ಕಡಿಮೆ ಬೆಲೆಯ ಉತ್ತಮ ಜೈವಿಕ ಗೊಬ್ಬರಗಳು.

ಕೃಷಿ ಪದ್ಧತಿಯನ್ನು ಸುಸ್ಥಿರಗೊಳಿಸಲು ರಾಸಾಯನಿಕ ಗೊಬ್ಬರಗಳ ಬಳಕೆ ಮತ್ತು ಅವುಗಳ ಮೇಲಿನ ಅವಲಂಬನೆಯು ದೀರ್ಘ ಕಾಲದವರೆಗೂ ಮುಂದುವರೆಯಲು ಅಸಾಧ್ಯ.  ಸುಸ್ಥಿರ ಕೃಷಿಗೆ  ಮಣ್ಣಿನ ಆರೋಗ್ಯ ಅತ್ಯಗತ್ಯ. ಇದನ್ನು ಕಾಪಾಡುವಲ್ಲಿ ಹಸಿರು ಎಲೆ ಗೊಬ್ಬರ, ಜೈವಿಕ ಮತ್ತು ಸಾವಯವ ಗೊಬ್ಬರಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಂದು ಹಲವಾರು ಖಾಸಗಿ ಜೈವಿಕ ಗೊಬ್ಬರ ಪೂರೈಕೆದಾರರು ಇದರ  ಸದುಪಯೋಗ  ಮಾಡಿಕೊಳ್ಳುತ್ತಿದ್ದಾರೆ. ಅದರೆ ಭಾರತೀಯ ತೋಟಗಾರಿಕಾ ಸಂಶೋಧನಾ  ಕೇಂದ್ರದಲ್ಲಿ ಇಂತಹ ಹಲವಾರು  ಸೂಕ್ಷ್ಮಾಣು ಜೀವಿಗಳ  ಉತ್ಪನ್ನಗಳನ್ನು ತಯಾರಿಕೆ ನಡೆಯುತ್ತಿದ್ದು, ಅರ್ಕಾ ಹೆಸರಿನಲ್ಲಿ ಇದು ಲಭ್ಯವಿದೆ.

  •  ಜೈವಿಕ ಗೊಬ್ಬರಗಳು ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಗುಣ ವಿಶೇಷತೆಯಿಂದ ಪ್ರಾಮುಖ್ಯತೆ ಪಡೆದಿರುತ್ತದೆ.
  • ಈ ಜೈವಿಕ ಗೊಬ್ಬರಗಳ ಬಗೆಗೆ ಸರಿಯಾದ ಮಾಹಿತಿ ಸಿಗದಿದ್ದರೆ ಕಾರಣದಿಂದ ಇದರ ಬಳಕೆ ಕಡಿಮೆಯಾಗುತ್ತಿರುತ್ತಿತ್ತು.

ಮಾರುಕಟ್ಟೆಯಲ್ಲಿ ಇಂದು ಬಹಳ ನಮೂನೆಯ ಜೈವಿಕ ಬೆಳೆ ಪೋಷಕಗಳು ರಾರಾಜಿಸುತ್ತಿವೆ. ಅಧಿಕ ಬೆಲೆ, ಪ್ರಚಾರ ಇವೆಲ್ಲಾ ತಂತ್ರಗಳಿಂದ ರೈತರನ್ನು ವಶೀಕರಣ ಮಾಡಲಾಗುತ್ತದೆ. ಆದರೆ ಇವೆಲ್ಲದರ ಮೂಲ ಇಲ್ಲಿದೆ. ಇದು ಬೆಲೆಯಲ್ಲಿ ಅಗ್ಗದ್ದು. ಗುಣಮಟ್ಟದಲ್ಲಿ ಉತ್ತಮವಾದದ್ದು.

ಇಲ್ಲಿದೆ ನಿಮಗೆ ಬೇಕಾದ ಜೈವಿಕ ಗೊಬ್ಬರ:

  •  ಜೈವಿಕ ಗೊಬ್ಬರ ಮತ್ತು ಇನ್ನಿತರ ಜೈವಿಕ ಉತ್ಪನ್ನಗಳ ಅವಶ್ಯಕತೆಯನ್ನು  ಪೂರೈಸುವಲ್ಲಿ  ಭಾರತ ಸರಕಾರದ ಹಲವು ಸಂಶೋಧನಾ ಕೇಂದ್ರಗಳು ಕೆಲಸವನ್ನು ಮಾಡುತ್ತಿವೆ.
  • ಇಂಥಹ ಒಂದು ಸಂಶೊಧನಾ ಸಂಸ್ಥೆ  ಬೆಂಗಳೂರಿನ ಐ.ಐ.ಹೆಚ್.ಆರ್. ಅರ್ಕಾ ಜೈವಿಕ ಗೊಬ್ಬರ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಉತ್ಕ್ರಷ್ಟ ತಂತ್ರಜ್ಞಾನದೊಂದಿಗೆ ಇಲ್ಲಿ  ಅಭಿವೃದ್ಧಿ ಪಡಿಸಲಾಗುತ್ತದೆ.
  • ಈ ತಂತ್ರಜ್ಞಾನವನ್ನು ಬಳಸಿ ಕೃಷಿ ವಿಜ್ಞಾನ ಕೇಂದ್ರ ಹಿರೇಹಳ್ಳಿಯು ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹ  (Arka microbial consortia)ಗೊಬ್ಬರವನ್ನು ತಯಾರಿಸಿ ರೈತರಿಗೆ ಅತ್ಯಂತ ಕಡಿಮೆ ದರದಲ್ಲಿ ತಲುಪಿಸುವ ವ್ಯವಸ್ಥೆಯನ್ನು ಮಾಡಿರುತ್ತದೆ.

ಮೈಕ್ರೋಬಿಯಲ್ ಕನ್ಸೋರ್ಶಿಯಾ ಎಂದರೇನು:

  • ಬೇರೆ ಬೇರೆ  ಬಗೆಯ ಜೀವಾಣುಗಳು ಇದ್ದು, ಇವು ಬೇರೆ ಬೇರೆ ಕಾರ್ಯಗಳನ್ನು ಮಾಡಬಲ್ಲವು.
  • ಕೆಲವು ಪೋಷಕವಾಗಿಯೂ ಇನ್ನು ಕೆಲವು ಕೀಟ ನಿಯಂತ್ರಕವಾಗಿಯೂ ಹಾಗೆಯೇ ರೋಗ ನಿಯಂತ್ರಕವಾಗಿಯೂ ಕೆಲಸ ಮಾಡುತ್ತವೆ.
  • ಈ ಬೇರೆ ಬೇರೆ  ಸೂಕ್ಷ್ಮಾಣು ಜೀವಿಗಳನ್ನು ( ಒಂದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ) ಒಂದು  ಮಾಧ್ಯಮದಲ್ಲಿ ಸೇರಿಸಿ ಮಾಡಿದ ಮಿಶ್ರಣಕ್ಕೆ ಮೈಕ್ರೋಬಿಯಲ್ ಕನ್ಸೋರ್ಶಿಯಾ ಎನ್ನುತ್ತಾರೆ.

ಸೂಕ್ಷ್ಮಾಣು ಜೀವಿಗಳ ಉಪಯೋಗಗಳು :

  •  ಸಾರಜನಕ ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ (Bio N P& Zn) ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ (ಅಜಟೋಬ್ಯಾಕ್ಟರ್ ಟ್ರೋಪಿಕಾಲಸ್, ಬೆಸಿಲ್ಲಸ್, ಆರ್ಯಭಟ ಮತ್ತು ಸುಡೋಮೋನಾಸ್ ಥಾಯ್ವಾನೆನ್ಸಿಸ್) ಕಾರ್ಯಕ್ಷಮತೆ ಹೊಂದಿರುತ್ತದೆ
  •  ಜೈವಿಕ ಸಮೂಹದ ಬಳಕೆಯಿಂದ ಒಟ್ಟಾರೆ ಪರಿಣಾಮ ಅಧಿಕಗೊಳ್ಳುತ್ತದೆ.
  •  ರೈತರು ಜೈವಿಕ ಗೊಬ್ಬರವನ್ನು ಬೀಜೋಪಚಾರ, ಮಣ್ಣಿಗೆ, ತೆಂಗಿನ ಸಿಪ್ಪೆಯ ಹುಡಿಗೆ, ಹಾಗೂ ಕೊಟ್ಟಿಗೆ ಗೊಬ್ಬರಕ್ಕೆ ಸೇರಿಸಿ ಸಂಖ್ಯೆಯಲ್ಲಿ ಅಭಿವೃದ್ದಿಪಡಿಸಿ ಬಳಕೆ ಮಾಡಬಹುದು.
  •  ರೈತರು ಸಾರಜನಕ ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ ಸೂಕ್ಷ್ಮಾಣು ಜೀವಿಗಳನ್ನು ಬೇರೆ ಬೇರೆಯಾಗಿ ಹಾಕುವ ಅವಶ್ಯಕತೆಯಿಲ್ಲ.
  • ಈ ಸಮೂಹ ಮಿಶ್ರಣದಲ್ಲಿ ಅದೆಲ್ಲವನ್ನೂ ಸೇರಿಸಲಾಗಿರುತ್ತದೆ.

ಬಳಕೆಯಿಂದ  ಪ್ರಯೋಜನ:

  •    ಬೀಜವು ಬೇಗ ಮೊಳೆಯುವಂತೆ ಮಾಡಿ ಸಸ್ಯದ ದೃಢತೆಯನ್ನು ಹೆಚ್ಚಿಸುತ್ತದೆ.
  •    ಶಿಫಾರಸ್ಸು ಮಾಡಿದ ಸಾರಜನಕ ಮತ್ತು ರಂಜಕಯುಕ್ತ ಗೊಬ್ಬರಗಳಲ್ಲಿ ಶೇ. 25 ರಷ್ಟು ಕಡಿಮೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
  •     ಕೃಷಿ ಬೆಳೆಗಳ ಇಳುವರಿಯಲ್ಲಿ ಶೇ. 10-17 ರಷ್ಟು ಹೆಚ್ಚಳವಾಗುತ್ತದೆ.

ಬೀಜೋಪಚಾರ ಬಳಸುವ ವಿಧಾನ :

  •   200 ಗ್ರಾಂ ಬೀಜವನ್ನು ಉಪಚರಿಸಲು 20 ಗ್ರಾಂನಷ್ಟು ಅರ್ಕಾ ಮೈಕ್ರೋಬಿಯಲ್ ಕನ್ಸಾರ್ಷಿಯಮ್‍ನ್ನು 30 ಮಿ.ಲೀ. ಅನ್ನದ ಗಂಜಿ / ಬೆಲ್ಲದ ನೀರಿನಲ್ಲಿ ಬೆರಸಿ ಬೀಜದೊಡನೆ ಚೆನ್ನಾಗಿ ಕಲಸಿ ಅರ್ಧ ಗಂಟೆ ನೆರಳಿನಲ್ಲಿ ಒಣಗಿಸಿ ಒಂದೇ ದಿನದಲ್ಲಿ  ಬಿತ್ತನೆ ಮಾಡಬಹುದು.

ತೆಂಗಿನ  ನಾರಿನಲ್ಲಿ ಬಳಕೆ:

  • 1 ಕೆ.ಜಿ. ಅರ್ಕಾ ಮೈಕ್ರೋಬಿಯಲ್ ಕನ್ಸಾರ್ಷಿಯಮ್‍ನ್ನು 200 ಮಿ.ಲೀ. ನೀರಿನಲ್ಲಿ ಬೆರೆಸಿ 1 ಟನ್ ತೆಂಗಿನ ನಾರಿಗೆ  ಮಿಶ್ರಣ ಮಾಡಿ ಸಮನಾಗಿ ಬೆರಸುವುದು.

ಕೊಟ್ಟಿಗೆ ಗೊಬ್ಬರಕ್ಕೆ ಸೇರಿಸುವ ಪದ್ಧತಿ :

  •  5 ಕೆ.ಜಿ. ಅರ್ಕಾ ಮೈಕ್ರೋಬಿಯಲ್ ಕನ್ಸಾರ್ಷಿಯಮ್‍ನ್ನು 500 ಕೆ.ಜಿ. ಕೊಟ್ಟಿಗೆ ಗೊಬ್ಬರದೊಡನೆ ಮಿಶ್ರಣ ಮಾಡಿ 1 ಎಕರೆ ಜಮೀನಿಗೆ ಉಪಯೋಗಿಸಬಹುದು.

ತೋಟಗಾರಿಕಾ ಬೆಳೆಗಳಿಗೆ ಬಳಸುವ ಪದ್ಧತಿ :

  •   1 ಕೆ.ಜಿ. ಅರ್ಕಾ ಮೈಕ್ರೋಬಿಯಲ್ ಕನ್ಸಾರ್ಷಿಯಮ್‍ನ್ನು 50 ಲೀ. ನೀರಿನಲ್ಲಿ ಬೆರಸಿ ಗಿಡದ ಬುಡಕ್ಕೆ ನೇರವಾಗಿ ಅಥವಾ ಶೋಧಿಸಿದ ನಂತರ ಹನಿ ನೀರಾವರಿ ಮೂಲಕ ಸೇರಿಸುವುದು.
  • ದ್ರವ ರೂಪದ ಮಿಶ್ರಣ ಆಗಿದ್ದಲ್ಲಿ ಅದನ್ನು 2 ಲೀ. ಮಿಶ್ರಣವನ್ನು 200 ಲೀ. ನೀರಿನಲ್ಲಿ ಮಿಶ್ರಣ ಮಾಡಿ ನೆಲಕ್ಕೆ  ಸಿಂಪಡಿಸಬಹುದು.
  • ಈ ಉತ್ಪನ್ನಗಳ ತಯಾರಿಕೆಗೆ ಕೆಲವು ಖಾಸಗಿ ಯವರಿಗೂ ಅನುಮತಿ ನೀಡಲಾಗಿದ್ದು, ಸಂಸ್ಥೆಯ ಮಾರ್ಗದರ್ಶನದಲ್ಲಿ ಇವರು ತಯಾರಿಸಿ ಒದಗಿಸುತ್ತಾರೆ.

ಲೇಖಕರು : ಪೂಜಾ ಎಸ್.ಪಿ., ಪಿ.ಹೆಚ್.ಡಿ. ಸಂಶೋಧನಾ ವಿದ್ಯಾರ್ಥಿ, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ   ಶಾಸ್ತ್ರ ವಿಭಾಗ., ಕೃ.ವಿ.ವಿ. ಬೆಂಗಳೂರು.   ಡಾ|| ಶ್ರೀನಿವಾಸ್ ಬಿ.ವಿ. ಮಣ್ಣು ವಿಜ್ಞಾನಿ., ಐ.ಸಿ.ಎ.ಆರ್., ಕೆ.ವಿ.ಕೆ., ಕಲಬುರ್ಗಿ.  ಮಾನಸ ಎಲ್.ಪಿ. ಮತ್ತು ಶೃತಿ ಎಂ.ಎಸ್., ಎಂ.ಎಸ್ಸಿ. (ಕೃಷಿ), ಕೃ.ವಿ.ವಿ. ಧಾರವಾಡ.

Leave a Reply

Your email address will not be published. Required fields are marked *

error: Content is protected !!