ಹತ್ತಿ ಬೆಳೆಯ ಗುಲಾಬಿ ಕಾಯಿ ಕೊರಕ ನಿಯಂತ್ರಣ.

cotton

ಹತ್ತಿ ಬೆಳೆಗಾರರಿಗೆ ಗಣನೀಯ ಬೆಳೆ ನಷ್ಟ ಮಾಡುವ ಕೀಟ ಎಂದರೆ  ಗುಲಾಬಿ ಕಾಯಿ ಕೊರಕ. ಹತ್ತಿಯ ಕಾಯಿಗಳು ಬೆಳೆಯುತ್ತಿದ್ದಂತೆ ಇದು ಪ್ರವೇಶವಾಗಿ  ಒಳಗಿನ ಹತ್ತಿಯ ಅರಳನ್ನು ಹಾನಿ ಮಾಡುತ್ತದೆ. ಮಾರುಕಟ್ಟೆಯಲ್ಲಿ ಈ ಹತ್ತಿಗೆ ಬೆಲೆಯೇ ಇರುವುದಿಲ್ಲ.  ಈ ಕೀಟದ ನಿಯಂತ್ರಣಕ್ಕಾಗಿ ಅತ್ಯಧಿಕ ಕೀಟನಾಶಕ ಬಳಕೆ ಮಾಡಲಾಗುತ್ತದೆ. ಇದರಿಂದಾಗಿಯೇ ಕಳೆದ ವರ್ಷ ಕೆಲವು ರೈತರು ಜೀವ ಕಳೆದುಕೊಂಡದ್ದೂ ಇದೆ.  ಸರಳ ಮತ್ತು ಮಿತವ್ಯಯದ ಬೇಸಾಯ ಕ್ರಮದಲ್ಲಿ ಇದನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಣ ಮಾಡಬಹುದು.

Cotton pink boll worm  damage

ಜೀವನ ಚಕ್ರ ಹೀಗಿರುತ್ತದೆ:

  • ಗುಲಾಬಿ ಕಾಯಿ ಕೊರಕ ಹುಳು ಹತ್ತಿಯ ಹೂವು ಮೊಗ್ಗು, ಹೂವು ಮತ್ತು ಬೆಳೆಯುತ್ತಿರುವ ಹಂತದ ಕಾಯಿಗಳನ್ನು ಬಾಧಿಸುತ್ತದೆ.
  • ಬಾಧಿತ ಕಾಯಿಯ ಆಕಾರ ಬದಲಾಗಿ ಬುಗುರಿ ತರಹ ಆಗುತ್ತದೆ.
  • ಗುಲಾಬಿ ಕಾಯಿ ಕೊರಕ ಪತಂಗಗಳು 4-10 ದಿನ ಬದುಕಿದ್ದು, ಆ ಸಮಯದಲ್ಲಿ ಹತ್ತಿ  ಹೂವಿನಲ್ಲಿ ಮತ್ತು ಕಾಯಿಯ ತೊಟ್ಟಿನ ಭಾಗದಲ್ಲಿ  ಮೊಟ್ಟೆ ಇಡುತ್ತದೆ.
  • 4-6 ದಿನದಲ್ಲಿ ಮೊಟ್ಟೆ ಒಡೆದು ಮರಿಯಾಗುತ್ತದೆ. ಈ ಸಮಯದಲ್ಲಿ ಒಳಗಿನ ಭಾಗದಲ್ಲಿ ರಸ ಹೀರಿ ಹಾನಿ ಮಾಡಿ 10-22 ದಿನಗಳ ತನಕ ಹುಳವಾಗಿ ಇರುತ್ತದೆ.

Pink bollworm pest

  • ಆ ನಂತರ   ಕಾಯಿಯ ತುದಿಯ ಮೂಲಕ ಪ್ರೌಢ ಹುಳವು ಹೊರ ಬಂದು 8- 9 ದಿನಗಳ ತನಕ  ತನ್ನ ಪ್ಯೂಪೆ ಹಂತವನ್ನು  ಗಿಡದ ಬುಡದ ನೆಲದಲ್ಲಿ  ಮೇಲ್ಭಾಗದಲ್ಲಿ ಮುಗಿಸಿ ಮತ್ತೆ ಪತಂಗವಾಗುತ್ತದೆ. ಮತ್ತೆ 10ದಿನದಲ್ಲಿ ಮೊಟ್ಟೆ ಇಡುತ್ತದೆ.

ಚಳಿಗಾಲದಲ್ಲಿ ಇವು ಲಾರ್ವೆ ಹಂತದಲ್ಲಿ ನೆಲದಲ್ಲಿ ಇರುತ್ತವೆ. ಬೇಸಿಗೆಯಲ್ಲಿ ಕಾಯಿಯ ಒಳಗೆ ಇರುತ್ತವೆ. ಮಳೆಗಾಲದಲ್ಲಿ ಮೊಟ್ಟೆ ಇಡುತ್ತವೆ. ಕಾಯಿಯಲ್ಲಿ ತೂತು ಕಂಡು ಬಂದರೆ ಒಳಗೆ ಹುಳ ಇದೆ ಎಂದರ್ಥ.

pest

ನಿಯಂತ್ರಣ ಕ್ರಮಗಳು:

  • ಹತ್ತಿಯ ಗಿಡದಲ್ಲಿ ಹೂವು ಆಗುವ ಸಮಯದಲ್ಲಿ ಒಮ್ಮೆ ಕೀಟನಾಶಕವಾದ  ಕ್ಲೋರೋಫೆರಿಫೋಸ್ ಅಥವಾ ಕ್ವಿನಾಲ್ ಫೋಸ್ 2.5 ಮಿಲಿ 1 ಲೀ. ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಇದನ್ನು ಮತ್ತೆ ಕಾಯಿ ಮಿಡಿ ಹಂತದಲ್ಲೂ ಮುಂದುವರಿಸಬೇಕು. ಒಟ್ಟು 3  ಬಾರಿ ಸಿಂಪರಣೆ ಸಾಕು.
  • ತೀರಾ ಪ್ರಭಲ ಕೀಟನಾಶಕ( Syastemic pestcides) ಸಿಂಪರಣೆಯಿಂದ ಆ ಕೀಟಗಳು ನಿರೋಧಕ ಶಕ್ತಿ ಪಡೆಯುತ್ತವೆ. ಕೊನೆ ಹಂತದಲ್ಲಿ ಕರಾಟೆ( ಲಾಂಬ್ಡಾ ಸೈಹೋತ್ರಿನ್) ಸಿಂಪರಣೆ ಮಾಡಿ.
  • ಪತಂಗದ ಪತ್ತೆಗಾಗಿ ಹತ್ತಿ ಗಿಡ ಹೂ ಬಿಡುವುದಕ್ಕೆ ಮುಂಚೆಯೇ  ಫೆರಮೋನು ಟ್ರಾಪುಗಳನ್ನು ಹಾಕಿ ಪತಂಗಗಳ ಇರುವಿಕೆಯನ್ನು ಪತ್ತೆ  ಹಚ್ಚಬೇಕು.
  • ಹೂ ಮೊಗ್ಗು ಅರಳುವ ಸಮಯದಲ್ಲಿ ಎನ್ ಪಿ ವಿ ನಂಜಾಣು ಬೆಲ್ಲದ ದ್ರಾವಣ (1 ಕಿಲೊ 20 ಲೀ. ನೀರಿನಲ್ಲಿ ಕರಗಿಸಿ ಶೇ.0.1 ಬೋರಿಕ್ ಆಮ್ಲ ಸೇರಿಸಿ ) ಸಿಂಪರಣೆ ಮಾಡಬೇಕು.
  • ಹತ್ತಿ ಬೆಳೆಗೆ 30-40 ದಿನ ಆದಾಗ ಎಕ್ರೆಗೆ 80 ರಷ್ಟು ಪಿ ಬಿ ರೋಪೆಲ್ ಅನ್ನು ಕಾಂಡಕ್ಕೆ ಕಟ್ಟಬೇಕು. ಇದು ಪ್ರತೀ ಚದರ ಮೀಟರಿಗೆ  ಒಂದು  ಇರುವಂತೆ ನೊಡಿಕೊಳ್ಳಬೇಕು. 

Trap

ಹೂವು ಅರಳಲು ಪ್ರಾರಂಭವಾದಾಗ  ಕೀಟದ ಗಂಡು ಪತಂಗವನ್ನು ಆಕರ್ಶಿಸಿ ಕೊಲ್ಲಲು ಅನುಕೂಲವಾಗುವಂತೆ ಎಕ್ರೆಗೆ 15 ರಷ್ಟು  ಮೋಹಕ ಬಲೆ ( ಫೆರಮೋನು ಟ್ರಾಪು)  ಹಾಕಬೇಕು.  ಬಲೆಗೆ ಬಿದ್ದ ಪತಂಗಗಳನ್ನು ಸಾಯಿಸಲು DDVP ಕೀಟನಾಶಕದಲ್ಲಿ ಅದ್ದಿದ ಅರಳೆಯನ್ನು ಮೋಹಕ ಬಲೆಯ ಓಒಳಗೆ ಹಾಕಬೇಕು. ಮೋಹಕ ಬಲೆಯನ್ನು ಹತ್ತಿ ಸಸ್ಯಗಳಿಂದ ಕನಿಷ್ಟ 1.5 ಅಡಿ ಎತ್ತರಕ್ಕಿರುವಂತೆ ಹಾಕಬೇಕು. ಪ್ರತೀ 15-20 ದಿನಕ್ಕೊಮ್ಮೆ ಲ್ಯೂರುಗಳನ್ನು ಬದಲಿಸಬೇಕು.

  • ಈ ವಿಧಾನವನ್ನು ಕಾಯಿ ಬಲಿಯುವ ತನಕವೂ ಚಾಚೂ ತಪ್ಪದೆ ಪಾಲಿಸಬೇಕು.

Damage

ರಕ್ಷಣಾತ್ಮಕ ವಿಧಾನ:

  • ಹತ್ತಿ  ಬೆಳೆಯುವಾಗ ಬಿಟಿ ಯೊಂದಿಗೆ ಬಿಟಿಯಲ್ಲದ ನಾಟಿ ತಳಿಗಳನ್ನೂ ಬದುಗಳಲ್ಲಿ ಬೆಳೆಯಬೇಕು.
  • ಹತ್ತಿಯ ಬೆಳೆಯ ಹೊಲದ ಬದುಗಳಲ್ಲಿ ಬೆಂಡೆ ಬೆಳೆಯನ್ನು ಬೆಳೆಸಬೇಕು.
  • ಅಲ್ಪಾವಧಿ ಅಂದರೆ  ನವೆಂಬರ್ ತಿಂಗಳ ಒಳಗೆ ಕಠಾವಿಗೆ ಬರುವಂತಹ ತಳಿಗಳನ್ನು ಆಯ್ಕೆ ಮಾಡಬೇಕು.
  • ಪ್ರತೀ ಎಕ್ರೆಗೆ 5 ರ ಪ್ರಮಾಣದಲ್ಲಿ ಫೆರಮೋನ್ ಲ್ಯೂರ್ ಗಳನ್ನು ಮೊದಲೇ  ಹಾಕಿರಬೇಕು.
  • ಹಾಳಾದ ಹೂ ಮೊಗ್ಗುಗಳನ್ನು ತೆಗೆದು ಸುಡುತ್ತಾ ಇರಬೇಕು. ಅದನ್ನು ಅಲ್ಲೇ ಉಳಿಸಬಾರದು. ಸುಡಬೇಕು.
  • ಪ್ರಾರಂಭದ ಹಂತದಲ್ಲಿ ಕೀಟ ನಾಶಕಸಿಂಪಡಿಸುವಾಗ  ಪ್ರಭಲ ಅಥವಾ ಅಂತರ್ ವ್ಯಾಪೀ ಕೀಟನಾಶಕವನ್ನು ಬಳಸಬೇಡಿ.
  • ಪ್ರತೀ ಎಕ್ರೆಗೆ 10-15 ಯಾವುದಾದರೂ ಸಸ್ಯದ ಗೆಲ್ಲುಗಳನ್ನು ನೆಟ್ಟು ಹಕ್ಕಿಗಳ ಆಕರ್ಷಣೆ ಮಾಡಿ.
  • ತೊಗರಿ ಸಸಿಯನ್ನು ನೆಟ್ಟು ಅಲ್ಲಿ ಕೀಟವನ್ನು ನಿಯಂತ್ರಣ ಮಾಡಿ. ಚೆಂಡು ಹೂವಿನ ಸಸಿಯನ್ನು ಬೆಳೆಸಿ
  • ಹಾನಿಯ ಮಿತಿ 10%  ದಾಟಿದರೆ  ಮಾತ್ರ ಸಿಂಪರಣೆ ಮಾಡಿ.

ಮಾಗಿ ಉಳುಮೆ ಮಾಡಿ ಬಿತ್ತನೆ ಮಾಡಿ. ವಾತಾವರಣ ತಂಪು ಇರುವಾಗ ಬ್ಯಾಸಿಲಸ್ ತುರೆಂಜೆನ್ಸಿಸ್ ಜೈವಿಕ(BT)ಕೀಟನಾಶಕ ಸಿಂಪರಣೆ ಮಾಡಿ.

ಹೆಚ್ಚು ಹೆಚ್ಚು ಕೀಟನಾಶಕ ಸಿಂಪಡಿಸುವ ಬದಲಿಗೆ  ಸಾಧ್ಯವಾದಷ್ಟು ರಕ್ಷಣಾತ್ಮಕ ವಿಧಾನವನ್ನು ಅನುಸರಿಸಿ ಕಾಯಿಕೊರಕದ ಹಾವಳಿಯನ್ನು ಕಡಿಮೆ ಮಾಡಿಕೊಳ್ಳಿ. ಜೈವಿಕ ಕೀಟನಾಶಕಕ್ಕೆ ಹೆಚ್ಚು ಪ್ರಾತಿನಿಧ್ಯ ಕೊಡಿ.

 

2 thoughts on “ಹತ್ತಿ ಬೆಳೆಯ ಗುಲಾಬಿ ಕಾಯಿ ಕೊರಕ ನಿಯಂತ್ರಣ.

Leave a Reply

Your email address will not be published. Required fields are marked *

error: Content is protected !!