ನಮ್ಮ ಹಿರಿಯರ ಆಹಾರಾಭ್ಯಾಸಗಳಲ್ಲಿ ಬಹಳ ಶಿಸ್ತು, ಪೌಷ್ಠಿಕತೆ , ಔಷಧೀಯ ಮಹತ್ವ ಇತ್ತು. ಋತುಮಾನ ಆಧಾರಿತ ಆಹಾರವಸ್ತುಗಳನ್ನೇ ಬಳಸುವುದು ಅವರ ಕ್ರಮ. ಇಂತಹ ಆಹಾರಗಳಲ್ಲಿ ಕೆಸು, ಅಮಟೆ, ಮಾವು, ಕುಡಿ,ಸೊಪ್ಪು ಮುಂತಾದವು ಸೇರಿವೆ.
- ಹಿರಿಯರು ಉಚಿತವಾಗಿ ಲಭ್ಯವಿರುತ್ತಿದ್ದ ವಸ್ತುಗಳಿಗೇ ಹೆಚ್ಚಿನ ಮಹತ್ವ ನೀಡುತ್ತಿದ್ದರು.
- ಅದು ಉಚಿತವಾಗಿದ್ದರೂ ಆರೋಗ್ಯಕ್ಕೆ ಉತ್ತಮವಾಗಿತ್ತು.
- ಈಗ ನಾವು ದುಡ್ಡು ಕೊಟ್ಟು ಖರೀದಿಸುವ ವಸ್ತುಗಳಲ್ಲಿ ಆರೋಗ್ಯವನ್ನು ಗಮನಿಸುವುದೇ ಇಲ್ಲ.
- ಹಿಂದೆ ಮಳೆಗಾಲವೆಂಬ ಕಷ್ಟದ ಸಮಯದಲ್ಲಿ ಅಡುಗೆಗೆ ಅಗ್ಗದಲ್ಲಿ ದೊರೆಯುವ ಹುಳಿ ಕಾಯಿ ಇದಾಗಿತ್ತು.
ಏನಿದು ಅಮಟೆ:
- ಅಮಟೆ , ಅಮ್ಟೆ, ಅಂಬಡೆ, ಅಂಬೋಡೆ ಎಂಬ ಹೆಸರುಗಳಲ್ಲಿ ಕರೆಯಲ್ಪಡುವ ಹುಳಿ ರುಚಿಯ ಈ ಕಾಯಿ ಹಿಂದೆ ಪ್ರತೀ ಮನೆಯಲ್ಲೂ ಇದ್ದ ಮರ.
- ಹುಣಸೆ ಹುಳಿಯ ಬದಲಿಗೆ ಇದನ್ನು ಬಳಕೆ ಮಾಡುತ್ತಿದ್ದರು.
- ಚಳಿಗಾಲದಲ್ಲಿ ಮರವು ಎಲೆ ಉದುರಿಸಿ, ಹೂ ಬಿಟ್ಟು ಮಳೆಗಾಲಕ್ಕೆ ಕಾಯಿಗಳಾಗುತ್ತದೆ.
- ಮಳೆಗಾಲ ಮುಗಿಯುವ ತನಕವೂ ಕಾಯಿಗಳಿರುತ್ತವೆ.
- ಬೆಳೆದಂತೇ ಹಣ್ಣಾಗಿ ಉದುರುತ್ತದೆ. ಹಕ್ಕಿಗಳು, ಬಾವಲಿಗಳು, ಕೋತಿಗಳಿಗೆ ಅಹಾರವಾಗಿ ಬೀಜ ಪ್ರಸಾರವಾಗಿ ಈ ಸಸ್ಯಪ್ರಭೇಧವು ಉಳಿದಿದೆ.
ಇದು ಒಂದು ಔಷಧಿ:
- ಆಮಟೆ ಬರೇ ಬಾಯಿ ರುಚಿಯ ಅಡುಗೆಗೆ ಬಳಕೆ ಮಾಡುವುದಕ್ಕೆ ಮಾತ್ರವಲ್ಲ.
- ಇದರಲ್ಲಿ ಹಲವಾರು ಔಷಧೀಯ ಗುಣಗಳೂ ಇವೆ.
- ಇದರ ಸೇವನೆಯಿಂದ ಕ್ಷಯ, ಭೇಧಿ, ಅತಿಸಾರ, ವಾಂತಿಗಳಿಗೆ ಇದು ಔಷಧಿಯಂತೆ.
- ಇದರ ಕಾಯಿಯಲ್ಲದೆ ಮರದ ತೊಗಟೆಯಲ್ಲಿ , ಬೇರಿನಲ್ಲಿ , ಹೂವಿನಲ್ಲಿ, ಕ್ಯಾನ್ಸರ್ ಗುಣಪಡಿಸಬಲ್ಲ ಗುಣ ಇದೆ ಎನ್ನಲಾಗುತ್ತದೆ.
- ಬಾಂಗ್ಲಾ ದೇಶದಲ್ಲಿ ಇದರ ಆ್ಯಂಟೀ ಆಕ್ಸಿಡೆಂಟ್, ಸೂಕ್ಷ್ಮಾಣು ಜೀವಿ ನಿರೋಧಕ, ಮತ್ತು ನಂಜು ನಿರೋಧಕ ಶಕ್ತಿಯ ಬಗ್ಗೆ ಅಧ್ಯಯನ ನಡೆಸಿ ಇದನ್ನು ಉತ್ತಮ ಔಷಧೀಯ ಸಸ್ಯವೆಂದು ಪರಿಗಣಿಸಿದ್ದಿದೆ.
ಮೂಲ:
- ವರ್ಷದಲ್ಲಿ ಸೀಸನ್ ನಲ್ಲಿ ಅಮಟೆ ಅಡುಗೆ ಮಾಡಿ ತಿಂದರೆ ಅವರ ಆರೋಗ್ಯ ಸುಸ್ಥಿರ.ವೈಜ್ಞಾನಿಕ ಹೆಸರು Spondia.
- ಇದು anacaradiaceae ಕುಟುಂಬಕ್ಕೆ ಸೇರಿದೆ,ಈ ಕುಟುಂಬದಲ್ಲಿ ಪ್ರಾದೇಶಿಕವಾಗಿ ಬೇರೆ ಬೇರೆ ವಿಧಗಳು ಇವೆ.
- ಕಸಿ ಅಮಟೆ ಎಂದು ಕರೆಯಲ್ಪಡುವ Spondias mombin ಇದು ಗಾತ್ರದಲ್ಲಿ ಸ್ವಲ್ಪ್ಪ ದೊಡ್ಡದಿದ್ದು ಸಿಪ್ಪೆ ದಪ್ಪ ಇರುತ್ತದೆ.
- ಇದರ ಎಲೆಗೂ ಸ್ಥಳೀಯ ಅಮಟೆಯ ಎಲೆಗೂ ರಚನೆಯಲ್ಲಿ ಭಿನ್ನತೆ ಇದೆ.
- ಸ್ಥಳೀಯ ಅಮಟೆಯಷ್ಟು ಹುಳಿ ಇರುವುದಿಲ್ಲ.
- ಇದು ಒಂದು ಆಯ್ಕೆ ತಳಿಯೇ ಹೊರತು ಕಸಿ ತಾಂತ್ರಿಕತೆಯಲ್ಲಿ ಉತ್ಪಾದಿಸಿದ್ದು ಅಲ್ಲ.
- ಅದೇ ರೀತಿಯಲ್ಲಿ ತಮಿಳು ನಾಡಿನಲ್ಲಿ Spondias purpurea L ಎಂಬ ಇನ್ನೊಂದು ಅಮಟೆ ಜಾತಿಯಿದೆ.
- ಅದನ್ನು ಅವರು ವಾಣಿಜ್ಯಿಕ ಬಳಕೆಗೆ ಬಳಸಿಕೊಳ್ಳುತ್ತಾರೆ.
- ಇದರಿಂದ ತಯಾರಿಸಿದ ಕೆಲವು ಮಿಟಾಯಿ ತರಹದ ತಿನಿಸುಗಳು( Imili) ಅಂಗಡಿಗಳಲ್ಲಿ ಲಭ್ಯವಿದೆ.
- ಅಮಟೆಯ ಮೂಲದ ಬಗ್ಗೆ ಯಾವುದೇ ಉಲೇಖಗಳಿಲ್ಲದಿದ್ದರೂ ಇದು ಮಲಯ ಮೂಲದ್ದು ಎನ್ನಲಾಗುತ್ತಿದೆ.
- ಇದನ್ನು ವೈಲ್ಡ್ ಮ್ಯಾಂಗೋ, ಅಥವಾ ಹೊಗ್ –ಪ್ಲಂ ಎಂದೂ ಕರೆಯುತ್ತಾರೆ.
- ಮಳೆ ಉತ್ತಮವಾಗಿ ಬರುವ ಕರಾವಳಿ ಮಲೆನಾಡಿನ ಭಾಗಗಳಲ್ಲಿ ಇದನ್ನು ಕಾಣಬಹುದು.
- ದಕ್ಷಿಣ ಭಾರತದ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗುಜರಾತಿನ ಕರಾವಳಿ ಭಾಗಗಳಲ್ಲಿಯೂ ಈ ಸಸ್ಯ ಪ್ರಭೇಧಗಳಿವೆ.
ಅಳಿಯುತ್ತಿದೆ – ಉಳಿಸಬೇಕಿದೆ:
- ಕೃಷಿ ವಿಸ್ತರಣೆ, ಸಾಂಪ್ರದಾಯಿಕ ಮರಮಟ್ಟುಗಳು, ಅಲ– ಫಲಗಳ ಮೇಲಿನ ಕೀಳರಿಮೆಯಿಂದ ಕೆಡವಿದ ಸಸಿಗಳ ಬದಲಿಗೆ ಬೇರೆ ಸಸಿ ನಾಟಿ ಮಾಡದೆ, ಈಗ ಅಮಟೆ ಸಸ್ಯಮೂಲ ಕ್ಷೀಣಿಸಲಾರಂಭಿಸಿದೆ.
- ವಸ್ತುವೊಂದು ನಮ್ಮಿಂದ ದೂರವಾದಾಗ ಅದಕ್ಕೆ ಹೆಚ್ಚು ಮಹತ್ವ ಬಂದಂತೇ ಅಮಟೆಗೂ ಅದೇ ಕಾಲ ಬಂದಿದೆ.ಬೇಡಿಕೆ ಇದೆ. ಬೆಳೆ ಇಲ್ಲ.
ಅಮಟೆ ಗಿಡದ ಸಸ್ಯಾಭಿವೃದ್ದಿ:
- ಅಮಟೆ ಮರದಲ್ಲಿ ಬೆಳೆದ ಹಣ್ಣು ಕೆಳಕ್ಕೆ ಉದುರಿ ಕೆಲವು ಮೊಳಕೆ ಬಂದು ಸಸಿಯಾಗುತ್ತವೆ.
- ಇದಲ್ಲದೇ ಹದ ಬಲಿತ ಗೆಲ್ಲುಗಳನ್ನು ನಾಟಿ ಮಾಡಿದರೂ ಅದರಲ್ಲಿ ಬೇರು ಬರುತ್ತದೆ.
- ಸಾಮಿಪ್ಯ ಕಸಿಗೆ ಹಾಗೂ ಮೃದು ಕಾಂಡ ಕಸಿಗೆ ಹೊಂದಿಕೊಳ್ಳುತ್ತದೆ.
- ನಾಟಿ ತಳಿಗಳಲ್ಲಿ ಮಿಶ್ರ ಪರಾಗ ಸ್ಪರ್ಶದಿಂದಾಗಿ ಹಲವಾರು ವೈವಿಧ್ಯತೆಗಳು ನೈಸರ್ಗಿಕವಾಗಿಯೇ ಆಗಿವೆ.
- ಕೆಲವು ದೊಡ್ಡದು, ಕೆಲವು ಸಣ್ಣದು, ಹೆಚ್ಚು ಹುಳಿಯವೂ ಮತ್ತೆ ಕೆಲವು ಒಗರು ಇನ್ನು ಕೆಲವು ಹುಳಿ ಸಿಹಿ ರುಚಿಯವೂ ಅಲ್ಲಲ್ಲಿ ಲಭ್ಯ.
- ಕೆಲವು ದಪ್ಪದ ಸಿಪ್ಪೆ ಹೊಂದಿದ್ದರೆ ಮತ್ತೆ ಕೆಲವು ತೆಳು.
- ಕೆಲವು ಒಳ ಬೀಜದಿಂದ ಸಲೀಸಾಗಿ ಸಿಪ್ಪೆ ಬಿಡುವವುಗಳು, ಮತ್ತೆ ಕೆಲವು ಕತ್ತರಿಸಿ ಬೇರ್ಪಡಿಸುವಂತವುಗಳೂ ನಮ್ಮ ಸುತ್ತಮುತ್ತ ಲಭ್ಯ.
- ಸಾಮಾನ್ಯವಾಗಿ ಅಮಟೆ ಕಾಯಿಯನ್ನು ಕೊಯಿದು ತಂದು ಅದನ್ನು ಜಜ್ಜಿ ಬೀಜ ಮತ್ತು ಸಿಪ್ಪೆಯನ್ನು ಬೇರ್ಪಡಿಸುತ್ತಾರೆ.
- ಆಗ ಸಲೀಸಾಗಿ ತೊಗಟೆ ಮತ್ತು ಬೀಜ ಬೇರ್ಪಡುವಂತದ್ದಿದ್ದರೆ ಅದು ಉತ್ತಮ ಅಮಟೆ ಎಂದು ಕರೆಯಲ್ಪಡುತ್ತದೆ.
- ಅದನ್ನು ನಿರ್ಲಿಂಗ ರೀತಿಯಲ್ಲಿ ಸಸ್ಯಾಭಿವೃದ್ದಿಮಾಡಿಕೊಳ್ಳಬಹುದು.
ಅಮಟೆ ಕಾಯಿಯ ಅಡುಗೆಗಳು.
- ಒಂದೆರಡು ಅಮಟೆಯನ್ನು ಬೇಯಿಸಿ ಹಿಚುಕಿ ಸ್ವಲ್ಪ ಬೆಲ್ಲ ಉಪ್ಪು ಹಾಕಿ ಬೆಳ್ಳುಳ್ಳಿ ಒಗ್ಗರಣೆ ಹಾಕಿ ಬಜ್ಜಿ (ಬೇಯಿಸಿ ಹಿಚುಕಿ ಮಾಡಿದ ತಯಾರಿ) ಮಾಡಿದರೆ ಅದರಲ್ಲಿ ನಾವು ಖುಷಿ ಖುಷಿ ಊಟ ಮಾಡಬಹುದು.
- ಅಮಟೆಯಿಂದ ಬೇರೆ ಬೇರೆ ಅಡುಗೆಗಳನ್ನು ಮಾಡಲಾಗುತ್ತದೆ.
- ಮುಖ್ಯವಾಗಿ ಮಳೆಗಾಲದಲ್ಲಿ ಕೆಸುವಿನ ಬೇರು ಹಾಗೂ ಅಮಟೆ ಹಾಕಿ ಹುಳಿ ( ಸಾಂಬಾರು) ಮಾಡುವ ಪ್ರತೀತಿ ಇದೆ.
- ಅದೇ ರೀತಿ ದಕ್ಷಿಣ ಕನ್ನಡದಲ್ಲಿ ಪ್ರಸ್ಥಗಳಿಗೆ ಸಿಹಿ ಪದಾರ್ಥವಾಗಿ ಮೆಣಸು ಕಾಯಿ ಎಂಬ ಅಡಿಗೆ ಮಾಡುತ್ತಾರೆ.
- ಅದಕ್ಕೆ ಅಮಟೆ ಕಾಯಿಯನ್ನು ಬಳಕೆ ಮಾಡುತ್ತಾರೆ.
- ಜಿಎಸ್ಬಿ ಪಂಗಡದವರು ಅಮಟೆಯ ಬೇರೆ ಪಾಕಗಳನ್ನೂ ಮಾಡುತ್ತಾರೆ. ಉಪ್ಪಿನ ಕಾಯಿಗೆ ಅಮಟೆ ಉತ್ತಮ.
- ಎಳೆ ಮಿಡಿಯನ್ನು ಉಪ್ಪಿನ ಕಾಯಿ ಮಾಡುತ್ತಾರೆ.
- ಬೆಳೆದ ಕಾಯಿಯನ್ನು ಹಸಿಯಾಗಿ ಮತ್ತು ಬೇಯಿಸಿ ಉಪ್ಪು ನೀರಿನಲ್ಲಿ ಹಾಕಿಟ್ಟು ಬೇಕಾದಾಗ ಅಡುಗೆಗೆ ಬಳಕೆ ಮಾಡುತ್ತಾರೆ.
- ಜ್ಯಾಂ, ಜೆಲ್ಲಿಯನ್ನೂ ತಯಾರಿಸುತ್ತಾರೆ. ಮಾವಿನ ಕಾಯಿಯಂತೇ ಇದರ ಉಪಯೋಗÀ ಇದೆ.
ಈ ಸಸ್ಯ ಸಂಪತ್ತು ಈಗ ಅಳಿವಿನಂಚಿಗೆ ತಲುಪಿದೆ. ಅಮಟೆ ಎಲ್ಲರಿಗೂ ಭಾರವಾದ ಮರವಾಯಿತು. ಹಳ್ಳಿಗಳಲ್ಲೂ ಅಮಟೆ ಮರ ಇಲ್ಲದ ಸ್ಥಿತಿ ಬಂತು. ಉಳಿಸಿದವರು ಸಂರಕ್ಷಿಸಿರಿ. ಕಡಿದವರು ಹೊಸತು ನೆಡಿ.