ತೆಂಗಿನ ಮರದ ಸುಳಿ ಕೊಳೆಯುವುದು ಯಾಕೆ? ಪರಿಹಾರ ಏನು?

ತೆಂಗಿನ ಮರದ ಸುಳಿ ಕೊಳೆ

ತೆಂಗಿನ ಮರದ ಶಿರ ಹೋಗುವುದಕ್ಕೆ ವಾತಾವರಣ ಕಾರಣ. ಇದು ಯಾವ ಪಕ್ಷಿ, ಪ್ರಾಣಿಯಿಂದಾಗಿ ಆಗುವುದಲ್ಲ. ಇದಕ್ಕೆ ಪ್ರಾರಂಭಿಕ ಹಂತದಲ್ಲಿ ಮಾತ್ರ ಚಿಕಿತ್ಸೆ   ಫಲಕಾರಿ.

  • ಹಳ್ಳಿಯ ಜನ ಈಗಲೂ ಕುಪುಳು ಹಕ್ಕಿ Greater Coucal (ಬಾರದ್ವಾಜ ಪಕ್ಷಿ) ತೆಂಗಿನ ಗರಿಯಲ್ಲಿ ಕುಳಿತು ಮೂತ್ರ ಮಾಡಿದರೆ ತೆಂಗಿನ ಮರವೇ ಸತ್ತು ಹೋಗುತ್ತದೆ ಎಂದು ತಿಳಿದಿದ್ದಾರೆ.
  • ಇದು ಈ ಹಕ್ಕಿಯಿಂದಾಗಿ ಆಗುವುದಲ್ಲ. ಹಕ್ಕಿಗಳು ಮೂತ್ರವನ್ನೇ ಮಾಡಲಾರವು.
  • ಇದು ವಾತಾವರಣದ ಅನುಕೂಲ ಸ್ಥಿತಿ ಒದಗಿದಾಗ ಕೊಳೆತಿನಿ ಶಿಲೀಂದ್ರ ಬಾಧಿಸಿ ಉಂಟುಮಾಡುವ ರೋಗ.

first symptom- ಪ್ರಾರಂಭಿಕ ಚಿನ್ಹೆ

 ಸುಳಿ ಕೊಳೆಯುವಿಕೆ ಪ್ರಾರಂಭ ಹೇಗೆ?

  • ಬೆಳಿಗ್ಗೆಯಿಂದ ಮಧ್ಯಾನ್ಹದ ತನಕ ಉರಿ ಬಿಸಿಲು, ಸಂಜೆ ಗುಡುಗು ಸಹಿತ ಮಳೆ, ಈ ವಾತಾವರಣದಲ್ಲಿ ತಾಪಮಾನ ಕಡಿಮೆ, ಆರ್ಧ್ರತೆ ಅಧಿಕ.
  • ಇದು ರೋಗಕಾರಕಗಳ ಅಭಿವೃದ್ದಿಗೆ ತುಂಬಾ ಅನುಕೂಲಕರ ವಾತಾವರಣ. ಈ ಸಮಯದಲ್ಲಿ ಬೆಳೆಗಳಿಗೆ ಶಿಲೀಂದ್ರ ರೋಗ ಬರುವ ಸಾಧ್ಯತೆ ಹೆಚ್ಚು.
  • ಕರಾವಳಿ ಮಲೆನಾಡಿನಲ್ಲಿ ಅಧಿಕ ಮಳೆಯ ಕಾರಣ ತೆಂಗಿಗೆ ಈ ರೋಗ ಹೆಚ್ಚು.
  • ಸುಳಿ ಕೊಳೆಯುವ ರೋಗ ಸಿಡಿಲು ಮಿಂಚಿನ ಅರ್ಭಟ ಹೆಚ್ಚು ಇರುವ ಮಳೆಗಾಲದ  ಅಂತಿಮ ಅವಧಿಯಲ್ಲಿ ಮತ್ತು ಮುಂಗಾರು ಮಳೆ ಪ್ರಾರಂಭದ ಸಮಯದಲ್ಲಿ ಬರುವ ಸಾಧ್ಯತೆ ಅತ್ಯಧಿಕ.
  • ಉಳಿದ ಕಡೆಗಳಲ್ಲೂ ಇಲ್ಲದಿಲ್ಲ. ಇಬ್ಬನಿಯಿಂದಲೂ ರೋಗ   ಉಂಟಾಗುತ್ತದೆ.

ಪತ್ತೆ ಹೇಗೆ?

After few days- ಕೆಲ ದಿನಗಳ ನಂತರ

  • ತೆಂಗಿನ ಸಸಿ ಒಂದಿರಲಿ ಅಥವಾ ತೋಟವೇ ಇರಲಿ, ಈ ಸಮಯದಲ್ಲಿ ನೀವು ತೋಟದೊಳಗೆ ಸಂಚರಿಸುವಾಗ  ಬರೇ ಬುಡ ನೋಡುವುದರ ಜೊತೆಗೆ ಸುಳಿಯನ್ನೂ ನೋಡಿ.
  • ಮರದ ಸುಳಿಯನ್ನು ಅಗತ್ಯವಾಗಿ ಗಮನಿಸಿ. ಮರದ ಸುಳಿ ನೇರವಾಗಿ ಆರೋಗ್ಯವಾಗಿದೆಯೇ, ಅಥವಾ ಸುಳಿ ಭಾಗದ ಗರಿ ಬಣ್ಣ ಕಳೆದುಕೊಂಡು ಬಾಗಿದೆಯೇ  ಇದನ್ನು ಗಮನಿಸುತ್ತಿರಿ.
  • ಒಮ್ಮೆಯಲ್ಲ ಯಾವಾಗಲೂ ಗಮನಿಸುತ್ತಿರಿ. ಈವತ್ತು ಸರಿಯಿದ್ದರೂ ನಾಳೆ ರೋಗ ಭಾಧಿತವಾಗಬಹುದು!
  • ಸಿಡಿಲಿನ ಆರ್ಭಟ ಹೆಚ್ಚಾಗಿದ್ದರೆ  ಇದು ಹೆಚ್ಚು.
Avertisement 21
ADVERTISEMENT

ಹರಡುವ ರೋಗ:

small plant-ಸಣ್ಣ ಗಿಡಕ್ಕೆ ಹಾನಿ

  •  ಇದೊಂದು ಹಬ್ಬುವ ಶಿಲೀಂದ್ರ ರೋಗ. ಅಧಿಕ ಮಳೆಯಾಗುವ ಭಾಗಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ತೆಂಗಿಗೆ ಭಾರೀ ಪ್ರಮಾಣದಲ್ಲಿ ಹಾನಿ ಮಾಡಿದೆ.
  • ಇದರ ಸಮಸ್ಯೆಗಾಗಿಯೇ ಕೆಲವರು ತೆಂಗಿನ ಬೇಸಾಯವನ್ನೇ ಬಿಟ್ಟದ್ದುಂಟು.
  • ಹೆಚ್ಚಿನವರ ತೆಂಗಿನ ತೋಟದಲ್ಲಿ ರುಂಡ ಹೋದ ತೆಂಗಿನ ಮರಗಳಿದ್ದರೆ ಅದು ಸುಳಿ ಕೊಳೆ ರೋಗದಿಂದಾಗಿ ಆಗಿದೆ.
  • ತೆಂಗಿನ ಸಸಿ ನೆಟ್ಟಾಗಿನಿಂದ ಪ್ರಾರಂಭವಾಗಿ, ಯಾವುದೇ ಸಮಯದಲ್ಲಿ ಈ ರೋಗ ಬಾಧಿಸಬಹುದು.
  • ಇದಕ್ಕೆ ಕಾರಣವಾದ ಶಿಲೀಂದ್ರ Phytophthora palmivora ಗಾಳಿಯ, ನೀರಿನ ಮೂಲಕ, ಗುಡುಗು ಸಿಡಿಲಿನ ಮೂಲಕ ತೆಂಗಿನಸುಳಿ ಭಾಗಕ್ಕೆ ಪ್ರವೇಶಿಸಿ, ಅಲ್ಲಿ ಅನುಕೂಲಕರ ವಾತಾವರಣ ದೊರೆತಾಗ ವಂಶಾಭಿವೃದ್ದಿಯಾಗಿ ಆ ಭಾಗವನ್ನು ಕೊಳೆಯಿಸುತ್ತದೆ.
  • ಸಮಯೋಚಿತ ಮುನ್ನೆಚ್ಚರಿಕೆ ವಹಿಸಿ ನಿಯಂತ್ರಣ ಕ್ರಮ ಕೈಗೊಂಡರೆ ಭಾಧಿತ ಮರಗಳನ್ನು ಸಂರಕ್ಷಿಸಬಹುದು.
  • ರೈತರು ಇದನ್ನು ಸರಿಯಾದ ಸಮಯದಲ್ಲಿ ಗುರುತಿಸಲಾಗದೇ, ಉಪಚರಿಸದೇ ಮರವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ.
  • ತೆಂಗಿನ ಮರದಲ್ಲಿ  ಸುಳಿ ಭಾಗವು ಹೋದರೆ ನಂತರ ಬೆಳವಣಿಗೆಗೆ ಬೇರೆ ಅಂಗ ಇರುವುದಿಲ್ಲವಾದ ಕಾರಣ ಅದು ನಂತರ ಸಾಯುವುದೇ.
rotting -ಕೊಳೆಯುವಿಕೆ
ಕೊಳೆತ ಗರಿ ಬುಡ

ನಿರ್ವಹಣೆ:

  • ಈ ರೋಗವನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿ ನಿರ್ವಹಣೆ ಮಾಡಿದರೆ ಮಾತ್ರವೇ ಮರವನ್ನು ಉಳಿಸಿಕೊಳ್ಳಲು ಸಾಧ್ಯ.
  • ತಡವಾದರೆ ಮರವೇ ಸಾಯುತ್ತದೆ. ರೋಗ ಬಂದ ತಕ್ಷಣ ಗುರುತಿಸಬೇಕು.
  • ತಕ್ಷಣವೇ ಸುಳಿ ಭಾಗವನ್ನು ಎಳೆದು ತೆಗೆಯಬೇಕು.
remove all rotted parts- ಕೊಳೆತ ಎಲ್ಲಾ ಭಾಗಗಳನ್ನು ತೆಗೆಯಬೇಕು.
ಕೊಳೆತ ಎಲ್ಲಾ ಭಾಗಗಳನ್ನು ತೆಗೆಯಬೇಕು.
  • ಕೊಳೆತ ಆವಶೇಷಗಳನ್ನು ಸ್ವಲ್ಪವೂ ಉಳಿಯದಂತೆ ಪೂರ್ತಿಯಾಗಿ ತೆಗೆದು  ಸ್ವಚ್ಚಗೊಳಿಸಿ ಆ ಭಾಗಕ್ಕೆ ಕಾಪರ್ ಆಕ್ಸೀ ಕ್ಲೋರೈಡ್, (ಸಿಒಸಿ) ಬಾವಿಸ್ಟಿನ್  ಅಥವಾ ಮ್ಯಾಂಕೋಜೆಬ್ ಶಿಲೀಂದ್ರನಾಶಕದ ದ್ರಾವಣವನ್ನು  (5 ಗ್ರಾಂ  ಗೆ 300 ಮಿಲಿ.ಲೀ.ನೀರು) ಎಲ್ಲಾ ಗಾಯದ ಭಾಗಗಳಿಗೆ  ತಾಗುವಂತೆ ಎರೆಯಬೇಕು.
  • ಉಪಚರಿಸಿದ ಭಾಗಕ್ಕೆ  ಶಿಲೀಂದ್ರನಾಶಕ ತೊಳೆದು ಹೋಗದಂತೆ ತಡೆಯಲು ಪ್ಲಾಸ್ಟಿಕ್ ಕೊಟ್ಟೆಯನ್ನು ಹಾಕಿ ಕಟ್ಟಬೇಕು.
  • ಆ ಭಾಗದಲ್ಲಿ ಹೊಸ ಸುಳಿ ಬರುವ ತನಕವೂ ಆ ಪ್ಲಾಸ್ಟಿಕ್ ಕೊಟ್ಟೆ ಇರಬೇಕು.
  • ಹೊಸ ಸುಳಿ ಮೂಡಿ ಬೆಳೆಯುವಾಗ  ಪ್ಲಾಸ್ಟಿಕ್ ಕೊಟ್ಟೆಯನ್ನು ಅದೇ ಮೇಲೆತ್ತಿ ತೆಗೆದು ಬಿಡುತ್ತದೆ.
Clean like this- ಈ ರೀತಿ ಸ್ವಚ್ಚ ಗೊಳಿಸಿ
ಈ ರೀತಿ ಪೂರ್ತಿ ಸ್ವಚ್ಚ ಗೊಳಿಸಿ

ಮುನ್ನೆಚ್ಚರಿಕೆ:

Fungicide treatment -ಶಿಲಿಂದ್ರ ನಾಶಕ ಉಪಚಾರ
ಶಿಲಿಂದ್ರ ನಾಶಕ ಉಪಚಾರ
  • ಈ ರೋಗ ಬರದಿರುವಂತೆ ತೆಡೆಯಲು ಮುಂಗಾರು ಮಳೆ ಪ್ರಾರಂಭದ ದಿನಗಳಲ್ಲಿ ಮತ್ತು ಮಳೆಗಾಲ ಮುಗಿಯುವ ಆಗಸ್ಟ್ ಹಾಗೂ ಸಪ್ಟೆಂಬರ್ ತಿಂಗಳಲ್ಲಿ ಶೇ. 1 ರ ಬೋರ್ಡೋ ದ್ರಾವಣ ಅಥವಾ ಬೋರ್ಡೋ ಪೇಸ್ಟ್ ಲೇಪನ ಮಾಡಬೇಕು ಒಂದು ಲೀ. ನೀರಿಗೆ 3 ಗ್ರಾಂ. ಪ್ರಮಾಣದಲ್ಲಿ ಸಿಒಸಿ ಅಥವಾ ಮ್ಯಾಂಕೋಜೆಬ್ ಶಿಲೀಂದ್ರ ನಾಶಕವನ್ನು ಸುಳಿ ಭಾಗಕ್ಕೆ ಸಿಂಪಡಿಸಬೇಕು.
  • ಬೋರ್ಡೋ ಪೇಸ್ಟ್ ಅನ್ನು ಮಳೆಗಾಲ ಪ್ರಾರಂಭವಾಗುವಾಗ ಸುಳಿ ಭಾಗಕ್ಕೆ 100-150 ಮಿಲಿ ಯಷ್ಟು ಹಾಕಿದರೆ ಕೊಳೆ ರೋಗ ಬರಲು ತಡೇಯಾಗುತ್ತದೆ.
  • ಸುಳಿ ಕೊಳೆ ರೋಗಕ್ಕೆ ತುತ್ತಾಗಿ ಸತ್ತ ಮರಗಳನ್ನು ಅಥವಾ ಸಸಿಯನ್ನು ಹಾಗೆಯೇ ಉಳಿಸಿಕೊಳ್ಳಬಾರದು.
  • ಇದರಲ್ಲಿರುವ ಶಿಲೀಂದ್ರ ಬೀಜಾಣು ಆರೋಗ್ಯವಂತ ಸಸಿಗೆ ವರ್ಗಾವಣೆಯಾಗುತ್ತದೆ.
  • ಸುಳಿ ಕೊಳೆತಕ್ಕೊಳಗಾದ  ಸಸಿ/ಮರವನ್ನು ಸ್ವಚ್ಚ ಗೊಳಿಸುವಾಗ ದೊರೆಯುವ ರೋಗ ಭಾಧಿತ ಶೇಷಗಳನ್ನು ತೋಟದಲ್ಲಿ ಎಸೆಯದೇ ಸುಡಬೇಕು.
  • ಗಾಳಿ ನೀರಿನ ಮೂಲಕ ಈ ಶಿಲೀಂದ್ರ ಪ್ರಸಾರವಾಗುವ ಕಾರಣ ಅದಕ್ಕೆ ಅವಕಾಶ ಕೊಡಬಾರದು.
  • ಸಿಡಿಲು ಬಡಿದು ಹಾನಿಗೊಳಗಾದ ಮರಗಳನ್ನು ಹಾಗೇ ಬಿಡಬಾರದು.
  • ಈ ಮರಗಳು ತಕ್ಷಣವೇ ಕೊಳೆಯಲಾರಂಭಿಸಿ ಅದರಲ್ಲಿರುವ ರೋಗಾಣು ಆರೋಗ್ಯವಂತ ಮರಗಳಿಗೆ ವರ್ಗಾವಣೆಯಾಗುತ್ತದೆ.
  • ತೆಂಗಿನ ಮರ/ ಸಸಿಗಳಿಗೆ ಕುರುವಾಯಿ ಕೀಟ ಹಾನಿಮಾಡಿದ್ದರೆ ಆ ಭಾಗ ಕೊಳೆತು ಈ ಶಿಲೀಂದ್ರ ರೋಗ ಉಂಟಾಗಲು ಸಹಕಾರಿಯಾಗುತ್ತದೆ.
  • ಕುರುವಾಯಿ ಕೀಟ ತೊಂದರೆ ಮಾಡದಂತೆ ಕ್ರಮ ಕೈಗೊಳ್ಳಬೇಕು.

covering plastic- ಪ್ಲಾಸ್ಟಿಕ ಹೊದಿಕೆ

  • ಕೆಂಪು ಮೂತಿ ಹುಳ ಬಾಧಿಸಿ ಸತ್ತ ಮರಗಳನ್ನೂ ಹಾಗೇ ಉಳಿಸಿಕೊಳ್ಳದೇ ಅದನ್ನು  ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು.
  • ಒಂದು ಮರಕ್ಕೆ ಹಾನಿಯಾಗಿದ್ದರೆ ಕಡ್ದಾಯವಾಗಿ ಅದರ ಸುತ್ತಮುತ್ತಲಿನ ಮರಗಳಿಗೆ ಉಪಚಾರ ಮಾಡಬೇಕು.
  • ತೆಂಗಿನ ಮರಗಳನ್ನು ಸಾಧ್ಯವಾದಷ್ಟು ಸಮತೋಲನ ಗೊಬ್ಬರ ಕೊಟ್ಟು ಬೆಳೆಸಬೇಕು.
  • ಪೊಟ್ಯಾಶಿಯಂ ಸತ್ವವನ್ನು ಕಡಿಮೆ ಮಾಡಬಾರದು.
After treatment -ಊಪಚಾರದ  ನಂತರ
ಊಪಚಾರದ ನಂತರ
  • ತೆಂಗಿನ ಮರಗಳಿಗೆ ಅಥವಾ ಕೊಳೆ ರೋಗ ಭಾಧಿತ ಮರ/ಸಸಿಗಳ ಕೊಳೆತ ಭಾಗಗಳನ್ನು ತೆಗೆದು ಮಾನವ ಮೂತ್ರವನ್ನು ಬಾಟಲಿಯಲ್ಲಿ ತುಂಬಿಸಿ ಮುಚ್ಚಳಕ್ಕೆ ತೂತು ಮಾಡಿ ಸುಳಿ ಬಾಗದಲ್ಲಿ ಕವುಚಿ ಇಟ್ಟರೆ ಅದು ಇಳಿದು ಶಿಲೀಂದ್ರ ನಾಶ ಆಗುತ್ತದೆ ಎನ್ನುತ್ತ್ತಾರೆ ಮಾಡಿದವರು.
  •  ಪೊಟಾಶಿಯಂ ಪೋಸ್ಫೋನೇಟ್ ಅಂತರ್ ವ್ಯಾಪೀ ಶಿಲೀಂದ್ರ ಪ್ರತಿಬಂಧಕವನ್ನು ಮಳೆಗಾಲ ಮುಂಚೆ ಎಲೆಗಳಿಗೆ ಸಿಂಪರಣೆ ಮಾಡುವುದು (3 ಗ್ರಾಂ  1ಲೀ ನೀರಿಗೆ) , ದೊಡ್ದ ಮರಗಳಿಗೆ 1 ಲೀ ನೀರಿಗೆ  5 ಗ್ರಾಂ.
  • ಪೊಟ್ಯಾಶಿಯಂ ಪೋಸ್ಪೋನೇಟ್ ಮಿಶ್ರಣ ಮಾಡಿದ 5 ಲೀ ದ್ರಾವಣವನ್ನು ಬುಡಕ್ಕೆ  ಎರೆದು ರೋಗ ಬಾರದಂತೆ ಸಸ್ಯಕ್ಕೆ ನಿರೋಧಕ ಶಕ್ತಿ ಬರುವಂತೆ ಮಾಡಬಹುದು.

ತೆಂಗಿನ ಮರಕ್ಕೆ ಇತ್ತೀಚಿನ ಹವಾಮಾನದಲ್ಲಿ ಸುಳಿ ಕೊಳೆ ವಿಪರೀತವಾಗಿದ್ದು, ತೆಂಗು ಸಸಿ ಬದುಕಿಸುವುದೇ ಕಷ್ಟವಾಗಿದೆ. ನಿರಂತರ ಗಮನಿಸುತ್ತಿದ್ದು, ತಕ್ಷಣ ಪರಿಹಾರ ಕ್ರಮ ಕೈಗೊಂಡರೆ  ಮಾತ್ರ ಮರ ಉಳಿಸಲು ಸಾಧ್ಯ.

One thought on “ತೆಂಗಿನ ಮರದ ಸುಳಿ ಕೊಳೆಯುವುದು ಯಾಕೆ? ಪರಿಹಾರ ಏನು?

  1. Please inform some remedy for Nusi Roga which is in my garden coconut trees for the last 35 years

Leave a Reply

Your email address will not be published. Required fields are marked *

error: Content is protected !!