ಮದ್ದಾಲೆ ಮರದ ಚೆಕ್ಕೆ ತಿನ್ನಿ- ಆರೋಗ್ಯವಾಗಿರುತ್ತೀರಿ.

ಗಗನ ಚುಂಬಿ ಮದ್ದಾಲೆ ಮರ

ಆಷಾಢ ಅಮವಾಸ್ಯೆಯ ದಿನ ಮದ್ದಾಲೆ ಮರದ ಬುಡಕ್ಕೆ ಬೆಳಗ್ಗಿನ ಜಾವದಲ್ಲಿ ಹೋಗಿ ಕತ್ತಿ ಇತ್ಯಾದಿ ಆಯುಧಗಳ ಸಹಾಯವಿಲ್ಲದೇ ಕಲ್ಲಿನಲ್ಲಿ ಮರದ ತೊಗಟೆಯನ್ನು ಜಜ್ಜಿ ತೆಗೆದು ಚೂರು ಚೆಕ್ಕೆಯನ್ನು ಜಗಿದು ಸೇವಿಸುವುದು ತುಳು ನಾಡಿನಲ್ಲಿ ಪ್ರತೀತಿ. ಈ ಮರದ ತೊಗಟೆಯ ರಸಕ್ಕೆ ಅನಾರೋಗ್ಯ ನಿವಾರಣೆ ಶಕ್ತಿ ಇದೆ. ಜೊತೆಗೆ ಈ ಮರವನ್ನು ಪೂಜನೀಯವಾಗಿಯೂ ಕಾಣಲಾಗುತ್ತದೆ.

ಮದ್ದಾಲೆಗೆ ಇದೆ ದೈವಿಕತೆ:

ತೊಗಟೆ ತೆಗೆದ ಮದ್ದಾಲೆ

  •  ಪೆರಿಯಾಕುಳು ಎಂಬ ಯಮಳ ವೀರರು ಬೈಲಬೀಡು ಬಳಿಯ ಮದ್ದಾಲೆ ಅಥವಾ  ಪಾಲೆ ಮರದ ಬುಡದಲ್ಲಿ ಮಾಯವಾದರು ಎಂಬ ಐತಿಹ್ಯವಿದೆ.
  • ಅದೇ ರೀತಿಯಲ್ಲಿ ಪಾಲೆ ಮರದ ಬುಡದಲ್ಲಿ ಕೆಲವು ದೈವಗಳು ನೆಲೆಸಿರುತ್ತವೆ ಎಂಬ ನಂಬಿಕೆ ಇದ್ದು ಸಾಮಾನ್ಯವಾಗಿ ಈ ಮರವನ್ನು ಅನವಶ್ಯಕ ಕಡಿದು ಹಾಕುವುದಿಲ್ಲ.
  • ಇದು ತುಂಬಾ ಎತ್ತರವಾಗಿ ಹುಲುಸಾಗಿ ಬೆಳೆಯುವ ಕಾರಣ ಇದರ ದೈತ್ಯ ಸ್ವರೂಪವೇ ದೈವದ ನೆಲೆಯಾಗಿ ಕಾಣುತ್ತದೆ.
  • ಮದ್ದಾಲೆ ಮರ ಹೆಚ್ಚಿನ ಎಲ್ಲಾ ಕಡೆ ಕಂಡು ಬರುತ್ತದೆ.
  • ಇದನ್ನು ಜಂತಾಲೆ ಮರ, ಜಂತುಳ, ಕೋಡಾಲೆ, ಸಪ್ತಪರ್ಣಿ, ಸಾತ್ವಿನ್ ಎಂಬುದಾಗಿ ಕರೆಯುತ್ತಾರೆ.
  • ಕರಾವಳಿಯ ಉದ್ದಕ್ಕೂ, ಮಲೆನಾಡಿನಲ್ಲೂ ಕಾಣಸಿಗುತ್ತದೆ.

 ಅಮಾವಾಸ್ಯೆಯಂದು ಯಾಕೆ ಮದ್ದಾಲೆ?

  • ಮದ್ದಾಲೆ ಮರ ತೊಗಟೆಯನ್ನು ಆಷಾಢ ಮಾಸದ ಅಮಾವಾಸ್ಯೆಯಂದೇ ತಿನ್ನಬೇಕೆಂಬ ವಾಡಿಕೆ ಬಂದುದಕ್ಕೆ ಕಾರಣ, ಆಗ ಅತಿಯಾಗಿ ಮಳೆ, ಗಾಳಿ ಇರುತ್ತದೆ. ಥಂಡಿ ವಾತಾವರಣ ಸಾಮಾನ್ಯ.
  • ಈ ವಾತಾವರಣ ಎಲ್ಲಾ ತರಹದ ರೋಗ ರುಜಿನಗಳಿಗೆ ಮೂಲ ಕಾರಣವಾಗಿರುತ್ತದೆ.
  • ಈ ಸಮಯದಲ್ಲಿ  ಸಾಮಾನ್ಯವಾಗಿ ಜ್ವರ, ಶೀತ, ನಂಜು ಮುಂತಾದ ಅನಾರೋಗ್ಯವೆಂಬುದು ಪ್ರತೀ ಮನೆಯಲ್ಲೂ ಇರುತ್ತದೆ.
  • ಈ ಅನಾರೋಗ್ಯವನ್ನು  ಶಮನ ಮಾಡಲು ಈ ಮರದ ಚೆಕ್ಕೆಯನ್ನು  ಹಿತ ಮಿತವಾಗಿ ಸೇವನೆ ಮಾಡಿ ಎಂಬುದಾಗಿ ಹಿರಿಯರು ವಾಡಿಕೆ ಮಾಡಿಟ್ಟಿದ್ದಾರೆ.

ಅನಾರೋಗ್ಯ ಉಂಟಾದಾಗ ಅದರ ಉಪಶಮನಕ್ಕೆ ನಮ್ಮ ಪ್ರಕೃತಿಯಲ್ಲಿ ಹಲವಾರು ಗಿಡ ಮೂಲಿಕೆಗಳು ಇವೆ. ಅದನ್ನು ನಾವು ಗುರುತಿಸಿ , ಸಂರಕ್ಷಿಸಿ, ಅದರ ಫಲ ಪಡೆಯಲು ಹಿರಿಯರು ಅದನ್ನು ಒಂದು ಸಂಪ್ರದಾಯವಾಗಿ ಆಚರಣೆಗೆ ತಂದಿದ್ದಾರೆ. ಇದರಲ್ಲಿ ಹೆಚ್ಚಿನವು ನಮಗೆ ಗೊತ್ತಿಲ್ಲ. ಒಟ್ಟಾರೆಯಾಗಿ ನಾವು ಹಿರಿಯರು ಮಾಡುತ್ತಿದ್ದರು, ನಾವೂ ಮಾಡಬೇಕು ಅಥವಾ ಇದು ನಮ್ಮ ಹೆಗ್ಗಳಿಕೆ ಎಂದು ಅದನ್ನು ಅನುಸರಿಸುತ್ತೇವೆ.

ಮದ್ದಾಲೆ ತೊಗಟೆ

 ಭಾರೀ ಔಷಧೀಯ ಗಿಡ:

  • ಮದ್ದಾಲೆ  ಇದರ ವೈಜ್ಞಾನಿಕ ಹೆಸರು Alstonia scholaris.
  •  ಈ  ಮರದ ಎಳೆ ಕಡ್ಡಿಯಲ್ಲಿ ಹಲ್ಲುಜ್ಜುವುದರಿಂದ ಹಲ್ಲು ನೋವು, ಕೀವು ಗುಣವಾಗುತ್ತದೆ ಎಂಬ ನಂಬಿಕೆಯೂ ಇದೆ.
  • ಇದರ ಚೆಕ್ಕೆಯನ್ನು  ಅರೆದು ಪೇಸ್ಟ್ ಮಾಡಿ ಹುಣ್ಣಿನ ಮೇಲೆ ಹಚ್ಚಿದರೆ ಹುಣ್ಣು (ಬ್ಯಾಕ್ಟೀರಿಯಾ ಮುಕ್ತವಾಗಿ) ಗುಣಮುಖವಾಗುತ್ತದೆ.
  • ಮೊದಲ ಹೆರಿಗೆಯ ಸಮಯದಲ್ಲಿ ತಾಯಿಯಂದಿರಿಗೆ ಹಾಲು ಹೆಚ್ಚಾಗಲು ಈ ಮರದ ಚೆಕ್ಕೆಯ ರಸ ಸಹಕಾರಿ.
  • ಇದನ್ನು ಬಾಣಂತಿಯರು ಸೇವಿಸುವುದರಿಂದ ಅವರಲ್ಲಿ ತಿನ್ನುವ ಆಶೆ ಹೆಚ್ಚುತ್ತದೆ.
  • ಇದರಿಂದ ನಿತ್ರಾಣ ಕಡಿಮೆಯಾಗುತ್ತದೆ.

ತೊಗಟೆ ತೆಗೆದು ಮರ ಟೊಳ್ಳು

  • ಈ ಮರಕ್ಕೆ ಕ್ಯಾನ್ಸರ್ ಗುಣ ಮಾಡುವ ಶಕ್ತಿಯೂ ಇದೆ ಎನ್ನಲಾಗುತ್ತದೆ.
  • ತುಂಬಾ ಕಹಿಯಾದ ಕಾರಣ ಇದನ್ನು ಆಗಾಗ ಸೇವಿಸುವುದನ್ನು ಇಚ್ಚೆ ಪಡುವುದಿಲ್ಲ.
  • ಅದಕ್ಕಾಗಿ ಈ ದಿನದಂದು ಸೇವಿಸಿದರೆ ಒಳ್ಳೆಯದು, ಅದಕ್ಕೆ ಸ್ವಲ್ಪ ಉಪ್ಪು, ಕರಿ ಮೆಣಸು ಸೇರಿಸಿದರೆ ಕಹಿ ಹೊಡೆದು ಹೋಗುತ್ತದೆ, ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ.
  • ಅದರ ರಸ ಅರೆದು ಕುಡಿಯಬೇಕೆಂದೇನೂ ಇಲ್ಲ.
  • ಚೆಕ್ಕೆಯನ್ನು ಜಗಿದರೂ ಸಾಕಾಗುತ್ತದೆ.
  • ಕಿಬ್ಬೊಟ್ಟೆ ಮತ್ತು ಹೊಟ್ಟೆ ಬಿಗಿತವನ್ನು  ಗುಣ ಮಾಡುವಲ್ಲಿ ಈ ಮರದ ತೊಗಟೆಯ ಹುಡಿ ಸಹಾಯಕ.
  • ಮಕ್ಕಳಿಗೆ ಈ ಮರದ ಚೆಕ್ಕೆಗೆ ಶುಂಠಿ ರಸ ಸೇರಿಸಿ ಸೇವಿಸಿದರೆ ಜ್ವರ ಉಪಶಮನವಾಗುತ್ತದೆ.
  • ತೀವ್ರ ತರದ ವಾತರೋಗ, ಮತ್ತು ಉಸಿರಾಟ ತೊಂದರೆಗೆ  ಈ ಮರದ ಚೆಕ್ಕೆಯ ಪೇಸ್ಟ್ ಔಷದಿಯಾಗಿದೆ.
  • ಇದು ತೆಲೆ ನೋವನ್ನೂ ಗುಣ ಪಡಿಸುತ್ತದೆ.
  • ಹೊಟ್ಟೆ ಹುಣ್ಣು stimulant on ulcers ನಿವಾರಣೆಗೂ ಇದು ಉಪಯುಕ್ತ. ಮರದ ಕಾಯಿಯೂ ಸಹ ಅಪಸ್ಮಾರ epilepsy ಕಾಯಿಲೆಗೆ ಔಷದಿ.

ಸಪ್ತ ಪರ್ಣಿ  ಮದ್ದಾಲೆಗೆ ಇನ್ನೊಂದು  ಹೆಸರು.

ಯಾಕೆ ಬೆಳಗ್ಗಿನ ಜಾವ ತೆಗೆಯಬೇಕು:

  • ಈ ಎಲ್ಲಾ ಔಷದೀಯ ಗುಣಗಳನ್ನು ಅರಿತೇ ನಮ್ಮ ಪೂರ್ವಜರು ವ್ಯಾದಿಗಳು ಇರಲಿ, ಇಲ್ಲದಿರಲಿ, ಮುಂಜಾಗರೂಕತೆಯಾಗಿ  ವರ್ಷಕ್ಕೊಮ್ಮೆ ಈ ಮರದ ಚೆಕ್ಕೆಯ ರಸವನ್ನು ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಎಲ್ಲರೂ ಸೇವಿಸಲಿ ಎಂದು ವರ್ಷದಲ್ಲಿ ಒಂದು ದಿನವನ್ನು  ನಿಗದಿ ಮಾಡಿದ್ದರು.
  • ಬೆಳಗ್ಗಿನ ಜಾವವೇ ಇದನ್ನು ತೆಗೆಯುವುದಕ್ಕೆ ಹೇಳಿದ್ದು ಮತ್ತೇನಕ್ಕೂ ಅಲ್ಲ.
  • ಆಗ ಮರದ ಎಲೆಗಳು ಸೂರ್ಯನ ಬಾಶ್ಪೀಭವನ ಕ್ರಿಯೆಯಲ್ಲಿ ತೊಡಗಿರುವುದಿಲ್ಲ.
  • ಆದ ಕಾರಣ ಸತ್ವಾಂಶಗಳು ತೊಗಟೆಯಲ್ಲಿ ಹೇರಳವಾಗಿರುತ್ತದೆ ಎಂಬ ಕಾರಣಕ್ಕೆ.

ಕತ್ತಲೆಯಲ್ಲಿ ಹೋಗಿ ಯಾವುದಾದರೂ ಮರದ ಚೆಕ್ಕೆ ತೆಗೆದು ಅನಾಹುತವಾಗುವುದನ್ನು ತಡೆಯಲು  ಬೆಳಗಾಗಿ ಸೂರ್ಯ  ಮೇಲೇರುವ ಮುನ್ನ ತೆಗೆದರೂ ತಪ್ಪಿಲ್ಲ. ಇದನ್ನು ಅಂದು ಅಲ್ಲದೆ ಬೇರೆ ದಿನದಲ್ಲೂ ಹಿತ ಮಿತವಾಗಿ ಸೇವಿಸಬಹುದು.
ಶಾಸ್ತ್ರ ಪ್ರಕಾರ ಗರಿಷ್ಟ 1 ಚಮಚ ಸೇವನೆ ಶಿಫಾರಿತ. ಲೋಟಗಟ್ಟಲೆ ಸೇವನೆ ಒಂದು ಪ್ಯಾಶನ್. ಈಗ ಈ ಮರದ ತೊಗಟೆ ಹುಡಿ ಮತ್ತು ಪೇಸ್ಟ್ ಆಧರಿತ ಆಯುರ್ವೇದ ಔಷಧಿಗಳು ಲಭ್ಯವಿದೆ.  ಈ ಮರ ಹೊಲದಲ್ಲಿ ಇದ್ದರೆ ಕಡಿಯಬೇಡಿ. ಇದರ ಹೂವು ಜೇನು ನೊಣಗಳಿಗೆ ಆಹಾರ. ಇದು ಸಿಡಿಲು ನಿರೋಧಕ ಎಂದೂ ಹೇಳುತ್ತಾರೆ.

Leave a Reply

Your email address will not be published. Required fields are marked *

error: Content is protected !!