ಬಟರ್ ಪ್ರೂಟ್ ನಲ್ಲಿ ಅಧಿಕ ಇಳುವರಿಯ ವಿಶೇಷ ತಳಿಗಳು.

ಬಟರ್ ಪ್ರೂಟ್ ನ ವಿಶೇಷ ತಳಿ ಹಾಸ್

ಬೆಣ್ಣೆ ಹಣ್ಣು, ಬಟರ್ ಪ್ರೂಟ್ ಅಥವಾ ಅವೆಕಾಡೋ (Avocado)ಈಗ ಭಾರೀ ಪ್ರಚಲಿತದಲ್ಲಿರುವ ಹಣ್ಣಿನ ಬೆಳೆಯಾಗಿದೆ. ತಾಜಾ ಹಣ್ಣಿಗಾಗಿ, ಸಂಸ್ಕರಣೆ ಉದ್ದೇಶಕ್ಕೆ ಚೆನ್ನಾಗಿ ಹೊಂದಿಕೆಯಾಗುವುದರಿಂದ  ಈ ಹಣ್ಣಿಗೆ ಪ್ರಾಮುಖ್ಯ ಸ್ಥಾನ ಬಂದಿದೆ. ಇದರ ಆರೋಗ್ಯ ಗುಣ ಮತ್ತು ಬೇಡಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಉತ್ತಮ ದರವೂ ಲಭ್ಯ. ಇತ್ತೀಚೆಗೆ 2015 ರ ತರುವಾಯ ಈ ಹಣ್ಣಿಗೆ ಭಾರೀ ಜನಪ್ರಿಯತೆ ದೊರಕಿತು. ತಳಿ ಹುಡುಕಾಟ, ತಳಿ ಅಭಿವೃದ್ದಿ ಸಸ್ಯೋತ್ಪಾದನೆ ಅವಕಾಡೋ ಹಣ್ಣನ್ನು ಪ್ರಮುಖ ಹಣ್ಣಿನ ಬೆಳೆಗಳ ಸ್ಥಾನದಲ್ಲಿ ತಂದು ನಿಲ್ಲಿಸಿದವು.ಹಾಸ್ ಎಂಬ ವಿಶೇಷ ತಳಿ ಪರಿಚಯಿಸಲ್ಪಟ್ತ ತರುವಾಯ ಬಟರ್ ಫ್ರೂಟ್ ಕೃಷಿಗೆ ವೇಗದ ಚಾಲನೆ ದೊರೆಯಿತು

ಈ ಹಣ್ಣಿನ ಮೂಲ ಮಧ್ಯ ಅಮೇರಿಕಾ ಆಗಿದೆ. ಇದನ್ನು ನಮ್ಮ ದೇಶಕ್ಕೆ ಅದರಲ್ಲೂ ಕರ್ನಾಟಕ್ಕೆ ಪರಿಚಯಿಸುವಲ್ಲಿ  ಹಲವಾರು ಜನ ಶ್ರಮಿಸಿದ್ದಾರೆ. ಅಂದಿನ ಅವರ ಶ್ರಮಗಳು ಈಗ ಫಲ ನೀಡುತ್ತಿವೆ.

ಬಟರ್ ಪ್ರೂಟ್  ಸಾಮಾನ್ಯವಾಗಿ ಎಲ್ಲಾ ತರಹದ ಭೂ ಭಾಗಗಳಲ್ಲೂ ಬೆಳೆಯುತ್ತದೆ. ಮಳೆ ಇರುವಲ್ಲಿ, ಚಳಿ ಇರುವಲ್ಲಿ, ಬಿಸಿಲು ಇರುವ ಮೂರೂ ಸನ್ನಿವೇಶಗಳಲ್ಲಿ  ಬೆಳೆಯುತ್ತದೆಯಾದರೂ, ಅಯಾಯಾ ಪ್ರದೇಶಕ್ಕೆ ಹೊಂದುವ ತಳಿಗಳಿಗನುಗುಣವಾಗಿ ಇಳುವರಿ ಮತ್ತು ಹೊಂದಿಕೊಳ್ಳುವಿಕೆ, ಹೆಚ್ಚು ಚಳಿ ಇರುವ ತಂಪು ವಾತಾವರಣ ಇರುವಲ್ಲಿ ಬೆಳೆಯುವ ತಳಿಗಳು ಉಷ್ಣ ವಾತಾವರಣ, ಆರ್ಧ್ರ ವಾತಾವರಣದಲ್ಲಿ ಹೊಂದಿಕೆಯಾಗಲಾರದು. ಇದಕ್ಕನುಗುಣವಾಗಿ ತಳಿಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಆಯ್ಕೆ ಮಾಡಲಾಗುತ್ತಿದೆ. ಇಂತಹ ಹಲವಾರು ತಳಿಗಳು ನಮ್ಮಲ್ಲಿವೆ. ಕೆಲವು ತಳಿಗಳಿಗೆ ಹೆಸರು ನೀಡಲಾಗಿದೆ. ಇನ್ನು ಕೆಲವು ತಳಿಗಳಿ ತೆರೆಮರೆಯಲ್ಲಿ ಉಳಿದಿವೆ.

ಹಣ್ಣು ಹಂಪಲುಗಳಲ್ಲಿ ಅತ್ಯಧಿಕ  ಕೊಬ್ಬಿನ ಅಂಶ ಒಳಗೊಂಡ ಹಣ್ಣು ಎಂದರೆ ಇದು ಮಾತ್ರ. ಈ ಹಣ್ಣಿನ ಕೊಬ್ಬು ಮಾನವ  ದೇಹಕ್ಕೆ ಯಾವುದೇ ಹಾನಿ ಉಂಟು ಮಾಡಲಾರದು.ಆದ ಕಾರಣ ಪ್ರಪಂಚದಾದ್ಯಂತ ಈ ಹಣ್ಣಿಗೆ ಬೇಡಿಕೆ ಇದೆ. ಎಲ್ಲಾ ದೇಶಗಳಲ್ಲೂ ಇದನ್ನು ಬೆಳೆಸುತ್ತಾರೆ.ನಮ್ಮ ದೇಶ ಆಮದು ಮಾಡಿಕೊಳ್ಳುವ ಹಣ್ಣು ಹಂಪಲುಗಳ ಪೈಕಿ ಬೆಣ್ಣೆ ಹಣ್ಣೂ ಒಂದು.

ಎಸ್ ಪಿ ಅರ್  ಪ್ರೋಲಿಫಿಕ್

ತಳಿಗಳು:

  • ಬಟರ್ ಪ್ರೂಟ್ ನಲ್ಲಿ ಹಲವಾರು ತಳಿಗಳಿದ್ದು, ಬೀಜದಿಂದ ಹುಟ್ಟಿದ ಸಸಿಯಲ್ಲಿ ತಳಿ ಭಿನ್ನತೆಗಳಾಗುತ್ತಾ ವೈವಿದ್ಯಗಳಾಗಿವೆ.
  • ತಾಯಿ ಮರದ ಯಥಾವತ್ ಗುಣದ ತಳಿ ಎಂದರೆ ಅದು ಕಸಿ ಮಾಡಲ್ಪಟ್ಟ ತಳಿಯಾಗಿರುತ್ತದೆ.
  • ಬೀಜದಿಂದ ಹುಟ್ಟಿದ ತಳಿಗಳಲ್ಲಿ ಬೇರೆ ಬೇರೆ ತಳಿಗಳನ್ನು ಆಯ್ಕೆ ತಳಿಗಳಾಗಿ ಗುರುತಿಸಲಾಗಿದೆ. 
  • ಅವುಗಳಿಗೆ ಮೂಲಕ್ಕೆ ಅನ್ವರ್ಥವಾಗಿ  ಬೇರೆ ಬೇರೆ ಹೆಸರರುಗಳನ್ನು ನೀಡಲಾಗಿದೆ.
  • ಬಟರ್ ಪ್ರೂಟ್ ನಲ್ಲಿ  ಗಂಡು  ಮತ್ತು ಹೆಣ್ಣು ಹೂವುಗಳು ಪರಾಗ ಬಿಡುವ ಮತ್ತು ಸ್ವೀಕರಿಸುವ  ಸಮಯ ಬೆಳಗ್ಗೆ- ಮಧ್ಯಾನ್ಹ ಎಂಬ ಸಮಸ್ಯೆ ಇರುತ್ತದೆ.
  • ಬೆಳಗ್ಗಿನ ಹೊತ್ತಿನಲ್ಲಿ ಹೆಣ್ಣು ಭಾಗ ಪರಾಗ ಸ್ವೀಕರಿಸುವ ಸ್ಥಿತಿಯಲ್ಲಿರುತ್ತದೆ.
  • ಗಂಡು ಹೂವು ಮಧ್ಯಾನ್ಹ ತರುವಾಯ ಪರಾಗ ಬಿಡುಗಡೆಯ ಸ್ಥಿತಿಗೆ ಬರುತ್ತದೆ. 
  • ಕೆಲವು ತದ್ವಿರುದ್ಧ ವಾಗಿಯೂ ಇದೆ.
  • ಆದರೆ ಪರಾಗದ ಜೀವಾವಧಿ ಮಾತ್ರ 100-150 ಗಂಟೆಗಳಷ್ಟು ಇರುವ ಕಾರಣ ಮರುದಿನವೂ ಪರಾಗಸ್ಪರ್ಶ ನಡೆದು ಕಾಯಿ ಕಚ್ಚುತ್ತದೆ ಎನ್ನುತ್ತಾರೆ ಭಾರತೀಯ ತೋಟಗಾರಿಕಾ ಸಂಶೊಧನಾ ಸಂಸ್ಥೆಯ ನಿರ್ಧೇಶಕರಾದ ಡಾ.ಬಿ ಎನ್ ಶ್ರೀನಿವಾಸ ಮೂರ್ತಿಯವರು.
  • ಜಗತ್ತಿನಲ್ಲೇ ಅತ್ಯುಕೃಷ್ಟವಾದ ಬಟರ್ ಫೂಟ್ ತಳಿ ಎಂದರೆ ಹಾಸ್(HASS)
ಹಾಸ್ ತಳಿ
ಹಾಸ್ ತಳಿ

ಹಾಸ್ ;HASS

  •  ಈ ತಳಿಯ ಹಿಂದೆ ಬಹಳಷ್ಟು ರೈತರು ಮುಗಿ ಬಿದ್ದಿದ್ದಾರೆ.
  • ಇದರ ಮೂಲ ಅಮೆರೀಕಾ. 1922 ರ ಸುಮಾರಿಗೆ ರುಡಾಲ್ಫ್ ಹಾಸ್ ಎಂಬ ಒಬ್ಬ ಅಂಚೆ ನೌಕರ ಬಟರ್ ಫೂಟ್ ನ ಬೀಜದ ಸಸಿಗಳನ್ನು ಬೆಳೆಸುತ್ತಿದ್ದನಂತೆ.
  • ಹೀಗೆ ಯಾವಾಗಲೂ ಬೀಜದಿಂದ ಸಸಿ ಮಾಡುತ್ತಿರಬೇಕಾದರೆ  ಒಂದು ಕಸಿ ಗಿಡವನ್ನು ಮಾಡಿ ತನ್ನ  ಹಿತ್ತಲಲ್ಲಿ ನೆಟ್ಟನಂತೆ.
  • ಅದರ ಕಸಿ ವಿಫಲವಾಗಿ, ಕಟ್ಟಿದ ಭಾಗ ಸತ್ತು (Sion) ಹೋಯಿತಂತೆ.
  • ಅದನ್ನು ಕಡಿದು ಹಾಕಬೇಕೆಂದು ಮನಸ್ಸು ಮಾಡಿದ್ದರೂ ಯಾರೋ ಕೆಲವರು ಇಂತಹ ಸಸಿಗಳಲ್ಲಿ ಕೆಲವೊಮ್ಮೆ ಉತ್ಕೃಷ್ಟ ಗುಣದ ತಳಿ ಸಿಗುವ ಸಾಧ್ಯತೆ ಇದೆ ಎಂದರಂತೆ.
  • ಹಾಗೆ ಬುಡ (root stock) ಬದುಕಿ ಉಳಿದು ವೇಗವಾಗಿ ಬೆಳೆದು ಮರವೂ ಆಯಿತಂತೆ. 
  • ಇದರಲ್ಲಿ ಹಣ್ಣು ಆಯಿತಂತೆ. ಆದರೆ ಹಣ್ಣು ಮಾತ್ರ ಭಿನ್ನ ನೊಟದಲ್ಲಿತ್ತಂತೆ.
  • ಇದನ್ನು ತಮ್ಮ ಕಚೇರಿಯ ಸಿಬ್ಬಂದಿಗಳಿಗೆಲ್ಲಾ ಕೊಟ್ಟು ಅವರೆಲ್ಲಾ ಈ ಹಣ್ಣಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಂತೆ.
  • ಹಾಗೆ ಎಲ್ಲರ ಮೆಚ್ಚುಗೆ ಪಡೆದ ಈ ತಳಿಗೆ ತನ್ನದೇ ಹೆಸರು ಹ್ಯಾಸ್ HASS ಎಂದು ನಾಮಕರಣ ಮಾಡಿದ.
  • ಅದಕ್ಕೆ 1935 ರಲ್ಲಿ ಪೇಟೆಂಟ್ ಕೂಡಾ ಪಡೆದ. 17 ವರ್ಷಗಳ ಪೇಟೆಂಟ್ ಅವಧಿ ಮುಗಿದ ತರುವಾಯ ಅವನು ಸತ್ತು ಹೋದ.
  • ಈ ತಳಿಯ ಮೂಲವನ್ನು 2005 ರಲ್ಲಿ ಅಮೇರಿಕಾ ದಿಂದ ನಾಮಧಾರಿ ಸೀಡ್ ಸಂಸ್ಥೆಯ ಸತ್ಗುರು ಉದಯ್ ಸಿಂಗ್ ಜೀ. (Shri .Satguru Udaya singh Ji)  ಯವರು ಕೊಡಗಿನಲ್ಲಿ ಒಂದು ಸುರಕ್ಷಿತ ಸ್ಥಳದಲ್ಲಿ ಬೆಳೆಸಿದರು.
  • ಬೆಳೆ ಚೆನ್ನಾಗಿ ಬಂತು. ಅಲ್ಲಿಂದ ಅದು ಸ್ವಲ್ಪ ಸ್ವಲ್ಪವೇ ಹೊರಬಂದು ಈಗ  ಹಾಸ್ ತಳಿಯ ಸಸಿಗಳನ್ನು ಕೆಲವು ಸಸ್ಯೋತ್ಪಾದಕರು ಕೊಡುತ್ತಿದ್ದಾರೆ.
  • ಕೆಲವೆಡೆ ಇದರ ಸಸಿ ಫಲ ಸಹ ಕೊಡುತ್ತಿವೆ.
ಹಾಸ್ ಹಣ್ನಿನ ಮಿಡಿ
ಹಾಸ್ ಮಿಡಿ, ಚಿತ್ರ.ಸುಮಂತ್ ಸಕಲೇಶಪುರ

ಈ ಹಣ್ಣಿನ ವಿಶೇಷ ಎಂದರೆ ಇದರ ಕಾಪಿಡುವ ಗುಣ ಜಾಸ್ತಿ. ಹಣ್ಣಾಗುವುದು ಸಹ ನಿಧಾನ. ಹಣ್ಣು ಆದ ನಂತರ ಅನೇಕ ದಿನಗಳ ತನಕ ಕೆಡದೆ ಉಳಿಯುತ್ತದೆ. ಹಣ್ಣು ಮಾಡುವ ವಿಧಾನವಾದ ನಿರ್ವಾತ ಕ್ರಮದಲ್ಲಿ ಹಣ್ಣಾಗುತ್ತದೆ. ಬಹಳ ರುಚಿಕಟ್ಟಾಗಿರುತ್ತದೆ. ಹೊರ ತೊಗಟೆಯ ಬಣ್ಣ ಸ್ವಲ್ಪ ಮಾಸಲು ಕಪ್ಪು ಇರುತ್ತದೆ. ಅದರಲ್ಲೇ ಪರಿವರ್ತನೆ ಆಗಿ ಹಸುರು ಸಿಪ್ಪೆಯದ್ದೂ ಈಗ ಹಾಸ್ ಹೆಸರಲ್ಲಿ ಲಭ್ಯವಿದೆ.ಹಣ್ಣಿನ ಹೊರ ಮೈ ಸ್ವಲ್ಪ ಉಬ್ಬು ತಗ್ಗುಗಳನ್ನು(ಒರಟು) ಒಳಗೊಂಡಿರುತ್ತದೆ.ಜಗತ್ತಿನಲ್ಲೇ ಅತ್ಯಧಿಕ ಬೇಡಿಕೆಯ ಬೆಲೆಯ ಬೆಣ್ಣೆ ಹಣ್ಣಿನ ತಳಿ ಇದು ಎನ್ನುತ್ತಾರೆ.

ಇದು ಸಮಶೀತೋಷ್ಣ ವಲಯಕ್ಕೆ ಅಥವಾ ತಂಪು ವಲಯಕ್ಕೆ ಹೊಂದಿಕೆಯಾಗುವ ತಳಿ. ನಮ್ಮ ರಾಜ್ಯದಲ್ಲಿ ಸಮುದ್ರ ಮಟ್ಟದಿಂದ 900 ಮೀ. ಅಥವಾ ಅದಕ್ಕಿಂತ ಹೆಚ್ಚಿನ ಎತ್ತರದ ಸ್ಥಳಗಳಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ.

ಪ್ಲೊರಿಡಾ ಗೊಲ್ಡ್
  • ಹಣ್ಣುಗಳು ಮಧ್ಯಮ ಗಾತ್ರದವುಗಳು.ಸರಾಸರಿ 200 ಗ್ರಾಂ ತೂಗುತ್ತವೆ.
  • ಒಳಗಿನ ಭಾಗ ತಿರುಳು ಹಳದಿ ಬಣ್ಣದಲ್ಲಿದ್ದು, ದಪ್ಪ ತಿರುಳು ಹೊಂದಿ ಬೀಜ ಸಣ್ಣದಾಗಿರುತ್ತದೆ.
  • ತಿರುಳು ರುಚಿಕರವಾಗಿದ್ದು, ಹೆಚ್ಚು  (30%) ಕೊಬ್ಬಿನ ಅಂಶ ಒಳಗೊಂಡಿರುತ್ತದೆ.

ಸ್ಥಳೀಯವಾಗಿ ಆಯ್ಕೆ ಮಾಡಿದ ತಳಿಗಳು:

ಎಸ್ ಎಲ್ ಎನ್ ಸೂಪರ್

ಈ ಎಲ್ಲಾ ತಳಿಗಳೂ ಉಷ್ಣ ವಲಯಕ್ಕೆ ಹೊಂದಿಕೆಯಾಗುವ ತಳಿಗಳು.

  • ಫ್ಲೋರಿಡಾ ಗೋಲ್ಡ್: (Florida Gold)ಮಧ್ಯಮ ಗಾತ್ರದಿಂದ ದೊಡ್ಡ ಗಾತ್ರದ ವರೆಗೆ ಇರುತ್ತದೆ.
  • ಈ ತಳಿಯ ಹಣ್ಣುಗಳು ಬುಗುರಿ ಆಕಾರದಲ್ಲಿ ಇರುತ್ತವೆ. ತಿರುಳು ಅಧಿಕ ಪ್ರಮಾಣದಲ್ಲಿ ಇರುತ್ತವೆ. 
  • ಬೀಜದ ಗಾತ್ರ ಚಿಕ್ಕದಾಗಿರುತ್ತದೆ. ಹಳದಿ ಬಣ್ಣದ ರುಚಿಕರ ತಿರುಳು.ಮಂದವಾದ ಮತ್ತು ದೃಢವಾದ ತಿರುಳು. ಅಧಿಕ ಇಳುವರಿ ಕೊಡುವ ಗುಣ ಹೊಂದಿದೆ.
  • ಪಿನ್ಕೆರ್ಟಾನ್ Pinkerton Avocado ಎಂಬ ತಳಿಯೂ ಸಹ ಬುಗುರಿಯಾಕಾರದ ಹಣ್ಣುಗಳನ್ನು ಕೊಡುತ್ತದೆ.
ಸೆಲೆಕ್ಷನ ತಳಿ
  • ಸಿಎಚ್ಇಎಸ್ (CHES): ಇದು ಹಿರೇಹಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಸಂಶೊಧನಾ ಸಂಸ್ಥೆಯಲ್ಲಿ ಆಯ್ಕೆ ಮಾಡಿದ ತಳಿ. 
  • ಇದನ್ನು ರೈತರು ಬೆಳೆಸಲು ಶಿಫಾರಸು ಮಾಡಲಾಗಿದೆ. ನಿಯಮಿತ ಪ್ರಮಾಣದಲ್ಲಿ ಸಸ್ಯಾಭಿವೃದ್ದಿ ಮಾಡಿ ಒದಗಿಸಲಾಗುತ್ತದೆ.
  • ಅರ್ಕಾ ಸುಪ್ರೀಮ್: (Arka supreme) ಇದು ಬೆಂಗಳೂರು ಹೇಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಿಂದ  ಬಿಡುಗಡೆಯಾದ ತಳಿ.
ಸೆಲೆಕ್ಷನ್ ತಳಿ
  • ಇದಲ್ಲದೆ ಗ್ರೀನ್ ಗೋಲ್ಡ್, ಬೆಂಗಳೂರು ಗ್ರಾಂಡ್ , ಎಸ್ ಪಿ ಆರ್ ಪ್ರೊಲಿಫೆರ್, ಬಿ ಜಿ ಎಸ್ ಗೋಲ್ಡ್, ಕಾವೇರಿ ಗ್ರಾಂಡ್, ಎಂಬ ಅಧಿಕ ಇಳುವರಿ ಕೊಡಬಲ್ಲ ತಳಿಗಳು ನಮ್ಮ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಬೆಳೆಯುತ್ತದೆ.
ಸೆಲೆಕ್ಷನ್ ತಳಿ

ಬೆಣ್ಣೆ ಹಣ್ಣು ಬೆಳೆಯುವವರು ತಮ್ಮ ಪ್ರಾದೇಶಿಕ ಹವಾಮಾನಕ್ಕೆ ಹೊಂದಿಕೆಯಾಗುವ ತಳಿಗಳನ್ನು ಆಯ್ಕೆ ಮಾಡಬೇಕು. ತಂಪು ವಲಯದ ತಳಿಗಳು ಉಷ್ಣ ವಲಯದಲ್ಲಿ ಹೊಂದಾಣಿಕೆ ಆಗದೆ ಇರಬಹುದು. ಹಾಗಾಗಿ ಸೂಕ್ತ ತಳಿಗಳನ್ನು ಆಯ್ಕೆ ಮಾಡುವುದು ಅಗತ್ಯ. ಕೀಟ – ರೋಗ ಸಮಸ್ಯೆಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಭೇಕು.

ಬೆಣ್ಣೆ ಹಣ್ಣು ಬೆಳೆಯುವ ಆಸಕ್ತರು ದುಬಾರಿ ಬೆಲೆಯ ಕಸಿ ಮಾಡಿದ ಗಿಡ ಬೆಳೆಸುವುದಕ್ಕೆ ಕಷ್ಟವಾದರೆ, ಬೀಜದ ಸಸಿ ಬೆಳೆಸುವುದು ಸೂಕ್ತ. ಬೀಜದ ಸಸಿಗಳು ಕಸಿ ಮಾಡಿದ ಗಿಡಗಳಿಗಿಂತ ಸಧೃಢವಾಗಿ ಬೇಗ ಬೆಳೆಯುತ್ತದೆ. ಬೀಜದಿಂದ ಸಸ್ಯಾಭಿವೃದ್ದಿ ಮಾಡುವುದು ಒಂದು ಲೆಕ್ಕದಲ್ಲಿ ಒಳ್ಳೆಯದೇ ಆಗಿರುತ್ತದೆ.

ಡಾ.ಎಸ್ ವಿ ಹಿತ್ತಲಮನಿ, ನಿವೃತ್ತ ಸಹಾಯಕ ತೋಟಗಾರಿಕಾ ನಿರ್ಧೇಶಕರು ಬೆಂಗಳೂರು ಮತ್ತು  ಭಾರತೀಯ ತೋಟಗಾರಿಕಾ ಸಂಶೊಧನಾ ಸಂಸ್ಥೆಯ ನಿರ್ಧೇಶಕರಾದ ಡಾ.ಬಿ ಎನ್ ಶ್ರೀನಿವಾಸ ಮೂರ್ತಿ, ಮತ್ತು ಅಂಬರೀಶ್ ಬಿ ಎನ್.

Leave a Reply

Your email address will not be published. Required fields are marked *

error: Content is protected !!