ಒಂದು ಬೆಳೆಗೆ ಹೆಚ್ಚಿನ ಬೆಲೆ, ಬೇಡಿಕೆ ಇದೆ ಎಂದಾಕ್ಷಣ ಎಲ್ಲರೂ ಆ ಬೆಳೆ ಬೆಳೆಸಬೇಕು ಎಂದು ಉತ್ಸುಕರಾಗುತ್ತಾರೆ. ಅದಕ್ಕನುಗುಣವಾಗಿ ಪ್ರಚಾರಗಳೂ ಜನರನ್ನು ಗೊಂದಲಕ್ಕೀಡು ಮಾಡುತ್ತವೆ. ಸಸ್ಯೋತ್ಪಾದಕರೂ ಹೆಚ್ಚಾಗುತ್ತಾರೆ. ಎಲ್ಲವೂ ಎಷ್ಟು ಉತ್ತಮವೋ ಅಷ್ಟೇ ಅಪಾಯಕಾರಿಯೂ ಅಗಿರುತ್ತದೆ. ಈ ಸಂದರ್ಭದಲ್ಲಿ ರೈತರಿಗೆ ಬಟರ್ ಫ್ರೂಟ್ ಹೇಗೆ ಬೆಳೆದರೆ ಉತ್ತಮ ಇಳುವರಿ ಪಡೆಯಬಹುದು ಎಂಬ ಮಾರ್ಗದರ್ಶನ ಅತ್ಯಗತ್ಯವಾಗಿ ಬೇಕಾಗುತ್ತದೆ.
ಯಾವುದೇ ಬೆಳೆ ಇರಲಿ. ಅದನ್ನು ಬೆಳೆಸುವ ಮುಂಚೆ ಅದರ ಪೂರ್ವಾಪರ ವನ್ನು ಕೂಲಂಕುಶವಾಗಿ ತಿಳಿದುಕೊಳ್ಳಬೇಕು. ಆ ಬೆಳೆಯ ಬಗ್ಗೆ ಸ್ಥಳೀಯವಾಗಿ ಯಾರು ಅಧ್ಯಯನ ಮಾಡಿದ್ದಾರೆ, ಎಲ್ಲೆಲ್ಲಿ ಬೆಳೆ ಇದೆ ಹೇಗೆ ಬೆಳೆ ಬರುತ್ತದೆ ಎಂಬುದನ್ನು ತಿಇದುಕೊಂಡು ಬೆಳೆದರೆ ಸಮಸ್ಯೆಗಳು ಕಡಿಮೆ. ಬಹಳಷ್ಟು ಜನ ಬೆಣ್ಣೆ ಹಣ್ಣು ಬೆಳೆದವರಿದ್ದಾರೆ. ಎಲ್ಲರೂ ಫಲ ಕಂಡಿಲ್ಲ. ಬಹಳಷ್ಟು ಜನ ಬೇರೆ ಬೇರೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇವರೆಲ್ಲರ ಸಂದೇಹ ಮತ್ತು ಸಮಸ್ಯೆಗಳಿಗೆ ಸರಿಯಾದ ಉತ್ತರ ಇಲ್ಲಿ ಸಿಗಬಹುದು.,ಇದು ಡಾ. ಎಸ್ ವಿ ಹಿತ್ತಲಮನಿ ನಿವೃತ್ತ ತೋಟಗಾರಿಕಾ ನಿರ್ಧೇಶಕರು ಲಾಲ್ಬಾಗ್ ಬೆಂಗಳೂರು ಇವರ ಅನುಭವ, ಅಧ್ಯಯನ ಮತ್ತು ಸಲಹೆ.
ತಿಳಿದುಕೊಂಡು ಬೆಳೆಸಿ:
- ಯಾವುದೇ ಬೆಳೆ ಇರಲಿ, ಈ ಬೆಳೆ ಬಗ್ಗೆ ಸಾಕಷ್ಟು ತಿಳಿದುಕೊಂಡು ಬೆಳೆಯುವುದು ಉತ್ತಮ.
- ಈ ಬೆಳೆ ಏನು, ಯಾವ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಯಾವ ಪ್ರದೇಶಕ್ಕೆ ಯಾವ ತಳಿ ಸೂಕ್ತ ಎಂಬುದು ಇಲ್ಲ ಪ್ರಾಮುಖ್ಯ ಸಂಗತಿಯಾಗಿರುತ್ತದೆ.
- ನಾವು ಬೆಳೆಸಿ ಎನ್ನಬಹುದು. ಸಸ್ಯೋತ್ಪಾದಕರು ಸಸಿ ಕೊಡಬಹುದು. ಆದರೆ ಬೆಳೆದು ಫಲ ಪಡೆಯಬೇಕಾದವರು ರೈತರು.
- ಹಾಗಾಗಿ ಬೆಳೆಸುವ ಮುಂಚೆ ಕೆಲವೊಂದು ವೈಜ್ಞಾನಿಕ ಅಧ್ಯಯನಗಳು ಏನು ಹೇಳುತ್ತವೆ ಎಂಬುದನ್ನು ತಿಳಿದುಕೊಂಡು ಬೆಳೆಯುವುದು ಸೂಕ್ತ.
ಹವಾಮಾನ:
- ಇದು ಉಷ್ಣ ವಲಯ ಹಾಗೂ ಸಮಶೀತೋಷ್ಣ ವಲಯಕ್ಕೆ ಹೊಂದಿಕೊಂಡು ಬೆಳೆಯುವ ಹಣ್ಣು.
- ಉಷ್ಣ ವಲಯಕ್ಕೆ ಹೊಂದಿಕೆಯಾಗುವ ವಿಧಗಳು ಆ ಪ್ರದೇಶದಲ್ಲಿ ಚೆನ್ನಾಗಿ ಬೆಳೆದು ಇಳುವರಿ ನೀಡುತ್ತವೆ.
- ಸಮಶೀತೋಷ್ಣ ವಲಯದಲ್ಲಿ ಬೆಳೆಯುವ ವಿಧಗಳು ಆ ಪ್ರದೇಶದಲ್ಲಿ ಮಾತ್ರ ಚೆನ್ನಾಗಿ ಬೆಳೆದು ಇಳುವರಿ ಕೊಡುತ್ತವೆ.
- ಬೆಳೆಸುವಾಗ ಆಯಾ ಪ್ರಾದೇಶಿಕತೆಗೆ ಅನುಗುಣವಾದ ತಳಿಯನ್ನು ಆಯ್ಕೆ ಮಾಡಬೇಕು.
- ಉಷ್ಣ ವಲಯದ ಬಟರ್ ಫ್ರೂಟ್ ದಕ್ಷಿಣ ಭಾರತದ ತೀವ್ರ ಏರಿಳಿತ ಇಲ್ಲದ ಸಾಮಾನ್ಯ ತಂಪು ವಾತಾವರಣದಲ್ಲಿ ಉತ್ತಮವಾಗಿ ಬೆಳೆಯುತ್ತವೆ.
- ಉಷ್ಣಾಂಶ 12-35 ಡಿಗ್ರಿ ನಡುವಿನ ಅಂತರದಲ್ಲಿ ಇರುತ್ತದೆಯೋ ಅಲ್ಲಿ ಚೆನ್ನಾಗಿ ಬೆಳೆಯುತ್ತದೆ.
- ಸಮಶೀತೋಷ್ಣ ವಲಯಕ್ಕೆ ಹೊಂದಿಕೊಳ್ಳುವ ಪ್ರಕಾರಗಳು ತೀವ್ರ ಚಳಿಯನ್ನು ಸಹಿಸುವ ಗುಣ ಹೊಂದಿದ್ದರೂ,ಇಬ್ಬನಿ ಮುಂತಾದ 5 ಡಿಗ್ರಿ ಗಿಂತ ಕಡಿಮೆ ತಾಪಮಾನವನ್ನು ಸಹಿಸುವುದಿಲ್ಲ.
- ಉಷ್ಣಾಂಶ 40 ಡಿಗ್ರಿ ದಾಟಿದರೂ ಅದು ಸಹಿಸುವುದಿಲ್ಲ.
- ಅಂತಹ ಸಂದರ್ಭಗಳಲ್ಲಿ ಎಲೆ ಸುಡುವುದು, ಕಡಿಮೆ ಇಳುವರಿ ಮುಂತಾದ ಸಮಸ್ಯೆ ಉಂಟಾಗುತ್ತದೆ.
- ತಮ್ಮ ತಮ್ಮ ಪ್ರದೇಶದ ತಾಪಮಾನ ಹೇಗಿರುತ್ತದೆ ಎಂಬುದನ್ನು ಸರಿಯಾಗಿ ಗಮನಿಸಿ ಅಲ್ಲಿಗೆ ಸೂಕ್ತವಾದ ತಳಿಯನ್ನು ಆಯ್ಕೆ ಮಾಡಬೇಕು.
- ತಾಪಮಾನ ತುಂಬಾ ಹೆಚ್ಚಾಗಿರುವ ಪ್ರದೇಶಗಳಲ್ಲಿ ಈ ಹಣ್ಣಿನ ಬೆಳೆ ಚೆನ್ನಾಗಿ ಬರುವುದಿಲ್ಲ.
ಒಣ ವಾತಾವರಣ ಇರಬಾರದು. ಮಧ್ಯಮದಿಂದ ಹೆಚ್ಚು ತೇವಾಂಶ ಇರುವ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುವ ಬೆಳೆ. ಆರ್ಧ್ರತೆ ಕಡಿಮೆ ಇದ್ದಾಗ ಎಲೆಗಳು ಕ್ರಮೇಣ ಉದುರಿ , ಹೆಚ್ಚು ಬಿಸಿಲಿದ್ದಾಗ ಎಲೆಗಳು ಬಾಗಶಃ ಒಣಗಿ ಗಿಡ ಬೋಳಾಗುತ್ತದೆ.
ಸೂರ್ಯನ ಬೆಳಕು:
- ಬೆಣ್ಣೆ ಹಣ್ಣಿನ ಬೆಳೆಗೆ ಸೂರ್ಯನ ಬೆಳೆಕು ಚೆನ್ನಾಗಿ ಬೇಕು. ನೆರಳಿನಲ್ಲಿ ಇದು ಬೆಳೆಯಲಾರದು.
- ಆ ಕಾರಣಕ್ಕಾಗಿಯೇ ಇದನ್ನು ಬಹುವಾರ್ಷಿಕ ಬೆಳೆಗಳ ಮಧ್ಯಂತರದಲ್ಲಿ ಅಥವಾ ಮಿಶ್ರ ಬೆಳೆಯಾಗಿ ಬೆಳೆಸುವುದು ಸೂಕ್ತವಲ್ಲ.
- ಇದೇ ಕಾರಣಕ್ಕೆ ಬಟರ್ ಫ್ರೂಟ್ ಅನ್ನು ಶುದ್ಧ ಬೆಳೆಯನ್ನಾಗಿಯೇ ಬೆಳೆಸಬೇಕು.
- ಒಂದು ಪಕ್ಷ ಬಾಗಶಃ ನೆರಳಿನ ಸನ್ನಿವೇಶ ಇದ್ದಲ್ಲಿ ಇದನ್ನು ಬೆಳೆದಾಗ ನೆರಳಿನ ಪ್ರಮಾಣಕ್ಕನುಗುಣವಾಗಿ ಇಳುವರಿ ಕಡಿಮೆಯಾಗುತ್ತದೆ.
- ಅಡಿಕೆ, ತೆಂಗಿನ ತೋಟಗಳಲ್ಲಿ ಬೆಳಕಿನ ಲಭ್ಯತೆ ಚೆನ್ನಾಗಿದ್ದರೆ ಬಾರ್ಡರ್ ಗಳಲ್ಲಿ ಬೆಳೆಯಬಹುದೇ ಹೊರತು ಮಧ್ಯಂತರದಲ್ಲಿ ಸೂಕ್ತವಲ್ಲ.
- ಮಧ್ಯಮದಿಂದ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ (500-3000 ಮಿ.ಮೀ.) ಬೆಳೆಯಬಹುದು. ಇಂತಹ ಪ್ರದೇಶಗಳಲ್ಲಿ ಇತರ ಅಗತ್ಯತೆಗಳಾದ ಉಷ್ಣಾಂಶ, ಸಮುದ್ರ ಮಟ್ಟದಿಂದ ಎತ್ತರ, ಮಣ್ಣಿನಲ್ಲಿ ನೀರು ಬಸಿಯುವಿಕೆ ಮಣ್ಣಿನ ಗುಣ ಧರ್ಮಗಳು ಸುಸ್ಥಿತಿಯಲ್ಲಿರುವುದು ಅಗತ್ಯ.
- ಬಟರ್ ಫ್ರೂಟ್ ಬೆಳೆ ಸಮುದ್ರ ಮಟ್ಟದಿಂದ 800-1200 ಮೀ. ಎತ್ತರದ ಪ್ರದೇಶಗಳಲ್ಲಿ ಚೆನ್ನಾಗಿ ಬರುತ್ತದೆ,
- ಸಮುದ್ರ ಮಟ್ಟದ ಪ್ರದೇಶಗಳಲ್ಲಿ ಅಲ್ಲಿ ಸ್ಥಳೀಯವಾಗಿ ಬೆಳೆಯುತ್ತಿರುವ ತಳಿಗಳು ಹೊಂದಿಕೆಯಾಗುತ್ತದೆ.
ಉಷ್ಣ ವಲಯದಲ್ಲಿ ಸಮಶೀತೋಷ್ಣ ವಲಯದ ತಳಿಗಳನ್ನು ಬೆಳೆಸಿದಾಗ ಅಲ್ಲಿನ ಎತ್ತರವು ಸಮುದ್ರ ಮಟ್ಟದಿಂದ 1000-1200 ಮೀ. ಮಿತಿಯಲ್ಲಿದ್ದರೆ ಉತ್ತಮ. ಆಗ ಗಿಡ ಚೆನ್ನಾಗಿ ಬೆಳೆದು ಉತ್ತಮ ಇಳುವರಿ ಬರುತ್ತದೆ.ಉಷ್ಣ ವಲಯಕ್ಕೆ ಸೂಕ್ತವಾದ ತಳಿಗಳು ಕಡಿಮೆ ಎತ್ತರದ ಪ್ರದೇಶಗಳಿಗೂ ಹೊಂದಿಕೊಂಡು ಬೆಳೆಯುವ ಗುಣಧರ್ಮವನ್ನು ಹೊಂದಿವೆ. 600-900 ಮೀ. ಎತ್ತರದಲ್ಲೂ ಇವು ಸಾಕಷ್ಟು ಚೆನ್ನಾಗಿ ಬೆಳೆಯಬಲ್ಲವು. 500 ಮೀ. ಎತ್ತರದ ಪ್ರದೇಶಗಳಲ್ಲಿ ಬಟರ್ ಫ್ರೂಟ್ ಅಷ್ಟೊಂದು ಉತ್ತಮವಾಗಿ ಬೆಳೆಯಲಾರವು.
ಮಣ್ಣು ಹೇಗಿರಬೇಕು:
- ಬಟರ್ ಪ್ರೂಟ್ ಬೆಳೆ ಬೆಳೆಯಲು ಸೂಕ್ತವಾದ ಮಣ್ಣು ಅಯ್ಕೆ ಪ್ರಾಮುಖ್ಯ.
- ಈ ಸಸ್ಯ ಸಸ್ಯ ಶಾಸ್ತ್ರೀಯ ಹೆಸರು, Persea americana ಕುಟುಂಬ Lauracea ವರ್ಗ Laurales ಇದರ ಹತ್ತಿರದ ಸಂಬಂಧಿ ಸಸ್ಯ ವರ್ಗ Cinnamon Camphor.
- ಉತ್ತಮ ಬೆಳವಣಿಗೆ ಮತ್ತು ಅಧಿಕ ಇಳುವರಿಗೆ ಮಣ್ಣಿನ ಗುಣ ಪ್ರಮುಖ ಅಂಶವಾಗಿರುತ್ತದೆ.
- ದಕ್ಷಿಣ ಭಾರತದ ಇಳಿಜಾರು ಪ್ರದೇಶಗಳು, ನೀರು ಚೆನ್ನಾಗಿ ಬಸಿಯುವ ಭೂಮಿ, ಆಗಲೇ ಬೇಕು.
- ಆಳವಾದ ಮರಳು ಮಣ್ಣು, ಮರಳು ಮಿಶ್ರಿತ ಗೋಡು ಮಣ್ಣು ಹಾಗೂ ಜಂಬಿಟ್ಟಿಗೆ ಗೋಡು ಮಣ್ಣು ಬಹಳ ಉತ್ತಮ.
- ಜಿಗುಟಾದ ಕಪ್ಪು ಮಣ್ಣು ಈ ಬೆಳೆಗೆ ಹೊಂದಿಕೆಯಾಗುವುದೇ ಇಲ್ಲ.
- ಬಟರ್ ಫ್ರೂಟ್ ಸಸ್ಯ ಸಾಯುವುದು, ಮುಂತಾದ ಸಮಸ್ಯೆಗೆ ಮೂಲ ಕಾರಣ ಬೇರಿನ ಬುಡದಲ್ಲಿ ನೀರು ನಿಲ್ಲುವುದು.
- ಜೌಗು ಜಾಗ ಮತ್ತು ನೀರಾವರಿ ಅಥವಾ ಮಳೆ ಬಂದು ತುಂಬಾ ಸಮಯದ ತನಕ ನೀರು ಬಸಿಯದಿರುವ ಕಡೆ ಗಿಡ ಬದುಕುವುದೇ ಕಷ್ಟವಾಗಬಹುದು.
- ಮಣ್ಣಿನ ರಸ ಸಾರ 6-8 ರ ಮದ್ಯದಲ್ಲಿರಬೇಕು. 8 ದಾಟಿದ ಕ್ಷಾರ ಮಣ್ಣಿನಲ್ಲಿ ಬೆಳೆ ಬೆಳೆಯುವುದು ಕಷ್ಟ.ಮಣ್ಣಿನ ಇಸಿ 0.25 ಕ್ಕಿಂತ ಕಡಿಮೆ ಇರಬೇಕು. 0.50 ಗಿಂತ ಹೆಚ್ಚಾದರೆ ಬೆಳೆಗೆ ಸೂಕ್ತವಲ್ಲ.
- ಬಟರ್ ಫ್ರೂಟ್ ಬೆಳೆಯಲಿಚ್ಚಿಸುವ ಬೆಳೆಗಾರರು ತಮ್ಮ ಭೂಮಿಯ ಮಣ್ಣು ಹಾಗೂ ಜಲದ ಪರೀಕ್ಷೆ ಮಾಡಿಸಿಯೇ ಮುಂದುವರಿಯುವುದು ಸೂಕ್ತ.
ಭೂಮಿ ಸಿದ್ದತೆ ಹೇಗಿರಬೇಕು:
- ನೆಡಲು ಆಯ್ಕೆ ಮಾಡುವ ಭೂಮಿಯನ್ನು ಸಮತಟ್ಟು ಮಾಡಿ ತಯಾರು ಮಾಡಬೇಡಿ.
- ಇಳಿಜಾರು ಇದ್ದರೆ ಬಹಳ ಉತ್ತಮ. ಸಮತಟ್ಟು ಭೂಮಿಯಲ್ಲಿ ನೀರು ಬಸಿಯಲು ವ್ಯವಸ್ಥೆ ಮಾಡಿಯೇ ನೆಡಬೇಕು.
- ತೀರಾ ಇಳಿಜಾರಿನಲ್ಲಿ ಟೆರೇಸಿಂಗ್ ಮಾಡಿ ನಾಟಿ ಮಾಡಬಹುದು.
- ಟೆರೇಸಿಂಗ್ ಮಾಡಿದಾಗ ಗಿಡದ ಬುಡದಲ್ಲಿ ನೀರು ನಿಲ್ಲುವುದಕ್ಕೆ ಆಸ್ಪದ ಇರುವುದಿಲ್ಲ.
- ಹಾಗೆಂದು ನೀರುಬಸಿಯುವಿಕೆಗೆ ಅಗತ್ಯವಾಗಿ ವ್ಯವಸ್ಥೆ ಮಾಡಿಕೊಡಬೇಕು.
ಗುಂಡಿಯಲ್ಲಿ ನೆಡಬಾರದು:
- ಗಿಡ ನಾಟಿ ಮಾಡಲು ಮಣ್ಣಿನ ಮೃದುತ್ವಕ್ಕನುಗುಣವಾಗಿ 2x2x2 ಅಥವಾ 3x3x3 ಉದ್ದ, ಆಳ ಅಗಲದ ಹೊಂಡ ಮಾಡಿ ಅದನ್ನು ಪೂರ್ತಿಯಾಗಿ ತುಂಬಿ ನಂತರ ಮೇಲುಸ್ಥರದಲ್ಲಿ ಗಿಡವನ್ನು ನಾಟಿ ಮಾಡಬೇಕು.
- ಚೆನ್ನಾಗಿ ಕಳಿತ ಸಾವಯವ ಗೊಬ್ಬರ ನೆಡುವಾಗ ಸ್ವಲ್ಪ ಹಾಕಬಹುದು.
- ರಾಸಾಯನಿಕ ಅಥವಾ ಕೊಟ್ಟಿಗೆ ಗೊಬ್ಬರ ಕೊಡುವಾಗ ಹೊಂಡ ಮಾಡಿ ಮಣ್ಣು ತುಂಬುವಾಗ ಆ ಮಣ್ಣಿನ ಜೊತೆಗೆ ಮಿಶ್ರಣ ಮಾಡಿ ತುಂಬಬೇಕು.
- ಬುಡ ಭಾಗ 1-2 ಇಂಚು ಎತ್ತರ ಇರುವಂತೆ ನೋಡಿಕೊಳ್ಳಿ. ಬುಡದ ಮಣ್ಣು ಕುಸಿದಾಗ ಅದನ್ನು ಮತ್ತೆ ಮಣ್ಣು ಹಾಕಿ ಏರಿಸಬೇಕು.
- ಗಿಡಗಳನ್ನು ಮೇಲೆ ನೆಡುವುದರಿಂದ ಗಿಡ ಚೆನ್ನಾಗಿ ಬೆಳೆಯುತ್ತದೆ.
- ಕಸಿ ಮಾಡಲ್ಪಟ್ಟ ಜೋಡಣೆ ಭಾಗಕ್ಕೆ ಮಣ್ಣು ತಾಗಬಾರದು.
- ಸಸ್ಯದ ಬೇರುಗಳು ಮಾತ್ರ್ರ ಮೇಲೆ ಇರಬೇಕು.
- ಗೊಣ್ಣೆ ಹುಳು, ಗೆದ್ದಲು ನಿಯಂತ್ರಣಕ್ಕೆ ಬುಡಕ್ಕೆ 10-15 ಗ್ರಾಂ ಫೋರೇಟ್ ಹಾಕಬೇಕು.
- ಸಸ್ಯಗಳನ್ನು ಗಟ್ಟಿ ರೆಂಬೆ ಬೆಳೆಯುವ ತನಕ ಆಧಾರ ಕೊಟ್ಟು ಕಟ್ಟಿ ಅಡ್ದ ಬೀಳದಂತೆ ನೋಡಿಕೊಳ್ಳಬೇಕು.
- ಬಟರ್ ಫ್ರೂಟ್ ಸ್ಸಸ್ಯವು ಮೆದು ಸಸ್ಯವಾಗಿದ್ದು, ಅಡ್ಡ ಬೀಳುವುವ ಸಮಸೆ ಇದೆ. ಹಿತ ಮಿತವಾಗಿ ಅಗತ್ಯಕ್ಕಕ್ಕನುಗುಣವಾಗಿ ನೀರುಣಿಸಬೇಕು.
ಬಹಳ ಜನ ರೈತರು ಬಟರ್ ಫ್ರೂಟ್ ಬೆಳೆಸಿದ್ದಾರೆ. ಆದರೆ ಹೆಚ್ಚಿನವರಲ್ಲಿ ಇದು ಸಮರ್ಪಕವಾಗಿ ಬೆಳೆದಿಲ್ಲ. ಕಾರಣ ಸರಿಯಾದ ಬೇಸಾಯ ಕ್ರಮವನ್ನು ಅನುಸರಿಸದೇ ಇರುವುದು.
One thought on “ಬಟರ್ ಫ್ರೂಟ್ ಹೇಗೆ ಬೆಳೆದರೆ ಉತ್ತಮ ಇಳುವರಿ ಪಡೆಯಬಹುದು?– ಇಲ್ಲಿದೆ ಮಾಹಿತಿ.”