ಬೀಜದ ತೆಂಗಿನ ಕಾಯಿಯನ್ನು ಹೇಗೆ ಮೊಳಕೆ ಬರಲು ಇಡಬೇಕು?

by | Mar 7, 2022 | Coconut (ತೆಂಗು) | 0 comments

ಯಾವುದೇ  ಸಸಿ  ಮಾಡುವಾಗ ಮೊದಲಾಗಿ ಬೀಜ ಮೂಲ ಒಳ್ಳೆಯದು ಆಗಿರಬೇಕು. ತೃಪ್ತಿಕರ ಗುಣಪಡೆದ ಮರದಿಂದ ಮಾತ್ರ ಬೀಜದವನ್ನು ಆಯ್ಕೆ ಮಾಡಬೇಕು. ಬೀಜದ ಆಯ್ಕೆಗೆ ಮೊದಲ ಸ್ಥಾನವಾದರೆ , ಆ ಬೀಜವನ್ನು ಸೂಕ್ತ ವಿಧಾನದಲ್ಲಿ  ಮೊಳಕೆ ಬರಿಸುವುದು ಎರಡನೇ ಪ್ರಾಮುಖ್ಯ ಹಂತ. ಸಧೃಢ ಮೊಳಕೆಯ ಸಸಿ ಮಾತ್ರ ಆರೋಗ್ಯಕರವಾಗಿ ಬೆಳೆಯಬಲ್ಲುದು. ತೆಂಗಿನ ಬೀಜದ ಆಯ್ಕೆಯೂ ಇದಕ್ಕೆ ಹೊರತಲ್ಲ. ಉತ್ತಮ ಬೀಜವನ್ನು ಯೋಗ್ಯ ರೀತಿಯಲ್ಲಿ ಮೊಳಕೆಗೆ ಇಟ್ಟರೆ ಅದು ಉತ್ತಮ ಸಸಿಯಾಗುತ್ತದೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುತ್ತಾರೆ ಹಿರಿಯರು. ಅಂದರೆ ಸಸಿ ಹಂತದಲ್ಲಿ ಅದು ಸಧೃಢವಾಗಿದ್ದರೆ ಮುಂದಿನ ಅದರ ಭವಿಷ್ಯ ಉತ್ತಮವಾಗಿರುತ್ತದೆ.ನಾವು ಗಮನಿಸದೆ ಬಾಕಿಯಾದ ತೆಂಗಿನ ಮರದ ಬುಡದಲ್ಲಿ ಬಿದ್ದ ತೆಂಗಿನ ಕಾಯಿ ಬೇಗ ಮೊಳಕೆ ಬರುತ್ತದೆ. ಮೊಳಕೆಯೂ ಸದೃಢವಾಗಿರುತ್ತದೆ. ಕೆಲವರು ಇದನ್ನೇ ನೆಡುವವರೂ ಇದ್ದಾರೆ. ಈ ಸಸಿಗಳು ಚೆನ್ನಾಗಿಯೇ ಬೆಳೆಯುತ್ತದೆ. ಉತ್ತಮ ಫಲವನ್ನೂ ನೀಡುತ್ತದೆ. ಬರೇ ತೆಂಗಿನ ಕಾಯಿ ಮಾತ್ರವಲ್ಲ,ಅಡಿಕೆಯೂ ಹಾಗೆಯೇ. ಬಿದ್ದು ಹುಟ್ಟುವ ಅಡಿಕೆ ಮೊಳಕೆ ಬರುವುದೂ ಬೇಗ. ಸಸಿಯೂ ಸಧೃಢವಾಗಿರುತ್ತದೆ. ಇದಕ್ಕೆ ಕಾರಣ ನೆಲಕ್ಕೆ ಬೀಳುವಾಗ ಕಾಯಿಯಾಗಲೀ ಅಡಿಕೆಯಾಗಲೀ ಅದು ನೇರ ನಿಲ್ಲುವುದು ಕಡಿಮೆ. ಅಡ್ದವಾಗಿಯೇ ಬೀಳುತ್ತದೆ. ಅಡ್ದ ಬಿದ್ದ ಕಾಯಿ, ಅಡಿಕೆ ಸಧೃಢ ಮೊಳಕೆಯೊಂದಿಗೆ ಬೆಳೆಯುತ್ತದೆ.

ಬೀಜಕ್ಕೆ ಹೇಗೆ ಇಡುವುದು:

  • ಹೆಚ್ಚಿನವರು ತೆಂಗಿನ ಕಾಯಿಯನ್ನು ಮೊಳಕೆಗೆ ಇಡುವಾಗ ತೊಟ್ಟಿನ ಭಾಗ ಮೇಲಕ್ಕಿರುವಂತೆ ನೆಲದಲ್ಲಿ ಅಥವಾ ಪಾಲಿಥೀನ್ ಚೀಲದಲ್ಲಿ ಇಡುತ್ತಾರೆ.
  • ಇದು ಸೂಕ್ತ ಕ್ರಮವಲ್ಲ.  ಹೀಗೆ ಮೊಳಕೆಗೆ ಇಟ್ಟಾಗ ಮೊಳಕೆ ಸಧೃಢವಾಗಿ ಬೆಳೆಯುವುದಿಲ್ಲ.
  • ತೆಂಗಿನಲ್ಲಿ ಮೊಳಕೆಗಿಂತ ಮುಂಚೆ ಅದರಲ್ಲಿ ಬೇರು ಮೂಡುತ್ತದೆ.
  • ಈ ಬೇರು ಬೇಗ ಮಣ್ಣಿಗೆ ತಾಗಬೇಕು.
  • ಬೇರು ಎಷ್ಟು ಬೇಗ ನೆಲಕ್ಕೆ ತಲುಪುತ್ತದೆಯೋ ಅದಕ್ಕೆ ನೆಲದಿಂದ ಪೋಷಕಗಳು  ಆ ತಕ್ಷಣ  ಲಭ್ಯವಾಗುತ್ತದೆ.
  • ಬೇರು ನೆಲವನ್ನು ತಲುಪಲು ತಡವಾದರೆ ಮೊಳಕೆಗೆ ಕಾಯಿಯಲ್ಲಿ ದಾಸ್ತಾನು ಇರುವ ಆಹಾರ ಮಾತ್ರ ದೊರೆಯುತ್ತದೆ.
  • ಇದು ಸಾಕಾಗದಿದ್ದರೆ ಮೊಳಕೆ ಸಧೃಢವಾಗಿರುವುದಿಲ್ಲ.
  • ಮೊಳಕೆ ಕಾಯಿಯನ್ನು ಅಡ್ಡಲಾಗಿ  ಮೊಳಕೆಗೆ ಇಡಬೇಕು.
  • ಹೀಗೆ ಇಟ್ಟಾಗ ಮೊಳಕೆಗಿಂತ ಮುಂಚೆ ಹೊರಟ ಬೇರು ಮೊಳಕೆ ಹೊರಗೆ ಕಾಣುವುದರ ಒಳಗೆ ನೆಲವನ್ನು  ತಲುಪುತ್ತದೆ.
  • ನೆಲದಲ್ಲಿ ಇಳಿದ ತಕ್ಷಣ ಅದರ ಬೆಳವಣಿಗೆ ಹೆಚ್ಚಾಗುತ್ತದೆ. ಮೊಳಕೆಗೆ ಹೆಚ್ಚು ಆಹಾರ ದೊರೆಯುತ್ತದೆ.
ಬೀಜದ ತೆಂಗು ಮೊಳಕೆ ಬರುವ ಜಾಗಕ್ಕನುಗುಣವಾಗಿ ಬೀಜಕ್ಕೆ ಇಡಬೇಕು.  ಅಡ್ಡ ಇಟ್ಟರೆ ಬೇಗ ಮೊಳಕೆ ಬರುತ್ತದೆ.

ತೆಂಗು ಮೊಳಕೆ ಬರುವ ಜಾಗಕ್ಕನುಗುಣವಾಗಿ ಬೀಜಕ್ಕೆ ಇಡಬೇಕು. ಅಡ್ಡ ಇಟ್ಟರೆ ಬೇಗ ಮೊಳಕೆ ಬರುತ್ತದೆ.

ನೇರ ಇಟ್ಟಾಗ ಏನಾಗುತ್ತದೆ:

  • ನೇರವಾಗಿ ಇಟ್ಟಾಗ ಅದರಲ್ಲಿ ಹೊರಬರುವ ಬೇರು ತೆಂಗಿನ ಸಿಪ್ಪೆಯ ಮೂಲಕ ಕೆಳಗೆ ಇಳಿದು  ನೆಲವನ್ನು ತಲುಪಬೇಕಾಗುತ್ತದೆ.
  • ಸಿಪ್ಪೆಯ ಮೃದುತ್ವ ಮತ್ತು ತೇವಾಂಶವು ಇದರ ಮೇಲೆ ಪರಿಣಾಮ ಬೀರುತ್ತದೆ.
  • ತುಂಬಾ ಮೆದು ಸಿಪ್ಪೆ, ಅಥವಾ ನೀರಿನಲ್ಲಿ ತೋಯ್ದ ಕಾಯಿಯಾದರೆ ಬೇಗ ಬೇರು ಕೆಳಕ್ಕೆ ಇಳಿಯಬಹುದು. ಸ್ವಲ್ಪ ಸಿಪ್ಪೆ ಒಣಗಿದ್ದರೂ ಬೇರು ಒಣಗುತ್ತದೆ.
  • ಹೀಗಾದಾಗ ಅದರ ಮೊಳಕೆಗೆ ಬೇಕಾಗುವ ಪೊಷಕಗಳು ಸಾಕಷ್ಟು ದೊರೆಯದೇ ಮೊಳಕೆ ಪುಷ್ಟಿಯಾಗುವುದಿಲ್ಲ.
  • ಪಾಲಿಥೀನ್ ಚೀಲದಲ್ಲಿ ಸಸಿ ಬೆಳೆಸುವುದು ಉತ್ತಮ ವಿಧಾನ. ನೇರವಾಗಿ ಕಾಯಿಯನ್ನು ಪಾಲಿಥಿನ್ ಚೀಲದಲ್ಲಿ ಹಾಕಿ ಮೊಳಕೆ ಬರಲು ಇಡಬೇಡಿ.
  • ಪಾಲಿಥೀನ್ ಚೀಲದಲ್ಲಿ ತೇವಾಂಶ ಯಾವಾಗಲೂ ಆರದಂತೆ ನೋಡಿಕೊಳ್ಳುವುದು ಸಾಧ್ಯವಾದರೆ ಮಾತ್ರ ಪಾಲಿಥೀನ್ ಚೀಲದಲ್ಲಿ ಮಾಡಬಹುದು.
  • ಅಡ್ದ ಇಟ್ಟು ಸಸಿ ಮಾಡುವಾಗ ಪಾಲಿಥೀನ್ ಚೀಲ ದೊಡ್ಡದು ಬೇಕಾಗುತ್ತದೆ.
  • ಪಾಲಿಥೀನ್ ಚೀಲದಲ್ಲೇ ಮೊಳಕೆಗೆ ಇಡುವ ಬದಲು ಪಾತಿಯಲ್ಲಿ ಮೊಳಕೆ ಕಂಡ ಮೇಲೆ ಅದನ್ನು ಪಾಲಿಥೀನ್ ಚೀಲಕ್ಕೆ ವರ್ಗಾಯಿಸುವುದು ಉತ್ತಮ.
  • ಇದರಲ್ಲೂ ಆಡ್ದವಾಗಿ ಇಟ್ಟರೆ ಚೆನ್ನಾಗಿ ಮತ್ತು ಬೇಗ ಮೊಳಕೆ ಬರುತ್ತದೆ.
  • ಭಾರತೀಯ ತೆಂಗು ಅಭಿವೃದ್ಧಿ ಮಂಡಳಿಯವರು ಇದೇ ರೀತಿಯಲ್ಲಿ ಸಸಿ ಮಾಡಲು ಶಿಫಾರಸು ಮಾಡುತ್ತಾರೆ.

ಮೊಳಕೆ ಹೇಗೆ ಬರುತ್ತದೆ:

ಅಡ್ಡಕ್ಕೆ ಇಟ್ಟ ಕಾಯಿಗಳು, ಬಂದ ಮೊಳಕೆಯ ಪ್ರಮಾಣ

  • ತೆಂಗಿನ ಕಾಯಿಯ ಒಳಗೆ ಅದರ ಮೊಳಕೆ ಮತ್ತು ಒಂದು ಎಲೆ ಬರುವ ತನಕ ಪೊಷಣೆ ಮಾಡಲು ಬೇಕಾದ ಸತ್ವಾಂಶಗಳು ಇರುತ್ತವೆ.
  • ಬೀಜಕ್ಕಾಗಿ ಆಯ್ಕೆ ಮಾಡಿದ ಕಾಯಿಯನ್ನು ಮೊದಲು ನೀರಿನಲ್ಲಿ ಒಂದು ವಾರ ಕಾಲ ನೆನೆಸಿ ನಂತರ ಅದನ್ನು ಪಾತಿಯಲ್ಲಿ ಸದಾ ತೇವಾಂಶ ಇರುವಂತೆ ಇಡಬೇಕು.
  • ಕಾಯಿ ಸಿಪ್ಪೆ ನೀರನ್ನು ಹೀರಿಕೊಂಡಾಗ ಅದರ ಒಳಗೆ  ಇರುವ ಬ್ರೂಣವು (Embryo )ಒಳಭಾಗದಲ್ಲಿ ಬೆಳೆವಣಿಗೆ  ಹೊಂದು ಕಾಯಿಯ ಒಳ ಅವಕಾಶದ ಒಳಗೆ ಸ್ಪಂಜಿನ ತರಹದ ರಚನೆ ಉಂಟಾಗುತ್ತದೆ.
  • ಇದು ಮೊಳಕೆ ಮತ್ತು ಸಸಿಯನ್ನು 2 ಎಲೆ ಬರುವ ತನಕ ಪೋಷಿಸಲು ಬೇಕಾದ ಆಹಾರವನ್ನು ತನ್ನೊಳಗೆ  ಇಟ್ಟುಕೊಂಡು ಪೂರೈಕೆ  ಮಾಡುತ್ತಿರುತ್ತವೆ.
  • ಆದರೂ  ಮೊಳಗಿಂತ ಮುಂಚೆ ಮೂಡಿದ  ಬೇರು ಬೇಗ ನೆಲವನ್ನು ತಲುಪಿದರೆ  ಬೆಳವಣಿಗೆಗೆ ಅನುಕೂಲವಾಗುತ್ತದೆ.
  • ಅದಕ್ಕೆ ಕಾಯಿಯ ಜುಟ್ಟಿನ ಭಾಗದಲ್ಲಿ ಸ್ವಲ್ಪ ಸಿಪ್ಪೆಯನ್ನು ಕೆತ್ತಿ ತೆಗೆದು ಅಡ್ಡಲಾಗಿ ಮೊಳಕೆಗೆ ಇಡಿ.
  • ಇದರಲ್ಲಿ 50-75 ದಿನದಲ್ಲಿ ಮೊಳಕೆ ಬರುತ್ತದೆ. ಇದು ಸಧೃಢ ಸಸಿಯಾಗಿರುತ್ತದೆ.
ನೇರವಾಗಿ ಇಟ್ಟರೆ ಈ ರೀತಿ ಬೇರುಗಳು ಸಿಪ್ಪೆಯ ಮೂಲಕ ಕೆಳಗೆ ಇಳಿದು ಮಣ್ಣಿಗೆ ತಲುಪಬೇಕು. ಅಡ್ದ ಇಟ್ಟರೆ ಬೇಗ ಮಣ್ಣಿಗೆ ತಲುಪುತ್ತದೆ.

ನೇರವಾಗಿ ಇಟ್ಟರೆ ಈ ರೀತಿ ಬೇರುಗಳು ಸಿಪ್ಪೆಯ ಮೂಲಕ ಕೆಳಗೆ ಇಳಿದು ಮಣ್ಣಿಗೆ ತಲುಪಬೇಕು. ಅಡ್ದ ಇಟ್ಟರೆ ಬೇಗ ಮಣ್ಣಿಗೆ ತಲುಪುತ್ತದೆ.

ಪಾತಿಯಲ್ಲಿ ಸಂರಕ್ಷಣೆ ಹೇಗೆ?

  • ಪಾತಿ ಮಾಡುವಾಗ ಮರಳು ಮತ್ತು ತೇವಾಂಶ ಬೇಗ ಬಿಟ್ಟು ಕೊಡದೆ ಇರುವ ಸಾವಯವ ತ್ಯಾಜ್ಯಗಳನ್ನು ಹಾಕಿ ಸುಮಾರು  ¾  ಅಡಿಯಷ್ಟು ಸಡಿಲ ನೆಲದಲ್ಲಿ ತೆಂಗಿನ ಕಾಯಿಯನ್ನು ಅಡ್ದ ಹಾಕಿ ಮೊಳಕೆಗೆ ಇಡಬೇಕು.
  • ತುದಿ ಭಾಗ 1 ಇಂಚಿನಷ್ಟು ಮುಚ್ಚಬಾರದು.
  • ತೇವಾಂಶ ಆರುವ ಸಾಧ್ಯತೆ ಇದ್ದರೆ ಮೇಲ್ಭಾಗಕ್ಕೆ ಬಾಳೆಯ ಒಣ ಎಲೆಯನ್ನು ಮುಚ್ಚಬಹುದು.
  • ಮಣ್ಣು ಹಾಕಬಾರದು. ಮಾಧ್ಯಮಕ್ಕೆ ಇರುವೆಗಳು ಬಾರದಂತೆ ನೋಡಿಕೊಳ್ಳಬೇಕು.
  • ಇರುವೆಗಳು ಬಂದರೆ ಅವು ಮೊಳಕೆ ಭಾಗವನ್ನು ತಿನ್ನುವ ಸಾಧ್ಯತೆ ಹೆಚ್ಚು.
  • ಮೊಳಕೆಗೆ ಇಟ್ಟ ಪಾತಿಗೆ ದಿನಾ ನೀರು ಚಿಮುಕಿಸುತ್ತಾ ಇರಬೇಕು. ತೆಂಗಿನ ಕಾಯಿಯ ಸಿಪ್ಪೆ ಒದ್ದೆಯಾಗಿಯೇ ಇರಬೇಕು.
  • ಆಗ ಸಧೃಧ ಮೊಳಕೆ ಬರಲು ಅನುಕೂಲವಾಗುತ್ತದೆ.

 ಸಸಿ ಚೆನ್ನಾಗಿದ್ದರೆ ಅದರ ಬೆಳೆವಣಿಗೆ ಉತ್ತಮವಾಗಿರುತ್ತದೆ. ಸಸಿ ಚೆನ್ನಾಗಿರಬೇಕಾದರೆ ಅದನ್ನು ಸೂಕ್ತ ಕ್ರಮದಲ್ಲಿ ಮೊಳಕೆಗೆ ಇಡಬೇಕು.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!