ಯಾವುದೇ ವೃತ್ತಿಯಲ್ಲಿ ನಾವು ಮಾಡಿದ ಕೆಲಸವನ್ನು ಒಮ್ಮೆ ತಿರುಗಿ ನೋಡಿದರೆ ನಮಗೆ ತಪ್ಪು ಯಾವುದು ಸರಿ ಯಾವುದು ಎಂದು ತಿಳಿಯುತ್ತದೆ. ಕೃಷಿಯಲ್ಲಿ ನಾವು ಮಾಡಿದ ನಾಲ್ಕು ಐದು ವರ್ಷಗಳ ಬೆಳೆ ಕ್ರಮವನ್ನು ಅಭ್ಯಸಿದರೆ ನಮಗೆ ಹೇಗೆ ಮಾಡಿದರೆ ಉತ್ತಮ ಎಂಬುದು ತಿಳಿಯುತ್ತದೆ.
ನಾವು ಮಾಡುವ ವೃತ್ತಿಯಲ್ಲಿ ಯಾವಾಗ ಏನು ಮಾಡಿದ್ದೇವೆ ಅದರ ಫಲಿತಾಂಶ ಏನಾಗಿದೆ ಎಂಬುದನ್ನು ಪರಾಂಬರಿಸಿ ಗಮನಿಸುತ್ತಿದ್ದರೆ, ತಪ್ಪು ಎಲ್ಲಿ ಅಗಿದೆ, ಸರಿ ಮಾಡುವುದು ಹೇಗೆ ಎಂದು ನಮಗೇ ತಿಳಿಯುತ್ತದೆ. ಕೃಷಿಯೂ ಹಾಗೆಯೇ? ನಮ್ಮ ಕೃಷಿ ವೃತ್ತಿ ಜೀವನದಲ್ಲಿ ಪ್ರತೀ ವರ್ಷ ಪ್ರತೀ ದಿನ ನಾವು ಮಾಡಿದ ಕೃಷಿ ಚಟುವಟಿಕೆಗಳ ದಾಖಲೆ ನಮ್ಮಲ್ಲಿದ್ದರೆ ನಮಗೆ ಎಲ್ಲಾ ಚಿತ್ರಣವೂ ಸಿಗುತ್ತದೆ.
- ಕೃಷಿ ಎಂಬುದು ಒಂದು ವೃತ್ತಿ. ಇಲ್ಲಿ ಆದರೆ ಆಯಿತು, ಹೋದರೆ ಹೋಯಿತು ಎಂದು ಒಟ್ಟಾರೆ ಮಾಡುವುದಲ್ಲ.
- ಎಲ್ಲವನ್ನೂ ಲೆಕ್ಕಾಚಾರದಲ್ಲಿ ಮಾಡುತ್ತಾ ಬರಬೇಕು. ಹಾಗೆಂದು ಜಿಪುಣತನವಲ್ಲ.
- ಪ್ರತೀಯೊಂದರಲ್ಲೂ ದಾಖಲೆಗಳನ್ನು ಇಟ್ಟುಕೊಂಡು (ದಿನಚರಿ ಬರೆದಿಟ್ಟುಕೊಂಡು) ಕೃಷಿ ಮಾಡಿದರೆ ಎಲ್ಲಿ ತಪ್ಪಿದ್ದೇವೆ, ಎಲ್ಲಿ ಸರಿಪಡಿಸಬೇಕು ಎಂಬುದನ್ನು ಯಾರಲ್ಲೂ ಕೇಳದೆ ನಾವೇ ಮಾಡಿಕೊಳ್ಳಬಹುದು.
- ನಾವು ಕೃಷಿ ಮಾಡುವಾಗ ಕೆಲವೊಮ್ಮೆ ಸರಿಯಾದ ಬೆಳೆ ಕ್ರಮವನ್ನೇ ಅನುಸರಿಸಿರುತ್ತೇವೆ.
- ಆದರೆ ನಮಗೆ ಏನು ಮಾಡಿ ಉತ್ತಮ ಇಳುವರಿ ಬಂದಿದೆ ಎಂಬುದು ಮರೆತು ಹೋಗಿರುತ್ತದೆ.
- ಆ ಸಮಯದಲ್ಲಿ ಯಾರಾದರೂ ಒಬ್ಬ ತಲೆಗೆ ಹುಳ ಬಿಡುವವ ಸಿಗುತ್ತಾನೆ.
- ನಮ್ಮ ಸರಿಯಾದ ಬೆಳೆ ಕ್ರಮ ಬಿಟ್ಟು ಅವರ ಮಾತಿನಂತೆ ಹೋಗುತ್ತೇವೆ.
- ಆಗ ಬೆಳೆ ಕೈ ಕೊಡುತ್ತದೆ. ಮತ್ತೆ ಇನ್ನೊಬ್ಬ ಸಿಗುತ್ತಾನೆ.
- ಅಲ್ಲಿಯೂ ಹಾಗೆ ಆಗುತ್ತದೆ. ಇದೆಲ್ಲರದ ಬದಲು ನಮ್ಮಲ್ಲಿ ಯಾವ ವರ್ಷ ಉತ್ತಮ ಇಳುವರಿ ಬಂದಿದೆ.
- ಆ ವರ್ಷ ಯಾವ ಬೇಸಾಯ ಕ್ರಮ ಅನುಸರಿಸಿದ್ದೇವೆ ಎಂಬುದು ಗೊತ್ತಿದ್ದರೆ ನಮಗೆ ಬೇರೆಯವರ ಮಾತನ್ನು ಕೇಳಬೇಕಾಗಿ ಬರುವುದಿಲ್ಲ.
- ಪ್ರತೀಯೊಂದು ತಪ್ಪುಗಳ ಹಿಂದೆ ನಮ್ಮ ಅಜಾಗರೂಕತೆ ಮತ್ತು ಉದಾಸೀನತೆ ಇದ್ದೇ ಇರುತ್ತದೆ.
ನೀವು ಯಾರಾದರೂ ಒಬ್ಬ ಯಶಸ್ವೀ ಕೃಷಿಕರನ್ನು ಮಾತನಾಡಿಸಿ. ಅವರು ತಮ್ಮ ವೃತ್ತಿಯಲ್ಲಿ ಈ ತನಕ ಮಾಡಿದ ಎಲ್ಲಾ ಪ್ರಯೋಗ, ಅದರ ಫಲಿತಾಂಶಗಳನ್ನು ದಾಖಲಿಸಿಕೊಂಡಿರುತ್ತಾರೆ. ಇಂಥಹ ಬೆಳೆಗೆ ಹೀಗೆಯೇ ಪೊಷಣೆ ಮಾಡಬೇಕು. ಹೀಗೆ ಮಾಡಿದರೆ ಮಾತ್ರ ಅದು ಫಲ ನೀಡುತ್ತದೆ ಎಂದು ತಿಳಿದುಕೊಂಡಿರುತ್ತಾರೆ. ಅವರು ಸಿಕ್ಕ ಸಿಕ್ಕವರ ಅಭಿಪ್ರಾಯಗಳನ್ನು ಕೇಳುವುದಿಲ್ಲ. ಅವರ ಬಳಿಗೆ ಯಾವ ಗೊಬ್ಬರ ಮಾರಾಟಗಾರ ಹೋದರೂ ಅಲ್ಲಿ ಅವನಿಗೆ ವ್ಯಾಪಾರ ಆಗುವುದಿಲ್ಲ.
- ಅವರು ತಮ್ಮ ವೃತ್ತಿಗೆ ಬೇಕಾದ ಎಲ್ಲಾ ಮಾಹಿತಿಗಳನ್ನೂ ಅನುಭವದಲ್ಲಿ ಮತ್ತು ಸಂಬಂಧಿಸಿದ ತಜ್ಞರಲ್ಲಿ ಕೇಳಿ ತಿಳಿದುಕೊಂಡಿರುತ್ತಾರೆ.
- ಇವರಲ್ಲಿ ಪ್ರತೀಯೋಂದಕ್ಕೂ ದಾಖಲೆಗಳಿರುತ್ತವೆ.
- ನಾವೂ ಇದನ್ನು ಮಾಡಬಹುದು. ಇದು ಬಹಳಷ್ಟು ಉತ್ತಮ ಪ್ರತಿಫಲವನ್ನು ಕೊಡುತ್ತದೆ.
ಏನು ಮಾಡಬೇಕು?
- ಕೃಷಿಕರಾದವರು ತಾವು ಏನು ಕೃಷಿ ಮಾಡಿದರೂ ಅದಕ್ಕೆ ದಾಖಲೆ ಇಡಬೇಕು.
- ದಾಖಲೆ ಎಂದರೆ ಬೆಳೆಗೆ ಸಿದ್ದತೆ ಮಾಡಿದಂದಿನಿಂದ ಕೊಯಿಲಿನ ತನಕದ ಎಲ್ಲಾ ಕೃಷಿ ಚಟುವಟಿಕೆಗಳ ದಾಖಲೆ.
- ಧೀರ್ಘಾವಧಿ ತೋಟಗಾರಿಕಾ ಬೆಳೆಗಳಲ್ಲಿ ವರ್ಷದಲ್ಲಿ ನಾವು ಮಾಡುವ ಎಲ್ಲಾ ಕೆಲಸಗಳನ್ನೂ ದಾಖಲಿಸಬೇಕು.
- ಪ್ರತೀ ದಿನದ ವಾತಾವರಣ ಬಿಸಿಲು, ಮಳೆ, ಹಿಮ, ಹಾಕಿದ ಗೊಬ್ಬರ, ಗೊಬ್ಬರ ಹಾಕಿದ ವಿಧಾನ, ಕೀಟನಾಶಕ, ರೋಗ ನಾಶಕ ಹಾಕಿದ ದಿನಾಂಕ ಪ್ರಮಾಣ , ಆ ವರ್ಷ ಬಂದ ಇಳುವರಿ ಎಲ್ಲವನ್ನೂ ಬರೆದು ಇಟ್ಟುಕೊಳ್ಳಿ.
- ಇದನ್ನು ಪ್ರತೀ ವರ್ಷ ಮಾಡಿ. ನಿಮಗೆ ಆಗ ಅರಿವಿಗೆ ಬರುತ್ತದೆ, ಯಾವ ವರ್ಷ ನಾವು ಮಾಡಿದ ಕೃಷಿಯಲ್ಲಿ ಉತ್ತಮ ಇಳುವರಿ ಬಂದಿದೆ ಎಂದು.
- ಸಾಧ್ಯವಾದರೆ ಮರ ಮರಕ್ಕೂ ಇಳುವರಿಯ ಲೆಕ್ಕಾಚಾರ ಇಟ್ಟುಕೊಳ್ಳಿ
- ಆದೇ ಕ್ರಮವನ್ನು ಚಾಚು ತಪ್ಪದೆ ಮುಂದುವರಿಸಿದರೆ ನೀವು ಪಾಸ್ ಆಗುತ್ತೀರಿ.
ನಾವು ಮಾಡುವ ತಪ್ಪುಗಳು:
- ಬಹಳಷ್ಟು ರೈತರು ಅನಪಥ್ಯಗಳಲ್ಲಿ ( ಸಭೆ ಸಮಾರಂಭಗಳು) ಹರಟೆ ಹೊಡೆಯುವಾಗ ಕಾಲಹರಣಕ್ಕಾಗಿ ಮಾತಾಡುವ ಕೆಲವು ವಿಚಾರಗಳನ್ನು ಗಂಭೀರ ವಿಷಯವಾಗಿ ತೆಗೆದುಕೊಂಡು ಪ್ರಯೋಗ ಮಾಡಲು ಮುಂದಾಗುತ್ತಾರೆ.
- ಯಾರೋ ಒಬ್ಬರು ಹೇಳುತ್ತಾರೆ, ನಾನು ಈ ವರ್ಷ ಈ ಗೊಬ್ಬರ ಹಾಕಿದ್ದೇನೆ.
- ಈ ತನಕ ನನ್ನ ಜೀವಮಾನದಲ್ಲಿ ಕಂಡಿರದ ಇಳುವರಿ ಪಡೆದಿದ್ದೇನೆ ಎಂದರೆ ಸಾಕು ಅಲ್ಲಿರುವ ಎಲ್ಲರಿಗೂ ಆ ವಿಚಾರ ಹುಳವಾಗಿ ಮೆದುಳು ಸೇರಿಕೊಳ್ಳುತ್ತದೆ.
- ಅದನ್ನು ಪಾಲಿಸಲು ಮುಂದಾಗುತ್ತಾರೆ.
- ಅವನ ಹೊಲ, ಆ ವರ್ಷದ ಕಾಲ ಸ್ಥಿತಿಗೆ ಅನುಗುಣವಾಗಿ ಇದು ಫಲ ಕೊಡಲೂ ಬಹುದು. ಕೈಕೊಡಲೂ ಬಹುದು.
- ಹೀಗೆ ನಾವು ಪ್ರತೀ ಸಾರಿಯೂ ಒಬ್ಬೊಬ್ಬರನ್ನು ಅನುಸರಿಸುತ್ತಾ ಹೋಗುತ್ತೇವೆ.
- ನಮ್ಮದೇ ಆದ ಯಾವ ಜ್ಞಾನ ಅಥವಾ ಪ್ರಯೋಗಗಳನ್ನು ಮಾಡುವುದೇ ಇಲ್ಲ.
- ನಮ್ಮ ಕೃಷಿ ವಿಧಾನದ ದಾಖಲೆಯಲ್ಲಿ ಉತ್ತಮ ಇಳುವರಿ ಬಂದದಿದ್ದರೆ ಅದೇ ಉತ್ತಮ ಕೃಷಿ ವಿಧಾನ ಅಲ್ಲವೇ? ಯಾಕೆ ನಾವು ಅದನ್ನು ಗಮನಿಸುವುದಿಲ್ಲ.?
ಕಿವಿ ಹಿತ್ತಾಳೆ ಆದರೆ ಖಂಡಿತಾ ಸೋಲುತ್ತೀರಿ:
- ಕೃಷಿಯಲ್ಲಿ ಅನುಭವ ಇಲ್ಲದಿದ್ದರೆ ಅನುಭವ ಇರುವವರ ಸಲಹೆಯನ್ನು ಹಣಕೊಟ್ಟು ಪಡೆಯಿರಿ.
- ಆಗ ಅವರು ತಮ್ಮ ಸಲಹೆಗಳಿಗೆ ಬದ್ದರಾಗಿ ಇರಬೇಕಾಗುತ್ತದೆ.
- ಅಲ್ಲಿ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿ ಅಧಿಕ ಇಳುವರಿ ಕೊಡಬಲ್ಲ ತಂತ್ರಜ್ಞಾನ ಕೊಡುವವರ ಜ್ಞಾನವನ್ನು ನಾವು ಉಚಿತವಾಗಿ ಪಡೆಯುವ ಹವ್ಯಾಸವನ್ನು ಬಿಡಬೇಕು.
- ಹಾಗೆಂದು ಅದು ಶಾಶ್ವತ ವ್ಯವಸ್ಥೆ ಅಲ್ಲ. ಒಂದೆರಡು ಬಾರಿ ಕನ್ಸಲ್ಟೆಂಟ್ ಗಳ ಸಲಹೆ ಪಡೆದು ಅದನ್ನು ನಾವು ಅರ್ಥೈಸಿಕೊಂಡರೆ ನಂತರ ನಮಗೆ ಅದು ಗೊತ್ತಾಗಬೇಕು.
- ಉಚಿತ ಸಲಹೆಗಳು, ಗುರುತು ಪರಿಚಯ ಇಲ್ಲದ ಗೊಬ್ಬರ ಮಾರಾಟಗಾರರ ಸಲಹೆಯನ್ನು ಪಡೆದರೆ ಆವರು ಕೊಡುವ ಸಲಹೆ ಹೇಗಿರಬಹುದು?
- ಅಧಿಕ ಇಳುವರಿ ಪಡೆಯುವುದಕ್ಕೆ ಕೇವಲ ಗೊಬ್ಬರ ಕೊಡುವುದು ಒಂದೇ ಪರಿಹಾರ ಅಲ್ಲ.
- ಗೊಬ್ಬರ ಹಾಕುವ ವಿಧಾನ ಮತ್ತು ಕಾಲಾವಧಿ ಅತೀ ಮುಖ್ಯ.
- ಬೆಳೆಗ್ಗೆ ಊಟ ಮಾಡುವುದನ್ನು ಬೆಳಗ್ಗೆಯೇ ಉಂಡರೆ ಅದರ ಫಲ ಹೆಚ್ಚು. ಅದರಲ್ಲೂ ಸಮತೋಲನ ಆಹಾರ ಅತೀ ಮುಖ್ಯ.
- ಯಾವಾಗಲೂ ಬೆಳೆಗ್ಗೆ ಊಟ ಮಾಡುವವರು ಒಂದು ದಿನ ಮಾಡದಿದ್ದರೆ ಅಂದಿನ ದಿನದಲ್ಲಿ ಆಗುವ ದೈಹಿಕ ಸಮಸ್ಯೆಯನ್ನು ನಾವು ಗಮನಿಸುತ್ತೇವೆ.
- ಹಾಗೆಯೇ ಸಸ್ಯಗಳಿಗೂ ಸಹ.
- ನಾವು ಮಾಡುವ ನೀರಾವರಿ ಸಹ ಇಳುವರಿ ಕಡಿಮೆಯಾಗಲು ಪ್ರಮುಖ ಕಾರಣವಾಗುತ್ತದೆ.
- ಹಿತ ಮಿತ ನೀರಾವರಿ, ಮಣ್ಣಿನ ಫಲವತ್ತತೆ, ಮತ್ತು ಕಾಲಬದ್ದ ಬೇಸಾಯ ಕ್ರಮಗಳಿಂದ ನಾವು ಉತ್ತಮ ಇಳುವರಿ ಪಡೆಯಲು ಸಾಧ್ಯ.
ಹೆಚ್ಚು ಇಳುವರಿಗೆ ಇದು ಅಗತ್ಯ:
- ಬೆಳೆ ಬೆಳೆಸುವ ಪ್ರತೀಯೊಬ್ಬರೂ ತಮ್ಮ ತೋಟ , ಹೊಲದಲ್ಲಿ ನಿತ್ಯ ಒಡಾಟ ಮಾಡುತ್ತಿದ್ದರೆ ಖಂಡಿವಾಗಿಯೂ ಹೆಚ್ಚು ಇಳುವರಿ ಬರುತ್ತದೆ.
- ಕೀಟ ರೋಗಗಳೂ ಕಡಿಮೆಯಾಗುತ್ತವೆ.
- ರಜಾ ಕಾಲದ ಕೃಷಿಕರು ವಾರದಲ್ಲಿ ಒಂದು – ಎರಡು ದಿನ ತೋಟಕ್ಕೆ ಬಂದರೆ ಅಲ್ಲೇ ಹೆಚ್ಚಿನ ಕಾಲಾವಧಿಯನ್ನು ವ್ಯಯಿಸುತ್ತಾರೆ.
- ಅಂತವರಲ್ಲಿ ಎಷ್ಟೊಂದು ಉತ್ತಮ ಇಳುವರಿ ಬರುತ್ತದೆ ಎಂಬುದನ್ನು ನಾವೆಲ್ಲಾ ಗಮನಿಸಿರುತ್ತೇವೆ.
- ಹೆಚ್ಚು ಹೆಚ್ಚು ತೋಟದಲ್ಲಿ ಓಡಾಡಿ, ಬೆಳೆಯನ್ನು ಗಮನಿಸುತ್ತಾ ಇರುವುದಕ್ಕೆ ಖರ್ಚು ಇಲ್ಲ.
- ಇದನ್ನು ಮಾಡುವ ಮೂಲಕ ಫಲಿತಾಂಶವನ್ನು ಗಮನಿಸಿರಿ.
- ಹೊಲದಲ್ಲಿ ಸುತ್ತಾಡುವಾಗ ಬರೇ ಸುತ್ತಾಡುವುದಲ್ಲ. ಎಲ್ಲವನ್ನೂ ತೀರಾ ಹತ್ತಿರದಿಂದ ಗಮನಿಸುತ್ತಾ ಇರಬೇಕು.
ರೈತರು ಬುದ್ಧಿವಂತರಾಗಬೇಕು. ಬೆಳೆ ಏನು, ಅದಕ್ಕೆ ಎಷ್ಟು ಖರ್ಚು ಮಾಡುತ್ತೇವೆ, ಅದರಿಂದ ಎಷ್ಟು ಉತ್ಪತ್ತಿ ಬರುತ್ತದೆ ಎಂಬ ಲೆಕ್ಕಾಚಾರ ಮಾಡಿಕೊಂಡು ಬೆಳೆ ನಿರ್ವಹಣೆ ಮಾಡಬೇಕು. ನಾವೆಲ್ಲಾ ಖಾಸಗಿ ಎಸ್ಟೇಟ್ ಗಳನ್ನು ನೋಡಿದವರು. ಅಲ್ಲಿ ಅವರು ಹೇಗೆ ನಿರ್ವಹಣೆ ಮಾಡಿ ಅಧಿಕ ಫಸಲು ಪಡೆಯುತ್ತಾರೆ, ಹಾಗೆಯೇ ನಾವೂ ಆಗಬೇಕು.