದ (ಅರಳು ಜೋಳ) ಕಾಳಿನಷ್ಟು ಇರುತ್ತದೆ.
  • 4-5 ದಿನದಲ್ಲಿ ಮೊಟ್ಟೆ ಮರಿಯಾಗುತ್ತದೆ.
  • ಆ ಮರಿಗಳಿಗೆ ಮರದ ಎಳೆ ಭಾಗವೇ ಆಹಾರ.
  • ಎಳೆ ಭಾಗವನ್ನು ತನ್ನ ಹರಿತವಾದ ಬಾಯಿಯಿಂದ ಕೊರೆಯುತ್ತಾ ಎಳೆ ಭಾಗದ ರಸ ಹೀರಿ ನಾರನ್ನು ಬಿಡುತ್ತದೆ.
  • ಇದು ಸುಮಾರು 36-78 ದಿನಗಳ ತನಕ ಇರುತ್ತದೆ.
  • ಆ ನಂತರ ತಾನೇ ವಿಸರ್ಜಿಸಿದ ನಾರಿನಲ್ಲೇ ಮತ್ತೆ ಪ್ಯೂಪೇ ಹಂತಕ್ಕೆ ಹೋಗಿ 10- 15 ದಿನಗಳಲ್ಲಿ ದುಂಬಿಯಾಗುತ್ತದೆ.
ಒಣಗಿದ  ಸುಳಿ ಭಾಗದಲ್ಲಿ ಹೀಗೆ ತಿಂದು ಹಾಕಿದ ಕಸ ಇರುತ್ತದೆ

ಒಣಗಿದ ಸುಳಿ ಭಾಗದಲ್ಲಿ ಹೀಗೆ ತಿಂದು ಹಾಕಿದ ಕಸ ಇರುತ್ತದೆ

ದುಂಬಿ ಹೇಗೆ  ಬರುತ್ತದೆ:

  • ದುಂಬಿ ವಾತಾವರಣದಲ್ಲಿ ಎಲ್ಲಾ ಕಡೆ ಇರುತ್ತದೆ.
  • ಇದಕ್ಕೆ ಕೊಳೆತ ವಸ್ತುಗಳು ಆಕರ್ಷಣೆ.
  • ಬಾಳೆ ಹಣ್ಣು. ತೆಂಗಿನ ಮರದ ಎಳೆ ಗರಿ, ಕುರುವಾಯಿ ಕೀಟ ರಸಹೀರಿ ಹೊರ ಹಾಕಿದ ತ್ಯಾಜ್ಯ, ಮುಂತಾದ ಕೊಳೆತಿನಿಗಳು ಇರುವಲ್ಲಿ ಇದು ಹುಡುಕಿಕೊಂಡು ಬರುತ್ತದೆ.
ದುಂಬಿ ತೂತು ಕೊರೆದ ಚಿನ್ಹೆ

ದುಂಬಿ ತೂತು ಕೊರೆದ ಚಿನ್ಹೆ

  • ತಾಳೆ ಜಾತಿಯ ಮರಗಳಾದ ತೆಂಗು, ಭೈನೆ( ಈಂದು) ತಾಳೆ, ಎಣ್ಣೆ ತಾಳೆ, ಮರಗಳು ಸತ್ತು ಹೋಗಿದ್ದರೆ( ಸಿಡಿಲು ಇತ್ಯಾದಿಗಳಿಂದ) ಅದನ್ನು ತಕ್ಷಣ ವಿಲೇವಾರೀ ಮಾಡದೇ ಅಲ್ಲೇ ಉಳಿಸಿದ್ದರೆ ಅದರ ಕೊಳೆತ ವಾಸನೆಗೆ ಈ ದುಂಬಿಗಳು ಹುಡುಕಿಕೊಂಡು ಬರುತ್ತವೆ.
  • ಅಡಿಕೆ ಮರಗಳ ಸುಳಿ ಭಾಗ ಕೊಳೆಯುವಂತಿದ್ದರೆ (ಸುಳಿಕೊಳೆ ರೋಗ) ಆ ಭಾಗದ ಕೊಳೆತ ವಾಸನೆಗೂ ದುಂಬಿ ಬರುತ್ತದೆ.
  • ಹೀಗೆ ಬಂದ ಪ್ರೌಡ ದುಂಬಿ ಮೊಟ್ಟೆ ಇಟ್ಟು ಮರಿ ಮಾಡಲು ಈ ಅವಕಾಶವನ್ನು ಬಳಸಿಕೊಳ್ಳುತ್ತವೆ.

ನಿರ್ವಹಣೆ:

  • ತೆಂಗಿನ ಮರಕ್ಕೆ ಬಾಧಿಸಿದಾಗ ಅದು ಸುಳಿ ಮೂಡುವ ಭಾಗದ ವರೆಗೆ ತಲುಪಿದ್ದರೆ ಮರ ಸಾಯುವುದೇ ಜಾಸ್ತಿ.
  • ಪ್ರಾರಂಭದ ಹಂತದಲ್ಲಿ ಸುಳಿ ಬುಡಕ್ಕೆ ಬಾಧಿಸಿದ್ದನ್ನು ಗುರುತಿಸಿ ನಿರ್ವಹಣೆ ಮಾಡಿದರೆ ಬದುಕಿಸಲು ಸಾಧ್ಯ.
  • ಅಡಿಕೆಯಲ್ಲಿ ಸುಳಿ ಭಾಗ ತೆಂಗಿನಂತೆ ಆದರೂ ಸಹ ಮೊಳಕೆ (ಬಡ್) ಮೂಲಕ್ಕೆ ತಲುಪಲು ಸೋಗೆಗಳ ಅವರಣ ಇರುತ್ತದೆ.
  • ಆದ ಕಾರಣ ಸುಳಿಯ ಮೂಲಕವೇ ಕೆಳಕ್ಕೆ ಇಳಿಯಬೇಕು.
  • ಆದಾಗ್ಯೂ ಗುರುತಿಸುವಿಕೆ ತಡವಾದರೆ ಮರ ಸಾಯುತ್ತದೆ.
ಕೆಂಪು ಮೂತಿ ದುಂಬಿ ಕೊರೆದು ಮೊಟ್ಟೆ ಇಟ್ಟು ಮರಿಯಾದದ್ದು

ಕೆಂಪು ಮೂತಿ ದುಂಬಿ ಕೊರೆದು ಮೊಟ್ಟೆ ಇಟ್ಟು ಮರಿಯಾದದ್ದು

  • ಸುಳಿ ಭಾಗದ ಕೊಳೆತ ಎಲ್ಲಾ ಭಾಗಗಳನ್ನೂ ತೆಗೆದು ಸ್ವಚ್ಚ ಮಾಡಬೇಕು.
  • ಅದನ್ನು ಸಂಗ್ರಹಿಸಿ ಸುಡಬೇಕು. ಇದರಲ್ಲಿ ಮರಿಹುಳು, ಮೊಟೆಗಳು ಇರುತ್ತವೆ.
  • ಆ ಭಾಗವನ್ನು ಪೂರ್ತಿ ಸ್ವಚ್ಚ ಮಾಡಿ ಅಲ್ಲಿಗೆ ಶಿಲೀಂದ್ರ ನಾಶಕ ( ಬಾವಿಸ್ಟಿನ್ ಅಥವಾ ರಿಡೋಮಿಲ್) ಪೇಸ್ಟ್ ಹಚ್ಚಿ. ಜೊತೆಗೆ ಸೋಗೆಯ ಹಾಳೆ ಮರಕ್ಕೆ ತಾಗಿದ ಭಾಗದ ಎಡೆ ಮತ್ತು  ಗಾಯ ಮಾಡಿ ತೆಗೆದ ಭಾಗಕ್ಕೆ ಕ್ಲೋರೋಫೆರಿಫೋಸ್ ಕೀಟನಾಶಕವನ್ನು ಸುರಿಯಿರಿ.
  • ಒಂದು ಲೀಟರ್ ಪ್ಲಾಸ್ಟಿಕ್ ಬಾಟಲಿಯ ಮುಚ್ಚಲಕ್ಕೆ ತೂತು ಮಾಡಿ ಅದರಲ್ಲಿ 5 ಮಿಲೀ ಕ್ಲೋರೋಫೆರಿಫೋಸ್ ಕೀಟನಾಶಕ ಸೇರಿಸಿ  ಅದಕ್ಕೆ 1 ಲೀ ನೀರು ಸೇರಿಸಿ ಮುಚ್ಚಳ ಮುಚ್ಚಿ ಒತ್ತಿದಾಗ ಎಲ್ಲಾ ಭಾಗಗಳಿಗೂ  ಕೀಟನಾಶಕ ಬೀಳಿಸಬಹುದು.
  • ಕೊನೆಗೆ ಬಾಟಲಿಯನ್ನು ಕವುಚಿ ಇಟ್ಟು ಬಿಂದು ಬಿಂದುವಾಗಿ ಕೀಟನಾಶಕ ಬೀಳುವಂತೆ ಇಟ್ಟು ಕಟ್ಟಿದರೆ ಸುಮಾರು 15-20 ದಿನಗಳಲ್ಲಿ ಹೊಸ ಸುಳಿ ಮುಡುತ್ತದೆ.
ಸಂಪೂರ್ಣವಾಗಿ ಎಲ್ಲವನ್ನೂ ತೆಗೆದು ಸ್ವಚ್ಚ ಮಾಡಿ ಕೀಟನಾಶಕ ಹಾಕಿ. ಎಲ್ಲಾ ಎಲೆ ಕತ್ತರಿಸಬೇಡಿ

ಸಂಪೂರ್ಣವಾಗಿ ಎಲ್ಲವನ್ನೂ ತೆಗೆದು ಸ್ವಚ್ಚ ಮಾಡಿ ಕೀಟನಾಶಕ ಹಾಕಿ. ಎಲ್ಲಾ ಎಲೆ ಕತ್ತರಿಸಬೇಡಿ

ಅತಿಯಾದ ಸಾರಜನಕ ಕೊಡುವುದರಿಂದ ಈ ಕೀಟ ಆ ಮರವನ್ನು ಅರಸಿ ಬರುತ್ತದೆ ಎಂಬುದನ್ನು ಗಮನಿಸಿರಿ. ಅಡಿಕೆ ಮರಗಳ ಬುಡಕ್ಕೆ  ಥಿಮೇಟ್ ಹಾಕಿ ಕೆಲವರು ಬೇರು ಹುಳ, ಸುಳಿತಿಗಣೆ ನಿಯಂತ್ರಣ  ಮಾಡುತ್ತಾರೆ. ಈ ವಿಧಾನದಲ್ಲಿ ಸುಮಾರು 40-50 ದಿನಗಳ ಕಾಲ ಕೆಂಪು ಮೂತಿ ಹುಳ ಇದ್ದರೂ ಸಾಯಬಹುದು. ಆದರೆ ಅಡಿಕೆ ಹಾಳೆ, ಸೋಗೆಯನ್ನು ಹಸುಗಳಿಗೆ ಮೇವಾಗಿ ಬಳಸುವುದಿದ್ದರೆ ಥಿಮೇಟ್ ಅಂಶ ಸೋಗೆಯಲ್ಲಿ ಉಳಿದಿರುತ್ತದೆ ಎಂಬುದು ಗಮನದಲ್ಲಿ  ಇರಲಿ.

ಅಡಿಕೆ ತೋಟದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ. ಸುಳಿ ಕೊಳೆತು ಸತ್ತ ಅಡಿಕೆ ಮರಗಳನ್ನು . ಗಾಳಿಗೆ ಮುರಿದು ಬಿದ್ದ ಮರಗಳನ್ನು ಅಲ್ಲೇ ಬಿಡಬಾರದು. ಅದು ಕೊಳೆಯುವ ವಾಸನೆಗೆ ದುಂಬಿ ಬರುತ್ತದೆ.ಸ್ವಚ್ಚತೆ ಒಂದೇ ಇದರ ನಿಯಂತ್ರಣಕ್ಕೆ ಸುಲಭ ಮಾರ್ಗ. ಸಣ್ಣ ಸಸಿಗಳನ್ನು ಗಮನಿಸಿ ಸರಿಪಡಿಸಬಹುದಾದರೂ ದೊಡ್ಡ ಮರಗಳನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ. ಆದ ಕಾರಣ ಸ್ವಚ್ಚತೆ ಬೇಕು.

ಹೊಸ ಸುಳಿ ಬಂದಿರುವುದು

ಹೊಸ ಸುಳಿ ಬಂದಿರುವುದು

ಈಗಾಗಲೇ ಕೆಲವು ಕಡೆ  ಅಡಿಕೆ  ಮರಗಳಿಗೆ ಕೆಂಪು ಮೂತಿ ಹುಳ ಬರಲು ಪ್ರಾರಂಭವಾಗಿದೆ. ಗುರುತಿಸಿ ಉಪಚಾರ ಮಾಡದೆ ಹಾಗೇ ಬಿಟ್ಟರೆ, ಅದರ ಸಂಖ್ಯೆ ಹೆಚ್ಚಾಗಿ ಹೆಚ್ಚು ಹೆಚ್ಚು ಮರಗಳಿಗೆ ಬಾಧಿಸಿದರೂ ಅಚ್ಚರಿ ಇಲ್ಲ. ಆದ ಕಾರಣ ಜಾಗರೂಕರಾಗಿರಿ.

end of the article:
search words: Arecanut pest# Arecanut tree damageing pest# new pest of areca palm# Red palm weevil#

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!