ರೈತನೊಬ್ಬ ತಾನು ಬೆಳೆದ ಉತ್ಪನ್ನವನ್ನು ತಾನೇ ಮಾರಿ ಸಮಾನ ಮನಸ್ಕರಿಗೂ ಮಾರುಕಟ್ಟೆ ಒದಗಿಸಿಕೊಟ್ಟಿರುವುದು ಬಹುಷಃ ಇನ್ನೆಲ್ಲೂ ಇರಲಿಕ್ಕಿಲ್ಲ. ಇದು ಈ ಹಿಂದೆಯೂ ಆದ ಉದಾಹರಣೆ ಇಲ್ಲ. ಇದೊಂದು ಹೊಸ ಪರಿಕಲ್ಪನೆ.
- ಕೊರೋನಾ ಮಹಾಮಾರಿ ದೇಶದ ಅಸಂಖ್ಯಾತ ಜನರಿಗೆ ಬಾರೀ ತೊಂದರೆಯನ್ನು ಉಂಟು ಮಾಡಿತು.
- ಉದ್ದಿಮೆಗಳು ಮುಚ್ಚಿದವು. ಕೆಲಸಗಾರರು ಕೆಲಸ ಕಳೆದುಕೊಂಡರು.
- ರೈತರು ಬದುಕಿಗಾಗಿ ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಯಿತು.
- ಇಂತಹ ಸಂದರ್ಭದಲ್ಲಿ ಒಬ್ಬ ಕೃಷಿಕ ಮಾಡಿದ ಸಾಧನೆ ಮಾತ್ರ ಕೃಷಿಕರೆಲ್ಲರಿಗೂ ಅನುಕರಣೀಯ.
ಹಿರಿಯಡ್ಕದ ಸುರೇಶ್ ನಾಯಕ್ ಈಗ ಹಣ್ಣು ಹಂಪಲು ತರಕಾರಿಯ ವ್ಯಾಪಾರಿ. ಇದು ಮತ್ತೆಲ್ಲೂ ಲಲ್ಲ. ತಮ್ಮ ಹೊಲದಲ್ಲೇ. ಇದು ಶಾಶ್ವತ ವ್ಯಾಪಾರ ಮಳಿಗೆ ಅಲ್ಲ. ಕೊರೋನಾ ಲಾಕ್ ಡೌನ್ ಮುಗಿಯುವ ವರೆಗೆ ಮಾಡಿಕೊಂಡ ಒಂದು ವ್ಯವಸ್ಥೆ. ಇದು ಲಾಭಕ್ಕಲ್ಲ. ಕೃಷಿಕರಾಗಿ ಕೃಷಿಕರ ಕಷ್ಟಕ್ಕೆ ಸ್ಪಂದಿಸುವ ಒಂದು ಅಳಿಲ ಸೇವೆ ಎನ್ನುತ್ತಾರೆ ಸುರೇಶ್.
ಏನು ವ್ಯಾಪಾರ:
- ಕಳೆದ ಮೂರು ವಾರಕ್ಕೆ ಹಿಂದೆ ಇವರ ಹೊಲದದಲ್ಲಿ ಸುಮಾರು 40-50 ಟನ್ ಕಲ್ಲಂಗಡಿ ಕೊಯಿಲಿಗೆ ಬಂದಿತ್ತಂತೆ.
- ಲಾಕ್ ಡೌನ್. ಕೊಳ್ಳುವವರಿಲ್ಲ. ಸಾಗಾಣಿಕೆ ಕಷ್ಟ. ಲಾಸ ಆದರೆ ದೇವರೇ ಗತಿ ಎಂದು ಕಂಗಾಲಾಗಿದ್ದ ಸಮಯದಲ್ಲಿ ಏನೋ ಒಂದು ಯೋಚನೆ ಹೊಳೆಯಿತು, ಖರ್ಚು ಇಲ್ಲದೆ ತನ್ನ ಗದ್ದೆ ಬದಿಯಲ್ಲಿ ಶಾಮಿಯಾನ ಹಾಕಿ ವ್ಯಾಪಾರ ಶುರು.
- ಇದೇ ವ್ಯಾಪಾರ ಇಂದಿನ ತನಕವೂ ಮುಂದುವರಿದಿದೆ. ತಾನು ಬೆಳೆದ ಸುಮಾರು 14 ಎಕ್ರೆ ಕಲ್ಲಂಗಡಿಯ ಬೆಳೆಯಲ್ಲಿ ಸುಮಾರು 8-9 ಎಕ್ರೆಯ ಹಣ್ಣು ಖಾಲಿಯಾಯಿತು.
- ಇನ್ನು ಬರೇ 5 ಎಕ್ರೆ ಇದೆಯಂತೆ. ತನ್ನ ಉತ್ಪನ್ನವನ್ನು ಮಾರಾಟ ಮಾಡಲು ಪ್ರಾರಂಭಿಸಿದ ಈ ವ್ಯವಸ್ಥೆ ಬೇರೆಯವರಿಗೂ ನೆರವಾಯಿತು.
- ಇಲ್ಲಿ ಬರೇ ಕಲ್ಲಂಗಡಿ ಮಾತ್ರವಲ್ಲ.ರಾಜ್ಯದ ಬೇರೆ ಬೇರೆ ಕಡೆಗಳಿಂದ ರೈತರು ಇಲ್ಲಿ ತಂದು ಇವರಿಂದ ಮಾರಾಟ ಮಾಡಿಸುವಂತಾಯಿತು.
- ಇಲ್ಲಿ ಕಲ್ಲಂಗಡಿ, ಕರಬೂಜ, ಅನನಾಸು, ಸಿಹಿ ಗೆಣಸು, ಕ್ಯಾಬೇಜ್, ಕುಂಬಳಕಾಯಿ, ಸೌತೇ ಕಾಯಿ, ಸಿಹಿ ಹುಂಬಳ , ಬಾಳೆ ಕಾಯಿ, ಮಾವು ಎಲ್ಲವೂ ಇದೆ. ಇದೆಲ್ಲಾ ಬೇರೆ ಬೇರೆ ರೈತರು ಬೆಳೆದ ಉತ್ಪನ್ನ.
ಯಾರು ಕೊಳ್ಳುವವರು:
- ಇದು ಉಡುಪಿ ಜಿಲ್ಲೆ. ಇಲ್ಲಿ ಕೊರೋನಾ ಸೋಂಕು ಅತಿಯಾಗಿಲ್ಲ. ಸೋಂಕಿತರೂ ಗುಣಮುಖರಾಗಿದ್ದಾರೆ.
- ಹೊಸ ಕೇಸ್ ಇಲ್ಲ. ಆದ ಕಾರಣ ಜಿಲ್ಲೆಯೊಳಗೆ ಓಡಾಡಲು ಅಂತಹ ನಿರ್ಭಂಧ ಇಲ್ಲ.
- ಕಾನೂನು ರೀತ್ಯಾ ಅಗತ್ಯ ಸುರಕ್ಷೆಗಳನ್ನು ಪಾಲಿಸಿಕೊಂದು ಜಿಲ್ಲೆಯ ಮೂಲೆ ಮೂಲೆಯಿಂದ ಜನ ಬಂದು ಖರೀದಿ ಮಾಡಿಕೊಂಡು ಹೋಗುತ್ತಾರೆ.
- ಬೆಳೆಗ್ಗೆ 8 ಗಂಟೆಗೆ ಪ್ರಾರಂಭವಾಗುವ ಈ ವ್ಯವಹಾರ ರಾತ್ರೆ ತನಕವೂ ಮುಂದುವರಿಯುತ್ತದೆ.
- ಕಾರ್ಕಳ, ಉಡುಪಿ, ಮಣಿಪಾಲ್, ಸಾಲಿಗ್ರಾಮ, ಕುಂದಾಪುರ, ಹೆಬ್ರಿ ಹೀಗೆ ಉಡುಪಿ ಜಿಲ್ಲೆಯ ಎಲ್ಲಾ ಭಾಗಗಳಿಂದಲೂ ಜನ ಬಂದು ಕೊಂಡೊಯ್ಯುತ್ತಾರೆ.
- ದಿನಕ್ಕೆ ಕನಿಷ್ಟ 10 ಟನ್ ಕಲ್ಲಂಗಡಿ, ಸುಮಾರು ಅಷ್ಟೇ ಕರಬೂಜ, 5-6 ಟನ್ ಅನನಾಸು, ಅಷ್ಟೇ ತರಕಾರಿಗಳು, ಇಲ್ಲಿ ಮಾರಾಟವಾಗುತ್ತದೆ.
- ಬಹಳ ಜನ ಇಂತಹ ವ್ಯವಸ್ಥೆ ನೋಡಿ 1-2 ಕಲ್ಲಂಗಡಿ ಒಯ್ಯುವವರು 3-4 ಒಯ್ಯುತ್ತಾರೆ. ಹಣ್ಣಿನೊಂದಿಗೆ ತರಕಾರಿಯೂ.
ಎಲ್ಲೆಲ್ಲಿಂದ ಬರುತ್ತದೆ:
- ಹಿರಿಯಡ್ಕದ ಬೊಮ್ಮರಬೆಟ್ಟುವಿನಲ್ಲಿ ದಿನಾ ಜನ ಜಾತ್ರೆ. ಒಂದಷ್ಟು ಸಾಮಾಗ್ರಿ ತರುವ ವಾಹನಗಳು. ಕೊಳ್ಳಲು ಬರುವ ನೂರಾರು ಜನ.
- ಸ್ಥಳೀಯ ವಲಯ ಕೃಷಿ- ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳೂ ಸಹ ಬಂದು ಈ ಹೊಸ ಪರಿಕಲ್ಪನೆಯನ್ನು ನೊಡಿ ಖುಷಿ ಪಟ್ಟಿದ್ದಾರೆ.
- ಶಿಕಾರೀಪುರದಿಂದ ಕರಬೂಜ ಬಂದಿದೆ. ಶಿವಮೊಗ್ಗದಿಂದಲೂ ಬಂದಿದೆ. ಗೋಕಾಕ ದಿಂದ ಒಂದಿಬ್ಬರು ಕಲ್ಲಂಗಡಿ, ಬೀಟ್ ರೂಟ್, ಕ್ಯಾಬೇಜ್ ತಂದಿದ್ದಾರೆ.
- ಕರಾವಳಿಯುದ್ದಕ್ಕೂ ಕಾರವಾರದ ತನಕವೂ ಕಲಂಗಡಿ,ಸೌತೆ ಕಾಯಿ ಸಿಹಿ ಗೆಣಸು, ಬೇರೆ ಬೇರೆ ತರಕಾರಿಗಳನ್ನು ತರುತ್ತಾರೆ.
- ಬಾಳೆ ಕಾಯಿ ಸ್ಥಳೀಯವಾಗಿ ಬೆಳೆದ ರೈತರದ್ದು.
- ಹೊರಜಿಲ್ಲೆಗಳ ಹಲವಾರು ಜನ ಸಂಪರ್ಕದಲ್ಲಿದ್ದು, ದಿನಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತಂದು ಮಾರಾಟ ಮಾಡಲಾಗುತ್ತದೆ.
ಯಾವ ದರ:
- ಈಗ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಕಿಲೋ 20 ರೂ. ಇದೆ. ನಮ್ಮಲ್ಲಿ ಈ ತನಕ ರೂ. 10 ಇತ್ತು. ಈಗ ಅದನ್ನು 12 ಕ್ಕೆ ಏರಿಸಿದ್ದೇವೆ.
- ಕಾರಣ ಸ್ವಲ್ಪ ಹಾಳಾಗುವುದೂ ಇರುತ್ತದೆ. ನಮ್ಮದೇ ಸ್ವಂತ ಬೆಳೆಯಯನ್ನು 10 ರೂ. ಗೇ ಮಾರಾಟ ಮಾಡಿದ್ದೇವೆ.
- ನಮಗೆ ಕಿಲೋ ಮೇಲೆ 1 ರೂ. ಲಾಭ. ಇದರಲ್ಲಿ ನಾವು ಎರಡು ಜನ ಇರುತ್ತೇವೆ.
- ಲಾರಿಯಲ್ಲಿ ಬಂದುದನ್ನು ಇಳಿಸಲು ಮಜೂರಿ ಆಗುತ್ತದೆ.
- ಇದೆಲ್ಲಾ ಸೇರಿದರೆ ದೊಡ್ದ ಲಾಭ ಆಗುವುದಿಲ್ಲ. ನಷ್ಟವೂ ಆಗುವುದಿಲ್ಲ.
- ಇದರಲ್ಲಿ ಒಂದು ಖುಷಿ. ಇದನ್ನು ಸ್ಥಳೀಯರು ಮಾಡಬೇಕು.
- ವ್ಯಾಪಾರಿಗಳು ಮಾಡುವ ಶೋಷಣೆ ನಿಲ್ಲಬೇಕು ಎಂಬುದೇ ಇದರ ಮೂಲ ಉದ್ದೇಶ ಎನ್ನುತ್ತಾರೆ.
ಇದಕ್ಕೆಲ್ಲಾ ಅಪರೋಕ್ಷವಾಗಿ ಅನುಕೂಲ ಮಾಡಿಕೊಟ್ಟವರು ಸ್ಥಳೀಯ ಜಿಲ್ಲಾಧಿಕಾರಿಗಳಾದ ಜಗದೀಶ್ ರವರು. ಕೃಷಿ ವಿಷಯದಲ್ಲಿ ವ್ಯಾಸಂಗ ಮಾಡಿ ಕೃಷಿಕರ ಕಷ್ಟ ನಷ್ಟಗಳನ್ನು ಅರ್ಥ ಮಾಡಿಕೊಂಡ ಒಬ್ಬ ಉತ್ತಮ ಆಡಳಿತಗಾರ. ಇವರ ನೆರವು ನಮ್ಮ ಈ ಪ್ರಯತ್ನವನ್ನು ಯಶಸ್ಸಿನತ್ತ ಕೊಂಡೊಯ್ದಿದೆ. ಜೊತೆಗೆ ಸಹೃದಯಿ ಗ್ರಾಹಕ ಮಿತ್ರರು. ಇದು ಒಂದು ಹೊಸ ಪರಿಕಲ್ಪನೆಯಾಗಿ ದೇಶದಾದ್ಯಂತ ಆಗಬೇಕು. ಹಳ್ಳಿ ಹಳ್ಳಿಯಲ್ಲಿ ಆಗಬೇಕು, ಮಧ್ಯವರ್ತಿಗಳಿಂದ ರೈತರ ಶೋಷಣೆ ತಪ್ಪಲು ಇದು ಉತ್ತಮ ಪರಿಹಾರ. ಈ ಹೊಸ ಪರಿಕಲ್ಪನೆ ರಾಜ್ಯ, ದೇಶದ ಮೂಲೆ ಮೂಲೆಗೆ ಎಲ್ಲಾ ಮಂತ್ರಿ ಮಹೋದಯರಿಗೆ ತಲುಪಬೇಕು. ಆ ಮೂಲಕವಾದರೂ ಮಧ್ಯವರ್ತಿಗಳಿಂದ ರೈತರ ಶೋಷಣೆ ತಪ್ಪಬೇಕು ಎಂಬುದು ಇವರ ಆಶಯ.
ಸುರೇಶ್ ನಾಯಕ್: 9480016147.