ಮಾವು ಬೆಳೆಯುವವರು ಎಷ್ಟೇ ಹೂ ಬಿಟ್ಟರೂ ಬಹಳಷ್ಟು ಕಾಯಿಗಳನ್ನು ಕಳೆದುಕೊಳ್ಳುವುದು ಸಾಮಾನ್ಯ. ಬಲಿಯುವ ತನಕ ಉದುರಿ ಹಾಳಾಗುವ ಪ್ರಮಾಣ ಅರ್ಧಕ್ಕರ್ಧ. ಇದಕ್ಕೆಲ್ಲಾ ಕಾರಣ ಸಸ್ಯದ ಧಾರಣಾ ಸಾಮರ್ಥ್ಯ. ಸಸ್ಯಕ್ಕೆ ಶಕ್ತಿ ಇದ್ದರೆ ಹೆಚ್ಚು ಫಲವನ್ನು ಆಧರಿಸುತ್ತದೆ. ಇಲ್ಲವಾದರೆ ರೋಗ, ಕೀಟಗಳ ಮೂಲಕ, ಶಾರೀರಿಕ ಅಸಮತೋಲನದ ಮೂಲಕ ಉದುರಿ ನಷ್ಟವಾಗುತ್ತದೆ. ಅದನ್ನು ಸರಿಪಡಿಸಲು ಒಂದು ಪೋಷಕಾಂಶ ಮಿಶ್ರಣದ ಸಿಂಪರಣೆ ಮಾಡಬಹುದು. ಇದು ಗರಿಷ್ಟ ಪ್ರಮಾಣದಲ್ಲಿ ಕಾಯಿಗಳನ್ನು ಉಳಿಸುತ್ತದೆ.
ಮಾವು ಸ್ಪೆಷಲ್ Mango special ಎಂಬ ಪೋಷಕಾಂಶ ಮಿಶ್ರಣ, ಸಸ್ಯ ಮತ್ತು ಹಣ್ಣಿನ ಸುಪ್ತ ಹಸಿವನ್ನು ನೀಗಿಸುವ ಅತ್ಯುತ್ತಮ ಪೋಷಕ ಮಿಶ್ರಣವಾಗಿದ್ದು, ಇದನ್ನು ದೇಶದಾದ್ಯಂತ ಲಕ್ಷಾಂತರ ಹಣ್ಣು ಬೆಳೆಗಾರರು ತಮ್ಮ ಬೇರೆ ಬೇರೆ ಹಣ್ಣಿನ ಬೆಳೆಗಳಿಗೆ ಬಳಕೆ ಮಾಡಿ ಉತ್ತಮ ಗುಣಮಟ್ಟದ ಹಣ್ಣು ಪಡೆಯುತ್ತಿದ್ದಾರೆ.
ಯಾವ ಪೋಷಕಗಳು:
- ಪೋಷಕಾಂಶಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಶಿಯಂ ಈ ಮೂರರ ಜೊತೆಗೆ ಇನ್ನೂ ಕೆಲವು ಪೂರಕ ಮತ್ತು ಸೂಕ್ಷ್ಮ ಪೋಷಕಗಳನ್ನು ಒದಗಿಸಿದಾಗ ಸಸ್ಯ ಬೆಳೆವಣಿಗೆ, ಫಸಲಿನ ಗುಣಮಟ್ಟ ಉತ್ತಮವಾಗುತ್ತದೆ ಎಂಬುದು ವೈಜ್ಞಾನಿಕವಾಗಿ ತಿಳಿದುಕೊಂಡ ಸತ್ಯ.
- ಪೂರಕ ಪೋಷಕಗಳಲ್ಲಿ ಸುಣ್ಣ, ಮೆಗ್ನೀಷಿಯಂ ಮತ್ತು ಗಂಧಕ ಪ್ರಮುಖವಾದವುಗಳು.
- ಸೂಕ್ಷ್ಮ ಪೋಷಕಗಳಲ್ಲಿ 16 ಬಗೆಯವುಗಳು ಇದ್ದರೂ ಸಹ 6 ಪೋಷಕಗಳಂತೂ ಬೇಕೇ ಬೇಕು.
- ಅವುಗಳೆಂದರೆ ಸತು, ಕಬ್ಬಿಣ, ತಾಮ್ರ, ಮ್ಯಾಂಗನೀಸ್, ಮಾಲಿಬ್ಡಿನಂ, ಮತ್ತು ಬೋರಾನ್.ಅಧಿಕ ಇಳುವರಿ ಪಡೆಯಲು ಇವು ಬೇಕಾಗುತ್ತವೆ.
- ಸಾಮಾನ್ಯವಾಗಿ ಬೇಸಾಯ ಮಾಡುತ್ತಾ ಮಾಡುತ್ತಾ, ಸಾವಯವ ವಸ್ತುಗಳ ಪೂರೈಕೆ ಕಡಿಮೆಯಾದಾಗ ಮಣ್ಣಿನಲ್ಲಿ ಸಹಜವಾಗಿ ಈ ಪೂರಕ ಮತ್ತು ಸೂಕ್ಷ್ಮ ಪೋಷಕಗಳ ಕೊರತೆ ಉಂಟಾಗುತ್ತದೆ.
ಬೋರಾನ್ ಪೂರೈಕೆಯಿಂದ ಹೂವುಗಳಲ್ಲಿ ಪರಾಗಸ್ಪಶಕ್ಕೆ ಅನುಕೂಲವಾಗಿ ಕಾಯಿಕಚ್ಚಲು ಸಹಾಯಕವಾಗುತ್ತದೆ. ಸತುವಿನ ಪೂರೈಕೆಯಿಂದ ಬೆಳವಣಿಗೆ ಕುಂಠಿತವಾಗಿ ಎಲೆಗಳು ಗೆಲ್ಲುಗಳು ಗಂಟುಗಳ ಬೆಳೆವಣಿಗೆ ಕುಂಠಿತವಾಗುತ್ತದೆ. ಕಬ್ಬಿಣದ ಪೂರೈಕೆಯಿಂದ ದ್ಯುತಿ ಸಂಸ್ಲೇಷಣ ಕ್ರಿಯೆಗೆ ಅನುಕೂಲವಾಗುತ್ತದೆ. ಹೀಗೆ ಆರೂ ಪೋಷಕಗಳೂ ಸಹ ಒಂದಿಲ್ಲೊಂದು ರೀತಿಯಲ್ಲಿ ಬೆಳವಣಿಗೆಯನ್ನು ವೃದ್ಧಿಸುವಲ್ಲಿ ಸಹಕಾರಿಯಾಗುತ್ತವೆ.
ಮಾವು ಸ್ಪೆಷಲ್ ಏನು ಮಾಡುತ್ತದೆ:
- ಮಾವು ಸ್ಪೆಷಲ್ ಎಂಬುದು ಮಾವಿನ ಬೆಳೆಗೆ ಕೆಲವು ಹಂತಗಳಲ್ಲಿ ಬೆಳವಣಿಗೆಯನ್ನು ದೂಡಿ ಕೊಟ್ಟು ಉತ್ತೇಜಿಸುವ ಕೆಲವು ಪೋಷಕಗಳ ಸಂಮ್ಮಿಶ್ರಣವಾಗಿದೆ. (Micro nutrient mixture)
- ಇದನ್ನು ಎಲೆಗಳ ಮೇಲೆ, ಕಾಯಿಗಳ ಮೇಲೆ, ಸಿಂಪಡಿಸಿ ಮರದ ಸುಪ್ತ ಹಸಿವನ್ನು ನೀಗಿಸಿ, ಉತ್ತಮ ಮತ್ತು ಗುಣಮಟ್ಟದ ಇಳುವರಿ ಪಡೆಯಲು ಅನುಕೂಲವಾಗುತ್ತದೆ.
- ಕೆಲವು ತಳಿಯ ಮಾವಿನ ಹಣ್ಣಿನ ಒಳಗೆ ಸ್ಪಂಜಿನಂತ ಅಂಗಾಂಶ (Spongy tissue) ಬೆಳೆದು ಅದು ಹುಳಿಯಾಗಿದ್ದು, ತಿನ್ನುವವರಿಗೆ ಅಸಹ್ಯವಾಗುತ್ತದೆ.
- ಇದನ್ನು ತುಂಬಾ ಕಡಿಮೆ ಮಾಡಲು ಈ ಮಾವು ಸ್ಪೆಷಲ್ ಸಹಕಾರಿ.
- ಒಂದು ಎಕ್ರೆಗೆ 2 ಕಿಲೋ ಮಿಶ್ರಣ ಬೇಕಾಗುತ್ತದೆ. ಇದನ್ನು ಕೆಲವು ರೈತರು ಅನನಾಸು, ದಾಳಿಂಬೆಗೂ ಪ್ರಯೋಗಿಸಿ ನೋಡಿ ಉತ್ತಮ ಫಲಿತಾಂಶ ಗುರುತಿಸಿದ್ದುಂಟು.
ಉಪಯೋಗ:
- ಮಾವು ಸ್ಪೆಷಲ್ ತಯಾರಿಕೆಯು ಹುಡಿ ಸಕ್ಕರೆ ತರಹದದಲ್ಲಿದ್ದು, ನೀರಿನಲ್ಲಿ ಪೂರ್ತಿಯಾಗಿ ಕರಗುತ್ತದೆ.
- ಇದನ್ನು ಒಂದು ಲೀ ನೀರಿಗೆ 5 ಗ್ರಾಂ ನಂತೆ ನಂತೆ ಮಿಶ್ರಣ ಮಾಡಿ ಆ ದ್ರಾವಣಕ್ಕೆ ಒಂದು ಲಿಂಬೆ ಹಣ್ಣಿನ ರಸ ಮತ್ತು 1 ರೂಪಾಯಿಗೆ ಲಭ್ಯವಾಗುವ ಶಾಂಪೂವನ್ನು ( 20 ಲೀ ದ್ರಾವಣಕ್ಕೆ) ಮಿಶ್ರಣ ಮಾಡಬೇಕು.
- ಮಾವಿನ ಮರ ಹೂ ಬಿಡುವ ಮುಂಚೆ ಸಪ್ಟೆಂಬರ್ – ಅಕ್ಟೋಬರ್ ತಿಂಗಳಿನಲ್ಲಿ ಮತ್ತು ಮಾವಿನ ಮರದಲ್ಲಿ ಹೂ ಬಿಟ್ಟು ಕಾಯಿಗಳು ಲಿಂಬೆ ಹಣ್ಣಿನ ಗಾತ್ರಕ್ಕೆ ಬಂದ ಸಮಯದಲ್ಲಿ
- ಮತ್ತು ಕಾಯಿ ಕೊಯಿಲು ಮಾಡುವ 20 ದಿನಕ್ಕೆ ಮುಂಚೆ ಒಮ್ಮೆ ಒಟ್ಟು ಮೂರು ಬಾರಿ ಎಲೆಗಳಿಗೆ ಸಿಂಪರಣೆ ಮಾಡಿದರೆ ಉತ್ತಮ ಗುಣಮಟ್ಟದ ಫಲ ಲಭ್ಯವಾಗುತ್ತದೆ.
- ಕಾಯಿಕಚ್ಚುವ ಪ್ರಮಾಣ ಹೆಚ್ಚುತ್ತದೆ. ಹಣ್ಣುಗಳ ಗುಣಮಟ್ಟ ಹೆಚ್ಚುತ್ತದೆ. ಹಣ್ಣುಗಳು ಒಂದೇ ಸಮನಾಗಿ ಬಂಗಾರದ ಬಣ್ಣವನ್ನು ಪಡೆದು ಕೊಳ್ಳುವವರಿಗೆ ಆಕರ್ಷಕವಾಗಿ ಕಾಣುತ್ತದೆ.
ಇದನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಮೂಲ ತಾಂತ್ರಿಕತೆಯಾಗಿದ್ದು, ಅದನ್ನು ಅವರ ಅನುಮತಿ ಮೇರೆಗೆ ಕೆಲವರು ತಯಾರಿಸಿ ಒದಗಿಸುತ್ತಾರೆ.