ಹಳ್ಳಿಗಳಲ್ಲಿ, ಹಳ್ಳಿಗೆ ತಾಗಿದ ಪಟ್ಟಣಗಳಲ್ಲಿ ಈಗ ಬೆಳಕಿನ ದೀಪವನ್ನು ಹುಡುಕಿ ಬರುವ ಹಿಂಡು ಹಿಂಡು ದುಂಬಿಗಳು (ಕೆಲ್ಲು) ಜನರಲ್ಲಿ ಆತಂಕವನ್ನು ಉಂಟು ಮಾಡಿದೆ. ಕೆಲವು ಜನ ಇದು ಯಾವುದೋ ಮಾರಿ. ದೆವ್ವದ ಉಪಟಳ ಎಂದು ಮಾತಾಡುತ್ತಿದ್ದಾರೆ. ವಾಸ್ತವವಾಗಿ ಇದು ನಾವೇ ಮಾಡಿಕೊಂಡ ಆವಾಂತರ. ಬಹುತೇಕ ಎಲ್ಲಾ ಮನೆಗಳಲ್ಲೂ ಇದು ಇದೆ. ರಸ್ತೆ ಸಂಚರಿಸುವಾಗ ಮೈಗೆ ತಾಗಿ ಮನೆ ಮನೆಗೆ ಪ್ರಸಾರವಾಗುತ್ತಿದೆ.ಮನೆಯ ಕಿಟಕಿ ಬಾಗಿಲು ಸಂದು, ಬಟ್ಟೆ ಬರೆ, ಪುಸ್ತಕಗಳು, ಹಂಚಿನ ಛಾವಣಿಯ ರೀಪು ಪಕ್ಕಾಸುಗಳಲ್ಲಿ, ಗೊಡೆ ಸಂದುಗಳಲ್ಲಿ, ಹೆಚ್ಚೇಕೆ ಕಾರು, ಬೈಕಿನ ಒಳಗೂ ಸೇರಿಕೊಂಡು ಇದು ಕಿರಿ ಕಿರಿ ಉಂಟು ಮಾಡುವ ಕೀಟ. ಕಚ್ಚಿದರೆ ತುರಿಕೆ, ಅಲರ್ಜಿ ಆಗುವ ಇದು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಇದು ಮಾಡುವ ಅನಾಹುತ ಏನು ಇಲ್ಲಿದೆ ಓದಿ.
ಇದು ಮಾಹ ಮಾರಿ ಕೀಟ:
- ಈ ಕೀಟ ಮನೆಗೆ ಮಾಟ ಎನ್ನುತ್ತಾರೆ ಕೆಲವರು.
- ಕಾರಣ ಇಷ್ಟೇ ಈ ಕೀಟ ಮನೆಯೊಳಗೆ ಬಂದರೆ ಒಡಿಸುವುದು ಹರ ಸಾಹಸ.
- ಸಾವಿರ ಸಾವಿರ ಸಂಖ್ಯೆಯಲ್ಲಿ ಮೊಟ್ಟೆ ಇಟ್ಟು ಹಿಂಡು ಹಿಂಡು ಮರಿಯಾಗಿ ಕಿರಿ ಉಂಟು ಮಾಡುತ್ತದೆ.
- ಇಂದಿಗೂ ಕೆಲವು ಮನೆಗಳಲ್ಲಿ ವಾರಕ್ಕೆ ಬುಟ್ಟಿ ಬುಟ್ಟಿ ಈ ಕೀಟವನ್ನು ಗುಡಿಸಿ ತೆಗೆದು ಬೆಂಕಿಗೆ ಹಾಕಿ ಸುಡುತ್ತಿದ್ದಾರೆ.
- ಮನುಷ್ಯನ ಬದುಕಿಗೆ ಏನೇ ಕಷ್ಟಗಳಾದರೂ ಸಹಿಸಿಕೊಳ್ಳಬಹುದು,
- ಆದರೆ ಈ ಮಾನಸಿಕ ಕಿರಿಕಿರಿಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.
- ಇದು ಮನೆಯ ಗೋಡೆ, ಸಂದು ಗೊದಿಗಳು, ಸ್ಲಾಬ್ ಮೂಲೆಗಳು, ಬಾಗಿಲ ಸಂದುಗಳು, ಬಟ್ಟೆ, ಪುಸ್ತಕ ಎಲ್ಲೆಂದರಲ್ಲಿ ಗುಂಪು ಗುಂಪಾಗಿ ವಾಸಿಸಿ ಅಲ್ಲೆಲ್ಲಾ ಸಂತಾನಾಭಿವೃದ್ದಿ ಮಾಡುತ್ತದೆ.
- ನೀವು ಎಲ್ಲಿಗಾದರೂ ಹೋಗುವುದಿದ್ದರೆ ನಿಮ್ಮ ಜೊತೆಗೆ ಬಟ್ಟೆ, ಚೀಲ ಮುಂತಾದವುಗಳ ಜೊತೆಗೆ ಒಂದೆರಡು ಪ್ರಯಾಣ ಬೆಳೆಸಿ ಅಲ್ಲಿಗೂ ಪ್ರಸಾರವಾಗುತ್ತದೆ.
- ಇದು ಕಚ್ಚುತ್ತದೆ. ಇದರ ಶರೀರದಲ್ಲಿ ಒಂದು ರೀತಿಯ ಆಮ್ಲ ಇದ್ದು, ಕಚ್ಚಿದ ಭಾಗ ಕೆಂಪಗಾಗಿ ತುರಿಕೆ ಉಂಟಾಗುತ್ತದೆ.
- ಜಜ್ಜಿದರೆ ಕೆಟ್ಟ ವಾಸನೆ ಬರುತ್ತದೆ.
- ಎಲ್ಲೆಲ್ಲಿ ಬೆಳೆಕು ಇದೆಯೋ ಅಲ್ಲೆಲ್ಲಾ ಇದು ಹಾರುತ್ತಾ ಅದಕ್ಕೆ ಮುತ್ತುತ್ತದೆ.
- ಹಳ್ಳಿಯ ಜನ ಹೊರಗಿನ ಲೈಟ್ ಹಾಕಿ ಮನೆಯ ಎಲ್ಲಾ ಬಾಗಿಲು ಮುಚ್ಚಿ ಉಸಿರುಗಟ್ಟಿ ಕುಳಿತುಕೊಳ್ಳುವಂತಾಗಿದೆ.
- ಮನೆಗೆ ನೆಂಟರಿಷ್ಟರು ಬಂದರೆ ಮುಜುಗರವಾಗುತ್ತದೆ.
- ಮಲಗುವಾಗ ಹಾಸಿಗೆಯಲ್ಲಿ ಒಂದು ಇದ್ದರೂ ಅದು ಕಚ್ಚಬಹುದು.
- ಕಿವಿಗೆ ಹೊಕ್ಕಬಹುದು. ಹಳ್ಳಿಯ ಜನ ಇಂಹಹ ಹಿಂಸೆಯನ್ನು ನಿತ್ಯ ಅನುಭವಿಸುತ್ತಾ ಬದುಕುತ್ತಿದ್ದಾರೆ.
ಯಾವ ಕೀಟ:
ಇದು ರಬ್ಬರ್ ತೋಟದ ಕೀಟ. ಕೇರಳದ ಮೂಪಿಲಾ ಎಂಬ ಜಾಗದಲ್ಲಿ 1970 ರಲ್ಲಿ ಪ್ರಾರಂಭವಾದ ಈ ಕೀಟ ಈಗ ರಬ್ಬರ್ ಬೆಳೆಯಲಾಗುವ ಎಲ್ಲಾ ಭಾಗಗಳಲ್ಲೂ ಪ್ರಸಾರವಾಗಿದೆ. ರಬ್ಬರ್ ತೋಟ ನಿಮ್ಮದೇ ಇರಲಿ ಯಾರದ್ದೇ ಇರಲಿ, ಕಿಲೋಮೀಟರು ದೂರದಲ್ಲಿರಲಿ, ಈ ಕೀಟ ಎಲ್ಲರಿಗೂ ಒಂದು ಪ್ರಸಾದ.
- ಈ ಕೀಟದ ಹೆಸರು ಮೂಪ್ಲೀ ಬೀಟಲ್ ( Moopli beetle) ಎಂದು.
- ಮೊದ ಮೊದಲು ದಕ್ಷಿಣ ಕನ್ನಡದ ಹಲವು ಮನೆಯವರು ಕಂಡ ಕಂಡ ದೈವಕ್ಕೆ ಹರಕೆ ಹೊತ್ತು ಈ ಮಾರಿಯನ್ನು ಓಡಿಸು ಎಂದು ಅರಿಕೆ ಮಾಡಿಕೊಂಡದ್ದಿದೆ.
- ಈಗಲೂ ಇದು ನಡೆಯುತ್ತಿದೆ. ಬಹುತೇಕ ಜನರಿಗೆ ಇದು ರಬ್ಬರ್ ತೋಟದಿಂದಾಗಿ ಬಂದ ಬಳುವಳಿ ಎಂದು ತಿಳಿದೇ ಇಲ್ಲ.
- ಆರ್ಥ್ರೋಪೋಡಾ ಗುಂಪಿಗೆ ಸೇರಿದ ಈ ಕೀಟ ಎಂತಹ ಪ್ರತಿಕೂಲ ಹವಾಮಾನದಲ್ಲೂ ಬದುಕಿಕೊಳ್ಳುವ ಜೀವಿ.
- ಜ್ವಾಲಾಮುಖಿಯಾದರೂ ಬದುಕಿ ಉಳಿಯಬಲ್ಲ ಜೀವಿ ಎನ್ನುತ್ತದೆ ವಿಜ್ಞಾನ.
- ಇದು ಕಾರಿನ ಬೋನೆಟ್ ಎಷ್ಟು ಬಿಸಿಯಾದರೂ ಸಾಯುವುದಿಲ್ಲ.
- ಸಾಮಾನ್ಯ ಕೀಟ ನಾಶಕಗಳಿಗೆ ಬಗ್ಗುವುದೇ ಇಲ್ಲ.
- ಕತ್ತಲಾಗುತ್ತಿದ್ದಂತೆ ತಕ್ಷಣ ಹಾರಾಟ ಪ್ರಾರಂಭಿಸಿ ರಾತ್ರೆ ಪೂರ್ತಿ ಚಟುವಟಿಕೆಯಲ್ಲಿರುತ್ತದೆ.
- ಹಗಲು ಹೊತ್ತು ಹಾರದೆ ಎಲ್ಲಾದರೂ ಸಂದಿಗೊಂದಿಗಳಲ್ಲಿ ಅಡಗಿರುತ್ತದೆ.
ಇದು ರಬ್ಬರ್ ತೋಟದಲ್ಲಿ ಎಲೆ ಉದುರಿಸುವ ಜನವರಿ ತಿಂಗಳಲ್ಲಿ ಎಲೆಯ ಅಡಿ ಭಾಗದಲ್ಲಿ ಮೊಟ್ಟೆ ಇಟ್ಟು ಅಲ್ಲೇ ಪ್ಯೂಪೇ ಹಂತವನ್ನು ಮುಗಿಸಿ ಪತಂಗವಾಗಿ ಊರಿಡೀ ಹಾರಲಾರಂಭಿಸುತ್ತದೆ.
- ಈ ಕೀಟದ ಜೀವಿತಾವಧಿ 12 ತಿಂಗಳು.
- ಮೊದಲ ಒಂದು ಮಳೆ ಬಂದ ತಕ್ಷಣ ಇದರ ಕಾಟ ಪ್ರಾರಂಭವಾಗಿ ಮಳೆಗಾಲ ಮುಗಿಯುವ ತನಕವೂ ಇರುತ್ತದೆ.
- ಉಳಿದ ಸಮಯದಲ್ಲಿ ಇಲ್ಲದಿಲ್ಲ. ಸ್ವಲ್ಪ ಉಪಟಳ ಕಡಿಮೆ.
- ಮನೆಯ ಗೋಡೆಯ ಬಿರುಕು, ಹಂಚಿನ ಎಡೆ, ಪಕ್ಕಾಸು, ರೀಪರ್ ಎಲ್ಲೆಲ್ಲಾ ಇದು ಹಿಂಡು ಹಿಂಡು ವಾಸವಾಗಿರುತ್ತದೆ.
- ಇದನ್ನು ಹಳ್ಳಿಯ ಜನ “ಕೆಲ್ಲು” ಎಂಬ ಹೆಸರಿನಿಂದ ಕರೆಯುತ್ತಾರೆ.
- ಇದು ಸಾವಯವ ತ್ಯಾಜ್ಯ ಭಕ್ಷಕಗಳು. ತೆಂಗಿನ ಗರಿ, ಒಣ ಭತ್ತದ ಹುಲ್ಲು, ತರಗೆಲೆ ಹಾಗೆಯೇ ಇನ್ನಿತರ ಸಾವಯವ ವಸ್ತುಗಳನ್ನು ಭಕ್ಷಿಸುತ್ತದೆ.
- ಗೋಡೆಯಲ್ಲೆಲ್ಲಾ ರಾಶಿ ರಾಶಿ ಹರಿದಾಡುತ್ತಿರುತ್ತವೆ.
- ನೀರಿನ ಟಾಂಕಿ, ಅನ್ನದ ಪಾತ್ರೆ ಯಾವುದನ್ನು ಬಿಡುವುದಿಲ್ಲ.
ಜಾತ್ರೆಯಲ್ಲಿ, ಸಭೆ ಸಮಾರಂಭಗಳಲ್ಲಿ ಬೆಳಕಿಗೆ ರಾಶಿ ರಾಶಿ ಬರುತ್ತವೆ. ಅಲ್ಲಿಂದ ಮನೆ ಮನೆಗೆ ಈ ಕೀಟ ಜನರ ಬಟ್ಟೆ ಬರೆಗಳ ಮೂಲಕ ಪ್ರಸಾರವಾಗುತ್ತದೆ. ಬೆಳಕಿರುವಲ್ಲೆಲ್ಲಾ ಇದು ರಾಶಿ ರಾಶಿ ಇರುತ್ತದೆ. ಬಟ್ಟೆಯ ಮೂಲಕ ಪ್ರಸಾರವಾಗುವುದು ಯಾರ ಗಮನಕ್ಕೂ ಬಾರದು. ಇದು ಹಳ್ಳಿ ಮಾತ್ರವಲ್ಲ, ಪಟ್ಟಣಕ್ಕೂ ವಲಸೆ ಹೋಗಿರಬಹುದು.
ನಿಯಂತ್ರಣ ಹೇಗೆ:
- ಇದನ್ನುಪ್ರಭಲ ಕೀಟ ನಾಶಕ ಬಳಸಿಯೇ ನಿಯಂತ್ರಣ ಮಾಡಬೇಕಾಗುತ್ತದೆ. (KARATE, Decis, ಇತ್ಯಾದಿ)
- ಸ್ವಲ್ಪ ಮಟ್ಟಿಗೆ ಬೆಳಕಿನ ಟ್ರಾಪುಗಳ ಮೂಲಕ ನಿಯಂತ್ರಣ ಮಾಡಬಹುದಾದರೂ ಇದು ಯಾರೋ ಮಾಡಿದ ತಪ್ಪಿಗೆ ಸಾರ್ವಜನಿಕರೆಲ್ಲರೂ ಸಾವಿರಾರು ರೂ. ಖರ್ಚು ಮಾಡಿ ಹಾಕಿಸಿಕೊಳ್ಳಬೇಕಾದೀತು.
- ವಾಸದ ಮನೆ,ಹಟ್ಟಿ, ಹಾಗೆಯೇ ಪಶುಗಳು ತಿನ್ನುವ ಮೇವು ಇರುವಲ್ಲಿ ಎಲ್ಲಾ ಇದು ಇರುವ ಕಾರಣ ಇದನ್ನು ನಿಯಂತ್ರಿಸಲು ಇಲ್ಲಿಗೆ ಪ್ರಭಲ ಕೀಟ ನಾಶಕದ ಬಳಕೆ ಸೂಕ್ತವಲ್ಲ.
- ಕಚ್ಚದ ಕೆಂಪು ಇರುವೆಗಳು ಇದರ ಪರಭಕ್ಷಕಗಳು, ಆವುಗಳ ಸಂಖ್ಯೆಗಿಂತ ಇವು ಹೆಚ್ಚಾಗಿವೆ.
ಅಗಲದ ಟಬ್ ಗೆ ನೀರು ಹಾಕಿ ಮನೆಯಿಂದ ದೂರದಲ್ಲಿ ವಿದ್ಯುತ್ ಬಲ್ಬನ್ನು ನೇತಾಡಿಸಿ ಅದರ ಕೆಳಗೆ ಈ ಟಬ್ ಇಡಿ. ಅದಕ್ಕೆ ಒಂದು ಲಕ್ಷ್ಮಣ ರೇಖೆ ಚಾಕ್ ಅನ್ನು ಹುಡಿಮಾಡಿ ಹಾಕಿ. ಅದಕ್ಕೆ ಬಿದ್ದು, ದುಂಬಿಗಳು ಸಾಯುತ್ತವೆ.
ಕಾರಣರಾದವರು ಗಮನಹರಿಸಬೇಕು:
- ಇದು ರಬ್ಬರ್ ತೋಟದ ಕಾರಣದಿಂದ ಯಾರೋ ಮಾಡಿದ ತಪ್ಪಿಗೆ ಸಾರ್ವಜನಿಕರಿಗೆ ಉಂಟಾದ ಕಿರಿಕಿರಿ.
- ರಬ್ಬರ್ ಬೋರ್ಡ್ ನಂತಹ ಸಂಸ್ಥೆ ಇದ್ದು, ಇಷ್ಟೆಲ್ಲಾ ಸಂಶೋಧನೆ ವಿಸ್ತರಣೆ ನಡೆಸುವ ಈ ಸಂಸ್ಥೆಗೆ ಈ ಒಂದು ಸಾರ್ವಜನಿಕ ಕಿರಿಕಿರಿ ಗಮನಕ್ಕೆ ಬಾರದಿರುವುದು ಅಚ್ಚರಿಯ ಸಂಗತಿ.
- ಇದಕ್ಕೆ ರಬ್ಬರ್ ತೋಟಗಾರರೇ ಹೊಣೆಗಾರರು ಹೊರತಾಗಿ ಉಳಿದವರು ಅಲ್ಲ.
- ರಬ್ಬರ್ ತೋಟ ಮಾಡಿದವರು ಕಡ್ದಾಯವಾಗಿ ತಮ್ಮ ತೋಟದಲ್ಲಿ ಎಲೆ ಉದುರಿಸಿ ಮೊಟ್ಟೆ ಇಡುವ ಸಮಯದಲ್ಲಿ ಇದನ್ನು ಕಡ್ದಾಯವಾಗಿ ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳಬೇಕು.
- ರಬ್ಬರು ತೋಟದ ಕಾರಣದಿಂದಾಗಿಯೇ ಇದರ ವೈರಿ ಕೀಟಗಳು ನಾಶವಾಗಿರಬಹುದಾದ ಸಾಧ್ಯತೆ ಇದೆ ಎಂಬುದಾಗಿ ತಿಳಿದವರು ಹೇಳುತ್ತಾರೆ.
- ರಬ್ಬರ್ ತೋಟಗಳಿಗಾಗಿ ಕಾಡು ಕಡಿದು, ಮುಚ್ಚಲು ಬೆಳೆ ಬೆಳೆಸಿ, ಇದ್ದೇಲ್ಲಾ ಜೀವ ವೈವಿಧ್ಯಗಳನ್ನು ನಾಶ ಮಾಡಲಾಗಿದೆ.
- ಇದು ಪರಿಸರ ಸಮತೋಲನಕ್ಕೆ ತೊಂದರೆಯಾದ ಕಾರಣ ಇದರ ನಿವಾರಣೆ ಬಗ್ಗೆ ತಕ್ಷಣ ಗಮನಹರಿಸಲು ಎಲ್ಲರೂ ಒತ್ತಾಯಿಸಬೇಕು.
ತಕ್ಷಣವೇ ಈ ಕೀಟದ ಸಮಸ್ಯೆಗೆ ಕ್ರಮ ಕೈಗೊಳ್ಳದಿದ್ದರೆ ಇದು ಇನ್ನೇನು ಸಾಂಕ್ರಾಮಿಕ ರೋಗವನ್ನು ಹರಡಬಹುದೋ ತಿಳಿಯದು. ಸಾರ್ವಜನಿಕರು ಇದನ್ನು ಸಂಬಂಧಿಸಿದವರ ಗಮನಕ್ಕೆ ತಂದು ನಿಯಂತ್ರಣಕ್ಕೆ ಬೇಕಾದ ಕ್ರಮ ಕೈಗೊಳ್ಳಬೇಕಾದ ತುರ್ತು ಅಗತ್ಯ ಇದೆ.