ಎಲೆಚುಕ್ಕೆ ರೋಗ ಇಲ್ಲದ ಸ್ಥಳವೇ ಇಲ್ಲ. ಇದಕ್ಕೆ ಬೆಳೆಗಾರರು ಏನು ಸಿಂಪಡಿಸಬೇಕು ಎಂದು ಕೇಳುತ್ತಾರೆ. ಆದರೆ ಮೊದಲು ಮಾಡಬೇಕಾದಾದ ಈ ಕೆಲಸ ಮಾಡದೆ ಸಿಂಪರಣೆ ಮಾಡಿದರೆ ವಾಸಿಯಾಗುವುದಿಲ್ಲ. ಕೆಲವು ಕಡೆ ಕಡಿಮೆ ಇರಬಹುದು. ಕೆಲವು ಕಡೆ ಉಲ್ಪಣ ಸ್ಥಿತಿಗೆ ತಲುಪಿರಲೂ ಬಹುದು. ನೂರು ಮರಗಳಲ್ಲಿ ಕೆಲವು ಮರಗಳು ಸೋಂಕು ತಗಲಿಸಿಕೊಳ್ಳದೆಯೂ ಇರಬಹುದು. ಇದೆಲ್ಲಾ ಸಸ್ಯದ ಅಂತರ್ಗತ ಶಕ್ತಿಯ ಮೇಲೆ ಅವಲಂಭಿಸಿದೆ. ಕೆಲವು ಸಾಂಕ್ರಾಮಿಕ ರೋಗಗಳು ತೀವ್ರವಾಗಿ ಹರಡಿದರೂ ಎಲ್ಲರನ್ನೂ ಬಾಧಿಸದೆ ಕೆಲವರನ್ನು ಬಿಟ್ಟಿರಬಹುದು. ಅದು ರೋಗಾಣು ಕೊಟ್ಟ ರಿಯಾಯಿತಿ ಅಲ್ಲ. ಅವರ ದೇಹದ ಅಂತರ್ಗತ ಶಕ್ತಿ ರೋಗ ಪ್ರವೇಶಕ್ಕೆ ಆಸ್ಪದ ಕೊಡದೆ ಇರುವುದು. ಹಾಗೆಯೇ ಎಲೆ ರೋಗ ಕೆಲವು ಮರಗಳಲ್ಲಿ ಇದೆ. ಕೆಲವು ಕಡೆ ಕಡಿಮೆ ಇದೆ. ಕೆಲವು ಏನೂ ಬಾಧಿಸದ್ದೂ ಇದೆ.
ಒಂದೆಡೆ ಅಡಿಕೆಗೆ ಹಳದಿ ರೋಗ ವ್ಯಾಪಿಸುತ್ತಿದೆ. ಬೆಳೆಗಾರರು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಬಂದ ತೋಟವನ್ನು ಹಾಗೆ ಉಳಿಸಿಕೊಂಡು ಪರಿಹಾರ ಸಿಗಬಹುದು ಎಂದು ಕಾಯುತ್ತಿದ್ದಾರೆ. ರೋಗಕಾರಕವನ್ನು ಇಟ್ಟುಕೊಂಡರೆ ಅದು ಹರಡುವ ಸಾಧ್ಯತೆಯೂ ಇರಬಹುದು. ಕೆಲವು ಕಡೆ ಹೀಗೆ ಹರಡಿದ ನಿದರ್ಶನ ಇದೆ ಸಹ. ಹಾಗೆಯೇ ಎಲೆ ಚುಕ್ಕೆ . ಮೊದಲಾಗಿ ಇದು ಕಳಸ ಸುತ್ತಮುತ್ತ ಕಾಣಿಸಿಕೊಂಡಿದೆ ಎನ್ನುತ್ತಾರೆ. ಹೊಸನಗರ, ನಿಟ್ಟೂರು ಇಲ್ಲಿಯೂ ಸಹ ತೀವ್ರ ಸ್ವರೂಪದಲ್ಲಿದೆ. ಇದೂ ಹರಡಿದ್ದು ರೋಗಕಾರಕವನ್ನು ಉಳಿಸಿಕೊಂಡ ಕಾರಣದಿಂದ.ಒಬ್ಬರು ಮಾತ್ರ ಸಿಂಪರಣೆ ಮಾಡಿದರೆ ಸಾಲದು ಸಾರ್ವತ್ರಿಕವಾಗಿ ಸಿಂಪಡಿಸಿದರೆ ಮಾತ್ರ ಫಲ.ಹಾಗಾಗಿ ಕಾರಕವನ್ನು ಉಳಿಸಿಕೊಂಡು ಔಷದೋಪಚಾರ ಮಾಡಿದರೆ ಅದು ಎಷ್ಟು ಫಲಕೊಡಬಹುದು ನೋಡೋಣ.
- ಯಾವುದೇ ಒಂದು ರೋಗ ಇರಲಿ, ಅದು ಒಂದೋ ಸ್ಪರ್ಶದ ಮೂಲಕ ಪ್ರಸಾರವಾಗುತ್ತದೆ, ಇಲ್ಲವೇ ಗಾಳಿ, ನೀರಿನ ಮೂಲಕ ಪ್ರಸಾರವಾಗುತ್ತದೆ.
- ಶಿಲೀಂದ್ರ ಸೋಂಕು ಸಾಮಾನ್ಯವಾಗಿ ಪರಾವಲಂಭಿಗಳು. ಇವು ಸಸ್ಯ ಜೀವಕೋಶದ ಒಳಗೆ ಸೇರಿಕೊಂಡು ಅಲ್ಲಿ ಪರಾವಲಂಬಿಯಾಗಿ ಕೆಲಸ ಮಾಡುತ್ತದೆ.
- ಕೆಲವು ಸೌಮ್ಯ ಶಿಲೀಂದ್ರಗಳ ಉಪಟಳ ಸೌಮ್ಯ ರೂಪದ್ದಾಗಿರಬಹುದು, ತೀವ್ರ ತರಹದ್ದು ತೀವ್ರವಾಗಿಯೇ ಹಾನಿ ಮಾಡುತ್ತದೆ.
- ಕಾರಕಗಳ ಸಂಖ್ಯೆಯನ್ನು ಸಾದ್ಯವಾದಷ್ಟು ಕಡಿಮೆ ಮಾಡದೆ ಯಾವ ಔಷದೋಪಚಾರವೂ ಫಲಕಾರಿಯಲ್ಲ.
- ಒಂದೋ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು ಇಲ್ಲವೇ ತಗಲಿದ್ದರೆ ಅವುಗಳ ಸಂಖ್ಯೆಯನ್ನು ಕಡಿಮೆಮಾಡಿ ಮತ್ತೆ ಔಷದೋಪಚಾರ ಮಾಡಬೇಕು.
ಎಲೆ ಚುಕ್ಕೆ ರೋಗ ಮತ್ತು ಪರಿಹಾರ ಕ್ರಮ:
- ಎಲೆ ರೋಗ ಹೊಸತಲ್ಲ. ಇದನ್ನು 1970 ನೇ ಇಸವಿಯ ಸುಮಾರಿಗೇ ಗುರುತಿಸಲಾಗಿದೆ.
- ಅಲ್ಲಲ್ಲಿ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಈ ಚುಕ್ಕೆ ಸಮಸ್ಯೆ ಇತ್ತು. ಬಹಳಷ್ಟು ಜನ ಇದನ್ನು ಗುರುತಿಸಿರಲಿಕ್ಕಿಲ್ಲ.
- ಕೆಲವೊಮ್ಮೆ ಅದು ತನ್ನಷ್ಟಕ್ಕೆ ಹೋಗುತ್ತಿತ್ತು. ಅಡಿಕೆ ಬೆಳೆಯಲ್ಲಿ ಸಣ್ಣ ಸಮಸ್ಯೆ ಆದರೂ ಅದನ್ನು ಗಂಭೀರವಾಗಿ ಯೋಚಿಸುವ ಕಾಲ ಅದಾಗಿರಲಿಲ್ಲ.
- ಈಗ ಇದು ಸ್ವಲ್ಪ ಉಲ್ಬಣಾವಸ್ಥೆಗೆ ತಲುಪಿದ್ದು ಹವಾಮಾನದ ವೈಪರೀತ್ಯದ ಕಾರಣದಿಂದ ಮತ್ತು ಸಸ್ಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸದ ಕಾರಣದಿಂದ ಎನ್ನಬಹುದು.
ಇದು ಸಸ್ಯದ ಎಲೆಗಳಿಗೆ ಹಾನಿ ಮಾಡುತ್ತದೆ. ನಂತರ ಕಾಯಿ, ಹೂ ಗೊಂಚಲುಗಳಿಗೂ ಹರಡುತ್ತದೆ. ಎಲೆಗಳಿಗೆ ತೊಂದರೆ ಆದಾಗ ಅದು ಸಸ್ಯದ ಹಸುರು ಭಾಗವನ್ನು ಕ್ಷೀಣಿಸುವಂತೆ ಮಾಡುತ್ತದೆ. ಆಗ ಗಿಡ ಸೊರಗುತ್ತದೆ. ಮೊದಲು ಕೆಳಭಾಗದ ಗರಿಗಳಿಗೆ ಬಾಧಿಸುತ್ತಾ ಮೇಲೆ ಪ್ರಸಾರವಾಗುತ್ತದೆ. ಪತ್ರ ಹರಿತ್ತು ಕಡಿಮೆಯಾಗಿ ಆಹಾರ ಸಂಗ್ರಹಣೆಗೆ ಅಡ್ಡಿಯಾಗಿ ಗಿಡ ಸೊರಗುತ್ತದೆ. ಅದಕ್ಕೆ ಪೂರಕವಾಗಿ ಬಾಹ್ಯ ಆಹಾರ ಸರಬರಾಜು ಸಹ ಕಡಿಮೆಯಾದರೆ ಇನ್ನಷ್ಟು ತೊಂದರೆ ಹೆಚ್ಚಾಗುತ್ತದೆ.
- ಲಕ್ಷಣಗಳು ಎಲೆಯಲ್ಲಿ ಮೊದಲು ತಿಳಿ ಹಳದಿ ಬಣ್ಣದ ಸಣ್ಣ ಸಣ್ಣ ಚುಕ್ಕೆಗಳಿಂದ ಪ್ರಾರಂಭವಾಗುತ್ತದೆ.
- ಅದು ಹೆಚ್ಚಾದಂತೆ ಅಲ್ಲಲ್ಲಿ ಸುಟ್ಟ ತರಹ ಆಗುತ್ತದೆ.
- ಎಲೆಯಲ್ಲಿ ಹಳದಿ ಚುಕ್ಕೆ ಮೊದಲಾಗಿ ಕೆಳಭಾಗದಲ್ಲಿ ಪ್ರಾರಂಭವಾಗುವ ಕಾರಣ ಅದನ್ನು ಮೊದಲಾಗಿ ಕತ್ತರಿಸಿ ತೆಗೆಯಬೇಕು.
- ಹೆಚ್ಚಿನ ಬೆಳೆಗಾರರು ಇದನ್ನು ಮಾಡಿಲ್ಲ. ಮೇಲೆ ಹೇಳಿದಂತೆ ಕಾರಕಗಳನ್ನು ಉಳಿಸಿಕೊಂಡು ಯಾವ ಉಪಚಾರ ಮಾಡಿದರೂ ಫಲ ಇಲ್ಲ.
- ಇನ್ನೇನು ಒಂದೆರಡು ವಾರಗಳಲ್ಲಿ ಉದುರಲಿರುವ ಸಸ್ಯದ ಎಲೆಯನ್ನು ಕತ್ತರಿಸುವುದರಿಂದ ಸಸ್ಯಕ್ಕೆ ಯಾವ ತೊಂದರೆಯೂ ಆಗಲಾರದು.
- ಅದರಲ್ಲೂ ಒಂದು ಅಡಿಕೆ ಗಿಡದಲ್ಲಿ 6-7 ಎಲೆಗಳಿದ್ದರೆ ಅದರಲ್ಲಿ ತಳಭಾಗದ ಎರಡು ಎಲೆಯಿಂದ ಸಸ್ಯಕ್ಕೆ ಸರಬರಾಜು ಆಗುವ ಆಹಾರ ತುಂಬಾ ಕಡಿಮೆ.
- ಇದರಲ್ಲಿ ಯಾವುದೇ ಚುಕ್ಕೆ ಕಂಡು ಬಂದರೆ ಅಥವಾ ಮೈಟ್ ಮುಂತಾದ ಹಾವಳಿ ಕಂಡು ಬಂದರೆ ಅದನ್ನು ಕತ್ತರಿಸಿ ತೆಗೆದು ಸೂಕ್ತ ವಿಲೇವಾರಿ ಮಾಡಿದಲ್ಲಿ ಶಿಲೀಂದ್ರದ ಸಂಖ್ಯೆ ಕಡಿಮೆಯಾಗುತ್ತದೆ.
- ಆಗ ಹರಡುವ ವೇಗವೂ ಕಡಿಮೆಯಾಗುತ್ತದೆ. ಈ ತೊಂದರೆ ಹೆಚ್ಚಾಗಿ ಸುಮಾರು 2 ವರ್ಷಗಳಾಯಿತು.
- ಆದರೆ ಯಾವ ರೈತನೂ ತಜ್ಞರು ಹೇಳಿದಂತೆ ರೋಗ ಬಾಧಿತ ಭಾಗಗಳನ್ನು ತೆಗೆದು ಔಷದೋಪಚಾರ ಮಾಡಿದ್ದಿಲ್ಲ.
- ಒಬ್ಬೊಬ್ಬ ಬೆಳೆಗಾರರರು ಹಲವಾರು ಬಾರಿ ಬೇರೆ ಬೇರೆ ಶಿಲೀಂದ್ರ ನಾಶಕ ಸಿಂಪಡಿಸಿದ್ದಾರೆ. ಆದರೆ ಫಲಿತಾಂಶ ಸಿಕ್ಕಿಲ್ಲ.
- ಬೆಳೆಗಾರರಿಗೆ ಯಾಕೋ ಎಲೆ ತೆಗೆಯುವುದು, ಅಥವಾ ರೋಗ ಗ್ರಸ್ತ ಸಸ್ಯ ಭಾಗಗಳನ್ನು ಕತ್ತರಿಸಿ ತೆಗೆಯುವುದು ಎಂದರೆ ಮನಸ್ಸು ಒಪ್ಪುವುದಿಲ್ಲ.
- ಹಾಗಾಗಿ ಯಾವ ಔಷಧಿಗೂ ಬಗ್ಗುತ್ತಿಲ್ಲ.
ರೋಗ ನಿಯಂತ್ರಣಕ್ಕೆ ಇದು ಅಗತ್ಯ:
- ಯಾವುದೇ ರೋಗ ಇರಲಿ. ಕೀಟ ಇರಲಿ. ಕೀಟನಾಶಕ, ರೋಗ ನಾಶಕವೇ ಪರಿಹಾರ ಅಲ್ಲ.
- ಅದು ರಕ್ಷಕ ಅಷ್ಟೇ. ಎಲೆತಿನ್ನುವ ಕೀಟ, ರಸ ಹೀರುವ ಕೀಟಗಳು ಹೆಚ್ಚಾಗಿ ಕಳೆ ಮುಂತಾದ ಕೆಲವು ಆಸರೆ ಸಸ್ಯಗಳಲ್ಲಿ ಪ್ರಾರಂಭವಾಗಿ ಬೆಳೆಗಳಿಗೆ ಬಾಧಿಸುತ್ತದೆ.
- ಈ ಕಳೆಗಳನ್ನು ಬೆಳೆಯಲು ಬಿಡದೆ ಕೀಟದ ಸಂಖ್ಯಾಭಿವೃದ್ದಿಯನ್ನು ನಿಯಂತ್ರಿಸಬಹುದು.
- ಇದನ್ನು ಮಾಡದೆ ಬರೇ ಕೀಟನಾಶಕದ ಪ್ರಯೋಗದಲ್ಲಿ ನಿರೀಕ್ಷಿತ ಫಲ ಕಾಣುವುದು ಸಾಧ್ಯವಿಲ್ಲ.
- ರೋಗಗಳೂ ಸಹ ಹಾಗೆ. ರೋಗ ಪ್ರಾರಂಭವಾಗುವಾಗ ಗುರುತಿಸಿ ಅದನ್ನು ನಾಶ ಮಾಡಿದರೆ ಹರಡುವಿಕೆ ಕಡಿಮೆಯಾಗುತ್ತದೆ.
- ಇದನ್ನು ಹೆಚ್ಚಿನ ರೈತರು ಮಾಡುವುದೇ ಇಲ್ಲ. ಹಾಗಾಗಿ ಸಾಮಾನ್ಯ ಶಿಲೀಂದ್ರ ನಾಶಕವು ಕೆಲಸ ಮಾಡುವುದಿಲ್ಲ.
- ಹೊಸ ತಲೆಮಾರಿನ ಔಷದೋಪಚಾರಗಳು ಬೇಕಾಗುತ್ತವೆ. ಪದೇ ಪದೇ ನಿಯಂತ್ರಣ ಮಾಡುತ್ತಾ ಇರಬೇಕಾಗುತ್ತದೆ.
- ಈಗಾಗಲೇ ಹಲವಾರು ಅಡಿಕೆ ಬೆಳೆಗಾರರು ಅವರಿವರಿಂದ ಕೇಳಿ ಅಡಿಕೆ ಮರದ ಗರಿಗಳಿಗೆ ಸಿಂಪರಣೆಗೆ ಮುಂದಾಗಿದ್ದಾರೆ.
- ಯಾರೂ ಬಾಧಿತ ಭಾಗಗಳನ್ನು ತೆಗೆದು ಸಿಂಪಡಿಸುವ ಕೆಲಸಕ್ಕೆ ಇಳಿದಿಲ್ಲ. ಹಾಗಾಗಿ ಇದರಿಂದ ನಿರೀಕ್ಷಿತ ಫಲ ಸಿಗುವುದು ಸಂದೇಹ.
- ಅದೂ ಅಂತರ್ವ್ಯಾಪೀ ಶಿಲೀಂದ್ರ ನಾಶಕವನ್ನು ಬಳಸುತ್ತಿರುವ ಕಾರಣ ಒಂದು ಎರಡು ಮೂರು ಬಾರಿ ಸಿಂಪಡಿಸಿದ ತರುವಾಯ ಆದು ನಿರೋಧಕ ಶಕ್ತಿ ಪಡೆಯುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಕೈಗೆ ಎಟಕುವ ಅಥವಾ ತೆಗೆಯಲು ಸಾಧ್ಯವಿರುವ ಗಿಡಗಳ/ ಮರಗಳ ಒಣಗಿದ ಹಾಳೆ, ಗರಿ ಮರಕ್ಕೆ ಅಂಟಿಕೊಂಡ ಹಾಳೆ ಇತ್ಯಾದಿಗಳನ್ನು ತೆಗೆದು ಅದನ್ನು ಬೇರೆಡೆಗೆ ಸಾಗಿಸಿ ಸುಟ್ಟು ಹಾಕಿದರೆ ಬಹುತೇಕ ರೋಗಾಣುಗಳು ಕ್ಷೀಣಿಸುತ್ತದೆ. ಆಗ ಸಿಂಪರಣೆ ಮಾಡಿದರೆ ಪ್ರತಿಫಲ ಹೆಚ್ಚು.
ಸಿಂಪರಣೆ ಮಾತ್ರವಲ್ಲ ಇದನ್ನೂ ಮಾಡಬೇಕು:
ರೋಗ ಬಂದ ವ್ಯಕ್ತಿಗೆ ಶಕ್ತಿ ಬರಬೇಕಿದ್ದರೆ ನ್ಯೂಟ್ರೀಶನ್ ಸಪ್ಲಿಮೆಂಟ್ ಬೇಕಾಗುತ್ತದೆ. ಇದು ಸಸ್ಯಗಳಿಗೂ ಅನ್ವಯ. ಮಾನವನ ದೇಹಕ್ಕೆ ಪ್ರೊಟೀನು, ವಿಟಮಿನ್, ನಾರು ಇತ್ಯಾದಿ ಬೇಕಾದಂತೆ ಸಸ್ಯಗಳಿಗೂ ಅಗತ್ಯ ಪೋಷಕಗಳು ಬೇಕು. ಬೆಳೆಗಾರರು ಈ ಹಿಂದೆ ಬಳಸುತ್ತಿದ್ದ ಪೋಷಕಾಂಶ ಸಮತೋಲನ ಪ್ರಮಾಣದ್ದೇ? ಅದರಲ್ಲಿ ಏನಾದರೂ ಅಸಮತೋಲನ ಉಂಟಾಗಿದೆಯೇ? ಸಸ್ಯಗಳಿಗೆ ಬರೇ NPK ಹೊರತಾಗಿ ಬೇರೆ ಪೋಷಕಗಳ ಅಗತ್ಯವಿದ್ದು ಅದನ್ನು ಕೊಟ್ಟದ್ದುಂಟೇ ಇದೆಲ್ಲವನ್ನೂ ಒಮ್ಮೆ ಅವಲೋಕನ ಮಾಡುವುದು ಸೂಕ್ತ.
- ಸಮತೋಲನ ಎಂದರೆ ಆಯಾ ಬೆಳೆಗೆ ಇವು ಇಷ್ಟು ಬೇಕು ಎಂದು ತಿಳಿದು ಹೇಳಿದ ಶಿಫಾರಿತ ಪ್ರಮಾಣ.
- ನಮ್ಮಲ್ಲಿ ಇನ್ನೂ ಸಮತೋಲನ ಎಂದರೆ ಎಲ್ಲ ಮೂರು ಪೊಷಕಾಂಶಗಳೂ ಸಮನಾಗಿರುವಂತದ್ದು ಎಂದು ತಿಳಿದವರು ಹೆಚ್ಚು ಇದ್ದಾರೆ.
- ಗೊಬ್ಬರ ಚೀಲದಲ್ಲಿ NPK ಹೆಸರು ಇದ್ದು ಪ್ರಮಾಣ ನೋಡದೆ ನಾನು NPK ಕೊಟ್ಟಿದ್ದೇನೆ ಎನ್ನುವವರೂ ಇದ್ದಾರೆ.
- ಸಾರಜನಕ ಕೊಟ್ಟರೆ ಹಾಳು ಎಂದು ಅದನ್ನು ವರ್ಜ್ಯವೆಂದು ಸಿಕ್ಕಾಪಟ್ಟೆ ರಂಜಕ ಕೊಡುವ ಬಹಳಷ್ಟು ರೈತರಿದ್ದಾರೆ.
- ನಾವು ನಮ್ಮ ಹೊಲಕ್ಕೆ ಸರ್ಕಾರಿ ಗೊಬ್ಬರದ ವಾಸನೆಯನ್ನೂ ತಾಗುವಂತೆ ಮಾಡಿಲ್ಲ ಎನ್ನುವವರೂ ಇದ್ದಾರೆ.
- ಇವೆರೆಲ್ಲಾ ಮೊದಲಾಗಿ ಶಿಫಾರಿತ ಪ್ರಮಾಣ ಎಂದರೇನು ಎಂಬುದನ್ನು ತಿಳಿಯಬೇಕು.
- ಸಾವಯವ ಮೂಲದಲ್ಲೇ ಗೊಬ್ಬರ ಕೊಡಿ. ಆದರೆ ಅದರಲ್ಲಿ ಪೋಷಕಗಳು ಎಲ್ಲವೂ ಇರುವಂತೆ ನೋಡಿಕೊಳ್ಳಿ.
- ಬರೇ ರಸಾಯನಿಕ ಗೊಬ್ಬರ ಕೊಡುವುದಲ್ಲ. ಮಣ್ಣಿನ ಜೈವಿಕ ರಚನೆ ಸುಧಾರಿಸಲು ಬೇಕಾಗುವ ಹಸುರೆಲೆ ಸಾವಯವ ಗೊಬ್ಬರ ಕೊಡುವುದು ಬಿಡಬಾರದು.
- ಹಸುವಿನ ಗೊಬ್ಬರ ಬಳಕೆ ಕೆಲವೊಂದು ರೋಗಗಳನ್ನು ನಿಯಂತ್ರಿಸುವಲ್ಲಿ ಸಹಕಾರಿ. ಇದನ್ನು ಬಿಡಬೇಡಿ.
- ಎಲೆ ರೋಗ ಬಂದಿದ್ದರೆ ಲಕ್ಷಣಗಳಿದ್ದರೆ ಮೊದಲು ಹೆಚ್ಚು ಬಾಧಿತ ಎಲೆ ತೆಗೆದು ಪತ್ರ ಸಿಂಚನದ ಮೂಲಕ ತಕ್ಷಣದ ಪೋಷಕಾಂಶ ಕೊಡಿ.
- ಬೇರುಗಳ ಮೂಲಕವೂ ಗೊಬ್ಬರ ಸಿಗುವಂತೆ ಮಾಡಿ. ಅದರಲ್ಲಿ ಬಹಳಷ್ಟು ನಿವಾರಣೆ ಸಾಧ್ಯವಾಗುತ್ತದೆ.
ಹೊರ ಮೂಲದ ಗೊಬ್ಬರಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿ: ಸಾವಯವ ಗೊಬ್ಬರವಾಗಿ ಕುರಿ, ಆಡು ಕೋಳಿ ಗೊಬ್ಬರವನ್ನು ಸ್ವಲ್ಪ ಸಮಯ ಬಳಕೆ ಮಾಡಬೇಡಿ. ಇದರಿಂದ ರೋಗ ಬರುತ್ತದೆ ಎಂದಲ್ಲ. ಈ ಎಲೆ ರೋಗ ಬೇರೆ ಬೆಳೆಗಳಾದ ಜೋಳ, ಟೋಮಾಟೋ ಹೀಗೆ ಬೇರೆ ಬೇರೆ ಬೆಳೆಗಳಲ್ಲಿ ಇದೆ. ಇದು ಗೊಬ್ಬರದ ಜೊತೆಗೆ ಸೇರಿ ಬರುವ ಕಸ ಕಡ್ಡಿಗಳ ಮೂಲಕ ಬರಲೂಬಹುದು ಹಾಗಾಗಿ ಸ್ವಲ್ಪ ಸಮಯ ಈ ಗೊಬ್ಬರ ತರಿಸುವುದು ನಿಲ್ಲಿಸಿ.
ಇಲ್ಲಿಯ ಲೇಖನಗಳು ಮುಂಚಿನಷ್ಟು ಚೆನ್ನಾಗಿಲ್ಲ.
ಅನಗತ್ಯ ವಿವರಗಳು, ಧಾರಾವಾಹಿಯಂತೆ ಮುಂದೇನೋ ಇದೆ ಎಂದು ಎಳೆಯುವುದು ಇತ್ಅದಿಗಳಿಂದ ಓದಲೇ ಬೇಸರವಾಗುತ್ತದೆ.
Succinct ಇದ್ದಷ್ಟೂ ಒಳ್ಳೆಯದು.
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ಲೇಖನ ಹೇಗಿರಬೇಕು ಎಂಬ ಬಗ್ಗೆ ತಿಳಿಸಿ. ಸಂಕ್ಷಿಪ್ತವಾಗಿರಬೇಕಾ, ಅಥವಾ ಇನ್ನೇನೋ ದಯವಿಟ್ಟು ತಿಳಿಸಿ. ನಮಗೆ ಉತ್ತಮಪಡಿಸಲು ಅನುಕೂಲವಾಗುತ್ತದೆ.