ಒಂದು ತಿಂಗಳ ಹಿಂದೆ ರಸಗೊಬ್ಬರದ (fertiliser)ಬೆಲೆ ಹೆಚ್ಚಳವಾಗಿತ್ತು. ಇದು ತಡವಾಗಿ ಸರಕಾರದ ಗಮನಕ್ಕೆ ಬಂದು, ಈಗ ಅದು ಯಥಾಸ್ಥಿತಿಗೆ ಬಂದಿದೆ.
ರಸಗೊಬ್ಬರ ಎಂಬುದು ದೇಶದ ಕೃಷಿ ಉತ್ಪಾದನೆಯನ್ನು ನಿರ್ಧರಿಸುವ ಪ್ರಮುಖ ಕೃಷಿ ಒಳಸುರಿಯಾಗಿದ್ದು, ಇದರ ತಯಾರಿಕೆ ದೇಶದಲ್ಲಿ ಅತೀ ದೊಡ್ಡ ಆದಾಯದ ಉದ್ದಿಮೆಯಾಗಿ ಬೆಳೆದಿದೆ. ದೇಶದಾದ್ಯಂತ ಸುಮಾರು 12 DAP ಉತ್ಪಾದನಾ ದೊಡ್ಡ ಘಟಕಗಳೂ, ಸುಮಾರು 32 ಯೂರಿಯಾ ಉತ್ಪಾದಕ ದೊಡ್ಡ ಘಟಕಗಳು, ಮತ್ತು 57 ಯೂರಿಯಾ ಮತ್ತು DAP ಎರಡನ್ನೂ ತಯಾರಿಸುವ ದೊಡ್ಡ ಘಟಕಗಳು ಭಾರತ ಸರಕಾರದ ಮಾನ್ಯತೆಯಲ್ಲಿ ನಡೆಸಲ್ಪಡುತ್ತಿವೆ. ಹಾಗೆಯೇ ಕೆಲವು ಪ್ಯಾಕಿಂಗ್ ಹಾಗೂ ಮಾರಾಟ (Packed and marketed) ಮಾತ್ರ ಮಾಡುವ ಉದ್ದಿಮೆಗಳೂ ಇವೆ. ನೂರಕ್ಕೂ ಹೆಚ್ಚು ಕಂಪೆನಿಗಳು ರಸಗೊಬ್ಬರವನ್ನು ವಿದೇಶಗಳಿಂದ ಆಮದು ಮಾಡಿಕೊಂಡು ಇಲ್ಲಿ ತಮ್ಮದೇ ಪ್ಯಾಕಿಂಗ್ ಮಾಡಿ ಮಾರುಕಟ್ಟೆ ಮಾಡುವವರೂ ಇದ್ದಾರೆ. ಒಟ್ಟಾರೆಯಾಗಿ ದೇಶದಲ್ಲಿ ರಸಗೊಬ್ಬರಗಳ ವ್ಯವಹಾರದ ಒಟ್ಟಾರೆ ವ್ಯವಹಾರ 2018 ರಲ್ಲಿ 5437 ಬಿಲಿಯನ್. ಅದು 2024 ಕ್ಕೆ 11116 ಬಿಲಿಯನ್ ಆಗಲಿದೆ.(1 ಬಿಲಿಯನ್ =100 ಕೋಟಿ) ಇಷ್ಟೊಂದು ದೊಡ್ದ ವ್ಯವಹಾರದ ರಂಗದಲ್ಲಿ ಸರಕಾರ ಕೆಲವು ರಸಗೊಬ್ಬರಗಳಿಗೆ ಸಬ್ಸಿಡಿ ನೀಡುತ್ತದೆ. ಇನ್ನು ಕೆಲವು ಸಬ್ಸಿಡಿ ರಹಿತವಾಗಿರುತ್ತದೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ತೋಟಗಾರಿಕಾ ಬೆಳೆಗಾರರು ಉತ್ತಮ ಫಲಿತಾಂಶ ಕೊಡುವ ಕಾರಣಕ್ಕಾಗಿ ಸಬ್ಸಿಡಿ ರಹಿತ ರಸಗೊಬ್ಬರಗಳ ಕಡೆಗೆ ಹೆಚ್ಚು ಆಕರ್ಷಿತರಾಗಿರುವ ಕಾರಣ ಸರಕಾರ ಸಬ್ಸಿಡಿ ಕೊಟ್ಟು ಒದಗಿಸುತ್ತಿರುವ ರಸಗೊಬ್ಬರದ ಮೇಲೆ ಹೊರೆ ಕಡಿಮೆಯಾಗಿದೆ. ಒಂದು ವೇಳೆ ಈ ಸಾಲ್ಯುಬಲ್ ಗೊಬ್ಬರಗಳು ಬಾರದೆ ಇರುತ್ತಿದ್ದರೆ ಇಂದು ಅದು 11116 ಬಿಲಿಯನ್ ಅಲ್ಲ ಅದರ ದುಪ್ಪಟ್ಟಾಗುತ್ತಿತ್ತು.
ಸಾಂದರ್ಭಿಕ ಚಿತ್ರ
ಸರಕಾರದ ಸಬ್ಸಿಡಿ ದರದ ಗೊಬ್ಬರಗಳ ವಿವರ:
- ಭಾರತ ಸರಕಾರ ಯೂರಿಯಾ, DAP, ಫೋಟ್ಯಾಶ್ ಹಾಗೂ ನಗರ ಕಾಂಪೋಸ್ಟು ಗೊಬ್ಬರಗಳ ಮೇಲೆ ಸಬ್ಸಿಡಿಯನ್ನು ರಸಗೊಬ್ಬರ ತಯಾರಿಕಾ ಕಂಪೆನಿಗಳಿಗೆ ನೀಡುತ್ತದೆ.
- ಅವರ ಮಾರಾಟ ಪ್ರಮಾಣಕ್ಕೆ ಅನುಗುಣವಾಗಿ ಅದನ್ನು ಹಂಚಲಾಗುತ್ತದೆ.
- ಇನ್ನೂ ನಮ್ಮಲ್ಲಿ ರೈತರಿಗೆ ನೇರವಾಗಿ ಸಬ್ಸಿಡಿ ಹಣ ಸಿಗುವ ಬದಲಾವಣೆ ಆಗಿಲ್ಲ.
- ಸರಕಾರ ಒಂದು ಚೀಲಕ್ಕೆ ಇಷ್ಟು ಸಬ್ಸಿಡಿ ಕೊಡಬೇಕು ಎಂದು ನಿರ್ಧರಿಸಿದಂತೆ ಕಂಪೆನಿಗಳು ಅದನ್ನು ಕಳೆದೇ ಮಾರಾಟ ಬೆಲೆಯನ್ನು ನಿರ್ಧರಿಸುತ್ತವೆ.
- ಸರಕಾರ ಸಬ್ಸಿಡಿ ಕಡಿಮೆ ಮಾಡಿದರೆ ಅಥವಾ ರಸಗೊಬ್ಬರ ತಯಾರಿಕೆಗೆ ಬಳಕೆ ಮಾಡುವ ಕಚ್ಚಾ ವಸ್ತುಗಳಿಗೆ ದರ ಹೆಚ್ಚಾದರೆ, ವಿದೇಶಗಳಿಂದ ಆಮದು ಆಗುವಾಗ ಅಲ್ಲಿ ದರ ಹೆಚ್ಚಳವಾದರೆ ಇಲ್ಲಿ ದರ ಹೆಚ್ಚಿಸಲಾಗುತ್ತದೆ.
ಸದ್ಯದ ರಸಗೊಬ್ಬರ ದರಗಳು:
DAP ಆಮದು ಹಾಗೂ ದೇಶಿಯ ತಯಾರಿಕೆ ರೂ. 1200 ರೂ. (50 ಕಿಲೋ ಚೀಲ)
ಕಾಂಪ್ಲೆಕ್ಸ್ 10:26:26 1200 ರೂ. (50 kg)
ಕಾಂಪ್ಲೆಕ್ಸ್ 12:32:16 1310 ರೂ.(50kg)
ಕಾಂಪ್ಲೆಕ್ಸ್ 20:20:0;13 975 ರೂ. 50 kg
ಕಾಂಪ್ಲೆಕ್ಸ್ 14:35:14 1365 ರೂ. (50 kg)
ಕಾಂಪ್ಲೆಕ್ಸ್ 15:15:15 1140 ರೂ. (50kg)
ಕಾಂಪ್ಲೆಕ್ಸ್ 19:19:19 1575 ರೂ. ( 50kg)
ಯೂರಿಯಾ 269 ರೂ. (45kg)
28:28:0 1475 ರೂ.(50 kg)
MOP ಮ್ಯುರೇಟ್ ಆಫ್ ಪೊಟ್ಯಾಶ್ ಬೆಲೆ -850-00 (50 ಕಿಲೊ)
- ಭಾರತ ಸರಕಾರ ಒಂದು ಕಿಲೋ ಯೂರಿಯಾದ ನೈಜ ಬೆಲೆಗೆ ಶೇ.70 ಸಹಾಯಧನವನ್ನು ನೀಡುತ್ತದೆ.
- ರಂಜಕ ಗೊಬ್ಬರಕ್ಕೂ ಶೇ.70 ಇದ್ದುದನ್ನು ಮೊನ್ನೆ ತಾನೇ 140% ಕ್ಕೆ ಏರಿಸಲಾಗಿದೆ. ಪೊಟ್ಯಾಶ್ ಗೊಬ್ಬರಕ್ಕೆ 70% ಸಹಾಯಧನ ಇರುತ್ತದೆ.
- ಈಗ ಯಾವ ಗೊಬ್ಬರದಲ್ಲಿ ರಂಜಕದ ಪ್ರಮಾಣ ಹೆಚ್ಚು ಇರುತ್ತದೆಯೋ ಅದಕ್ಕೆ ಬೆಲೆ ಹೆಚ್ಚಾಗಿತ್ತು.
- ಈಗ ಅದನ್ನು ಸಮತೋಲನ ಮಾಡಲು ರಂಜಕ ಗೊಬ್ಬರಕ್ಕೆ ಸಬ್ಸಿಡಿಯನ್ನು ಹೆಚ್ಚು ಮಾಡಲಾಗಿದೆ.
- ಇದರಿಂದ ದರ ಹಿಂದಿನ ಸ್ಥಿತಿಗೆ ಬಂದಿದೆ. ಮುಂಗಾರು ಪೂರ್ವದಲ್ಲಿ ಸರಕಾರ ಈ ನಿರ್ಧಾರ ತೆಗೆದುಕೊಂಡದ್ದು ರೈತರ ಪಾಲಿಗೆ ವರವಾಗಿದೆ.
ರಂಜಕ ಗೊಬ್ಬರದ ಮಾಹತ್ವ:
ಬಿತ್ತನೆ ಸಮಯದಲ್ಲಿ ಬೆಳೆ ಬೆಳವಣಿಗೆಯ ಸಮಯದಲ್ಲಿ ಹೂವು ಬಿಡುವ ತನಕ ರಂಜಕ ಗೊಬ್ಬರ ಪ್ರಮುಖ ಪಾತ್ರ ವಹಿಸುತ್ತದೆ. ಇದು ಬೇರು ಹೆಚ್ಚಳವಾಗಲು, ಸಸ್ಯಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಅಗತ್ಯವಾಗಿ ಬೇಕಾಗುವ ಗೊಬ್ಬರ. ಇದನ್ನು ಮೂಲ ಗೊಬ್ಬರವಾಗಿ ಬಳಕೆ ಮಾಡುವುದು ಸಾಮಾನ್ಯ. ಆದ ಕಾರಣ ರೈತರು ರಂಜಕಯುಕ್ತ ಗೊಬ್ಬರಗಳಾದ DAP, 10:26:26, 20:20:0:13 ಮುಂತಾದ ಗೊಬ್ಬರಕ್ಕೆ ಹೆಚ್ಚು ಹೆಚ್ಚು ದುಂಬಾಲು ಬೀಳುತ್ತಾರೆ. ಇದರ ದರ ಹೆಚ್ಚಳವಾಗದಂತೆ ಕ್ರಮ ಕೈಗೊಂಡ ಭಾರತ ಸರಕಾರದ ಕ್ರಮ ಶ್ಲಾಘನೀಯ.
ರಸಗೊಬ್ಬರದ ಬೆಲೆ ಇಳಿಕೆಯಾಗಿದೆ ಎಂದು ಬೇಕಾಬಿಟ್ಟಿ ಬಳಕೆ ಮಾಡಬೇಡಿ. ಸಾಕಷ್ಟು ಸಾವಯವ ಗೊಬ್ಬರಗಳನ್ನು ಬಳಕೆ ಮಾಡಿ ರಸಗೊಬ್ಬರದ ಫಲಿತಾಂಶವನ್ನು ಹೆಚ್ಚಿಸಿರಿ. ಅಧಿಕ ಮಳೆಯಾಗುವ ಕಡೆ ವಿಭಜಿತ ಕಂತುಗಳಲ್ಲಿ ಗೊಬ್ಬರ ಕೊಡಿ. ಮಳೆ ನೀರಿಗೆ ಬೇರು ವಲಯದಿಂದ ಕೆಳಗೆ ಇಳಿದು ನಷ್ಟವಾಗುವುದನ್ನು ತಪ್ಪಿಸಿ. ಬೆಳೆಗಳಿಗೆ ಗೊಬ್ಬರ ಹಾಕುವಾಗ ಯೂರಿಯಾ ಹೆಚ್ಚು ಬಳಕೆ ಮಾಡಬೇಡಿ. ಸಾಯಿಲ್ ಸಾಲ್ಯುಬಲ್ ಗೊಬ್ಬರಗಳನ್ನು (Soil soluble fertilisers)ಬೇರುವಲಯದ ಸುತ್ತ ಹರಡಿ ಹಾಕಿದರೆ ಫಲ ಹೆಚ್ಚು.
Soil soluble fertilizer means?
ಡ್ರೀಪ್ ನಲ್ಲಿ ಕೊಡುವಂತದ್ದು Water soluble, ಮಣ್ನಿಗೆ ಹಾಕುವಂತದ್ದು, soil soluble