ಟೊಮಾಟೋ ಬೆಳೆಗಾರರ ನಿದ್ದೆಗೆಡಿಸುವ ರೋಗವಾದ ಎಲೆ ಮುರುಟು ರೋಗ, ಸೊರಗು ರೋಗ, ಹಾಗೂ ಎಲೆ ಚುಕ್ಕೆ ರೋಗಕ್ಕೆ ಔಷದೋಪಾಚಾರ ಮಾಡುವುದಕ್ಕಿಂತ ರೋಗ ನಿರೋಧಕ ತಳಿ ಬೆಳೆಯುವುದೇ ಲೇಸು.
ಟೊಮೆಟೋ ನಮ್ಮ ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬೆಳೆಸಲಾಗುವ ತರಕಾರಿಯಾಗಿದ್ದು, ಎಲ್ಲಾ ಬೆಳೆಗಾರರೂ ಈ ಬೆಳೆಯನ್ನು ಉಳಿಸಿಕೊಳ್ಳಲಿಕ್ಕಾಗಿ ಕೀಟನಾಶಕ – ರೋಗನಾಶಕಗಳಿಗಾಗಿ ಮಾಡುವ ಖರ್ಚು ಉಳಿತಾಯವಾದರೆ ಬೆಳೆಗಾರರಿಗೆ ಖಂಡಿತವಾಗಿಯೂ ಲಾಭವಾಗುತ್ತದೆ. ಕೀಟ ರೋಗಗಳನ್ನು ಬಾರದಂತೆ ಮಾಡಲಿಕ್ಕೂ ಕೀಟ ನಾಶಕ – ರೋಗ ನಾಶಕ ಬೇಕು. ಬಂದ ನಂತರ ಓಡಿಸಲಿಕ್ಕೂ ಇದು ಬೇಕು. ಆದರೆ ಸಾಮಾನ್ಯ ಕೀಟ ರೋಗ ಬಾಧೆಗೆ ನಿರೋಧಕ ಶಕ್ತಿ ಪಡೆದ ತಳಿ ಬೆಳೆದರೆ ಆ ಸಮಸ್ಯೆ ಇಲ್ಲ. ಒಂದು ಎಕ್ರೆ ಟೊಮಾಟೋ ಬೆಳೆಯಲು ಕನಿಷ್ಟ 25 ಸಾವಿರ ರೂ. ಕೀಟನಾಶಕ ರೋಗ ನಾಶಕಕ್ಕೆ ಖರ್ಚು ಇದೆ. ಇದನ್ನು ಗರಿಷ್ಟ ಪ್ರಮಾಣದಲ್ಲಿ ಕಡಿಮೆ ಮಾಡಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಎರಡು ಪ್ರಮುಖ ತಳಿಗಳನ್ನು ಅಭಿವೃದ್ದಿ ಪಡಿಸಿದೆ.
ಟೊಮಾಟೋ ನಮ್ಮ ದೇಶದಲ್ಲಿ ಮಾತ್ರ ಬೆಳೆಯುವ ಬೆಳೆ ಅಲ್ಲ. ವಿದೇಶಗಳಲ್ಲೂ ಬೆಳೆಯುತ್ತದೆ. ಅಲ್ಲಿಯೂ ಸಹ ಈ ತಳಿಗಳು ಹೆಸರು ಮಾಡಿವೆ. ನಮ್ಮ ರಾಜ್ಯದಲ್ಲಿ ಇನ್ನೂ ಕೆಲವೊಂದು ರೈತರಿಗೆ ಈ ತಳಿಗಳ ಪರಿಚಯ ಆಗಿಲ್ಲ.
ಯಾವ ರೋಗ? ಏನು ಲಕ್ಷಣ:
ಟೊಮಾಟೋ ಬೆಳೆಯಲಾಗುವ ಎಲ್ಲಾ ಕಡೆಯಲ್ಲೂ ಕಂಡು ಬರುವ ರೋಗ ಎಲೆ ನಂಜು ರೋಗ,ಅಥವಾ ಎಲೆ ಮುರುಟು ರೋಗ, ಬ್ಯಾಕ್ಟೀರಿಯಾ ಸೊರಗು ರೋಗ (ದುಂಡಾಣು ರೋಗ) ಮತ್ತು ಶಿಲೀಂದ್ರದಿಂದ ಉಂಟಾಗುವ ಎಲೆ ಚುಕ್ಕೆ ರೋಗಗಳು.
ನಂಜಾಣು ರೋಗ ಅಥವಾ ವೈರಸ್ ರೋಗ:
- ಇದಕ್ಕೆ ಕಾರಣ ಒಂದು ಬಿಳಿ ನೊಣ.
- ಇದು ರೋಗವನ್ನು ರಸ ಸ್ಪರ್ಶದ ಮೂಲಕ ಹರಡುವಂತೆ ಮಾಡುತ್ತದೆ.
- ಇದು ಎಲ್ಲಾ ಋತುಮಾನದಲ್ಲೂ ಬರುತ್ತದೆ.
- ಸಾಮಾನ್ಯವಾಗಿ ಟೊಮಾಟೋ ಬೆಳೆಯನ್ನು ಎಲ್ಲಾ ಋತುಮಾನದಲ್ಲೂ ಬೆಳೆಯುತ್ತಾರೆ.
- ಆದ ಕಾರಣ ಅದು ಒಂದು ಬೆಳೆಯಿಂದ ಮತ್ತೊಂದು ಬೆಳೆಗೆ ಪ್ರಸಾರವಾಗುತ್ತದೆ.
- ಇದು ಬೆಳೆಯ ಯಾವ ಹಂತದಲ್ಲೂ ಬಾಧಿಸಬಹುದು. ಸಸಿ ಮಡಿಯಲ್ಲೂ ಕಂಡು ಬರುತ್ತದೆ.
- ಈ ಸಮಯದಲ್ಲಿ ಬಂದರೆ ಇಡೀ ಸಸಿಗಳೇ ನಾಶವಾಗಬಹುದು.
- ಅದಕ್ಕಾಗಿ ಸಸಿ ಮಡಿಯನ್ನು ನೈಲಾನ್ ಪರದೆಯ ಒಳಗೆ ಬೆಳೆಸುತ್ತಾರೆ.
- ಮೊದಲ ಹಂತದಲ್ಲಿ ಮಾತ್ರ ಇದನ್ನು ತಡೆಯಲು ಸಾಧ್ಯವೇ ಹೊರತು ಮಿತಿ ಮೀರಿದ ತರುವಾಯ ಸಾಧ್ಯವಾಗುವುದಿಲ್ಲ.
ಈ ರೋಗದ ಮುಖ್ಯ ಲಕ್ಷಣಗಳು ನಾಟಿ ಮಾಡಿದ ಸಸಿಗಳಲ್ಲಿ ಕುಂಠಿತ ಬೆಳವಣಿಗೆ. ಎಲೆಗಳು ಮುರುಟುವುದು, ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದು ಹೂವು ಉದುರುವುದು, ಹಾಗೂ ಕಾಯಿ ಕಾಯಿ ಕಚ್ಚುವಿಕೆ ಮತ್ತು ಕಾಯಿಯ ಬಣ್ಣ ಬದಲಾವಣೆಯಾಗುವುದು. ಟೊಮಾಟೋ ಹಣ್ಣುಗಳು ಸರಿಯಾದ ಕೆಂಪು ಬಣ್ಣಕ್ಕೆ ತಿರುಗದೆ ಹಳದಿ ಮಿಶ್ರ ಕೆಂಪು ಬಣ್ಣದಲ್ಲಿದ್ದರೆ ಆ ಸಸಿಗೆ ನಂಜಾಣು ರೋಗ ಬಾಧಿಸಿದೆ ಎಂದರ್ಥ. ಇಂತಹ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗುವುದಿಲ್ಲ. ರೈತರಿಗೆ ಭಾರೀ ಬೆಳೆ ನಷ್ಟವೂ ಉಂಟಾಗುತ್ತದೆ.
ಇದಕ್ಕೆ ಯಾವ ಔಷದೋಪಚರಾವೂ ಇಲ್ಲ. ಯಾವ ಕೀಟನಾಶಕವೂ ಪ್ರಯೋಜನಕಾರಿಯಲ್ಲ. ಇದನ್ನು ಸಂಪೂರ್ಣವಾಗಿ ನಾಶ ಮಾಡುವುದು ಸಹ ಅಸಾದ್ಯ.
ದುಂಡಾಣು ಬ್ಯಾಕ್ಟೀರಿಯಾ ರೋಗ:
- ಇದು ಟೊಮಾಟೋ ಬೆಳೆಯಲ್ಲಿ ಅತ್ಯಂತ ಅಪಾಯಕಾರೀ ರೋಗವಾಗಿದೆ.
- ಈ ರೋಗ ಬಾಧಿಸಿದರೆ ಟೊಮಾಟೊ ಸಸ್ಯ ಹೂ ಬಿಡುವ ಹಂತದಲ್ಲಿ ಸಸ್ಯವೇ ಒಣಗಿ ಹೋಗುತ್ತದೆ.
- ಒಣಗಲು ಹೆಚ್ಚು ಕಾಲಾವಧಿ ಸಹ ಬೇಕಾಗುವುದಿಲ್ಲ. ಕಾಣು ಕಾಣುತ್ತಿದ್ದಂತೆ ಒಣಗುತ್ತದೆ.
- ಒಮ್ಮೆ ರೋಗ ಬಂದರೆ ಆ ಮಣ್ಣಿನಲ್ಲಿ ಹೆಚ್ಚಾಗಿ ಮತ್ತೆ ಮತ್ತೆ ಬಂದೇ ಬರುತ್ತದೆ.
- ಅಂತಹ ಮಣ್ಣಿನಲ್ಲಿ ಟೊಮಾಟೋ ಜಾತಿಗೆ ಸೇರಿದ ಆಲೂಗಡ್ಡೆ, ಬದನೆ, ಮೆಣಸಿನ ಕಾಯಿ ಅಥವಾ ದೊಣ್ಣೆ ಮೆಣಸಿನಕಾಯಿ ಬೆಳೆ ಬೆಳೆಯಲು ಆಗುವುದಿಲ್ಲ.
- ಯಾವುದೇ ಔಷದೋಪಚಾರದಿಂದ ಈ ರೋಗವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಸಾದ್ಯವಾಗುವುದಿಲ್ಲ.
- ಚಾಲ್ತಿಯಲ್ಲಿರುವ ಬ್ಲೀಚಿಂಗ್ ಪೌಡರ್, ಸ್ಟೆಪ್ಟೋ ಸೈಕ್ಲಿನ್ ಮುಂತಾದ ಔಷದೋಪಚಾದಿಂದಲೂ ಇದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.
ಶಿಲೀಂದ್ರ ದಿಂದ ಬರುವ ಎಲೆ ಚುಕ್ಕೆ ರೋಗ:
- ಇದು ಸಾಮಾನ್ಯವಾಗಿ ಮಳೆಗಾಲದಲ್ಲಿ ಹೆಚ್ಚಾಗಿರುತ್ತದೆ.
- ಇದರಿಂದ ಸುಮಾರು 50-70% ಬೆಳೆ ನಷ್ಟವಾಗುತ್ತದೆ.
- ಪ್ರಾರಂಭದಲ್ಲಿ ಎಲೆ ಹಾಗೂ ಕಾಂಡ ಮೇಲೆ ಸಣ್ಣದಾಗಿ ಕಾಣಿಸಿಕೊಂಡು ವೃತ್ತಾಕಾರದಲ್ಲಿ ಚುಕ್ಕೆಗಳು ದೊಡ್ಡದಾಗಿ ಎಲೆಗಳು ಉದುರಿ ಹೋಗುತ್ತವೆ.
- ಕಾಯಿಗಳ ತೊಟ್ಟಿನಲ್ಲಿ ಯೂ ಸಹ ಈ ರೋಗವು ಹರಡಿ, ಕಾಯಿ ಉದುರುತ್ತದೆ.
- ಶಿಲೀಂದ್ರ ನಾಶಕಗಳ ಸಿಂಪರಣೆಯಿಂದ ರೋಗವನ್ನು ಪ್ರಾರಂಭಿಕ ಹಂತದಲ್ಲಿ ಮಾತ್ರ ನಿಯಂತ್ರಣ ಮಾಡಲಿಕ್ಕೆ ಸಾಧ್ಯವಾಗುತ್ತದೆ.
- ಎಡೆ ಬಿಡದೆ ಬೀಳುವ ಮಳೆಯಲ್ಲಿ ನಿಯತ್ರಂಣ ಕಷ್ಟ ಸಾಧ್ಯ.
- ಈ ತನಕ ಈ ರೋಗವನ್ನು ಯಶಸ್ವಿಯಾಗಿ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ.
ಯಾವುದು ಶಾಶ್ವತ ಪರಿಹಾರ?
- ಟೊಮಾಟೋ ಸೇರಿದಂತೆ ಈ ಜಾತಿಗೆ ಸೇರಿದ ಬೆಳೆಗಳಿಗೆ ಬಾಧಿಸುವ ನಂಜಾಣು ರೋಗ , ಬ್ಯಾಕ್ಟೀರಿಯಾ ಸೊರಗು ರೋಗ, ಹಾಗೂ ಶಿಲೀಂದ್ರ ರೋಗಗಳಿಗೆ ಔಷದೋಪಚಾರ ಮಾಡುವುದು ವ್ಯರ್ಥ.
- ಇದು ಭಾರತೀಯ ತೋಟಗಾರಿಕಾ ಸಂಶೊಧನಾ ಸಂಸ್ಥೆಯ ವಿಜ್ಞಾನಿಗಳು ಕಂಡುಕೊಂಡ ವಾಸ್ತವ ಸಂಗತಿ.
- ಹಾಗೆಂದು ಟೊಮಾಟೋ ಬೆಳೆಯದೆ ಇರುವುದೇ? ಇಲ್ಲ. ರೋಗಗಳಿಗೆ ನಿರೋಧಕ ಶಕ್ತಿ ಪಡೆದ ತಳಿಗಳನ್ನು ಬೆಳೆಸುವುದರಿಂದ ಮಾತ್ರ ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು.
- ಅರ್ಕಾ ರಕ್ಷಕ್ ಹಾಗೂ ಆರ್ಕಾ ಸಾಮ್ರಾಟ್ ಎಂಬ ಎರಡು ಸಂಕರ ತಳಿಗಳನ್ನು ಹೊರತುಪಡಿಸಿ ಉಳಿದ ಯಾವ ತಳಿಗೂ ಈ ರೋಗಕ್ಕೆ ನಿರೋಧಕ ಶಕ್ತಿ ಇಲ್ಲ.
ಅರ್ಕಾ ಸಾಮ್ರಾಟ್ ರೋಗ ರಹಿತ ತಳಿ:
- ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅಭಿವೃದ್ದಿ ಪಡಿಸಿದ ತಳಿಗೆ ಅರ್ಕಾ ಹೆಸರಿನಿಂದ ಕರೆಯಲಾಗುತ್ತದೆ.
- ಅರ್ಕಾ ಸಾಮ್ರಾಟ್ ಅಧಿಕ ಇಳುವರಿ ನೀಡುವ ತಳಿಯಾಗಿರುತ್ತದೆ.
- ಇದಕ್ಕೆ ಮೂರೂ ರೋಗವನ್ನು ನಿರೋಧಿಸುವ ಶಕ್ತಿ ಇದೆ.
- ಇದರ ಎಲೆ ದಟ್ಟ ಹಸುರು ಬಣ್ಣವನ್ನು ಹೊಂದಿದ್ದು, ಸೂರ್ಯನ ಕಿರಣಗಳಿಂದ ಕಾಯಿಗಳಿಗೆ ರಕ್ಷಣೆ ಕೊಡುತ್ತದೆ.
- ನಾಟಿ ಮಾಡಿದ 65-70 ದಿನಗಳಿಗೆ ಕಠಾವಿಗೆ ಬರುತ್ತದೆ.
- ಹಣ್ಣುಗಳು ಗುಂಡಾಗಿರುತ್ತದೆ.ಒಂದು ಹಣ್ಣಿನ ತೂಕ 90-100 ಗ್ರಾಂ ತೂಗುತ್ತದೆ.
- ಹಣ್ಣುಗಳು ದಟ್ಟ ಕೆಂಪು ಬಣ್ಣವನ್ನು ಹೊಂದಿದ್ದು, 20-25 ದಿನಗಳ ವರೆಗೆ ಸಾಮಾನ್ಯ ವಾತಾವರಣದಲ್ಲಿ ದಾಸ್ತಾನು ಇಡಬಹುದು.
- ಈ ತಳಿ ತಾಜಾ ಹಣ್ಣಿನ ಮಾರುಕಟ್ಟೆಗೆ ಸೂಕ್ತವಾಗಿದ್ದು, ಎಲ್ಲಾ ಕಾಲದಲ್ಲೂ ಬೆಳೆಯಲು ಸೂಕ್ತವಾಗಿದೆ.
- ಸರಾಸರಿ ಎಕ್ರೆಗೆ 60-65 ಟನ್ ಇಳುವರಿಯನ್ನು ನಿರೀಕ್ಷಿಸಬಹುದು.
ಅರ್ಕಾ ರಕ್ಷಕ್:
- ಇದು ಅಧಿಕ ಇಳುವರಿ ನೀಡಬಲ್ಲ F1 ಹೈಬ್ರೀಡ್ ತಳಿಯಾಗಿದೆ.
- ಇದಕ್ಕೆ ಮೇಲಿನ ಮೂರೂ ರೋಗಕ್ಕೆ ನಿರೋಧಕ ಶಕ್ತಿ ಇದೆ.
- ಸಸಿ ಮಧ್ಯಮ ಬೆಳವಣಿಗೆ ಹೊಂದಿರುತ್ತದೆ. ದಟ್ಟ ಹಸುರು ಬಣ್ಣದ ಎಲೆಗಳು. ನಾಟಿ ಮಾಡಿದ 65-70 ದಿನಗಳಿಗೆ ಕಠಾವಿಗೆ ಬರುತ್ತದೆ.
- ಹಣ್ಣುಗಳು ಚೌಕಾಕಾರದಲ್ಲಿ ಗುಂಡಾಗಿರುತ್ತದೆ.
- ಒಂದು ಹಣ್ಣಿನ ತೂಕ 80 -90ಗ್ರಾಂ ತೂಗುತ್ತದೆ. ಬಣ್ಣ ದಟ್ಟ ಕೆಂಪು ಆಗಿರುತ್ತದೆ, ಗಟ್ಟಿಯಾಗಿರುತ್ತದೆ.
- ಸಾಮಾನ್ಯ ವಾತಾವರಣದಲ್ಲಿ ಇದನ್ನು 20-25 ದಿನಗಳ ಕಾಲ ದಾಸ್ತಾನು ಇಡಬಹುದು.
- ಸಂಸ್ಕರಣೆ ಹಾಗು ತಾಜಾ ಬಳಕೆಗೆ ಹೊಂದುವ ತಳಿಯಾಗಿದೆ.
- ವರ್ಷದ ಎಲ್ಲಾ ಕಾಲದಲ್ಲೂ ಇದನ್ನು ಬೆಳೆಯಬಹುದು.
- ಒಂದು ಎಕ್ರೆಗೆ 55-60 ಟನ್ ಇಳುವರಿ ನಿರೀಕ್ಷಿಸಬಹುದು.
ಈ ಎರಡೂ ತಳಿಗಳ ಬೀಜಗಳನ್ನು ಬೆಂಗಳೂರು ಹೇಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ರೈತರಿಗೆ ಒದಗಿಸುತ್ತದೆ.
ತರಕಾರಿ ಬೆಳೆಯುವ ರೈತರು ಕೀಟನಾಶಕ ರೋಗ ನಾಶಕದ ಬಳಕೆಯನ್ನು ಕಡಿಮೆ ಮಾಡಿದರೆ ಅವರ ಬೆಳೆ ಖರ್ಚಿನಲ್ಲಿ ಶೇ.15 ಕ್ಕೂ ಹೆಚ್ಚು ಉಳಿತಾಯ ಮಾಡಬಹುದು. ಇದಕ್ಕೆ ಇರುವ ಏಕೈಕ ಆಯ್ಕೆ ಎಂದರೆ ರೋಗ ನಿರೋಧಕ ತಳಿಗಳು. ತಳಿವಿಜ್ಞಾನಿಗಳು ಆಹಾರ , ತೋಟಗಾರಿಕೆ ಹಾಗೂ ತರಕಾರಿ ಬೆಳೆಗಳಲ್ಲಿ ಇಂತಹ ಹಲವಾರು ನಿರೋಧಕ ಶಕ್ತಿ ಪಡೆದ ತಳಿಗಳನ್ನು ಬಿಡುಗಡೆ ಮಾಡಿದ್ದಾರೆ.