ಹಲಸಿನಲ್ಲಿ 1 ವರ್ಷಕ್ಕೆ ಕಾಯಿ ಬರುತ್ತದೆ ಎಂದರೆ ಯಾರಾದರೂ ನಂಬುವುದುಂಟೇ? ಬಹುಷಃ ಹಳೆ ತಲೆಗಳು ಇದನ್ನು ನಂಬಲಿಕ್ಕಿಲ್ಲ. ಈಗ ಹಲಸಿನಲ್ಲಿ ಕಸಿ ಮಾಡಿದ ಸಸಿಗಳನ್ನು ಉತ್ಪಾದಿಸುವ ಕಾರಣದಿಂದ ಸಾಂಪ್ರದಾಯಿಕವಾಗಿ ನಾವು 7-8 ವರ್ಷ ಕಾದು ಇಳುವರಿ ಪಡೆಯುವಂತಹ ಪ್ರಮೇಯ ಇಲ್ಲ. ನೆಟ್ಟು ಗಿಡದ ಬೆಳೆವಣಿಗೆ ಹೊಂದಿ 3-4 ವರ್ಷಕ್ಕೆ ಫಲ ಕೊಡಲು ಪ್ರಾರಂಭವಾಗುತ್ತದೆ. ಆದರೆ ಇದೊಂದು ತಳಿ ಮಾತ್ರ ಕಸಿ ಗಿಡ ನೆಟ್ಟು 1 ವರ್ಷಕ್ಕೆ ಕಾಯಿ ಬಿಡುತ್ತದೆ.
ವಿಯೆಟ್ನಾಂ ಸೂಪರ್ ಅರ್ಲಿ (Vietnam super early) ಎಂಬ ಹೆಸರಿನ ಈ ತಳಿ ವಿದೇಶದಿಂದ ಪರಿಚಯಿಸಲ್ಪಟ್ಟ ಹಲಸಿನ ತಳಿಯಾಗಿದ್ದು, ಈಗ ಇದು ಕರ್ನಾಟಕದ ಬಹುತೇಕ ಹಲಸು ಪ್ರಿಯರ ತೋಟದಲ್ಲಿ ಬೆಳೆಯುತ್ತಿದೆ. ಹಾಗೆ ನೋಡಿದರೆ ವಿದೇಶದ ಬೇರೆ ಬೇರೆ ಹಲಸಿನ ತಳಿಗಳು ನಮ್ಮಲ್ಲಿಗೆ ಪರಿಚಯಿಸಲ್ಪಟ್ಟಿದೆ. ಕೆಲವೇ ಕೆಲವು ಕಡೆ ಇಳುವರಿಯೂ ಬರುತ್ತಿದೆ. ಇನ್ನೇನು ಒಂದೆರಡು ವರ್ಷಗಳಲ್ಲಿ ನಾಟಿ ಮಾಡಿದ ಸಸಿಗಳಲ್ಲಿ ಇಳುವರಿ ಬಂದು ನಮ್ಮ ದೇಶದ ವೈವಿದ್ಯಮಯ ತಳಿಗಳ ಜೊತೆಗೆ ಇವು ಸಹ ಮೆರೆಯಲಿವೆ.
- ಒಂದು ಕಾಲದಲ್ಲಿ ನಮ್ಮ ಹಿರಿಯರು ಹಲಸಿನ ಬೀಜ ಹಾಕಿ ಸಸಿ ಮಾಡುತ್ತಿದ್ದರು.
- ಹಲಸಿನ ಕಾಯಿ- ಹಣ್ಣು ಇದ್ದರೆ ಊಟಕ್ಕೆ ಸ್ವಲ್ಪ ಕಡಿಮೆಯಾದರೂ ಹೊಟ್ಟೆ ಖಾಲಿ ಇರಬೇಕಾಗಿಲ್ಲ ಎಂದು ಸಾಧ್ಯವಾದಷ್ಟು ಹಲಸಿನ ಬೀಜ ಹಾಕಿ ಬೆಳೆಸುತ್ತಿದ್ದರು.
- ಬೀಜದ ಸಸಿಗಳಲ್ಲಿ ಒಂದೋ ಎರಡೋ ನೂರಾರು ವೈವಿಧ್ಯಮಯ ರುಚಿ, ಬಣ್ಣ, ವಿಶೇಷತೆಗಳ ತಳಿಗಳು ನೈಸರ್ಗಿಕ ಸಂಕರ ಕ್ರಿಯೆಯಿಂದಾಗಿ ಅಗಿವೆ.
- ಅವು ಹೊಸ ತಲೆಮಾರಿನವರಿಗೆ ಯಾವುದೋ ಕಾರಣಕ್ಕೆ ಬೇಡ ಎಂದಾಯಿತು.
- ಮರ ಕಡಿಯಲ್ಪಟ್ಟು ನಶಿಸುವ ಸಮಯದಲ್ಲಿ ಹಲಸಿನ ಕೃಷಿಯ ಜಾಗೃತಿ ಪ್ರಾರಂಭವಾಯಿತು.
- ಬರೇ ಜಾಗೃತಿ ಮಾತ್ರವಲ್ಲ. ಸಸ್ಯಾಭಿವೃದ್ದಿಯಲ್ಲೂ ಭಾರೀ ಬದಲಾವಣೆ ಆಯಿತು.
- ಬೀಜದ ಸಸಿಯ ಬದಲಿಗೆ ಕಸಿ ಮಾಡಿದ ಸಸಿಗಳು ಬಂದು ಹಲಸಿನ ಕೃಷಿಗೆ ಹೊಸ ಆಯಾಮ ದೊರೆಯಿತು.
- ಮೊದಲಾಗಿ ಮೇಣರಹಿತ ಹಲಸು ಎಂಬ ತಳಿ ಪರಿಚಯಕ್ಕಾಗಿ ಕಸಿ ವಿಧಾನ ಪ್ರಚಲಿತಕ್ಕೆ ಬಂತು.
- ತದ ನಂತರ ಕೇರಳದ ಜನ ಮೃದು ಕಾಂಡ ಕಸಿಯ ಬದಲಿಗೆ ಕಣ್ಣು ಕಸಿಯನ್ನು ಪರಿಚಯಿಸಿದರು.
- ಈಗ ಹಲಸಿನ ಸಸಿ ಮಾಡಿ ಕೊಡುವವರ ಕಾರಣದಿಂದಾಗಿ ಹಲಸಿನ ಸಸಿ ನೆಡುವವರೂ ಗಣನೀಯವಾಗಿ ಹೆಚ್ಚಾಗಿದ್ದಾರೆ ಎನ್ನಬಹುದು.
ವಿಯೆಟ್ನಾಂ ಸೂಪರ್ ಅರ್ಲಿ ತಳಿ:
ಇದರ ಮೂಲ ವಿಯೆಟ್ನಾಂ. ನಮ್ಮಲ್ಲಿ ಕೆಲವು ಜನ ವಿದೇಶೀ ತಳಿಗಳ ಬೇರೆ ಬೇರೆ ಹಣ್ಣು ಹಂಪಲುಗಳನ್ನು ಆಮದು ಮಾಡಿಕೊಳ್ಳುವಾಗ ಹಲಸಿನ ಈ ತಳಿಯನ್ನೂ ಅಮದು ಮಾಡಿಕೊಂಡಿದ್ದಾರೆ. ಇದರ ಸಸ್ಯ ಮೂಲದಿಂದ ಕಣ್ಣು ಕಸಿ ಮೂಲಕ ಯಥಾವತ್ ಗುಣದ ಲಕ್ಷಾಂತರ ಸಂಖ್ಯೆಯ ಸಸಿಗಳನ್ನು ಉತ್ಪಾದಿಸಲಾಗಿದೆ. ಈಗ ಈ ಸಸಿ ಮೂಲ ಬಹುತೇಕ ಹಲಸಿನ ಸಸಿ ಮಾಡುವ ಎಲ್ಲರಲ್ಲೂ ಇದೆ. ಕೆಲವು ನರ್ಸರಿಗಳು ಸ್ವಂತ ಸಸಿ ಮಾಡಿದರೆ ಕೆಲವು ಮಾಡಿದವರಿಂದ ತಂದು ಮಾರಾಟ ಮಾಡುತ್ತಾರೆ.
- ಈ ತಳಿಯ ವಿಶೇಷತೆ ಎಂದರೆ ಇದು ನೆಟ್ಟು 1 ವರ್ಷಕ್ಕೆ ಫಲ ಕೊಡಲು ಪ್ರಾರಂಭವಾಗುತ್ತದೆ.
- ಗಿಡ ಹೊಂದಿ 4-5 ಕಾಯಿ ತನಕವೂ ಆಗುತ್ತದೆ. ಕಾಂಡದ ಬುಡದಿಂದ ಹಿಡಿದು ಗೆಲ್ಲಿನಲ್ಲೂ ಕಾಯಿಯಾಗುತ್ತದೆ.
- ಹಾಗೆಂದು ಮೊದಲ ವರ್ಷ ಗಿಡದ ಬೆಳವಣಿಗೆ ತೃಪ್ತಿಕರವಾಗಿದ್ದರೆ ಮಾತ್ರ ಒಂದು ಎರಡು ಉಳಿಸಬಹುದು.
- ಇಲ್ಲವಾದರೆ ಅದನ್ನು ತೆಗೆಯಬೇಕು. ಫಲವತ್ತಾದ ಸಡಿಲ ಮಣ್ಣಿನಲ್ಲಿ ಗಿಡ ಒಂದೇ ವರ್ಷಕ್ಕೆ ಕೈಯಷ್ಟು ದಪ್ಪಕ್ಕೆ ಬೆಳೆಯುತ್ತದೆ.
- ಅಂತಹ ಗಿಡ ಇದ್ದರೆ ಒಂದು ಕಾಯಿ ಬಿಡಬಹುದು. ಉಳಿದವುಗಳನ್ನು ಮಿಡಿ ಹಂತದಲ್ಲಿ ತೆಗೆದು ಬಿಡಬೇಕು.
- ಇಲ್ಲವಾದರೆ ಗಿಡದ ಬೆಳವಣಿಗೆಯ ಮೇಲೆ ತೊಂದರೆ ಉಂಟಾಗುತ್ತದೆ.
- ಎರಡನೇ ವರ್ಷಕ್ಕೆ ಹೆಚ್ಚು ಕಾಯಿ ಬಿಡುತ್ತದೆ. ಈಗ ಗಿಡದ ದಪ್ಪ ಹೆಚ್ಚಾಗಿರುತ್ತದೆ.
- ಆಗ 3-4 ಕಾಯಿಯನ್ನು ಬೆಳೆಯಲು ಬಿಡಬಹುದು. ಉಳಿದವುಗಳನ್ನು ಎಳೆಯ ಕಾಯಿಯಾಗಿ ಬಳಕೆ ಮಾಡಬಹುದು.
ಏನು ವಿಶೇಷತೆ ?
- ನಾವು ಕಂಡಂತೆ ನಮ್ಮ ಸ್ಥಳೀಯ ಹಲಸಿನ ತಳಿಗಳು ಹೂ ಬಿಡುವ ಸಮಯ ಸುಮಾರಾಗಿ ಜನವರಿ ತಿಂಗಳು.
- ಇದು ಅದಕ್ಕೆ ವಿರುದ್ಧ. ನಮ್ಮಲ್ಲಿ ಚೌತಿ ಸಮಯಕ್ಕೆ ಹಲಸಿನ ಹಣ್ಣು ಮುಗಿಯುತ್ತದೆ.
- ನಂತರ ಹಲಸಿನ ಸೊಳೆ ಇತ್ಯಾದಿ ಉಪ್ಪಿನಲ್ಲಿ ಹಾಕಿ ಇಟ್ಟದ್ದನ್ನು ಬಳಸಬೇಕು.
ಇದು ಚೌತಿ ಸಮಯದಲ್ಲಿ ಹೂ ಬಿಡಲು ಪ್ರಾರಂಭವಾಗುತ್ತದೆ. ನವರಾತ್ರೆ ಸಮಯಕ್ಕೆ ಸಾಧಾರಣ ಪದಾರ್ಥಕ್ಕೆ ಬಳಕೆ ಮಾಡುವಷ್ಟು ಬೆಳೆದಿರುತ್ತದೆ. ನವೆಂಬರ್- ಡಿಸೆಂಬರ್ ತಿಂಗಳಿಗೆ ಹಣ್ಣು ಸಿಗುತ್ತದೆ. ನಮ್ಮ ಸ್ಥಳೀಯ ತಳಿಗಳು ಮಿಡಿ ಬಿಡುವ ಸಮಯದಲ್ಲಿ ಇದರಲ್ಲಿ ಹಣ್ಣು ಮುಗಿದಿರುತ್ತದೆ.
- ಕಾಯಿಯ ಗಾತ್ರ ಸಾಧಾದರಣ ಮಧ್ಯಮ ಗಾತ್ರ.
- ಹಣ್ಣಿನ ಸೊಳೆ ಬಣ್ಣ ಹಳದಿ ಮಿಶ್ರ ಕೆಂಪು.
- ರುಚಿಕಟ್ಟಾದ ಸಿಹಿಯಾದ ಹಣ್ಣಿನ ಸೊಳೆ.
- ಈ ತಳಿಯ ಹಲಸಿನ ಕಾಯಿಯಾಗುವ ಸೀಸನ್ ಅನ್ ಸೀಸನ್ ಅದ ಕಾರಣ ಇದಕ್ಕೆ ಪದಾರ್ಥ ಮಾಡಲು ( ಅಡಿಗೆಗೆ ಬಳಸಲು) ಬೇಡಿಕೆ ಇರುತ್ತದೆ.
- ಅನ್ ಸೀಸನ್ ನಲ್ಲಿ ಹಲಸಿನ ಸಣ್ಣ ಕಾಯಿಗಳಿಗೂ ಸಹ ಕಿಲೋಗೆ 25-30 ರೂ. ಬೆಲೆ ಇರುತ್ತದೆ.
- ಸ್ವಲ್ಪ ಕಾಯಿಯನ್ನು ಬೆಳೆಯಲು ಬಿಟ್ಟು ಉಳಿದವುಗಳನ್ನು ಈ ಉದ್ದೇಶಕ್ಕೆ ಬಳಕೆ ಮಾಡಬಹುದು.
ಇನ್ನೂ ಕೆಲವು ತಳಿಗಳು ಇವೆ:
- ವಿಯೆಟ್ನಾಂ ಅರ್ಲಿ ತಳಿಯಂತೆ ಇನ್ನೂ ಕೆಲವು ಬೇಗ ಕಾಯಿ ಬಿಡುವ ತಳಿಗಳು ಇವೆ.
- ಅವು ಸಹ ವಿದೇಶೀ ತಳಿಗಳೇ ಆಗಿವೆ.
- ಪ್ರಕಾಶ್ ಚಂದ್ರ ಎಂಬ ವಿದೇಶೀ ತಳಿ ಸಹ ಬೇಗ ಇಳುವರಿ ನೀಡುವ ತಳಿಯೇ ಆಗಿರುತ್ತದೆ.
- ಇದು ಸಹ ನೆಟ್ಟು 2-3 ವರ್ಷಕ್ಕೆ ಇಳುವರಿ ಕೊಡುತ್ತದೆ.
- ಸ್ವಲ್ಪ ದೊಡ್ದ ಹಣ್ಣು. ಇದು ಸಹ ಚೌತಿ ಮುಗಿದ ತಕ್ಷಣ ಮಿಡಿ ಬಿಡುತ್ತದೆ ಹಾಗೆಯೇ ಜೂನ್ ತನಕವೂ ಕಾಯಿ ಇರುತ್ತದೆ.
- ವರ್ಷಕ್ಕೆ ಎರಡು ಬಾರಿ ಕಾಯಿ ಕೊಡುವ ಹಲಸಿನ ತಳಿ ಒಂದು ಉಡುಪಿ ತೆಂಕಬೆಟ್ಟುವಿನ ರತ್ನಾಕರ ಡಿ ಶೆಟ್ಟಿ ಇವರ ತೋಟದಲ್ಲಿ ಇದೆ. ಇದರ ಹೆಸರು ಇವರಿಗೆ ತಿಳಿದಿಲ್ಲ.
- ಸ್ಥಳೀಯ ತಳಿಗಳಲ್ಲೂ ಅಕಾಲದಲ್ಲಿ ಕಾಯಿ ಬಿಡುವ ತಳಿಗಳು ಇವೆ. ಆದರೆ ಅದಕ್ಕೆ ಮಾನ್ಯತೆ ಸಿಕ್ಕಿಲ್ಲ.
ಹಲಸು ಬೆಳೆಸಬಹುದಾದ ಸ್ಥಳ:
- ಹಲಸು ಎಲ್ಲಾ ಮಣ್ಣಿನಲ್ಲೂ ಬೆಳೆಯುತ್ತದೆಯಾದರೂ ಸಡಿಲವಾದ ಮಣ್ಣು ಇರುವಲ್ಲಿ ಚೆನ್ನಾಗಿ ಬೆಳೆಯುತ್ತದೆ.
- ಹಿಂದೆ ನಮ್ಮ ಹಿರಿಯರು ಹಲಸಿನ ಬೀಜ ಬಿತ್ತಲು ಹುತ್ತವನ್ನು ಆಯ್ಕೆ ಮಾಡುತ್ತಿದ್ದರು.
- ಕಾರಣ ಅಲ್ಲಿನ ಮಣ್ಣು ಸಡಿಲವಾಗಿರುತ್ತಿತ್ತು.
- ಹುತ್ತದ ಒಳಗೆ ಒಂದು ಬೀಜ ಹಾಕಿದರೆ ಅದು ಬೇಗ ಬೆಳೆಯುತ್ತಲೂ ಇತ್ತು.
- ಬೇಗ ಇಳುವರಿ ಕೊಡುತ್ತಲೂ ಇತ್ತು.
- ಇದರ ಅರ್ಥ ಸಡಿಲವಾದ ಉತ್ತಮ ಮಣ್ಣು ಇರಬೇಕು ಎಂಬುದು.
- ಕರಾವಳಿಯ ಅಥವ ಇನ್ನಿತರ ತಳಭಾಗದಲ್ಲಿ ಜಂಬಿಟ್ಟಿಗೆ ಕಲ್ಲು ಉಳ್ಳ ಮಣ್ಣಿನಲ್ಲಿ ಹಲಸಿನ ಸಸಿ ಚೆನ್ನಾಗಿ ಬೆಳೆಯಲಾರದು.
- ಆಳ ಮಣ್ಣು ಇರುವಲ್ಲಿ ಒಂದು ಕಸಿ ಮಾಡಿದ ಗಿಡ 2-3 ವರ್ಷಕ್ಕೆ ಸಸಿ ತೊಡೆ ಗಾತ್ರದಷ್ಟು ದಪ್ಪ ಬೆಳೆಯುವುದು ಇದೆ.
- ಹಲಸಿನ ಸಸಿಗೆ ಎಳೆ ಹಂತದಲ್ಲಿ ಸ್ವಲ್ಪ ನೀರಾವರಿ ಮಾಡಿ ಸ್ವಲ್ಪ ಸ್ವಲ್ಪ ಪೋಷಕಾಂಶ ಕೊಡುವುದರಿಂದ ಗಿಡ ಚೆನ್ನಾಗಿ ಬರುತ್ತದೆ.
- ಅಡಿಕೆ ತೆಂಗಿನ ತೋಟದ ಬದುಗಳಲ್ಲಿ ಇದನ್ನು ಬೆಳೆಸಬಹುದು.
- ಪ್ರೂನಿಂಗ್ ಮಾಡುತ್ತಾ ಆಕಾರ ನಿಯಂತ್ರಣ ಮಾಡಬಹುದು.
ಅಕಾಲಿಕ ಹಲಸು ಯಾವಾಗಲೂ ರುಚಿಕಟ್ಟಾಗಿರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಬಲಿಯುವ ಹಲಸು ಚೆನ್ನಾಗಿ ಪಕ್ವವಾಗುತ್ತದೆ. ಬೇಸಿಗೆಯ ವಿಪರೀತ ಬಿಸಿಗೆ ಹಲಸಿನ ಕಾಯಿ ಸ್ಪಂದಿಸುವುದಿಲ್ಲ. ಆ ಸಮಯದಲ್ಲಿ ಹಲಸಿನ ಕಾಯಿ ಬೆಳೆದು ಹಣ್ಣಾದರೂ ಸಹ ಕೆಲವೊಮ್ಮೆ ಅರೆ ಬಲಿತು ಹಣ್ಣಾಗಿರುತ್ತದೆ. ಮಳೆ ಬಂದ ನಂತರ ತಂಪು ಅಗಿ ಕಾಯಿ ಚೆನ್ನಾಗಿ ಬಲಿಯುತ್ತದೆಯಾದರೂ ಮಳೆಯ ನೀರು ಹೆಚ್ಚಾಗಿ ಕಾಯಿ ಒಡೆಯುವಿಕೆ, ಶಿಲೀಂದ್ರ ಸೋಂಕು ಉಂಟಾಗುವುದೂ ಇದೆ. ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ಹಲಸಿನ ಹಣ್ಣು ರುಚಿ. ಅಲ್ಲಿ ಇಳುವರಿಯೂ ಹೆಚ್ಚು. ಇಳುವರಿ ಪ್ರಾರಂಭವಾಗುವುದೂ ಸಹ ಬೇಗ. ಈಗಾಗಲೇ ಹಲಸಿನ ಕಾಯಿಯ ಕ್ಯಾನಿಂಗ್ ಇತ್ಯಾದಿ ವ್ಯವಸ್ಥಿತವಾಗಿ ಮಾರುಕಟ್ಟೆ ಪ್ರಾರಂಭವಾಗಿದ್ದು, ಇವರ ಅಗತ್ಯಗಳಿಗಾಗಿ ಈ ತಳಿಯ ಹಲಸು ಅನುಕೂಲವಾಗಬಹುದು.
ಪುತ್ತೂರು ಸಮೀಪ ಇವರಲ್ಲಿ ಗಿಡ ಇದೆಯಂತೆ; 9448778497 -ಅನಿಲ್.
ಎಲ್ಲಿ ಗಿಡ ಸಿಗುತ್ತದೆ.
ಪುತ್ತೂರು ಸಮೀಪ ಇದ್ದರೆ ಜಾಕ್ ಅನಿಲ್ ಇವರಲ್ಲಿ ಇದೆಯಂತೆ.
9448778497
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ ಅಥವಾ ಬೆಂಗಳೂರು ಉತ್ತರದ ಕಡೆ ಎಲ್ಲಿ ಸಿಗುತ್ತದೆ ಮಾಹಿತಿ ನೀಡಿದರೆ ಅನುಕೂಲ