ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರೇ ರೈತರಿಗೆ ಕೊಡುವುದರಲ್ಲಿ ಎತ್ತಿದ ಕೈಯಾದರೆ ಈಗಿನ ಹೊಸ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿಯವರೂ ಅವರಿಗಿಂತ ಏನೂ ಕಡಿಮೆ ಇಲ್ಲ.
ಇಂದು (28-07-2021) ರಂದು ಕರ್ನಾಟಕದ ಮುಖ್ಯಮಂತ್ರಿ ಸ್ಥಾನವನ್ನೇರಿದ ಶ್ರೀ ಬಸವರಾಜ್ ಬೊಮ್ಮಾಯಿಯವರು ರೈತರಿಗೆ ಏನು ಕೊಡುವುದು ಎಂದು ಯೋಚಿಸಿ ಹೊಸತಾಗಿ ಯಾರೂ ಕೊಡದೆ ಇರುವ ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ. ರೈತರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ರೂ.1000 ಕೋಟಿಯನ್ನು ಮಿಸಲಿಟ್ಟು ಹೊಸ ದಾಖಲೆ ಮಾಡಿದ್ದಾರೆ. ಶ್ರೀಯುತ ಎಸ್ ಆರ್ ಬೊಮ್ಮಾಯಿಯವರೂ ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ರೈತಪರ ಕೆಲಸಗಳನ್ನು ಮಾಡಿದ್ದರು. ಇವರ ಮಗ ಸಹ ಅದೇ ದಾರಿಯಲ್ಲಿ ಮುಂದುವರಿಯುವ ಸೂಚನೆ ಕಾಣಿಸುತ್ತಿದೆ.
- ರೈತರಿಗೆ ಕೆಲವೊಂದು ಮೀಸಲಾತಿಗಳು, ಪ್ರೋತ್ಸಾಹಗಳು ಸಿಗಬೇಕು ಎಂಬುದು ಹಿಂದಿನಿಂದಲೂ ರೈತರ ಬೇಡಿಕೆಯಾಗಿತ್ತು.
- ಈ ಹಿಂದಿನ ಸರಕಾರ ರೈತರ ಮಕ್ಕಳು ಕೃಷಿ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಕೃಷಿ ವಿಶ್ವವಿಧ್ಯಾನಿಲಯಗಳ ಪ್ರವೇಶಕ್ಕೆ ಆದ್ಯತೆಯನ್ನು ಅಥವಾ ಮೀಸಲಾತಿಯನ್ನು ಪ್ರಕಟಿಸಿತ್ತು.
- ಆ ಪರಿಣಾಮದಿಂದ ಸಾಕಷ್ಟು ಕೃಷಿಕರ ಮಕ್ಕಳಿಗೆ ಪ್ರಯೋಜನವಾಗಿದೆ.
- ಬಹಳಷ್ಟು ಜನ ರೈತರ ಮಕ್ಕಳು ಕೃಷಿ ತೋಟಗಾರಿಕೆ, ಮೀನುಗಾರಿಕೆ, ಪಶು ಸಂಗೋಪನೆ ಮುಂತಾದ ವಿಷಯಗಳಲ್ಲಿ ಉನ್ನತ ಶಿಕ್ಷಣ ಪಡೆಯುವಂತಾಗಿದೆ.
- ಈಗ ಹೊಸತಾಗಿ ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿಗಳು ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಸ್ಕಾಲರ್ ಶಿಪ್ ಕೊಡುವುದು ಅಗತ್ಯವೆಂದು ಮನಗಂಡಿದ್ದಾರೆ.
- ಅದಕ್ಕಾಗಿ 1000 ಕೋಟಿ ಮೊತ್ತವನ್ನು ಮೀಸಲಿಟ್ಟಿದ್ದಾರೆ. ಪ್ರಶಂಸಾರ್ಹ ಕೆಲಸ. ಇದರ ಬಗ್ಗೆ ವಿಸ್ತ್ರುತ ವರದಿಗಳು ಇನ್ನು ಪ್ರಕಟವಾಗಬೇಕಷ್ಟೆ.
ಕೃಷಿಕರಿಗೆ ಮಾತ್ರವಲ್ಲ:
- ಹಿಂದಿನ ಸರಕಾರಗಳು ನೀಡುತ್ತಿದ್ದ ಸಂಧ್ಯಾ ಸುರಕ್ಷಾ ಪಿಂಚಣಿ ( ವೃದ್ದಾಪ್ಯ ವೇತನ) ರೂ.1000 ದ ಬದಲು ಅದನ್ನು 1200 ಕ್ಕೆ ಏರಿಸಿದ್ದಾರೆ.
- ವಿದವಾ ಮತ್ತು ಅಂಗವಿಕಲರ ಮಾಸಾಶನವನ್ನು ರೂ.600 ರಿಂದ ರೂ. 800 ಕ್ಕೆ ಏರಿಸಿದ್ದಾರೆ.
- ಜೊತೆಗೆ ಸರಕಾರದ ಕೆಲಸಗಳು ತ್ವರಿತವಾಗಿ ನಡೆಯುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
- ಇನ್ನು ಮುಂದೆ ಸರಕಾರದ ಆವ ಕೆಲಸಗಳೂ ನಿಧಾನ ಗತಿಯಲ್ಲಿ ನಡೆಯಬಾರದು.
- ಯಾವುದೇ ಒಂದು ಕಡತವನ್ನು 15 ದಿನಗಳ ಒಳಗೆ ವಿಲೇವಾರಿ ಮಾಡಬೇಕು.
- ಸರಕಾರದ ವಿವಿಧ ಇಲಾಖೆಗಳ ಮಧ್ಯೆ ಸಾಮರಸ್ಯ ಇರುವಂತೆ ಕೆಲಸಗಳು ನಡೆಯಬೇಕು ಎಂದು ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಆಜ್ಞಾಪಿಸಿದ್ದಾರೆ.
ಟೀಕೆಗಳು ಹಲವು ಇದ್ದರೂ ಸಹ ಹೊಸ ಮುಖ್ಯಮಂತ್ರಿಗಳ ಕಾರ್ಯ ಶ್ಲಾಘನೀಯ. ಇವರಿಂದ ರಾಜ್ಯದ ರೈತಾಪಿ ಜನ ಇನ್ನೂ ಹೆಚ್ಚಿನ ಕೊಡುಗೆಳ ನಿರೀಕ್ಷೆಯಲ್ಲಿದ್ದಾರೆ. ರೈತರ ಆಶೋತ್ತರಗಳಿಗೆ ಸ್ವಂದಿಸುವ ಉತ್ತಮ ಆಡಳಿತಗಾರ ಎಂಬ ಹೆಸರು ಇವರಿಗೆ ಇದೆ.