ಬಾಳೆ ಎಂಬ ಅಲ್ಪ ಕಾಲದಲ್ಲೇ (9-10 ತಿಂಗಳು) ಭಾರೀ ಬೆಳೆದು ಫಲಕೊಡುವ ಸಸ್ಯ. ಅದು ಚೆನ್ನಾಗಿರಬೇಕಾದರೆ ದಿನ ದಿನಕ್ಕ್ಕೆ ಅಥವಾ ವಾರಕ್ಕೊಂದಾವರ್ತಿಯಾದರೂ ತಪ್ಪದೆ ಪೋಷಕಾಂಶಗಲನ್ನು ಕೊಡಲೇ ಬೇಕು. ಇಲ್ಲವಾದರೆ ಬಾಳೆ ಗೊನೆ ಕೃಶವಾಗಿ ಬೆಳೆಯಲ್ಲಿ ಲಾಭವಾಗುವುದಿಲ್ಲ. ನೆಟ್ಟು ಗೊನೆ ಕಠಾವಿನ ವರೆಗೆ ಯಾವ ಗೊಬ್ಬರ ಕೊಡಬೇಕು ಎಂಬ ಪೂರ್ಣ ಮಾಹಿತಿ ಇಲ್ಲಿದೆ.
ಬಾಳೆಯ ಬೆಳೆಯಲ್ಲಿ ನಾಟಿ ಮಾಡುವ ಹಂತದಿಂದ ಕಠಾವಿನ ಹಂತದವರೆಗೆ ಪೋಷಕಾಂಶ ನಿರ್ವಹಣೆ ಎಂಬುದು ಅತೀ ಪ್ರಾಮುಖ್ಯ. ಗೊನೆಯ ನೋಟದ ಮೇಲೆ ಅದಕ್ಕೆ ಬೇಡಿಕೆ ಮತ್ತು ಬೆಲೆ ಇರುವ ಕಾರಣ ಎಲ್ಲಾ ಬೆಳೆಗಾರರೂ ಇದನ್ನು ಪಾಲಿಸಲೇ ಬೇಕು.
- ಬಾಳೆ ಸಸ್ಯ ಕೇವಲ 7-8 ತಿಂಗಳಲ್ಲಿ ಸುಮಾರು ಕ್ವಿಂಟಾಲಿಗೂ ಹೆಚ್ಚು ತೂಕ ಬೆಳೆಯುತ್ತದೆ.
- ಇದರಲ್ಲಿ ಸುಮಾರು 90% ನೀರು ಇರುತ್ತದೆ. ಇಷ್ಟು ಬೆಳೆಯಬೇಕಾದರೆ ಅದು ಮಣ್ಣಿನ ಮೂಲದಿಂದ ಹೇರಳ ಪೋಷಕಾಂಶಗಳನ್ನು ಬಳಕೆ ಮಾಡಿಕೊಳ್ಳುತ್ತದೆ.
- ಫಲವತ್ತಾದ ಮಣ್ಣಿನಲ್ಲಿ ಪೋಷಕಾಂಶದ ಪೂರೈಕೆ ಸ್ವಲ್ಪ ಕಡಿಮೆಯಾದರೂ ಸಾಕಾಗುತ್ತದೆ.
- ಸಾಧಾರಣ ಮಣ್ಣಿನಲ್ಲಿ ನಿರಂತರ ಪೋಷಕಾಂಶಗಳನ್ನು ಒದಗಿಸಿದಾಗ ಮಾತ್ರ ಅದು ದಷ್ಟ ಪುಷ್ಟವಾಗಿ ಬೆಳೆದು ಉತ್ತಮ ಗೊನೆ ಹಾಕಲು ಸಾಧ್ಯ.
- ಬಾಳೆಯು ಶಿಫಾರಸಿಗಿಂತ ಹೆಚ್ಚು ಗೊಬ್ಬರ ಕೊಟ್ಟರೂ ಅದಕ್ಕೆ ಸ್ಪಂದಿಸುತ್ತದೆ.
ಎಷ್ಟು ಪೋಷಕ ಬೇಕು:
- ಬಾಳೆಗೆ 200 ಗ್ರಾಂ ಸಾರಜನಕ, 100 ಗ್ರಾಂ ರಂಜಕ ಮತ್ತು 300 ಗ್ರಾಂ ಪೊಟ್ಯಾಶ್ ಗೊಬ್ಬರ ಬೇಕಾಗುತ್ತದೆ.
- ಇದಕ್ಕೆ ಇನ್ನೂ ಅರ್ದ ಪಾಲು ಹೆಚ್ಚಿಸಿದರೂ ತೊಂದರೆ ಆಗುವುದಿಲ್ಲ.
- ಪ್ರಾರಂಭಿಕ ಹಂತದಲ್ಲಿ ಪೋಷಕಾಂಶಗಳನ್ನು ಮಣ್ಣಿನಲ್ಲಿ ಕರಗುವ ಸಾಂಪ್ರದಾಯಿಕ ಗೊಬ್ಬರಗಳ ಮೂಲಕ ಕೊಡಬಹುದು.
- ಗೊನೆ ಹಾಕಿದ ನಂತರ ಮಾತ್ರ ನೀರಿನಲ್ಲಿ ಕರಗುವ ಗೊಬ್ಬರಗಳನ್ನು ಕೊಡುವುದರಿಂದ ಹೆಚ್ಚಿನ ಫಲಿತಾಂಶ ಪಡೆಯಬಹುದು.
ಗೊನೆ ಹಾಕುವ ಸಮಯದಲ್ಲಿ ಬಾಳೆಗೆ ಬೇಕಾಗುವುದು ಸಾರಜನಕ ಮತ್ತು ಪೊಟ್ಯಾಶಿಯಂ ಗೊಬ್ಬರಗಳು ಮಾತ್ರ. ರಂಜಕ ಗೊಬ್ಬರವನ್ನು ಗೊನೆ ಹಾಕುವ ಮುನ್ನ ಹಾಕಿ ಮುಗಿಸಿರಬೇಕು.
- ಹೂ ಗೊಂಚಲು ಹೊರ ಬಂದು ಎಲ್ಲಾ ಹೆಣಿಗೆಗಳು ತೆರೆದುಕೊಂಡ ನಂತರ ಸುಮಾರು 6 ಇಂಚು ಮುಂದೆ ಸರಿಸಿದ ನಂತರ ಕುಂಡಿಗೆಯನ್ನು ಕಡಿದು ಬಿಡಿ.
- ಇದನ್ನು ಕಡಿಯುವುದರಿಂದ ಕೊಳೆಯುವ ಪ್ರಸಂಗ ಬರುವುದಿಲ್ಲ.
ಕುಂಡಿಗೆ ಮೂಲಕ ಗೊಬ್ಬರ ಬೇಕಾಗಿಲ್ಲ.
- ಕುಂಡಿಗೆಯ ಮೂಲಕ ಕೆಲವರು ಪೋಷಕಗಳನ್ನು ಕೊಡುವ ಬಗ್ಗೆ ಹೇಳುತ್ತಾರೆಯಾದರೂ ಆದು ಅಷ್ಟೊಂದು ಪರಿಣಾಮಕಾರೀ ಅಲ್ಲ.
- ಆ ಭಾಗದಲ್ಲಿ ಹೀರಿ ಕೊಳ್ಳುವಿಕೆ ಕಡಿಮೆ.
- ಅದರ ಬದಲು ಬುಡ ಭಾಗಕ್ಕೆ ಮತ್ತು ಗೊನೆ ಮತ್ತು ಎಲೆಗಳಿಗೆ ಪತ್ರ ಸಿಂಚನದ ಮೂಲಕ ಗೊಬ್ಬರ ಕೊಡುವುದು ಹೆಚ್ಚು ಫಲಕಾರಿ.
ಪತ್ರ ಸಿಂಚನ ಮಾಡಿ:
- ಬಾಳೆಯ ಎಲೆಗಳು, ಗೊನೆ, ಗೊನೆ ದಂಟು ಎಲ್ಲವೂ ಪೋಷಕಗಳನ್ನು ಹೀರಿಕೊಳ್ಳುತ್ತದೆ.
- ಗೊನೆ ಹೊರ ಬಂದು ಕಾಯಿಯ ತುದಿಯ ಹೂವು ಉದುರಿದ ನಂತರ ಒಂದು `15 ದಿನದ ಅಂತರದಲ್ಲಿ ಪೋಷಕಾಂಶಗಳನ್ನು ಗೊನೆ ಮತ್ತು ಎಲೆಗೆ ಸಿಂಪಡಿಸಬೇಕು.
- ಅದೇ ಸಿಂಪರಣಾ ದ್ರಾವಣವನ್ನು ಬುಡಕ್ಕೂ 2 ಲೀ. ಪ್ರಮಾಣದಲ್ಲಿ ಕೊಡಬೇಕು.
- ಗೊನೆ ಹಾಕಿ 15 ದಿನ ಆಗುವಾಗ ಪೊಟಾಶಿಯಂ ನೈಟ್ರೇಟ್ ಗೊಬ್ಬರವನ್ನು 1 ಅಥವಾ 1.5 ಕಿಲೋ 200 ಲೀ. ನೀರಿಗೆ ಮಿಶ್ರಣ ಮಾಡಿ ಅದಕ್ಕೆ 4 ಗ್ರಾಂ ಜಿಬ್ಬರಲಿಕ್ ಆಮ್ಲವನ್ನು ( ಕಡ್ದಾಯವಾಗಿ 40 ಲೀ. ನೀರಿಗೆ 1 ಗ್ರಾಂ ಯಾವುದೇ ಕಾರಣಕ್ಕೆ ಹೆಚ್ಚಾಗಬಾರದು ) ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು.
- ಇದಕ್ಕೂ ಮುಂಚೆ ಗೊನೆ ಹಾಕುತ್ತಿರುವಾಗ ಒಂದು ಬಾಳೆ ಸಸ್ಯದ ಬುಡಕ್ಕೆ 25 ಗ್ರಾಂ ಕ್ಯಾಲ್ಸಿಯಂ ನೈಟ್ರೇಟ್ ಗೊಬ್ಬರವನ್ನು 1 ಲೀ. ನೀರಿನಲ್ಲಿ ಕಲಸಿ ಬುಡಕ್ಕೆ ಹಾಕಿದರೆ ಕ್ಯಾಲ್ಸಿಯಂ ಅಂಶ ದೊರೆತು ಕಾಯಿ ದಪ್ಪವಾಗಲು ಅನುಕೂಲವಾಗುತ್ತದೆ.
- 30 ನೇ ದಿನಕ್ಕೆ ಮತ್ತೊಮ್ಮೆ ಪೊಟ್ಯಾಶಿಯಂ ನೈಟ್ರೇಟ್ ಜೊತೆಗೆ ಸಿದ್ದ ರೂಪದಲ್ಲಿ ದೊರೆಯುವ ಪುಡಿ ಇಲ್ಲವೇ ದ್ರವ ರೂಪದ ಸತು, ಮ್ಯಾಂಗನೀಸ್, ಬೋರಾನ್, ತಾಮ್,ರ ಕಬ್ಬಿಣ ಅಂಶ ಒಳಗೊಂಡ ಮಿಶ್ರಣ ಪ್ರತೀ ಲೀ. ನೀರಿಗೆ (ಪುಡಿ 1 ಗ್ರಾಂ, ದ್ರವ 2 ಮಿಲಿ) ಹಾಕಿ ಸಿಂಪರಣೆ ಮಾಡಿ.
- 45 ನೇ ದಿನಕ್ಕೆ ಮತ್ತೊಮ್ಮೆ ಪೊಟಾಶಿಯಂ ನೈಟ್ರೇಟ್ ಮತ್ತು 1 ಲೀ. ನೀರಿಗೆ 1 ಗ್ರಾಂ ಬನಾನಾ ಸ್ಪೆಷಲ್ ಹಾಕಿ ಸಿಂಪಡಿಸಿರಿ.
- ಇದನ್ನು ಅಗತ್ಯ ಬಿದ್ದರೆ 3 ಗ್ರಾಂ ತನಕವೂ ಹೆಚ್ಚಿಸಬಹುದು.
- ಸಿಂಪರಣೆ ಮಾಡುವಾಗ ಅದು ಬಾಳೆ ಎಲೆಗೂ ಬೀಳಲಿ.
- ಯಾವಾಗಲೂ ಸಿಂಪರಣೆಯನ್ನು ಸಂಜೆ ಹೊತ್ತು ಮಾಡುವುದು ಉತ್ತಮ.
- ಆಗ ಅದರ ಫಲಿತಾಂಶ ಉತ್ತಮವಾಗಿರುತ್ತದೆ.
- ಗೊನೆಯ ಎಲ್ಲಾ ಭಾಗಗಳಿಗೂ ತಗಲಬೇಕು.
- 60 ನೇ ದಿನಕ್ಕೆ ಸಲ್ಫೇಟ್ ಆಫ್ ಪೊಟ್ಯಾಶ್ ಗೊಬ್ಬರ 100 ಲೀ. ನೀರಿಗೆ ½ ಅಥವಾ ¾ ಕಿಲೋ ಹಾಕಿ ಸಿಂಪರಣೆ ಮಾಡಿ.
ಕಂದುಗಳನ್ನು ತೆಗೆಯುತ್ತಿರಬೇಕು. ಆಗ ಪೋಷಕಗಳು ಅದಕ್ಕೆ ಬಳಕೆಯಾಗುವುದು ಉಳಿಯುತ್ತದೆ. ಗೊನೆ ಹಾಕುವ ಬಾಳೆಯ ಬೆಳವಣಿಗೆ ಹೆಚ್ಚುತ್ತದೆ. ಗೊನೆ ಪುಷ್ಟಿಯಾಗುತ್ತದೆ.
- ಹನಿ ನೀರಾವರಿಯ ಮೂಲಕ ಕೊಡುವಾಗ ಇದನ್ನು ವಿಭಜಿಸಿ ಕೊಡಿ.
- ಸಿಂಪರಣೆ ಮಾಡುವಾಗ 2-3 ಲೀ. ಬುಡಕ್ಕೆ ಆ ದ್ರಾವಣವನ್ನು ಎರೆಯುವುದಾದರೆ ಪ್ರತ್ಯೇಕ ಗೊಬ್ಬರ ಕೊಡಬೇಡಿ.
- ಯಾವುದೇ ಕಾರಣಕ್ಕೆ ಹೆಚ್ಚು ಪುಷ್ಟಿ ಆಗಲಿ ಎಂದು ಹೆಚ್ಚು ಗೊಬ್ಬರ ಕೊಡಬೇಡಿ.
ಈ ರೀತಿಯಲ್ಲಿ ಗೊಬ್ಬರ ಕೊಟ್ಟಾಗ ಕಾಯಿ ದಪ್ಪವಾಗುವುದೇ ಅಲ್ಲದೆ ತೂಕ ಸಹ ಹೆಚ್ಚು ಬರುತ್ತದೆ. ತುಂಬಾ ಮಿತವ್ಯಯದಲ್ಲಿ ಬೆಳೆ ಪೋಷಕಗಳನ್ನು ಹೊಂದಿಸಲು ಸಾಂಪ್ರದಾಯಿಕ ಯೂರಿಯಾ, ಡಿ. ಎ.ಪಿ ಮತ್ತು ಮ್ಯುರೆಟ್ ಆಫ್ ಪೊಟ್ಯಾಶ್ ಇವುಗಳನ್ನು ದ್ರವ ಮಾಡಿ ಸರಿಯಾಗಿ 100 ಮೈಕ್ರಾನ್ ಮೆಶ್ ನಲ್ಲಿ ಸೋಸಿ ಬಳಕೆ ಮಾಡಬಹುದು.
ಒಂದು ಬಾಳೆ ಗಿಡ ನೆಟ್ಟುಗೊನೆ ಹಾಕಲು 8-9 ತಿಂಗಳ ಕಾಲ ಬೇಕು. ಆ ಸಮಯಕ್ಕೆ ಬಾಳೆ ಹಸಿ ತೂಕ ಕನಿಶ್ಟ ಕ್ವಿಂಟಾಲಿಗೂ ಮಿಕ್ಕಿ ಇರುತ್ತದೆ. ದಪ್ಪವೂ ಸುಮಾರು 2 ಅಡಿ ಸುತ್ತಳತೆ, ಎತ್ತರ 9-10 ಅಡಿ ಬೆಳೆದಿರುತ್ತದೆ. ಇಷ್ಟು ಕನಿಶ್ಟ ಅವಧಿಯಲ್ಲಿ ಬೆಳೆದು ಗೊನೆ ಹಾಕಬೇಕಾದರೆ ಅದು ಬಯಸುವ ಪೊಷಕಾಂಶಗಳು ಅಧಿಕ.