ಎಲ್ಲರ ದೃಷಿಯಲ್ಲಿ ರೈತರು ಸರಕಾರದ ಸವಲತ್ತು ಪಡೆಯುವವರು ಎಂದು ಗುರುತಿಸಲ್ಪಟ್ಟವರು. ಆದರೆ ವಾಸ್ತವ ಇವರು ಟ್ಯಾಕ್ಸ್ ಕಟ್ಟುವವರು.
ಸಮಾಜ ರೈತ ಎಂದರೆ ಸರಕಾರದ ಕಡಿಮೆ ಬಡ್ಡಿ ದರದ ಸಾಲಪಡೆಯುವವ. ಕೇಂದ್ರ ಸರಕಾರದ ಬಳುವಳಿಯಾದ ಕಿಸಾನ್ ಸಮ್ಮಾನ್ ಯೋಜನೆಯ ಹಣ ಪಡೆಯುವವ. ಸಬ್ಸಿಡಿ, ಸವಲತ್ತು ಪಡೆಯುವ. ಎಂದು ತಿಳಿದಿದ್ದಾರೆ. ವಾಸ್ತವವಾಗಿ ಸರಕಾರ ಇವರಿಗೆ ಕೊಡುವುದೇನಿದ್ದರೂ ಕಿತ್ತುಕೊಂಡದ್ದರ 10% ಮಾತ್ರ. ರೈತ ಎಂದರೆ ಸರಕಾರವನ್ನು ಸಾಕುವವ. ದೇಶದ ಆರ್ಥಿಕತೆಗೆ ರೈತನ ಕೊಡುಗೆ ಸಣ್ಣದಲ್ಲ. ಇದನ್ನು ಎಲ್ಲರಿಗೂ ತಿಳಿಸಿ. ರೈತನನ್ನು ಮೊದಲ ದರ್ಜೆಯ ನಾಗರೀಕರನ್ನಾಗಿ ಮಾಡಿ.
- ಮಾಸಿಕ 3,00,000 ವೇತನ ಪಡೆಯುವ ಸರಕಾರಿ ನೌಕರ ತಾನು ತೆರಿಗೆ ಪಾವತಿ ಮಾಡಬಹುದು, ಅಥವಾ ಕರವನ್ನು ಪಾವತಿಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬಹುದು.
- ಅವನಿಗೆ ವಿಮೆ ಮಾಡಿಸಿದರೆ ಆದಾಯ ತೆರಿಗೆ ವಿನಾಯಿತಿ ಇದೆ. ಮನೆ ಸಾಲ ಮಾಡಿದರೆ ವಿನಾಯಿತಿ ಇದೆ.
- ಮಕ್ಕಳ ಶಿಕ್ಷಣಕ್ಕೆ ಸಾಲ ಮಾಡಿದರೆ ತೆರಿಗೆ ವಿನಾಯಿತಿ ಇದೆ.
- ಹಾಗೆಯೇ ಇನ್ನಿನ್ನೇನೋ ತೆರಿಗೆ ಕಡಿಮೆ ಮಾಡಲು ಅವಕಾಶಗಳಿವೆ.
- ಇಷ್ಟಕ್ಕೂ ಅವರು ತೆರಿಗೆ ಪಾವತಿಸುವುದು ನಿರ್ದಿಷ್ಟ ಆದಾಯ ಮೂಲಕ್ಕೆ.
- ಆದರೆ ಕೃಷಿಕ ತೆರಿಗೆ ಪಾವತಿಸುವುದು ಅನಿಶ್ಚಿತತೆಯ ಆದಾಯಕ್ಕೆ ಹೇಗೆ ಗೊತ್ತೇ?.
ಕರ ಎಂದರೆ ಆದಾಯ ಕರ ಮಾತ್ರವಲ್ಲ:
- ತೆರಿಗೆ ಪಾವತಿ ಎಂಬುದು ಆದಾಯ ತೆರಿಗೆ ಮಾತ್ರವಲ್ಲ.
- ನಿಶ್ಚಿತ ಆದಾಯಕ್ಕೆ ತೆರಿಗೆ ಪಾವತಿ ಮಾಡಬೇಕಾದ್ದು ನ್ಯಾಯ ಸಮ್ಮತ.
- ಅನಿಶ್ಚಿತ ಆದಾಯ ಮೂಲ ಇರುವವರು ಆದಾಯ ತೆರಿಗೆಯ ರೂಪದಲ್ಲಿ ತೆರಿಗೆ ಪಾವತಿಸದಿದ್ದರೂ ಸಾಮಾನ್ಯ ಕರದ ರೂಪದಲ್ಲಿ ಭಾರೀ ಪ್ರಮಾಣದಲ್ಲಿ ತೆರಿಗೆ ಪಾವತಿಸಿ ಸರಕಾರವನ್ನು ಸಾಕುತ್ತಾರೆ.
- ಸರಕಾರೀ ವ್ಯವಸ್ಥೆಯನ್ನು ಸಾಕುತ್ತಾರೆ. ಅವರಿಗೆ ತುಂಡು ಬ್ರೆಡ್ ಬಿಸಾಡಿ, ಅದರ ಮೌಲ್ಯದ ಹತ್ತು ಪಾಲನ್ನು ತೆರಿಗೆ ರೂಪದಲ್ಲಿ ಸುಲಿಗೆ ಮಾಡಲಾಗುತ್ತದೆ!
- ಅಪರೋಕ್ಷ ತೆರಿಗೆ ಪಾವತಿಯಲ್ಲಿ ಮೊದಲ ಸ್ಥಾನದಲ್ಲಿರುವವರು ರೈತರು.
ಯಾವುದಕ್ಕೆಲ್ಲಾ ತೆರಿಗೆ ಪಾವತಿಸುತ್ತೇವೆ?
- ರೈತರು ಬಳಸುವ ಎಲ್ಲಾ ಬೆಳೆ ಸಂರಕ್ಷಕಗಳಿಗೆ 100 ರೂಪಾಯಿಗಳ ಮೇಲೆ 18 ರೂ, ಕರ ಪಾವತಿಸುತ್ತಾನೆ.
- ಒಬ್ಬ ಒಂದು ಎಕ್ರೆಯಷ್ಟು ಅಡಿಕೆ ಬೆಳೆ ಹೊಂದಿದ ಬೆಳೆಗಾರ ವಾರ್ಷಿಕ ಕನಿಷ್ಟ 20,000 ದಷ್ಟು ತೆರಿಗೆ ಪಾವತಿಸುತ್ತಾನೆ.
- ಅಡಿಕೆ ಬೆಳೆಯ ಕೊಳೆ ರೋಗ ನಿಯಂತ್ರಣಕ್ಕೆ ಬಳಸುವ ಮೈಲುತುತ್ತೆ ಸುಮಾರು 25 ಕಿಲೋ ಬೇಕು.
- ಇದಕ್ಕೆ 1300 ರೂ. ಕರ ಪಾವತಿಸಬೇಕು.
- ಇನ್ನು ಬಳಕೆ ಮಾಡುವ ಕೀಟನಾಶಕ ಇದ್ದರೆ ಅದಕ್ಕೆ ಸಹ 18% ಕರ ಪಾವತಿ ಮಾಡುತ್ತಾನೆ.
- 450 ರೂ. ಗಳ PVC ಪೈಪಿಗೆ 81 ರೂ. ಕರ ಪಾವತಿಸಬೇಕು.
- ತನ್ನ ಅವಶ್ಯಕತೆಯ ಕೃಷಿ ಉಪಕರಣ ಖರೀದಿ ಮಾಡುವಾಗ (ಪಂಪು , ಸಾಧನ ಸಲಕರಣೆ, ಇತ್ಯಾದಿ) 12% ಕರ ಪಾವತಿ ಮಾಡುತ್ತಾನೆ .
- ನೀವು ಕೃಷಿ ಉತ್ಪನ್ನವನ್ನು ಮಾರಾಟ ಮಾಡುವಾಗ ಕೊಳ್ಳುವವನು ನಿಮ್ಮ ಉತ್ಪನ್ನದ ಮೇಲೆ ಮಾರುಕಟ್ಟೆ ಶುಲ್ಕ 1.2 % ಪಾವತಿಸಬೇಕು.
- ಅದನ್ನು ಕೊಳ್ಳುವವರು ನಿಮ್ಮ ಉತ್ಪನದಿಂದ ನೇರವಾಗಿ ಕಡಿತ ಮಾಡದಿದ್ದರೂ ಅದಕ್ಕನುಗುಣವಾಗಿ ಬೆಲೆ ಇಳಿಕೆ ಮಾಡಿಯೇ ಕೊಳ್ಳುತ್ತಾರೆ.
- ಬೆಳೆ ಪೋಷಕ ರಸ ಗೊಬ್ಬರ ಖರೀದಿ ಮಾಡುವಾಗ 5% ಕೆಲವು 12% ಮತ್ತೆ ಕೆಲವು 18% ತೆರಿಗೆ ಪಾವತಿ ಮಾಡಿಯೇ ಖರೀದಿ ಮಾಡಬೇಕು.
- ನಾವು ಖರೀದಿ ಮಾಡುವ TV, ಪ್ರಿಡ್ಜ್ದ್ ಟಾರ್ಚ್ ಮೊಬೈಲ್, ಪೆನ್ನು , ಪುಸ್ತಕ, ಗ್ಯಾಸ್, ಚಪ್ಪಲಿ, ಹಲ್ಲುಜ್ಜುವ ಬ್ರಶ್, ಪೇಸ್ಟ್ ತಲೆಗೆ ಹಾಕುವ ಎಣ್ಣೆ, ಮನೆ ಕಟ್ಟುವ ಸಿಮೆಂಟ್, ರಾಡ್ 12- 18% ತೆರಿಗೆ ಪಾವತಿಸಬೇಕು.
- ಹಂಚು, ಇಟ್ಟಿಗೆ ಎಲ್ಲದಕ್ಕೂ ತೆರಿಗೆ ಪಾವತಿಸುತ್ತೇವೆ.
- ಇದನ್ನೆಲಾ ನೀವು ಒಂದು ವರ್ಷದ ಬಿಲ್ ಒಟ್ಟು ಸೇರಿಸಿ ಲೆಕ್ಕಾಚಾರ ಹಾಕಿದರೆ ನೀವು ಪಾವತಿಸುವ ತೆರಿಗೆ ವಾರ್ಷಿಕ 20,000 ಕ್ಕೂ ಮಿಕ್ಕಿ ಆಗುತ್ತದೆ.
ನಿಮ್ಮದೇ ಮನೆ, ನಿಮ್ಮ ಬಾವಿಯ ನೀರಿಗೂ ತೆರಿಗೆ:
- ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ರೈತರು ತಮ್ಮ ಹೊಲದಲ್ಲಿ ತಮ್ಮದೇ ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಂಡಿರುವ ಮನೆಗೆ ಸ್ಥಳೀಯಾಡಳಿತಕ್ಕೆ ವಾರ್ಷಿಕ ಚದರ ಅಡಿಗೆ 5-6 ರೂ . ತನಕ ಕರ ವಾವತಿಸಬೇಕು.
- ಅದರಲ್ಲಿ ನೀವೇ ತೋಡಿದ, ನಿಮ್ಮದೇ ಬಾವಿಯ ನೀರಿಗೂ ಕರ ಇರುತ್ತದೆ.
- ವಿದ್ಯುತ್ ಬಳಕೆಯ ಬಿಲ್ ಕಟ್ಟುತ್ತೇವೆ.
- ಆ ಬಿಲ್ ಮೇಲೆಯೂ ನಾವು ಕರ ಪಾವತಿಸುತ್ತೇವೆ.
- ಓಡಾಡಲು ಕೊಳ್ಳುವ ಬೈಕ್ ಗೆ 28% ಕರ ಪಾವತಿಸುತ್ತೇವೆ.
- ಅನಾರೋಗ್ಯ ರಕ್ಷೆಗಾಗಿ ಮಾಡುವ ವಿಮೆಗೂ 18% ಕರ ಪಾವತಿಸಬೇಕು.
- ಹೋಟೇಲಿನಲ್ಲಿ ಚಹ ಕುಡಿದರೂ ಕರ ಪಾವತಿಸಿಯೇ ಕುಡಿಯುವುದು!
ನಿಜವಾದ ತೆರಿಗೆ ಪಾವತಿದಾರರು ಯಾರು?
- ನಾವು ಕೃಷಿಕರು ಸಾಲಮಾಡಿಯಾದರೂ ತೆರಿಗೆ ಪಾವತಿಸುವ ಏಕೈಕ ನಾಗರೀಕರು.
- ನಮ್ಮ ಬೆಳೆಯುವ ಬೆಳೆಗೆ ನ್ಯಾಯಯುತ ಬೆಲೆ ಅಥವಾ ನಿರ್ದಿಷ್ಟ ಬೆಲೆ ಎಂಬುದೇ ಇಲ್ಲ.
- ಆದರೂ ನಾವು ತೆರಿಗೆ ವಂಚನೆ ಮಾಡುವುದೇ ಇಲ್ಲ.
- ಅದನ್ನು ಪ್ರಾಮಾಣಿಕವಾಗಿ ಪಾವತಿಸಿದ ಮೇಲೆಯೇ ನಾವು ಸಾಮಾಗ್ರಿಗಳನ್ನು ನಮ್ಮ ಸ್ವಾದೀನಕ್ಕೆ ಪಡೆಯುವುದು.
- ತೆರಿಗೆ ತಪ್ಪಿಸಿಕೊಳ್ಳಲು, ಅಥವಾ ತೆರಿಗೆವಿನಾಯಿತಿಗೆ ಅವಕಾಶವನ್ನೇ ಹೊಂದಿರದ ಒಂದು ವರ್ಗ ಇದ್ದರೆ ಅದು ಕೃಷಿಕರು.
ತೆರಿಗೆ ಪಾವತಿ ಒಂದೇ ಅಲ್ಲ. ಇನ್ನೂ ..
- ಕೃಷಿಕರು ಸರಕಾರಕ್ಕೆ ನಿಗದಿತ ತೆರಿಗೆ ಪಾವತಿ ಮಾಡುವುದೇ ಅಲ್ಲದೆ, ನಾವು ಸರಕಾರಕ್ಕೆ ಕೊಡುವ ಇನ್ನೊಂದು ಪ್ರಾಮುಖ್ಯ ಕೊಡುಗೆ, ಉದ್ಯೋಗ ಸೃಷ್ಟಿ.
- ಒಂದು ಎಕ್ರೆ ಹೊಲದ ಒಡೆಯ ವಾರ್ಷಿಕ 100 ಮಾನವ ದಿನಗಳ ಉದ್ಯೋಗ ಕೊಡುತ್ತಾನೆ.
- ದೇಶಕ್ಕೆ ಈ ಕೊಡುಗೆ ಒಬ್ಬ ನೇರ ಆದಾಯ ಕರ ಪಾವತಿದಾರನಿಗಿಂತ ದೊಡ್ಡದು.
ನಾವು ರೈತರು ಸಮಾಜದಲ್ಲಿ ಮೊದಲ ದರ್ಜೆಯ ನಾಗರೀಕರು. ನಮ್ಮ ದುಡಿಮೆಯ ಹಣ ಸರಕಾರದ ಖಜಾನೆ ತುಂಬುತ್ತದೆ. ನಮ್ಮ ಉತ್ಪತ್ತಿಯ ಹಣ ಉದ್ಯೋಗ ಸೃಷ್ಟಿಸುತ್ತದೆ. ಸರಕಾರದಿಂದ ಸಾಕಲ್ಪಡುವ ನಾಗರೀಕ ಸೇವಕರ ಖಾತ್ರಿಯ ಆದಾಯ ಮೂಲಕ್ಕೆ ನಮ್ಮ ಕೊಡುಗೆಯೂ ಇದೆ. ಇದು ನಿಮಗೂ ತಿಳಿದಿರಲಿ. ಸಮಸ್ತ ಜನಕೊಟಿಗೂ ತಿಳಿಯಲಿ.