ಬೆಳೆಗಳಿಗೆ ಸಾವಯವ ಗೊಬ್ಬರ ಹಾಕುವ ವೈಜ್ಞಾನಿಕ ವಿಧಾನ.

ಸಾವಯವ ತ್ಯಾಜ್ಯಗಳನ್ನು ಮಧ್ಯದಲ್ಲಿ ಹಾಕಬೇಕು.

ಹಸಿ ಸಾವಯವ ಗೊಬ್ಬರಗಳನ್ನು ಹಾಕಿದ ಸ್ಥಳದಲ್ಲಿ ನೆಲದ ಹುಲ್ಲು ಇತ್ಯಾದಿ ಸತ್ತು ಹೋಗುತ್ತದೆ.  ಕಳಿಯುವ ಕ್ರಿಯೆಯಲ್ಲಿ ಕೆಲವು ಆಮ್ಲಗಳು ಮತ್ತು ಶಾಖ ಬಿಡುಗಡೆಯಾಗಿ ನೆಲಕ್ಕೆ ಅದು ಸ್ವಲ್ಪ ಮಟ್ಟಿಗೆ ಪ್ರಸಾರವಾಗುತ್ತದೆ. ಒಂದು ವೇಳೆ ನೀವು ಹಸಿ ಸಾವಯವ ಗೊಬ್ಬರಗಳನ್ನು ಮರದ – ಸಸಿಯ ಬುಡಕ್ಕೆ ಹಾಕಿದರೆ ಅದರ ಕಾಂಡದ ಭಾಗಕ್ಕೆ ಘಾಸಿ ಉಂಟಾಗುತ್ತದೆ.

ಮನುಷ್ಯ ಎಷ್ಟೇ ಉತ್ತಮ ಆಹಾರ ಸೇವನೆ ಮಾಡಿದರೂ ಸಹ, ಅದು ಸರಿಯಾಗಿ ಜೀರ್ಣ ಆಗಬೇಕಿದ್ದರೆ ಅದರ ಜೊತೆಗೆ ತೇವಾಂಶ ( ನೀರು) ಅಗತ್ಯ. ಅದೇ ರೀತಿಯಲ್ಲಿ ಸಾವಯವ ಗೊಬ್ಬರಗಳನ್ನು ಬಳಸುವಾಗ ಕೆಲವು ಮಾನದಂಡಗಳ ಪ್ರಕಾರ ಅದನ್ನು ಹಾಕಬೇಕು. ಅಗ ಅದು ನಷ್ಟಕ್ಕೊಳಗಾಗದೆ ಸಸ್ಯಗಳಿಗೆ ಲಭ್ಯವಾಗುತ್ತದೆ.ಸಾವಯವ ತ್ಯಾಜ್ಯಗಳು ಎಂದರೆ ಅದು ಎಲ್ಲಾ ನಮೂನೆಯಲ್ಲೂ ಸುರಕ್ಷಿತ ಎಂದು ತಿಳಿಯಬೇಡಿ. ಅದು ಕೊಳೆತು ಮಣ್ಣಾಗಿ ಪರಿವರ್ತನೆಯಾಗುವಾಗ ಕೆಲವು ಆಮ್ಲಗಳು ಬಿಡುಗಡೆಯಾಗುತ್ತದೆ. ಇದು ಬೇರುಗಳಿಗೆ ತೊಂದರೆಯನ್ನೂ ಮಾಡಬಹುದು. ಸಾವಯ ತ್ಯಾಜ್ಯಗಳನ್ನು ಹಾಕಿದ ನೆಲದ ಅಡಿ ಭಾಗದ ಹುಲ್ಲು ಕಳೆ ಹೇಗೆ ಸತ್ತು ಹೋಗುತ್ತದೆಯೋ ಅದೇ ರೀತಿಯಲ್ಲಿ ಬುಡದ ಕೋಮಲ ಬೇರುಗಳೂ ಭಾಗಶಃ ಹಾನಿಯಾಗಬಹುದು. ಅದಕ್ಕಾಗಿ ಬುಡಕ್ಕೆ ನೇರವಾಗಿ ಗೊಬ್ಬರ ರೂಪದ ಸಾವಯವ ತ್ಯಾಜ್ಯ ಹಾಕುವ ಬದಲು ಅದನ್ನು ಬುಡದಿಂದ ಸ್ವಲ್ಪ ದೂರ ಹಾಕಿ

 • ಸಾವಯವ ಗೊಬ್ಬರ ಯಾವುದೇ ಆಡ್ದ ಪರಿಣಾಮ ಇಲ್ಲದ ಗೊಬ್ಬರ.
 • ಇದನ್ನು ಹೇಗೆ ಬಳಸಿದರೂ ಯಾವುದೇ ಹಾನಿ ಇಲ್ಲ ಎಂದು ತಿಳಿಯುವಂತಿಲ್ಲ.
 • ಸಾವಯವ ಗೊಬ್ಬರಗಳು ಕಳಿತು ಸಸ್ಯಗಳಿಗೆ ಆಹಾರವಾಗುವ ಕಾರಣ ಅದರ ಕಳಿಯುವಿಕೆಯ ಕ್ರಿಯೆಯಲ್ಲಿ ಸಸ್ಯ ಬೇರುಗಳಿಗೆ ತೊಂದರೆಗಳಾಗುವ ಸಾಧ್ಯತೆ ಇದೆ.
 • ಆ ಕಾರಣ ಅದನ್ನು ಸರಿಯಾದ ಕ್ರಮದಲ್ಲೇ ಬಳಕೆ ಮಾಡಬೇಕು.

ಸಾವಯವ ಗೊಬ್ಬರ – Oraganic manure

 ಗೊಬ್ಬರ ಹಾಕುವಾಗ ಇದನ್ನು ತಿಳಿದಿರಬೇಕು:

 • ಸಾವಯವ ಗೊಬ್ಬರ ಎಂದು ನಾವು ಬಳಸುವ ಎಲ್ಲಾ ಪೊಷಕಗಳೂ ಅರ್ಧ ಕಳಿತ ಅಥವಾ ಇನ್ನು ಕಳಿಯಬೇಕಾದ ರೂಪದಲ್ಲಿ ಇರುತ್ತವೆ.
 • ಇಂತಹ ಸ್ಥೂಲ( ದೊಡ್ಡ ಪ್ರಮಾಣದ) ಗೊಬ್ಬರಗಳು ಮಣ್ಣಿನ ಸಂಪರ್ಕಕ್ಕೆ ಬಂದಾಕ್ಷಣ ಅಲ್ಲಿರುವ ಬ್ಯಾಕ್ಟೀರಿಯಾ, ಶಿಲೀಂದ್ರ, ಬ್ಯಾಕ್ಟೀರಿಯಾ ಗಳ ಸಹಾಯದಿಂದ ಕಳಿಯುತ್ತದೆ.
 • ಇದರ  ಜೊತೆಗೆ ಕಣ್ಣಿಗೆ ಕಾಣುವ ಜೀವಿಗಳಾದ ಎರೆ ಹುಳುಗಳು, ಗಂಗೆ ಹುಳುಗಳು, ಗೆದ್ದಳು ಇಲಿ ಹೆಗ್ಗಣಗಳು ಕೆಲವು ದುಂಬಿಗಳು, ಸಹಸ್ರ ಪದಿಗಳು ಈ ಕ್ರಿಯೆಯಲ್ಲಿ ಭಾಗಿಯಾಗುತ್ತವೆ.
 • ಮಣ್ಣು ಹುಳಿಯಾಗಿದ್ದರೆ ಅಲ್ಲಿ ಕಳೆಯುವಿಕೆಯ ಕ್ರಿಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗಿಯಾಗುವ ಜೀವಾಣುಗಳು ಶಿಲೀಂದ್ರಗಳು ಮತ್ತು ಅಕ್ಟಿನೋಮೈಸಿಟ್ ಗಳು.
 • ಮಣ್ಣು ತಟಸ್ಥವಾಗಿದ್ದರೆ ಬ್ಯಾಕ್ಟೀರಿಯಾಗಳು ಕಳಿಯುವಿಕೆಯ ಕ್ರಿಯೆಯಲ್ಲಿ ಪಾತ್ರವಹಿಸುತ್ತವೆ.
 • ಬ್ಯಾಕ್ಟೀರಿಯಾಗಳ ಮೂಲಕ ಕಳಿಯುವಿಕೆ ಕಾರ್ಯ ನಡೆದರೆ ಆ ಗೊಬ್ಬರ ಉತ್ತಮವಾಗಿರುತ್ತದೆ.
 • ಗೊಬ್ಬರಗಳನ್ನು ಹಾಕುವ ಸಮಯದಲ್ಲಿ ಮಣ್ಣು ಹುಳಿಯಾಗಿ ಇಲ್ಲದಂತೆ ನೋಡಿಕೊಂಡರೆ ಉತ್ತಮ.

ಸಾವಯವ ಗೊಬ್ಬರವನ್ನು ಎಲ್ಲಿ ಹಾಕಬೇಕು:

ಸಾವಯವ ಗೊಬ್ಬರವನ್ನು ಬುಡದಿಂದ 1 ಅಡಿ ದೂರ ಹಾಕಬೇಕು.– Oraganic manure should be appled far from bole
ಸಾವಯವ ಗೊಬ್ಬರವನ್ನು ಬುಡದಿಂದ 1 ಅಡಿ ದೂರ ಹಾಕಬೇಕು.
 • ಕಳಿಯದ ಸಾವಯವ ಗೊಬ್ಬರಗಳನ್ನು ಯಾವಾಗಲೂ ಮರದ ಬುಡ ಭಾಗಕ್ಕೇ ಹಾಕಬಾರದು.
 • ಬುಡ ಭಾಗವನ್ನು 1 ಅಡಿ ಬಿಟ್ಟು ಹಾಕುವುದು ಉತ್ತಮ.
 • ಸಾವಯವ ವಸ್ತುಗಳು ಕಳಿಯುವಾಗ ಭಾಗಿಯಾಗುವ ಮಣ್ಣಿನ ಪ್ರಾಣಿಗಳು ಸಸ್ಯಗಳು ಅಲ್ಲಿ ಹೆಚ್ಚಿನ ಚಟುವಟಿಕೆ ಮಾಡುತ್ತಿರುತ್ತದೆ.
 • ಈ ಚಟುವಟಿಕೆಯಲ್ಲಿ ಕೆಲವು ಅಮ್ಲಗಳು ಬಿಡುಗಡೆಯಾಗುತ್ತವೆ.
 • ಆ ಆಮ್ಲಗಳು  ಬೇರುಗಳಿಗೆ ಘಾಸಿಯನ್ನು ಉಂಟು ಮಾಡುತ್ತವೆ.
 • ಇದರಿಂದ ಬೇರು ಕೊಳೆಯಬಹುದು, ಬೇರಿನ ರಕ್ಷಾ ಕವಚಕ್ಕೆ  ಹಾನಿಯುಂಟಾಗಬಹುದು.
 • ಕಾಂಡಕ್ಕೆ ( ಬೊಡ್ಡೆ ಭಾಗಕ್ಕೆ) ಗಾಯ ಆಗಬಹುದು.
 • ಅಲ್ಲಿ ಕೆಲವು ಹಾನಿಕಾರಕ ಶಿಲೀಂದ್ರ ಉತ್ಪತ್ತಿಯಾಗಬಹುದು.
 • ಸೂಕ್ಷ್ಮಾಣು ಜೀವಿಗಳಿಗೆ ಬದುಕಲು ಹೆಚ್ಚು ಬಿಸಿ ಸ್ಥಿತಿ ಉಂಟಾಗಬಾರದು.
 • ಸಾಧಾರಣವಾಗಿ 20-30 ಡಿಗ್ರಿ ತನಕವ ತಾಪಮಾನಕ್ಕಿಂತ ಹೆಚ್ಚಾದಾಗ ಅಲ್ಲಿ ಸೂಕ್ಷ್ಮಾಣು ಜೀವಿಗಳು ಕೆಲಸ ಮಾಡಲಾರವು.

ನಾವು ಬೆಳೆಗಳ ಬುಡಕ್ಕೆ ಹಾಕುವ ಎಲ್ಲಾ ಸಾವಯವ ಗೊಬ್ಬರಗಳೂ ಸಸ್ಯಗಳಿಗೆ ನೇರವಾಗಿ ಲಭ್ಯವಾಗುವುದಿಲ್ಲ. ಅದು ವಿಘಟನೆಯಾಗಲು ಬೇಕಾಗುವ ಸಮಯದಲ್ಲಿ ಸಹಜವಾಗಿ ಉತ್ಪಾದನೆಯಾಗುವ ಆಮ್ಲಗಳು ಮತ್ತು ಬಿಸಿಯು ಸಸ್ಯದ ಬುಡಭಾಗದಿಂದ ಸ್ವಲ್ಪ ದೂರದಲ್ಲೇ ನಡೆದರೆ ಎಲ್ಲಾ ರೀತಿಯಲ್ಲೂ ಅನುಕೂಲ. ಸಮರ್ಪಕವಾಗಿ ಕಳಿಯಲು ಹಾಗೂ ಸಾರಜನಕ ನಷ್ಟ ತಡೆಯಲು ತೆಳುವಾಗಿ ಅದರ ಮೇಲೆ ಮಣ್ಣು ಹಾಕಿದರೆ ಒಳ್ಳೆಯದು.

ಬಹಳಷ್ಟು ರೈತರ ಹೊಲದಲ್ಲಿ ಸಸಿಯ ಬುಡ ಕೊಳೆಯುವುದು, ಮರದ ಬುಡ ಕೊಳೆಯುವುದು ಆಗುವುದನ್ನು ಕಂಡಿರಬಹುದು. ಇದಕ್ಕೆ ಒಂದು ಕಾರಣ ಬುಡ ಭಾಗಕ್ಕೆ ತಾಗುವಂತೆ ಹಸಿ ಕೊಟ್ಟಿಗೆ ಗೊಬ್ಬರ ಹಾಕಿರುವುದು.

ಬುಡಕ್ಕೆ ಹಾಕುವುದರಿಂದ ಕಾಂಡಕ್ಕೆ ಹಾನಿಯಾಗುತ್ತದೆ.
ಬುಡಕ್ಕೆ ಹಸಿಕೊಟ್ಟಿಗೆ ಗೊಬ್ಬರ ಹಾಕುವುದರಿಂದ ಕಾಂಡಕ್ಕೆ ಹಾನಿಯಾಗುತ್ತದೆ.
 • ಸಸ್ಯಗಳ ಬುಡದಲ್ಲಿ  ಇರುವ ಬೇರುಗಳು ಆಹಾರ ಸಂಗ್ರಹಿಸುವ ಬೇರುಗಳಾಗಿರುವುದಿಲ್ಲ.
 • ಅಲ್ಲಿ ಮೂಡುವ ಕೋಮಲ ಬೇರುಗಳೇ ಇರುತ್ತವೆ. ಅಲ್ಲಿಗೆ ಗೊಬ್ಬರ ಹಾಕಿ ಫಲವಿಲ್ಲ.
 • ಅದರ ಬದಲಿಗೆ ಕವಲು ಬೇರುಗಳು ಹುಟ್ಟಿಕೊಳ್ಳುವ ಸ್ಥಳದಲ್ಲಿ ಗೊಬ್ಬರ ಹಾಕಿದರೆ ಅದು ಅಲ್ಲೇ ಬೇರುಗಳಿಗೆ ಲಭ್ಯವಾಗುತ್ತದೆ.
 • ಆ ಭಾಗದಲ್ಲಿ ಮಣ್ಣಿನ ಸ್ಥಿತಿ ಸಡಿಲವಾಗಿ ಬೇರು ಬೆಳವಣಿಗೆ ಅನುಕೂಲವಾಗುತ್ತದೆ.ಸುಧಾರಣೆಯಾಗುತ್ತದೆ.

ಹೇಗೆ ಹಾಕಬೇಕು:

 • ಸಾವಯವ ಗೊಬ್ಬರವನ್ನು ಒಂದೇ ಕಡೆಗೆ ಹಾಕಬಾರದು.
 • ಹೊಲದ ಎಲ್ಲಾ ಭಾಗಗಳಿಗೂ ಬೀಳುವಂತೆ ಹಂಚಿ ಹಾಕಬೇಕು.
 • ಬುಡಭಾಗಕ್ಕಷ್ಟೇ ಗೊಬ್ಬರವನ್ನು ಹಾಕಿದರೆ ಅಲ್ಲಿ ಮಾತ್ರ ಬೇರಿನ ನಿಬಿಡತೆ ಇರುತ್ತದೆ.
 • ಬೇರು ಎಷ್ಟು ವಿಸ್ತಾರ ಜಾಗಕ್ಕೆ ಹಬ್ಬುತ್ತದೆಯೋ ಅಷ್ಟು ಅದರ ಬೆಳೆವಣಿಗೆ ಚೆನ್ನಾಗಿರುತ್ತದೆ.
 • ಸಾಮಾನ್ಯವಾಗಿ ಸಾವಯವ ಗೊಬ್ಬರಗಳು ಕರಗಿ ಪ್ರಸಾರವಾಗುವುದು ನಿಧಾನ.
 • ಆದ ಕಾರಣ ಬೇರುಗಳಿರುವ ಎಲ್ಲಾ ಭಾಗಕ್ಕೆ ಹಂಚಿಕೆಯಾಗುವಂತೆ ಹಾಕುವುದು ಉತ್ತಮ. ( ಉದಾಹರಣೆ: ಕುರಿಗಳನ್ನು ಹೊಲದಲ್ಲಿ ಮೇಯಿಸುವಾಗ ಬೀಳುವ ಹಿಕ್ಕೆ ಕಡಿಮೆಯಾದರೂ ಅದು ಚೆನ್ನಾಗಿ ಹರಡಿ ಬೀಳುವ ಕಾರಣ ಅದರ ಸತ್ವಾಂಶಗಳು ಎಲ್ಲಾ ಬೇರುಗಳಿಗೆ ದೊರೆತು ಬೆಳೆ ಚೆನ್ನಾಗಿ ಬರುತ್ತದೆ.
 • ಹಸಿ ಸೊಪ್ಪು ಬಳಕೆ ಉತ್ತಮ. ಇದರಲ್ಲಿ ಸತ್ವ ಒಣ ತರಗೆಲೆಗಿಂತ ಹೆಚ್ಚು.

ಸಾವಯವ ಗೊಬ್ಬರಗಳನ್ನು ಕೊಟ್ಟ ನಂತರ ಯಾವುದೇ ಕಾರಣಕ್ಕೂ ಅದನ್ನು ಒಣಗಲು (ತೇವಾಂಶ ಆರಲು) ಬಿಡಬಾರದು. ತೇವ ಇದ್ದರಷ್ಟೇ ಅವು ತ್ವರಿತವಾಗಿ ಕರಗಿ ಮಣ್ಣಿಗೆ ಸೇರುತ್ತವೆ.ಬೇಸಿಗೆಯ ಸಮಯದಲ್ಲಿ ನೀರಾವರಿ ವ್ಯವಸ್ಥೆ ಇಲ್ಲದಿದ್ದರೆ ಆ ಸಮಯದಲ್ಲಿ ಸಾವಯವ ಗೊಬ್ಬರಗಳನ್ನು ಹಾಕಬೇಡಿ. ಗೊಬ್ಬರ ಹಾಕಿದ ತರುವಾಯ ಅದು ಕಳಿಯುವ ತನಕ ಹಿತಮಿತವಾಗಿ ನೀರುಣಿಸುತ್ತಿರಿ.

ಸಾವಯವ ಗೊಬ್ಬರಗಳು ಚೆನ್ನಾಗಿ ಕಳಿತು ಹುಡಿಯಾಗಿರಬೇಕು. ಸ್ವಲ್ಪವೂ ಬಿಸಿ ಇರಬಾರದು.  ಹಾಗಿದ್ದಾಗ ಅದರಲ್ಲಿ ಅಂತಹ ಸಮಸ್ಯೆ ಇಲ್ಲ. ಆದರೂ ಬುಡಭಾಗಕ್ಕೆ ತಾಗುವಂತೆ ಹಾಕುವುದು ಸೂಕ್ತವಲ್ಲ. ಮಳೆಗಾಲದಲ್ಲಿ ಅನಿವಾರ್ಯ ಪ್ರಸಂಗಗಳಲ್ಲಿ ಬುಡದಿಂದ 1 ಅಡಿ ದೂರದಲ್ಲಿ ಕೊಟ್ಟಿಗೆ ಗೊಬ್ಬರವನ್ನು ಗುಪ್ಪೆಯಾಗಿ ಹಾಕಿದರೆ ಸುಮಾರು 15-20 ದಿನಕ್ಕೆ ಅದು ತಣ್ಣಗಾಗಿ ಹುಡಿ ಗೊಬ್ಬರ ಆಗುತ್ತದೆ. ಆನಂತರ ಅದನ್ನು ಬುಡಕ್ಕೆ ದೂಡಬಹುದು.

 • ಗುಪ್ಪೆಯೋಪಾದಿಯಲ್ಲಿ ಗೊಬ್ಬರವನ್ನು ಹಾಕಬೇಡಿ.
 • ಗೊಬ್ಬರಗಳು ಒಣಗಿದರೆ ಅದರ ಸತ್ವ ಕಡಿಮೆಯಾಗುತ್ತದೆ.
 • ಹೊಲಗಳಿಗೆ ಹಾಕುವಾಗ ಉಳುಮೆಯ ಜೊತೆಗೆ ಸೇರಿಸಿರಿ.
 • ತೋಟಗಾರಿಕಾ ಬೆಳೆಗಳಿಗೆ ಹಾಕುವಾಗ ಎಲ್ಲಾ ನೆಲಕ್ಕೂ ಹರಡಿ ಹಾಕಿ.
 • ಬೇಸಿಗೆಯಲ್ಲಿ ತೋಟದಲ್ಲಿ ಅಲ್ಲಲ್ಲಿ ತೆಂಗಿನ ಗರಿ ಅಥವಾ ಕಟ್ಟಿಗೆಗಳನ್ನು ಒತ್ತೊತ್ತಾಗಿ ಇಟ್ಟು ಕಾಂಪೋಸ್ಟು ರಚನೆ  ಮಾಡಿ ಅದರಲ್ಲಿ ತೆಂಗು,ಅಡಿಕೆ, ಬಾಳೆಗಳ ತ್ಯಾಜ್ಯಗಳನ್ನು ತುಂಬಿ ನಂತರ ಮಳೆ ಪ್ರಾರಂಭವಾಗುವಾಗ ಹಾಕಿದರೆ ಉತ್ತಮ.
 • ಸಾಧ್ಯವಾದಷ್ಟು ಹಸಿರು  ಸೊಪ್ಪುಗಳನ್ನು ಬಳಕೆ ಮಾಡಿ. ಅಡಿಕೆ ತೆಂಗಿನ ಬುಡಕ್ಕೆ ಹಾಕುವುದಕ್ಕಿಂತ ದೂರ ಹಾಕಿ ಕಳೆ ನಿಯಂತ್ರಣ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಿ.

ಸಾವಯವ ಗೊಬ್ಬರ ಇರಲಿ, ರಾಸಾಯನಿಕ ಗೊಬ್ಬರ ಇರಲಿ, ಅದನ್ನು ಬಳಸುವಾಗ ಯೋಗ್ಯ  ರೀತಿಯಲ್ಲಿ ಬಳಕೆ ಮಾಡಿದರೆ ಅದರ ಫಲ ಹೆಚ್ಚು. ಒಂದೇ ಕಡೆ ಹಾಕುವುದು , ಒಣಗಿಸುವುದು  ಮಾಡಿದಾಗ ಬಹುತೇಕ ಪೋಷಕಗಳು ನಷ್ಟವಾಗುತ್ತದೆ.

Leave a Reply

Your email address will not be published. Required fields are marked *

error: Content is protected !!