1 ಎಕ್ರೆಗೆ 2600 ಫಲ ಕೊಡುವ ಬೆಳೆಗಳು – ನಂಬುತ್ತೀರಾ?

ಅಮಾನುಲ್ಲಾ ಅವರ ತೋಟ

ಹೌದು, ನಂಬಿಕೆ ಬಾರದಿದ್ದರೆ ಒಮ್ಮೆ ಶಿವಮೊಗ್ಗ ಜಿಲ್ಲೆ , ಸಾಗರ ತಾಲೂಕು, ಮಂಕಳಲೆ ಗ್ರಾಮದ ಓರ್ವ ಕೃಷಿಕ, ಶ್ರೀ ಅಮಾನುಲ್ಲಾ ಖಾನ್ ಇವರ   ಹೊಲಕ್ಕೊಮ್ಮೆ ಭೇಟಿ ಕೊಡಿ. ಸುಮಾರು  20 ಎಕ್ರೆಯ ಇವರ ಹೊಲದಲ್ಲಿ 50,000 ಕ್ಕೂ ಹೆಚ್ಚಿನ ಫಲ ಕೊಡುವ ಬೆಳೆಗಳಿವೆ. ಅಂದರೆ ಎಕ್ರೆಗೆ 2600 ಗಿಡಗಳು. ಇದು ಬಹುಶಃ ನಾವು ಯಾರೂ ಕಲ್ಪನೆ ಸಹ ಮಾಡಲಾಗದ ಕೃಷಿ ಕ್ಷೇತ್ರ ಎಂದರೆ ಅತಿಶಯೋಕಿಯಲ್ಲ. ಅದಕ್ಕಾಗಿಯೇ ಈ ಹೊಲವನ್ನು ನೋಡಿದರೆ ನಾವು ವಿಯೆಟ್ನಾಂ ದೇಶದ ಕರಿಮೆಣಸು ಕೃಷಿ ನೋಡಬೇಕಾಗಿಲ್ಲ ಎನ್ನುವುದು.

ಅಂದಿನ ಶಿವಮೊಗ್ಗ ಜಿಲ್ಲೆಯ ಚೆನ್ನಗಿರಿಯಲ್ಲಿ ಕೂಲಿ ಮಾಡುವಂತಹ ಕಡು ಬಡತನದ ಕುಟುಂಬದಲ್ಲಿ ಹುಟ್ಟಿ, ಕೂಲಿಗಾಗಿ ತನ್ನ 10ರ ವಯಸ್ಸಿನಲ್ಲೇ ಚಿಕ್ಕಮಗಳೂರು ಜಿಲ್ಲೆಯ ಕಳಸದ ಸಮೀಪದ ಒಂದು ಕಾಫೀ ತೋಟವನ್ನು ಸೇರಿಕೊಂಡರಂತೆ. ಅಲ್ಲಿ ಸುಮಾರು 30 ವರ್ಷಗಳ ಕಾಲ ಕೆಲಸಮಾಡಿ ನಂತರ 1994 ಸುಮಾರಿಗೆ ಉತ್ತರ ಕನ್ನಡ ಜಿಲ್ಲೆ ಬನವಾಸಿಯ ಅನನಾಸಿನ ಬೆಳೆಯ ರಾಜ ಎಂದೇ ಹೆಸರುವಾಸಿಯಾಗಿದ್ದ ಶ್ರೀಯುತ ಅಬ್ದುಲ್ ರೌಫ್ ಸಾಹೇಬ್ ಇವರ ಜೊತೆಗೆ ಕೆಲಸಕ್ಕಾಗಿ ಸೇರಿಕೊಂಡರು.

  • ಇವರ ಅದೃಷ್ಟ ರೇಖೆ ಬದಲಾದದ್ದು ಇಲ್ಲಿಂದ. ಅದು ರವುಫ್ ಸಾಹೇಬರ ಕೈಗುಣವೇ ಹಾಗೆ .
  • ಇಂತಹ ಹಲವಾರು ಜನ ಇಂದು ಉತ್ತಮ ಕೃಷಿಕರಾಗಿ ಬೆಳೆಯಲು ಅವರ ಆಶೀರ್ವಾದ ಇತ್ತು.  
  • ತಾನೂ ಬೆಳೆಯುವುದರೊಂದಿಗೆ  ಬೆಳೆಯಬೇಕೆಂಬ ಮನಸ್ಸುಳ್ಳ ಇತರರನ್ನೂ ಬೆಳೆಸುವ ಮನೋಭಾವನೆ ರವೂಫ್ ಸಾಹೇಬರದ್ದು.
  • ಅವರ ಗರಡಿಯಲ್ಲಿ ಬೆಳೆದವರೇ ಅಮಾನುಲ್ಲಾ.
  • ಆ ಸಮಯದಲ್ಲಿ ಲೀಸ್ ನಲ್ಲಿ  ಜಾಗ ಪಡೆದು ಅನನಾಸು, ಶುಂಠಿ ಬೆಳೆ ಮಾಡುತ್ತಾ ಅದರಲ್ಲಿ ಸಂಪಾದನೆಯನ್ನು ಮಾಡಿ ಸಾಗರ ಪಟ್ಟಣದ ಸಮೀಪವೇ ಇರುವ ಹಳ್ಳಿ ಮಂಕಳಲೆ ಎಂಬಲ್ಲಿ ಈ 20 ಎಕ್ರೆ ಭೂಮಿ ಖರೀದಿಸಿದರು.
  • ತನ್ನ ಜೀವಮಾನದ ಕೃಷಿ ಅನುಭವವನ್ನು ಈ ಕೃಷಿ ಕ್ಷೇತ್ರದೊಳಗೆ ಮಾಡಿದರು.
  • ಇಂದು ಇವರ ಕೃಷಿ ಕ್ಷೇತ್ರ ನಾವು ಎಲ್ಲೂ ಕಾಣಲಾರದಂತಹ ಮಾದರಿ ಕೃಷಿ ಕ್ಷೇತ್ರವಾಗಿ ಬೆಳೆದಿದೆ.
  • ಒಂದು ಸರಕಾರೀ ಸ್ವಾಮ್ಯದ ಬೆಳೆ ಪ್ರಾತ್ಯಕ್ಷಿಕಾ ತಾಣವೂ ಸಹ ಇಂತಹ  ಕೃಷಿ ಪಾಠವನ್ನು ತೋರಿಸಲಾರದು.
  • ಇಲ್ಲಿ ನೀವು ಭೇಟಿ ಕೊಟ್ಟರೆ ಹೊಲದ ಮಾಲಿಕರು ಇದರ ವಿಷಯ ಹೇಳಬೇಕಾಗಿಲ್ಲ. ಇದುವೇ ನಿಮಗೆ ಪೂರ್ಣ ವಿವರವನ್ನು ತೋರಿಸುತ್ತದೆ.
ಫಲ ಕೊಡುವ ಬೆಳೆಗಳು

ಏನೆಲ್ಲಾ ಬೆಳೆಗಳಿವೆ:

  • ಈ ಭೂಮಿಯನ್ನು ಇವರು ಸುಮಾರು 15 ವರ್ಷದ ಹಿಂದೆ ಖರೀದಿ ಮಾಡಿದ್ದಾರೆ.
  • ಭೂಮಿ ಖರೀದಿ ಮಾಡಿ  ಅಲ್ಲಿ ಪೂರ್ವ ನಿರ್ಧರಿತ ಬೆಳೆ ಯೋಜನೆಯಂತೆ ಎಕ್ರೆಗೆ 360 ಸಂಖ್ಯೆಯಲ್ಲಿ  ಗಿಡದಿಂದ ಗಿಡಕ್ಕೆ 6 ಅಡಿ, ಸಾಲಿನಿಂದ ಸಾಲಿಗೆ 20 ಅಡಿ ಅಂತರವನ್ನಿಟ್ಟು  ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದಾರೆ. (2015 ನೇ ಇಸವಿಯಲ್ಲಿ ಈ ತೋಟ ಹೀಗಿತ್ತು)
  • ಅಡಿಕೆ ಗಿಡಗಳಿಗೆ ನಾಲ್ಕು ವರ್ಷ ಪೂರ್ಣವಾಗುತ್ತಿದ್ದಂತೆ ಮಧ್ಯಂತರದಲ್ಲಿ ಮಿಶ್ರ ಬೆಳೆಗೆ ಅಡಿಪಾಯ ಹಾಕಿದ್ದಾರೆ.  
  • 2013 ನೇ ಇಸವಿಯಲ್ಲಿ ಅಡಿಕೆ ಮರಗಳ ಮಧ್ಯಂತರದಲ್ಲಿ 10 ಅಡಿ ಅಂತರದಲ್ಲಿ ಸಿಲ್ವರ್ ಸಸಿಗಳನ್ನು ನೆಟ್ಟರು.
  • 2014 ನೇ ಇಸವಿಯಲ್ಲಿ ಸಿಲ್ವರ್ ಸಸಿ ಬುಡದಲ್ಲಿ  ಮೆಣಸನ್ನೂ ನಾಟಿ ಮಾಡಿದರು.
  • ಇಷ್ಟೇ ಸಾಲದೆ ಉಳಿದ ಖಾಲಿ ಸ್ಥಳದಲ್ಲಿ 6X5 ಅಂತರದಲ್ಲಿ ಅರೇಬಿಕಾ ಕಾಫಿಯನ್ನೂ ನಾಟಿ ಮಾಡಿದರು. ( ಚಿತ್ರವನ್ನು ಕಾಣಬಹುದು)
  • ಇವೆಲ್ಲಾ ಬೆಳೆಗಳು ಇಂದು ಇವರ ಹೊಲದಲ್ಲಿ ಎಲ್ಲವೂ ಯಾವ ಸಮಸ್ಯೆಯೂ ಇಲ್ಲದೆ ಉತ್ತಮ ಇಳುವರಿ ಕೊಡುತ್ತಿವೆ.
  • ಇವರ ಹೊಲದಲ್ಲಿ  ಸ್ವಲ್ಪ ಸಹ ಜಾಗವನ್ನು ಖಾಲಿ ಬಿಡಲಾಗಿಲ್ಲ. 
  • ಕೃಷಿ ಭೂಮಿಯ ಉತ್ಪಾದಕತೆಯನ್ನು ನಗದೀಕರಣ ಮಾಡುವುದು ಎಂದರೆ ಹೀಗೆ ಎನ್ನಬಹುದು.
  • ಇಲ್ಲಿರುವ ಅಡಿಕೆ ಮರಗಳಿಗೆ ಈಗ 12 ವರ್ಷ ದಾಟಿದೆ.
  • ಕಾಫಿ ಕರಿಮೆಣಸುಗಳಿಗೆ 7 ವರ್ಷ ಭರ್ತಿಯಾಗಿದೆ. ಕಾಫಿ ನೆಟ್ಟ ಎರಡನೇ ವರ್ಷ ಫಸಲಿಗೆ ಪ್ರಾರಂಭವಾಗಿದೆ.
  • ಮೆಣಸು ಸಹ ಎರಡನೇ ವರ್ಷಕ್ಕೆ ಫಸಲಿಗೆ ಪ್ರಾರಂಭವಾಗಿದೆ.
  • ಅಡಿಕೆ 2015 ನೇ ಇಸವಿಯಲ್ಲೇ ಹೂ ಗೊಂಚಲು ಬಿಡಲು ಪ್ರಾರಂಭವಾಗಿದ್ದು, ಈಗ ಸಾಧಾರಣ ಮಟ್ಟಿಗೆ ಮರವೊಂದರ ಸುಮಾರು 1.5 ಕಿಲೋ ಅಡಿಕೆಯ ಇಳುವರಿ ಕೊಡುತ್ತಿವೆ.
  • ಕಾಫೀ, ಕರಿಮೆಣಸು ಭರ್ಜರಿ ಇಳುವರಿಯನ್ನು ಕೊಡುತ್ತಿವೆ.
  • ಒಂದು ಕಾಫೀ ಗಿಡ 2 ಕಿಲೋ ಗೂ ಹೆಚ್ಚು ಪಾರ್ಚ್ ಮೆಂಟ್ ಕಾಫಿಯನ್ನೂ .
  • ಒಂದು ಮೆಣಸು ಸರಾಸರಿ 8 ಕಿಲೊ ಒಣ ಮೆಣಸಿನ ಇಳುವರಿಯನ್ನೂ ನೀಡುವಷ್ಟು 7 ವರ್ಷದಲ್ಲಿ ಬೆಳೆದಿದೆ.

ಇಲ್ಲಿ ಒಂದು ಎಕ್ರೆಯಲ್ಲಿ  217 ಸಿಲ್ವರ್ ಮರಗಳು, 217 ಮೆಣಸಿನ ಬಳ್ಳಿಗಳು, 363 ಅಡಿಕೆ ಮರಗಳು 1200 ಕಾಫೀ ಗಿಡಗಳು, 363 ವೆನಿಲ್ಲಾ ಬಳ್ಳಿಗಳು ಇವೆ. ಒಟ್ಟು 20 ಎಕ್ರೆಯಲ್ಲಿ 50,000 ಫಲಕೊಡುವ ಬೆಳೆಗಳಿವೆ.

ಶ್ರೀ ಅಮಾನುಲ್ಲಾ ಖಾನ್ ರವರು
ಶ್ರೀ ಅಮಾನುಲ್ಲಾ ಖಾನ್ ರವರು

ಯಾಕೆ ಹೀಗೆ ತೋಟ ಮಾಡಲಾಗಿದೆ;

  • ಅಮಾನುಲ್ಲಾ ಇವರು ಕಾಫೀ ತೋಟದ ಕೆಲಸ ಬಿಟ್ಟು ಅಡಿಕೆ ತೋಟದ ಕೆಲಸ ಕೇಳಿಕೊಂಡು ಹೋದಾಗ ಅಂದು (1972 ಇಸವಿ) ಅಡಿಕೆಯ ಬೆಲೆ ಅಕ್ಕಿಯ ಬೆಲೆಗಿಂತ ಕಡಿಮೆಯಾಗಿತ್ತು.
  • ಆಗ ಕೆಲಸ ಮಾಡಿಸಲು ಈ ಉತ್ಪತ್ತಿ ಸಾಲದು ಎಂದಿದ್ದ ತೋಟದ ಮಾಲಿಕರ ಮಾತು ಇವರಿಗೆ ಅಡಿಕೆಯನ್ನೊಂದೇ ನಂಬಿ ಕೃಷಿ ಬೇಡ ಎಂಬ  ಅಂಜಿಕೆಯನ್ನು ಮೂಡಿಸಿತ್ತು.
  • ಹಾಗಾಗಿ ಅಡಿಕೆ ಇರಲಿ. ಆದರೆ ಅಡಿಕೆ ಏನಾದರೂ ತಟಪಟ ಅದರೆ ನನ್ನ ರಥ ಮುರಿದು ಬೀಳುವುದು ಬೇಡ ಎಂದು ಮಿಶ್ರ ಬೆಳೆಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ.
  • ಸಾಂಪ್ರದಾಯಿಕ ಅಡಿಕೆ ನಾಟಿ ವಿಧಾನದಲ್ಲಿ ಯಾವ ಮಿಶ್ರ ಬೆಳೆ ಬೆಳೆಸಲೂ ಸಾಧ್ಯವಿಲ್ಲ.
  • ಈ ಕಾರಣಕ್ಕೆ ಅಂತರವನ್ನು  ಹೆಚ್ಚು ಇಟ್ಟು ಒಂದು ಎಕ್ರೆಗೆ 360 ಸಂಖ್ಯೆಯಲ್ಲಿ ಅಡಿಕೆಯನ್ನು ನೆಟ್ಟಿದ್ದಾರೆ. 
  • ಅಡಿಕೆ ಮರಕ್ಕೆ ಮೆಣಸು ನೆಟ್ಟರೆ  ಅದರ ಬೆಳವಣಿಗೆ ಯಾವಾಗಲೂ ಅಸ್ಥಿರ. ಮರಗಳಿಗೆ ಬಿಟ್ಟರೆ ಅನುಕೂಲ  ಜಾಸ್ತಿ.
  • ಇದನ್ನೆಲ್ಲಾ ಕಾಫೀ ತೋಟದ ಕೆಲಸದ ಅನುಭವದಲ್ಲಿ ಕಂಡು ಕೊಂಡಿದ್ದಾರೆ.
  • ಕಾಫೀ ಒಂದು ಆಹಾರ ಬೆಳೆ. ಇದಕ್ಕೆ ಬೇಡಿಕೆ ಇಲ್ಲದಾಗುವುದಿಲ್ಲ. ಬೆಲೆ ಸ್ವಲ್ಪ ಕಡಿಮೆ ಆಗಬಹುದಾದರೂ  ಉತ್ತಮ ಬೆಳೆ.
  • ವರ್ಷದಲ್ಲಿ ಎಲ್ಲಾ ಕಾಲದಲ್ಲೂ ಉತ್ಪತ್ತಿ ಇರಬೇಕು. ನೀರಿನ ಅಗತ್ಯ ಕಡಿಮೆ ಇರುವ ಬೆಳೆಗಳನ್ನೇ  ಬೆಳೆಸಬೇಕು.
  • ಇವರಿಗೆ ಇರುವ ನೀರಿನ ಮೂಲ ಅತೀ ಅಲ್ಪ. 2 ಇಂಚಿಗೂ ಕಡಿಮೆ ಇರುವ ನೀರಿನ ಮೂಲದಲ್ಲಿ ಅತೀ ಕಡಿಮೆ ನೀರಿನಲ್ಲಿ ಈ ಎಲ್ಲಾ ಬೆಳೆಗಳನ್ನು ಬೆಳೆಸಬಹುದು.
  • ಅಡಿಕೆಗೆ ಆದರೆ ನೀರು ಹೆಚ್ಚು ಬೇಕಾಗುತ್ತದೆ.
  • ನೆಲದಲ್ಲಿ ಪೂರ್ತಿ ಹೊದಿಕೆಯಂತಹ ಬೆಳೆಗಳಿದ್ದರೆ ನೀರಿನ ಅವೀಕರಣ ತಡೆಯಲ್ಪಟ್ಟು ಕಡಿಮೆ ನೀರು ಸಾಕಾಗುತ್ತದೆ.
  • ಕಳೆ ನಿಯಂತ್ರಣ ಕೆಲಸ ಉಳಿಯುತ್ತದೆ.
ಅಡಿಕೆ, ಕಾಫೀ, ಮೆಣಸು ಬೆಳೆಗಳು

ಕರಿಮೆಣಸಿಗೆ ಇಲ್ಲಿ ರೋಗವೇ ಇಲ್ಲ:

  • ಯಾವುದೇ ಬೆಳೆ ಬೆಳೆಯುವಾಗ ಅದಕ್ಕೆ ಮಾಡಬೇಕಾದ ಕಾಲಬದ್ಧ ಕೆಲಸ ಕಾರ್ಯಗಳನ್ನು ತಪ್ಪದೆ ಮಾಡಬೇಕು.
  • ಬೇಕಾದಷ್ಟು ಪೋಷಕಾಂಶಗಳನ್ನು ಕೊಡಬೇಕು. 
  • ಇವರು ಮೆಣಸಿನ ಬಳ್ಳಿಗೆ ಮಳೆಗಾಲ ಪೂರ್ವದಲ್ಲಿ ಮತ್ತು ಮಳೆ ಮುಕ್ತಾಯದ ಸಪ್ಟೆಂಬರ್ ಅಕ್ಟೋಬರ್ ಒಳಗೆ ಬುಡಕ್ಕೆ ಕಾಪರ್ ಅಕ್ಸೀ ಕ್ಲೋರೈಡ್ ಡ್ರೆಂಚಿಂಗ್ ಮಾಡುತ್ತಾರೆ.
  • ಮಳೆ ಹೊಂದಿಕೊಂಡು ಎರಡರಿಂದ ಮೂರು ಸಲ ಎಲ್ಲಾ ಎಲೆಗಳ ಅಡಿ ಭಾಗಕ್ಕೆ ತಗಲುವಂತೆ ಬೋರ್ಡೋ ದ್ರಾವಣವನ್ನು ಸಿಂಪರಣೆ  ಮಾಡುತ್ತಾರೆ. 
  • ರೋಗ ಬರುವ ಮುನ್ಸೂಚನೆ ಬಳ್ಳಿಯ ಲಕ್ಷಣ ನೋಡುವಾಗ ತಿಳಿಯುತ್ತದೆ.
  • ಆ ಸಂದರ್ಭದಲ್ಲಿ ಸೂಕ್ತ ಉಪಚಾರ ಮಾಡಿದರೆ ರೋಗ ನಿಯಂತ್ರಣ ಆಗುತ್ತದೆ.
  • ಹೆಚ್ಚು ಇಳುವರಿ ಬಂದ ವರ್ಷ ಬಳ್ಳಿ  ನಿತ್ರಾಣವಾಗಿ ರೋಗ ಬರುವ ಸಾಧ್ಯತೆ ಹೆಚ್ಚು.
  • ಆ ಸಮಯದಲ್ಲಿ ನಮ್ಮ ನಿರ್ವಹಣೆ ಬಳ್ಳಿಯನ್ನು ಉಳಿಸಲು ಸಹಕರಿಸುತ್ತದೆ.
  • ಮೆಣಸಿನ ಬಳ್ಳಿಗೆ ಹಾಗೆಯೇ ಯಾವುದೇ  ಬೆಳೆಗೆ ವಿಭಜಿತ ಕಂತುಗಳಲ್ಲಿ  ಪೋಷಕಾಂಶಗಳನ್ನು ಕೊಡುವುದರಿಂದ ಉತ್ತಮ ಫಲ ಇದೆ. 
  • ನಮ್ಮ ಸಾಂಪ್ರದಾಯಿಕ ಗೊಬ್ಬರಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ನೀರಿನಲ್ಲಿ ಕರಗಿಸಿ  ಒಂದೊಂದು ಲೀಟರಿನಂತೆ ವರ್ಷಕ್ಕೆ 5-6 ಸಲ ಬುಡಕ್ಕೆ ಹೊಯ್ಯಬೇಕು.
  • ಬೆಳೆ ಫಸಲು ಬಲಿಯುವ ಹಂತದಲ್ಲಿ ಪೊಟ್ಯಾಶ್ ಸತ್ವ ಹೆಚ್ಚು ಕೊಡಬೇಕಾಗುತ್ತದೆ.  
  • ವರ್ಷಕ್ಕೊಮ್ಮೆ ಬಳ್ಳಿಗೆ 8-10 ಕಿಲೋ  ಸಂಪೂರ್ಣವಾಗಿ ಕಳಿತ ಸಾವಯವ ಕೊಟ್ಟಿಗೆ ಕೊಡಬೇಕು.
  • ಯಾವಾಗಲೂ ಹಸಿ ಗೊಬ್ಬರ ಕೊಡಬಾರದು. ಬೇವಿನ ಹಿಂಡಿ 1 ಕಿಲೋ ಪ್ರಮಾಣದಲ್ಲಿ ಕೊಡುತ್ತಿದ್ದರೆ ಮೆಣಸಿಗೆ ಬೇರು ಜಂತು ಹುಳದ ಸಮಸ್ಯೆ ಕಡಿಮೆಯಾಗುತ್ತದೆ.
  • ಈ ವಿಧಾನವನ್ನು ಅನುಸರಿಸುವ ಮೂಲ ಇವರು ರೋಗ ಇಲ್ಲದಂತೆ ಈ ತನಕ ಮೆಣಸಿನ ಬಳ್ಳಿಯನ್ನು ಉಳಿಸಿಕೊಂಡಿದ್ದಾರೆ.
  • ಬೆಳೆಯ ಆರೋಗ್ಯವೇ ರೋಗ ನಿರೋಧಕ ಶಕ್ತಿಯ ಗುಟ್ಟು.
2015  ರಲ್ಲಿ ಈ ಕೃಷಿ ಕ್ಷೇತ್ರ
2015 ರಲ್ಲಿ ಈ ಕೃಷಿ ಕ್ಷೇತ್ರ

ಮಿಶ್ರ ಬೆಳೆಯಿಂದ ಲಾಭ:

  • ಅಡಿಕೆ ನೆಟ್ಟರೆ ಅದರಲ್ಲಿ ಫಲ ಬಂದು ಕೈಗೆ ಆದಾಯ ಬರಲು ಕನಿಷ್ಟ 5 ವರ್ಷ ಬೇಕು.
  • ಆ ತನಕ ತೋಟದಲ್ಲಿ ಉತ್ಪತ್ತಿ ಏನು. ಅದಕ್ಕಾಗಿಯೇ ಬೇಕಾಗುವುದು ಮಿಶ್ರ ಬೆಳೆ.
  • ಕರಿಮೆಣಸನ್ನು ಸರಿಯಾಗಿ ಸಾಕಿದರೆ 2 ವರ್ಷಕ್ಕೆ ಇಳುವರಿ ಪ್ರಾರಂಭವಾಗುತ್ತದೆ.
  • ಇವರು ಎರಡು ವರ್ಷದ ಗಿಡದಿಂದ ಪ್ರತೀ ಗಿಡಕ್ಕೆ ಸುಮಾರು 500 ಗ್ರಾಂ ನಷ್ಟು ಒಣ ಮೆಣಸಿನ ಇಳುವರಿ ಪಡೆದಿದ್ದಾರೆ. 
  • ಕಾಫೀ ಸಹ 3 ವರ್ಷಕ್ಕೆ ಇಳುವರಿ ಕೊಡಲು ಪ್ರಾರಂಭವಾಗುತ್ತದೆ.
  • ಅಡಿಕೆ ಫಲ ಕೊಡುವ ಮುಂಚೆ ನಾಲ್ಕು ಅಡಿಕೆ ಮರದ ಉತ್ಪತ್ತಿಯನ್ನು ಒಂದು ಮೆಣಸಿನ ಬಳ್ಳಿ ಕೊಡುತ್ತದೆ.
  • ಈಗ ಇವರು ಪ್ರತೀ ಮೆಣಸಿನ ಬಳ್ಳಿಯಿಂದ ಸುಮಾರು 10 ಕಿಲೊ ಒಣ ಮೆಣಸಿನ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.
  • ಒಟ್ಟು 4000 ದಷ್ಟು ಮೆಣಸಿನ ಬಳ್ಳಿಗಳಿಂದ ಎಷ್ಟು ಮೆಣಸು ಉತ್ಪಾದನೆ ಆಗಬಹುದು ಲೆಕ್ಕಾಚಾರ ಹಾಕಿ.
  • ಅಡಿಕೆ ಆಗಲಿ ಹೋಗಲಿ, ಮಿಶ್ರ ಬೆಳೆಗಳೇ ರೈತನನ್ನು ಆಧರಿಸುವಂತಿರಬೇಕು.
ಅಡಿಕೆ ಮರದ ಆಧಾರದಲ್ಲಿ ವನಿಲ್ಲಾ ಬಳ್ಳಿ
ಅಡಿಕೆ ಮರದ ಆಧಾರದಲ್ಲಿ ವನಿಲ್ಲಾ ಬಳ್ಳಿ

ಸಾಧನೆ ಮಾಡಿದರೆ ಏನನ್ನೂ ಮಾಡಬಹುದು. ದಿನ ಬೆಳಗಾದರೆ ತೋಟದಲ್ಲಿ ಕೆಲಸಗಳನ್ನು ಮಾಡಿಸುತ್ತಾ, ಅದನ್ನೇ ಒಂದು ತಪಸ್ಸಾಗಿ ಸ್ವೀಕರಿಸಬೇಕು. ತಾವು ಬೇರೆ ಬೇರೆ ಕಂಡದ್ದನ್ನು ತಮಗೆ ಬೇಕಾದಂತೆ ಬದಲಾವಣೆ ಮಾಡುತ್ತಾ ಕೃಷಿ ಮಾಡಿದರೆ ಕೃಷಿಯಲ್ಲೂ ಉತ್ತಮ ಆದಾಯ ಪಡೆಯಲು ಸಾಧ್ಯವಿದೆ. ನೆಮ್ಮದಿಯ ಬದುಕೂ ಸಾಧ್ಯವಿದೆ. ಇದು ಅಮಾನುಲ್ಲಾ ಇವರು ಸಮಸ್ತ ರೈತ ಸಮುದಾಯಕ್ಕೆ ನೀಡುವ ಉತ್ತಮ ಸಂದೇಶ.   

Leave a Reply

Your email address will not be published. Required fields are marked *

error: Content is protected !!